ವಿಷಯಕ್ಕೆ ಹೋಗಿ

ಸ್ವಾತಂತ್ರ್ಯ ಹೋರಾಟಕ್ಕೆ ಮೈಸೂರು ಸಂಸ್ಥಾನದ ಕೊಡುಗೆ

 ಸ್ವಾತಂತ್ರ್ಯ ಹೋರಾಟಕ್ಕೆ ಮೈಸೂರು ಸಂಸ್ಥಾನದ ಕೊಡುಗೆ

* ಹೆಚ್.ಆರ್.ನಾಗೇಶರಾವ್
ಭಾರತದ ಸ್ವಾತಂತ್ರ್ಯದ ಹೋರಾಟವು 1857ರಲ್ಲಿ ಪ್ರಬಲ ಸ್ವರೂಪದಲ್ಲಿ ಕಾಣಬಂದಿತಾದರೂ ಮೈಸೂರಿನ ಹೋರಾಟವು ಅದಕ್ಕೂ ಮುನ್ನಿನ ಒಂದು ಸ್ಫೂರ್ತಿದಾಯಕ ಕತೆ. ಹೈದರ್ ಆಲಿ, ಅನಂತರ ಟಿಪ್ಪೂ ಸುಲ್ತಾನ್ 1760ರಿಂದ 1799ರವರೆಗೆ ಸತತವಾಗಿ ಬ್ರಿಟಿಷರೊಡನೆ ಕಾದಾಡಿದ್ದು ಅಸಾಮಾನ್ಯ ಘಟನೆ. ಹೈದರನ ಸೈನ್ಯದಲ್ಲಿದ್ದ ಚನ್ನಗಿರಿಯ ಧೋಂಡಿಯಾ ವಾಘ್ ಎಂಬ ಪರಾಕ್ರಮಿ ಸವಾರ ಶಿವಮೊಗ್ಗೆ ಮತ್ತು ಬಿದನೂರಿನ ಭಾಗಗಳನ್ನು ಸೇರಿಸಿ ರಾಜ್ಯ ಕಟ್ಟಿ, ಬ್ರಿಟಿಷರನ್ನು ಮಣ್ಣು ಮುಕ್ಕಿಸಿದ ಕತೆಯೂ ರೋಮಾಂಚಕ. ಅನಂತರ 1800ರ ಕದನದಲ್ಲಿ ಬ್ರಿಟಿಷರ ವಿರುದ್ಧ ಅವನು ಹೋರಾಡಿ ಮಡಿದ. ಮಂಜರಾಬಾದಿನ ಬಳಿ ಕಾಡಿನ ಮಧ್ಯೆ ಅರಕೆರೆ ಕೋಟೆಯನ್ನು ಭದ್ರಪಡಿಸಿ ಐಗೂರು ಪಾಳೆಯಗಾರ ವೆಂಕಟಾದ್ರಿ ನಾಯಕ ಠಾಣ್ಯ ಹಾಕಿ ಬ್ರಿಟಿಷರೊಡನೆ ಸೆಣಸಾಡಿ 1802ರ ಫೆಬ್ರವರಿಯಲ್ಲಿ ಬಲಿಯಾದ.
ಟಿಪ್ಪೂ ಸುಲ್ತಾನನ ಪತನಾನಂತರ ಏಕಪ್ರಕಾರವಾಗಿ 50 ವರ್ಷ ಕಾಲ ಬ್ರಿಟಿಷರು ಆಡಳಿತ ನಡೆಸಿದರು. ಮುಮ್ಮಡಿ ಕಷ್ಣರಾಜ ಒಡೆಯರ ಸತತ ಶ್ರಮದ ಫಲವಾಗಿ, ಚಾಮರಾಜೇಂದ್ರ ಒಡೆಯರಿಗೆ ಅಧಿಕಾರ ಸಿಕ್ಕಿತು. ರಾಜಾರಾಮಮೋಹನರಾಯ್, ರಾಮಕಷ್ಣ ಪರಮಹಂಸ, ವಿವೇಕಾನಂದ, ದಯಾನಂದ ಸರಸ್ವತಿ, ಲೋಕಮಾನ್ಯ ತಿಲಕ, ರಾನಡೆ, ಗೋಖಲೆ, ಅರವಿಂದ ಘೋಷ್, ಲಾಲಾಲಜಪತರಾಯ್, ಬಿಪಿನಚಂದ್ರ ಪಾಲ್ ಮುಂತಾದವರ ಕಾರ್ಯ ಚಟುವಟಿಕೆಗಳೂ ವಂಗ ವಿಭಜನೆ, ‘ವಂದೇ ಮಾತರಂ’ ಚಳವಳಿ, ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ಘಟನೆಗಳೂ ಮೈಸೂರಿನ ಜನರ ಮೇಲೆ ವಿಶೇಷ ಪರಿಣಾಮವುಂಟು ಮಾಡಿದವು.

ಹೈದರಾಬಾದಿನಿಂದ ಗಡೀಪಾರಾಗಿದ್ದ ಕೊಪ್ಪಳದ ಜಯರಾಮಾಚಾರ್ಯರು ಬೆಂಗಳೂರಿನಲ್ಲಿ ತಮ್ಮ ಕೀರ್ತನೆಗಳ ಮೂಲಕ ಜನರನ್ನು ಹುರಿದುಂಬಿಸುತ್ತಿದ್ದರು. 1920ರ ಕಾಂಗ್ರೆಸ್ಸಿನ ನಾಗಪುರ ಅಧಿವೇಶನದಲ್ಲಿ ಅಂಗೀಕೃತವಾದ ಅಸಹಕಾರ ಆಂದೋಳನದ ಪ್ರತಿಫಲವಾಗಿ ಅನೇಕ ಯುವಕರು ನೌಕರಿ ತ್ಯಜಿಸಿದರು; ಇಂತಹವರಲ್ಲಿ ಎಸ್.ಆರ್.ಎಸ್.ರಾಘವನ್ನರೂ ಒಬ್ಬರು - ಅಲ್ಲದೆ ತಾತಾ ವಿಜ್ಞಾನ ಮಂದಿರದ ವಿದ್ಯಾರ್ಥಿ ಆರ್.ವಿ.ಶರ್ಮ ಎಂಬುವವರೂ ವ್ಯಾಸಂಗ ತ್ಯಜಿಸಿ ಕಾಂಗ್ರೆಸ್ ಸಮಿತಿಯ ಸ್ಥಾಪನಾ ಕಾರ್ಯದಲ್ಲಿ ತೊಡಗಿದರು.

ಕರ್ನಾಟಕ ಮುಂದಾಳುಗಳಾದ ಮುದವೀಡು ಕಷ್ಣರಾಯರು, ಕಡಪಾ ರಾಘವೇಂದ್ರರಾಯರು ಬೆಂಗಳೂರು ಜನರನ್ನು ಜಾಗೃತಗೊಳಿಸುತ್ತಿದ್ದರು. ಮಹಾತ್ಮಾ ಗಾಂಧಿಯವರು 1921ರಲ್ಲಿ ಮೌಲಾನಾ ಶೌಕತಾಲಿ ಮತ್ತು ಮೌಲಾನಾ ಮಹಮದಾಲಿಯವರೊಡನೆ ಬೆಂಗಳೂರಿಗೆ ಬಂದಿದ್ದರು. ಶಾಲೆಗಳನ್ನು ಬಹಿಷ್ಕರಿಸಿದ್ದ ವಿದ್ಯಾರ್ಥಿಗಳಿಗಾಗಿ ದಂಡಿನಲ್ಲಿ ವರ್ತಕ ಉಸ್ಮಾನ್ ಸೇಟರು ಸ್ಥಾಪಿಸಿದ ರಾಷ್ಟ್ರೀಯ ಶಾಲೆ ಹೆಸರು ಗಳಿಸಿತು. ಬೆಂಗಳೂರಿನ ವ್ಯಾಪಾರಿ ಷಾ ಧನಜಿ ಜವೇರ್‌ಚಂದ್ ತಮ್ಮ ವಿದೇಶಿ ವಸ್ತ್ರಗಳ ಅಂಗಡಿಯನ್ನು ಮುಚ್ಚಿ ಚರಖಾ ಮತ್ತು ಖಾದಿ ಪ್ರಚಾರಕ್ಕಿಳಿದರು.

ಸಂಸ್ಥಾನದ ಆಡಳಿತಗಾರರ ಮೇಲೆ ಬ್ರಿಟಿಷ್ ಏಜೆಂಟರು ಸಂಶಯ ಪಡುತ್ತಿದ್ದಾಗ, ತನ್ನ ಪೇಚಿನಿಂದ ಪಾರಾಗುವುದಕ್ಕೆ ಮೈಸೂರು ಸರ್ಕಾರ ದಬ್ಬಾಳಿಕೆಗೆ ಕೈಹಾಕಿತು. 1923ರ ನಾಗಪುರ ಧ್ವಜ ಸತ್ಯಾಗ್ರಹಕ್ಕೆ ಬೆಂಗಳೂರಿನಿಂದ ಐವರು ಸ್ವಯಂಸೇವಕರೊಂದಿಗೆ ತೆರಳಿದ್ದ ಕೆ.ಜೀವಣ್ಣರಾಯರು ಬಂಧನವನ್ನನುಭವಿಸಿ ಬಂದರು. ಡಾ॥ ಹರ್ಡೀಕರರ ‘ಹಿಂದೂಸ್ತಾನಿ ಸೇವಾದಲ’ದ ತರುಣರು 1924ರ ಕಾಂಗ್ರೆಸ್ಸಿನ ಬೆಳಗಾವಿ ಅಧಿವೇಶನದಲ್ಲಿ ಸೇವೆ ಸಲ್ಲಿಸಿದರು.

1917ರಲ್ಲಿ ಬಸವಯ್ಯನವರಿಂದ ಸ್ಥಾಪಿತವಾಗಿದ್ದ ‘ಪ್ರಜಾ ಮಿತ್ರ ಮಂಡಲಿ’ 1930ರವರೆಗೆ ಅಸ್ತಿತ್ವದಲ್ಲಿತ್ತು. ಪ್ರಜಾಪ್ರತಿನಿಧಿ ಸಭೆಯ ಕಾಂಗ್ರೆಸ್ ಸದಸ್ಯರೂ, ಮತ್ತು ಸಹಾನುಭೂತಿಪರರೂ ಕಲೆತು 1928ರಲ್ಲಿ ‘ಮೈಸೂರು ಪ್ರೋಗ್ರೆಸಿವ್ ಪಾರ್ಟಿ’ ಪಕ್ಷವನ್ನು ಸ್ಥಾಪಿಸಿದರು. ‘ಪ್ರಜಾ ಮಿತ್ರ ಮಂಡಲಿ’ ಪಕ್ಷದ ಕೆಲ ಮುಖಂಡರು ಹೊಸತಾಗಿ ‘ಪ್ರಜಾಪಕ್ಷ’ ಸ್ಥಾಪಿಸಿದರು. ‘ಪ್ರಜಾ ಮಿತ್ರ ಮಂಡಲಿ’ಯೂ, ‘ಪ್ರಜಾ ಪಕ್ಷ’ವೂ ಸೇರಿ ‘ಪ್ರಜಾ ಸಂಯುಕ್ತ ಪಕ್ಷ’ ಆಯಿತು.

ಶಿರಾಳಕೊಪ್ಪದಲ್ಲಿ ಇರ್ವಿನ್ ನಾಲೆಯ ಸುಮಾರು 4000 ರೈತರು ತಮ್ಮ ಮೇಲಿನ ಅನ್ಯಾಯದ ಕಂದಾಯ ನಿವಾರಣೆಗಾಗಿ ಹೆಚ್.ಕೆ.ವೀರಣ್ಣಗೌಡರ ನೇತತ್ವದಲ್ಲಿ 70 ಮೈಲಿ ಕಾಲುನಡುಗೆಯಲ್ಲಿ ಬೆಂಗಳೂರಿಗೆ ಬಂದರು. 1931ರಲ್ಲಿ ಪಂ॥ ನೆಹರೂರು ಬೆಂಗಳೂರಿಗೆ ಆಗಮಿಸಿದಾಗ್ಗೆ ಧರ್ಮಾಂಬುಧಿ ಕೆರೆಯ ಅಂಗಳದಲ್ಲಿ ರಾಷ್ಟ್ರಧ್ವಜವನ್ನು ಏರಿಸಿದಾಗ ಅದನ್ನು ಸಹಿಸದ ಬ್ರಿಟಿಷ್ ರೆಸಿಡೆಂಟರು ಮೈಸೂರು ಆಡಳಿತವರ್ಗದ ಮೂಲಕ ಸ್ತಂಭವನ್ನು ಕಿತ್ತೊಗೆಸಿದರು. ಅದೇ ಜಾಗದಲ್ಲಿ ಮತ್ತೊಂದು ಸ್ತಂಭವನ್ನು ಜನರು ನಿರ್ಮಿಸಿ ಧ್ವಜ ಏರಿಸಿದರು.

1936ರಲ್ಲಿ ಶಾಸನಸಭೆಗಳಿಗೆ ಉಮೇದುವಾರರನ್ನು ನಿಲ್ಲಿಸಲು ಕಾಂಗ್ರೆಸ್ ತೀರ್ಮಾನಿಸಿತು. 1937ರಲ್ಲಿ ಚುನಾವಣಾ ಪ್ರಚಾರಕ್ಕೆಂದು ಬಂದ ಕಮಲಾದೇವಿ ಚಟ್ಟೋಪಾಧ್ಯಾಯರಿಗೆ ಸರ್ಕಾರ ವಾಗ್ಬಂಧನ ವಿಧಿಸಿತು. ಕರಮರಕರ, ಡಾ॥ ಮಸಾನಿ, ಟಿ.ಸಿದ್ಧಲಿಂಗಯ್ಯ, ಕೆ.ಟಿ.ಭಾಷ್ಯಂರವರ ಮೇಲೂ ನಿರ್ಬಂಧಾಜ್ಞೆಯಾಯಿತು. 1937ರ ಅಕ್ಟೋಬರ್‌ನಲ್ಲಿ ಪ್ರಜಾಪ್ರತಿನಿಧಿಸಭೆಯ ಅಧಿವೇಶನ ನಡೆಯುತ್ತಿದ್ದಾಗ ಸರ್ಕಾರ ಕೆ.ಟಿ.ಭಾಷ್ಯಂರನ್ನು ಬಂಧಿಸಿತು. ಕಾಂಗ್ರೆಸ್ಸಿಗೆ ಪ್ರತಿಸ್ಫರ್ಧಿಯಾಗಿದ್ದ ಪ್ರಜಾ ಸಂಯುಕ್ತ ಪಕ್ಷವೂ ಕಾಂಗ್ರೆಸ್ಸಿಗೆ ಸೇರಿ ಏಕಪಕ್ಷ ರೂಪುಗೊಂಡು ನೂತನ ಪಕ್ಷಕ್ಕೆ ಕೆ. ಚೆಂಗಲರಾಯ ರೆಡ್ಡಿಯವರು ನಾಯಕರಾಗಿ ಆರಿಸಲ್ಪಟ್ಟರು.

ಜವಾಬ್ದಾರಿ ಸರ್ಕಾರ ರೂಪಿಸುವ ಉದ್ದಿಶ್ಯದಿಂದ 1938ರಲ್ಲಿ ‘ಮೈಸೂರು ಕಾಂಗ್ರೆಸ್’ ಸ್ಥಾಪನೆಯಾಯಿತು. ಮದ್ದೂರು ಬಳಿಯ ಶಿವಪುರದಲ್ಲಿ 1938ರ ಏಪ್ರಿಲ್ 10,11,12 ತಾರೀಖುಗಳಲ್ಲಿ ಪ್ರಥಮ ‘ಮೈಸೂರು ಕಾಂಗ್ರೆಸ್* ಮಹಾಧಿವೇಶನ ಸೇರಿತು. ಪೊಲೀಸರು ರಾಷ್ಟ್ರ ಧ್ವಜಾರೋಹಣವಾಗಬಾರದೆಂಬ ಪ್ರತಿಬಂಧಕಾಜ್ಞೆ ವಿಧಿಸಿದರು. ಅಧ್ಯಕ್ಷ ಟಿ.ಸಿದ್ಧಲಿಂಗಯ್ಯನವರು ಧ್ವಜಾರೋಹಣ ಮಾಡಲು ಯತ್ನಿಸಿದರು; ಬಂಧನವಾಯಿತು. ಸ್ವಯಂಸೇವಕದಳ ನಾಯಕರು ಧ್ವಜವನ್ನು ಹಾರಿಸಿಯೇ ಬಿಟ್ಟರು; ಇವರ ಬಂಧನವೂ ಆಯಿತು. ಬೇರೊಬ್ಬ ಅಧ್ಯಕ್ಷರ ನೇಮಕವಾಯಿತು; ಮೂರು ದಿನವೂ ಇದೇ ಪ್ರಕಾರ ಬಂಧನಗಳಾದವು. ಶಿವಪುರದಲ್ಲಿ ಒಂದು ತಿಂಗಳ ಕಾಲ ಧ್ವಜ ಸತ್ಯಾಗ್ರಹ ನಡೆಸತಕ್ಕದ್ದೆಂದು ಸಮಿತಿ ಕರೆಕೊಟ್ಟಿತು.

1938ರ ಏಪ್ರಿಲ್ 25ನೇ ತಾರೀಖು ಕೋಲಾರ ಜಿಲ್ಲೆಯ ಪವಿತ್ರ ಯಾತ್ರಾಸ್ಥಳವಾದ ವಿದುರಾಶ್ವತ್ಥದಲ್ಲಿ ಜಾತ್ರೆಗಾಗಿ ಸೇರಿದ್ದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದರು. 32 ಜನರು ಸಾವಿಗೀಡಾದರು. ಈ ಘಟನೆಯಿಂದ ಗಾಂಧೀಜಿ ನೊಂದರು. ಸರ್ಕಾರ ಸಂಧಾನಕ್ಕೆ ಸಿದ್ಧವಾಯಿತು - ಸರ್ದಾರ್ ಪಟೇಲರೂ ಆಚಾರ್ಯ ಕೃಪಲಾನಿಯವರೂ ಸಂಸ್ಥಾನಕ್ಕೆ ಬಂದು ಒಪ್ಪಂದ ಮಾಡಿಸಿದರು. ಮೈಸೂರು ಕಾಂಗ್ರೆಸ್ಸನ್ನು ರಾಜಕೀಯ ಪಕ್ಷವೆಂದು ಸರ್ಕಾರ ಅಂಗೀಕರಿಸಿತು. ಸಾರ್ವಜನಿಕ ಸಮಾರಂಭಗಳಲ್ಲಿ ರಾಷ್ಟ್ರಧ್ವಜದೊಡನೆ ಮೈಸೂರು ಧ್ವಜವನ್ನೂ ಹಾರಿಸಬೇಕೆಂದೂ ಒಪ್ಪಿಗೆಯಾಯಿತು. ಬಂಧನದಲ್ಲಿದ್ದ ಕಾಂಗ್ರೆಸ್ಸಿಗರೆಲ್ಲರೂ ಖುಲಾಸೆಯಾದರು.

ಮೈಸೂರಿನಲ್ಲಿ ಕಟ್ಟಿದ ಪೊಲೀಸ್ ಭವನಕ್ಕೆ ಪೊಲೀಸ್ ಮುಖ್ಯಾಧಿಕಾರಿಯಾಗಿದ್ದ ಹ್ಯಾಮಿಲ್ಟನ್‌ರ ಹೆಸರನ್ನಿಟ್ಟುದುದರಿಂದ ತಗಡೂರು ರಾಮಚಂದ್ರರಾಯರ ನಾಯಕತ್ವದಲ್ಲಿ ಸತ್ಯಾಗ್ರಹ ಪ್ರಾರಂಭವಾಯಿತು. 1939ರ ಸೆಪ್ಟೆಂಬರ್ 1ರಂದು ಬೆಂಗಳೂರಿನಲ್ಲಿ ಟಿ.ಸಿದ್ಧಲಿಂಗಯ್ಯನವರು ಸ್ವಾತಂತ್ರ್ಯ ಹೋರಾಟದ ಕಹಳೆ ಊದಿದರು. ಅವರ ಬಂಧನ-ಶಿಕ್ಷೆಯಿಂದ ದಬ್ಬಾಳಿಕೆ ಆರಂಭವಾಯಿತು. ಮುಖಂಡರೆಲ್ಲ ಒಬ್ಬೊಬ್ಬರಾಗಿ ಬಂಧಿತರಾದರು. ಒಂದು ತಿಂಗಳಲ್ಲೇ 518 ದಸ್ತಗಿರಿಗಳಾಗಿ 346 ಜನರಿಗೆ ಶಿಕ್ಷೆಗಳಾದವು. ಬೈರಮಂಗಲದ ತಾತ್ಕಾಲಿಕ ಸೆರೆಮನೆಯಲ್ಲಿ ಪ್ರಹ್ಲಾದ ಶೆಟ್ಟಿ ಎಂಬ ಸತ್ಯಾಗ್ರಹಿಯು ಕಾಯಿಲೆಯಿಂದ ಸತ್ತ. ಚಿತ್ರದುರ್ಗ ಜಿಲ್ಲೆಯ ತುರುವನೂರು ಎಂಬಲ್ಲಿ ಸರ್ಕಾರ ಪುಂಡುಗಂದಾಯ ವಿಧಿಸಿತು. ಸಾರ್ವಜನಿಕ ರಕ್ಷಣಾ ಕಾನೂನಿನ ಅಡಿಯಲ್ಲಿ ಬಂಧನಕ್ಕೀಡಾದವರ ಸಂಖ್ಯೆ 2,000ಕ್ಕೂ ಹೆಚ್ಚಿತು.

ಆಜ್ಞೋಲ್ಲಂಘನೆ ಮಾಡಿದರೆಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯರಾಗಿದ್ದ ಭಾಷ್ಯಂ, ದಾಸಪ್ಪ, ಕೆ.ಸಿ.ರೆಡ್ಡಿ, ನಿಜಲಿಂಗಪ್ಪರವರನ್ನು ಕೆ.ಜಿ.ಎಫ್.ನಲ್ಲಿ ಬಂಧಿಸಲಾಯಿತು. ಕೋಲಾರ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಲು ನೋಟೀಸು ಜಾರಿ ಮಾಡಿದರು. ಹೈಕೋರ್ಟು ಅವರೆಲ್ಲರ ಸನ್ನದನ್ನು ರದ್ದುಗೊಳಿಸಿತು.

1941ರಲ್ಲಿ ಕಾರ್ಮಿಕರ ಹಾಗೂ ಬಂಡವಾಳಗಾರರ ಘರ್ಷಣೆಗಳು ಬಲಗೊಂಡವು. ಭದ್ರಾವತಿಯಲ್ಲಿ 1942ರ ಮೇ 1ರಂದು ಕಾರ್ಮಿಕರು ಮೇ ದಿನಾಚರಣೆ ನಡೆಸಿದಾಗ, ಪೊಲೀಸರಿಗೂ ಕಾರ್ಮಿಕರಿಗೂ ತಿಕ್ಕಾಟವಾಗಿ ಪೊಲೀಸರು ಗುಂಡು ಹಾರಿಸಿ ಮೂವರು ಸತ್ತರು.

1942ರ ಆಗಸ್ಟ್ 9ರಂದು ಮೈಸೂರು ಸಂಸ್ಥಾನದಾದ್ಯಂತ ‘ಚಲೇಜಾವ್’ ಚಳವಳಿ ನಡೆಯಿತು. ವಿದ್ಯಾರ್ಥಿಗಳೂ ಕಾರ್ಮಿಕರೂ ಹೆಂಗಸರೂ ಮಕ್ಕಳೂ ಸೇರಿ ಪ್ರಚಂಡ ಮೆರವಣಿಗೆ ನಡೆಸಿದರು - ಆಗಸ್ಟ್ 10ರಂದು ಮೈಸೂರು ಕಾಂಗ್ರೆಸ್ ನಾಯಕರನ್ನೆಲ್ಲಾ ಸರ್ಕಾರ ಬಂಧಿಸಿತು. ಎ.ಐ.ಸಿ.ಸಿ. ಮುಂಬಯಿ ಸಭೆಗೆ ತೆರಳಿದ್ದ ಕೆಲ ನಾಯಕರು ತಮ್ಮ ಊರುಗಳಿಗೆ ತಲುಪುವ ಮುನ್ನವೇ ಬಂಧಿಸಲ್ಪಟ್ಟರು.

ಶಾಲಾ ಕಾಲೇಜುಗಳು ಮುಚ್ಚಿದವು. ದಾವಣಗೆರೆ, ಬಾಣಾವರ, ಹೊಳಲ್ಕೆರೆ, ಹೊಸದುರ್ಗ, ಜಾಜೂರು, ತಿಪಟೂರು ರೈಲ್ವೆ ಸ್ಟೇಷನ್ನುಗಳಿಗೆ ಬೆಂಕಿ ಬಿದ್ದಿತು. ಕೆಲವೆಡೆ ಒಂದು ತಿಂಗಳವರೆಗೆ ರಾತ್ರಿ ರೈಲ್ವೇ ಸಂಚಾರ ನಿಂತಿತು. ಬೆಂಗಳೂರಿನ ಪ್ರಮುಖ ಪೋಸ್ಟಾಫೀಸಿಗೆ ಬೆಂಕಿ ಬಿದ್ದಿತಲ್ಲದೆ ಅಲ್ಲಿಂದ 5,000 ರೂ.ಗಳ ಅಪಹಾರವಾಯಿತು.

ಬೆಂಗಳೂರಿನ ಗಿರಣಿ-ಕಾರ್ಖಾನೆಗಳಲ್ಲಿ ಸುಮಾರು 32,000 ಕಾರ್ಮಿಕರು ಎರಡು ವಾರಗಳವರೆಗೆ ಮುಷ್ಕರ ಹೂಡಿದರು; ಪೊಲೀಸರ ಮತ್ತು ಜನರ ನಡುವೆ ಘರ್ಷಣೆ ಹೆಚ್ಚಿತು. 3 ದಿನಗಳ ಕಾಲ ಮಾರ್ಷಲ್ ಲಾ ಏರ್ಪಟ್ಟಿತು, ಹಲವಾರು ಬಾರಿ ಗುಂಡಿನ ಪ್ರಕರಣವಾಗಿ ಸುಮಾರು 150 ಜನ ಸತ್ತರು. 10 ದಿನಗಳವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ರೈತರು ಸೈನಿಕರಿಗೆ ತರಕಾರಿ ಸರಬರಾಜು ನಿಲ್ಲಿಸಿದರು. ಬೆಂಗಳೂರಿನ ನಾಲ್ಕು ಸಂಪಾದಕರನ್ನು ಬಂಧಿಸಿದ ಕಾರಣ ಪತ್ರಿಕೆಗಳು ಪ್ರಕಟವಾಗದೇ ನಿಂತವು.

ಕೆ.ಜಿ.ಎಫ್. ಭದ್ರಾವತಿಗಳಲ್ಲಿಯೂ ಮುಷ್ಕರವಾಯಿತು. ಮೈಸೂರು, ತುಮಕೂರು, ಹಾಸನಗಳಲ್ಲೂ ಗುಂಡು ಹಾರಿಸಲಾಯಿತು. ವಿದ್ಯಾರ್ಥಿಗಳು ಪರೀಕ್ಷೆಗೆ ಬಹಿಷ್ಕಾರ ಹಾಕಿದರು. ದಬ್ಬಾಳಿಕೆ ಪ್ರತಿಭಟಿಸಿ 12 ಮಂದಿ ಪಟೇಲರು ರಾಜೀನಾಮೆ ಸಲ್ಲಿಸಿದರು. ಕೆಲವು ವಕೀಲರು ಸನ್ನದುಗಳನ್ನು ಕೋರ್ಟುಗಳಿಗೆ ವಾಪಸು ಕೊಟ್ಟರು.

ದಾವಣಗೆರೆಯಲ್ಲಿ ಪೊಲೀಸರ ಗುಂಡಿನೇಟಿನಿಂದ ಆರು ಜನ ಪ್ರಾಣ ಬಿಟ್ಟರು. ಹಾಸನ ಜಿಲ್ಲೆಯಲ್ಲಿ ಸಂತೆಗಳ ಪಿಕೆಟಿಂಗ್ ಆರಂಭವಾಯಿತು - ಶ್ರವಣಬೆಳಗೊಳದಲ್ಲಿ ಅಧಿಕಾರಿಗಳ ದರ್ಪ ಹೆಚ್ಚಿತು - ಪೊಲೀಸರ ಗುಂಡಿನೇಟಿನಿಂದ ಹಲವರು ಸತ್ತು, ಅನೇಕರಿಗೆ ಗಾಯಗಳಾದವು - ಹಲವರಿಗೆ ಕಠಿಣ ಶಿಕ್ಷೆಯಾಯಿತು.

1942ರ ಆಗಸ್ಟ್ 28ರಂದು ಶಿಕಾರಿಪುರದ ಈಸೂರು ಗ್ರಾಮಕ್ಕೆ ತಾಲ್ಲೂಕಿನ ಅಧಿಕಾರಿಗಳು ಬಂದಾಗ ವಿರಸವಾಗಿ ಪೊಲೀಸರು ಗುಂಡು ಹಾರಿಸಿದರು - ಉದ್ರಿಕ್ತಗೊಂಡ ಜನರು ಅಧಿಕಾರಿಗಳ ಮೇಲೆ ಬಿದ್ದು ಕೆಲವರನ್ನು ಕೊಂದರು - ಪೊಲೀಸರೂ ಮಿಲಿಟರಿಯವರೂ ಗ್ರಾಮವನ್ನು ಆಕ್ರಮಿಸಿಬಿಟ್ಟರು - ಚಿತ್ರಹಿಂಸೆಗೆ ಗುರಿಪಡಿಸಿದರು - ಲೂಟಿ ನಡೆಸಿದರು. 11 ಜನರಿಗೆ ಮರಣದಂಡನೆಯಾಯಿತು. ಅನೇಕರಿಗೆ ಜೀವಾವಧಿ ಶಿಕ್ಷೆಯಾಯಿತು. ಇವರ ಪೈಕಿ ಹಾಲಮ್ಮ, ಪಾರ್ವತಮ್ಮ ಮತ್ತು ಸಿದ್ಧಮ್ಮ ಎಂಬುವವರೂ ಇದ್ದರು. ಅಪೀಲಿನಲ್ಲಿ ಐದು ಜನರಿಗೆ ಮರಣದಂಡನೆ ಹಾಗೂ 28 ಜನರಿಗೆ ಜೀವಾವಧಿ ಶಿಕ್ಷೆ ಸ್ಥಿರವಾಯಿತು.

1942ರ ಚಳವಳಿಯಲ್ಲಿ ಒಟ್ಟು 3000ಕ್ಕೂ ಹೆಚ್ಚಾಗಿ ಸೆರೆಮನೆ ಸೇರಿದರು - ಕೆಲವರಿಗೆ ಶಿಕ್ಷೆಗಳಾದವು; ಅನೇಕರು ವಿಚಾರಣೆಯಿಲ್ಲದೆ ಬಂಧನದಲ್ಲಿರಬೇಕಾಯಿತು - ಬೆಂಗಳೂರು-ಮೈಸೂರು-ಚಿಕ್ಕಮಗಳೂರು ಜೈಲಿನೊಳಗೇ ಲಾಠಿ ಪ್ರಹಾರಗಳಾದವು. ಅಧಿಕಾರಿಗಳ ದೌರ್ಜನ್ಯದಿಂದಾಗಿ ಮೈಸೂರಿನ ಶಂಕರಪ್ಪ ಎಂಬ ವಿದ್ಯಾರ್ಥಿ ಪ್ರಾಣ ಬಿಟ್ಟ. 1 ವರ್ಷದ ನಂತರ ಕಾಂಗ್ರೆಸ್ ಸದಸ್ಯರು ಬಿಡುಗಡೆಯಾದರು. 1943ರ ಜೂನ್‌ನಲ್ಲಿ ಕಾಂಗ್ರೆಸ್ಸಿನ ವಿಶೇಷ ಅಧಿವೇಶನವು ತುಮಕೂರಿನಲ್ಲಿ ಸೇರಿ ರಾಜಕೀಯ ಸ್ಥಿತಿಗತಿ ವಿಮರ್ಶಿಸಿತು.

1945ರ ಇಸವಿಯ ನವೆಂಬರ್ ತಿಂಗಳಲ್ಲಿ ಪಾಂಡವಪುರದ ಬಳಿ ಕ್ಯಾತನಹಳ್ಳಿಯಲ್ಲಿ ಎಸ್.ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಎ.ಎಂ.ಸಿ.ಸಿ.ಯು ಸಭೆ ಸೇರಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗೆ ಒತ್ತಾಯ ಮಾಡಿತು. ದಿವಾನ್ ಮಾಧವರಾಯರ ನಿವತ್ತಿಯಾಗಿ ಅವರ ಸ್ಥಾನಕ್ಕೆ ಆರ್ಕಾಟ್ ರಾಮಸ್ವಾಮಿ ಮೊದಲಿಯಾರರ ನೇಮಕವಾಯಿತು. 1946ರ ನವೆಂಬರಿನಲ್ಲಿ ಬೆಂಗಳೂರು ಸುಭಾಷನಗರದಲ್ಲಿ ಕೆ.ಸಿ.ರೆಡ್ಡಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ಸಿನ ಆರನೇ ಅಧಿವೇಶನ ನಡೆಯಿತು.

1947ರ ಜನವರಿಯಲ್ಲಿ ಭಾರತ ರಾಜ್ಯಾಂಗ ಸಭೆಗೆ ಮೈಸೂರು ಸೇರಲು ನಿರ್ಧರಿಸಿದೆಯೆಂದು ದಿವಾನರು ಪ್ರಕಟಿಸಿದರು. ಆಗಸ್ಟ್ 10ರಲ್ಲಿ ಮಹಾರಾಜರು ಭಾರತ ಒಕ್ಕೂಟಕ್ಕೆ ಸೇರಲು ಸಹಿ ಹಾಕಿದರು. ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಮೈಸೂರಿನ ಪಾಲಿಗೆ ಅದು ಮರೀಚಿಕೆಯಾಗಿತ್ತು. 1947ರ ಸೆಪ್ಟಂಬರ್ 1ರಿಂದ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಮೈಸೂರು ಕಾಂಗ್ರೆಸ್ ಸಾರಿತು. ಜನರನ್ನು ಸದೆಬಡಿಯಲು ಸರ್ಕಾರ ನಿರ್ಧರಿಸಿತ್ತು. ಪತ್ರಿಕೆಗಳ ಮೇಲೆ ನಿರ್ಬಂಧ ಹಾಕಿತು. ಪ್ರತಿಬಂಧಕಾಜ್ಞೆ ತಂದಿತು. ಭಾರತ ರಕ್ಷಣಾ ಶಾಸನವನ್ನೂ ಚಲಾಯಿಸಿತು.

ಆದರೆ ಚಳವಳಿ ಪ್ರಾರಂಭವಾಗಿ ಎಲ್ಲೆಲ್ಲಿಯೂ ಅಪೂರ್ವ ಉತ್ಸಾಹ-ಸ್ಫೂರ್ತಿ ಕಂಡುಬಂದವು - ಹರತಾಳ, ಪ್ರತಿಭಟನೆ, ಮೆರವಣಿಗೆಗಳಾದವು. ಲಾಠಿ ಪ್ರಯೋಗ, ಗೋಲೀಬಾರ್ ನಡೆದವು. ಕಾರ್ಮಿಕರ ಮುಷ್ಕರ ಮತ್ತು ರೈಲ್ವೇ ಮುಷ್ಕರ ನಡೆದವು. ಪೊಲೀಸರೂ ಸಹಾ ಮುಷ್ಕರ ಹೂಡಿದರು. ಒಂದು ತಿಂಗಳೊಳಗೆ ಸರ್ಕಾರದ ಎಲ್ಲ ವರ್ಚಸ್ಸೂ ಶಕ್ತಿಯೂ ಕಂಪಿಸಿತು. 1947ರ ಅಕ್ಟೋಬರ್ 6ರಂದು ಬಂಧಿಗಳನ್ನೆಲ್ಲಾ ಖುಲಾಸೆ ಮಾಡಲು ಸರ್ಕಾರವು ನಿಶ್ಚಯಿಸಿತು. ಅಕ್ಟೋಬರ್ 9ರಂದು ದಿವಾನರ ಮತ್ತು ಕೆ.ಸಿ.ರೆಡ್ಡಿಯವರ ಭೇಟಿ ನಡೆಯಿತು.

ಅಕ್ಟೋಬರ್ 11ರಂದು ಸರ್ಕಾರ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದ ಏರ್ಪಟ್ಟಿತು. ಕಾಂಗ್ರೆಸ್ ಅಧ್ಯಕ್ಷರೂ ಆರು ಮಂದಿ ನಾಯಕರೂ ಮರು ದಿನ ಅರಮನೆಯಲ್ಲಿ ಮಹಾರಾಜರನ್ನು ಭೇಟಿ ಮಾಡಿದರು. 13ರಂದು ಸರ್ಕಾರವು ಆಜ್ಞೆ ಹೊರಡಿಸಿ, ಪ್ರಜಾಪ್ರತಿನಿಧಿಗಳಿಂದ ಕೂಡಿದ ಮಂತ್ರಿಮಂಡಲ ಸ್ಥಾಪನೆಯಾಗಿದೆ ಎಂದು ಸಾರಿತು - ರಾಜಕೀಯ ಬಂಧಿಗಳೆಲ್ಲಾ ಬಿಡುಗಡೆಯಾದರು.

1947ರ ಆಗಸ್ಟ್ 15 ಭಾರತಕ್ಕೆ ಮಹಾದಿನದಂತೇ ಅಕ್ಟೋಬರ್ 24 ಮೈಸೂರಿಗೆ ನಿಜವಾದ ವಿಜಯ ದಶಮಿ. ಕೆ.ಸಿ.ರೆಡ್ಡಿಯವರ ನಾಯಕತ್ವದಲ್ಲಿ ಅಂದು ಮೊದಲು ಮೈಸೂರು ಮಂತ್ರಿಮಂಡಲ ರಚನೆಯಾಯಿತು.

(ವಿದ್ಯಾರ್ಥಿ ದೆಸೆಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದ, ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕ ದಿವಂಗತ ಹೆಚ್.ಆರ್.ನಾಗೇಶರಾವ್ ಅವರು ಐದು ದಶಕಗಳ ಹಿಂದೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೈಸೂರು ಸಂಸ್ಥಾನದ ಪಾತ್ರದ ಬಗ್ಗೆ ಬರೆದ ಸುದೀರ್ಘ ಲೇಖನದ ಸಾರ ಸಂಗ್ರಹ.)

ಕೃಪೆ: ವಿಜಯ ಕರ್ನಾಟಕ, ದಿನ ಪತ್ರಿಕೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

Antiquity of Karnataka

Antiquity of Karnataka The Pre-history of Karnataka traced back to paleolithic hand-axe culture. It is also compared favourably with the one that existed in Africa and is quite distinct from the Pre-historic culture that prevailed in North India.The credit for doing early research on ancient Karnataka goes to Robert Bruce-Foote. Many locales of Pre-noteworthy period have been discovered scattered on the stream valleys of Krishna, Tungabhadra, Cauvery, Bhima, Ghataprabha, Malaprabha, Hemavathi, Shimsha, Manjra, Netravati, and Pennar and on their tributaries. The disclosure of powder hills at Kupgal and Kudatini in 1836 by Cuebold (a British officer in Bellary district), made ready for the investigation of Pre-notable examinations in India.   Some of the important sites representing the various stages of Prehistoric culture that prevailed in Karnataka are Hunasagi,Kaladevanahal li, Tegginahalli, Budihal, Piklihal, Kibbanahalli, Kaladgi, Khyad, Nyamati, Nittur, Anagavadi, Balehonnur a...