ವಿಷಯಕ್ಕೆ ಹೋಗಿ

ಬ್ರಾಹ್ಮೀಲಿಪಿ ಮತ್ತು ಖರೋಷ್ಠಿ ಲಿಪಿ

ಬ್ರಾಹ್ಮೀ ಲಿಪಿ 

ಭಾರತೀಯ ಭಾಷೆಗಳಿಗೆ ಮೂಲವಾದ ಲಿಪಿಗಳ ಪೈಕಿ ಒಂದು ಇದರ ಉಗಮದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಇದನ್ನು ಮುಖ್ಯವಾಗಿ ಎರಡು ಭಾಗಗಳಲ್ಲಿ ವಿಂಗಡಿಸಬಹುದು: 

1. ಬ್ರಾಹ್ಮೀಲಿಪಿಯ ಉಗಮಕ್ಕೆ ಪರದೇಶ ಲಿಪಿಗಳೇ ಆಧಾರ, 2. ಬ್ರಾಹ್ಮೀಲಿಪಿ ಭಾರತದ ಸ್ವತಂತ್ರಲಿಪಿ.

1. ಈ ಲಿಪಿ ಬೇರೆ ದೇಶದಲ್ಲಿ ಉಗಮ ಹೊಂದಿ, ಭಾರತಕ್ಕೆ ವಲಸೆಗಾರರ ಮೂಲಕ ಬಂದು, ಅನಂತರ ಇಲ್ಲಿ ತನ್ನ ಬೆಳೆವಣಿಗೆ ಕಂಡುಕೊಂಡಿತು ಎಂದು ಅಭಿಪ್ರಾಯ ಪಟ್ಟಿರುವ ಅನೇಕ ವಿದ್ವಾಂಸರುಂಟು. ಅವರಲ್ಲಿ ಜೇಮ್ಸ್ ಪ್ರಿನ್ಸೆಪ್ ಎಂಬಾತ ಬ್ರಾಹ್ಮೀ ಲಿಪಿಯ ಬಗ್ಗೆ 19ನೆಯ ಶತಮಾನದ ಆದಿ ಭಾಗದಲ್ಲಿಯೇ ಅಧ್ಯಯನ ನಡೆಸಿ, ಇದು ಗ್ರೀಕ್ ಲಿಪಿಯಿಂದ ಬೆಳೆದದ್ದು ಎಂಬ ತೀರ್ಮಾನಕ್ಕೆ ಬಂದ. ಹೆಲೆವಿ ಎಂಬಾತ ಇದು ಖರೋಷ್ಠಿ ಅರಮೇಯಿಕ್ ಮತ್ತು ಗ್ರೀಕ್ ಲಿಪಿಗಳ ಮಿಶ್ರಣವೆಂದೂ ಇದರ ಉಗಮ ಕ್ರಿ. ಪೂ. ನಾಲ್ಕನೆಯ ಶತಮಾನದಲ್ಲಿ ಆಯಿತು ಎಂದೂ ಹೇಳಿದ್ದಾನೆ. ಟೆರೆನ್ ಡೆ ಲಾ ಕೊಪಿರೆ ಎಂಬಾತ ಇದು ಚೀನಾದ ಚಿತ್ರಲಿಪಿಯಿಂದ (ಪಿಕ್ಟೋಗ್ರಾಫ್) ಬೆಳೆದದ್ದು ಎಂದು ವಾದಿಸುತ್ತಾನೆ.

ಬ್ರಾಹ್ಮೀಲಿಪಿ ದಕ್ಷಿಣ ಸಿಮಿಟಕ್ ಲಿಪಿಯಿಂದ ಬಂದುದು ಎಂದು ನಿರ್ಣಯಿಸಿರುವ ವಿದ್ವಾಂಸರಲ್ಲಿ ಡೀಕೆ ಮತ್ತು ಕ್ಯಾನನ್ ಐಸಾಕ್ ಟೈಲರ್ ಎಂಬುವರು ಮುಖ್ಯರು. ಬ್ಯೂಲರ್, ವೆಬರ್, ಬೆನ್ಛೇ, ಜೆನ್ಸನ್ ಮುಂತಾದವರು ಬ್ರಾಹ್ಮೀಲಿಪಿಗೂ ಫಿನೀಷಿಯನ್ ಲಿಪಿಗೂ ಬಲುಮಟ್ಟಿಗೆ ಹೋಲಿಕೆ ಇರುವುದರಿಂದ ಫಿನೀಷಿಯನ್ ಲಿಪಿಯೇ ಇದರ ಉಗಮಕ್ಕೆ ಕಾರಣ ಎಂದು ವಾದಿಸಿದ್ದಾರೆ.

2. ಇದು ಮೂಲತ: ಭಾರತದ ಲಿಪಿ ಎಂದು ಹೇಳಿರುವ ಇದುವಿದ್ವಾಂಸರಲ್ಲಿ ಎರಡು ಗುಂಪುಗಳಿವೆ (1) ಆರ್ಯರು ಸೃಷ್ಠಿಸಿದ್ದು ಎನ್ನುವವರು (2) ಮೂಲ ದ್ರಾವಿಡಲಿಪಿ ಎಂದು ವಾದಿಸುವವರು.

ಅಲೆಕ್ಸಾಂಡರ್, ಕನ್ನಿಂಗ್‍ಹ್ಯಾಮ್, ಲಸ್ಸೆನ್ ಮುಂತಾದವರು ವೈದಿಕ ಕಾಲದ ಜನರಿಂದ ಅಥವಾ ಆರ್ಯರಿಂದ ಚಿತ್ರಲಿಪಿಯ ಆಧಾರದ ಮೇಲೆ ರಚಿತವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಉದಾಹರಣೆಗೆ ರ-ರಜ್ಜು (ಹಗ್ಗ). ಮ-ಮುಖ, ನ-ನಾಸ (ಮೂಗು) ಶ-ಶ್ರವಣ (ಕಿವಿ) ಇತ್ಯಾದಿ.

ಎಡ್ವರ್ಡ್ ತಾಮಸ್ ಮತ್ತು ಟಿ.ಎನ್. ಸುಬ್ರಮಣಿಯನ್ ಎನ್ನುವವರು ಈ ಲಿಪಿ ದ್ರಾವಿಡ ಮೂಲವೆಂದು ಹೇಳುತ್ತಾರೆ. ಆರ್ಯರು ಭಾರತಕ್ಕೆ ಬರುವ ಮೊದಲು ಇಲ್ಲಿದ್ದವರು ದ್ರಾವಿಡರು ಎಂಬ ವಿಚಾರವನ್ನು ಅನೇಕ ಮಂದಿ ವಿದ್ವಾಂಸರು ಒಪ್ಪಿದ್ದಾರೆ ದ್ರಾವಿಡರು ಅರ್ಯರ ಸಂಸ್ಕøತಿಯ ಮೇಲೆ ಹೆಚ್ಚು ಪ್ರಭಾವ ಬೀರಿರುವ ಕಾರಣ ಬ್ರಾಹ್ಮೀಲಿಪಿಯ ಉಗಮಕ್ಕೆ ದ್ರಾವಿಡರೇ ಕಾರಣರೆಂದೂ ದ್ರಾವಿಡರ ಈ ಲಿಪಿಯನ್ನು ಆರ್ಯರು ಅಭಿವೃದ್ಧಿಪಡಿಸಿದರೆಂದೂ ಕೆಲವು ವಿದ್ವಾಂಸರ ಊಹೆ.

ಈ ಲಿಪಿ ಬ್ರಹ್ಮನಿಂದ ರಚಿತಾವಾಯಿತೆಂಬುದು ಸಾಂಪ್ರದಾಯಿಕ ವಾದ. ಬ್ರಹ್ಮವಿದ್ಯೆಯನ್ನು ಕಲಿಯಲೋಸುಗ ಉಗಮಿಸಿದ ಈ ಲಿಪಿಗೆ ಬ್ರಾಹ್ಮೀ ಎಂದು ಹೆಸರು ಬಂತು ಎನ್ನುವ ಸಾಂಪ್ರದಾಯಿಕ ಅಭಿಪ್ರಾಯವನ್ನು ಕೆಲವರು ಒಪ್ಪುತ್ತಾರೆ. ಇದರ ಉಗಮ ಭಾರತದಲ್ಲೇ ಅಯಿತು ಎಂದು ಅಭಿಪ್ರಾಯಪಟ್ಟಿರುವ ವಿದ್ವಾಂಸರಿಗೆ ಸಿಂಧೂಲಿಪಿ ಹೆಚ್ಚು ಸಹಕಾರಿಯಾಗಿದೆ. ಸಿಂಧೂ ನಾಗರಿಕತೆಯಲ್ಲಿ ಲಿಪಿಯ ಬಳಕೆ ಇತ್ತೆಂಬ ವಿಚಾರ 1923ರಲ್ಲಿ ನಡೆದ ಸಿಂಧೂ ನಾಗರಿಕತೆಯ ಶೋಧನೆಯ ಅನಂತರ (ಕ್ರಿ.ಪೂ. 2500-1800) ತಿಳಿದು ಬರುತ್ತದೆ. ಸಿಂಧೂ ಲಿಪಿಯ ಸಂಪೂರ್ಣ ಅಧ್ಯಯನ ಇನ್ನೂ ಅಗಬೇಕಾಗಿರುವುದರಿಂದ ಅದು ಬ್ರಾಹ್ಮೀಲಿಪಿಯ ಪೂರ್ವರೂಪ ಎಂದು ಹೇಳುವುದು ಸರಿಯಲ್ಲ. ಕೆಲವು ವಿದ್ವಾಂಸರು ಇದು ಸಾಮ್ರಾಟ ಅಶೋಕನ ಕಾಲಕ್ಕಿಂತ ಮೊದಲೇ ಬಳಕೆಯಲ್ಲಿತ್ತು ಎಂದು ಹೇಳಿದರೆ ಮತ್ತೆ ಕೆಲವರು ಇದು ಅಶೋಕನ ಕಾಲದಲ್ಲಿ ಸಂಸ್ಕøತಬಲ್ಲ ಪಂಡಿತರಿಂದ ರಚಿಸಲ್ಪಟ್ಟಿತು ಎಂದು ಹೇಳುತ್ತಾರೆ. ಬ್ರಾಹ್ಮೀಲಿಪಿ ಅಶೋಕನ ಕಾಲದಲ್ಲಿ ಹುಟ್ಟಿತು ಎನ್ನುವುದಕ್ಕೆ ಎಸ್. ಶಂಕರ ನಾರಾಯಣನ್ ನಾಲ್ಕು ಕಾರಣ ಕೊಡುತ್ತಾರೆ: 1 ಅಶೋಕನಿಗಿಂತ ಮೊದಲು ಬರೆದಂಥ ಲಿಖಿತ ಅಧಾರಗಳು ದೊರೆಯದೇ ಇರುವುದು (ಸಿಂಧೂ ನಾಗರಿಕತೆಯ ಲಿಪಿಗಳನ್ನು ಬಿಟ್ಟು): 2 ಮೆಗಾಸ್ತನೀಸ್ ಚಂದ್ರಗುಪ್ತಮೌರ್ಯನ ಕಾಲದಲ್ಲಿ ಭಾರತಕ್ಕೆ ಬಂದಾಗ ಭಾರತದಲ್ಲಿ ಬರೆವಣಿಗೆ ಗೊತ್ತಿರಲಿಲ್ಲ ಎಂಬ ಹೇಳಿಕೆ ಕೊಟ್ಟಿರುವುದು: 3 ಬೌದ್ಧ ಭಿಕ್ಷುಗಳಿಗೆ (ಅಶೋಕನಿಗಿಂತ ಮೊದಲು) ಬುದ್ಧನ ಉಪದೇಶಗಳನ್ನು ಮೌಖಿಕವಾಗಿ ಉಪದೇಶಿಸುತ್ತಿದ್ದುದು: 4 ಅಶೋಕನ ಬ್ರಾಹ್ಮೀಯಲ್ಲಿ ಹೆಚ್ಚಿನ ಪ್ರಾಂತೀಯ ಭೇದಗಳು ಇಲ್ಲದೆ ಇರುವುದು.

ಬ್ರಾಹ್ಮೀಲಿಪಿ ಕ್ರಿ.ಪೂ. ಮೂರನೆಯ ಶತಮಾನದ ಪೂರ್ವಾರ್ಧದಲ್ಲಿ ರಚನೆಯಾಯಿತು ಎಂದು ಎಸ್.ಅರ್. ಗೋಯಲ್ ಹೇಳುತ್ತಾರೆ. ಈ ಅಭಿಪ್ರಾಯ ಒಪ್ಪಿರುವ ಡಿ.ಸಿ. ಸರ್ಕಾರ್, ಟ.ಪಿ. ವರ್ಮಾ ಮುಂತಾದವರು ಅಶೋಕನ ಕಾಲದಲ್ಲಿ ಬ್ರಾಹ್ಮೀಲಿಪಿ ಶೋಧನೆಯಾಯಿತೆ ವಿನಾ ರಚನೆಯಾಗಲಿಲ್ಲ ಎಂದು ಹೇಳುತ್ತಾರೆ. ಆಶೋಕ ಬೌದ್ಧ ಧರ್ಮ ಪ್ರಚಾರಗೊಳಿಸಲು ಈ ಲಿಪಿಯನ್ನೂ ಪಾಲಿ ಭಾಷೆಯನ್ನೂ ಬಳಸಿದ ಎಂಬ ವಿಚಾರ ತಿಳಿದುಬಂದಿದೆ.

ಈ ಎಲ್ಲ ಅಭಿಪ್ರಾಯಗಳಿಂದ ಬ್ರಾಹ್ಮೀ ಅಶೋಕನ ಕಾಲದಲ್ಲಿ ಹುಟ್ಟಿತೆ ಅಥವಾ ಮೊದಲೇ ಇದ್ದ ಲಿಪಿಯನ್ನು ಅಶೋಕ ಅಭಿವೃದ್ಧಿಗೊಳಿಸಿದನೇ ಎಂಬುದನ್ನು ಖಚಿತವಾಗಿ ಹೇಳುವುದು ಸಾಧ್ಯವಾಗದಿದ್ದರೂ ಆಶೋಕ ಅದರ ಅಭಿವೃದ್ಧಿಗೆ ಕಾರಣನಾದ ಎಂದು ಹೇಳಬಹುದು.

ಅಶೋಕನ ದಕ್ಷಿಣ ಭಾರತದ ಬ್ರಾಹ್ಮೀಲಿಪಿ ಸರಳ ಸುಂದರ ಲಿಪಿ. ಇದರಲ್ಲಿ ಲಂಬ ರೇಖೆಗಳು ಹೆಚ್ಚು. ಶತಮಾನಗಳುರುಳಿದಂತೆ ಬ್ರಾಹ್ಮೀಲಿಪಿ ಕುಶಾನ, ಕ್ಷತ್ರಪ, ಸಾತವಾಹನ, ಗುಪ್ತಮೊದಲಾದ ರಾಜರ ಆಡಳಿತ ಕಾಲಗಳಲ್ಲಿ ವಿಕಾಸಹೊಂದಿ, ಅನೇಕ ರೂಪಗಳನ್ನು ಪಡೆಯುತ್ತಾ ಹೋಯಿತು. (ಕೆ.ಪಿ.ಎ.)

ಖರೋಷ್ಠಿ ಲಿಪಿ: 

ಭಾರತೀಯರ ಪ್ರಾಚೀನ ಲಿಪಿಗಳ ಪೈಕಿ ಖರೋಷ್ಠಿ ಲಿಪಿ ಒಂದೆಂಬುದು ಹಲವು ವಿದ್ವಾಂಸರ ಅಭಿಪ್ರಾಯ. ಈ ಲಿಪಿಯನ್ನು ಬ್ಯಾಕ್ಟ್ರೆಯನ್, ಇಂಡೋಬ್ಯಾಕ್ಟ್ರೇಯನ್, ಆರ್ಯನ್, ಬ್ಯಾಕ್ಟ್ರೋಪಾಲಿ, ಕಾಬೂಲಿಯನ್, ಕೆರೋಸ್ತಿ ಮುಂತಾದ ಹೆಸರುಗಳಿಂದಲೂ ಕರೆಯುತ್ತಿದ್ದರು. ಆದರೆ ಇದರ ಜನಪ್ರಿಯ ಹೆಸರು ‘ಖರೋಷ್ಠಿ’. ಚೀನದ ಪ್ರಾಚೀನ ಗ್ರಂಥವಾದ ‘ಫಾ-ವಾನ್-ಶೂಲಿ-ಯನ್’ ಗ್ರಂಥದಲ್ಲಿ ಈ ಲಿಪಿಯ ಬಗ್ಗೆ ಉಲ್ಲೇಖವಿದೆ. ಇದರ ಉಗಮದ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಈ ಲಿಪಿಯನ್ನು ಮ್ಲೇಚ್ಛರು ಬಳಸುತ್ತಿದ್ದರಿಂದಲೂ ಕತ್ತೆಯ ಚರ್ಮದ ಮೇಲೆ ಬರೆಯುತ್ತಿದ್ದುದರಿಂದಲೂ ಅಂಕುಡೊಂಕಾಗಿದ್ದುದರಿಂ ದಲೂ ಭಾರತೀಯರು ಇದನ್ನು ಖರ+ಓಷ್ಠ (ಕತ್ತೆಯ ತುಟಿ) ಎಂದು ಕುಚೋದ್ಯದಿಂದ ಕರೆದರು. ಪ್ರಾಯಃ ಇದೇ ಹೆಸರು ಅನಂತರ ಉಳಿಯಿತೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಖರೋಷ್ಠ ಎಂಬು ವವನು ಈ ಲಿಪಿಯನ್ನು ಬಳಕೆಗೆ ತಂದುದರಿಂದ ಈ ಲಿಪಿಗೆ ಅವನ ಹೆಸರು ಬಂದಿರಬಹುದೆಂದೂ ಮತ್ತೆ ಕೆಲವರು ಹೇಳುತ್ತಾರೆ. ಇದು ಅರಾಮೆಯಿಕ್ ಭಾಷೆಯ ‘ಖರೋಟ್ಠ’ ಪದ. ಸಂಸ್ಕೃತದಲ್ಲಿ ಖರೋಷ್ಠವಾಗಿ ಭಾರತದಲ್ಲಿ ಬಳಕೆಗೆ ಬಂದಿರಬೇಕೆಂದು ಡಿರಿಂಜರ್‍ನ ವಾದ.

ಇತ್ತೀಚೆಗೆ ಈ ಪ್ರಶ್ನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ದಾಸ್‍ಗುಪ್ತ ಅವರು ಖರೋಷ್ಠಿ ಪದ ಇರಾನಿಯನ್ ಭಾಷೆಯ ‘ಖರಪೊಸ್ತ’ ಎಂಬ ಪದದಿಂದಲೇ ಬಂದಿರಬೇಕೆಂದು ಹೇಳಿದ ಫ್ರಿಜಲುಸ್ಕಿ ಯವರ ವಾದವನ್ನು ಅನುಮೋದಿಸಿದ್ದಾರೆ. ಖರಪೊಸ್ತ ಎಂದರೆ ಕತ್ತೆಯ ಚರ್ಮವೆಂದೂ ಪ್ರಾಚೀನಕಾಲದಲ್ಲಿ ಬರೆವಣಿಗೆಗೆ ಕತ್ತೆಯ ಮತ್ತು ಒಂಟೆಯ ಚರ್ಮವನ್ನು ಬಳಸುತ್ತಿದ್ದುದರಿಂದ ಇದಕ್ಕೆ ಖರಪೊಸ್ತ ಎಂಬ ಹೆಸರು ಬಂದಿತೆಂದೂ ಕಾಲಕ್ರಮೇಣ ಖರೋಷ್ಠ ಎಂದಾಗಿರಬಹು ದೆಂದೂ ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಖರೋಷ್ಠಿ ಲಿಪಿ ಅರಾಮೆಯಿಕ್ ಲಿಪಿಯಿಂದ ಉಗಮವಾಗಿರಬೇ ಕೆಂದು ಸಾಮಾನ್ಯವಾಗಿ ಒಪ್ಪಲಾಗಿದೆ. ಅರಾಮೆಯಿಕ್ ಲಿಪಿಗೂ ಖರೋಷ್ಠಿ ಲಿಪಿಗೂ ಹೆಚ್ಚು ಹೋಲಿಕೆ ಇದ್ದು ಈ ಎರಡೂ ಲಿಪಿಗಳು ಬಲಭಾಗ ದಿಂದ ಎಡಭಾಗಕ್ಕೆ ಬರೆಯಲ್ಪಟ್ಟಿದ್ದು, ಕೇವಲ ಭಾರತದ ವಾಯವ್ಯ ಗಡಿಭಾಗದಲ್ಲಿ ಮಾತ್ರ ಉಪಯೋಗದಲ್ಲಿತ್ತು. ಅಂದರೆ ಅರಾಮೆಯಿಕ್ ಲಿಪಿ ಅಲ್ಲಿ ಹೆಚ್ಚು ಬಳಕೆಯಲ್ಲಿರುವುದರಿಂದ ಇದರ ಪ್ರಭಾವ ಖರೋಷ್ಠಿಯ ಮೇಲಾಗಿದ್ದು ಅರಾಮೆಯಿಕ್ ಲಿಪಿಯಿಂದಲೇ ಖರೋಷ್ಠಿ ಲಿಪಿ ಉಗಮವಾಗಿರಬೇಕೆಂದೂ ಖರೋಷ್ಠಿ ಲಿಪಿ ಭಾರತದಲ್ಲೆ ಉದ್ಭವಿಸಿದೆಯೆಂದೂ ಸಿಂಧೂಲಿಪಿ ಅದಕ್ಕೆ ಮೂಲವೆಂದೂ ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ ಇದಕ್ಕೆ ಖಚಿತ ಸಾಕ್ಷಾಧಾರಗಳಿಲ್ಲ.

ಬ್ರಾಹ್ಮೀ ಲಿಪಿಯಿಂದಲೇ ಭಾರತದ ಎಲ್ಲಾ ಲಿಪಿಗಳೂ ಉಗಮ ಗೊಂಡು ವಿಕಾಸಹೊಂದಿದವು. ಹಾಗೆಯೇ ಕನ್ನಡ ಲಿಪಿಗೂ ಅಶೋಕನ ದಕ್ಷಿಣ ಬ್ರಾಹ್ಮೀಯೇ ಮೂಲವಾಗಿದೆ. ಜೇಮ್ಸ್‍ಪ್ರಿನ್ಸೆಪ್ ಬ್ರಾಹ್ಮೀ ಲಿಪಿಯ ನ್ನು ಓದಿ ಭಾರತೀಯ ಲಿಪಿಶಾಸ್ತ್ರಕ್ಕೆ ಭದ್ರಬುನಾದಿ ಹಾಕಿದ (1837). ಈ ಬ್ರಾಹ್ಮೀಲಿಪಿಯ ಎಲ್ಲಾ ಅಕ್ಷರಗಳನ್ನು ಇಟ್ಟುಕೊಂಡು ಬ್ಯೂಲರ್, ಭಾರತೀಯ ಲಿಪಿಗಳ ಸಮಗ್ರ ಪಟ್ಟಿಯನ್ನು ತಯಾರಿಸಿದ. ಬ್ರಾಹ್ಮೀಯನ್ನು ಓದಿದ ತರುವಾಯ ಪ್ರಾಚೀನ ಕನ್ನಡ ಲಿಪಿಯನ್ನೋದುವ ಕಾರ್ಯ ಸುಗಮವಾಯಿತು. ಈ ದಿಸೆಯಲ್ಲಿ ಕೀಲ್‍ಹಾರ್ನ್, ಫ್ಲೀಟ್ ಮತ್ತು ರೈಸರ ಪ್ರಯತ್ನಗಳು ಪ್ರಮುಖವಾದುವು.

ಕ್ರಿ.ಪೂ. 3ನೆಯ ಶತಮಾನದಲ್ಲಿದ್ದ ಅಶೋಕನ ದಕ್ಷಿಣ ಬ್ರಾಹ್ಮೀಲಿಪಿ ಸಾತವಾಹನ, ಕದಂಬ, ಗಂಗ, ರಾಷ್ಟ್ರಕೂಟ, ಚಾಳುಕ್ಯ, ಹೊಯ್ಸಳ, ಕಳಚುರಿ ಮೊದಲಾದ ರಾಜವಂಶಗಳ ಆಡಳಿತದ ವಿವಿಧ ಕಾಲಘಟ್ಟಗಳಲ್ಲಿ ಹಂತಹಂತವಾಗಿ ವಿಕಾಸ ಹೊಂದಿ ಇಂದಿನ ಕನ್ನಡ ಲಿಪಿಯ ರೂಪವನ್ನು ಪಡೆಯಿತು.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ...