ವಿಷಯಕ್ಕೆ ಹೋಗಿ

ಸನ್ನತಿ; ಬೌದ್ಧ ಸಂಸ್ಕೃತಿಯ ಮಹತಿ

ಸನ್ನತಿ; ಬೌದ್ಧ ಸಂಸ್ಕೃತಿಯ ಮಹತಿ

ಶ್ರೀಶೈಲ ನಾಗರಾಳ Updated: 
prajavani

ಸನ್ನತಿಯ ಪರಿಸರದಲ್ಲಿ ಪತ್ತೆಯಾಗಿರುವ ಅಧೋಲೋಕ ಮಹಾಚೈತ್ಯದ ಅವಶೇಷಗಳುಚಿತ್ರ:ತಾಜುದ್ದೀನ್‌ ಆಜಾದ್‌

ಭೀಮಾ ನದಿ ದಂಡೆಯ ಮೇಲಿರುವ ಕಲ್ಯಾಣ ಕರ್ನಾಟಕದ ಸಣ್ಣ ಹಳ್ಳಿ ಸನ್ನತಿ. ಊರೇನೋ ಪುಟ್ಟದು ಹೌದು; ಆದರೆ, ಸಾವಿರಾರು ವರ್ಷಗಳ ಹಿಂದಿನ ಮೌರ್ಯ, ಶಾತವಾಹನರ ಕಾಲದ ಬೌದ್ಧ ಸ್ಮಾರಕಗಳು, ಶಾಸನಗಳು ಇಲ್ಲಿ ದೊರೆತಿರುವುದರಿಂದ ದೇಶದ ಸಾಂಸ್ಕೃತಿಕ ನಕಾಶೆಯಲ್ಲಿ ಹಿರಿದಾದ ಸ್ಥಾನವನ್ನೇ ಪಡೆದುಬಿಟ್ಟಿದೆ.


ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಭೀಮಾನದಿಯ ಎಡದಂಡೆಯಲ್ಲಿರುವ ಸನ್ನತಿ, ಕನಗನಹಳ್ಳಿ, ರಣಮಂಡಲ ಮತ್ತು ಬಲದಂಡೆಯ ಶಿರವಾಳ, ಅಣಬಿ, ಜೇವರಗಿ, ಹಸರಗುಂಡಗಿ ಎಲ್ಲವೂ ಮೌರ್ಯ ಸಾಮ್ರಾಟ ಅಶೋಕನ ಕಾಲದಲ್ಲಿ ಬೌದ್ಧ ನೆಲೆಗಳಾಗಿದ್ದವು ಎನ್ನುವುದಕ್ಕೆ ಅಲ್ಲಿನ ಸ್ಮಾರಕಗಳು ಹಾಗೂ ಶಾಸನಗಳು ಸಾಕ್ಷಿ ನುಡಿಯುತ್ತಿವೆ.

ಸನ್ನತಿ ಪರಿಸರದಲ್ಲಿ ನಡೆಸಲಾದ ಉತ್ಖನನದಲ್ಲಿ ಪತ್ತೆಯಾಗಿರುವ ಅವಶೇಷಗಳಲ್ಲಿ ಸಿಕ್ಕ ಅಶೋಕನ ಪರಿವಾರದ ಶಿಲ್ಪಕಲಾಕೃತಿ

ಕನಗನಹಳ್ಳಿ ಉತ್ಖನನ: ಸನ್ನತಿಯಿಂದ ವಾಯುವ್ಯಕ್ಕೆ ಸುಮಾರು 2.5 ಕಿ.ಮೀ. ದೂರದಲ್ಲಿರುವ ಕನಗನಹಳ್ಳಿಯ ರಣಮಂಡಲದಲ್ಲಿ ನಡೆಸಿದ ಉತ್ಖನನದ ಹಿಂದೆ ಒಂದು ರೋಚಕ ಕಥೆಯೇ ಇದೆ. 1954ರಲ್ಲಿ ಪ್ರಥಮ ಬಾರಿಗೆ ಸಂಶೋಧಕ ಕಪಟರಾಳ ಕೃಷ್ಣರಾವ್‌ ಅವರು ಸನ್ನತಿ ಒಂದು ಪ್ರಾಚೀನ ಬೌದ್ಧ ಕೇಂದ್ರವಾಗಿತ್ತು ಎಂದು ಹೇಳುವ ಮೂಲಕ ಇತಿಹಾಸ ತಜ್ಞರ ಗಮನ ಸೆಳೆದರು. ನಂತರ 1964ರಲ್ಲಿ ಪಿ.ಬಿ. ದೇಸಾಯಿಯವರು ತಮ್ಮ ವರದಿಯಲ್ಲಿ ‘ಸನ್ನತಿ ಹಾಗೂ ಸುತ್ತಮುತ್ತಲಿನ ಕೆಲವು ಸ್ಥಳಗಳು ಬೌದ್ಧ ನೆಲೆಗಳಾಗಿವೆ’ ಎಂದು ಬರೆದರು.

ಸನ್ನತಿಯ ಚಂದ್ರಲಾಪರಮೇಶ್ವರಿ ದೇವಸ್ಥಾನ ಸಂಕೀರ್ಣದಲ್ಲಿದ್ದ ಕಾಳಿದೇವಿ ಗುಡಿ ಮೇಲ್ಚಾವಣಿ 1989ರಲ್ಲಿ ಕುಸಿದ ಸಂದರ್ಭದಲ್ಲಿ ದೇವಿಯ ಮೂರ್ತಿಯಿದ್ದ ತಳಪಾಯದಲ್ಲಿ ಪ್ರಾಕೃತ ಭಾಷೆಯ ಬ್ರಾಹ್ಮಿ ಲಿಪಿಯನ್ನೊಳಗೊಂಡ ಶಾಸನ ಬಂಡೆಯ ಜೊತೆಗೆ ಇನ್ನೂ ಮೂರು ಶಾಸನಗಳು ಸಿಕ್ಕವು. ಕನಗನಹಳ್ಳಿಯ ರಣಮಂಡಲ ಪ್ರದೇಶದಲ್ಲಿ ಅಶೋಕನ ಕಾಲದಲ್ಲಿ ಬೃಹತ್ತಾದ ಅಧೋಲೋಕ ಮಹಾಚೈತ್ಯ ಇದ್ದ ಸಂಗತಿಯನ್ನು ಆ ಶಾಸನಗಳು ಬಹಿರಂಗಪಡಿಸಿದವು.

ಶಾಸನಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ ರಣಮಂಡಲದ 86 ಹೆಕ್ಟೆರ್ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆ ಮತ್ತು ರಾಜ್ಯ ಪುರಾತತ್ವ ಇಲಾಖೆ ಜಂಟಿಯಾಗಿ 1994ರಿಂದ 2001ರವರೆಗೆ ಉತ್ಖನನ ಕಾರ್ಯ ನಡೆಸಿದವು. ಮಹಾಸ್ತೂಪ, ಅಧೋಲೋಕ ಮಹಾಚೈತ್ಯದ ಅವಶೇಷಗಳು, ಕಪ್ಪು ಪಾಲಿಕ್ ಮಡಿಕೆಗಳು, ಮಣ್ಣಿನ ಪದಕಗಳು, ಶಾತವಾಹನ ಪೂರ್ವ ಮತ್ತು ಶಾತವಾಹನರ ಕಾಲದ ನಾಣ್ಯಗಳು, ದಂತ, ತಾಮ್ರ ಮತ್ತು ಕಬ್ಬಿಣದ ಆಭರಣಗಳು, ಮನೆಯ ಇಟ್ಟಿಗೆಯ ಸುಸಜ್ಜಿತ ತಳಪಾಯಗಳು, ಬುದ್ಧನ ಪ್ರತಿಮೆಗಳು, ಪದ್ಮ ಪಾದಗಳು, ಜಾತಕ ಕಥೆಗಳನ್ನು ಹೇಳುವ ಶಿಲಾ ಫಲಕಗಳು, ಮೌರ್ಯ ಚಕ್ರವರ್ತಿ ಅಶೋಕನು ತನ್ನ ಪರಿವಾರದೊಂದಿಗಿರುವ ‘ರಾಯೋ ಅಶೋಕ’ ಎಂಬ ಲಿಪಿಸಹಿತ ಶಿಲಾ ಉಬ್ಬು ಫಲಕ ಹಾಗೂ ಬ್ರಾಹ್ಮಿ ಲಿಪಿಯಲ್ಲಿ ಬರೆದ ಪ್ರಾಕೃತ ಭಾಷೆಯ ಹಿರಿಯ ಮತ್ತು ಕಿರಿಯ ಶಾಸನಗಳು ಈ ಉತ್ಖನನದಲ್ಲಿ ಸಿಕ್ಕವು.

ಸನ್ನತಿ ಪರಿಸರದಲ್ಲಿ ನಡೆಸಲಾದ ಉತ್ಖನನದಲ್ಲಿ ಪತ್ತೆಯಾಗಿರುವ ಅವಶೇಷಗಳು

ಅಧೋಲೋಕ ಮಹಾಚೈತ್ಯ: ಅಶೋಕನ ಕಾಲಕ್ಕೆ ಸನ್ನತಿ ದೊಡ್ಡ ನಗರವಾಗಿ ಮಾರ್ಪಟ್ಟು, ಶಾತವಾಹನರ ಕಾಲಕ್ಕೆ ಇನ್ನಷ್ಟು ಅಭಿವೃದ್ಧಿ ಹೊಂದಿತ್ತು. ಅಶೋಕನ ಕಾಲದಲ್ಲಿ ಇಲ್ಲಿ ಹೀನಾಯಾನ ಪಂಥ, ಆನಂತರದ ಶಾತವಾಹನರ ಕಾಲಕ್ಕೆ ಮಹಾಯಾನ ಪಂಥ ನೆಲೆಗೊಂಡಿತ್ತೆಂದು ಹೇಳಲು ಮಾಹಿತಿಗಳ ಆಧಾರವಿದೆ. ಬಹುಮುಖ್ಯವಾಗಿ ಬೌದ್ಧ ಧರ್ಮದ ಈ ಎರಡೂ ಪಂಥಗಳಿಗೆ ನೆಲೆಬೀಡಾಗಿದ್ದ ಸನ್ನತಿ ಇಡೀ ದಕ್ಖನ್ ಪ್ರಾಂತದಲ್ಲಿ ಮಹತ್ವದ ಕೇಂದ್ರವಾಗಿತ್ತು. ಸನ್ನತಿ ಸುತ್ತಲಿನ ಊರುಗಳಾದ ಶಹಾಪುರ ತಾಲ್ಲೂಕಿನ ರೋಜಾ, ಜೇವರಗಿ ತಾಲ್ಲೂಕಿನ ಜೇವರಗಿ, ಬೆಳವಾಡಗಿ, ಹಿಪ್ಪರಗಿ, ಯಡ್ರಾಮಿ, ಹಸರಗುಂಡಗಿ, ಸಂಗಾವಿ, ಚಿಂಚೋಳಿ ತಾಲ್ಲೂಕಿನ ಸುಂಗಠಾಣ, ಸೂಗುರ, ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ, ಅಫಜಲಪುರ ತಾಲ್ಲೂಕಿನ ಘತ್ತರಗಿ, ಗಾಣಗಾಪುರ, ತಾರಾಪುರ, ಕೊಲ್ಲೂರು ಮುಂತಾದವುಗಳಲ್ಲಿ ಕ್ರಿ.ಪೂ. ಎರಡನೇ ಶತಮಾನಕ್ಕೆ ಸೇರಿದ ಶಾಸನ ಸಹಿತವಿರುವ ಸ್ಮಾರಕ ಶಿಲ್ಪಗಳು, ಬೌದ್ಧಸ್ತೂಪ, ಪ್ರತಿಮೆಗಳು, ಬುದ್ಧನ ಭಗ್ನಶಿಲ್ಪಗಳು ಕಂಡುಬಂದಿವೆ. ಇಲ್ಲಿಯ ಗಮನಾರ್ಹ ಸಂಗತಿಯೆಂದರೆ ಉಲ್ಲೇಖಿತ ಈ ಊರುಗಳು ಕ್ರಿ.ಪೂ. ಕಾಲಕ್ಕೆ ಸನ್ನತಿಯೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದವು. ಇಲ್ಲಿನ ಜನರು ಸನ್ನತಿಯ ಮಹಾಚೈತ್ಯದ ಉಪಾಸಕರಾಗಿದ್ದರಬೇಕು. ಸ್ತೂಪದ ಆವರಣದಲ್ಲಿ ದೊರಕಿರುವ ಶಾಸನಗಳಲ್ಲಿ ಅಂಥ ಕೆಲವರ ಹೆಸರುಗಳು ಉಲ್ಲೇಖಿಸಲ್ಪಟ್ಟಿವೆ.

ಸಿರಿಖಿರಿಯ ಕಪಡರಸ, ಸಿರಕಾಮ, ಸಿರಿಮಕಸ, ಮಣೀಯಸ ಖಹಸ, ಸೋಮಘಸ, ಸಮಾ ಉಪಾಸಿಕಾಮ, ಅಹಿಮರಿಕಾಮ, ನಾಗನಿಕಾಯ, ಗಹಪತಿಸ, ಸೂಲಸಸ, ಮಾನ, ಫೆಮನುಸ, ಅಕಪಟಲಿಕಾ ಮಹಾನಸಿಕೆನ, ಠಕದಸ, ನಾದೇವ, ಸಮಲೋಕಿಕಾಯ ಬಮ್ಹಿಯ, ಮಾಯರಖಿತಸ, ಅಂತೆವಾಸನೀಮ, ಅಮೋಚಲಮಸ, ಮಹಾಕುಲಕಿಮಣಂ ಬೋಜಕಸ, ರಖಿತಸ ಮೊದಲಾದವರ ಹೆಸರುಗಳು ಈ ಶಾಸನಗಳಲ್ಲಿವೆ. ಅವರು ಸಮಾಜದ ಉನ್ನತ ವರ್ಗಕ್ಕೆ ಸೇರಿದ ಶ್ರೀಮಂತರು, ಗೃಹಸ್ಥರು, ಅಧಿಕಾರಿಗಳಿದ್ದಿರಬೇಕು. ಅವರು ಸನ್ನತಿಯಲ್ಲಿ ಅನೇಕ ಸ್ಮಾರಕಗಳನ್ನು ನಿರ್ಮಿಸಿದ್ದರು. ಚೈತ್ಯಕ್ಕೆ ದೇಣಿಗೆಯನ್ನೂ ನೀಡಿದ್ದರು. ಅವರಲ್ಲಿ ಸ್ತ್ರೀಯರೂ ಇದ್ದರು.

ಇಲ್ಲಿಯ ಮಹಾಚೈತ್ಯದ ಸುತ್ತಲೂ ಪ್ರಕಾರವೊಂದನ್ನು ನಿರ್ಮಿಸಲು ಬಂಧು ಶ್ರೇಣಿ ಸಂಘದ ಗುಡ ಎಂಬವಳ ಮಗಳು ಹಾಗೂ ನಟಿಕಳಾಗಿದ್ದ ಆರ್ಯವಾಸಿ ಎಂಬವಳು ದಾನ ಮಾಡಿದ್ದಳು ಎಂಬುದಾಗಿ ಇಲ್ಲಿನ ಸ್ತಂಭ ಶಾಸನವೊಂದು ತಿಳಿಸುತ್ತದೆ. ಸನ್ನತಿ ಸ್ಥಳೀಯ ಮಾತ್ರವಲ್ಲದೆ ಆ ಕಾಲಕ್ಕೆ ತುಂಬಾ ಮಹತ್ವವೆನಿಸಿದ್ದ ಮಹಾರಾಷ್ಟ್ರದ ಪ್ರತಿಷ್ಠಾನ (ಪೈಠಣ), ಗೋದಾವರಿ ತೀರದ ಬಾವರಿ ಆಶ್ರಮ, ಆಂಧ್ರಪ್ರದೇಶದ ಅಮರಾವತಿ, ನಾಗಾರ್ಜುನಕೊಂಡ (ಧಾನ್ಯಕಟಕ), ಪಾಟಲಿಪುತ್ರ ಹಾಗೂ ಸಿಂಹಳ (ಶ್ರೀಲಂಕಾ) ಹಾಗೂ ಕರ್ನಾಟಕದ ಮಸ್ಕಿ, ಕೊಪ್ಪಳ, ಬ್ರಹ್ಮಗಿರಿ, ಬನವಾಸಿ ಇವುಗಳ ಜೊತೆಗೆ ಧಾರ್ಮಿಕ, ಶೈಕ್ಷಣಿಕ, ವಾಣಿಜ್ಯಿಕ ಸಂಬಂಧವನ್ನು ಹೊಂದಿತ್ತೆನ್ನಲು ಸನ್ನತಿಯ ಅನೇಕ ಸ್ಮಾರಕ, ಶಿಲ್ಪ, ಶಾಸನಗಳಲ್ಲಿ ಉಲ್ಲೇಖವನ್ನು ಕಾಣುತ್ತೇವೆ.

ಸನ್ನತಿಯಲ್ಲಿ ದೊರೆತಿರುವ ಎರಡು ಮಚಲಿಂದ ನಾಗಶಿಲ್ಪಗಳನ್ನು ಬುದ್ಧನ ಪವಿತ್ರ ಅಸ್ಥಿ ಅವಶೇಷಗಳುಳ್ಳ ಸ್ತೂಪದ ಅಂಡ ಭಾಗವನ್ನು ರಕ್ಷಿಸುವಂತೆ ಚಿತ್ರಿಸಲಾಗಿದೆ. ಈ ಮಚಲಿಂದ ನಾಗಶಿಲ್ಪಗಳು ವಿಶಿಷ್ಟವೆನಿಸಿದ್ದು, ಒಂದನ್ನು ಐದು ಹೆಡೆಯ ರೂಪದಲ್ಲಿ ಮತ್ತೊಂದನ್ನು ಏಳು ಹೆಡೆಯ ರೂಪದಲ್ಲಿ ಬಿಡಿಸಲಾಗಿದೆ. ಅದರಂತೆ ಏಕಶಿಲಾಯಕ್ಷನ ದುಂಡು ಶಿಲ್ಪ, ಮಿಥುನ ದಂಪತಿ ಶಿಲ್ಪ, ನಾಗಶಿಲ್ಪ ಇತ್ಯಾದಿಗಳು ಅಮರಾವತಿ, ನಾಗಾರ್ಜುನಕೊಂಡ, ಬನವಾಸಿಯಲ್ಲಿಯೂ ಕಂಡುಬಂದಿವೆ.

ಸನ್ನತಿಯಲ್ಲಿ ಇರುವಂತಹ ಶಿಲ್ಪಗಳನ್ನು ಉತ್ತರ ಭಾರತದ ಸ್ತೂಪಗಳಲ್ಲಿಯೂ ಕಾಣುತ್ತೇವೆ. ಸನ್ನತಿಯಲ್ಲಿ ದೊರೆತ ಬುದ್ಧಪಾದ ಶಿಲ್ಪಗಳನ್ನು ಜಟಿಂಗ ರಾಮೇಶ್ವರದ ಅಶೋಕನ ಕಿರುಬಂಡೆ ಶಾಸನದ ಕೆಳಗೆ ಬಾಹ್ಯರೇಖೆಯಲ್ಲಿ ಬಿಡಿಸಲಾಗಿದೆ. ಇಂಥದೇ
ಪಾದದ್ವಯಗಳ ರೇಖಾಕೃತಿಯನ್ನು ಕೊಪ್ಪಳ ಗವಿಮಠದ ಸಮೀಪದ ಬಂಡೆಯಲ್ಲಿರುವ ಅಶೋಕನ ಶಾಸನದ ಬಳಿ ಕೊರೆಯಲಾಗಿದೆ. 

ಪಾಟಲಿಪುತ್ರದ ಬೌದ್ಧ ಸ್ತೂಪದ ಪ್ರತಿಕೃತಿಯನ್ನು ಚೈತ್ಯದ ಫಲಕವೊಂದರ ಮೇಲೆ ಮಾಡಿಸಲಾಗಿದೆ. ಶ್ರೀಲಂಕಾದಲ್ಲಿ ಆಗಿನ ಕಾಲದಲ್ಲಿ ನಡೆದ ಬೌದ್ಧ ಸಮ್ಮೇಳನಕ್ಕೆ ಅನೇಕ ಬಿಕ್ಕುಗಳು ಹೋಗಿದ್ದರು. ಈ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೆ ಅಶೋಕನು ತನ್ನ ಮಕ್ಕಳನ್ನು ಸನ್ನತಿಯಿಂದಲೇ ಬೀಳ್ಕೊಟ್ಟನೆಂಬ ಪ್ರತೀತಿಯಿದೆ. ಅಷ್ಟೇ ಏಕೆ, ಅಶೋಕನು ತನ್ನ ಜೀವಿತದ ಕೊನೆಯ ದಿನಗಳನ್ನು ಸನ್ನತಿಯಲ್ಲೇ ಕಳೆದು ಅಲ್ಲಿಯೇ ಸಮಾಧಿ ಹೊಂದಿದನೆಂದೂ ಹೇಳಲಾಗುತ್ತದೆ. ಮೌರ್ಯರ ಅಶೋಕನಿಗೂ ಸನ್ನತಿಗೂ ಇದ್ದಿರುವ ಗಾಢ ಸಂಬಂಧವನ್ನು ಈ ವಿವರಗಳು ಸೂಚಿಸುತ್ತವೆ.

ಅಶೋಕನ ನಂತರದಲ್ಲಿ ದಕ್ಷಿಣದಲ್ಲಿ ಅಧಿಕಾರವನ್ನು ಹಿಡಿದ ಶಾತವಾಹನರು ಕ್ರಿ.ಶ. ಮೂರನೆಯ ಶತಮಾನದವರೆಗೆ ಆಳ್ವಿಕೆ ಮಾಡಿದರು. ಇವರ ರಾಜಧಾನಿ ಮಹಾರಾಷ್ಟ್ರದ ಪ್ರತಿಷ್ಠಾನ (ಪೈಠಣ). ಕರ್ನಾಟಕದಲ್ಲಿ ಕಲಬುರಗಿ (ಸನ್ನತಿ), ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳವರೆಗೆ ಇವರ ಅಧಿಕಾರ ಹರಡಿತ್ತು. ವಿಶೇಷವೆಂದರೆ ಶಾತವಾಹನರು ಅಧಿಕಾರಕ್ಕೆ ಬರುವಷ್ಟರ ಹೊತ್ತಿಗೆ ಸನ್ನತಿಯು ಮಹಾಯಾನ ಪಂಥದ ಪ್ರಮುಖ ಕೇಂದ್ರವಾಗಿ ಪರಿವರ್ತನೆಗೊಂಡಿತು ಎಂಬುದನ್ನು ಈ ಪ್ರದೇಶದಲ್ಲಿ ನಡೆಸಿದ ಉತ್ಖನನಗಳು ತಿಳಿಸುತ್ತವೆ.

ಮೌರ್ಯರಂತೆ ಶಾತವಾಹನರೂ ಬ್ರಾಹ್ಮಿಲಿಪಿ ಪ್ರಾಕೃತವನ್ನು ಶಾಸನಸ್ಥ ಭಾಷೆಯಾಗಿ ಮುಂದುವರೆಸಿದರು. ಶಾತವಾಹನರ ವಾರಿಸಿಪುತ ಸಿರಿ ಶಾತಕರ್ಣಿ, ಗೌತಮಿಪುತ್ರ ಶಾತಕರ್ಣಿ, ಪುಳಮಾಯಿ ಇವರ ಕುರಿತಾದ ಶಾಸನಗಳು, ಶಾಸನ ಶಿಲ್ಪಗಳು ಹಾಗೂ ನಾಣ್ಯಗಳು ಸಿಕ್ಕಿವೆ. ಶಾತವಾಹನರ ಕಾಲದ ಶಾಸನಗಳಲ್ಲಿ ಅರಸರ, ಅಮಾತ್ಯರ, ಅಧಿಕಾರಿಗಳ, ಉನ್ನತ ವರ್ಗದವರ, ಉಪಾಸಕ, ಉಪಾಸಕಿಯರ, ಸಂಘ, ಶಾಖೆಗಳ ವಿವರ ದೊರಕುತ್ತವೆ. ಇವುಗಳನ್ನು ಹನುಮಾಕ್ಷಿ ಗೋಗಿಯವರು ಕಲಬುರಗಿ ಜಿಲ್ಲೆಯ ಶಾಸನಗಳು ಗ್ರಂಥದಲ್ಲಿ ಉಲ್ಲೇಖಿಸಿ ವಿವರಗೊಳಿಸಿದ್ದಾರೆ.

ಶಾತವಾಹನರ ಶಿಲ್ಪಗಳು ಕುಬ್ಜವಾಗಿರುವುದು ಅವುಗಳ ವೈಶಿಷ್ಟ್ಯ. ಯಕ್ಷ, ಮೂರ್ತಿ, ಹಾರೀತಿ, ನಾಗ ಶಿಲ್ಪಗಳು ಅನುಪಮವಾಗಿದ್ದು, ಅವುಗಳನ್ನಿಲ್ಲಿ ಕಾಣುತ್ತೇವೆ. ಬನವಾಸಿಯನ್ನು ಕೇಂದ್ರವಾಗಿಸಿದ್ದ ಶಾತವಾಹನರು ಸನ್ನತಿಯೊಂದಿಗೂ ತಮ್ಮ ಸಂಬಂಧವನ್ನು ಇಟ್ಟುಕೊಂಡಿದ್ದರು ಎಂಬುದನ್ನು ಇವೆಲ್ಲವೂ ತಿಳಿಸುತ್ತವೆ.

ಅಕ್ಷರ ಸಂಸ್ಕೃತಿ: ಅಶೋಕನು ಅಕ್ಷರ ಸಂಸ್ಕೃತಿಯ ಹರಿಕಾರ. ತನ್ನ ಶಾಸನಗಳ ಮೂಲಕ ಅದನ್ನು ಅನುಷ್ಠಾನಗೊಳಿಸಿ, ಬೆಳೆಸಿದ. ಕರ್ನಾಟಕದಲ್ಲಿಯೂ ಅದು ಆತನಿಂದಲೇ ಪ್ರಾರಂಭವಾಯಿತು. ಈವರೆಗೆ ಕರ್ನಾಟಕದಲ್ಲಿ ಎಂಟು ಕಡೆಗಳಲ್ಲಿ 11 ಬಂಡೆ ಶಾಸನಗಳು ದೊರಕಿವೆ. ಸನ್ನತಿಯಲ್ಲಿ ಮೂರು ಶಾಸನಗಳಿದ್ದು, ಅವುಗಳ ಪೈಕಿ ಒಂದು ಬೃಹತ್ ಶಾಸನವಾಗಿದ್ದರೆ ಉಳಿದವು ಲಘು ಶಾಸನಗಳಾಗಿವೆ. ಈ ಎಲ್ಲ ಕಡೆಗಳಲ್ಲಿನ ಶಾಸನಗಳು ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿವೆ. ಈ ಶಾಸನಗಳ ರಚನೆಗೆ ಮೂಲ ಕೇಂದ್ರ ಸನ್ನತಿಯಾಗಿತ್ತೆಂದರೆ ಆಶ್ಚರ್ಯವೇನಿಲ್ಲ.

ಬ್ರಹ್ಮಗಿರಿ ಶಾಸನದಲ್ಲಿ ಉಲ್ಲೇಖಗೊಂಡ ಸುವರ್ಣಗಿರಿ ಅಶೋಕನ ದಕ್ಷಿಣ ಭಾರತದ ಪ್ರಾಂತೀಯ ರಾಜಧಾನಿಯಾಗಿತ್ತೆಂಬುದು ಸರ್ವವಿಧಿತವಾಗಿದೆ. ಆದರೆ ಈ ಸುವರ್ಣಗಿರಿಯ ನಿರ್ದಿಷ್ಟ ನೆಲೆ ಯಾವುದು ಎಂಬುದರ ಬಗ್ಗೆ, ಇತಿಹಾಸಕಾರರಲ್ಲಿ ಸಾಕಷ್ಟು ಜಿಜ್ಞಾಸೆ ನಡೆದು ಕೊನೆಗೆ ಡಾ.ಎಚ್. ಕೃಷ್ಣಶಾಸ್ತ್ರಿ ಹಾಗೂ ಅನೇಕ ಇತಿಹಾಸಕಾರರು ಸನ್ನತಿಯೇ ಸುವರ್ಣಗಿರಿಯಾಗಿತ್ತೆಂಬ ಅಭಿಪ್ರಾಯಕ್ಕೆ ಬಂದಿರುವರು. ಅಶೋಕನ ಪುತ್ರರಲ್ಲಿ ಒಬ್ಬನು ಈ ಪ್ರಾಂತವನ್ನು ಆಳುತ್ತಿದ್ದನು. ಕರ್ನಾಟಕದಲ್ಲಿ ಬೌದ್ಧ ಧರ್ಮದ ಸಂದೇಶಗಳನ್ನು ಕೊರೆಸುವ ಸಲುವಾಗಿ ತಕ್ಷಶಿಲೆಯ ಲಿಪಿಕಾರ ಚಡಪನನ್ನು ನೇಮಿಸಲಾಗಿತ್ತು. ಕರ್ನಾಟಕದಲ್ಲಿ ಈಗ ದೊರಕಿರುವ ಅಶೋಕನ ಶಾಸನಗಳ ರೂವಾರಿ ಚಡಪನೇ ಆಗಿದ್ದಾನೆ ಎಂಬುದರಲ್ಲಿ ಚರಿತ್ರೆಕಾರರಲ್ಲಿ ಭಿನ್ನಾಭಿಪ್ರಾಯ ಕಂಡಿಲ್ಲ.

‘ಸುವರ್ಣಗಿರಿ’ ಮತ್ತು ‘ಸನ್ನತಿ’ ಈ ಎರಡು ಪದಗಳಲ್ಲಿರುವ ಸಾಮ್ಯತೆಯನ್ನು ಗುರುತಿಸಿರುವ ವಿದ್ವಾಂಸರು ದಾಖಲೆಗಳಲ್ಲಿರುವ ಸುವರ್ಣಗಿರಿ ಆಡುರೂಪದಲ್ಲಿ ‘ಸಣ್ಣಚ್ಚಿ’ ಅಥವಾ ‘ಸನ್ನತಿ’ ಎಂದಾಗಿದೆ. ಸ್ಥಳೀಯರು ಸಂತಿ ಎಂತಲೂ ಕರೆಯುತ್ತಾರೆ. ಸುವರ್ಣಗಿರಿ, ಸ್ವರ್ಣಗಿರಿ ಅಥವಾ ಸ್ವರ್ಣಾದ್ರಿ ಕಾಲಕ್ರಮೇಣ ಸನ್ನತಿಯಾಗಿರುವ ಸಂಭವವಿದೆ ಎಂದು ವಿಶ್ಲೇಷಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ...