ವಿಷಯಕ್ಕೆ ಹೋಗಿ

ಕರ್ನಾಟಕದ ವರ್ಣ ಚಿತ್ರಕಲೆ

ಚಿತ್ರಕಲೆ

ಕರ್ನಾಟಕದ ಅತ್ಯಂತ ಪ್ರಾಚೀನ ವರ್ಣಚಿತ್ರಗಳು ಕ್ರಿ.ಪೂ. ೨೦೦೦-೧೦೦೦ದ ಪ್ರಾಗಿತಿಹಾಸ ಕಾಲದವಾಗಿವೆ. ಪ್ರಾಗೈತಿಹಾಸಿಕ ಮಾನವ ಸಮುದಾಯವು ವಾಸಿಸುತ್ತಿದ್ದ ಚಾಚು ಬಂಡೆಗಳ ಕೆಳಮುಖದಲ್ಲಿ ಚಿತ್ರಿತವಾದ ಪ್ರಾಣಿಗಳ, ಮಾನವಾಕೃತಿಗಳ ಕಲಾವಶೇಷಗಳನ್ನು ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಚಿತ್ರದುರ್ಗ ಮುಂತಾದ ಜಿಲ್ಲಾ ಪ್ರದೇಶಗಳಲ್ಲಿ ಕಾಣಬಹುದು. ಹಿರೇಬೆನಕಲ್, ಪಿಕ್ಲಿಹಾಳ ಮುಂತಾದ ಪ್ರಾಗೈತಿಹಾಸಿಕ ನಿವೇಶನಗಳಲ್ಲಿ ಆಯುಧ ಸಹಿತವಾದ ಬೇಟೆಗಾರರ, ಕುದುರೆ ಸವಾರರ, ಗೂಳಿ ಮುಂತಾದ ಚಿತ್ರಗಳು ಬಂಡೆಗಳ ಮೇಲೆ ಕಾಣಬರುತ್ತವೆ. ಮಣ್ಣಿನ ಮಡಕೆಗಳ ಮೇಲೆ ಬಣ್ಣದಲ್ಲಿ ಚಿತ್ರಿತವಾದ ಅನೇಕ ಆಕೃತಿಗಳು ಬ್ರಹ್ಮಗಿರಿ, ಚಂದ್ರವಳ್ಳಿ, ಹೆಮ್ಮಿಗೆ, ಹಿರೇಬೆನಕಲ್, ಮಸ್ಕಿ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಹೇರಳವಾಗಿ ದೊರಕಿವೆ.

ಇತಿಹಾಸ ಕಾಲದಲ್ಲಿನ, ಚಿತ್ರಕಲೆ ಹಾಗೂ ಅದರ ಅಸ್ತಿತ್ವದ ಕುರಿತು ಸಮಕಾಲೀನ ಸಾಹಿತ್ಯ ಮತ್ತು ಶಾಸನಗಳಲ್ಲಿ ಉಲ್ಲೇಖಗಳಿವೆ. ಚಿತ್ರಕಲೆಗೆ (ವರ್ಣಚಿತ್ರ) ಕರ್ನಾಟಕದಲ್ಲಿ ಇದ್ದ ಪ್ರೋತ್ಸಾಹದ ಬಗೆಗಿನ ಮೂಲವನ್ನು ಬಾದಾಮಿ ಚಾಲುಕ್ಯರ ಮಂಗಲೇಶನ ಕಾಲದಲ್ಲಿಯೇ ಕಾಣಬಹುದು. ಬಾದಾಮಿಯ ಮೂರನೇ ಗುಹೆಯಲ್ಲಿ ಅವನ ಕಾಲದ ವರ್ಣಚಿತ್ರಗಳ ಕುರುಹುಗಳನ್ನು ಕಾಣಬಹುದಾಗಿದೆ. ಐತಿಹಾಸಿಕ ಕಾರಣಗಳಿಂದಾಗಿ ಕರ್ನಾಟಕದಲ್ಲಿ ಈ ಪರಂಪರೆಯ ನಿರಂತರತೆಯಲ್ಲಿ ಅಂತರವಿರುವುದು ಕಂಡು ಬರುತ್ತದೆ. ಮೂಡಬಿದರೆಯಲ್ಲಿ ದೊರಕಿರುವ ಹೊಯ್ಸಳರ ಕಾಲದಲ್ಲಿ ನಕಲಿಸಿರುವ ರಾಷ್ಟ್ರಕೂಟ ಕಾಲದ ಚಿತ್ತಾಕರ್ಷಕವಾದ ವರ್ಣಚಿತ್ರಗಳನ್ನು ಧವಳ ಗ್ರಂಥದಲ್ಲಿ ಕಾಣಬಹುದು. ಈ ಚಿತ್ರಗಳು ದೃಶ್ಯ ಜೋಡಣೆ, ಭಂಗಿ ವಿನ್ಯಾಸ, ಸಮಾನ ಕಥಾವಸ್ತುಗಳನ್ನು ಆಧರಿಸಿ ಚಿತ್ರಿತವಾಗಿದ್ದರೂ, ಗುಜರಾತಿನ ಕಲ್ಪಸೂತ್ರ ವರ್ಣಚಿತ್ರಗಳಿಗಿಂತ ವಿಭಿನ್ನವಾಗಿವೆ. ಕಲಾಶೈಲಿಯು ವಿಶೇಷವಾಗಿ ದೇಶಿಯವಾಗಿದ್ದು ಹೊಯ್ಸಳ ಶಿಲ್ಪಗಳಲ್ಲಿ ಕಾಣಬರುವ ಅಲಂಕಾರಿಕ ಶೈಲಿಯಂತೆ ಭಾವವನ್ನು ಮೂಡಿಸುತ್ತದೆ. ರುದ್ರಭಟ್ಟನಂಥ ಕನ್ನಡ ಕವಿಗಳು ಭಾವಚಿತ್ರ ಮತ್ತು ಇತರೆ ಚಿತ್ರಗಳ ಬಗ್ಗೆ ಉಲ್ಲೇಖಿಸಿರುವರು. ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರನ ಮಾನಸೋಲ್ಲಾಸ ಕೃತಿಯಲ್ಲಿ ಕಲೆಯ ಕುರಿತೇ ಒಂದು ಭಾಗವಿದೆ.

ವಿಜಯನಗರ ಕಾಲದ ವರ್ಣಚಿತ್ರಗಳನ್ನು ಅಧ್ಯಯನ ಮಾಡಿದರೆ ಭಿತ್ತಿಚಿತ್ರಗಳು ಬಹಳ ಪ್ರಮಾಣದಲ್ಲಿ ಬಳಕೆಯಲ್ಲಿದ್ದುವು ಎಂದು ತಿಳಿಯುತ್ತದೆ. ಹಂಪಿಯ ವಿರೂಪಾಕ್ಷ ದೇಗುಲದ ಛತ್ತಿನಲ್ಲಿ ಆ ಬಗೆಯ ಅತ್ಯಂತ ಪ್ರಾಚೀನ ಮಾದರಿಗಳು ಕಾಣಬರುತ್ತವೆ. ಕರ್ನಾಟಕದ ವರ್ಣಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದರೆ, ಅಂದಿನ ಜೀವನ ಸಂಗತಿಗಳನ್ನು ಪ್ರತಿಬಿಂಬಿಸುವ ಬದಲು ಚಿತ್ರಕಾರರು ಆಗಮಾದಿಗಳ ಸಿದ್ದ ಸೂತ್ರಗಳ ಪ್ರಕಾರವಾಗಿ ಸಾಂಪ್ರದಾಯಿಕ ದೃಶ್ಯ ಜೋಡಣೆಗಳನ್ನು, ಅತಿ ಬೆಡಗಿನ ಭಂಗಿಗಳನ್ನು ಆರಿಸಿಕೊಂಡು ಅನುಸರಿಸಿರುವುದು ಕಾಣಬರುತ್ತದೆ. ಈ ವರ್ಣಚಿತ್ರಗಳು ವಿಪುಲವಾಗಿ ಇಂದಿಗೂ ಕಾಣಬರುವ ಶಿಲ್ಪಗಳ, ಚಿತ್ರಕಲಾ ರೂಪದಂತೆ ಕಾಣುತ್ತವೆ. ಜಾತ್ಯಾತೀತ ಕಥಾವಸ್ತುಗಳನ್ನು ಹೊಂದಿರುವ ಚಿತ್ರಗಳು ಕೂಡ ಇಂಥದೇ ಶೈಲಿಯನ್ನು ಅನುಸರಿಸಿವೆ. ಕರ್ನಾಟಕದ ಮುಖ್ಯ ದೇಗುಲಗಳನ್ನು ಬಹುತೇಕ ಇದೇ ಬಗೆಯ ಭಿತ್ತಿಚಿತ್ರಗಳಿಂದ ಅಲಂಕರಿಸುತ್ತಿದ್ದಿರ ಬೇಕು. ಸಿ.ಹಯವದನರಾಯರು ಸಂಪಾದಿಸಿರುವ ಮೈಸೂರು ಗ್ಯಾಸೆಟಿಯರ್‌ನಲ್ಲಿ ಈ ಬಗೆಯ ಭಿತ್ತಿಚಿತ್ರಗಳಿರುವ ಅಥವಾ ಚಿತ್ರಗಳಿದ್ದ ಹಳೆಯ ಮೈಸೂರು ಭಾಗದಲ್ಲಿನ ಅನೇಕ ದೇಗುಲಗಳನ್ನು ಹೆಸರಿಸಲಾಗಿದೆ; ಹಿರಿಯೂರಿನ ತೇರು ಮಲ್ಲೇಶ್ವರ ದೇಗುಲ, ಸೀಬಿಯ ನರಸಿಂಹ ದೇಗುಲ, ಶ್ರವಣಬೆಳಗೊಳದ ಜೈನಮಠ, ಮುಡುಕುತೊರೆ ಮಲ್ಲಿಕಾರ್ಜುನ ದೇಗುಲ, ಹಂಪಿ ವಿರೂಪಾಕ್ಷ ದೇಗುಲ, ಮೈಸೂರಿನ ಪ್ರಸನ್ನ ಕೃಷ್ಣಸ್ವಾಮಿ, ಕೃಷ್ಣ ಮತ್ತು ವರಾಹ ದೇಗುಲಗಳು, ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇಗುಲ, ಸಾಲಿಗ್ರಾಮದ ಜಿನಾಲಯ ಮುಂತಾದವು ಪ್ರಮುಖವಾಗಿವೆ. ಶ್ರೀರಂಗಪಟ್ಟಣದ ದರಿಯಾದೌಲತ್, ಮೈಸೂರಿನ ಜಗನ್ಮೋಹನ ಅರಮನೆ, ನರಗುಂದದ ಮಹಲುಗಳು, ವಿಜಯಪುರದ ಬಳಿಯ ಕಮತಗಿ ಮತ್ತು ನಿಪ್ಪಾಣಿ, ಧಾರವಾಡದ ಬಳಿಯ ಅಮ್ಮಿನಭಾವಿ, ಹಳಿಯಾಳದ ಬಳಿಯ ಬಿ.ಕೆ. ಹಳ್ಳಿಯ ರಾಮದೇಗುಲ, ರಾಯಚೂರು ಮತ್ತು ಗುಳೇದ ಗುಡ್ಡದ ಖಾಸಗಿ ಮನೆಗಳಲ್ಲಿ ಚಿತ್ರಗಳು (ಭಿತ್ತಿ) ಕಾಣಬರುತ್ತವೆ. ವಿಜಯನಗರೋತ್ತರ ಕಾಲದಲ್ಲಿ, ಚಿತ್ರಕಲೆಯು ಎರಡು ವಿಭಾಗಗಳಾಗಿ ಬೇರ್ಪಟ್ಟಂತೆ ಕಾಣುತ್ತದೆ. ವಿಜಯನಗರದರಸರು ಮತ್ತು ಅವರ ಸಾಮಂತರು (ಪಾಳೆಪಟ್ಟುಗಳು) ಆಗಮಾನುಸಾರಿ ಯಾದ ಪ್ರಾಚೀನ ಸಂಪ್ರದಾಯವನ್ನು ಅನುಸರಿಸಿದರು; ವಿಜಯ ಪುರ, ಕಲಬುರಗಿ ಮತ್ತು ಬೀದರ್ ಪ್ರದೇಶದ ದೊರೆಗಳು, ವಿಶಿಷ್ಟ ಶೈಲಿ ಎನಿಸಿದ ದಖ್ಖನಿ ಶೈಲಿಯ ಅಭಿವೃದ್ಧಿಗೆ ಕಾರಣರಾದರು.ಈ ಸಂಪ್ರದಾಯದ ಅತ್ಯುತ್ತಮ ಮಾದರಿಗಳು ವಿಜಯಪುರ (ಬಿಜಾಪುರ)ದಲ್ಲಿ ಮೂಡಿಬಂದುವು. ಈ ಸಂಪ್ರದಾಯವು ಮೊಗಲ್ ಮಾದರಿಯಿಂದ ಪ್ರಭಾವಿತವಾದರೂ, ಪ್ರಬಲ ದೇಶೀಯ ಲಕ್ಷಣಗಳ ಎಳೆಗಳೂ ಅದರಲ್ಲಿವೆ. ಕರ್ನಾಟಕದ ದಕ್ಷಿಣ ಪ್ರದೇಶಗಳು, ವಿಜಯನಗರ ಕಾಲದಲ್ಲಿ ಅಭಿವೃದ್ಧಿಗೊಂಡ ಪ್ರಾಚೀನ ಶೈಲಿಯನ್ನೇ ಮುಂದುವರೆಸಿದವು. ವಿಜಯನಗರ ಪತನಾನಂತರ, ಆಸ್ಥಾನದ ಕಲಾವಿದರು ದಕ್ಷಿಣ ಭಾರತದ ವಿವಿಧ ಕಡೆಗೆ ವಲಸೆ ಹೋದರು. ಮೈಸೂರು ಅರಸರು ಕಲೆಗೆ ಆಶ್ರಯವನ್ನು ಮುಂದುವರೆಸಿದರು. ಬಹಳಷ್ಟ ಕಲಾವಿದರ ತಂಡವು ಶ್ರೀರಂಗಪಟ್ಟಣದಲ್ಲಿ ರಾಜಒಡೆಯರ ಆಶ್ರಯದಲ್ಲಿ ನೆಲೆಗೊಂಡಿತು. ಶ್ರೀರಂಗಪಟ್ಟಣದ ದರಿಯಾದೌಲತ್ನಲ್ಲಿ ಸ್ತಂಭ, ಭಿತ್ತಿ, ಛತ್ತು (ಛಾವಣಿ) ಮುಂತಾದವುಗಳ ಮೇಲೆ ವಿವಿಧ ವಸ್ತು-ವಿಷಯಗಳನ್ನು ಹೊಂದಿದ ವರ್ಣರಂಜಿತ ಚಿತ್ರಗಳಿವೆ. ಹೀಗೆಯೇ ಬೆಂಗಳೂರಿನ ಟಿಪ್ಪೂ ಅರಮನೆಯಲ್ಲಿ, ವರ್ಣಚಿತ್ರಗಳ ಕುರುಹುಗಳಿವೆ. ಭಿತ್ತಿ ಚಿತ್ರಗಳಲ್ಲಷ್ಟೆ ಅಲ್ಲದೆ, ಹಸ್ತಪ್ರತಿಗಳಲ್ಲಿಯೂ ಸಾಂದರ್ಭಿಕ ಚಿತ್ರಗಳನ್ನು ಬರೆಯಲು ವರ್ಣಚಿತ್ರಗಾರರಿಗೆ ವಹಿಸಲಾಯಿತು. ಅಂಥ ಚಿತ್ರಗಳಿರುವ ಹಸ್ತಪ್ರತಿಗಳಲ್ಲಿ ಆಕರ್ಷಕ ಹಾಗೂ ವರ್ಣರಂಜಿತ ರೇಖಾಕೃತಿಗಳಿದ್ದು, ಅವು ಹಳೆಯ ತಲೆಮಾರಿನ ಅನೇಕ ಮನೆತನಗಳಲ್ಲಿ ಕಾಣಸಿಗುತ್ತವೆ. ಅಂಥ ಹಸ್ತಪ್ರತಿಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಶ್ರೀತತ್ತ್ವ ನಿಧಿ ಎಂಬ ಬೃಹತ್ ಕೃತಿ. ಮುಮ್ಮಡಿ ಕೃಷ್ಣರಾಜ ಒಡೆಯರ ಕೃಪಾ ಪೋಷಣೆಯಿಂದಾಗಿ ರಚಿತವಾದ ಈ ಹಸ್ತಪ್ರತಿಯು ಒಂಬತ್ತು ವಿಭಾಗಗಳನ್ನು ಹೊಂದಿದೆ. ಅದರಲ್ಲಿ ಶಕ್ತಿನಿಧಿ, ವಿಷ್ಣುನಿಧಿ, ಬ್ರಹ್ಮನಿಧಿ, ಶಿವನಿಧಿ ಇತ್ಯಾದಿ ವಿವಿಧ ವಿಷಯಗಳ ವಿವರಣೆ ಇದೆ.

ವರ್ಣಚಿತ್ರಗಳು ಆಗಮದ ವಿವಿಧ ಶಾಖೆಗಳಲ್ಲಿರುವ ಶಿಲ್ಪ, ಜ್ಯೋತಿಷ್ಯ, ತಂತ್ರ ಮುಂತಾದ ಪ್ರಾಚೀನ ಜ್ಞಾನವನ್ನು ಬಿಂಬಿಸುತ್ತವೆ. ಜಗನ್ಮೋಹನ ಅರಮನೆಯಲ್ಲಿ ದೊರೆಗಳೂ ಸೇರಿದಂತೆ ಉನ್ನತಾಧಿಕಾರಿಗಳ ವರ್ಣಚಿತ್ರಗಳಿವೆ. ಪೌರಾಣಿಕ ವಸ್ತುವನ್ನೊಳಗೊಂಡ ಜಲವರ್ಣ ಅಥವಾ ತೈಲವರ್ಣ ಚಿತ್ರಗಳು ಬಟ್ಟೆ ಹಾಗೂ ಗಾಜಿನ ಮೇಲೆ ಚಿತ್ರಿತವಾಗಿವೆ. ಸುಂದರಯ್ಯ, ಕೊಂಡಪ್ಪ, ಎಲ್ಲಪ್ಪ, ದುರ್ಗದ ವೆಂಕಟಪ್ಪ, ನರಸಿಂಹಯ್ಯ, ತಿಪ್ಪಾಜಪ್ಪ ಮತ್ತಿತರರು ಈ ಶೈಲಿಯನ್ನು ಅನುಸರಿಸಿ ಅಭಿವೃದ್ಧಿಗೊಳಿಸಿದರು. ಆ ಕಾಲಕ್ಕೆ ವರ್ಣಚಿತ್ರಕಾರರು ಬಣ್ಣಗಳನ್ನು ಇತರೆ ಸಾಮಗ್ರಿಗಳನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು. ಆ ಬಣ್ಣಗಳನ್ನು ನಿಸರ್ಗಮೂಲದಿಂದ ಅಂದರೆ, ಸಸ್ಯಮೂಲ, ಖನಿಜಮೂಲ ಹಾಗೂ ಜೈವಿಕ ಮೂಲಗಳಿಂದ ತಯಾರಿಸುತ್ತಿದ್ದರು. ಸ್ವರ್ಣರೇಕುಗಳನ್ನು ಲೇಪಿಸಿದ ಜೆಸ್ಸೊ ಎಂಬ ಕುಸುರಿ ಕೆಲಸದ ಶೈಲಿಯು ಕರ್ನಾಟಕದ ಸಾಂಪ್ರದಾಯಿಕ ವರ್ಣಚಿತ್ರಗಳ ಶ್ರೇಷ್ಠತೆಯ ಗುರುತಾಗಿರುತ್ತಿತ್ತು. ಕಾಗದಗಳ ಮೇಲಲ್ಲದೆ ವರ್ಣಚಿತ್ರಕಾರರು ಗಾಜಿನ ಮೇಲೂ ಚಿತ್ರಗಳನ್ನು ಬಿಡಿಸುತ್ತಿದ್ದರು. ರಾಜಾ ರವಿವರ್ಮನು ೨೦ನೆಯ ಶತಮಾನದ ಆರಂಭದ ದಶಕಗಳಲ್ಲಿ ಮೈಸೂರಿನಲ್ಲಿ ಚಿತ್ರಕಲೆಯಲ್ಲಿ ಸಮಕಾಲೀನ ವರ್ಣಚಿತ್ರಕಾರರ ಮೇಲೆ ಪ್ರಭಾವ ಬೀರಿದ್ದನು. ಮೈಸೂರಿನ ಶ್ರೀ ಚಾಮರಾಜೇಂದ್ರ ತಾಂತ್ರಿಕ ಶಾಲೆಯಲ್ಲಿ ವ್ಯಾಸಂಗ ಕ್ರಮದ ಭಾಗವಾಗಿ ಯೂರೋಪಿಯನ್ ವರ್ಣಚಿತ್ರ ಶೈಲಿಯನ್ನು ಆರಂಭಿಸಿದಾಗ ಹಳೆಯ ಸಾಂಪ್ರದಾಯಕ ವರ್ಣಚಿತ್ರ ಶೈಲಿ ಕಣ್ಮರೆಯಾಗಿ ಪಾಶ್ಚಿಮಾತ್ಯ ಪದ್ಧತಿ ಮತ್ತು ಶೈಲಿಗಳಲ್ಲಿ ತರಬೇತಿ ಪಡೆದ ಹೊಸ ಪೀಳಿಗೆಯ ಚಿತ್ರಕಾರರ ಸೃಷ್ಟಿಯಾಯಿತು.

ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ...