- ಪ್ರಾಚೀನ ಕರ್ನಾಟಕದಲ್ಲಿ ಶಿಕ್ಷಣ: ಕರ್ನಾಟಕದ ಶಿಕ್ಷಣವನ್ನು ಪ್ರಾಚೀನಕಾಲ, ಮಧ್ಯಯುಗ ಹಾಗೂ ಆಧುನಿಕ ಯುಗಗಳ ಶಿಕ್ಷಣವೆಂದು ವಿಂಗಡಿಸಬಹುದು. ಪ್ರಾಚೀನಕಾಲ ಕರ್ನಾಟಕದ ರಾಜಕೀಯ ಇತಿಹಾಸ ಶಾತವಾಹನ ಅರಸರ ಕಾಲದಿಂದ ಆರಂಭವಾಗಿದ್ದರೂ ಅದಕ್ಕಿಂತ ಮೊದಲೇ ಶಿಕ್ಷಣ ಪದ್ದತಿಯಿತ್ತೆಂದು ಭಾವಿಸಲಾಗಿದೆ. ಚಂದ್ರಗುಪ್ತ ಮೌರ್ಯ ತನ್ನ ಗುರು ಭದ್ರ ಬಾಹುವಿನೊಂದಿಗೆ ಕ್ರಿ.ಪೂ. 4ನೇ ಶತಮಾನದಲ್ಲಿ ಕರ್ನಾಟಕಕ್ಕೆ ಆಗಮಿಸಿದನೆಂದು, ಅವರೊಂದಿಗೆ ಜೈನ ಸಂಪ್ರದಾಯವೂ ಆಗಮಿಸಿತು. ಆ ಜೈನ ಧರ್ಮದ ಪ್ರಸಾರಕ್ಕಾಗಿ ಜೈನಬಸದಿಗಳು ಅಸ್ತಿತ್ವಕ್ಕೆ ಬಂದವು. ಶಿಕ್ಷಣಕ್ಕೆ ನಾಂದಿ ಹಾಡಿದವು. ಹಿಂದೂ ಧರ್ಮದಲ್ಲಿರುವ ಭಕ್ತಿ, ನಂಬಿಕೆ, ಆರಾಧನೆಗಳ ಜೊತೆಗೆ ಸುಜ್ಞಾನದ ಅವಶ್ಯಕತೆಯಿದೆಯೆಂದು ಎತ್ತಿ ಹಿಡಿದವು. ಕೆಲವು ಕಂದಾಚಾರ, ಮೂಢನಂಬಿಕೆಗಳನ್ನು ತೊಡೆದು ಹಾಕಿ ಸಂಸ್ಕಾರವಂತರಾಗಲು ಸಹಾಯವಾದವು. ಇವುಗಳೆಲ್ಲ ಉದ್ದೇಶವು ಜೈನ ಧರ್ಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯು ವುದಾಗಿತ್ತು. ನಂತರದಲ್ಲಿ ಚಂದ್ರಗುಪ್ತ ಮೌರ್ಯ ಮೊಮ್ಮಗನಾದ ಅಶೋಕನು ಬೌದ್ಧ ಧರ್ಮವನ್ನು ಅವಲಂಬಿಸಿ ಕರ್ನಾಟಕದಲ್ಲಿ ಶಾಸನಗಳಿಂದ ಪ್ರಚಾರ ಮಾಡಿದನು. ಬ್ರಾಹ್ಮೀ ಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಈ ಶಾಸನಗಳು ರಾಯಚೂರು ಜಿಲ್ಲೆಯ ಕೊಪ್ಪಳ, ಮಸ್ಕಿ, ಬ್ರಹ್ಮಗಿರಿ, ಸಿದ್ದಾಪೂರ ಮುಂತಾದೆಡೆ ದೊರಕಿವೆ. ಇವೆಲ್ಲವುಗಳು ದೇಶೀಯ ಭಾಷೆಯ ಪ್ರಚಾರಕ್ಕೆ ನಾಂದಿಯಾದವು. ಈ ಶಾಸನಗಳನ್ನು ಅರಿಯಲು ಶಿಕ್ಷಣದ ಅವಶ್ಯಕತೆಯೆನಿಸಿತು. ಶಿಕ್ಷಣ ಸಂಸ್ಥೆಗಳು ಅಗತ್ಯವೆನಿಸಿದವು.
ಬೌದ್ಧಧರ್ಮದ ಪ್ರಚಾರಕ್ಕಾಗಿ ಬೌದ್ಧ ಬಿಕ್ಷುಗಳು ಶಿಕ್ಷಣ ಪಡೆದು ಸಜ್ಜಾದರು. ವೈದಿಕ ಧರ್ಮದ ಶಿಕ್ಷಣವು ಒಂದು ವರ್ಗಕ್ಕೆ ಸೀಮಿತವಾಗಿತ್ತು. ಬೌದ್ಧರು ಶಿಕ್ಷಣವು ಯಾರ ಸ್ವತ್ತಲ್ಲವೆಂಬ ತತ್ವವನ್ನು ಎತ್ತಿ ಹಿಡಿದು, ಕೆಳವರ್ಗದಿಂದ ಮೇಲ್ವರ್ಗದತನಕ ಎಲ್ಲರೂ ಶಿಕ್ಷಣ ಪಡೆಯಬೇಕು, ಎಲ್ಲರಿಗೂ ಶಿಕ್ಷಣವು ಸಿಗಬೇಕೆಂಬ ದೃಷ್ಟಿಯಿಂದ ವಿಹಾರಗಳನ್ನು, ಮಠಗಳನ್ನು ಸ್ಥಾಪಿಸಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದರು. ರಾಜ ಮಹಾರಾಜರುಗಳು ವಿಹಾರಗಳನ್ನು, ಮಠಗಳನ್ನು ಸ್ಥಾಪಿಸಲು ಆರ್ಥಿಕವಾಗಿ ಸಹಾಯ ಮಾಡಿದರು. `ವಿದ್ಯಾದಾನಂ ಮಹಾದಾನಂ' ಎಂಬಂತೆ ಎಲ್ಲ ಸಮಾಜದ ಜನರನ್ನು ಶಿಕ್ಷಣವಂತರನ್ನಾಗಿ ಮಾಡಲು ಬೌದ್ಧಬಿಕ್ಷುಗಳು ಹಗಲಿರುಳು ಶ್ರಮಿಸಿದರು. ಕ್ರಿ.ಶ 3ನೇಯ ಶತಮಾನದ ಬನವಾಸಿಯ ಒಂದು ಶಾಸನದಂತೆ ಶಿವಸ್ಕಂದ ನಾಗಶ್ರೀ ಎಂಬ ಚುಟು ರಾಜಕುಮಾರಿ ವಿದ್ಯಾದಾನಕ್ಕಾಗಿ ಒಂದು ಬೌದ್ದವಿಹಾರವನ್ನು ನಿರ್ಮಿಸಿದ್ದಳು. ಇದು ಪ್ರಪ್ರಥಮ ಬೌದ್ದ ವಿಹಾರದ ಪರಿಚಯ. ತದನಂತರದಲ್ಲಿ 2 ನೇ ಶತಮಾನದ ಎರಡನೇ ಪುಲಿಕೇಶಿಯ ಆಳ್ವಿಕೆಯ ಹೊತ್ತಿಗೆ ನೂರಕ್ಕೆ ಏರಿತ್ತು. ಅಲ್ಲಿ ನೂರಾರು ಬೌದ್ಧಬಿಕ್ಷುಗಳಿದ್ದರೆಂದು ಯುವಾನ್ ಚಾಂಗನ ವರದಿಯಿಂದ ತಿಳಿದುಬರುತ್ತದೆ. ಜನಸಾಮಾನ್ಯರೆಲ್ಲ ಶಿಕ್ಷಣವಂತರಾಗಲು ಬೌದ್ಧ ಧರ್ಮದ ಕೊಡುಗೆ ಅಪಾರವಾದುದು. ಮೌರ್ಯ ಕಾಲದಿಂದ ರಾಷ್ಟ್ರಕೂಟರ ಕಾಲದವರೆಗೆ ಅಂದರೆ, 8-9ನೇ ಶತಮಾನಗಳ ತನಕ ವೈದಿಕ ಹಾಗೂ ಜೈನ ಶಿಕ್ಷಣಗಳೊಡನೆ ಬೌದ್ಧ ಶಿಕ್ಷಣವು ಸಾಕಷ್ಟು ಪ್ರಚಲಿತದಲ್ಲಿತ್ತು. ಆದರೆ ಬಾದಾಮಿ ಚಾಲುಕ್ಯರ ಆಳ್ವಿಕೆಯ ಕೊನೆಯ ವೇಳೆಗೆ ಬೌದ್ಧ ಶಿಕ್ಷಣ ವ್ಯವಸ್ಥೆಯು ನಿಧಾನವಾಗಿ ಅವನತಿಯತ್ತ ಸಾಗಿತು. ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಕೊನೆಯ ಬೌದ್ಧ ವಿಹಾರಗಳಲ್ಲಿ 1095 ರ ಸುಮಾರಿನಲ್ಲಿ ಸಂಗಮದ ಶೆಟ್ಟಿ ಧಾರವಾಡ ಜಿಲ್ಲೆಯ ಡಂಬಳದಲ್ಲಿ (ಧರ್ಮವೊಳಲ್) ಕಟ್ಟಿಸಿದ್ದು ಒಂದೆಂದು ಹೇಳುತ್ತಾರೆ. ಶಿವಮೊಗ್ಗ ಜಿಲ್ಲೆಯ ಬಳ್ಳಿಗಾಮೆಯಲ್ಲಿ 12 ನೇ ಶತಮಾನದವರೆಗೂ ಬೌದ್ಧಧರ್ಮವನ್ನು ಅಧ್ಯಯನ ವಿಷಯವನ್ನಾಗಿ ಮಾಡಿಕೊಡಲಾಗಿತ್ತು.
ಒಂದು ವರ್ಗಕ್ಕೆ ಸೀಮಿತವಾಗಿದ್ದ ಪ್ರಾಥಮಿಕ ಶಿಕ್ಷಣವನ್ನು ಎಲ್ಲ ವರ್ಗದವರಿಗೂ ವಿಸ್ತರಿಸಿದ ಕೀರ್ತಿಯು ಬೌದ್ಧಧರ್ಮಕ್ಕೆ ಸಲ್ಲುತ್ತದೆ. ಉಚ್ಛ ಶಿಕ್ಷಣಕ್ಕಾಗಿ ಏರ್ಪಟ್ಟಿದ್ದ ಅಗ್ರಹಾರ, ಬ್ರಹ್ಮಪುರಿಗಳಲ್ಲೂ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶವಿತ್ತು. ಅಲ್ಲಿ ಉಚ್ಚ ಶಿಕ್ಷಣದ ಪಂಡಿತರಿಗೆ ಹೆಚ್ಚು ಸಂಭಾವನೆಯು, ಪ್ರಾಥಮಿಕ ಶಿಕ್ಷಣದ ಪಂಡಿತರಿಗೆ ಕಡಿಮೆ ಸಂಭಾವನೆಯು ಬರುತ್ತಿದ್ದವೆಂದು ರಾಯಲ್ ಏಷ್ಯಾಟಿಕ್ ಸೊಸೈಟಿಯ ಬೊಂಬಾಯಿ ಶಾಖೆಯ ಪತ್ರಿಕೆಯ 9 ನೇಯ ಸಂಪುಟದಲ್ಲಿ ಹೇಳಲಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಅಕ್ಷರಾಭ್ಯಾಸ, ಕಾಗುಣಿತ, ಕನ್ನಡ ಭಾಷೆಯ ಓದು, ಬರಹ ಒಳಗೊಂಡಿತ್ತು. ಕಲಿಸುವ ಪದ್ಧತಿಯು ಈಗಿನಂತೆ ಇದ್ದಿರಬೇಕು. ಮಕ್ಕಳು ಬೆರಳಿನಿಂದ ಮರಳಿನ ಮೇಲೆ ಅಕ್ಷರ ಬರೆದು ಅದನ್ನು ಗಟ್ಟಿಯಾಗಿ ಪಠಿಸುತ್ತಾ ಕಲಿಯುತ್ತಿದ್ದರು. ಸಾಮೂಹಿಕವಾಗಿ ಮಗ್ಗಿಯನ್ನು ಕಂಠಪಾಠ ಮಾಡುತ್ತಿದ್ದರು. ಈಗಿನ ಅಧ್ಯಾಪಕರಂತೆಯೇ ಬೌದ್ಧ ಬಿಕ್ಷುಗಳು ವಿದ್ಯಾರ್ಥಿಗಳಿಗೆ ಕಂಠಪಾಠ ಹೇಳಿಕೊಡುತ್ತಿದ್ದರು. ಊರಿನ ದೇವಾಲಯ, ಚಾವಡಿಯಲ್ಲಿ, ಧನಿಕರ ಪಡಸಾಲೆಗಳಲ್ಲೂ ಮಕ್ಕಳಿಗೆ ಅಕ್ಷರಭ್ಯಾಸ ತರಗತಿಗಳು ನಡೆಯುತ್ತಿದ್ದಿರಬೇಕು.
ಇನ್ನೂ ಹೆಚ್ಚಿನ ಶಿಕ್ಷಣಕ್ಕಾಗಿ, ವಿಹಾರಗಳಲ್ಲದೇ ಘಟಕಗಳು, ಅಗ್ರಹಾರಗಳು, ಬ್ರಹ್ಮಪುರಿಗಳು, ಮಠಗಳು ಹಾಗೂ ದೇಗುಲದ ವಿದ್ಯಾಲಯಗಳು ಬಳಕೆಯಾಗುತ್ತಿದ್ದವು. ಈ ಘಟಕಗಳು ಸಂಖ್ಯೆಯಲ್ಲಿ ವಿರಳವಾಗಿದ್ದರೂ ಕೂಡ ಕದಂಬರ ಕಾಲದಿಂದಲೂ ಇವುಗಳ ಉಲ್ಲೇಖವುಂಟು. ಕದಂಬ ವಂಶದ ಮೂಲ ಪುರುಷನಾದ ಮಯೂರವರ್ಮನು ಕಂಚಿಯ ಒಂದು ಘಟಕದಲ್ಲಿ ಶಿಕ್ಷಣ ಪಡೆಯಲು ಯತ್ನಿಸಿದ್ದ. ಈ ಕಂಚಿಯ ಘಟಕವು ಉತ್ತರದಲ್ಲಿದ್ದ ನಲಂದಾ ವಿಶ್ವವಿದ್ಯಾಲಯದಂತಿರಬಹುದು. ಅದು ವೇದ ಶಿಕ್ಷಣ ವ್ಯವಸ್ಥೆಯಲ್ಲಿ ಅಗ್ರಸ್ಥಾನ ಪಡೆದಿತ್ತು. ಮಹಾಜನರೆಂಬ ಸಂರಕ್ಷರ ಮಂಡಲಿ ಅದರ ಕಾರ್ಯ ನಿರ್ವಹಿಸುತ್ತಿತ್ತು. ಕರ್ನಾಟಕದ ಘಟಕಗಳಲ್ಲಿ ಪ್ರಸಿದ್ಧವಾದದ್ದು ಕಲಬುರ್ಗಿ ಬಳಿಯ ನಾಗೈಯಲ್ಲಿತ್ತು. ಅಲ್ಲಿ ಒಂದು ಆವರಣದಲ್ಲಿ 257 ವಿದ್ಯಾರ್ಥಿಗಳು, ಮತ್ತೊಂದು ಆವರಣದಲ್ಲಿ 400 ವಿದ್ಯಾರ್ಥಿಗಳೂ ಇದ್ದರು. ಅಲ್ಲಿ ವೇಳಾ ನಿಗದಿಕಾರರೂ, ಕಾವಲುಗಾರರೂ ಇದ್ದರು. 200 ಮಂದಿ ವೇದಗಳನ್ನು, 52 ಮಂದಿ ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಿದ್ದರು. ವೇದಪಾಠಕ್ಕೆ ಮೂವರೂ, ಶಾಸ್ತ್ರಪಾಠಕ್ಕೆ ಮೂವರೂ ಪಂಡಿತರಿದ್ದರು. ಅವರು ಭಟ್ಟದರ್ಶನ, ವ್ಯಾಕರಣ ಹಾಗೂ ಪ್ರಭಾಕರಗಳನ್ನು ಬೋಧಿಸುತ್ತಿದ್ದರು. ಅಲ್ಲಿ ಒಂದು ದೊಡ್ಡ ಗ್ರಂಥಾಲಯವೂ, ಅದನ್ನು ನೋಡಿಕೊಳ್ಳಲು ಆರು ಜನ ಅಧಿಕಾರಿಗಳೂ (ಸರಸ್ವತಿ ಭಂಡಾರಿ) ಇದ್ದರು. ಆ ಘಟಕಕ್ಕೆ ಸಂಬಂಧಿಸಿದ ದೇವಾಲಯವೊಂದನ್ನು ನೋಡಿಕೊಳ್ಳುವುದಕ್ಕೂ ಅಧ್ಯಾಪಕರು ಮತ್ತು ಇತರರೆ ರಕ್ಷಣೆಗೂ ಪ್ರತ್ಯೇಕವಾಗಿ ಭೂ ಕೊಡುಗೆಯಿತ್ತು. ಹೀಗೆಯೇ ಇತರ ಕಡೆಗಳಲ್ಲೂ ಘಟಕಗಳಿದ್ದವು. ಅವುಗಳಲ್ಲಿ ಕಡ್ಡಿಯೂರ, ಕುಕ್ಕೂರ್, ಹೆಂಜೇರು (ತುಮಕೂರು ಜಿಲ್ಲೆ), ಮೊರಿಗೆರೆ, ರಾಯಬಾಗ್ – ಇವು ಮುಖ್ಯವಾದವು. ಘಟಕದಲ್ಲಿ ಶಿಕ್ಷಣವನ್ನು ಮುಗಿಸಿದವರಿಗೆ “ಘಟಕ ಸಾಹಸ" ಎಂಬ ಪದವಿ ಸಿಗುತ್ತಿತ್ತು. ಇದನ್ನು ಘನವಿದ್ವಾಂಸರಿಗೆ ಒಂದು ಗೌರವ ಪದವಿಯಾಗಿಯೂ ಕೊಡಲಾಗುತ್ತಿತ್ತು.
ಶಿವಮೊಗ್ಗದ ತಾಳಗುಂದದ ಅಗ್ರಹಾರವು ಅತ್ಯಂತ ಪ್ರಾಚೀನವಾದದ್ದು. ಇದನ್ನು ಮಯೂರ ವರ್ಮನ ಪೂರ್ವಿಕನಾದ ಮುಕ್ಕಣ್ಣ ಕದಂಬ ಸ್ಥಾಪಿಸಿದ. ಅವನು ಉತ್ತರದ ಅಹಿಚ್ಛತ್ರ ಎಂಬ ಸ್ಥಳದಿಂದ 29 ಬ್ರಾಹ್ಮಣ ಕುಟುಂಬಗಳನ್ನು ಕರೆತಂದು ಅಲ್ಲಿ ನೆಲೆಸುವಂತೆ ಮಾಡಿದನು. ಅವರು ವೇದ, ವೇದಾಂಗ ಉಪಾಂಗ, ಮೀಮಾಂಸೆ, ತರ್ಕಪದ್ದತಿ, ಸ್ಮೃತಿ, ಪುರಾಣ, ನಾಟಕ ಇತ್ಯಾದಿಗಳಲ್ಲಿ ಪರಿಣತರಾಗಿದ್ದರು. (1091 ರ ಶಾಸನ) ಮೊದಲ ಕದಂಬರು ತಾಳಗುಂದದ ಸ್ಥಾಪನೆಗೆ ಹೆಸರಾಗಿದ್ದಂತೆ, ಬಾದಾಮಿ ಚಾಲುಕ್ಯರು ಬಾದಾಮಿಯ ಅಗ್ರಹಾರಗಳನ್ನು ಸ್ಥಾಪಿಸಿದರು. 966 ಒಂದು ಆನದಂತೆ ವಾತಾಪಿ ಅಥವಾ ಬಾದಾಮಿಯ ಒಂದು ಅಧಿಷ್ಠಾನವೆಂದು ಹೆಸರಿಸಿದ್ದರೂ ಅದರ ವರ್ಣನೆಯಿಂದ ಅದೊಂದು ಅಗ್ರಹಾರವಾಗಿತ್ತೆಂಬುದು ದೃಢಪಟ್ಟಿದೆ. ಅಲ್ಲಿ ಚತುರ್ದಶಶಾಸ್ತ್ರ ವಿದ್ಯೆಗಳಲ್ಲಿ ಪರಿಣತರಿದ್ದರು. 2000 ಮಂದಿ ವಿದ್ವಾಂಸರಿದ್ದರು. ಅದು ಧಾರ್ಮಿಕ ಹಾಗೂ ವೈದಿಕ ಶಿಕ್ಷಣದ ಕೇಂದ್ರವಾಗಿತ್ತೆಂದು ಅದರ ಹೆಸರು ಸೂಚಿಸುವುದಾದರೂ ಅಲ್ಲಿ ಲೌಕಿಕ ವಿದ್ಯೆಗೂ ಪ್ರಾಶಸ್ತ್ಯವಿತ್ತು.
ಚಾಲುಕ್ಯರ ಮತ್ತೊಂದು ಅಗ್ರಹಾರ ಐಹೊಳೆಯಲ್ಲಿತ್ತು. ಸೋಮಯಾಜಿ ಎಂಬುವನು ಐಹೊಳೆಯ (ಆರ್ಯಪುರ) 500ಮಂದಿ ಚತುರ್ವೇದಿಗಳ ತಂಡಕ್ಕೆ ದತ್ತಿ ನೀಡಿರುವುದು 8-9 ನೇಯ ಶತಮಾನದ ಶಾಸನವೊಂದರಲ್ಲಿ ಉಲ್ಲೇಖವಾಗಿದೆ. ಆ ಅಗ್ರಹಾರ ಅನಂತರವೂ 2-3 ಶತಮಾನಗಳ ತನಕ ಪ್ರಸಿದ್ದಿ ಉಳಿಸಿಕೊಂಡು ಬಂತೆಂದು 1191 ರ ಶಾಸನದಿಂದ ತಿಳಿದುಬರುತ್ತಿದೆ. ರಾಷ್ಟ್ರಕೂಟರ ಕಾಲದಲ್ಲಿ ವಿಜಯಪುರ ಜಿಲ್ಲೆಯ ಸಾಲೊಟಗಿ ಒಂದು ಪ್ರಮುಖ ಅಗ್ರಹಾರವಾಗಿತ್ತು. ಇದನ್ನು ಕೆಲವು ಇತಿಹಾಸಕಾರರು, “ದೇಗುಲ ವಿದ್ಯಾಲಯ” ಎಂದೂ ಪರಿಗಣಿಸುತ್ತಾರೆ. ಇದರ ಹಿಂದಿನ ಹೆಸರು “ಪಾವಿಟ್ಟಿಗೆ" ಇದರೊಡನೆ “ಶಾಲೆ" ಏರಿ “ಸಾಲೊಟಿಗೆ" ಎಂದಾಯಿತು. 3 ನೇಯ ಕೃಷ್ಣರಾಜನ ಮುಖ್ಯಮಂತ್ರಿ ನಾರಾಯಣ ಅಲ್ಲಿ 945 ರಲ್ಲಿ ಭವ್ಯ ಮಂದಿರವೊಂದನ್ನು ಕಟ್ಟಿಸಿದನು. ಅಲ್ಲಿ ವಿವಿಧ ಭಾಗಗಳಿಂದ ಅಗಮಿಸಿದ್ದ ವಿದ್ವಾಂಸರಿದ್ದರು. ಅವರ ರಕ್ಷಣೆಗಾಗಿ ಸಾಕಷ್ಟು ಭೂಮಿಕಾಣಿಕೆಗಳನ್ನು ಒದಗಿಸಲಾಗಿತ್ತು. ಅವರ ವಾಸಕ್ಕೆ ಗೃಹವನ್ನು,ಅಗ್ರಹಾರದ ಕಾರ್ಯಕ್ರಮಗಳ ನಿರ್ವಹಣೆಗಾಗಿ ಭೂಮಿಯನ್ನು, ಕೊಡುಗೆಯಾಗಿ ಅಲ್ಲಿನ ಅಧಿಕಾರಿಗಳು ಕೊಟ್ಟರು. ಈ ದಾನಗಳ ಮೇಲೆ ತೆರಿಗೆ ಎತ್ತುತ್ತಿರಲಿಲ್ಲ. ಗ್ರಾಮಸ್ಥರು ವಿದ್ವಾಂಸರಿಗೆ ಮದುವೆ,ಮುಂಜಿ,ಚೌಲ ಮುಂತಾದ ದಿನಗಳಲ್ಲಿ ಕಾಣಿಕೆ ಕೊಟ್ಟು ಗೌರವಿಸುತ್ತಿದ್ದರು.
ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಗದಗಿನ ಬಳಿಯ ಉಮ್ಮಜಿಗೆಯಲ್ಲಿ ಒಂದು ಉನ್ನತ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಅಲ್ಲಿ ಒಂದು ಮಹಾವಿದ್ಯಾಲಯವೂ, ಛಾತ್ರಾಲಯವೂ ಇದ್ದವು. ಅಲ್ಲಿ ಅಧ್ಯಾಪಕರಿಗೆ ವಾಸದ ಮನೆಯನ್ನೂ, ಜೀವನೋಪಾಯಕ್ಕಾಗಿ ಭೂಮಿಯ ಕೊಡುಗೆಯನ್ನೂ ನೀಡಲಾಗಿತ್ತು. ಅಲ್ಲಿ ಶಿಕ್ಷಣ ನೀಡುತ್ತಿದ್ದವರು ಅಕ್ಕರಿಗರು (ಅಕ್ಷರ ಭೋಧಕ). ಇವರು ಗಣಿತ, ಖಗೋಳ ವಿe್ಞÁನ, ಛಂದಸ್ಸು ವ್ಯಾಕರಣ, ಕಾವ್ಯಶಾಸ್ತ್ರ ಮುಂತಾದವುಗಳ ರಚನಕಾರರೂ, ಬೋಧಕರೂ ಆಗಿದ್ದರು. ಇವರಿಗೆ ಬೇಕಾದ ಹಾಗೆ ಭೂಮಿಯನ್ನು ದಾನವಾಗಿ ಕೊಡಲಾಗಿತ್ತು. ಅದರಿಂದ ಬಂದ ಆದಾಯದಲ್ಲಿ ತಾವು ಜೀವಿಸುವುದಲ್ಲದೆ, ತಮ್ಮ ಶಿಷ್ಯರಿಗೆ ದಿನಕ್ಕೆ ಒಂದು ಊಟವನ್ನೂ, ವರ್ಷಕ್ಕೊಮ್ಮೆ ಬಟ್ಟೆಯನ್ನೂ ಒದಗಿಸಬೇಕಾಗಿತ್ತು.
ಈ ಅಗ್ರಹಾರಗಳ ಜೊತೆಗೆ ಇನ್ನೂ ಅನೇಕ ಅಗ್ರಹಾರಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿದ್ದುದು ತಿಳಿದು ಬಂದಿದೆ. ಕದಂಬ ರಾಜ್ಯದ ಅರಸನಾದ ಶಿವಚಿತ್ತನ ರಾಣಿ ಕಮಲಾದೇವಿ ಬೆಳಗಾವಿ ಜಿಲ್ಲೆಯ ವಡಗಾಂವಿಯಲ್ಲಿ ಒಂದು ಅಗ್ರಹಾರವನ್ನು ಸ್ಥಾಪಿಸಿದ್ದಳು. ಅದಕ್ಕಾಗಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿದ್ವಾಂಸರನ್ನು ಕರೆಸಿ ಅವರ ಸಂರಕ್ಷಣೆಗಾಗಿ ದತ್ತಿಯನ್ನು ಹಾಕಿಸಿಕೊಟ್ಟಳು. ಅಲ್ಲಿ ವೇದ, ವೇದಾಂಗ, ನ್ಯಾಯ, ಮೀಮಾಂಸೆ, ಸಾಂಖ್ಯ, ಯೋಗ, ವೇದಾಂತ, ಸ್ಮೃತಿ, ಇತಿಹಾಸ, ಪುರಾಣ, ಖಗೋಳಶಾಸ್ತ್ರ ಇವುಗಳ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ಅಧ್ಯಾಪಕರ ವಿಷಯ ಪಾಂಡಿತ್ಯಕ್ಕೂ ಕಾರ್ಯ ಮಹತ್ವಕ್ಕೂ ಅನುಗುಣವಾಗಿ ದಾನಗಳನ್ನು ನೀಡಲಾಗಿತ್ತು. ಹೀಗೆಯೇ ಕರ್ನಾಟಕದ ಇತರೆಡೆಗಳಲ್ಲೂ ಅಗ್ರಹಾರಗಳು ಸ್ಥಾಪನೆಯಾಗಿದ್ದವು.
ಅಗ್ರಹಾರಗಳಂತೆ ಬ್ರಹ್ಮಪುರಿಗಳೂ ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಉನ್ನತ ಶಿಕ್ಷಣ ಸಂಸ್ಥೆಗಳು. ಅಗ್ರಹಾರ ಶಿಕ್ಷಣಕ್ಕಾಗಿ ಏರ್ಪಟ್ಟ ವಿಶಿಷ್ಟ ಗ್ರಾಮವಾಗಿದ್ದರೆ, ಬ್ರಹ್ಮಪುರಿ ನಗರದ ಒಂದು ಭಾಗ ಮಾತ್ರವಾಗಿತ್ತು. ಬೆಳಗಾಂವಿಯಲ್ಲಿ ಬನವಾಸಿಯ ಪ್ರಾಂತ್ಯ ಅಧಿಕಾರಿಯಾದ ಕೇಶವದೇವ ಬ್ರಹ್ಮಪುರಿಯೊಂದನ್ನು ಸ್ಥಾಪಿಸಿದ್ದ. ಅಲ್ಲಿ 38 ಮಂದಿ ಕೀರ್ತಿವೆತ್ತ ವಿದ್ವಾಂಸರಿದ್ದರು. ಅವರು ಪುರಾಣ, ಸ್ಮೃತಿ, ಭಾಷ್ಯ, ಕಾವ್ಯ, ನಾಟಕ ಇತ್ಯಾದಿ e್ಞÁನಕ್ಷೇತ್ರಗಳಲ್ಲಿ ಪಂಡಿತರೆನಿಸಿದ್ದರು. ಆಯಾ e್ಞÁನವನ್ನು ಬೋಧಿಸುತ್ತಿದ್ದರು. ಆ ನಗರದ ದಕ್ಷಿಣದ ಫಲವತ್ತಾದ ನೆಲವನ್ನು ಅವರ ವಸತಿಗೂ, ಜೀವನೋಪಾಯಕ್ಕೂ ಕೇಶವದೇವ ದಾನವಾಗಿ ಕೊಟ್ಟಿದ್ದ. ಅಲ್ಲಿ ಒಂದು ಸುಂದರವಾದ ದೇಗುಲ ಕಟ್ಟಿಸಿ, ಅದರ ಮುಂದೆ ವೀರಕೇಶವಪುರ ಎಂಬ ನಗರವನ್ನು ನಿರ್ಮಿಸಿದ್ದ. ಅನೇಕ ವಸತಿಗಳನ್ನು ಕಟ್ಟಿಸಿ ಅವುಗಳನ್ನು ಪೀಠೋಪಕರಣಾದಿಗಳಿಂದ ಸಜ್ಜುಗೊಳಿಸಿ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಟ್ಟಿದ್ದ. ಅಧ್ಯಾಪಕರ ವಸತಿಗೃಹಗಳನ್ನು ಕಟ್ಟಿಸಿ ವಾಸಕ್ಕೆ ಸಜ್ಜುಗೊಳಿಸಿ ಕೊಡಲಾಗಿತ್ತು. ಬ್ರಹ್ಮಪುರಿಗಳು ಸೂಡಿ, ಅರಸೀಬೀದಿ (ವಿಕ್ರಮಪುರ), ತಲಕಾಡು ಮುಂತಾದ ಕರ್ನಾಟಕದ ಇತರ ಕೆಲವು ನಗರಗಳಲ್ಲೂ ಇದ್ದವು.
ಅಗ್ರಹಾರ:
ಬ್ರಾಹ್ಮಣರಿಗೆ ದಾನವಾಗಿ ಕೊಡಲಾದ ಹಳ್ಳಿ ಅಥವಾ ಹಳ್ಳಿಯ ಭಾಗ. ಅದರ ಸಕಲಸ್ವಾಮ್ಯವೂ ಅಲ್ಲಿ ವಾಸಿಸುವ ಬ್ರಾಹ್ಮಣರಿಗೇ ಸೇರಿದುದು. ಅಗ್ರಹಾರಗಳಲ್ಲಿ ಬ್ರಾಹ್ಮಣರ ಜೊತೆಗೆ ಇತರ ಜಾತಿಯವರೂ ಇರುತ್ತಿದ್ದರೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಅಗ್ರಹಾರಗಳಲ್ಲಿ ವಾಸ ಮಾಡುವ ಜನಗಳಿಗೆ ಮಹಾಜನಗಳೆಂದು ಹೆಸರು. ಇವರೆಲ್ಲರೂ ಅಗ್ರಹಾರದ ಆಡಳಿತದ ವಿಷಯವನ್ನು ನೋಡಿಕೊಳ್ಳುತ್ತಿದ್ದರು. ಅಗ್ರಹಾರಗಳು ಸಾಮಾನ್ಯವಾಗಿ ಆಂಧ್ರ ಮತ್ತು ಕರ್ಣಾಟಕಗಳಲ್ಲಿ ವಿಶೇಷವಾಗಿದ್ದುವೆಂದು ಶಾಸನಗಳಿಂದ ತಿಳಿದುಬರುತ್ತದೆ. ಕರ್ನಾಟಕದಲ್ಲಿ ಅಗ್ರಹಾರಗಳು 5ನೆಯ ಶತಮಾನದಿಂದಲೇ ಕಂಡುಬಂದು ಹತ್ತೊಂಬತ್ತನೆಯ ಶತಮಾನದವರೆಗೂ ಕರ್ನಾಟಕ ಸಂಸ್ಕøತಿಯ ಬೆಳವಣಿಗೆಯಲ್ಲಿ ಸಹಾಯಕವಾಗಿದ್ದುವು. ಮುಖ್ಯವಾಗಿ ಇವು ವಿದ್ಯಾಭ್ಯಾಸದ ಬೆಳವಣಿಗೆಗೆ ಮಹತ್ತರವಾದ ಸಹಾಯ ಮಾಡಿವೆ. ಅಗ್ರಹಾರದ ಮಹಾಜನಗಳು ಯಮ, ನಿಯಮ, ಸ್ವಾಧ್ಯಾಯ, ಧ್ಯಾನ, ಧಾರಣ, ಮೌನ, ಅನುಷ್ಠಾನ, ಜಪ, ಸಮಾಧಿ ಮುಂತಾದುವುಗಳಲ್ಲಿ ನಿಷ್ಣಾತರಾಗಿ, ವಿದ್ಯಾರ್ಥಿಗಳಿಗೆ ಪಾಠಗಳನ್ನು ಬೋಧಿಸುತ್ತಿದ್ದರು. ತಿಳಿವಳ್ಳಿ ಅಗ್ರಹಾರದ ಮಹಾಜನಗಳು ನಾಲ್ಕು ವೇದಗಳು, ವೈಶೇಷಿಕೆ, ನ್ಯಾಯ, ಸಾಂಖ್ಯ, ಲೋಕಾಯತ, ಮೀಮಾಂಸ, ಬೌದ್ಧ, ಮತ್ತು ಜೈನಶಾಸ್ತ್ರಗಳನ್ನು ಬಲ್ಲವರಾಗಿಯೂ ತರ್ಕ, ವ್ಯಾಕರಣ, ಇತಿಹಾಸ, ಮಹಾಭಾರತ[೨], ಕಾಮಶಾಸ್ತ್ರ, ನಾಟಕ, ಗಣಿತ, ಮುಂತಾದ ವಿಷಯಗಳಲ್ಲಿ ಪರಿಣತರಾಗಿಯೂ ಇದ್ದರೆಂದು ತಿಳಿಯುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಬಳ್ಳಿಗಾವೆ, ತಿಳಿವಳ್ಳಿ, ಸಾಲೋತ್ತಗಿ, ಕಲಶ ಮುಂತಾದ ನೂರಾರು ಅಗ್ರಹಾರಗಳು ವಿದ್ಯಾಕೇಂದ್ರಗಳಾಗಿ ವಿಶ್ವವಿದ್ಯಾನಿಲಯಗಳ ಸ್ಥಾನಗಳಾಗಿದ್ದುವು. ಅಗ್ರಹಾರಗಳ ಮಹಾಜನಗಳು ಧಾರ್ಮಿಕ ಮತ್ತು ಜನೋಪಯೋಗಿ ಕಾರ್ಯಗಳಲ್ಲಿಯೂ ಸಾಕಷ್ಟು ಆಸಕ್ತಿಯನ್ನು ವಹಿಸುತ್ತಿದ್ದರು. ದೇವಾಲಯಗಳ ಆಡಳಿತ, ಕೆರೆಕಟ್ಟೆಗಳ ನಿರ್ಮಾಣ, ವಿಶೇಷ ಸಂದರ್ಭಗಳಲ್ಲಿ ನ್ಯಾಯನಿರ್ಣಯ ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅಗ್ರಹಾರಗಳು ಪ್ರಾಚೀನ ಕರ್ನಾಟಕದಲ್ಲಿ ಬಹು ಉಪಯುಕ್ತವಾದ ಮತ್ತು ಮಹತ್ತರವಾದ ಪಾತ್ರವನ್ನು ವಹಿಸಿದ್ದವೆಂದು ಹೇಳಬಹುದು.
ಕಣ್ಣೂರ ಅಗ್ರಹಾರ
ಪ್ರಾಚೀನ ಕಾಲದಲ್ಲಿ ಸಾಗರ ತಾಲೂಕಿನ ಕಣ್ಣೂರು ಶ್ರೀಮಂತ ಅಗ್ರಹಾರವಾಗಿತ್ತು. ಇಲ್ಲಿ ಸುಮಾರು ೨೫೦ ಕ್ಕೂ ಅಧಿಕ ಬ್ರಾಹ್ಮಣ ಕುಟುಬಂಗಳಿದ್ದು ಸುಮಾರು ೨೮೦೦ ಜನ ಸಂಖ್ಯೆ ಹೊಂದಿತ್ತು ಎನ್ನಲಾಗಿದೆ. ಶ್ರೀಕಣ್ವೇಶ್ವರ ಮತ್ತು ಶ್ರೀಬನಶಂಕರಿ ದೇವಾಲಯಕ್ಕೆ ೮೦ ಎಕರೆ ವಿಸ್ತೀರ್ಣದ ಸಾಗುವಳಿ ಜಮೀನನ್ನು ದಾನ ನೀಡಲಾಗಿತ್ತು. ಪ್ರತಿ ವರ್ಷ ೩೦೦ ಚೀಲ ಭತ್ತ ದಾನವಾಗಿ ಬರುತ್ತಿತ್ತು.
ತಾಳಗುಂದ
ತಾಳಗುಂದ ಗ್ರಾಮವು ಕರ್ನಾಟಕದ ಅತ್ಯಂತ ಪ್ರಾಚೀನ ಅಗ್ರಹಾರವಾಗಿದ್ದು, ಈ ಅಗ್ರಹಾರದಲ್ಲಿಯೇ ಕನ್ನಡದ ಮೊದಲ ರಾಜವಂಶ ಎಂದು ಹೇಳಲ್ಪಡುವ ಕದಂಬ ವಂಶಸ್ಥನಾದ ಮಯೂರವರ್ಮನು ಜನಿಸಿ ಇಲ್ಲಿಯೇ ಬೆಳೆಯುತ್ತಾನೆ. ಇತ್ತೀಚಿಗೆ ಇಲ್ಲಿ ದೊರೆತಿರುವ ಸಿಂಹತಟಾಂಜನ ಶಾಸನವು ಕನ್ನಡದ ಹಲ್ಮಿಡಿ ಶಾಸನಕ್ಕಿಂತ ಹಿಂದಿನ ಅವಧಿಯ ಶಾಸನ ಎಂದು ಕೇಂದ್ರ ಪುರಾತತ್ವ ಇಲಾಖೆ ತಿಳಿಸಿದೆ. ಹಾಗೆಯೇ ಕರ್ನಾಟಕದಲ್ಲಿ ದೊರೆತ ಮೊದಲ ಸಂಸ್ಕೃತ ಶಾಸನ ಇಲ್ಲಿಯೇ ಸಿಕ್ಕಿರುವುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ