ಕರ್ನಾಟದಲ್ಲಿ ಪ್ರದರ್ಶನ ಕಲೆಗಳು
ಕರ್ನಾಟಕದಲ್ಲಿ ಸಂಗೀತ
ಭಾರತೀಯ ಶಾಸ್ತ್ರೀಯ ಸಂಗೀತವು, ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತ ಎಂಬ ಎರಡು ಪ್ರಕಾರಗಳನ್ನು ಹೊಂದಿದೆ. ಕುತೂಹಲಕಾರಿ ಅಂಶವೆಂದರೆ ಇವೆರಡೂ ಪ್ರಕಾರಗಳು ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವುದು. ತುಂಗಭದ್ರಾ ನದಿಯು ರಾಜ್ಯದಲ್ಲಿ ಹೆಚ್ಚು ಕಡಿಮೆ ಇವೆರಡು (ಪ್ರಕಾರಗಳ) ಗಡಿಯನ್ನು ವಿಭಜಿಸುತ್ತದೆ. ‘ಕರ್ನಾಟಕ ಎಂಬ ಪದ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಪ್ರಚಲಿತವಿರುವ ಸಂಗೀತ ಸಂಪ್ರದಾಯವನ್ನು ಸೂಚಿಸುತ್ತದೆ. ಈ ಸಂಗೀತ ವಿಕಾಸವಾಗುವಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ.
ಸಂಗೀತವು, ಸಾಹಿತ್ಯ ಹಾಗೂ ಇತರೆ ಸೃಜನಶೀಲ ಕಲೆಗಳಂತೆ ಕರ್ನಾಟಕದಲ್ಲಿ ಪ್ರಾಚೀನಕಾಲದಿಂದಲೂ ಕೃಷಿಗೊಳ್ಳುತ್ತ ಬಂದಿದೆ. ಅದು ಇಲ್ಲಿನ ಜನರ ಸಾಮಾಜಿಕ, ಧಾರ್ಮಿಕ ಬದುಕಿನಲ್ಲಿ ಅವಿಭಾಜ್ಯ ಭಾಗವಾಗಿ ಬಂದಿದೆ. ಸಂಗೀತ ಪಠ್ಯಗಳು ಸಾಮಾನ್ಯವಾಗಿ ಪ್ರಾಚೀನ ಸಂಗೀತ ಸಿದ್ಧಾಂತಕಾರರನ್ನು ಹೆಸರಿಸುತ್ತವೆಯೇ ವಿನಃ ಸಂಗೀತದ ಪರಿಕಲ್ಪನೆಗೆ ಒಂದು ಸುಸ್ವರೂಪ ಕೊಟ್ಟ ಹಾಡುಗಾರರ ಹೆಸರನ್ನು ಹೇಳುವುದಿಲ್ಲ. ಭರತನ ನಾಟ್ಯ ಶಾಸ್ತ್ರವು ಬಹುಶಃ ಸಂಗೀತ ಶಾಸ್ತ್ರ ಕುರಿತ ಅತ್ಯಂತ ಪ್ರಾಚೀನ ಗ್ರಂಥವೆನ್ನಬಹುದಾಗಿದೆ. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ಅದು ಜನಬಳಕೆಯಲ್ಲಿದ್ದಂತೆ ತೋರುತ್ತದೆ. ಈ ಪೈಕಿ ಮತಂಗನ ‘ಬೃಹದ್ದೇಶಿ ಗ್ರಂಥವು ಬಹಳ ಗಮನಾರ್ಹ ಕೃತಿಯಾಗಿ ಕಾಣಬರುತ್ತದೆ. ಈ ಗ್ರಂಥದಲ್ಲಿ ಸಂಗೀತ ಶಾಸ್ತ್ರದ ವಿಶಾಲ ವೈಜ್ಞಾನಿಕ ವಿವರಣೆ ಇದೆ. ಆ ಕಾಲದ ಪ್ರಚಲಿತ ಸ್ವರವಿನ್ಯಾಸಗಳಿಗೆ ಮೊಟ್ಟ ಮೊದಲಿಗೆ ‘ರಾಗ ಎಂಬ ಶಬ್ದವನ್ನು ಬಳಸಿದ್ದಾನೆ. ಬಹುಶಃ ಇಂದಿನ ಸಂಗೀತದ ರಾಗ ಪದ್ಧತಿಗೆ ಇದು ಆಧಾರವಾಗಿರುವಂತಿದೆ. ದೇವಗಿರಿಯ ಯಾದವ (ಸೇವುಣ) ದೊರೆಗಳ ಆಶ್ರಿತನಾಗಿದ್ದ ಶಾಙ್ಗದೇವನು ತನ್ನ ಕೃತಿ ಸಂಗೀತರತ್ನಾಕರದಲ್ಲಿ ೨೬ ರಾಗಗಳ ಕುರಿತು ಹೇಳಿದ್ದಾನೆ. ಸುಮಾರು ೧೧ ಮತ್ತು ೧೭ ನೆಯ ಶತಮಾನಗಳಲ್ಲಿ ೩೨ ರಾಗಗಳು ಮಾತ್ರ ಚಾಲ್ತಿಯಲ್ಲಿದ್ದುವು ಎಂಬ ಅಂಶ ಬಸವಣ್ಣನ ವಚನದಿಂದ ವಿದಿತವಾಗುತ್ತದೆ. ಕ್ರಿ.ಶ. ೧೬೬೦ರ ವೆಂಕಟಮುಖಿಯು ೭೨ ಮೇಳ ಕರ್ತ ರಾಗಗಳನ್ನು ಸೂತ್ರೀಕರಿಸಿ ಸ್ವರ ವಿನ್ಯಾಸಗೊಳಿಸಿ ರಾಗಗಳ ವರ್ಗೀಕರಣ ಕಾರ್ಯವನ್ನು ಪೂರ್ಣಗೊಳಿಸಿದ್ದು ಕಂಡುಬರುತ್ತದೆ.
ಕರ್ನಾಟಕದ ಗ್ರಂಥಕರ್ತರಿಂದ ಬಹುಸಂಖ್ಯೆಯಲ್ಲಿ ಸಂಗೀತ ಮತ್ತು ನೃತ್ಯಗಳ ಬಗ್ಗೆ ಮೀಮಾಂಸೆ ಗ್ರಂಥಗಳು ಬರೆಯಲ್ಪಟ್ಟಿವೆ. ಅವುಗಳಲ್ಲಿ ‘ರಾಜಮಾನಸೋಲ್ಲಾಸ ಎಂದು ಕರೆಯಲ್ಪಡುವ ‘ಅಭಿಲಾಷಿತಾರ್ಥ ಚಿಂತಾಮಣಿ, ಹರಿಪಾಲನ ಭಾರತಭಾಷ್ಯ, ಸಂಗೀತ ಸುಧಾಕರ, ಸಂಗೀತ ಚೂಡಾಮಣಿ, ವಿದ್ಯಾರಣ್ಯರ ‘ಸಂಗೀತಸಾರ, ‘ಭಾರತಸಾರ ಸಂಗ್ರಹ, ನಿಜಗುಣ ಶಿವಯೋಗಿಗಳ ವಿವೇಕಚಿಂತಾಮಣಿ, ಭಂಡಾರು ಲಕ್ಷ್ಮೀನಾರಾಯಣನ ಸಂಗೀತ ಸೂರ್ಯೋದಯ, ಗೋಪತಿಪ್ಪನ ತಾಳದೀಪಿಕಾ, ರಾಮಾಮಾತ್ಯನ ಸ್ವರಮೇಳ ಕಳಾನಿಧಿ, ಗೋವಿಂದ ದೀಕ್ಷಿತನ ಸಂಗೀತ ಸುಧಾ, ವೆಂಕಟಮುಖಿಯ ಚತುರ್ದಂಡಿ ಪ್ರಕಾಶಿಕೆ, ಪುಂಡರೀಕ ವಿಠಲ ವಿರಚಿತ ಷಡ್ರಾಗ ಚಂದ್ರೋದಯ, ರಾಗ ಮಂಜರಿ, ರಾಗ ಮಾಲ ಮತ್ತು ನರ್ತನ ನಿರ್ಣಯ, ಇಮ್ಮಡಿ ಬಸವಪ್ಪ ನಾಯಕನ ಶಿವತತ್ವ ರತ್ನಾಕರ, ೨೦ನೇ ಶತಮಾನದ ದಿ. ಹುಲಗೂರು ಕೃಷ್ಣಚಾರ್ಯರ ಶ್ರುತಿ ಸಿದ್ಧಾಂತ ಹಾಗೂ ಮೈಸೂರಿನ ಡಾ. ರಾ. ಸತ್ಯನಾರಾಯಣರ ನಿಶ್ಯಂಕ ಹೃದಯ ಮುಂತಾದವು ಮುಖ್ಯ ಕೃತಿಗಳಾಗಿವೆ. ಕರ್ನಾಟಕದಲ್ಲಿ ವೈವಿಧ್ಯಮಯ ವಾದ್ಯಗಳು ಬಳಕೆಯಲ್ಲಿದ್ದವು. ಕನ್ನಡ ಕವಿಗಳಿಗೆ ತಂತಿವಾದ್ಯ, ಗಾಳಿವಾದ್ಯ ತಾಳವಾದ್ಯ (ತಾಡನ) ಮತ್ತು ಘನವಾದ್ಯಗಳೆಂಬ ನಾಲ್ಕು ಬಗೆಯ ಶಾಸ್ತ್ರೀಯ ವಾದ್ಯ ಪ್ರಕಾರಗಳ ಸಂಪೂರ್ಣ ತಿಳಿವಳಿಕೆ ಇತ್ತು. ಇಂದು ರೂಢಿಯಲ್ಲಿಲ್ಲದ ಅನೇಕ ವಾದ್ಯೋಪಕರಣಗಳ ಪರಿಚಯವೂ ಅವರಿಗಿದ್ದುದು ಆಶ್ಚರ್ಯಕರ.
ತಂತಿವಾದ್ಯಗಳ ಪೈಕಿ ಕಿನ್ನರಿ, ವೆಲ್ಲಕಿ, ವಿಪಂಚಿ, ರಾವಣಹಸ್ತ, ದಂಡಿಕ, ತ್ರಿಸರಿ, ಜಂತ್ರ, ಸ್ವರಮಂಡಲ, ಮತ್ತು ಪರಿವಾದಿನಿ ಮುಂತಾದವು ಗಮನಾರ್ಹ. ಶಂಖ, ಶೃಂಗ, ತಿತ್ತಿರ, ಕಹಳೆ, ವಂಶ, ಬೊಂಬುಳಿ ಇತ್ಯಾದಿಗಳು ಗಾಳಿವಾದ್ಯಗಳಾಗಿವೆ. ಅಧಿಕ ಸಂಖ್ಯೆಯಲ್ಲಿರುವ ತಾಳ (ತಾಡನ) ವಾದ್ಯಗಳ ಪೈಕಿ, ಮುಖ್ಯವಾದ ತಾಳ (ತಾಡ) ಕರಡಿ, ಮೃದಂಗ, ತಬಲ, ತಮಟೆ, ಢಕ್ಕೆ, ಪಟಹ, ದುಂದುಭಿ, ಪಣವ, ಭೇರಿ, ಡಿಂಡಿಮ, ತ್ರಿವಳಿ, ನಿಸ್ಸಳ, ಢಮರು, ಚಂಬಕ, ದಂಡೆ, ಡೊಳ್ಳು, ಡೋಲು ಮತ್ತು ರುಂಜಗಳನ್ನು ಮುಖ್ಯವಾಗಿ ಹೆಸರಿಸಲಾಗುತ್ತದೆ. ಘನವಾದ್ಯಗಳಾದ ಘಂಟೆ, ಜಯಗಂಟೆ ಕಿಂಕಿಣಿ, ಝಲ್ಲರಿ, ತಾಳ ಮತ್ತು ಕಂಸಾಳೆ ಮುಂತಾದವು ಕಂಡುಬರುತ್ತವೆ. ಪಾಲ್ಕುರಿಕೆ ಸೋಮನಾಥನು ೩೨ ಬಗೆಯ ವೀಣೆ ಮತ್ತು ೧೮ ಬಗೆಯ ಕೊಳಲುಗಳನ್ನು ಹೆಸರಿಸಿದ್ದಾನೆ.
ಖಂಡ, ಶುಕಸಾರಿಕ, ತ್ರಿಪದಿ, ಚತುಷ್ಪದಿ, ಷಟ್ಪದಿ, ಧವಳ, ಸುಳಾದಿ, ಪದ, ವಚನ, ಕೀರ್ತನ, ತತ್ವ, ಉಗಾಭೋಗಗಳು ಪದ್ಯ ರಚನೆಯ ವಿಧಗಳಾಗಿವೆ. ಕರ್ನಾಟಕದಲ್ಲಿ ಹಿಂದಿನಿಂದಲೂ ಜನಪ್ರಿಯವಾಗಿದ್ದು ಇಂದಿಗೂ ಪ್ರಸ್ತುತವೆನಿಸಿರುವ ರಚನೆಗಳನ್ನು ಹಲವಾರು ಸಂಗೀತ ರಚನಕಾರರು ರಚಿಸಿದ್ದಾರೆ. ಅಂತಹವರಲ್ಲಿ, ಸಕಲೇಶ ಮಾದರಸ, ಬಸವಣ್ಣ, ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಬಾಲಲೀಲಾ ಮಹಂತ ಶಿವಯೋಗಿ, ನಾಗಭೂಷಣ, ಘನಮತಾಚಾರ್ಯ, ಮಡಿವಾಳಪ್ಪ ಕಡಕೊಳ, ನಂಜುಂಡ ಶಿವಯೋಗಿ, ಕರಿಬಸವಸ್ವಾಮಿ ಹಾಗೂ ಸರ್ಪಭೂಷಣ ಶಿವಯೋಗಿ ಮುಂತಾದವರು ಪ್ರಮುಖರು. ಮಧ್ವಾಚಾರ್ಯರ ಶಿಷ್ಯರಾದ ನರಹರಿ ತೀರ್ಥರು ಹರಿದಾಸ ಕೂಟವನ್ನು ಸ್ಥಾಪಿಸಿದರೆನ್ನಲಾಗಿದೆ. ಶ್ರೀಪಾದರಾಯರನ್ನು ಹರಿದಾಸ ಪಿತಾಮಹರೆನ್ನುತ್ತಾರೆ. ಹರಿದಾಸರು ಭಗವಾನ್ ವಿ?ವನ್ನು ಸ್ತುತಿಸುವ ಗೀತೆಗಳನ್ನು ಕನ್ನಡದಲ್ಲಿ ರಚಿಸಿರುವರು. ವ್ಯಾಸರಾಯ, ವಾದಿರಾಜ, ಪುರಂದರದಾಸ, ಕನಕದಾಸ, ಮೊದಲಾದವರು ಕೀರ್ತನೆಗಳನ್ನು ರಚಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರು ಕೂಡ ಸಮರ್ಥ ಗೀತ ರಚನಕಾರರಾಗಿದ್ದರು. ಜಯಚಾಮರಾಜ ಒಡೆಯರ್ ಅವರು ಕರ್ನಾಟಕ ಸಂಗೀತ ಪದ್ದತಿಯಲ್ಲಿ ವಿವಿಧ ಭಾಷೆಗಳಲ್ಲಿ ೯೪ ಕೃತಿಗಳನ್ನು ರಚಿಸಿದ್ದಾರೆ.
ಕರ್ನಾಟಕದ ಸಂಗೀತಶಾಸ್ತ್ರದ ಚರಿತ್ರೆಯಲ್ಲಿ ಪುರಂದರದಾಸರು ತ್ರಿವಿಕ್ರಮನಂತೆ ಬೆಳೆದವರು. ಅವರು ರಚಿಸಿದ ‘ಪಿಳ್ಳಾರಿಗೀತೆಗಳು ಕರ್ನಾಟಕ ಸಂಗೀತವನ್ನು ಕಲಿಯುವವರಿಗೆ ಇಂದಿಗೂ ಆಧಾರಸ್ತಂಭದಂತಿವೆ. ಪುರಂದರದಾಸರನ್ನು ಕರ್ನಾಟಕ ಸಂಗೀತ ಪಿತಾಮಹರೆಂದು ಗೌರವಿಸಲಾಗಿದೆ. ಅವರು ಕರ್ನಾಟಕ ಸಂಗೀತ ಪ್ರವಾಹಕ್ಕೆ ಹೊಸ ತಿರುವು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಜನಪ್ರಿಯ ಹಾಗೂ ಶಾಸ್ತ್ರೀಯ ಸಂಗೀತ ರಚನೆಯಲ್ಲಿ ಸ್ಪರ್ಷವಾದ ಭಿನ್ನತೆ ಕಂಡು ಬಂದಿತು. ಮೈಸೂರು ಆಸ್ಥಾನ ವಿದ್ವಾಂಸರಾದ ಮೈಸೂರು ಸದಾಶಿವರಾಯರು, ವೀಣೆ ಸುಬ್ಬಣ್ಣ, ವೀಣೆ ಶೇಷಣ್ಣ, ಮುಂತಾದ ಪ್ರಖ್ಯಾತರಿಗೆ ಗುರುವಾಗಿದ್ದರು. ಮೈಸೂರು ಸದಾಶಿವರಾವ್ ಸುಬ್ಬಣ್ಣ, ಶೇಷಣ್ಣ, ಸಾಂಬಯ್ಯ, ಮುತ್ತಯ್ಯ ಭಾಗವತರ್, ಮೈಸೂರು ಕೆ.ವಾಸುದೇವಾಚಾರ್ಯ (ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಯ ವಾಗ್ಗೇಯಕಾರರು), ದೇವೋತ್ತಮ ಜೋಯಿಸ್, ಕರಿಗಿರಿರಾವ್, ಬಿಡಾರಂ ಕೃಷ್ಣಪ್ಪ, ಮೈಸೂರು ಟಿ.ಚೌಡಯ್ಯ ಜಯಚಾಮರಾಜ ಒಡೆಯರ್, ಅಳಿಯ ಲಿಂಗರಾಜು, ವೀಣೆ ಕೃಷ್ಣಚಾರ್ಯ ರುದ್ರಪಟ್ಟಣಂ ವೆಂಕಟರಮಣಯ್ಯ, ತಿರುಪ್ಪಾಂಡಾಳ್ ಪಟ್ಟಾಭಿರಾಮಯ್ಯ, ಕೋಲಾರ ಚಂದ್ರಶೇಖರ ಶಾಸ್ತ್ರಿ, ಬಳ್ಳಾರಿ ರಾಜಾರಾವ್ ಮತ್ತಿತರರು ತಮ್ಮ ವಾಗ್ಗೇಯ ಕೃತಿಗಳ ಶ್ರೀಮಂತ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಸಂಗೀತ ವಿದೂಷಿಯರ ಪೈಕಿ, ಬೆಂಗಳೂರು ನಾಗರತ್ನಮ್ಮನವರು ಶ್ರೀ ತ್ಯಾಗರಾಜರ ಸಮಾಧಿಯನ್ನು ತಿರುವೈಯಾರಿನಲ್ಲಿ ಜೀರ್ಣೋದ್ಧಾರ ಮಾಡಿದರು.
ಮೈಸೂರು ಒಡೆಯರ ಆಳ್ವಿಕೆಯ ಕಾಲವನ್ನು ಕರ್ನಾಟಕ ಸಂಗೀತದ ಸುವರ್ಣಯುಗವೆಂದು ಹೇಳಬಹುದು. ಮೈಸೂರು ಅರಸರು ಸ್ಥಳೀಯ ಸಂಗೀತಗಾರರಿಗಲ್ಲದೇ ಇತರೆ ಪ್ರದೇಶದ ಸಂಗೀತಗಾರರಿಗೂ ಆಶ್ರಯದಾತರಾಗಿದ್ದರು. ವೀಣೆ ಭಕ್ಷಿ ವೆಂಕಟಸುಬ್ಬಯ್ಯ, ಶಿವರಾಮಯ್ಯ, ಪಲ್ಲವಿ ರಾಮಲಿಂಗಯ್ಯ ಮತ್ತು ಲಕ್ಷ್ಮೀನಾರಾಯಣ ಅವರುಗಳು ರಾಜ್ಯದ ಪ್ರಮುಖ ಸಂಗೀತಗಾರರೆನಿಸಿದ್ದು ರಾಜಾಶ್ರಯವನ್ನು ಪಡೆದವರಾಗಿದ್ದರು. ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದು ಅಥವಾ ಬೇರೆಡೆ ವಾಸವಿದ್ದವರೂ ಸೇರಿದಂತೆ ಉಳಿದ ಪ್ರಸಿದ್ಧ ಸಂಗೀತಗಾರರೆಂದರೆ, ಸದಾಶಿವರಾಯರು, ಲಾಲ್ಗುಡಿ ರಾಮಯ್ಯರ್, ಮೂಗೂರು ಸುಬ್ಬಣ್ಣ, ಕೃಷ್ಣಯ್ಯ, ಕರಿಗಿರಿರಾಯರು, ಭೈರವಿ ಕೆಂಪೇಗೌಡ, ರುದ್ರಪ್ಪ, ಜಂಝ ಮಾರುತಮ್ ಸುಬ್ಬಯ್ಯ, ಲಾಲ್ಗುಡಿ ಗುರುಸ್ವಾಮಿ ಐಯ್ಯರ್, ಬಿಡಾರಂ ಕೃಷ್ಣಪ್ಪ, ಕೆ.ವಾಸುದೇವಚಾರ್ಯ, ತಿರುವೈಯ್ಯಾರು ಸುಬ್ರಮಣ್ಯ ಅಯ್ಯರ್, ಕೋಲಾರ ನಾಗರತ್ನಮ್ಮ, ಷಟ್ಕಾಲ ನರಸಯ್ಯ, ಚಿಕ್ಕರಾಮರಾವ್, ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್, ಚಿಂತಲಪಲ್ಲಿ ವೆಂಕಟರಾವ್, ಬಿ.ದೇವೇಂದ್ರಪ್ಪ, ಟಿ.ಚೌಡಯ್ಯ ಮುಂತಾದವರು.
ಹಿಂದೂಸ್ಥಾನಿ ಸಂಗೀತ: ಮಾಗಡಿ ಬಳಿಯ ಸಾತನೂರಿನ ಪುಂಡರೀಕ ವಿಠಲನು (ಕ್ರಿ.ಶ.೧೫೬೨-೧೫೯೯) ಕರ್ನಾಟಕ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತಗಳೆರಡರಲ್ಲೂ ಪ್ರವೀಣನಾಗಿದ್ದನು. ಮೈಸೂರು ಅರಸರು ಪ್ರಮುಖವಾಗಿ ಕರ್ನಾಟಕ ಸಂಗೀತಕ್ಕೆ ಆಶ್ರಯದಾತರಾಗಿದ್ದರೂ, ಹಿಂದೂಸ್ಥಾನಿ ಸಂಗೀತಕ್ಕೂ ಉತ್ತೇಜನ ನೀಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ರಾಮದುರ್ಗ ಮತ್ತು ಜಮಖಂಡಿಯಂಥ ಸಣ್ಣ ಸಂಸ್ಥಾನಿಕರು ಹಿಂದೂಸ್ಥಾನಿ ಸಂಗೀತಕ್ಕೆ ಆಶ್ರಯದಾತರಾಗಿದ್ದರು. ಅವರ ದರ್ಬಾರಿನಲ್ಲಿ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಗಾರರಿದ್ದರು. ಬಾಲಕೃಷ್ಣ ರಾಸ್ತೆ, ಗಣಪತ್‌ರಾವ್ ರಾಸ್ತೆ, ನಂದೋಪಂತ್ ಜೋಗಳೇಕರ್, ಬಲವಂತರಾವ್ ವೈದ್ಯ, ದಾದಾಖಾರೆ, ಅಂತುಬುವಾ ಆಪ್ಟೆ, ಬಲವಂತರಾವ್ ಕಾಟ್ಕರ್, ಅಲ್ಲಾದಿಯಾ ಖಾನ್, ಅಬ್ದುಲ್ ಕರೀಮ್ ಖಾನ್, ರಹಮತ್ ಖಾನ್, ರಾಮಕೃಷಷ್ಣ ಬುವಾ ವಜೆ, ಶಿವರಾಂ ಬುವಾ, ಮುಂಜೀಖಾನ್, ವಿಷ್ಣುಪಂತ್ ಛತ್ರೆ, ನೀಲಕಂಠ ಬುವಾ, ಶಂಕರ ದೀಕ್ಷಿತ್ ಜಂತಲಿ, ಸಿದ್ಧರಾಮ ಜಂಬಲದಿನ್ನಿ, ದತ್ತೋಪಂತ್ ಪಾಠಕ್, ಪಂಚಾಕ್ಷರಿ ಗವಾಯಿ, ಹನುಮಂತರಾವ್ ವಾಲ್ವೇಕರ್, ವಿಠಲರಾವ್ ಕೋರೆಗಾಂವ್ಕರ್ ಮತ್ತು ರಾಮಬಾಹು ಕುಂದಗೋಳ್ಕರ್ (ಸವಾಯಿ ಗಂಧರ್ವ) ಮುಂತಾದ ಪ್ರಖ್ಯಾತ ಹಿಂದೂಸ್ಥಾನಿ ಸಂಗೀತಗಾರರು ಉತ್ತರ ಕರ್ನಾಟಕದಲ್ಲಿದ್ದು ತಮ್ಮ ಅಸಾಮಾನ್ಯ ಸಂಗೀತ ಪ್ರಭೆಯಿಂದ ತಾವಿದ್ದ ಪ್ರದೇಶಕ್ಕೆ ಶೋಭೆಯನ್ನು ಹಾಗೂ ಧನ್ಯತೆಯನ್ನು ತಂದುಕೊಟ್ಟರು.
ಕರ್ನಾಟಕದಿಂದ ಹಿಂದೂಸ್ಥಾನಿ ಸಂಗೀತದ ದಿಗ್ಗಜರೆನಿಸಿದ ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ಭೀಮಸೇನ ಜೋಶಿ, ಕುಮಾರ ಗಂಧರ್ವ, ದೇವೇಂದ್ರ ಮುರಡೇಶ್ವರ್, ವಿಷ್ಣುದಾಸ್ ಶಿರಾಲಿ, ಪುಟ್ಟರಾಜ ಗವಾಯಿ, ಬಸವರಾಜ ಮನ್ಸೂರ್, ಕೃಷ್ಣಬಾಯಿ ರಾಮದುರ್ಗ, ಫಕೀರಪ್ಪ ಗವಾಯಿ, ಪಂ. ಶೇಷಾದ್ರಿಗವಾಯಿ, ಗುರುಬಸವಯ್ಯ ಹಿರೇಮಠ, ವಿ.ವಿ.ಉತ್ತರಕರ್, ಡಿ.ಗರೂಡ, ಎನ್.ಜಿ. ಮಜುಮ್‌ದಾರ್, ಆರ್.ಎಸ್.ದೇಸಾಯಿ, ಅರ್ಜುನ್‌ಸಾ ನಾಕೋಡ್, ಶೇಷಗಿರಿ ಹಾನಗಲ್, ಲಕ್ಷ್ಮೀ ಜಿ.ಭಾವೆ, ಮಾಣಿಕ್‌ರಾವ್ ರಾಯಚೂರ್‌ಕರ್, ಸಂಗಮೇಶ್ವರ್ ಗುರವ ಮತ್ತು ಶ್ಯಾಮಲಾ ಜಿ. ಭಾವೆ ಪ್ರಖ್ಯಾತರಾಗಿದ್ದಾರೆ. ಕರ್ನಾಟಕ ಸಂಗೀತ ಪರಂಪರೆಯನ್ನು ಅನೇಕ ಗಾಯಕರು ಮತ್ತು ವಾದ್ಯ ಸಂಗೀತಗಾರರು ತಮ್ಮ ಪ್ರತಿಭಾ ಶಕ್ತಿಯಿಂದ ಶ್ರೀಮಂತಗೊಳಿಸಿದ್ದು, ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನೂ ಗಳಿಸಿದ್ದಾರೆ. ಹಾಡುಗಾರಿಕೆಯಲ್ಲಿ ಚಿಂತನಪಲ್ಲಿ ರಾಮಚಂದ್ರರಾವ್, ಚನ್ನಕೇಶವಯ್ಯ, ಪದ್ಮನಾಭರಾವ್, ಟಿ.ಎನ್.ಪುಟ್ಟಸ್ವಾಮಯ್ಯ, ಆರ್.ಎಸ್.ನಾರಾಯಣಸ್ವಾಮಿ, ಆರ್.ಕೆ.ರಾಮನಾಥನ್, ಆರ್. ಕೆ.ಶ್ರೀಕಂಠನ್, ಕುರೂಡಿ ವೆಂಕಣ್ಣಾಚಾರ್ಯ, ತಿಟ್ಟೆ ಕೃಷ್ಣಯ್ಯಂಗಾರ್, ಎಲ್.ಎಸ್.ನಾರಾಯಣಸ್ವಾಮಿ ಭಾಗವತರ್, ಬಿ.ಎಸ್.ಆರ್. ಐಯ್ಯಂಗಾರ್, ಎ.ಸುಬ್ಬರಾವ್, ಆರ್.ಚಂದ್ರಶೇಖರಯ್ಯ, ಪಲ್ಲವಿ ಚಂದ್ರಪ್ಪ ಎಂ.ಎ. ನರಸಿಂಹಾಚಾರ್, ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ಸಂಧ್ಯಾವಂದನಮ್ ಶ್ರೀನಿವಾಸರಾವ್, ಶ್ರೀನಿವಾಸಯ್ಯಂಗಾರ್, ವಸದಂ ಅಯ್ಯಂಗಾರ್, ಚೊಕ್ಕಮ್ಮ, ನೀಲಮ್ಮ ಕಡಾಂಬಿ, ಚನ್ನಮ್ಮ, ಪಾಪ ಚೂಡಾಮಣಿ ಮುಂತಾದವರು ಬಹಳ ಪ್ರಸಿದ್ಧರು.
ವಾದ್ಯ ಸಂಗೀತಗಾರರ ಪೈಕಿ ವೀಣಾವಾದಕರಾದ ಶ್ರೀಕಂಠ ಅಯ್ಯರ್, ವಿ.ದೊರೆಸ್ವಾಮಿ ಅಯ್ಯಂಗಾರ್, ಬಾಲಕೃಷ್ಣ, ಆರ್.ಎನ್.ದೊರೆಸ್ವಾಮಿ, ಎಂ.ಜೆ.ಶ್ರೀನಿವಾಸ ಐಯ್ಯಂಗಾರ್, ಆರ್.ಕೆ.ಶ್ರೀನಿವಾಸಮೂರ್ತಿ, ಆರ್.ಕೆ.ಸೂರ್ಯನಾರಾಯಣ, ಆರ್.ಎ.ವಿಶ್ವೇಶ್ವರ, ಚೊಕ್ಕಮ್ಮ, ಆರ್.ಅಲಮೇಲು, ಸುಮಾ ಸುಧೀಂದ್ರ, ಹಾಗೂ ರಾಜಲಕ್ಷ್ಮಿ ತಿರುನಾರಾಯಣ ಪ್ರಸಿದ್ಧರು. ಕೊಳಲುವಾದಕರಲ್ಲಿ ಎಂ.ಆರ್.ದೊರೆಸ್ವಾಮಿ, ಬಿ.ಶಂಕರರಾವ್, ವಿ.ದೇಶಿಕಾಚಾರ್, ಎಂ.ಪಿ.ಉಪಾಧ್ಯಾಯ, ರಾಜನಾರಾಯಣ, ಶಶಿಧರ್ ಮತ್ತು ಶಶಾಂಕ (ಬಾಲ ಪ್ರತಿಭೆ), ಹೆಸರುವಾಸಿಯಾಗಿದ್ದಾರೆ. ಪ್ರಸಿದ್ಧ ಪಿಟೀಲು ವಾದಕರಾಗಿ, ಆರ್.ಆರ್.ಕೇಶವಮೂರ್ತಿ, ಅನೂರ್ ರಾಮಕೃಷ್ಣ, ಎಚ್.ವಿ.ಕೃಷ್ಣಮೂರ್ತಿ, ಎ.ವೀರಭದ್ರಯ್ಯ, ಮಹದೇವಪ್ಪ, ಎಂ.ನಾಗರಾಜ್, ಎಂ.ಮಂಜುನಾಥ್, ಶೇಷಗಿರಿರಾವ್, ಎ.ವಿ.ಕೃಷ್ಣಮಾಚಾರ್, ಹೆಚ್.ಕೆ.ವೆಂಕಟರಾಮ್, ತಾತಾಚಾರ್, ಕಾಂಚನ ಸುಬ್ಬರತ್ನಂ, ಎಂ.ಎಸ್.ಸುಬ್ರಹ್ಮಣ್ಯಂ, ಎಂ.ಎಸ್.ಗೋವಿಂದಸ್ವಾಮಿ, ಎಚ್.ಕೆ.ನರಸಿಂಹಮೂರ್ತಿ, ಟಿ.ಜಿ.ತ್ಯಾಗರಾಜನ್, ಎ.ವಿ.ವೆಂಕಟರಾಮಯ್ಯ, ಬಿ.ವಿಶ್ವನಾಥ್ ಮುಂತಾದವರು ಕಂಡುಬರುತ್ತಾರೆ.
ತಾಳವಾದ್ಯಗಾರರಾದ ಎಂ.ಎಸ್.ರಾಮಯ್ಯ, ವಿ.ವಿ.ರಂಗನಾಥನ್, ರಾಮಾಚಾರ್, ಎಂ.ಎಸ್.ಶೇಷಪ್ಪ ಬೆಂಗಳೂರು, ಕೆ.ವೆಂಕಟರಾಮ್, ಎ.ವಿ.ಆನಂದ್, ಟಿ.ಎ.ಎಸ್ ಮಣಿ, ಕೆ.ಎನ್.ಕೃಷ್ಣಮೂರ್ತಿ, ವಿ.ಎಸ್.ರಾಜಗೋಪಾಲ್, ರಾಜಾಚಾರ್, ರಾಜಕೇಸರಿ, ಚಂದ್ರಮೌಳಿ, ಭದ್ರಾಚಾರ್, ಪ್ರವೀಣ್, ಸೋಸಲೆ ಶೇಷಗಿರಿದಾಸ್, ಬಿ.ಜಿ.ಲಕ್ಷ್ಮೀನಾರಾಯಣ, ಸುಕನ್ಯಾ ರಾಮಗೋಪಾಲ್, ದತ್ತಾತ್ರೇಯ ಶರ್ಮ, ಅನಂತಕೃಷ್ಣಶರ್ಮ ಮತ್ತು ಕೆ.ಮುನಿರತ್ನಂ, ರವೀಂದ್ರ ಯಾವಗಲ್ (ತಬಲಾ), ನಾರಣಪ್ಪ (ಮುಖವೀಣೆ), ರಾಮದಾಸಪ್ಪ, ರವಿಕಿರಣ್ (ಗೋಟುವಾದ್ಯ) ಮತ್ತು ಕದ್ರಿಗೋಪಾಲನಾಥ್ (ಸಾಕ್ಸೋಫೋನ್), ನರಸಿಂಹಲು ವಡವಾಟಿ (ಕ್ಲಾರಿಯೋನೆಟ್), ಬಿಂದು ಮಾಧವ್ ಪಾಠಕ್ (ರುದ್ರವೀಣೆ) ಮತ್ತು ರಾಜೀವ್ ತಾರಾನಾಥ್ (ಸರೋದ್) ಮುಂತಾದ ವಾದ್ಯ ಸಂಗೀತಗಾರರು ಜನಪ್ರಿಯರಾಗಿದ್ದಾರೆ.
ಗಮಕ ಕಲೆಯೂ ಒಂದು ಪ್ರಾಚೀನ ಕಲೆ. ಈ ಕಲೆಯಲ್ಲಿ ಹೆಸರು ಮಾಡಿರುವವರೆಂದರೆ, ಜೋಳದರಾಶಿ ದೊಡ್ಡನಗೌಡ, ಎಸ್. ನಾಗೇಶರಾವ್, ಬಿ.ಎಸ್.ಎಸ್.ಕೌಶಿಕ್, ಹೆಚ್. ಕೆ. ರಾಮಸ್ವಾಮಿ, ಗುಂಡುರಾಮಯ್ಯ, ಎಸ್. ವಾಸುದೇವರಾವ್, ಆರ್.ಶಂಕರನಾರಾಯಣ, ಹೊಸಬೆಲೆ ಸೀತಾರಾಮರಾವ್, ಜಿ.ಬಿ.ಗೋಪಿನಾಥರಾವ್, ತಲಕಾಡು ಮಾಯಿಗೌಡ, ಎಂ.ರಾಘವೇಂದ್ರರಾವ್ ಮುಂತಾದವರು. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಗಮಕ ಕಲಾ ಪರಿಷತ್ ಸ್ಥಾಪಿತವಾಗಿದ್ದು, ಗಮಕ ಕಲೆಯನ್ನು ಪ್ರೋತ್ಸಾಹಿಸುತ್ತಿದೆ.
ಕೃಪೆ: ಕನ್ನಡ ಸಂಸ್ಕೃತಿ ಇಲಾಖೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ