ಕರ್ನಾಟಕದ ವಾಸ್ತುಶಿಲ್ಪ : ಕರ್ನಾಟಕ ದ ವಾಸ್ತು ಶಿಲ್ಪ ಚಾರಿತ್ರಿಕಯುಗದ ಆರಂಭಕಾಲದಿಂದಲೂ ಪ್ರಾಮುಖ್ಯತೆ ಗಳಿಸಿಕೊಂಡಿದೆ. ಇಲ್ಲಿಯ ನಾನಾ ಅರಸುತನಗಳೂ ಶ್ರೀಮಂತ ವಂಶಗಳೂ ಇದಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿವೆ. ಅಲ್ಲದೆ ಈ ನಾಡು ತನ್ನ ವಿಶಿಷ್ಪ ಭೌಗೋಳಿಕ ಸನ್ನಿವೇಶದ ಕಾರಣದಿಂದಾಗಿ ಅನೇಕ ವಾಸ್ತುಶೈಲಿಗಳ ಸಂಗಮ ಸ್ಥಾನವಾಗಿದೆ. ಆದ್ದರಿಂದ ಕರ್ನಾಟಕದ ವಾಸ್ತುಶಿಲ್ಪಸಂಪತ್ತು ಗಮನಾರ್ಹವೂ ವೈವಿಧ್ಯಪೂರ್ಣವೂ ಆದದ್ದು. ವಿವಿಧ ರಾಜವಂಶಗಳ ಕಾಲದಲ್ಲಿ ಕರ್ನಾಟಕದ ಈ ಕಲೆ ಬೆಳೆದು ಬಂದ ಬಗೆಯನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ. ಮೌರ್ಯರ ಮತ್ತು ಸಾತವಾಹನರ ಕಾಲ: ಕರ್ನಾಟಕದಲ್ಲಿ ವಾಸ್ತುಶಿಲ್ಪ ಅತ್ಯಂತ ಪುರಾತನವಾದದ್ದಾದರೂ ಯಾವಾಗ ಪ್ರಾರಂಭವಾಯಿತೆಂದು ಹೇಳಲು ಖಚಿತ ಆಧಾರಗಳಿಲ್ಲ. ಅಶೋಕನ ಕಾಲದ ಕಟ್ಟಡಗಳು ಕರ್ನಾಟಕದಲ್ಲಿ ಇದ್ದಿರಬಹುದಾದರೂ ಅವು ನಾಶವಾಗಿರಬಹುದು. ಅಶೋಕನ ಪ್ರಾಂತೀಯ ಸರ್ಕಾರವಿದ್ದ ಮಾಸ್ಕಿಯಂಥಹ ಪಟ್ಟಣದಲ್ಲಿಯೂ ಯಾವ ಕಟ್ಟಡಗಳೂ ಉಳಿದುಬಂದಿಲ್ಲ. ಇಸಿಲ ದಲ್ಲಿ (ಬ್ರಹ್ಮಗಿರಿ-ಚಿತ್ರದುರ್ಗ ಜಿಲ್ಲೆ)ಯಲ್ಲಿ ವೀಲರ್ ನಡೆಸಿದ ಭೂಶೋಧನೆಯಲ್ಲಿ ತುಂಬ ಶಿಥಿಲವಾದ, ಇಟ್ಟಿಗೆಯ, ಬೌದ್ಧ ಕಟ್ಟಡವೊಂದು ಮಾತ್ರ ಸಿಕ್ಕಿತು. ಸಾತವಾಹನರ ಕಟ್ಟಡಗಳೂ ಅಪೂರ್ವವೇ. ಚಂದ್ರವಳ್ಳಿ (ಚಿತ್ರದುರ್ಗ ಜಿಲ್ಲೆ) ಭೂಶೋಧನೆಯಲ್ಲಿ ಕಟ್ಟಡಗಳು ಸಿಕ್ಕದಿದ್ದರೂ ಸಾತವಾಹನ ಕಾಲದ ದೊಡ್ಡಗಾತ್ರದ (೧೬" x ೧೦" x ೧೩") ಇಟ್ಟಿಗೆಗಳು ಸಿಕ್ಕಿದ...
ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಂಶೋಧನಾ ವೇದಿಕೆ. ಶಂಕರ ನಿಂಗನೂರ