ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡದ ಪತ್ರಿಕೆಗಳು
ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮ ಗಮನಕ್ಕೆ ಬರುವ ಮುಖ್ಯವಾದ ವಿಷಯವೆಂದರೆ, ನಮ್ಮ ಚಳವಳಿಗಾರರ ಪೈಕಿ ಎಷ್ಟೋ ಮಂದಿ ಪತ್ರಕರ್ತರಿದ್ದರೆನ್ನುವುದು. ಸ್ವಾತಂತ್ರ್ಯವೀರರು ಪತ್ರಿಕೆಗಳನ್ನು ತಮ್ಮ ಹೋರಾಟದ ಒಂದು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು ಎಂದರೂ ಸಲ್ಲುತ್ತದೆ. ಹೀಗೆ ಪತ್ರಿಕಾವೃತ್ತಿ ನಮ್ಮ ರಾಷ್ಟ್ರೀಯ ಚಳವಳಿಯ ಒಂದು ಅವಿಭಾಜ್ಯ ಅಂಗವಾಗಿತ್ತು. ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವದೇಶಾಭಿಮಾನವನ್ನು ಮೂಡಿಸುವ ಮತ್ತು ಚಾಲನೆಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ನಿರಂತರವಾಗಿ ಮಾಡಿದವು.
ಭಾರತೀಯ ಮನಸ್ಸುಗಳ ಸ್ವರಾಜ್ಯದ ಕಲ್ಪನೆ ಒಂದು ಬೃಹತ್ ರಾಷ್ಟ್ರೀಯ ಆಂದೋಲನವಾಗಿ ಬೆಳೆಯುವುದರ ಹಿಂದೆ ಪತ್ರಿಕೆಗಳ ಪಾತ್ರ ತುಂಬ ದೊಡ್ಡದು. ಸಂಸ್ಥಾನಗಳಾಗಿ ಹರಿದುಹಂಚಿಹೋಗಿದ್ದ ಭಾರತ ಒಂದು ರಾಷ್ಟçವಾಗಿ ಒಗ್ಗೂಡಿ, ಸ್ವಾತಂತ್ರ್ಯವೆಂಬ ಕನಸು ಅರಳಿಕೊಳ್ಳುವ ಪ್ರಕ್ರಿಯೆಯಲ್ಲಿ ಪತ್ರಿಕಾಮಾಧ್ಯಮ ನೀಡಿದ ಕೊಡುಗೆ ಅಸದೃಶ. ನಮ್ಮ ನೆಲದಲ್ಲಿ ನಾವೇ ಪರಕೀಯರಾಗಿದ್ದೇವೆ, ಈ ಬಂಧನದಿಂದ ಹೇಗಾದರೂ ಹೊರಬರಬೇಕು, ಅದಕ್ಕಾಗಿ ಸಂಘಟಿತಹೋರಾಟ ಅನಿವಾರ್ಯ ಎಂಬ ಪ್ರಜ್ಞೆ ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಿದ್ದರ ಹಿಂದೆ ಪತ್ರಿಕೆಗಳು ಬೀರಿದ ಪ್ರಭಾವ ಕಲ್ಪನೆಗೂ ಮೀರಿದ್ದು. ಇಂತಹದೊಂದು ಪ್ರಜ್ಞಾಪ್ರವಾಹದ ಓಟದಲ್ಲಿ ಕನ್ನಡನಾಡು ಮತ್ತು ಅಲ್ಲಿನ ಪತ್ರಿಕೆಗಳು ಒಂದಾಗಿ ಸಾಗಿದ್ದು ಇತಿಹಾಸ ಸದಾ ನೆನಪಿಸಿಕೊಳ್ಳುವ ಒಂದು ಅಧ್ಯಾಯ.
ಭಾರತದ ಒಟ್ಟಾರೆ ರಾಷ್ಟ್ರೀಯ ಆಂದೋಲನ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದ್ದ ಕಾಲದಲ್ಲೇ ಕರ್ನಾಟಕದಲ್ಲೂ ಸ್ವತಂತ್ರ ದೇಶದ ತುಡಿತ ಬಲವಾಗುತ್ತಿದ್ದುದು ಒಂದು ಸಮಾನಾಂತರ ಪ್ರಕ್ರಿಯೆ. ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ಪ್ರಜ್ಞೆ ಜಾಗೃತಗೊಂಡು, ಮುಂದೆ ಅದು ಕರ್ನಾಟಕದ ಏಕೀಕರಣದತ್ತ ಮುಂದುವರಿಯುವ ಶಕ್ತಿಯಾಗಿ ಬೆಳೆದದ್ದೂ ಅಷ್ಟೇ ವಿಶಿಷ್ಟವಾದ ಘಟನೆ. ‘ಭಾರತ’ ಮತ್ತು ‘ಕರ್ನಾಟಕ’ ಎಂಬೆರಡು ಕನಸುಗಳಿಗೆ ಒಟ್ಟೊಟ್ಟಾಗಿ ಬಣ್ಣ ತುಂಬಿಕೊಂಡದ್ದು, ಅವೆರಡೂ ವಾಸ್ತವದಲ್ಲಿ ಒಂದು ಪ್ರಚಂಡ ಉದ್ದೇಶವನ್ನು ಸಾಧಿಸಿಕೊಳ್ಳಲು ನೆರವಾದದ್ದು, ಇಂತಹ ಐತಿಹಾಸಿಕ ಪ್ರಕ್ರಿಯೆಗೆ ವೃತ್ತಪತ್ರಿಕೆಗಳು ಸಾಕ್ಷಿಯಾಗಿ ನಿಂತದ್ದು ಸದಾ ಸ್ಮರಣೀಯ. ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮೈಸೂರು ಸಂಸ್ಥಾನಗಳೆಂಬ ಹಲವು ಕರ್ನಾಟಕಗಳ ಜನತೆ ವಿಶಾಲ ಕರ್ನಾಟಕದ ಕಲ್ಪನೆಯಲ್ಲಿ ಒಂದಾಗಿ ವಸಾಹತುಶಾಹಿ ಆಡಳಿತದ ವಿರುದ್ಧ ಸೆಣಸುವ ವಾತಾವರಣ ಸೃಷ್ಟಿಯಾದುದರ ಹಿಂದೆ ನೂರಾರು ಪತ್ರಿಕೆಗಳ ಸಾವಿರಾರು ಲೇಖನ, ವರದಿ, ಸಂಪಾದಕೀಯಗಳ ಪಾತ್ರ ಇದೆ.
ಭಾರತದಲ್ಲಿ ಪತ್ರಿಕಾವೃತ್ತಿ ಆರಂಭವಾದ ಬಳಿಕ ಆರು ದಶಕ ಕಾಯಬೇಕಾಯಿತು, ಕನ್ನಡದಲ್ಲಿ ಪತ್ರಿಕೆಗಳ ಪ್ರಕಟಣೆ ತೊಡಗುವುದಕ್ಕೆ. ಅಷ್ಟಾದಮೇಲೂ ಅದೊಂದು ವೃತ್ತಿಪರ ಹಂತಕ್ಕೆ ತಲಪಲು ಇನ್ನೂ ದೀರ್ಘ ಸಮಯ ಹಿಡಿಯಿತು. ಹರ್ಮನ್ ಮೊಗ್ಲಿಂಗನ ಸಂಪಾದಕತ್ವದಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ೧೮೪೩ರಲ್ಲಿ ಆರಂಭವಾದರೂ, ಕನ್ನಡದಲ್ಲಿ ನಿಯಮಿತವಾಗಿ ಪತ್ರಿಕೆಗಳು ಪ್ರಕಟವಾಗಲು ಆರಂಭವಾದದ್ದು ೧೮೬೦ರ ಬಳಿಕವೇ. ಅಲ್ಲಿಂದ ನಂತರ ಪತ್ರಿಕಾ ಇತಿಹಾಸ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಜೊತೆಜೊತೆಯಾಗಿ ಸಾಗಿಬಂದದ್ದು ಒಂದು ಕುತೂಹಲಕರ ವಿದ್ಯಮಾನ.
ಭಾರತದ ಸ್ವಾತಂತ್ರ್ಯಹೋರಾಟ ಮತ್ತು ಹೋರಾಟಗಾರರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮ ಗಮನಕ್ಕೆ ಬರುವ ಮುಖ್ಯವಾದ ವಿಷಯವೆಂದರೆ, ನಮ್ಮ ಚಳವಳಿಗಾರರ ಪೈಕಿ ಎಷ್ಟೋ ಮಂದಿ ಪತ್ರಕರ್ತರಿದ್ದರೆನ್ನುವುದು. ಸ್ವಾತಂತ್ರ್ಯವೀರರು ಪತ್ರಿಕೆಗಳನ್ನು ತಮ್ಮ ಹೋರಾಟದ ಒಂದು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು ಎಂದರೂ ಸರಿಯೇ. ಒಟ್ಟಿನಲ್ಲಿ, ಪತ್ರಿಕಾವೃತ್ತಿ ನಮ್ಮ ರಾಷ್ಟ್ರೀಯ ಚಳವಳಿಯ ಒಂದು ಅವಿಭಾಜ್ಯ ಅಂಗವಾಗಿತ್ತು. ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವದೇಶಾಭಿಮಾನವನ್ನು ಮೂಡಿಸುವ ಮತ್ತು ಚಾಲನೆಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ನಿರಂತರವಾಗಿ ಮಾಡಿದವು. ತಿಲಕರಿಂದ ತೊಡಗಿ ಗಾಂಧಿಯವರೆಗೆ, ಎಂ. ವೆಂಕಟಕೃಷ್ಣಯ್ಯನವರಿಂದ ತೊಡಗಿ ಹರ್ಡೇಕರ ಮಂಜಪ್ಪನವರವರೆಗೆ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರಾಗಿದ್ದರು ಎಂಬುದೇ ಒಂದು ವಿಶೇಷ. ಅವರಿಗೆಲ್ಲ ರಾಷ್ಟ್ರೀಯ ಚಳವಳಿ ಮತ್ತು ಪತ್ರಿಕಾಸೇವೆ ಬೇರೆಬೇರೆಯಾಗಿರಲಿಲ್ಲ. ಭಾರತದ ಸ್ವಾತಂತ್ರ್ಯ ಚಳವಳಿ ತೀವ್ರ ಸ್ವರೂಪ ತಾಳಿದಂತೆಲ್ಲ ಪತ್ರಿಕಾವೃತ್ತಿಯ ಬೇರುಗಳೂ ವಿಸ್ತಾರಗೊಳ್ಳುತ್ತಾ ಹೋದವು.
ವೆಂಕಟಕೃಷ್ಣಯ್ಯನವರ ‘ವೃತ್ತಾಂತ ಚಿಂತಾಮಣಿ’ (೧೮೮೫), ‘ಕನ್ನಡ ನಡೆಗನ್ನಡಿ’ (೧೮೯೫), ‘ಸಾಧ್ವಿ’ (೧೯೦೯), ಮೈಸೂರ್ ಪೇಟ್ರಿಯಟ್ (೧೯೧೩), ಬಿ. ನರಸಿಂಗರಾಯರ ‘ಸೂರ್ಯೋದಯ ಪ್ರಕಾಶಿಕಾ’ (೧೮೮೮), ಬಿ. ಶ್ರೀನಿವಾಸ ಅಯ್ಯಂಗಾರರ ‘ದೇಶಾಭಿಮಾನಿ’ (೧೮೯೪), ಮಣ್ಣೂರು ಗುಂಡೇರಾಯರ ‘ಕರ್ನಾಟಕ ವೈಭವ’ (೧೮೯೫), ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ‘ವಾಗ್ಭೂಷಣ’ (೧೮೯೬), ಹರ್ಡೇಕರ್ ಮಂಜಪ್ಪನವರ ‘ಧನುರ್ಧಾರಿ’ (೧೯೦೬), ವಿ.ಎಸ್. ಕಾಮತರ ‘ಸ್ವದೇಶಾಭಿಮಾನಿ’ (೧೯೦೭), ನಾ.ಸು. ಹರ್ಡೀಕರ್ ಅವರ ‘ಕರ್ನಾಟಕ ಕೇಸರಿ’ (೧೯೦೯), ಡಿ.ವಿ. ಗುಂಡಪ್ಪನವರ ‘ಸಮಾಚಾರ ಸಂಗ್ರಹ’ (೧೯೦೭) ಮತ್ತು ‘ಕರ್ನಾಟಕ’ (೧೯೧೩) ಮುಂತಾದವು ರಾಷ್ಟ್ರೀಯ ಚಳವಳಿ ಕಾವೇರುತ್ತಿದ್ದ ಕಾಲದಲ್ಲಿ ಕನ್ನಡಿಗರಲ್ಲಿ ಸ್ವಾಭಿಮಾನ, ಸ್ವದೇಶೀ ಪ್ರಜ್ಞೆಯನ್ನು ಅರಳಿಸಿದ ಪತ್ರಿಕೆಗಳು.
ತಿ.ತಾ. ಶರ್ಮರ ‘ವಿಶ್ವಕರ್ನಾಟಕ’ (೧೯೨೧), ಪಂದ್ಯದ ಬೆಳ್ಯಪ್ಪರ ‘ಕೊಡಗು’ (೧೯೨೧), ಆಲೂರ ವೆಂಕಟರಾಯರ ‘ಜಯ ಕರ್ನಾಟಕ’ (೧೯೨೨), ಪಿ.ಆರ್. ರಾಮಯ್ಯನವರ ‘ತಾಯಿನಾಡು’ (೧೯೨೬), ಬಿ.ಎನ್. ಗುಪ್ತರ ‘ಪ್ರಜಾಮತ’ (೧೯೩೧) ಹಾಗೂ ‘ಜನವಾಣಿ’ (೧೯೩೪), ಎಚ್.ಕೆ. ವೀರಣ್ಣಗೌಡರ ‘ಚಿತ್ರಗುಪ್ತ’, ಆರ್.ಆರ್. ದಿವಾಕರ ತಂಡದ ‘ಕರ್ಮವೀರ’ (೧೯೨೧) ಹಾಗೂ ‘ಸಂಯುಕ್ತ ಕರ್ನಾಟಕ’ (೧೯೨೯), ಕಡೆಂಗೋಡ್ಲು
ಶಂಕರಭಟ್ಟರ ‘ರಾಷ್ಟ್ರಬಂಧು’ (೧೯೨೮), ಸೀತಾರಾಮಶಾಸ್ತ್ರಿಗಳ ‘ವೀರಕೇಸರಿ’ (೧೯೨೮) ಮುಂತಾದವು ಮುಂದಿನ ದಶಕಗಳಲ್ಲಿ ದೇಶದ ಸ್ವಾತಂತ್ರ್ಯ ಹೋರಾಟವನ್ನು ಕರ್ನಾಟಕದ ಮೂಲೆಮೂಲೆಗಳಿಗೆ ತಲಪಿಸಿದ ಧೀರೋದಾತ್ತ ಪ್ರಯತ್ನಗಳು.
ತಿಲಕರ ಹೋರಾಟದ ಕೆಚ್ಚು ೧೯ನೇ ಶತಮಾನದ ಕೊನೆಯ ಭಾಗದಲ್ಲಿ ಹಾಗೂ ೨೦ನೇ ಶತಮಾನದ ಆರಂಭದಲ್ಲಿ ಕನ್ನಡಪತ್ರಿಕೆಗಳಿಗೆ ದೊಡ್ಡ ಪ್ರೇರಣೆಯಾಗಿತ್ತು ಎಂಬುದು ಗಮನಾರ್ಹ ವಿಚಾರ. ವೆಂಕಟಕೃಷ್ಣಯ್ಯ, ಡಿ.ವಿ.ಜಿ., ಹರ್ಡೇಕರ, ಸೀತಾರಾಮಶಾಸ್ತ್ರಿ, ಗದಿಗಯ್ಯ ಹೊನ್ನಾಪುರಮಠ, ಗಂಗಾಧರರಾವ್ ದೇಶಪಾಂಡೆ, ಆಲೂರ ವೆಂಕಟರಾಯರು, ಮುದವೀಡು ಕೃಷ್ಣರಾಯರು – ಎಲ್ಲರೂ ಒಂದಲ್ಲ ಒಂದು ರೀತಿಯಿಂದ ತಿಲಕರಿಂದ ಪ್ರಭಾವಿತರಾದವರೇ. ತಿಲಕರ ಕಾರ್ಯಕ್ಷೇತ್ರ ಮಹಾರಾಷ್ಟ್ರವಾದರೂ ಇಡೀ ದೇಶದ ಚಳವಳಿಗೆ ಒಂದು ದಿಕ್ಕು ತೋರಿಸಿದವರು ಅವರು. ಅವರೊಂದಿಗೆ ಕರ್ನಾಟಕಕ್ಕೊಂದು ಭಾವನಾತ್ಮಕ ಸಂಬAಧವೂ ಇತ್ತು. ಅವರ ‘ಕೇಸರಿ’, ‘ಮರಾಠಾ’ ಪತ್ರಿಕೆಗಳು ರಾಷ್ಟ್ರೀಯ ಚಳವಳಿಯ ಕಹಳೆಗಳಂತೆ ಕೆಲಸ ಮಾಡಿದರೆ, ಅವುಗಳಿಂದಲೇ ಪ್ರೇರಣೆ ಪಡೆದು ಕನ್ನಡದಲ್ಲೂ ಅದೇ ಮಾದರಿಯ ಪತ್ರಿಕೆಗಳನ್ನು ಆರಂಭಿಸಿದವರು ಹಲವರು. ಮುತಾಲಿಕ ದೇಸಾಯಿಯವರ ‘ಕನ್ನಡ ಕೇಸರಿ’, ಮಂಜೇಶ್ವರ ಅನಂತರಾವ್ ಹಾಗೂ ಚನ್ನಕೇಶವ ಅಯ್ಯಂಗಾರರ ಅದೇ ಹೆಸರಿನ ಇನ್ನೆರಡು ಪತ್ರಿಕೆಗಳು, ಡಿ.ಕೆ. ಭಾರದ್ವಾಜರ ‘ತಿಲಕ ಸಂದೇಶ’, ಸೀತಾರಾಮಶಾಸ್ತ್ರಿಗಳ ‘ವೀರಕೇಸರಿ’ – ಇವೆಲ್ಲ ತಿಲಕರ ‘ಕೇಸರಿ’ಯಿಂದ ಉತ್ತೇಜಿತಗೊಂಡು ಹುಟ್ಟಿಕೊಂಡ ಮರಿಕೇಸರಿಗಳು. ಹರ್ಡೇಕರ ಮಂಜಪ್ಪನವರ ‘ಧನುರ್ಧಾರಿ’ ಪತ್ರಿಕೆ ತಿಲಕರ ಲೇಖನಗಳನ್ನು ಯಥಾವತ್ತು ಕನ್ನಡಕ್ಕೆ ತಂದು ಪ್ರಕಟಿಸಿ ಬ್ರಿಟಿಷ್ ಅಧಿಕಾರಿಗಳಿಂದ ಎಚ್ಚರಿಕೆ ಪಡೆದದ್ದೂ ಇದೆ.
ಭಾರತೀಯರೆಲ್ಲರನ್ನೂ ರಾಷ್ಟ್ರೀಯ ಚಳವಳಿಯ ಮುಖ್ಯವಾಹಿನಿಯೊಂದಿಗೆ ಬೆಸೆಯುವಲ್ಲಿ ತಿಲಕರ ಪಾತ್ರ ಬಹಳ ದೊಡ್ಡದು. ಸ್ವದೇಶೀ ಚಳವಳಿ, ಸ್ವರಾಜ್ಯದ ವಿಚಾರಧಾರೆಯನ್ನು ಮೊದಲ ಬಾರಿಗೆ ಪರಿಣಾಮಕಾರಿಯಾಗಿ ಜನತೆಯ ಮನಸ್ಸಿಗೆ ತಲಪಿಸಿದ ವಿಶಿಷ್ಟ ಶಕ್ತಿ ಅವರು. ಸ್ವದೇಶೀ ಚಳವಳಿಯ ಸಂದರ್ಭದಲ್ಲಂತೂ ತಿಲಕರ ‘ಕೇಸರಿ’ ಕರ್ನಾಟಕದಲ್ಲೂ ಮನೆಮಾತಾಗಿತ್ತು. ಧಾರವಾಡ, ಬೆಳಗಾವಿ, ಬಿಜಾಪುರ, ಮಂಗಳೂರು ಮೊದಲಾದೆಡೆಗಳಲ್ಲಿ ಸ್ವದೇಶೀ ಚಳವಳಿ ತೀವ್ರವಾದಾಗ ಅದನ್ನು ಕನ್ನಡ ಪತ್ರಿಕೆಗಳು ಅಷ್ಟೇ ಶಕ್ತಿಶಾಲಿಯಾಗಿ ನಾಡಿನ ಎಲ್ಲ ಕಡೆ ಹರಡಿದವು. “ಸ್ವರಾಜ್ಯವಿಲ್ಲದೆ ಸಮಾಜ ಸುಧಾರಣೆ, ಕೈಗಾರಿಕಾ ಪ್ರಗತಿ, ಉಪಯುಕ್ತ ಶಿಕ್ಷಣ ಸಾಧ್ಯವಿಲ್ಲ” ಎಂಬ ತಿಲಕರ ಘೋಷಣೆಯನ್ನು ‘ಕರ್ನಾಟಕ ವೃತ್ತ’, ‘ರಾಜಹಂಸ’ , ‘ಹಿತೇಚ್ಛು’, ‘ಕರ್ನಾಟಕ ಪ್ರಕಾಶಿಕೆ’ ಮುಂತಾದ ಪತ್ರಿಕೆಗಳು ಮತ್ತೆಮತ್ತೆ ಪ್ರತಿಧ್ವನಿಸಿದವು. ತಿಲಕರ ಹೋರಾಟ, ಭಾಷಣ, ಬಂಧನದ ಸುದ್ದಿಗಳನ್ನೆಲ್ಲ ಪ್ರಧಾನವಾಗಿ ಪ್ರಕಟಿಸಿ ಚಳವಳಿ ವಿಸ್ತಾರವಾಗಲು ಕಾರಣವಾದವು.
ಮೈಸೂರು ಸಂಸ್ಥಾನದ ಪತ್ರಿಕೆಗಳಂತೂ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಬುದ್ಧ ಪಾತ್ರ ನಿರ್ವಹಿಸಿದವು. ಕನ್ನಡ ಪತ್ರಿಕೋದ್ಯಮದ ಪಿತಾಮಹ, ‘ತಾತಯ್ಯ’ ಎಂದೇ ಪ್ರಸಿದ್ಧಿ ಪಡೆದ ಎಂ. ವೆಂಕಟಕೃಷ್ಣಯ್ಯನವರು ತಮ್ಮ ವೃತ್ತಾಂತ ಚಿಂತಾಮಣಿ, ಹಿತಬೋಧಿನಿ, ಸಂಪದಭ್ಯುದಯ, ಸಾಧ್ವಿ, ಪೌರ ಸಾಮಾಜಿಕ ಪತ್ರಿಕೆ, ಮೈಸೂರ್ ಪೇಟ್ರಿಯಟ್, ಮೈಸೂರು ಹೆರಾಲ್ಡ್ ಪತ್ರಿಕೆಗಳ ಮೂಲಕ ಕನ್ನಡದ ನೆಲದಲ್ಲಿ ಸ್ವದೇಶಾಭಿಮಾನ ಮೂಡಿಸುವಲ್ಲಿ ಮಾಡಿದ ಸಾಧನೆ ಅಪೂರ್ವವಾದದ್ದು. ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಕ್ಕಾಗಿ ೧೯೦೮ರಲ್ಲಿ ಮೈಸೂರು ಸರ್ಕಾರವು ಜಾರಿಗೆ ತಂದ ಪತ್ರಿಕಾ ಶಾಸನದ ವಿರುದ್ಧ ಕನ್ನಡ ಪತ್ರಿಕೆಗಳು ಎದೆಸೆಟೆಸಿ ನಿಂತಾಗ ಆ ಹೋರಾಟದ ನೇತೃತ್ವ ವಹಿಸಿಕೊಂಡವರು ತಾತಯ್ಯನವರು. ಶಾಸನವನ್ನು ವಿರೋಧಿಸಿ ಸುಮಾರು ಎರಡು ವರ್ಷ ಸಂಸ್ಥಾನದಲ್ಲಿ ಯಾವುದೇ ಕನ್ನಡ ಪತ್ರಿಕೆಗಳು ಪ್ರಕಟವಾಗಲಿಲ್ಲ. “ತಾತಯ್ಯನವರು ದಾದಾಭಾಯಿ ನವರೋಜಿ ಹಾಗೂ ಬಾಲಗಂಗಾಧರ ತಿಲಕರಷ್ಟೇ ಉತ್ತಮವಾಗಿ ಮೈಸೂರಿನಲ್ಲಿ ಕೆಲಸ ಮಾಡಿದ್ದಾರೆ” ಎಂಬ ಗಾಂಧಿಯವರ ಮಾತು ವೆಂಕಟಕೃಷ್ಣಯ್ಯನವರಿಗೆ ದೊರೆತ ಅಮೂಲ್ಯ ಪ್ರಮಾಣಪತ್ರ.
ಕನ್ನಡಿಗರಲ್ಲಿ ರಾಷ್ಟ್ರೀಯ ಹೋರಾಟದ ಜಾಗೃತಿಯನ್ನು ಮೂಡಿಸುವಲ್ಲಿ ಪತ್ರಿಕಾವೃತ್ತಿಗೆ ವಿದ್ವತ್ತನ್ನೂ ಗಾಂಭೀರ್ಯವನ್ನೂ ತಂದಿತ್ತ ಡಿ.ವಿ.ಜಿ.ಯವರ ಕೊಡುಗೆಯೂ ಬಲುದೊಡ್ಡದು. ಅವರ ಸಮಾಚಾರ ಸಂಗ್ರಹ, ಸುಮತಿ, ಕರ್ನಾಟಕ, ಸಾರ್ವಜನಿಕ ಮುಂತಾದ ಪತ್ರಿಕೆಗಳು ಕೇವಲ ಶ್ರೇಷ್ಠಮಟ್ಟದ ಪತ್ರಿಕಾವೃತ್ತಿಗೆ ಮಾದರಿಯಷ್ಟೇ ಆಗಿರಲಿಲ್ಲ, ಜನರಲ್ಲಿ ರಾಜಕೀಯ ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ರೂಪಿಸುವ ವೇದಿಕೆಗಳೂ ಆಗಿದ್ದವು. ತಿ.ತಾ. ಶರ್ಮರಂತೂ ರಾಷ್ಟ್ರೀಯ ಪತ್ರಿಕೋದ್ಯಮದ ಸಂಪ್ರದಾಯಗಳನ್ನು ಎತ್ತಿಹಿಡಿದು ಉಳಿದ ಪತ್ರಕರ್ತರಿಗೆ ಮಾರ್ಗದರ್ಶನ ಮಾಡಿದರು. ಅವರ ‘ವಿಶ್ವಕರ್ನಾಟಕ’ಕ್ಕೆ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಸ್ಥಾನವಿದೆ. ಸ್ವಾತಂಷ್ಟ್ರೀಹೋರಾಟಕ್ಕೆ ಬೆಂಬಲ ನೀಡಿದ ಕಾರಣಕ್ಕೇ ಪತ್ರಿಕೆ ಹಲವು ಬಾರಿ ಬ್ರಿಟಿಷರ ಆಗ್ರಹಕ್ಕೆ ತುತ್ತಾಗಬೇಕಾಯಿತು, ಸೆರೆಮನೆವಾಸ ಅನುಭವಿಸಬೇಕಾಯಿತು. “ತಿ.ತಾ. ಶರ್ಮರು ಕನ್ನಡ ಪತ್ರಿಕೋದ್ಯಮದಲ್ಲಿ ವೀರಪಂಥವನ್ನು ಹಿಡಿದು ಮಾರ್ಗದರ್ಶನ ಮಾಡಿದರು” ಎಂದು ಪತ್ರಿಕಾ ಇತಿಹಾಸಕಾರರು ಪ್ರಶಂಸಿಸಿದ್ದಿದೆ.
ಸಿದ್ಧವನಹಳ್ಳಿ ಕೃಷ್ಣಶರ್ಮರು ‘ವಿಶ್ವಕರ್ನಾಟಕ’ದ ಸಂಪಾದಕರಾದ ಹೊತ್ತಿಗೆ ‘ಭಾರತ ಬಿಟ್ಟು ತೊಲಗಿ’ ಚಳವಳಿ ದೇಶದೆಲ್ಲೆಡೆ ಹರಡಿತ್ತು. ಕೃಷ್ಣಶರ್ಮರು ಅಂತಹ ಸನ್ನಿವೇಶದಲ್ಲಿ ಬಹಳ ಜವಾಬ್ದಾರಿಯುತವಾಗಿಯೇ ಕಾರ್ಯನಿರ್ವಹಿಸಿ ಸ್ವಾತಂತ್ರ್ಯಯೋಧರಿಗೆ ಬೆಂಬಲವಾಗಿ ನಿಂತರು. ೧೯೪೪ರಲ್ಲಿ ಅವರು ಬರೆದ ಒಂದು ಸಂಪಾದಕೀಯ ಹಾಗೂ ವೈಸ್ರಾಯ್ಗೆ ಬರೆದ ಬಹಿರಂಗ ಪತ್ರ ರಾಜದ್ರೋಹಕರವಾಗಿದೆಯೆಂಬ ಆಪಾದನೆ ಎದುರಿಸಿ ಜೈಲುವಾಸವನ್ನೂ ಅನುಭವಿಸಿದರು. ಪ್ರಭುತ್ವದೊಂದಿಗೆ ಹೊಡೆದಾಡಿ ಜೈಲಿಗೆ ಹೋದ ಪತ್ರಕರ್ತರ ಹಾಗೂ ಪ್ರಕಟಣೆ ನಿಲ್ಲಿಸಿದ ಪತ್ರಿಕೆಗಳ ಪಟ್ಟಿ ತುಂಬ ದೀರ್ಘವಾಗಿದೆ.
ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗೆ ಸಂಪೂರ್ಣ ಬೆಂಬಲ ನೀಡಿದ ‘ತಾಯಿನಾಡು’ ಪತ್ರಿಕೆಯ ಮಾಲೀಕ ಪಿ.ಆರ್. ರಾಮಯ್ಯ ಹಾಗೂ ಸಂಪಾದಕರಾಗಿದ್ದ ಪಿ.ಬಿ. ಶ್ರೀನಿವಾಸನ್ ೧೯೪೩ರಲ್ಲಿ ಕೆಲಕಾಲ ಜೈಲುವಾಸ ಅನುಭವಿಸಬೇಕಾಯಿತು. ಪ್ರಸಿದ್ಧ ಪತ್ರಿಕೆಗಳಾದ ‘ಜನವಾಣಿ’ ಹಾಗೂ ‘ಪ್ರಜಾಮತ’ಗಳನ್ನು ಸ್ಥಾಪಿಸಿದ ಬಿ.ಎನ್. ಗುಪ್ತರು ಸೆರೆಮನೆವಾಸವಲ್ಲದೆ ಗಡೀಪಾರು ಶಿಕ್ಷೆಯನ್ನೂ ಅನುಭವಿಸಬೇಕಾಯಿತು. ಗಡೀಪಾರಾಗಿ ಹುಬ್ಬಳ್ಳಿಗೆ ಹೋದ ಗುಪ್ತರು ಪ್ರಜಾಮತವನ್ನು ‘ಪ್ರಜಾಮಿತ್ರ’ ಎಂದು ಹೆಸರು ಬದಲಾಯಿಸಿ ಸ್ವಾತಂತ್ರ್ಯ ಚಳವಳಿಯ ಸುದ್ದಿಗಳೊಂದಿಗೆ ಮೈಸೂರು ಸಂಸ್ಥಾನದೊಳಕ್ಕೆ ಕಳುಹಿಸಿದ್ದೂ ಇದೆ. ‘ಕರ್ಮವೀರ’ – ‘ಸಂಯುಕ್ತ ಕರ್ನಾಟಕ’ ಪತ್ರಿಕೆಗಳ ನೇತೃತ್ವ ವಹಿಸಿದ್ದ ಆರ್.ಆರ್. ದಿವಾಕರ, ‘ಕರ್ನಾಟಕ ವೈಭವ’ದ ಸಂಪಾದಕರಾಗಿದ್ದ ಮೊಹರೆ ಹಣಮಂತರಾವ್, ‘ಕನ್ನಡಿಗ’ವನ್ನು ನಡೆಸಿದ ಮಂಗಳವೇಢೆ ಶ್ರೀನಿವಾಸರಾವ್ – ಎಲ್ಲರೂ ಜೈಲುವಾಸ ಅನುಭವಿಸಿದವರೇ. ಆದರೆ ಈ ಕಾರಣಕ್ಕೆ ಅವರೆಂದೂ ತಮ್ಮ ಹೋರಾಟದ ಕೆಚ್ಚು ಹಾಗೂ ಪತ್ರಿಕಾವೃತ್ತಿಯ ಆದರ್ಶಗಳಲ್ಲಿ ನಂಬಿಕೆ ಕಳೆದುಕೊಂಡವರಲ್ಲ.
ತಿಲಕರ ಧೀರೋದಾತ್ತ ಹೋರಾಟದಿಂದ ಪ್ರೇರಣೆ ಪಡೆದ ಪತ್ರಿಕೆಗಳು ಹಾಗೂ ಪತ್ರಕರ್ತರು ೧೯೨೦ರ ಬಳಿಕ ಭಾರತದ ರಾಷ್ಟ್ರೀಯ ಹೋರಾಟದ ನೇತೃತ್ವ ವಹಿಸಿಕೊಂಡ ಮಹಾತ್ಮ ಗಾಂಧಿಯವರ ಹೋರಾಟಕ್ಕೂ ಅದೇ ಬೆಂಬಲವನ್ನು ಮುಂದುವರಿಸಿದವು. ಗಾಂಧಿಯವರಂತೂ ಕರ್ನಾಟಕವೂ ಸೇರಿದಂತೆ ಭಾರತದ ಹಳ್ಳಿಹಳ್ಳಿಗೂ ಓಡಾಡಿ ಚಳವಳಿಯನ್ನು ಸಂಘಟಿಸಿದವರು. ನಿಪ್ಪಾಣಿ, ಬೆಳಗಾವಿ, ಮೀರಜ್, ಬಿಜಾಪುರ, ಮಂಗಳೂರು, ಬೆಂಗಳೂರು, ಮೈಸೂರು, ಬಳ್ಳಾರಿ, ಧಾರವಾಡ – ಎಲ್ಲ ಕಡೆ ಅವರು ಪ್ರವಾಸ ನಡೆಸಿದಾಗಲೂ ಕನ್ನಡದ ಪತ್ರಿಕೆಗಳು ವ್ಯಾಪಕ ಬೆಂಬಲ ನೀಡಿದವು; ಅವರ ಸಂದೇಶಗಳನ್ನು ನಿರಂತರವಾಗಿ ಪ್ರಕಟಿಸಿದವು. ಸಿದ್ಧವನಹಳ್ಳಿ ಕೃಷ್ಣಶರ್ಮರೇ ಅವರ ‘ಹರಿಜನ’ ಪತ್ರಿಕೆಯ ಕನ್ನಡ ಆವೃತ್ತಿಯ ಸಂಪಾದಕರಾಗಿದ್ದರು. ತಮ್ಮ ಲೇಖನಗಳನ್ನು ಯಾರು ಬೇಕಾದರೂ ಪ್ರಕಟಿಸುವ ಹಕ್ಕನ್ನು ಗಾಂಧಿಯವರು ಮುಕ್ತವಾಗಿಟ್ಟಿದ್ದರಿಂದ ಕನ್ನಡದ ಪತ್ರಿಕೆಗಳೂ ವಿವಿಧೆಡೆ ಪ್ರಕಟವಾಗುತ್ತಿದ್ದ ಅವರ ಲೇಖನಗಳನ್ನು ಅನುವಾದಿಸಿ ಪ್ರಕಟಿಸುತ್ತಿದ್ದವು.
ಅಸಹಕಾರ ಚಳವಳಿ, ಕರನಿರಾಕರಣೆ, ದಂಡೀಯಾತ್ರೆ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ – ಹೀಗೆ ಸ್ವಾತಂತ್ರ್ಯ ಹೋರಾಟ ವಿವಿಧ ಹಂತಗಳನ್ನು ದಾಟಿ ಮುಂದುವರಿಯುತ್ತಿದ್ದಾಗ ಪತ್ರಿಕೆಗಳು ಅವುಗಳನ್ನು ಬೆಂಬಲಿಸಿದ ರೀತಿ ಅನನ್ಯ. ಉಪ್ಪಿನ ಸತ್ಯಾಗ್ರಹ ದೊಡ್ಡ ಜನಾಂದೋಲನವಾಗಿ ಬೆಳೆದುದರ ಹಿಂದೆಯಂತೂ ಪತ್ರಿಕೆಗಳ ಪಾತ್ರ ಬಹಳ ದೊಡ್ಡದು. ಶಿವಪುರದ ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥದ ದುರ್ಘಟನೆಗಳನ್ನು ಕನ್ನಡದ ಪತ್ರಿಕೆಗಳಲ್ಲದೆ ದಿ ಹಿಂದೂ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳೂ ಪ್ರಧಾನವಾಗಿ ಪ್ರಕಟಿಸಿದ್ದರಿಂದ ಅವು ರಾಷ್ಟ್ರಮಟ್ಟದಲ್ಲೂ ಪ್ರತಿಧ್ವನಿಸಿದವು. ೧೯೩೮ರ ವಿದುರಾಶ್ವತ್ಥದ ಗೋಲಿಬಾರ್ ಬಳಿಕ “ಜನರು ಸ್ವಾತಂತ್ರ್ಯದ ಹೊಸದೃಷ್ಟಿಯನ್ನು ಕಾಣಲಾರಂಭಿಸಿದ್ದಾರೆ. ಯಾವುದೇ ರೀತಿಯ ದಬ್ಬಾಳಿಕೆ ಅವರು ಉದ್ದೇಶಿತ ಗುರಿಯತ್ತ ಸಾಗುವುದನ್ನು ತಡೆಯದು” ಎಂಬ ಗಾಂಧಿಯವರ ಹೇಳಿಕೆಯನ್ನು ‘ವಿಶ್ವಕರ್ನಾಟಕ’ ಪ್ರಮುಖವಾಗಿ ಪ್ರತಿಪಾದಿಸಿತು; ಜನವಾಣಿ, ತಾಯಿನಾಡು ಪತ್ರಿಕೆಗಳು ಕೂಡ ಬೆಂಬಲಕ್ಕೆ ನಿಂತವು.
ಉಡುಪಿಯಿಂದ ಪ್ರಕಟವಾಗುತ್ತಿದ್ದ ‘ಸತ್ಯಾಗ್ರಹ’ ಮತ್ತು ‘ನವಯುಗ’, ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ‘ಕೊಡಗು’, ಕುಮಟಾದ ‘ಕಾನಡಾವೃತ್ತ’ ಹಾಗೂ ‘ಕಾನಡಾ ಧುರೀಣ’, ಬಳ್ಳಾರಿಯ ‘ಕರ್ನಾಟಕ ಕೇಸರಿ’, ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಚಿತ್ರಗುಪ್ತ’, ‘ಪ್ರಜಾಮತ’, ‘ತಾಯಿನಾಡು’, ‘ವೀರಕೇಸರಿ’, ‘ವಿಶ್ವಕರ್ನಾಟಕ’, ಮೈಸೂರಿನ ‘ಸಾಧ್ವಿ’, ಹುಬ್ಬಳ್ಳಿಯ ‘ತರುಣ ಕರ್ನಾಟಕ’, ಬಾಗಲಕೋಟೆಯ ‘ಕನ್ನಡಿಗ’, ಬಿಜಾಪುರದ ‘ಕರ್ನಾಟಕ ವೈಭವ’ ಮುಂತಾದ ಹಲವು ಪತ್ರಿಕೆಗಳು ಉಪ್ಪಿನ ಸತ್ಯಾಗ್ರಹದ ವಿಚಾರಗಳನ್ನು ಕನ್ನಡದ ಮನೆಮನಗಳಿಗೆ ತಲಪಿಸಿದವು. ಇದೇ ಸಂದರ್ಭದಲ್ಲಿ ಮದ್ರಾಸ್-ಕರ್ನಾಟಕ ಪ್ರಾಂತದ ಒಂಬತ್ತು ಮುದ್ರಣಾಲಯಗಳನ್ನು ಬ್ರಿಟಿಷರು ಮುಚ್ಚಿಸಿದ ಘಟನೆಯೂ ನಡೆಯಿತು.
ಬ್ರಿಟಿಷರ ಕಣ್ಣುತಪ್ಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ನೇರ ಬೆಂಬಲ ನೀಡಿದ ಭೂಗತ ಪತ್ರಿಕೆಗಳೂ ದೊಡ್ಡ ಸಂಖ್ಯೆಯಲ್ಲಿ ಇವೆ. ಬ್ರಿಟಿಷರು ಪತ್ರಿಕೆಗಳನ್ನು ಹತ್ತಿಕ್ಕಿದಾಗ, ಸುದ್ದಿ ಪ್ರಸಾರಕ್ಕೆ ನಿರ್ಬಂಧ ಹೇರಿದಾಗ, ರಾತೋರಾತ್ರಿ ಭೂಗತ ಪತ್ರಿಕೆಗಳು ಹುಟ್ಟಿಕೊಂಡು, ಪೊಲೀಸರ ಕಣ್ಣುತಪ್ಪಿಸಿ ಊರಿಂದೂರಿಗೆ ತಲಪಿ ಜನರ ನಡುವೆ ಪ್ರಸಾರವಾಗುತ್ತಿದ್ದವು. ಉತ್ತರ ಕನ್ನಡದಲ್ಲಿ ೧೯೨೯-೩೧ರ ನಡುವೆ ಕಲ್ಲಚ್ಚಿನ ಮುದ್ರಣದಲ್ಲಿ ಹೊರಬರುತ್ತಿದ್ದ ‘ಸತ್ಯಾಗ್ರಹ ಕರಪತ್ರ’ದ ಮೂಲವನ್ನೇ ಪೊಲೀಸರಿಗೆ ಹುಡುಕಲಾಗಲಿಲ್ಲ. ಅದೇ ಸಮಯದಲ್ಲಿ ಕಲ್ಲಚ್ಚಿನಲ್ಲಿ ಪ್ರಕಟವಾಗುತ್ತಿದ್ದ ‘ಸಿರಸಿ, ಸಿದ್ಧಾಪುರ ಕರಪತ್ರ’ ತನ್ನ ಲಾಂಛನದ ಕೆಳಗೆ ‘ರಾಜದ್ರೋಹವೇ ನಮ್ಮ ಧರ್ಮ, ಪೂರ್ಣ ಸ್ವಾತಂತ್ರ್ಯವೇ ನಮ್ಮ ಧ್ಯೇಯ’ ಎಂಬ ಘೋಷಣೆ ಪ್ರಕಟಿಸಿಕೊಂಡಿತ್ತು. ತ್ರಿಶೂಲ, ಕ್ರಾಂತಿ, ಸಮರ, ಕಹಳೆ, ಡಮರುಗ ಮುಂತಾದ ಹತ್ತುಹಲವು ಹೆಸರುಗಳ ಭೂಗತ ಪತ್ರಿಕೆಗಳು ಪ್ರಕಟವಾಗುತ್ತಿದ್ದವು. ತುಮಕೂರಿನ ಆರ್.ಎಸ್. ಆರಾಧ್ಯರು ೧೯೩೯ರ ಅರಣ್ಯ ಸತ್ಯಾಗ್ರಹದ ವೇಳೆ ಸೈಕ್ಲೋಸ್ಟೆಲ್ ಯಂತ್ರಗಳನ್ನು ಇಟ್ಟುಕೊಂಡು ಬುಲೆಟಿನ್ಗಳನ್ನು ಮುದ್ರಿಸಿ ಸಂಗಡಿಗರ ಸಹಾಯದಿಂದ ರಾಜ್ಯದೆಲ್ಲೆಡೆ ಗುಪ್ತವಾಗಿ ಹಂಚುತ್ತಿದ್ದರು.
‘ಆಜಾದ್’ ಎಂಬ ಭೂಗತ ಪತ್ರಿಕೆಯೊಂದು “ಸ್ವಾತಂತ್ರ್ಯ ಮತ್ತು ಗುಲಾಮಗಿರಿ ಈ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಿ… ನೀವು ಹೆಚ್ಚುಕಾಲ ನೋಡುವವರಾಗಿಯೇ ಇರಲು ಸಾಧ್ಯವಿಲ್ಲ” ಎಂಬಂತಹ ಮಾತುಗಳಿಂದ ಜನರ ಆತ್ಮಸಾಕ್ಷಿಯನ್ನು ಕೆರಳಿಸಿತು. ‘ಫೈರ್’ ಎಂಬ ಇನ್ನೊಂದು ಪತ್ರಿಕೆ ಪೊಲೀಸ್ ಹಾಗೂ ಸೈನಿಕರನ್ನು ಕುರಿತು “ನಿಮ್ಮ ತುಕಡಿಗಳನ್ನು ಬ್ರಿಟಿಷರ ವಿರುದ್ಧ ತಿರುಗಿಸಿ. ನಿಮ್ಮ ಸೇನೆಯ ನಿವಾಸಗಳನ್ನೇ ಕ್ರಾಂತಿಯ ಕೇಂದ್ರಗಳನ್ನಾಗಿ ಪರಿವರ್ತಿಸಿ. ನಿಮ್ಮ ದೇಶದ ಜನರ ಮೇಲೆ ಗುಂಡು ಹಾರಿಸುವುದನ್ನು ನಿರಾಕರಿಸಿ. ನಿಮ್ಮ ಬುಲೆಟ್ಗಳನ್ನು ರಕ್ತದಾಹಿ ಫ್ಯಾಸಿಸ್ಟ್ಗಳಿಗಾಗಿ ಕಾಯ್ದಿರಿಸಿ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ಅವರು ಒಪ್ಪಿಕೊಳ್ಳುವಂತೆ ಒತ್ತಾಯಿಸಿ. ನಾವು ಆರ್ಥಿಕ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಸ್ವಾತಂತ್ರ್ಯ ಇರುವ ಹೊಸ ಪ್ರಪಂಚವನ್ನು ನಿರ್ಮಿಸಲು ನಮ್ಮೊಂದಿಗೆ ಕೈಜೋಡಿಸಿ” ಎಂದು ನೇರವಾಗಿ ಕೆಣಕಿತು.
ಒಟ್ಟಿನಲ್ಲಿ, ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪತ್ರಿಕೆಗಳದ್ದು ಮರೆಯಲಾಗದ, ಮರೆಯಬಾರದ ಅಧ್ಯಾಯ. ಬಹುಶಃ ಪತ್ರಿಕೆಗಳಿಲ್ಲದ ನಮ್ಮ ರಾಷ್ಟ್ರೀಯ ಚಳವಳಿಯನ್ನು ಊಹಿಸಿಕೊಳ್ಳುವುದೂ ಕಷ್ಟ. ಅವು ಕೇವಲ ಮಾಹಿತಿ ಪ್ರಸಾರದ ಮಾಧ್ಯಮಗಳಾಗಿಯಷ್ಟೇ ಕಾರ್ಯನಿರ್ವಹಿಸಿರಲಿಲ್ಲ, ನಮ್ಮ ದೇಶದ ಒಟ್ಟಾರೆ ರಾಷ್ಟ್ರೀಯ ಪ್ರಜ್ಞೆಯ ಅಂತಃಪ್ರವಾಹವಾಗಿದ್ದವು. ಕರ್ನಾಟಕದ ಮಟ್ಟಿಗಂತೂ ಅವುಗಳದ್ದು ದ್ವಿಪಾತ್ರ: ಒಂದು ರಾಷ್ಟ್ರೀಯ ಚಳವಳಿಯನ್ನು ಪೋಷಿಸಿದ್ದು, ಇನ್ನೊಂದು ಕನ್ನಡನಾಡೆಂಬ ಅಸ್ಮಿತೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಿದ್ದು. ವರ್ತಮಾನದ ತಂತ್ರಜ್ಞಾನದ ನಾಗಾಲೋಟದಲ್ಲಿ ಹಲವು ಅವತಾರಗಳನ್ನು ದಾಟಿಬಂದಿರುವ ನಮ್ಮ ಪತ್ರಿಕೋದ್ಯಮವು ಸುವರ್ಣಸದೃಶವಾದ ತನ್ನ ನಿನ್ನೆಗಳ ಕುರಿತು ಎಂದೂ ವಿಸ್ಮೃತಿಗೆ ಜಾರಬಾರದು.
ಆಧಾರ:
೧. ಭಾರತೀಯ ಪತ್ರಿಕೋದ್ಯಮ, ೧೯೬೯: ಡಾ. ನಾಡಿಗ ಕೃಷ್ಣಮೂರ್ತಿ
೨. ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ೧೯೭೭-೮೨: ಡಾ. ಸೂರ್ಯನಾಥ ಕಾಮತ್
೩. ಕರ್ನಾಟಕ ಪತ್ರಿಕಾ ಇತಿಹಾಸದ ೩ ಸಂಪುಟಗಳು, ೧೯೯೯: ಕರ್ನಾಟಕ ಪತ್ರಿಕಾ ಅಕಾಡೆಮಿ
೪. ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಪತ್ರಿಕೋದ್ಯಮ, ೨೦೦೮: ಡಾ. ಎಲ್. ಪಿ. ರಾಜು
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ