ವಿಷಯಕ್ಕೆ ಹೋಗಿ

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು.
ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ.
ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು.
ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ.
ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿತೈಷಿ ಮುಂಡರಗಿ ಭೀಮರಾಯ ರ ಕಡೆಯಿಂದಲೂ ಪ್ರಯತ್ನ ನಡೆಸಿದ್ದ. ಆದರೂ ಅನುಮತಿ ದೊರೆಯಲಿಲ್ಲ (ಮುಂಡರಗಿ ಭೀಮರಾಯರು 1857 ರ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಹುತಾತ್ಮರಾದರು).
ಇದರ ಜೊತೆಗೆ ಬ್ರಿಟಿಷ್ ಅಧಿಕಾರಿ ಮ್ಯಾನ್ಸನ್ ದಕ್ಷಿಣದ ರಾಜರ ರಕ್ಷಣೆಗೆ ಈಸ್ಟ್ ಇಂಡಿಯಾ ಕಂಪನಿ ಇರುವುದರಿಂದ ರಾಜರು ತಮ್ಮಲ್ಲಿ ಸಂಗ್ರಹವಿರುವ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕೆಂದು ಫರ್ವನು ಹೊರಡಿಸಿದ. ಬಾಬಾಸಾಹೇಬನೂ ಶಸ್ತ್ರಾಸ್ತ್ರಗಳನ್ನು ಬ್ರಿಟಿಷರಿಗೆ ಒಪ್ಪಿಸಿದ ನಾಟಕವಾಡಿದ.

ಲೆಸ್ಪಿಲ್ ಎಂಬ ಬ್ರಿಟಿಷ್ ಅಧಿಕಾರಿ ಬಾಬಾ ಸಾಹೇಬನ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಧಾರವಾಡಕ್ಕೆ ಹೋಗುತ್ತಿದ್ದಾಗ 1858 ರ ಮೇ 28ರಂದು ಕಾಡಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಮೇಲೆ ಆಕ್ರಮಣ ಮಾಡಿ ಅವರನ್ನು ಸೋಲಿಸಿ ಮಧ್ಯರಾತ್ರಿಯೇ ಶಸ್ತ್ರಾಸ್ತ್ರಗಳನ್ನೆಲ್ಲ ಅರಮನೆಯ ಶಸ್ತ್ರಗಾರಕ್ಕೆ ವ್ಯವಸ್ಥಿತವಾಗಿ ಸೇರಿಸಿದ. ಈ ಮೂಲಕ ಬಾಬಾಸಾಹೇಬ ಬ್ರಿಟಿಷ್ ಹಿರಿಯ ಅಧಿಕಾರಿ ಮ್ಯಾನ್ ಸನ್ ಆಕ್ರೋಶಕ್ಕೂ ಒಳಗಾದ.
ನರಗುಂದದ ಮೇಲೆ ಯುದ್ಧ ನಡೆಸಿ ಅದನ್ನು ಬ್ರಿಟಿಷ್ ಸರ್ಕಾರದ ಅಧೀನಕ್ಕೆ ತರುವ ಕಾರ್ಯತಂತ್ರವನ್ನು ಮಾನ್ಸನ್ ರೂಪಿಸಿದ. ಆದರೆ ಹಲವು ಬ್ರಿಟಿಷ್ ಅಧಿಕಾರಿಗಳು ಬಾಬಾ ಸಾಹೇಬನ ಮೇಲೆ ಸದಭಿಪ್ರಾಯ ಹೊಂದಿದ್ದರು.
ಹಿಂದೊಮ್ಮೆ ಬ್ರಿಟಿಷ್ ಅಧಿಕಾರಿಯ ಪತ್ನಿ ಯೊಬ್ಬರಿಗೆ ಹಾವು ಕಡಿದು ಸಾವಿನ ಅಂಚಿನಲ್ಲಿದ್ದಾಗ ಬಾಬಾಸಾಹೇಬರ ಪತ್ನಿ ಸಾವಿತ್ರಿ ನಾಟಿ ಔಷಧಿ ನೀಡಿ ಆಕೆಯನ್ನು ಬದುಕಿಸಿದರು. ಹೀಗೆ ಹಲವು ಕಾರಣದಿಂದ ಬ್ರಿಟಿಷ್ ಅಧಿಕಾರಿಗಳಿಗೆ ಬಾಬಾಸಾಹೇಬ್ ಬಗ್ಗೆ ಸದಭಿಪ್ರಾಯ ವಿತ್ತು. ಆದರೆ, ದರ್ಪದ ಅಧಿಕಾರಿ ಮಾನ್ ಸನ್ ರ ಕೋಪವನ್ನು ಶಮನ ಮಾಡಲು ಅವರಿಂದಲೂ ಸಾಧ್ಯವಾಗಲಿಲ್ಲ.
ಮಾನ್ ಸನ್ ನರಗುಂದದ ಮೇಲೆ ಆಕ್ರಮಣ ಮಾಡಲು ಸಕಲ ಸಿದ್ಧತೆ ಮಾಡತೊಡಗಿದ. ಬಾಬಾ ಸಾಹೇಬನ ಮಲತಂದೆ ರಾಮರಾಯನನ್ನು ತನ್ನ ಪಾಳೆಯಕ್ಕೆ ಸೇರಿಸಿಕೊಂಡ. ಇವೆಲ್ಲದರ ಮಾಹಿತಿ ದೊರೆತ ಕೂಡಲೇ ಬಾಬಾಸಾಹೇಬ ಬ್ರಿಟಿಷರ ವಿರುದ್ಧ ಅನಿರೀಕ್ಷಿತ ದಾಳಿ ನಡೆಸಿದ. ಇದರಲ್ಲಿ ಜಯಗಳಿಸಿದ್ದು ಮಾತ್ರವಲ್ಲದೆ ಅಧಿಕಾರಿ ಮಾನ್ ಸನ್ ನನ್ನು ನರಗುಂದದ ಕೋಟೆಯಲ್ಲಿ ಗಲ್ಲಿಗೇರಿಸಿ ಹತ್ಯೆಗೈದ. ಇದರಿಂದ ಬ್ರಿಟಿಷರು ಮತ್ತಷ್ಟು ಕುಪಿತರಾದರು. ಮುಂದೆ ನರಗುಂದ ಸಂಸ್ಥಾನದ ಸೈನ್ಯದಲ್ಲಿದ್ದ ಕೆಲ ದೇಶದ್ರೋಹಿಗಳು ಬ್ರಿಟಿಷರೊಂದಿಗೆ ಕೈ ಜೋಡಿಸಿದರು. ನಂತರ ಶಸ್ತ್ರಾಗಾರದಲ್ಲಿದ್ದ ಮದ್ದುಗುಂಡುಗಳನ್ನು ವ್ಯವಸ್ಥಿತವಾಗಿ ನಿಷ್ಕ್ರಿಯಗೊಳಿಸಿದರು. ಈ ವಿಚಾರ ಬಾಬಾ ಸಾಹೇಬನ ಗಮನಕ್ಕೂ ಬಂತು. ಆದರೆ ಕಿಂಚಿತ್ತೂ ವಿಚಲಿತನಾಗದೆ ಮುಂದೆ ನಡೆಯಲಿರುವ ಘನಘೋರ ಯುದ್ಧಕ್ಕೆ ಸಿದ್ಧತೆ ನಡೆಸಿಕೊಂಡ. ದಕ್ಷಿಣ ಭಾರತದ ಹಲವು ಸಂಸ್ಥಾನಗಳ ಬೆಂಬಲ ಪಡೆದುಕೊಂಡ ಬಾಬಾಸಾಹೇಬ ಮುಂದೆ ಅವರಿಗೆ ತೊಂದರೆಯಾಗಬಾರದೆಂದು ಅವರ ನಡುವೆ ನಡೆದಿದ್ದ ಪತ್ರ ಸಂಭಾಷಣೆ ಗಳನ್ನೆಲ್ಲ ನಾಶಪಡಿಸಿದ.
1858ರ ಜೂನ್ 1 ರಂದು ನರಗುಂದಕ್ಕೆ ಸುಸಜ್ಜಿತವಾದ ಬ್ರಿಟಿಷರ ಸೈನ್ಯ ಮುತ್ತಿಗೆ ಹಾಕಿತು. ಮಾಲಕಮ್ ಎಂಬ ಸೈನ್ಯಾಧಿಕಾರಿ ಮತ್ತು ಕೊಲ್ಲಾಪುರದ ಜೇಕಬ್ ನ ನೇತೃತ್ವದಲ್ಲಿ ಯುದ್ಧ ನಡೆಯಿತು. ಬಳ್ಳಾರಿ ಯಿಂದಲೂ ಸೈನ್ಯದ ತುಕಡಿಯೊಂದು ಬಂದಿತ್ತು. ಸುಸಜ್ಜಿತ ಮತ್ತು ಶಸ್ತ್ರಸಜ್ಜಿತವಾದ ದೊಡ್ಡ ಸೈನ್ಯದ ವಿರುದ್ಧ, ಅಲ್ಪಪ್ರಮಾಣದ ಶಸ್ತ್ರ ಗಳನ್ನಷ್ಟೇ ಹೊಂದಿದ್ದ ಬಾಬಾ ಸಾಹೇಬನ ಚಿಕ್ಕ ಸೈನ್ಯ ವೀರಾವೇಶದಿಂದ ಹೋರಾಡಿತು.
ಕೋಟೆಯ ಬಾಗಿಲನ್ನು ತೆರೆದು ತನ್ನ ಸೇನಾದಿಪತಿ ಯೋಗಿ ರಾವ್ ಭಾವೆ ಯೊಂದಿಗೆ ಯುದ್ಧ ಮಾಡಿದಾಗ ಬ್ರಿಟಿಷ್ ಸೈನ್ಯ ತತ್ತರಿಸಿದರೂ ಗುಂಡೇಟಿನಿಂದ ಯೋಗಿ ರಾವ್ ಭಾವೆ ವೀರಮರಣವನ್ನಪ್ಪಿದ ರು. ನಂತರ ಮತ್ತೆ ಕೋಟೆ ಪ್ರವೇಶಿಸಿ ಸೈನಿಕರಲ್ಲಿ ಹುರುಪು ತುಂಬಿದ ಬಾಬಾಸಾಹೇಬ, ಕೋಟೆಯೊಳಗೆ ಪ್ರವೇಶಿಸಿದ ಬ್ರಿಟಿಷ್ ಸೈನ್ಯದ ವಿರುದ್ಧ ಯುದ್ಧ ನಡೆಸುವುದು ಉಚಿತವಲ್ಲ ವೆಂದು ನಿರ್ಧರಿಸಿ ಹಿತೈಷಿಗಳ, ಅಧಿಕಾರಿಗಳ ಸಲಹೆಯಂತೆ ಕೋಟೆಯ ಗುಪ್ತ ಮಾರ್ಗದಿಂದ ತೋರಗಲ್ ಎಂಬ ಊರಿಗೆ ತಲುಪಿದ.
ಅರ ಮನೆಯನ್ನೆಲ್ಲ ದೋಚಿ ಅಲ್ಲಿನ ಅಪಾರ ಸಂಪತ್ತನ್ನು ಕೊಳ್ಳೆಹೊಡೆದ ಬ್ರಿಟಿಷರು ಬಾಬಾ ಸಾಹೇಬನ ಅಮೂಲ್ಯ ಸಂಸ್ಕೃತ ಪುಸ್ತಕ ಭಂಡಾರವನ್ನು ಸುಟ್ಟು ಹಾಕಿದರಲ್ಲದೇ ಬಾಬಾ ಸಾಹೇಬನ ಸುಳಿವು ನೀಡಿದವರಿಗೆ 10000 ರುಪಾಯಿ ಬಹುಮಾನದ ಘೋಷಣೆ ಮಾಡಿದರು.
ದೇಶದ್ರೋಹಿ ಯೊಬ್ಬ, ಬಾಬಾಸಾಹೇಬ ಕಾಶಾಯ ವಸ್ತ್ರ ಧರಿಸಿ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಿದ್ಧತೆ ನಡೆಸಿರುವ ವಿಷಯ ಮುಟ್ಟಿಸಿದ. ಆದರೆ ಈ ಕೃತ್ಯ ಎಸಗಿದ್ದು ಕೇವಲ ಬಹುಮಾನದ ದುರಾಸೆಗಾಗಿ. ಆತನ ಹೆಸರು ಲಕ್ಷ್ಮಣರಾವ್ ಜಗತಾಪೆ. ಉತ್ತರ ಭಾರತಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಬಾಬಾಸಾಹೇಬನನ್ನು 1858 ಜೂನ್ 2 ರಂದು ಬಂಧಿಸಿದ ಬ್ರಿಟಿಷರು ವಿಚಾರಣೆ ನಡೆಸಿದರು. ಈ ವೇಳೆ ಬ್ರಿಟಿಷರ ವಿರುದ್ಧ ಯುದ್ಧ ನಡೆಸಲು ಬಾಬಾಸಾಹೇಬನಿಗೆ ಸಹಾಯ ಮಾಡಿದ ಸಂಸ್ಥಾನ ದಿ ಶ್ವರರ ಹೆಸರನ್ನು ಬಹಿರಂಗ ಪಡಿಸಿದರೆ ಜೀವದಾನ ಮಾಡುವ ಆಸೆ ತೋರಿಸಿದರು.
ಬ್ರಿಟಿಷರ ಕುತಂತ್ರದ ಒಳಮರ್ಮ ಅರಿತಿದ್ದ ಬಾಬಾಸಾಹೇಬ್ ಇದಕ್ಕೆ ಪ್ರತಿಕ್ರಿಯಿಸಲಿಲ್ಲ. ಕೊನೆಗೆ, 1858ರ ಜೂನ್ 12 ರಂದು ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು. ಬಾಬಾ ಸಾಹೇಬನ ತಾಯಿ ಮತ್ತು ಪತ್ನಿ ಇದಕ್ಕೂ ಮೊದಲೇ ಬ್ರಿಟಿಷರ ದಾಸರಾಗಿರಲು ಇಷ್ಟಪಡದೇ ಮಲಪ್ರಭಾ ನದಿಗೆ ಹಾರಿ ಆತ್ಮಾರ್ಪಣೆ ಮಾಡಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...