ವಿಷಯಕ್ಕೆ ಹೋಗಿ

ಕರ್ನಾಟಕದ ರಂಗಭೂಮಿ

ಕರ್ನಾಟಕ ರಂಗಭೂಮಿ

ಕನ್ನಡದಲ್ಲಿ ಮೊಟ್ಟಮೊದಲ ನಾಟಕ ರಚನೆಯಾದದ್ದು ೧೭ನೇ ಶತಮಾನದಲ್ಲಿ. ಮೈಸೂರು ಆಸ್ಥಾನ ಕವಿ ಸಿಂಗರಾರ್ಯನು ಬರೆದ ‘ಮಿತ್ರಾವಿಂದ ಗೋವಿಂದ ಎಂಬ ನಾಟಕ. ಶ್ರೀಹರ್ಷ ಸಂಸ್ಕೃತ ಭಾಷೆಯ ‘ರತ್ನಾವಳಿ ನಾಟಕದ ಕನ್ನಡದ ಅವತರಣಿಕೆ ಇದಾಗಿದೆ. ಕರ್ನಾಟಕದಲ್ಲಿ ಸಾಹಿತ್ಯ ಕ್ಷೇತ್ರವು ಬಹಳವಾಗಿ ಸಂಸ್ಕೃತದಿಂದ ಪ್ರಭಾವಿತವಾಗಿದ್ದ ಕಾರಣ, ಸಂಸ್ಕೃತ ನಾಟಕಗಳನ್ನು ಸಾಮಾನ್ಯವಾಗಿ ಎಲ್ಲರೂ ಅರ್ಥಮಾಡಿಕೊಳ್ಳಬಲ್ಲವರಾಗಿದ್ದರು. ಅಂದಿನ ಎಲ್ಲ ಕನ್ನಡ ಕವಿಗಳೂ, ಸಂಸ್ಕೃತ ಮಹಾಕಾವ್ಯದ ಮಾದರಿಯಲ್ಲಿಯೇ ತಮ್ಮ ಕಾವ್ಯಗಳನ್ನು ರಚಿಸುತ್ತಿದ್ದರು. ಅವರು ನಾಟಕ ರಚನೆಗಿಂತ ಕಾವ್ಯ ರಚನೆಯಿಂದ ಹೆಮ್ಮೆ ಪಡುತ್ತಿದ್ದರು. ಹೀಗಾಗಿ ೧೭ ನೆಯ ಶತಮಾನದವರೆಗೆ ಮಾತ್ರ ಸಂಸ್ಕೃತ ನಾಟಕಗಳು ಲಭಿಸುತ್ತವೆ. ಕಾಲಕ್ರಮೇಣ ಪ್ರಸಿದ್ಧ ಕನ್ನಡ ಲೇಖಕರು ಕನ್ನಡದಲ್ಲಿ ನಾಟಕಗಳನ್ನು ಬರೆಯಲು ಉಪಕ್ರಮಿಸಿದರು. ಐತಿಹಾಸಿಕ ನೆಲೆಯಲ್ಲಿ ಈ ಪರಿಸ್ಥಿತಿಯನ್ನು ಗಮನಿಸಿದರೆ, ಆ ಕಾಲಕ್ಕೆ ನಾಟಕಗಳನ್ನು ಬರೆಯುವುದು ಅಸಭ್ಯ ಹಾಗೂ ಕೀಳು ಅಭಿರುಚಿಯೆಂದು ಪರಿಗಣಿಸಲಾಗುತ್ತಿತ್ತೆಂದು ಕಂಡುಬರುತ್ತದೆ.

ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು ಮೌಖಿಕ ಸಂಪ್ರದಾಯದ ಮೂಲಕ ಕನ್ನಡ ಜನತಾ ರಂಗಭೂಮಿಗೆ ಲಭ್ಯವಾದಾಗ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿತು. ಈ ಮಹಾಕಾವ್ಯಗಳ ಕಥೆಗಳೇ ಇಂದಿಗೂ ಕನ್ನಡದ ಬಹುತೇಕ ನಾಟಕಗಳ ಕಥಾವಸ್ತುಗಳಿಗೆ ಮೂಲವಾಗಿವೆ ಎಂಬ ಅಂಶ, ಅಶಿಕ್ಷಿತ ಸಾಮಾನ್ಯ ಜನರ ಮನಸ್ಸಿನ ಮೇಲೆ ಈ ಮಹಾಕಾವ್ಯಗಳು ಬೀರಿರುವ ಪ್ರಭಾವ ಎಷ್ಟೆಂಬುದನ್ನು ಸೂಚಿಸುತ್ತದೆ. ನೃತ್ಯ ಮತ್ತು ಸಂಗೀತಗಳು ನಾಟಕಗಳಲ್ಲಿ ಪ್ರಧಾನವಾಗಿದ್ದವು. ಕ್ರಮೇಣ ನಾಟಕಗಳಲ್ಲಿ ದೇವತೆಗಳು ಜನರನ್ನು ಹರಸಲಿ (ದೇವತೆಗಳನ್ನು ಕೊಂಡಾಡುವಂತೆ) ಎಂಬ ಭಾವ ಇರುವ ರೀತಿಯಲ್ಲಿ ನಾಟಕಗಳ ರಚನೆಯಾಯಿತು. ಇದು ಯಕ್ಷಗಾನ, ಬಯಲಾಟ, ಕೃಷ್ಣ ಪಾರಿಜಾತ ಹಾಗೂ ಜನಪದ ರಂಗಭೂಮಿಯ ವಿವಿಧ ಪ್ರಕಾರಗಳು ಉಗಮವಾಗಲು ಕಾರಣವಾಯಿತು. ಬ್ರಿಟಿಷ್‌ ವಸಾಹತು ಶಾಹಿಯೂ ರಂಗಭೂಮಿಯ ಬೆಳವಣಿಗೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿತು. ಅವರು ತಮ್ಮೊಡನೆ ರಂಗನಾಟಕ ತಂಡಗಳನ್ನು ಕರೆತಂದರು. ಅವು ಷೇಕ್ಸ್‌ಪಿಯರನ ನಾಟಕ ಮತ್ತು ಇತರೆ ಜನಪ್ರಿಯ ಆಂಗ್ಲ ಭಾಷೆ ನಾಟಕಗಳನ್ನು ಪ್ರದರ್ಶಿಸುತ್ತಿದ್ದವು. ಇವುಗಳಿಂದ ಉತ್ತೇಜನಗೊಂಡು, ಆಂಗ್ಲನಾಟಕಗಳು ಕನ್ನಡಕ್ಕೆ ಅನುವಾದಗೊಂಡು ಯಶಸ್ವಿ ರಂಗಪ್ರದರ್ಶನಗಳಾದವು. ಕಾಲಕ್ರಮೇಣ ಜನರ ಅಭಿರುಚಿಗನುಗುಣವಾಗಿ ನೃತ್ಯ ಮತ್ತು ಸಂಗೀತಗಳನ್ನೊಳಗೊಂಡ ನಾಟಕಗಳನ್ನು ರಚಿಸಲಾಯಿತು. ಪ್ರಾರಂಭದ ದಿನಗಳಲ್ಲಿ ಕೆಳಜಾತಿಯ, ಕೂಲಿ ಕೆಲಸ ಮಾಡುತ್ತಿದ್ದ ಅನಕ್ಷರಸ್ಥರು ರಂಗಭೂಮಿಯ ಮೇಲೆ ನಟಿಸುತ್ತಿದ್ದು. ಇದು ಕ್ರಮೇಣ ಬದಲಾಗಿ, ಎಲ್ಲ ಬಗೆಯ ಜನರು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಅನೇಕ ವಿದ್ಯಾವಂತರು ಕೂಡ ಈ ನಾಟಕಗಳಲ್ಲಿ ಅಭಿನಯಿಸ ತೊಡಗಿದರು. ಕೇವಲ ಪುರುಷರು ಮಾತ್ರ ರಂಗದ ಮೇಲೆ ಬಂದು ನಟಿಸುತ್ತಿದ್ದರು. ಸಮಾಜದಲ್ಲಾದ ಬದಲಾವಣೆಗಳ ಫಲವಾಗಿ ಸ್ತ್ರೀಯರೂ ರಂಗಭೂಮಿಯ ಮೇಲೆ ಬಂದು ಅಭಿನಯಿಸಲು ಪ್ರೋತ್ಸಾಹಿಸಲಾಯಿತು. ವೃತ್ತಿಪರ ನಾಟಕ ಕಂಪನಿಗಳು, ರಾಜ್ಯಾದ್ಯಂತ ಸಂಚರಿಸಿ ಅನೇಕ ಕಡೆ ಯಶಸ್ವಿಯಾಗಿ ನಾಟಕ ಪ್ರದರ್ಶಿಸತೊಡಗಿದವು. ಗುಬ್ಬಿ ನಾಟಕ ಕಂಪನಿಯಂತಹ ಕೆಲವು ಪ್ರಸಿದ್ಧ ಹಳೆಯ ನಾಟಕ ಕಂಪನಿಗಳು ರಾಜ್ಯದಲ್ಲಿ ಪ್ರವಾಸ ಮಾಡುತ್ತ ಯಶಸ್ವಿಯಾಗಿ ಪ್ರದರ್ಶನಗಳನ್ನು ನೀಡುತ್ತಿದ್ದುವು. ಅವು ಸ್ವರಾಜ್ಯದಲ್ಲಷ್ಟೆ ಅಲ್ಲದೆ, ನೆರೆರಾಜ್ಯಗಳಲ್ಲೂ ಪ್ರದರ್ಶನ ನೀಡಿ ಉಚ್ಛ್ರಾಯ ಸ್ಥಿತಿಗೇರಿ ಖ್ಯಾತಿ ಪಡೆದಿದ್ದವು. ಉತ್ತರ ಕರ್ನಾಟಕದಲ್ಲಿನ, ಕೊಣ್ಣೂರು ನಾಟಕ ಕಂಪನಿ, ಶಿರಹಟ್ಟಿ ನಾಟಕ ಕಂಪನಿ, ವಿಶ್ವಗುಣಾದರ್ಶ ನಾಟಕ ಕಂಪೆನಿ ಮೊದಲಾದ ಕಂಪನಿಗಳಲ್ಲಿ, ಯಲ್ಲಮ್ಮ, ಗುರುಸಿದ್ದಪ್ಪ, ವೆಂಕೋಬರಾವ್, ಗರೂಡ ಸದಾಶಿವರಾವ್, ಮಾಸ್ಟರ್ ವಾಮನರಾವ್ ಮುಂತಾದ ಪ್ರತಿಭಾವಂತ ನಟ-ನಟಿಯರೂ, ಸಂಗೀತಗಾರರೂ ಇದ್ದು ಪ್ರಾಮುಖ್ಯತೆ ಪಡೆದಿದ್ದರು.

ದಕ್ಷಿಣ ಕರ್ನಾಟಕದಲ್ಲಿ ವರದಾಚಾರ್, ಗುಬ್ಬಿವೀರಣ್ಣ, ಮಹಮದ್ ಪೀರ್, ಮಳವಳ್ಳಿ ಸುಂದರಮ್ಮ, ಜಿ.ವಿ. ಮಾಲತಮ್ಮ, ಸುಬ್ಬಯ್ಯ ನಾಯ್ಡು, ಲಕ್ಷ್ಮೀಬಾಯಿ ಸುಬ್ಬಯ್ಯನಾಯ್ಡು (ಸಿನಿಮಾಗಳಲ್ಲಿಯೂ ನಟಿಸಿದ್ದರು) ಆರ್.ನಾಗೇಂದ್ರರಾವ್, ಬಿ.ಜಯಮ್ಮ, ಸ್ತ್ರೀ ನಾಟಕ ಕಂಪನಿ ಕಟ್ಟಿ ಬೆಳೆಸಿದ ಆರ್.ನಾಗರತ್ನಮ್ಮ, ಹಿರಣ್ಣಯ್ಯ ಸಿ.ಬಿ. ಮಲ್ಲಪ್ಪ, ಎಂ.ಎನ್.ಗಂಗಾಧರ ರಾಯರು ಮುಂತಾದವರು ಧೀಮಂತ ನಟರಾಗಿದ್ದರು. ದುರ್ಬಲ ಕಥಾವಸ್ತುವಿದ್ದರೂ,ಚುರುಕಾದ ಸಂಭಾಷೆಣೆ ಇಲ್ಲದಿದ್ದರೂ, ರೋಮಾಂಚಕ ನಾಟಕೀಯ ತಿರುವುಗಳಿಲ್ಲದಿದ್ದರೂ, ಈ ಅಭಿನಯ ವಿಶಾರದರು ತಮ್ಮ ಸುಮಧುರ ಕಂಠದಿಂದ ಅಪ್ರಾಸಂಗಿಕ ಹಾಸ್ಯಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಹೀಗೆಲ್ಲ ಇದ್ದರೂ ಬೆಳೆಯುತ್ತಿದ್ದ ಸಾಮಾಜಿಕ ಪ್ರಜ್ಞೆಯನ್ನು ಎದುರಿಸಿ ನಿಲ್ಲಲಾಗದೆ ನಾಟಕ ಕಂಪೆನಿಗಳು ವಿಫಲವಾಗಿ, ಮನರಂಜನೆಯ ಮೂಲವಾಗಿ ಬಂದ ಸಿನಿಮಾಗಳ ಎದುರು ಯಶಸ್ವಿಯಾಗಿ ಸ್ಪರ್ಧಿಸಲಾಗದೆ, ವೃತ್ತಿ ರಂಗಭೂಮಿ ಕ್ರಮೇಣ ಕ್ಷೀಣಗೊಂಡಿತು. ಆದರೂ ೧೯ನೇ ಶತಮಾನದ ಕೊನೆಯ ಭಾಗ ಮತ್ತು ೨೦ನೆಯ ಶತಮಾನದ ಆರಂಭಕಾಲವು ವೃತ್ತಿಪರ ರಂಗಭೂಮಿಗೆ ಅತ್ಯುತ್ತಮ ಕಾಲವೆನಿಸಿತ್ತು.

ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು. ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ. ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು. ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿ...