ವಿಷಯಕ್ಕೆ ಹೋಗಿ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ:

1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್ಲಿ, ಮಣ್ಣು-ಕಲ್ಲುಗಳಲ್ಲಿ, ಗಿಡ-ಮರಗಳಲ್ಲಿ, ಪಾಣಿ- ಪಕ್ಷಿಗಳಲ್ಲಿ, ಸೂರ್ಯ-ಚಂದ್ರರಲ್ಲಿ, ಕೆರೆ-ಬಾವಿಗಳಲ್ಲಿ ದೇವರನ್ನು ಕಾಣುವ, ಗೌರವ ಅರ್ಪಿಸುವ ಜೀವನ ವಿಧಾನ ಕನ್ನಡಿಗರದ್ದಾಗಿದೆ. ಸಾಮಾನ್ಯವಾಗಿ ಆಹಾರ ಸಿರಿ- ಧಾನ್ಯಗಳನ್ನು ಬಳಸುತ್ತಾರೆ. ಚಿನ್ನ-ಬೆಳ್ಳಿ-ಲೋಹಗಳನ್ನು ಆಭರಣಗಳಾಗಿ ಉಪಯೋಗಿಸುತ್ತಾರೆ. ಉಡುಪಿನಲ್ಲಿ ಹತ್ತಿ ಉಣ್ಣೆಯಿಂದ ತಯಾರಿಸಿದ ಧೋತಿ, ನಿಲುವಂಗಿ, ಪೆಟಾಗಳನ್ನು ಪುರುಷರು ಧರಿಸಿದರೆ, ಸ್ತ್ರೀಯರು ಸೀರೆ, ರವಿಕೆಗಳನ್ನು ಧರಿಸುತ್ತಾರೆ. ಹಬ್ಬ-ಹರಿದಿನಗಳನ್ನು, ಜಾತ್ರೆ-ಉತ್ಸವಗಳನ್ನು ಆಚರಿಸುತ್ತಾರೆ. ಭಾರತೀಯರು ಹಲವು ಭಾಷೆಯನ್ನು ಮಾತನಾಡುತ್ತಾರೆ. ಇದು ಭಾರತೀಯರ ಪಾರಂಪರಿಕ ಜೀವನ ವಿಧಾನವಾಗಿದೆ.

2. ಗಾಢವಾದ ಧಾರ್ಮಿಕ ನಂಬಿಕೆ: ಪಾರಂಪರಿಕವಾಗಿ ಭಾರತೀಯರು ಧರ್ಮ ಮತ್ತು ದೇವರಲ್ಲಿ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಧಾರ್ಮಿಕ ಕಾರ್ಯಗಳಾದ ಮದುವೆ, ಗೃಹಪ್ರವೇಶ, ಭೂಮಿ ಖರೀದಿ, ವ್ಯಾಪಾರ ಪ್ರಾರಂಭ, ಕೃಷಿ ಚಟುವಟಿಕೆ ಪ್ರಾರಂಭಿಸುವಿಕೆ ಮುಂತಾದ ಶುಭ ಕಾರ್ಯಗಳನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪ್ರಾರಂಭಿಸುತ್ತಾರೆ. ಯಜ್ಞ, ಯಾಗ, ಹವನ, ಹೋಮಾದಿ ಗಳೊಂದಿಗೆ ಕಾರ್ಯಪ್ರಾರಂಭಿಸುವುದರಿಂದ ನಿರ್ವಿಘ್ನಗಳಿಲ್ಲದೆ ಪ್ರಾರಂಭಿಸಿದ ಕಾರ್ಯ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ದಿನಕ್ಕೊಂದು ಬಾರಿ ಮನೆಯಲ್ಲಿರುವ ದೇವರ ಪೂಜೆ, ವಾರಕ್ಕೆ ಒಂದು ಬಾರಿ ಗ್ರಾಮ ದೇವರ ದರ್ಶನ, ವರ್ಷಕ್ಕೆ ಒಂದು ಬಾರಿ ಪವಿತ್ರ ಕ್ಷೇತ್ರ ದರ್ಶನ, ಐದು ವರ್ಷಕ್ಕೆ ಒಂದು ಬಾರಿ ತೀರ್ಥಯಾತ್ರೆ ಸ್ಥಳಗಳಿಗೆ ಭೇಟಿ ಕೊಡುವುದರ ಹಿಂದ ಧಾರ್ಮಿಕ ನಂಬಿಕೆ ಇದೆ. 'ಗಂಗಾಸ್ನಾನ ತುಂಗಾಪಾನ' ಮಾಡುವುದರಿಂದ ದೀರ್ಘಕಾಲದ ಪಾಪಗಳೆಲ್ಲ ಪರಿಹಾರವಾಗುತ್ತವೆ ಮತ್ತು ದೀರ್ಘಾಯುಷ್ಯ ದೊರೆಯುತ್ತದೆಂಬ ನಂಬಿಕೆ ಪಾರಂಪರಿಕವಾಗಿ ಬಂದಿದೆ ಕುಟುಂಬಕ್ಕೊಂದು ಮನೆ ದೇವರು ಇರುವುದು ಸಾಮಾನ್ಯ ಆ ದೇವರು ಸದಾಕಾಲ ನಮ್ಮನ್ನು ರಕ್ಷಿಸುತ್ತಾನೆಂಬ ನಂಬಿಕೆ ಇದೆ. ದೇವಾಲಯ, ಕೆರೆ, ಬಾವಿ, ಪುಷ್ಕರಣೆಗಳನ್ನು ನಿರ್ಮಿಸುವುದರಿಂದ ಮಣ್ಯ ಲಭಿಸುತ್ತದೆಂದು ತಿಳಿದು ಅನೇಕ ದೇವಾಲಯಗಳನ್ನು ಪ್ರಾಚೀನರು ಕಟ್ಟಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ಅರಸರು, ರಾಣಿಯರು, ದಂಡ ನಾಯಕರು, ಸಾಮಂತರು, ಸರದಾರರು, ವ್ಯಾಪಾರಿಗಳೂ ಈ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದಾರೆ. ಗಂಗ ಅರಸರ ದಂಡನಾಯಕ ಚಾವುಂಡರಾಯ ಗೊಮ್ಮಟೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, 6ನೇ ವಿಕ್ರಮಾದಿತ್ಯನ ದಂಡನಾಯಕ ಮಹಾದೇವ ಇಟಗಿಯಲ್ಲಿ ಮಹಾದೇವ ದೇವಾಲಯವನ್ನು ನಿರ್ಮಿಸಿದನು. ಚಾಲುಕ್ಯರ ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿಯರು ಪಟ್ಟದಕಲ್ಲಿನಲ್ಲಿ ಲೋಕೇಶ್ವರ ಮತ್ತು ತ್ರೈಲೋಕೇಶ್ವರ ದೇವಾಲಯಗಳನ್ನು ಕಟ್ಟಿಸಿದರು. ಇದು ಪರಂಪರೆಯಾಗಿ ಮುಂದುವರೆದಿದ್ದು ಇತ್ತೀಚೆಗೆ ಧರ್ಮಸ್ಥಳದಲ್ಲಿ ಗೊಮ್ಮಟ ಮೂರ್ತಿಯನ್ನು, ಗದುಗಿನಲ್ಲಿ ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಭಾರತೀಯ ಧಾರ್ಮಿಕ ನಂಬಿಕೆಯ ಗಡಿಯನ್ನು ದಾಟಿ ವಿದೇಶಗಳ ಮೇಲೆ ಗಾಢವಾದ ಪ್ರಭಾವ ಬೀರಿದೆ.

3. ಅನುಕರಣೆ ಮತ್ತು ಭಿನ್ನತೆಯಿಂದ ಕೂಡಿದೆ: ಭಾರತೀಯ ಸಾಂಸ್ಕೃತಿಕ ಪರಂಪರೆಯು ಸಾಮಾನ್ಯವಾಗಿ ಅನುಕರಣೆ ಮತ್ತು ಭಿನ್ನತೆಯ ಲಕ್ಷಣದಿಂದ ಕೂಡಿದೆ. ಗೃಹ ಮತ್ತು ಗೃಹೋಪಯೋಗಿ ವಸ್ತುಗಳ ನಿರ್ಮಾಣ ಮತ್ತು ಬಳಕೆ, ದೇವಾಲಯ, ಮಸೀದಿ, ಚರ್ಚ್‌, ಬಸದಿಗಳ ನಿರ್ಮಾಣ, ಉಡುಪು ತಯಾರಿಕೆ, ಆಹಾರ ತಯಾರಿಕೆ, ಕೃಷಿಗಾರಿಕೆ, ಪಶು ಸಂಗೋಪನೆ, ಧಾರ್ಮಿಕ ಕಾರ್ಯಗಳು, ವ್ಯಾಪಾರ-ವಾಣಿಜ್ಯ ವಿವಾಹ, ಸಂಸ್ಕಾರಗಳು, ಶೋಡಷದಾನಗಳು, ಆಟೋಟ ಮತ್ತು ಮನರಂಜನೆ, ಶಿಕ್ಷಣ, ಸಾಹಿತ್ಯ, ಕಲೆ, ಭಾಷೆ, ಲಿಪಿ, ಕಲಿಕೆ, ಪಾಲನೆ-ಪೋಷಣೆ ಮುಂತಾದ ಅಂಶಗಳನ್ನು ನಾವು ಹಿರಿಯರನ್ನು ಅನುಕರಣೆ ಮಾಡುವ ಮೂಲಕ ಕಲಿಯುತ್ತೇವೆ. ಆದರೂ ಅವುಗಳ ಅನುಕರಣೆಯಲ್ಲಿ ಭಿನ್ನತೆ ಮತ್ತು ಹೊಸತನ ಅಳವಡಿಕೆ ಸಹಜವಾಗಿ ಸೇರ್ಪಡೆಯಾಗಿರುತ್ತವೆ. ಕೆಲವು ಸಂಪ್ರದಾಯ ಮತ್ತು ಮೂಢನಂಬಿಕೆಗಳು ಅನುಕರಣೆಯಲ್ಲಿ ಸೇರ್ಪಡೆಯಾಗಿ ಮುಂದುವರೆದಿವೆ. 'ವಸ್ತು ವಿನಿಮಯ ಪದ್ಧತಿ'ಪ್ರಾಚೀನವಾದರೂ ಇಂದಿಗೂ ಗ್ರಾಮೀಣ ಭಾಗದಲ್ಲಿ ಅಸ್ತಿತ್ವದಲ್ಲಿದೆ. ನಗರಗಳಲ್ಲಿ “Exchange Offer' ಎಂಬ ಭಿನ್ನತೆಯೊಂದಿಗೆ ಅಸ್ತಿತ್ವದಲ್ಲಿದೆ. ಗುಡಿ ಕೈಗಾರಿಕೆಗಳಾದ ಕಂಬಾರ, ಕುಂಬಾರ, ಅಕ್ಕಸಾಲಿಗ, ಸಿಂಪಿಗ, ಬಡಿಗ, ನೇಕಾರ, ಗಾಣಿಗ, ಚರ್ಮಗಾರಿಕೆ, ಕ್ಷೌರಿಕ, ಅಗಸ, ಹೂಗಾರ ಮುಂತಾದ ವೃತ್ತಿಗಳು ಪರಂಪರಗತವಾಗಿ ಮುಂದುವರೆದಿದ್ದು, ಅವುಗಳೆಲ್ಲ ತಂದೆ-ತಾಯಿ ಅಥವಾ ಹಿರಿಯರ ಅನುಕರಣೆಯಿಂದ ಬಂದ ಕಲೆಗಳಾಗಿವೆ. ಆದರೆ ತಂತ್ರಜ್ಞಾನದ ಬಳಕೆಯಿಂದಾಗಿ ನಾವೀಣ್ಯತೆಯನ್ನು ಪಡೆದುಕೊಂಡು ಭಿನ್ನವಾಗಿ ಕಾಣಿಸಿಕೊಂಡಿವೆ.

4. ವ್ಯಕ್ತಿ ಮತ್ತು ಸಮಾಜವನ್ನು ಅವಲಂಬಿಸಿದೆ: ಭಾರತೀಯ ಸಾಂಸ್ಕೃತಿಕ ಪರಂಪರೆಯು ಬಹುತೇಕವಾಗಿ ವ್ಯಕ್ತಿ ಮತ್ತು ಸಮಾಜವನ್ನು ಅವಲಂಬಿಸಿದೆ. ವ್ಯಕ್ತಿ ಇಲ್ಲದೇ ಸಮಾಜವಿಲ್ಲ. ಸಮಾಜವಿಲ್ಲದೇ ಸಂಸ್ಕೃತಿ ಇಲ್ಲ. ಸಂಸ್ಕೃತಿ ಇಲ್ಲದೇ ಪರಂಪರೆ ಇರುವುದಿಲ್ಲ. ವ್ಯಕ್ತಿ ಮತ್ತು ಸಮಾಜದ ಅವಶ್ಯಕತೆಯನ್ನಾಧರಿಸಿ ಉತ್ಪಾದನೆ ಮತ್ತು ಪೂರೈಕೆ, ಕಲೆ ಮತ್ತು ಪ್ರದರ್ಶನ ನಡೆಯುತ್ತದೆ. ಅದು ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಸಿಂಧೂ ನಾಗರಿಕತೆಯ ನೆಲೆಯಾದ ಚನ್ನೋದಾರೋದ ಮಕ್ಕಳ ಆಟಿಕೆಗಳ ತಯಾರಿಕೆ, ಚೆನ್ನಪಟ್ಟಣದ ಗೊಂಬೆಗಳು, ಕಿನ್ನಾಳದ ಗೊಂಬೆಗಳು ಇವು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆಯಲ್ಲದೇ ಸಮಾಜದ ಸ್ವಾಸ್ಥ್ಯ ನಿರ್ಮಾಣಕ್ಕೂ ಕಾರಣವಾಗಿವೆ. ಮನರಂಜನೆಗಳಾದ ಹಾಡು, ಕುಣಿತ, ನೃತ್ಯ, ಪಾಂಡಿತ್ಯ, ಕಲೆ, ಕವಿತ್ವ, ಕಾವ್ಯತ್ವಗಳೆಲ್ಲವು ಉತ್ತಮ ಸಮಾಜ ಮತ್ತು ಸಂಸ್ಕೃತಿಯ ನಿರ್ಮಾಣಕ್ಕೆ ಕಾರಣಗಳಾಗಿವೆ. ಅವು ನಿರಂತರವಾಗಿ ಸಾಗಿ ಬಂದು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದರೆ ಅದು ಪರಂಪರೆಯ ಅಸ್ತಿತ್ವವಾಗುತ್ತದೆ.

5. ನಿರಂತರ ಆಚರಣೆಗಳಿಂದ ಕೂಡಿದೆ: ಭಾರತೀಯ ಸಾಂಸ್ಕೃತಿಯ ಪರಂಪರೆಯ ಮತ್ತೊಂದು ಪ್ರಮುಖ ಲಕ್ಷಣವೆಂದರೆ ನಿರಂತರ ಆಚರಣೆಗಳು. ಅವುಗಳೆಂದರೆ ಹಬ್ಬಗಳು, ಜಾತ್ರೆಗಳು, ಉತ್ಸವಗಳು, ತೀರ್ಥಯಾತ್ರೆಗಳು. ಇವುಗಳೆಲ್ಲಾ ಸಾಂಸ್ಕೃತಿಯ ಪ್ರತಿಬಿಂಬವಾಗಿವೆ. ಪ್ರತಿ ಹದಿನೈದು ದಿನಗಳಿಗೊಂದು ಹುಣ್ಣಿಮೆ, ಒಂದು ಅಮವಾಸ್ಯೆಯನ್ನು ಆಚರಿಸುವುದರೊಂದಿಗೆ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಯುಗಾದಿ, ಶಿವರಾತ್ರಿ, ಗಣೇಶೋತ್ಸವ, ದೀಪಾವಳಿ, ದಸರಾ, ಮೊಹರಂ, ಉತ್ತರಿ, ಪೊಂಗಲ್‌, ಬಕ್ರೀದ್‌, ಕ್ರಿಸ್‌ಮಸ್‌, ಈದ್‌ ಮಿಲಾದ್ ಇವುಗಳನ್ನು ಧಾರ್ಮಿಕ ಹಬ್ಬಗಳೆಂದು ಆಚರಿಸಿದರೆ, ಸ್ವಾತಂತ್ರೋತ್ಸವ, ಗಾಂಧಿ ಜಯಂತಿ, ಗಣರಾಜ್ಯೋತ್ಸವ ಇವುಗಳನ್ನು ರಾಷ್ಟ್ರೀಯ ಹಬ್ಬಗಳೆಂದು ಆಚರಿಸಲಾಗುತ್ತದೆ. ಗುರುನಾನಕ್, ಪೈಗಂಬರ್, ಬುದ್ಧ, ಮಹಾವೀರ, ಗಾಂಧಿ, ಬಸವೇಶ್ವರ, ಕನಕದಾಸ, ಅಂಬೇಡ್ಕರ, ವಾಲ್ಮೀಕಿ ಮುಂತಾದ ಮಹನೀಯರ ಜನನೋತ್ಸವವನ್ನು ಜಯಂತಿಗಳೆಂದು ಆಚರಿಸುತ್ತೇವೆ. ಇವುಗಳಲ್ಲದೇ ಸಂಕ್ರಾಂತಿ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ರಕ್ಷಾ ಬಂಧನ, ದುರ್ಗಾಪೂಜೆ, ಓಣಂ, ಕೃಷ್ಣ ಜನ್ಮಾಷ್ಟಮಿಗಳನ್ನು ಆಚರಿಸುವ ಮೂಲಕ ಧಾರ್ಮಿಕ ಮಹತ್ತರ ಅಸ್ತಿತ್ವವನ್ನುಉಳಿಸಿಕೊಳ್ಳಲಾಗಿದೆ ಮತ್ತು ಮುಷ್ಕರ ಸೋನೆಪುರ ಎಂಬ ಜಾನುವಾರು ಜಾತ್ರೆ, ಶಕ್ತಿ ಸಾಂಸ್ಕೃತಿಕ ದೇವತೆಗಳ ಜಾತ್ರೆ, ಕುಂಭಮೇಳ, ಮೈಸೂರು ದಸರಾ, ಹಂಪಿ ಉತ್ಸವ, ಚಾಲುಕ್ಯ ಉತ್ಸವ, ಲಕ್ಕುಂಡಿ ಉತ್ಸವ, ಕೆಳದಿ ಉತ್ಸವ ಮುಂತಾದ ಆಚರಣೆಗಳು ಪರಂಪರೆಯ ನಿರಂತರ ಆಚರಣೆಗೆ ಸಾಕ್ಷಿಯಾಗಿವೆ.

6. ವಾಸ್ತುಶಿಲ್ಪ ಮತ್ತು ರಚನಾ ಪರಂಪರೆಯ ಅಭಿವ್ಯಕ್ತತೆ: ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಲಕ್ಷಣಗಳಲ್ಲಿ ಕಲೆ, ವಾಸ್ತುಶಿಲ್ಪ ಮತ್ತು ರಚನಾ ಪರಂಪರೆಯು ಒಂದಾಗಿದೆ. ನಮ್ಮ ಪೂರ್ವಜರು ನಮಗೆ ನೀಡಿದ ಅಮೂಲ್ಯವಾದ ಆಸ್ತಿ ಎಂದರೆ ಕಲೆ ಮತ್ತು ವಾಸ್ತುಶಿಲ್ಪ. ಅದನ್ನು ರಚನೆಯ ಮೂಲಕ ಅಭಿವ್ಯಕ್ತ ಪಡಿಸಿದ್ದಾರೆ. ಮೌರ್ಯ ಸಾಮ್ರಾಜ್ಯದಿಂದ ವಿಜಯನಗರ ಸಾಮ್ರಾಜ್ಯದ ಕಾಲದವರೆಗೂ ರಾಜರು, ರಾಣಿಯರು, ಸಾಮಂತರು, ಸರದಾರರು, ದಂಡ ನಾಯಕರು, ಮಂತ್ರಿಗಳು, ವ್ಯಾಪಾರಿಗಳು, ಜನಸಾಮಾನ್ಯರು ಕಲೆ-ವಾಸ್ತುಶಿಲ್ಪ ರಚನಾ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಬನವಾಸಿಯ ಮಧುಕೇಶ್ವರ, ತಲಕಾಡಿನ ವೈದ್ಯೆಶ್ವರ, ಪಟ್ಟದಕಲ್ಲಿನ ಲೋಕೇಶ್ವರ, ಐಹೊಳೆಯ ದುರ್ಗಾ ದೇವಾಲಯ, ಬಾದಾಮಿಯ ಗುಹಾ ದೇವಾಲಯಗಳು, ರಾಷ್ಟ್ರಕೂಟರ ಕಾಲದ ಶಿರವಾಳದ ದೇವಾಲಯಗಳು, ಇಟಗಿಯ ಮಹಾದೇವ ದೇವಾಲಯ, ಡಂಬಳದ ದೊಡ್ಡ ಬಸವಣ್ಣ ದೇವಾಲಯ, ಲಕ್ಕುಂಡಿಯ ಕಾಶಿ ವಿಶ್ವೇಶ್ವರ, ಹಾನಗಲ್ಲನ ತಾರಕೇಶ್ವರ, ಹಳೇಬೀಡಿನ ಹೊಯ್ಸಳೇಶ್ವರ, ಬೇಲೂರಿನ ಚೆನ್ನಕೇಶವ, ವಿಜಯನಗರದ (ಹಂಪಿ) ವಿರುಪಾಕ್ಷ ದೇವಾಲಯ, ಬೀದರದ ಮದರಸಾ, ಬಿಜಾಪುರದ ಗೋಳಗುಂಬಜ್, ಮೈಸೂರಿನ ಅರಮನೆ, ಕೆಳದಿ ನಾಯಕರ ಅರಮನೆ, ಶ್ರೀರಂಗಪಟ್ಟಣದ ದರಿಯಾ ದೌಲತ್ ಮಸೀದಿ, ಚರ್ಚ್‌, ಬಸದಿ, ಸ್ತೂಪ, ಅರಮನೆ, ಚೈತ್ಯ, ಸ್ಥಂಭ, ಕೋಟೆಗಳು, ಕೆರೆಗಳು, ಪುಷ್ಕರಣಿಗಳು, ಮಹಾಸತಿಕಲ್ಲು, ವೀರಗಲ್ಲು, ಗುಹೆಗಳು, ತಂಗುತಾಣಗಳು, ಆಯುಧೋಪಕರಣಗಳು, ದೆಹಲಿ ಸುಲ್ತಾನರ ಕಾಲದ ಕುತುಬ್ ಮಿನಾರ್, ಮೊಗಲ್‌ರ ಕಾಲದ ತಾಜ್‌ಮಹಲ್‌, ಕೆಂಪುಕೋಟೆ ಮುಂತಾದವುಗಳು ಭಾರತೀಯ ಪರಂಪರೆಯ ಸಾಕ್ಷಿಯಾಗಿ ತಮ್ಮ ಸೌಂದರ್ಯವನ್ನು ಅಭಿವ್ಯಕ್ತಗೊಳಿಸುತ್ತಿವೆ.

7. ಅಂತರಂಗದ ಭಾವನೆಗಳ ಅಭಿವ್ಯಕ್ತತೆ: ಭಾರತವು ಸಾಂಸ್ಕೃತಿಕ ಹಿನ್ನೆಲೆಯನ್ನು ಒಳಗೊಂಡ ಪರಂಪರೆಯನ್ನು ಹೊಂದಿದೆ. ಅದು ವ್ಯಕ್ತಿಯ ವ್ಯಕ್ತಿತ್ವದ ಅನಾವರಣವಾಗಿದ್ದು, ಅಂತರಂಗದ ಭಾವನೆಗಳನ್ನು ಕಲೆಗಳ ಮೂಲಕ ಅಭಿವ್ಯಕ್ತ ಪಡಿಸುತ್ತದೆ. ಸಂಗೀತ, ನೃತ್ಯ, ಕರಕುಶಲ ಕಲೆ, ಗಾಯನ, ಹಾಡು, ಜಾನಪದ ಕಲೆ, ಯಕ್ಷಗಾನ, ದೊಡ್ಡಾಟ, ಕಥಕ್ಕಳಿ, ನಟನೆ, ಚಿತ್ರಕಲೆ, ಮೂರ್ತಿಕಲೆ, ನಾಟಕ, ಕಾದಂಬರಿ, ಕಾವ್ಯ, ಗದ್ಯ, ಪದ್ಯ, ವಚನ, ಕಥೆ, ಕವನ ಮುಂತಾದವುಗಳು ಅಂತರಂಗದ ಭಾವನೆಗಳ ಅಭಿವ್ಯಕ್ತಗಳಾಗಿವೆ. ಇವುಗಳ ವೇಷಭೂಷಣ ಮತ್ತು ಪರಿಕರಗಳಲ್ಲಿ ಆಧುನಿಕತೆಯ ಸ್ಪರ್ಶವಿದ್ದರೂ ಭಾವನೆಗಳ ಅಭಿವ್ಯಕ್ತತೆಯಲ್ಲಿ ಬದಲಾವಣೆಯನ್ನು ಹೊಂದಿರುವುದಿಲ್ಲ. ಇದೇ ಭಾರತೀಯಪರಂಪರೆಯ ಸತ್ವ, ವಿಷ್ಣುವರ್ಧನನ ರಾಣಿ ಶಾಂತಲೆ ಪ್ರಸಿದ್ಧ ನಾಟ್ಯಗಾರಳಾಗಿದ್ದಳು. ಹೊಯ್ಸಳ ಕಾಲದ ಶಿಲಾ ಬಾಲಿಕೆಯರು ಅವಳ ಪ್ರತಿರೂಪದಂತಿವೆ. ಅದು ಪರಂಪರಾಗತವಾಗಿ ಮುಂದುವರೆದು ನಾಟಕ ಮತ್ತು ಚಲನಚಿತ್ರಗಳ ಮೂಲಕ ಅಭಿವ್ಯಕ್ತವಾಗುತ್ತಿದೆ.

8. ಭಾಷೆ ಮತ್ತು ಸಾಮರಸ್ಯದ ಅಭಿವ್ಯಕ್ತತೆ: ಭಾರತೀಯ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಲಕ್ಷಣವೆಂದರೆ ಭಾಷಾ ವೈವಿಧ್ಯತೆ ಮತ್ತು ಸಾಮರಸ್ಯ, ಕರ್ನಾಟಕದಲ್ಲಿ ಕನ್ನಡ ಭಾಷಿಕರು ಬಹುಸಂಖ್ಯಾತರಾಗಿದ್ದು ಕನ್ನಡೇತರ ಭಾಷಿಕರು ಹಲವರಿದ್ದು ಅನೇಕ ಭಾಷೆಗಳನ್ನು ಬಲ್ಲವರಾಗಿದ್ದಾರೆ. ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ, ಉರ್ದು, ತೆಲುಗು, ತಮಿಳು, ಫಾರಸಿ, ಕೊಂಕಣಿ ಮುಂತಾದ ಭಾಷಿಕರು ಕನ್ನಡ ಬಲ್ಲವರಾಗಿದ್ದು ಸಾಹಿತ್ತಿಕ ಸಾಮರಸ್ಯವನ್ನು ಕಾಪಾಡಿಕೊಂಡಿದ್ದಾರೆ. ಅಲ್ಲದೇ ಹಿಂದೂ, ಬೌದ್ಧ, ಜೈನ್, ಕ್ರಿಶ್ಚನ್, ಮುಸ್ಲಿಂ ಮುಂತಾದ ಧರ್ಮಿಯರು ಭಾರತೀಯರಾಗಿದ್ದು ಸರ್ವಧರ್ಮ ಸಹಿಷ್ಣುತಾ ಪರಂಪರೆಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಪರಸ್ಪರ ಧರ್ಮತತ್ವಗಳನ್ನು ಒಪ್ಪಿಕೊಂಡಿದ್ದಾರಲ್ಲದೇ ಗೌರವಿಸುತ್ತಾರೆ. ಪರಸ್ಪರರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ರಾಷ್ಟ್ರೀಯ ಹಬ್ಬಗಳನ್ನು, ಜಾತ್ರೆ-ಉತ್ಸವಗಳನ್ನು ಏಕತೆಯಿಂದ ಆಚರಿಸುವ ಮೂಲಕ ಸಾಮರಸ್ಯವನ್ನು ಅಭಿವ್ಯಕ್ತ ಪಡಿಸುತ್ತಾರೆ. ಈ ಎಲ್ಲ ಅಂಶಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯ ಲಕ್ಷಣಗಳಾಗಿವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ