ವಿಷಯಕ್ಕೆ ಹೋಗಿ

ಬೆಳಗಾವಿಯ ರಾಜಹಂಸಗಡ ಕೋಟೆ

ರಾಜಹಂಸಗಡ ಕೋಟೆ

ಬೆಳಗಾವಿ ಭಾಗ ಕೋಟೆ–ಕೊತ್ತಲಗಳಿಗೆ ಹೆಸರುವಾಸಿ. ಇವುಗಳ ಪೈಕಿ ಬೆಳಗಾವಿ ನಗರದಿಂದ 15 ಕಿ.ಮೀ. ದೂರದಲ್ಲಿರುವ ರಾಜಹಂಸಗಡ ಕೋಟೆ ಗಮನಸೆಳೆಯುತ್ತದೆ. ಎತ್ತರದ ಗುಡ್ಡದಂತಹ ಪ್ರದೇಶದಲ್ಲಿರುವುದು ಇದರ ವಿಶೇಷ.

1674ರಲ್ಲಿ ಮರಾಠರಿಂದ ನಿರ್ಮಾಣವಾದ ಕೋಟೆ ಇದು. ಅಲ್ಲಿರುವ ಬಾವಿಯಲ್ಲಿ ವರ್ಷವಿಡೀ ನೀರು ತುಂಬಿರುತ್ತದೆ. ಇದೊಂದು ವಿಶೇಷ. ವೀಕ್ಷಣಾ ಗೋಪುರ. ಗಟ್ಟಿಮುಟ್ಟಾದ ಗೋಡೆಗಳಿದ್ದು, ಹಿಂದಿನ ಕಾಲದ ವಿಶೇಷ ನಿರ್ಮಾಣ ಕೌಶಲಕ್ಕೆ ಕನ್ನಡಿ ಹಿಡಿದಿದೆ. ‘ಬೆಳಗಾವಿ ನಗರದಲ್ಲಿರುವ ಕೋಟೆ ರಕ್ಷಣೆಗಾಗಿ ಈ ಕೋಟೆಯನ್ನು ನಿರ್ಮಿಸಲಾಗಿತ್ತು. ಶತ್ರುಗಳ ಚಲನ–ವಲನದ ಮೇಲೆ ಇಲ್ಲಿಂದ ನಿಗಾ ಇಡಲಾಗುತ್ತಿತ್ತು’ ಎನ್ನುತ್ತದೆ ಇತಿಹಾಸ.

ಬೆಟ್ಟದ ತುದಿಯಲ್ಲಿರುವ ಈ ಕೋಟೆಯನ್ನು ವಿಶೇಷ ವಿನ್ಯಾಸದಲ್ಲಿ ಕಟ್ಟಲಾಗಿದೆ. ಬೇರೆ ಕೋಟೆಗಳಿಗಿಂತ ಭಿನ್ನ. ಕೋಟೆಯ ಆಕಾರ ಗೋವಿನ ಮುಖದಂತಿದೆ. ಮುಖ್ಯದ್ವಾರ ಎರಡು ಗುಮ್ಮಟಗಳ ನಡುವಿದೆ. ಇದು ಹೊರಗೆ ಕಾಣುವುದಿಲ್ಲ. ಶತ್ರುಗಳಿಗೆ ತಕ್ಷಣ ಕೋಟೆ ಕಾಣಬಾರದೆಂದೇ ಈ ರೀತಿ ನಿರ್ಮಿಸಲಾಗಿತ್ತು ಎನ್ನಲಾಗುತ್ತದೆ. ಅಲ್ಲದೆ, ಆನೆಗಳ ಸಹಾಯದಿಂದ ದ್ವಾರದ ಬಾಗಿಲನ್ನು ತೆಗೆಸುವುದಕ್ಕೆ ಆಗುವುದಿಲ್ಲ. ಕಾರಣ, ಪ್ರವೇಶದ್ವಾರದಲ್ಲಿ ಗುಮ್ಮಟಗಳ ಮಧ್ಯೆ ಆನೆ ನಿಲ್ಲುವಷ್ಟು ಸ್ಥಳಾವಕಾಶ ಇಲ್ಲ.

‘ಛತ್ರ‍ಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಪ್ರತಿ ಕೋಟೆಗಳಿಗೆ ಮುಖ್ಯದ್ವಾರ ಮಾತ್ರವಲ್ಲದೇ, 1ರಿಂದ 3 ರಹಸ್ಯ ಮಾರ್ಗಗಳಿರುತ್ತವೆ. ಇವು ಅಷ್ಟು ಸುಲಭವಾಗಿ ಕಾಣಿಸದಂತೆ ಮುಚ್ಚಿರುತ್ತಿದ್ದವಂತೆ. ಶತ್ರುಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು, ದವಸ–ಧಾನ್ಯಗಳನ್ನು ತರಲು ಇವುಗಳನ್ನು ಉಪಯೋಗಿಸುತ್ತಿದ್ದರು’ ಎಂದು ಫಲಕ ಹಾಕಲಾಗಿದೆ. ಒಂದು ಬದಿಯ ರಹಸ್ಯ ದಾರಿ ಬೆಳಗಾವಿಯ ಕೋಟೆ ಆವರಣದಲ್ಲಿರುವ ದುರ್ಗಾದೇವಸ್ಥಾನ ಸಂಪರ್ಕಿಸುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಆದರೆ, ಈಗ ಅದನ್ನು ಮುಚ್ಚಲಾಗಿದೆ.

ಈ ಮೊದಲು ಕೋಟೆಗೆ ಹೋಗಲು ಸರಿಯಾದ ರಸ್ತೆ ಇರಲಿಲ್ಲ. ಈಗ ಡಾಂಬರು ರಸ್ತೆಯಾಗಿದೆ. ಅಲ್ಲಿವರೆಗೂ ಬಸ್‌ ವ್ಯವಸ್ಥೆ ಇಲ್ಲ. ಸ್ವಂತ ವಾಹನದಲ್ಲಿ ಹೋಗುವುದು ಒಳ್ಳೆಯದು. 2017ರಲ್ಲಿ ಸಂಜಯ ಪಾಟೀಲ ಶಾಸಕರಾಗಿದ್ದಾಗ ಶಾಸಕರ ಅನುದಾನದಲ್ಲಿ ಕೋಟೆ ಆವರಣದಲ್ಲಿ ಸಿದ್ದೇಶ್ವರ ದೇವಸ್ಥಾನ ನಿರ್ಮಿಸಿ, ಧಾರ್ಮಿಕ ಸ್ಪರ್ಶ ನೀಡಲಾಗಿದೆ.

ಕೋಟೆಯೊಂದಿಗೆ ದೇವಸ್ಥಾನ ವೀಕ್ಷಣೆ ಬೋನಸ್. ಇಲ್ಲಿಗೆ ಬಂದರೆ ದೇವರ ಪೂಜೆ; ಸ್ವಕಾರ್ಯ ಎರಡೂ ಆಗುತ್ತದೆ.

‌ನಿತ್ಯ ಇಲ್ಲಿಗೆ ನೂರಾರು ಮಂದಿ ಬರುತ್ತಾರೆ. ವಿಶೇಷವಾಗಿ ಕಾಲೇಜು ಯುವಕ, ಯುವತಿಯರ, ಪ್ರೇಮಿಗಳ ಅಚ್ಚುಮೆಚ್ಚಿನ ತಾಣವಾಗಿದೆ. ಅವರು ಸೆಲ್ಫಿ ತೆಗೆದುಕೊಳ್ಳುತ್ತಾ, ಹರಟುತ್ತಾ ಕಾಲ ಕಳೆಯುತ್ತಾರೆ. ವಿಶೇಷವಾಗಿ ಛಾಯಾಗ್ರಾಹಕರಿಗೆ ಇದೊಂದು ರೀತಿ ಬಯಲು ಸ್ಟುಡಿಯೋ ಇದ್ದಂತೆ.

ಯುವಜನರಷ್ಟೇ ಅಲ್ಲ, ಕುಟುಂಬ ಸಮೇತ ಇಲ್ಲಿಗೆ ಬರುವವರೂ ಉಂಟು. ಬುತ್ತಿ ತಂದು ಅಲ್ಲಿಯೇ ಉಂಡು ಹೋಗುತ್ತಾರೆ. ಸುತ್ತಮುತ್ತಲಿನ ಕೆಲವರು ಅಲ್ಲಿಗೆ ಬೆಳಗಿನ ವಾಯುವಿಹಾರ (ಜಾಗಿಂಗ್‌) ಮಾಡಲು ಬರುತ್ತಾರೆ.

ಪ್ರತಿ ದಿನ 300 ರಿಂದ 400 ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಸೋಮವಾರ ಬರುವವರು ಸಿದ್ದೇಶ್ವರ ದೇವಸ್ಥಾನದ ಭಕ್ತರು ಹೆಚ್ಚು.ಕರ್ನಾಟಕವಲ್ಲದೇ, ಮಹಾರಾಷ್ಟ್ರ, ಗೋವಾದಿಂದಲೂ ಪ್ರವಾಸಿಗರೂ ಇಲ್ಲಿಗೆ ಬರುತ್ತಾರೆ. ಕೋಟೆ ಏರಿ ಸಂಭ್ರಮಿಸುತ್ತಾರೆ.

ವಡಗಾವಿಯ ಛತ್ರಪತಿ ಸಂಭಾಜಿ ಮಹಾರಾಜ ಸೇವಾ ಸಂಘದದವರು ಅಗಾಗ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ನಿರ್ಲಕ್ಷಕ್ಕೆ ಒಳಗಾಗಿದ್ದ ಈ ಪಾರಂಪರಿಕ ತಾಣವನ್ನು ಇತ್ತೀಚೆಗೆ ಕೊಂಚ ಅಭಿವೃದ್ಧಿಪಡಿಸಲಾಗಿದೆ.‌ ಮತ್ತಷ್ಟು ಆಕರ್ಷಕಗೊಳಿಸುವುದಕ್ಕೂ ಅವಕಾಶವಿದೆ. ಪ್ರವಾಸೋದ್ಯಮ ಅಥವಾ ಪಾರಂಪರಿಕ ಇಲಾಖೆಯವರು ಇತ್ತ ಗಮನಹರಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಬಹಳಷ್ಟು ಅವಕಾಶವಿದೆ.
ಕೋಟೆಯನ್ನು ಯಾವಾಗ, ಯಾರು ನಿರ್ಮಿಸಿದರು ಎನ್ನುವ ನಿಖರ ಮಾಹಿತಿ ಇಲ್ಲ. ಆದರೆ, ಶಿವಾಜಿ ಮಹಾರಾಜರು ಆಗಾಗ ಕೋಟೆಗೆ ಬಂದು ರಹಸ್ಯ ಸಭೆ ನಡೆಸುತ್ತಿದ್ದರು ಎನ್ನುತ್ತಾರೆ ಹಿರಿಯರು.

ಕೃಪೆ: ಪ್ರಜಾವಾಣಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...