ಕರ್ನಾಟಕದ ವಾಸ್ತುಶಿಲ್ಪ: ಕರ್ನಾಟಕದ ವಾಸ್ತು ಶಿಲ್ಪ ಚಾರಿತ್ರಿಕಯುಗದ ಆರಂಭಕಾಲದಿಂದಲೂ ಪ್ರಾಮುಖ್ಯತೆ ಗಳಿಸಿಕೊಂಡಿದೆ. ಇಲ್ಲಿಯ ನಾನಾ ಅರಸುತನಗಳೂ ಶ್ರೀಮಂತ ವಂಶಗಳೂ ಇದಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿವೆ. ಅಲ್ಲದೆ ಈ ನಾಡು ತನ್ನ ವಿಶಿಷ್ಪ ಭೌಗೋಳಿಕ ಸನ್ನಿವೇಶದ ಕಾರಣದಿಂದಾಗಿ ಅನೇಕ ವಾಸ್ತುಶೈಲಿಗಳ ಸಂಗಮ ಸ್ಥಾನವಾಗಿದೆ. ಆದ್ದರಿಂದ ಕರ್ನಾಟಕದ ವಾಸ್ತುಶಿಲ್ಪಸಂಪತ್ತು ಗಮನಾರ್ಹವೂ ವೈವಿಧ್ಯಪೂರ್ಣವೂ ಆದದ್ದು. ವಿವಿಧ ರಾಜವಂಶಗಳ ಕಾಲದಲ್ಲಿ ಕರ್ನಾಟಕದ ಈ ಕಲೆ ಬೆಳೆದು ಬಂದ ಬಗೆಯನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ.
ಮೌರ್ಯರ ಮತ್ತು ಸಾತವಾಹನರ ಕಾಲ:
ಕರ್ನಾಟಕದಲ್ಲಿ ವಾಸ್ತುಶಿಲ್ಪ ಅತ್ಯಂತ ಪುರಾತನವಾದದ್ದಾದರೂ ಯಾವಾಗ ಪ್ರಾರಂಭವಾಯಿತೆಂದು ಹೇಳಲು ಖಚಿತ ಆಧಾರಗಳಿಲ್ಲ. ಅಶೋಕನ ಕಾಲದ ಕಟ್ಟಡಗಳು ಕರ್ನಾಟಕದಲ್ಲಿ ಇದ್ದಿರಬಹುದಾದರೂ ಅವು ನಾಶವಾಗಿರಬಹುದು. ಅಶೋಕನ ಪ್ರಾಂತೀಯ ಸರ್ಕಾರವಿದ್ದ ಮಾಸ್ಕಿಯಂಥಹ ಪಟ್ಟಣದಲ್ಲಿಯೂ ಯಾವ ಕಟ್ಟಡಗಳೂ ಉಳಿದುಬಂದಿಲ್ಲ. ಇಸಿಲದಲ್ಲಿ (ಬ್ರಹ್ಮಗಿರಿ-ಚಿತ್ರದುರ್ಗ ಜಿಲ್ಲೆ)ಯಲ್ಲಿ ವೀಲರ್ ನಡೆಸಿದ ಭೂಶೋಧನೆಯಲ್ಲಿ ತುಂಬ ಶಿಥಿಲವಾದ, ಇಟ್ಟಿಗೆಯ, ಬೌದ್ಧ ಕಟ್ಟಡವೊಂದು ಮಾತ್ರ ಸಿಕ್ಕಿತು. ಸಾತವಾಹನರ ಕಟ್ಟಡಗಳೂ ಅಪೂರ್ವವೇ. ಚಂದ್ರವಳ್ಳಿ (ಚಿತ್ರದುರ್ಗ ಜಿಲ್ಲೆ) ಭೂಶೋಧನೆಯಲ್ಲಿ ಕಟ್ಟಡಗಳು ಸಿಕ್ಕದಿದ್ದರೂ ಸಾತವಾಹನ ಕಾಲದ ದೊಡ್ಡಗಾತ್ರದ (೧೬" x ೧೦" x ೧೩") ಇಟ್ಟಿಗೆಗಳು ಸಿಕ್ಕಿದುವು. ಇಟ್ಟಿಗೆ ಕಟ್ಟಡಗಳು ಚಿತ್ತಾಪುರ ಆ ಕಾಲದಲ್ಲಿದ್ದವೆಂದು ಊಹಿಸಬಹುದು. ಇವುಗಳಿಂದ ಇಟ್ಟಿಗೆ ಕಟ್ಟಡಗಳು ತಾಲ್ಲೂಕಿನ ಸನ್ನತಿ ಎಂಬಲ್ಲಿ ಸಾತವಾಹನ ಕಾಲದ ಬೌದ್ಧಸ್ತೂಪಗಳ ಆಯಕ ಕಂಬಗಳು ಮತ್ತು ಸ್ತೂಪಗಳ ಮೇಲೆ ಜೋಡಿಸಿದ ಸುಣ್ಣಕಲ್ಲಿನ ಶಿಲ್ಪಗಳೂ ವಿಪುಲವಾಗಿ ಸಿಕ್ಕಿವೆ. ಇವುಗಳ ಮೇಲೆ ಸಾತವಾಹನ ಕಾಲದ ಲಿಪಿಯ ಪ್ರಾಕೃತ ಶಾಸನಗಳಿವೆ. ಇವುಗಳ ಕಾಲ ಕ್ರಿ.ಶ. ೧ರಿಂದ ೩ನೇ ಶತಮಾನ. ಶಿಲ್ಪದ ರೀತಿ ಅಮರಾವತಿ ಮತ್ತು ನಾಗಾರ್ಜುನಕೊಂಡವನ್ನು ಹೋಲುತ್ತದೆ. ಈ ಶಿಲ್ಪಗಳು ಆಗಿನ ಕಾಲದ ಸಾಮಾಜಿಕ ಜೀವನ ಮತ್ತು ಕಲೆಗಳ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಿವೆ. ಇತ್ತೀಚೆಗೆ ನಡೆದ ಪ್ರಾಕ್ತನ ಉತ್ಖನನದಲ್ಲಿ ಬನವಾಸಿಯಲ್ಲಿ ಕುದುರೆಯ ಲಾಳಾಕೃತಿಯಲ್ಲಿರುವ (ಗಜಪೃಷ್ಠಾಕೃತಿ) ಎರಡು ದೇವಗೃಹಗಳು ಕಂಡುಬಂದಿವೆ. ಇವುಗಳಲ್ಲೊಂದರಲ್ಲಿ ಎರಡು, ಮತ್ತೊಂದರಲ್ಲಿ ಮೂರು ವಲಯಗಳಿದ್ದು ಈ ವಲಯಗಳ ಮಧ್ಯೆ ಇಕ್ಕಟ್ಟಾದ ಪ್ರದಕ್ಷಿಣ ಮಾರ್ಗ(?)ವಿದೆ. ಇದರಲ್ಲೊಂದರ ನಕ್ಷೆ ವಿಶದವಾಗಿ ತಿಳಿದಿದ್ದು ಮುಂದುಗಡೆ ಆಯಾಕಾರದ ಕೊಠಡಿಗಳೂ ಹಿಂಭಾಗದಲ್ಲಿ ಒಂದು ಎತ್ತರದ ಜಗತಿಯೂ ತಿಳಿದುಬರುತ್ತದೆ. ಈ ಜಗತಿ ಲಾಳಾಕಾರಕ್ಕೆ ಹೊಂದಿಕೊಂಡಿರುವುದರಿಂದ ಮೇಲಿನ ಕಟ್ಟಡವೂ ಅದೇ ಆಕೃತಿಯಲ್ಲಿದೆ. ಇಲ್ಲಿಯ ಸುಮಾರು ಐದಡಿಗಳ ದಪ್ಪದ ಗೋಡೆಗಳು ಆ ಕಾಲದ ಕಟ್ಟಡಗಳ ಸುಭದ್ರತೆಯನ್ನು ತೋರುತ್ತದೆ.
ಕದಂಬರ ಕಾಲ
ಕದಂಬರು ಕರ್ನಾಟಕದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದರು. ಅವರ ಮುಖ್ಯ ಪಟ್ಟಣಗಳು ಬನವಾಸಿ ಮತ್ತು ಹಲಸಿ. ಕದಂಬರ ಕಾಲದಲ್ಲಿ ಗರ್ಭಗೃಹಮುತ್ತು ಸುಕನಾಸಿ ಬೇರೆಬೇರೆಯಾಗಿ ನಿರ್ಮಾಣವಾಗಲು ಪ್ರಾರಂಭವಾಯಿತೆಂದು ಮೊರೇಸ್ ಅಭಿಪ್ರಾಯಪಡುತ್ತಾನೆ.
೫ನೆಯ ಶತಮಾನದ ತಾಲಗುಂದದ ಶಾಸನದಲ್ಲಿ ಪ್ರಣವೇಶ್ವರ ದೇವಾಲಯದ ಪ್ರಸ್ತಾಪವಿದೆ. ಅದು ೪೫೦ಕ್ಕಿಂತ ಹಿಂದಿನದು. ಅದರ ಗರ್ಭಗೃಹದ ಬಾಗಿಲಿನ ಮೇಲೆ ಕದಂಬ ಮೃಗೇಶವರ್ಮನ ರಾಣಿ ಪ್ರಭಾವತಿಯ ಶಾಸನವಿದೆ. ಹಲಸಿಯ ಜಿನದೇವಾಲಯವೂ ಮೃಗೇಶವರ್ಮನ ಕಾಲದ್ದೆಂದು ಫ್ಲೀಟ್ ತಿಳಿಸಿದ್ದಾನೆ.
ಹಲಸಿಯ ಕಲ್ಲೇಶ್ವರ ದೇವಾಲಯಲ್ಲಿ ಕದಂಬರ ವಾಸ್ತುಶಿಲ್ಪದ ಮುಂದಿನ ಹಂತವನ್ನು ನೋಡಬಹುದು. ಇಲ್ಲಿ ನಾಲ್ಕು ಮತ್ತು ಎಂಟು ಮುಖಗಳುಳ್ಳ ಕಂಬಗಳಿವೆ. ಗರ್ಭಗೃಹ, ಸುಖನಾಸಿಯ ಜೊತೆಗೆ ಮಂಟಪವೂ ಸೇರಿಕೊಂಡಿದೆ.
ಕ್ರಮೇಣ ಚಿಕ್ಕದಾಗುವ, ಸಮತಲ ಅಂತಸ್ತುಗಳಿಂದ ಕೂಡಿರುವ ಶಿಖರ ಕದಂಬ ವಾಸ್ತುಶಿಲ್ಪದ ಮತ್ತೊಂದು ವೈಶಿಷ್ಟ್ಯ. ಇದನ್ನು ಯಲವಟ್ಟಿಯ ದೇವಾಲಯದಲ್ಲೂ ಕೆಲವು ಹೊಯ್ಸಳ ದೇವಾಲಯಗಳಲ್ಲೂ ಕಾಣಬಹುದು. ದೊಡ್ಡ ಗದ್ದವಳ್ಳಿಯ ಲಕ್ಷ್ಮಿದೇವಾಲಯ ಇದಕ್ಕೆ ಉದಾಹರಣೆ.
ಗಂಗರ ಕಾಲ:
ಗಂಗರ ವಾಸ್ತುಶಿಲ್ಪ ಹೆಚ್ಚಾಗಿ ಉಳಿದುಬಂದಿಲ್ಲ. ಅನೇಕ ಕಟ್ಟಡಗಳು ಅವರ ರಾಜಧಾನಿಯಾದ ತಲಕಾಡಿನ ಮುರಳುಗುಡ್ಡೆಗಳಲ್ಲಿ ಹೂತುಹೋಗಿರಬಹುದು. ಗಂಗರ ಕಂಬಗಳು ಅತ್ಯಂತ ಸೊಗಸಾದುವು. ಇವು ಬುಡದಲ್ಲಿ ಘನಾಕಾರವಾಗಿದ್ದು ತುದಿಯಲ್ಲಿ ಚೂಪಾಗಿದ್ದು ಬೋದಿಗೆಯ ಕೆಳಗಡೆ ಚಕ್ರದ ಆಕೃತಿ ಹೊಂದಿದೆ. ಆರ್ಕೆಶ್ವರ, ಮರಳೇಶ್ವರ, ಪಾತಾಳೇಶ್ವರ ಮೊದಲಾದ ದೇವಾಲಯಗಳು ೮ನೆಯ ಶತಮಾನಕ್ಕೆ ಸೇರಿದವು.
ಗಂಗ ಕಾಲದ ವಾಸ್ತುಶಿಲ್ಪ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಉಳಿದುಬಂದಿದೆ. ಚಂದ್ರಪ್ರಭ ಬಸದಿ ಶಿವಮಾರನಿಂದ ೮೦೦ರಲ್ಲಿ ಕಟ್ಟಲ್ಪಟ್ಟಿತು. ಚಾವುಂಡರಾಯ ಬಸದಿ ಚಾವುಂಡರಾಯನಿಂದ ೯೮೨ರಲ್ಲಿ ಕಟ್ಟಲ್ಪಟ್ಟಿತು. ವಿಶ್ವವಿಖ್ಯಾತವಾದ ಶ್ರವಣಬೆಳಗೊಳದ ದೊಡ್ಡ ಬೆಟ್ಟದ ವೇಲಿರುವ ಬಹಳ ಸುಂದರವಾದ ಗೊಮ್ಮಟೇಶ್ವರ ವಿಗ್ರಹದ ಶಿಲ್ಪಿಯ ಹೆಸರು ತಿಳಿಯದು. ಈ ಶಿಲ್ಪ ಸುಮಾರು ಅರುವತ್ತು ಅಡಿ ಉದ್ದದ ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟಿದೆ. ಪಾದದ ಹತ್ತಿರದ ಬಂಡೆಯ ಮೇಲಿರುವ ಗಂಗ ಕಾಲದ ಶಾಸನ ಈ ವಿಗ್ರಹವನ್ನು ಚಾವುಂಡರಾಯ ಮಾಡಿಸಿದನೆಂದು ತಿಳಿಸುತ್ತದೆ. ಚಾವುಂಡರಾಯ ಗಂಗರಸ ರಾಚಮಲ್ಲನ (೯೭೪-೮೪) ಮಂತ್ರಿಯಾಗಿದ್ದ.
೯೭೮ರಲ್ಲಿ ರಚಿಸಲ್ಪಟ್ಟ ಚಾವುಂಡರಾಯಪುರಾಣ ಚಾವುಂಡರಾಯ ಮಾಡಿದ ಹಲವಾರು ಕೆಲಸಗಳನ್ನು ತಿಳಿಸುತ್ತದೆಯಾದರೂ ಈ ಮೂರ್ತಿಯನ್ನು ಪ್ರತಿಷ್ಠೆ ಮಾಡಿದ ವಿಷಯವನ್ನು ಹೇಳಿಲ್ಲ. ಆದುದರಿಂದ ಇದರ ಕಾಲ ೯೭೮ರ ಅನಂತರವೆಂದು ಊಹಿಸಬಹುದು. (ನೋಡಿ- ಕರ್ನಾಟಕದ ಮೂರ್ತಿಶಿಲ್ಪ)
ಬಾಣಸಂದ್ರದ ಬಳಿಯ ಅರಳಗುಪ್ಪೆಯ (ನೋಡಿ- ಅರಳಗುಪ್ಪೆ) ಪಂಚಲಿಂಗ ದೇವಾಲಯದಲ್ಲಿ ಗಂಗ ಶೈಲಿಯ ಕಂಬಗಳಿರುವುದರಿಂದ ಅದನ್ನು ಆ ಕಾಲದ್ದೆಂದು ಊಹಿಸಬಹುದು. ಅದರ ಪ್ರಾಕಾರದಲ್ಲಿ ಸತ್ಯವಾಕ್ಯ ರಾಚಮಲ್ಲ ಪೆರ್ಮಾನಡಿಯ ೧೦ನೆಯ ಶತಮಾನದ ವೀರಗಲ್ಲಿದೆ. ಈ ದೇವಾಲಯ ಬಹಳ ಸುಂದರವಾದುದು. ಮಧ್ಯದಲ್ಲಿರುವ ಲಿಂಗಕ್ಕೆ ಕಲ್ಲೇಶ್ವರ ಎಂದು ಹೆಸರು. ಕಲ್ಲೇಶ್ವರ ದೇವಾಲಯದ ನವರಂಗದ ಕಂಬಗಳು ಮತ್ತು ಅಷ್ಟದಿಕ್ಪಾಲಕರೊಂದಿಗೆ ಕೂಡಿದ ಶಿವನನ್ನು ಹೊಂದಿರುವ ಭುವನೇಶ್ವರಿ ಹೆಚ್ಚು ಕಲಾಪೂರ್ಣವಾದುವು. ಶ್ರವಣಬೆಳಗೊಳದ ಸಮೀಪದಲ್ಲಿರುವ ಕಂಬದಹಳ್ಳಿ (ನೋಡಿ) ಕರ್ನಾಟಕ ವಾಸ್ತು ಶಿಲ್ಪದಲ್ಲಿ ವಿಖ್ಯಾತವಾದುದು. ಅಲ್ಲಿ ೯೦೦ರ ಸುಮಾರಿನ ಕೆಲವು ಕಟ್ಟಡಗಳಿದ್ದು ಅವುಗಳಲ್ಲಿ ಆದಿನಾಥ ಬಸದಿ ಮುಖ್ಯವಾದುದು. ಇದರ ಶಿಖರ ನಂದಿಯಲ್ಲಿರುವ ಭೋಗ ನಂದೀಶ್ವರ ಮತ್ತು ನರಸಮಂಗಲದ ರಾಮೇಶ್ವರ ದೇವಾಲಯಗಳ ಶಿಖರಗಳನ್ನು ಹೋಲುತ್ತದೆ. ಗಂಗ ಶಿಲ್ಪದ ಪ್ರಭಾವ ಕಂಬದಹಳ್ಳಿಯ ಕಟ್ಟಡಗಳ ಮೇಲಿರಬಹುದೆಂದು ಅನೇಕ ವಿದ್ವಾಂಸರ ಊಹೆ.
ಚಾಳುಕ್ಯರ ಕಾಲ
ಬಾದಾಮಿ ಚಾಳುಕ್ಯರು ಗುಹಾಂತರ ದೇವಾಲಯಗಳನ್ನಲ್ಲದೆ ತಮ್ಮದೇ ಆದ ಶೈಲಿಯ ದೇವಾಲಯಗಳನ್ನೂ ಕಟ್ಟಡಗಳನ್ನೂ ಕಟ್ಟಿಸಿದರು. ೧ನೆಯ ಪುಲಕೇಶಿಯ ಮಕ್ಕಳಾದ ಕೀರ್ತಿವರ್ಮ ಮತ್ತು ಮಂಗಳೇಶ (೬ನೆಯ ಶತಮಾನ) ಬಾದಾಮಿಯ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಬಾದಾಮಿಯ ಕೋಟೆಯನ್ನು ೧ನೆಯ ಪುಲಕೇಶಿ ಕಟ್ಟಿಸಿದ. ಬಾದಾಮಿಯಲ್ಲಿ ಮರಳುಶಿಲೆಯಲ್ಲಿ ಕೊರೆದ ನಾಲ್ಕು ಗುಹಾಂತರ ದೇವಾಲಯಗಳಿವೆ. ಅವುಗಳಲ್ಲಿ ಒಂದು ಶಿವನದು, ಒಂದು ಜಿನನದು, ಎರಡು ವಿಷ್ಣುವಿನವು. ೩ನೆಯ ಗುಹಾಂತರ ದೇವಾಲಯದಲ್ಲಿ ಮಂಗಳೀಶನ ಶಾಸನವಿದೆ. ಪ್ರತಿಯೊಂದರಲ್ಲಿಯೂ ಕಂಬಗಳಿಂದ ಕೂಡಿದ ವರಾಂಡ, ಒಳಾಂಗಣ ಮತ್ತು ಚದರಾಕಾರದ ಗರ್ಭಗೃಹಗಳು ಇವೆ.
ಐಹೊಳೆ ಚಾಳುಕ್ಯರ ವಾಸ್ತುಶಿಲ್ಪದ ತೌರುಮನೆಯೆಂದು ಹೇಳಬಹುದು. ಇಲ್ಲಿ ೪೫೦ ರಿಂದ ೬೫೦ರ ತನಕ ಬೆಳೆದು ಬಂದ ಚಳುಕ್ಯರ ಶಿಲ್ಪಪ್ರಗತಿ ಕಂಡುಬರುತ್ತದೆ. ಐಹೊಳೆಯಲ್ಲಿ ಸುಮರು ೭೦ ದೇವಾಲಯಗಳಿವೆ. ೨ನೆಯ ಪುಲಕೇಶಿ ಕಾಲವಾದ ಅನಂತರ ವಿಜಯಾದಿತ್ಯ ಮತ್ತು ೨ನೆಯ ವಿಕ್ರಮಾದಿತ್ಯರ ಕಾಲದಲ್ಲಿ ಚಾಳುಕ್ಯರು ಪಲ್ಲವರನ್ನು ಸೋಲಿಸಿ ಕಂಚಿಯ ಮೇಲೆ ನುಗ್ಗಿದರಷ್ಟೆ. ಕಂಚಿಯ ರಾಜಸಿಂಹೇಶ್ವರ ದೇವಾಲಯವನ್ನು ನೋಡಿ ೨ನೆಯ ವಿಕ್ರಮಾದಿತ್ಯ ತನ್ನ ಮೆಚ್ಚುಗೆ ತೋರಿಸಿದ್ದಲ್ಲದೆ ಪಲ್ಲವ ರಾಜ್ಯದಿಂದ ದೇವಾಲಯಗಳನ್ನು ನಿರ್ಮಿಸಲು ಅನೇಕ ಶಿಲ್ಪಿಗಳನ್ನು ತನ್ನ ದೇಶಕ್ಕೆ ಒಯ್ದ. ಈ ರೀತಿ ದ್ರಾವಿಡ ವಾಸ್ತುಶಿಲ್ಪದ ಅನೇಕ ಅಂಶಗಳು ಚಳುಕ್ಯರ ವಾಸ್ತುಶಿಲ್ಪಕ್ಕೆ ನೆರವಾದವು. ಐಹೊಳೆಯಿಂದ ೨೪ ಕಿಮೀ ದೂರದ ಪಟ್ಟದಕಲ್ಲಿನಲ್ಲಿ ೬೫೦ರ ಅನಂತರ ಚಳುಕ್ಯ ಶಿಲ್ಪದ ಅತ್ಯಂತ ಪ್ರಗತಿದಾಯಕವಾದ ಹಂತ ಕಾಣಬರುತ್ತದೆ. ಅಲ್ಲಿಯ ವಾಸ್ತುಶಿಲ್ಪ ವಿವಿಧ ಶೈಲಿಗಳ ಮಿಲನಕ್ಕೆ ಒಳ್ಳೆಯ ಉದಾಹರಣೆ. ಅಲ್ಲಿರುವ ಕಾಶಿನಾಥ, ಪಾಪನಾಥ ಮೊದಲಾದ ದೇವಾಲಯಗಳು ಉತ್ತರ ಭಾರತದ ನಾಗರಶೈಲಿಗೂ ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ, ಗಳಗನಾಥ ಮೊದಲಾದವು ದಕ್ಷಿಣ ಭಾರತದ ದ್ರಾವಿಡಶೈಲಿಗೂ ಸೇರಿವೆಯೆಂದು ಪರ್ಸಿ ಬ್ರೌನ್ ಅಭಿಪ್ರಾಯಪಟ್ಟಿದ್ದಾನೆ. ನಾಗರ ಮತ್ತು ದ್ರಾವಿಡ ಇವೆರಡು ಶೈಲಿಗಳ ವೈಶಿಷ್ಟ್ಯವನ್ನು ವೇಸರ ಶೈಲಿಯಲ್ಲಿ ಅಳವಡಿಸಲಾಗಿದೆ. ಚಾಳುಕ್ಯರ ವಾಸ್ತುಶಿಲ್ಪದಲ್ಲಿ ನಾಗರ ಮತ್ತು ದ್ರಾವಿಡ ಶೈಲಿಗಳೆರಡೂ ಮಿಳಿತವಾಗಿದ್ದು ಇದನ್ನೇ ವೇಸರವೆಂದು ಹೇಳಲಾಗಿದೆ.
ಚಳುಕ್ಯರ ವಾಸ್ತುಶಿಲ್ಪ ಮೂರು ಅಂಶಗಳಿಂದ ಕೂಡಿದೆ.
೧ ಬೌದ್ಧ ಚೈತ್ಯದ ಕುದುರೆಲಾಳಾಕಾರ (ಐಹೊಳೆಯ ದುರ್ಗಾ ದೇವಾಲಯ).
೨ ಎರಡೂ ಕಡೆ ಬಾಗುಳ್ಳ ಶಿಖರ.
೩ ಸಮತಲ ಅಂತಸ್ತುಗಳಿಂದ ಕೂಡಿದ ಶಿಖರ.
ಆದರೆ ಪಾಪನಾಥ ಮತ್ತು ವಿರೂಪಾಕ್ಷ ದೇವಾಲಯಗಳಲ್ಲಿ ಉತ್ತರ ದಕ್ಷಿಣ ಭಾರತದ ಪ್ರಭಾವಗಳೆರಡೂ ಇವೆ. ಎರಡನೆಯ ವಿಕ್ರಮಾದಿತ್ಯನ ರಾಣಿ ಲೋಕಮಹಾದೇವಿ ವಿರೂಪಾಕ್ಷ ದೇವಾಲಯವನ್ನೂ ಆಕೆಯ ಸಹೋದರಿ ತ್ರೈಲೋಕ ಮಹಾದೇವಿ ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಾಲಯವನ್ನೂ ಕಟ್ಟಿಸಿದರು.
ಲಾಡ್ಖಾನ್ ಶಿವಾಲಯ ಐಹೊಳೆಯ ದೇವಾಲಯಗಳಲ್ಲೆಲ್ಲ ಪುರಾತನವಾದುದು. ೪೫೦ ರಲ್ಲಿ ಕಟ್ಟಲ್ಪಟ್ಟ ಈ ವಿಷ್ಣು ದೇವಾಲಯದಲ್ಲಿ ಸ್ವಲ್ಪ ಕಾಲ ಮುಸಲ್ಮಾನನೊಬ್ಬ ವಾಸ ಮಾಡುತ್ತಿದ್ದುದರಿಂದ ಇದಕ್ಕೆ ಲಾಡ್ಖಾನ್ ದೇವಾಲಯವೆಂದು ಹೆಸರಾಯಿತು. ಇಲ್ಲಿ ಕಲಶವನ್ನು ಒಂದು ಅಲಂಕಾರದ ಚಿಹ್ನೆಯಾಗಿ ಉಪಯೋಗಿಸಲಾಗಿದೆ. ಇಲ್ಲಿನ ಮಂಟಪದ ಕಂಬಗಳ ಮೇಲಿನ ಗಂಗಾ ಮತ್ತು ಯಮುನಾ ದೇವಿಯರ ವಿಗ್ರಹಗಳು ಗುಪ್ತರ ದೇವಾಲಯಗಳ ಕುರುಹಾದರೂ ಚಾಳುಕ್ಯರು ತಮ್ಮ ವಾಸ್ತುಶಿಲ್ಪದಲ್ಲಿ ಅವನ್ನು ಉಪಯೋಗಿಸಿಕೊಂಡಿದ್ದಾರೆ. ಸು. ೫೦ ಅಡಿ ಚದರದ ಈ ದೇವಾಲಯದಲ್ಲಿ ಬೆಳಕು ಬರಲು ಗೋಡೆಯಲ್ಲೇ ಮಾಡಿರುವ ಜಾಲಂಧ್ರಗಳು ಸುಂದರವಾಗಿಯೂ ಜಾಣ್ಮೆಯಿಂದಲೂ ಕೆತ್ತಲ್ಪಟ್ಟಿವೆ. ಇದೇ ಶೈಲಿಗೆ ಸೇರಿದ ಕೊಂಟಿ ಗುಡಿಯಲ್ಲಿ ದಪ್ಪವೂ ಕುಳ್ಳೂ ಆದ ಬೋದಿಗೆಗಳವರೆಗೂ ಚದರಾಕಾರವೂ ಆದ ನಾಲ್ಕು ಕಂಬಗಳಿವೆ. ದುರ್ಗಾದೇವಾಲಯ ಐಹೊಳೆಯ ಅತ್ಯಂತ ಸೊಗಸಾದ ಕಟ್ಟಡ. ಬೌದ್ಧ ಚೈತ್ಯಗಳ ಲಕ್ಷಣವಾದ ಕುದುರೆ ಲಾಳಾಕಾರದ ಈ ದೇವಾಲಯದ ಪಡಸಾಲೆ ಕಂಬಗಳ ಮೇಲೆ ಸುಂದರವಾದ ಶಿಲ್ಪಗಳನ್ನು ಕೆತ್ತಿದೆ. ಮೇಗುತಿ ಎಂಬ ಜೈನ ದೇವಾಲಯ ೨ನೆಯ ಪುಲಿಕೇಶಿಯ ಕಾಲದಲ್ಲಿ (೬೭೪) ನಿರ್ಮಿತವಾಯಿತು.
ರಾಷ್ಟ್ರಕೂಟರ ಕಾಲ
ಎಲ್ಲೋರ ಈಗ ಕರ್ನಾಟಕದಲ್ಲಿಲ್ಲದಿದ್ದರೂ ಒಮ್ಮೆ ಕರ್ನಾಟಕ ಚಕ್ರವರ್ತಿಗಳಾದ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಅಲ್ಲಿರುವ ಕೈಲಾಸ ದೇವಾಲಯ ರಾಷ್ಟ್ರಕೂಟ ೧ನೆಯ ಕೃಷ್ಣನಿಂದ ಎಂಟನೆಯ ಶತಮಾನದಲ್ಲಿ ನಿರ್ಮಿತವಾಯಿತು. ಅದು ಒಂದೇ ಕಲ್ಲಿನಲ್ಲಿ ಕೊರೆಯಲ್ಪಟ್ಟಿದೆ. ಅದರ ವಿನ್ಯಾಸ ಅಥೆನ್ಸ್‌ನ ಪಾರ್ಥೆನಾನ್ ಕಟ್ಟಡದಷ್ಟೇ ಆದರೂ ಅದರ ಒಂದೂವರೆಯಷ್ಟು ಎತ್ತರವಾಗಿದೆ. ಕೈಲಾಸ ದೇವಾಲಯವನ್ನು ಮೇಲಿಂದ ಕೆಳಕ್ಕೆ ಕೆತ್ತಿರುವುದರಿಂದ ಶಿಲ್ಪಿಗಳಿಗೆ ಅಟ್ಟಣಿಗೆ ಕಟ್ಟಿಕೊಂಡು ಕೆಲಸಮಾಡುವ ಪ್ರಮೇಯ ಬರಲಿಲ್ಲ. ಮಾನ್ಯಖೇಟದಲ್ಲಿ ರಾಷ್ಟ್ರಕೂಟರ ಕಟ್ಟಡಗಳು ಉಳಿದು ಬಂದಿಲ್ಲ. ಅವರ ಕಾಲದ ಕಲ್ಲಿನ ದೇವಾಲಯಗಳು ಬಹಳ ಕಡಿಮೆ. ಸಂಡೂರಿನ ದೇವಾಲಯ ಕಲ್ಲಿನಿಂದ ಕಟ್ಟಲ್ಪಟ್ಟಿದೆಯೆಂದೂ ಅದರೊಳಗೆ ಮೂರನೆಯ ಇಂದ್ರನ ಶಿಲ್ಪವಿದೆಯೆಂದೂ ಹರ್ಮನ್ ಗೊಯೆಟ್ಸ್ ತಿಳಿಸುತ್ತಾನೆ.
ಕಲ್ಯಾಣ ಚಾಳುಕ್ಯರ ವಾಸ್ತುಶಿಲ್ಪ
ಇದು ಧಾರವಾಡ ಜಿಲ್ಲೆಯಲ್ಲಿ ಜನಿಸಿ ಪ್ರವರ್ಧಮಾನಕ್ಕೆ ಬಂದಿತಾದರೂ ಹನ್ನೊಂದನೆಯ ಶತಮಾನದಲ್ಲಿ ಶಿವಮೊಗ್ಗ ಜಿಲ್ಲೆಗೂ ಪ್ರಸರಿಸಿತು. ಲಕ್ಕುಂಡಿಯ ಕಾಶಿವಿಶ್ವೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ ಮತ್ತು ಇಟಗಿಯ ಮಹಾದೇವ-ಇವು ಹನ್ನೆರಡನೆಯ ಶತಮಾನದ ಚಾಳುಕ್ಯ ಶೈಲಿಯ ಬಹಳ ಸುಂದರ ದೇವಾಲಯಗಳು. ನಾಗವಾವಿಯಲ್ಲಿ (ನಾಗೈ) ಕಟ್ಟಲ್ಪಟ್ಟ ಮಧುಸೂಧನ ದೇವಾಲಯ ಮತ್ತೊಂದು ಪ್ರಖ್ಯಾತ ಕಟ್ಟಡ. ಅಲ್ಲಿ ಇನ್ನೂ ಅನೇಕ ಸುಂದರ ದೇವಾಲಯಗಳಿವೆ. ಹೊಯ್ಸಳರಾಜರು ಚಾಳುಕ್ಯರಿಗೆ ಅಧೀನರಾಗಿದ್ದುದರಿಂದ ಆ ಶೈಲಿಯ ಕಟ್ಟಡಗಳನ್ನು ಕಟ್ಟಲಾರಂಭಿಸಿದರು. ಶಿರಾಳಕೊಪ್ಪದ ಸಮೀಪದಲ್ಲಿರುವ ಬೆಳಗಾಮಿ (ಬಳ್ಳಿಗಾವೆ) ಇದಕ್ಕೆ ಉತ್ತಮ ನಿದರ್ಶನ. ಕುಪ್ಪಗದ್ದೆ ಮತ್ತು ಅನವಟ್ಟಿಗಳಲ್ಲೂ ಇದನ್ನು ಕಾಣಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ