ವಿಷಯಕ್ಕೆ ಹೋಗಿ

ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ ರ‍್ಯಾಂಗ್ಲರ್ ಡಾ.ಡಿ.ಸಿ.ಪಾವಟೆ

ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ ರ‍್ಯಾಂಗ್ಲರ್ ಡಾ.ಡಿ.ಸಿ.ಪಾವಟೆ

ಒಂದು ಕ್ಷೇತ್ರದಲ್ಲಿ ಸಾಧಿಸಬೇಕಾದುದೆಲ್ಲವನ್ನೂ ಸಾಧಿಸಿ, ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಲ್ಲಿ ದಕ್ಷತೆಯನ್ನು ತೋರಿ, ಯಶಸ್ಸುಗಳಿಸಿದ ಕೆಲವೇ ಮಹತ್ವದ ವ್ಯಕ್ತಿಗಳಲ್ಲಿ ಪದ್ಮಭೂಷಣ ಡಾ.ಡಿ.ಸಿಪಾವಟೆ ಅವರು ಒಬ್ಬರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಎಂಬ ಗ್ರಾಮದಲ್ಲಿ ಅಗಸ್ಟ ೨, ೧೮೯೯ ರಂದು ಚಿಂತಪ್ಪ ಮತ್ತು ಶಾಂತವೀರಮ್ಮ ಎಂಬ ಆದರ್ಶ ದಂಪತಿಗಳ ಉದರದಲ್ಲಿ ಜನಿಸಿದ ಡಾ.ಡಿ.ಸಿ.ಪಾವಟೆ ಅವರು ಒಂದುವರೆ ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಪಾಲನೆ-ಪೋಷಣೆಯಲ್ಲಿಯೇ ಬೆಳೆದು ದೊಡ್ಡವರಾದರು. ಮಮದಾಪುರ, ಗೋಕಾಕ ಮತ್ತು ರಬಕವಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು, ್ಲ ಧಾರವಾಡದ ಕರ್ನಾಟಕ ಕಾಲೇಜನ್ನು ಸೇರಿ ಉಚ್ಛ ಶಿಕ್ಷಣವನ್ನುಪೂರೈಸಿದರು. ಮುಂದೆ ೧೯೨೪-೨೫ ರ ಅವಧಿಯಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಕೈಗೊಂಡು, ಗಣಿತಶಾಸ್ತçದಲ್ಲಿನ ಸಾಧನೆಗಾಗಿ ರ‍್ಯಾಂಗ್ಲರ್ ಪದವಿ ಪಡೆದು ನಾಡಿಗೆ ಕೀರ್ತಿ ತಂದರು. ಸತತ ಪ್ರಯತ್ನ, ಶ್ರದ್ಧೆ ಮತ್ತು ಜಾಣ್ಮೆಯಿಂದ ಅಧ್ಯಯನ ಮಾಡಿದರೆ ಎಂಥ ಪದವಿಯನ್ನಾದರೂ ಪಡೆಯಬಹುದು ಎಂಬುದನ್ನು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ಪಾವಟೆ ಅವರು ಅನೇಕ ಮಿತ್ರರನ್ನು ಸಂಪಾದಿಸಿಕೊಂಡರಲ್ಲದೆ, ಛಲಬಿಡದ ವಿಕ್ರಮನಂತೆ ಫ್ರಾನ್ಸ್ ದೇಶಕ್ಕೆ ಹೋಗಿ ಫ್ರೆಂಚ್ ಭಾಷೆಯನ್ನು ಕಲಿತು ತಮ್ಮ ಜ್ಞಾನ ಪರಿಧಿಯನ್ನು ವಿಸ್ತರಿಸಿಕೊಂಡರು.
ರ‍್ಯಾಂಗ್ಲರ್ ಪದವಿ ಪಡೆದು ಸ್ವದೇಶಕ್ಕೆ ಮರಳಿದ ಮೇಲೆ ೧೫ನೇ ಜುಲೈ ೧೯೨೮ರಂದು ಬನಾರಸ್ ಹಿಂದು ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಪ್ರೊಫೆಸರಾಗಿ ಸೇವೆ ಪ್ರಾರಂಭಿಸಿ, ಅಲ್ಲಿದ್ದ ಒಂದುವರೆ ವರ್ಷದ ಅವಧಿಯಲ್ಲಿಯೇ ‘ವ್ಯವಹಾರ ಜ್ಞಾನವುಳ್ಳ ಗಣಿತ ಪ್ರಾಧ್ಯಾಪಕ ಪಾವಟೆ’ ಎಂಬ ಖ್ಯಾತಿ ಪಡೆದರು. ಮುಂದೆ ಶಿಕ್ಷಣಾಧಿಕಾರಿಯಾಗಿ, ಡೆಪ್ಯೂಟಿ ಡೈರೆಕ್ಟರಾಗಿ, ಮುಂಬೈ ಪ್ರಾಂತದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆಸಲ್ಲಿಸಿದರು. ಈ ಅವಧಿಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ ಅನೇಕ ಯೋಜನೆಗಳನ್ನು ಕೈಕೊಂಡು ಅವು ಕಾರ್ಯರೂಪಕ್ಕೆ ಬರುವಲ್ಲಿ ಹಗಲಿರುಳು ಶ್ರಮಿಸಿದರು. ಹಿಂದುಳಿದ ಪ್ರದೇಶ ಮತ್ತು ಜನಾಂಗಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ ಡಾ.ಪಾವಟೆಯವರು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವುದನ್ನು ಜಾರಿಯಲ್ಲಿ ತಂದು, ಉತ್ತಮ ಚಟುವಟಿಕೆಗಳಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಲು ಕಾರಣರಾದರು. ಕಾಲೇಜು ಶಿಕ್ಷಣದಲ್ಲಿ ಅಧ್ಯಯನ ಅಧ್ಯಾಪನದೊಂದಿಗೆ ಸಂಶೋಧನೆಗೂ ಮಹತ್ವ ಕಲ್ಪಿಸಿದರು. ಶಿಕ್ಷಕರಿಗೆ ಬಡ್ತಿ ನೀಡುವಾಗ ಕೇವಲ ಅವರ ಸೇವೆಯನ್ನಷ್ಟೇ ಪರಿಗಣಿಸದೆ, ಅವರ ಕಾರ್ಯಚಟುವಟಿಕೆ, ಗ್ರಂಥ ರಚನೆ, ಸಂಶೋಧನ ಬರಹ, ಲೇಖನಗಳನ್ನು ಗಮನಿಸಬೇಕೆಂದು ಸಲಹೆ ನೀಡಿದರು. ಎಂದಿಗೂ ಯಾರೊಂದಿಗೂ ರಾಜಿಮಾಡಿಕೊಳ್ಳದ ಸ್ವಭಾವದವರಾಗಿದ್ದ ಡಾ.ಪಾವಟೆ ಅವರು ‘ಮನುಷ್ಯನಿಗೆ ಅನುಕೂಲತೆಗಿಂತ ಆತ್ಮಗೌರವ ಹೆಚ್ಚೆಂದು’ ಪರಿಭಾವಿಸಿದ್ದರು.
೧೮ನೇ ಅಗಸ್ಟ ೧೯೫೪ ರಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಸ್ಥಾನವನ್ನು ಅಲಂಕರಿಸಿ, ೧೯೬೭ರ ವರೆಗೆ ಅಂದರೆ ಸುಮಾರು ಹದಿಮೂರು ವರ್ಷ ವಿಶ್ವವಿದ್ಯಾಲಯವನ್ನು ಮುನ್ನಡೆಸಿದರು. ತಮ್ಮ ದೂರದೃಷ್ಟಿ, ಪರಿಶ್ರಮ, ಸಮರ್ಥ ಆಡಳಿತ ನಿರ್ವಹಣೆ ಇವೆಲ್ಲ ಗುಣಗಳಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭವ್ಯವಾದ, ವಿಶಾಲವಾದ, ಸುಂದರವಾದ ಕಟ್ಟಡವನ್ನು ನಿರ್ಮಿಸಿದರು. ಜೊತೆಗೆ ನಾಡಿನ ಶ್ರೇಷ್ಠ ಶಿಕ್ಷಣ ತಜ್ಞರನ್ನು, ವಿಜ್ಞಾನಿಗಳನ್ನು ಕವಿ ಸಾಹಿತಿಗಳನ್ನು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಆಯ್ಕೆ ಮಾಡುವುದರ ಮೂಲಕ ಶೈಕ್ಷಣಿಕ ದೃಢತೆಯನ್ನು ತಂದುಕೊಟ್ಟರು.
ಡಾ.ಪಾವಟೆ ಅವರಿಗೆ ೬೦ ವರ್ಷ ತುಂಬಿದಾಗ, ಅವರ ಹುಟ್ಟು ಹಬ್ಬ ಆಚರಿಸಲು ನಾಡಿನ ವಿವಿಧ ಪ್ರದೇಶಗಳಿಂದ ಜನರು ಆಗಮಿಸಿ ಶುಭಕೋರಿದರಲ್ಲದೆ, ರಾಷ್ಟ್ರಿಯ -ಅಂತರಾಷ್ಟ್ರಗಳಿಂದ ಅಭಿನಂದನೆಯ ಮಹಾಪೂರ ಹರಿದು ಬಂತು. ಕುಲಪತಿಗಳ ಅವಧಿ ಇನ್ನೂ ಎರಡು ವರ್ಷ ಇರುವಾಗಲೇ ೧೬೬೭ರಲ್ಲಿ ಪಂಜಾಬ ರಾಜ್ಯಪಾಲರಾಗಲು ಆಹ್ವಾನಬಂತು. ಬಂದ ಆಹ್ವಾನವನ್ನು ಬೇಗ ಒಪ್ಪಿಕೊಳ್ಳದೆ, ಪೂರ್ವಾಪರಗಳನ್ನು ಯೋಚಿಸಿ ನಿರ್ಧಾರ ತೆಗೆದುಕೊಂಡು ಅಧಿಕಾರ ಸ್ವೀಕರಿಸಿ ರಾಜ್ಯದ ಆಡಳಿತವನ್ನು ಅನೇಕ ಸಮಸ್ಯೆಗಳ ನಡುವೆಯೂ ಸುಸೂತ್ರವಾಗಿ ನಡೆಯಿಸಿಕೊಂಡು ಹೋದರು. ಮುಂದೆ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಅನೇಕ ಸಮಿತಿಗಳಲ್ಲಿ ಸೇವೆ ಸಲ್ಲಿಸಿ, ಅನೇಕ ರಾಷ್ಟ್ರಿಯ ಮಟ್ಟದ ಸಂಸ್ಥೆಗಳಲ್ಲಿ ಸಹ ಶ್ರದ್ಧೆಯಿಂದ ದುಡಿದರು. ತಮ್ಮ ಇಡೀ ಬದುಕಿನ ಅನುಭವದ ಸಾರವನ್ನೆಲ್ಲ ಎರಡು ಪ್ರತ್ಯೇಕ ಸಂಪುಟಗಳಲ್ಲಿ ಹೊರತಂದರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶ ವಿದೇಶಗಳಲ್ಲಿ ಅನೇಕ ಉಪನ್ಯಾಸ ನೀಡಿ ತಮ್ಮ ಶೈಕ್ಷಣಿಕ ಕಾಳಜಿಯನ್ನು ಮೆರೆದರು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನದ ಬಗ್ಗೆ ಧ್ವನಿ ಎತ್ತಿದರು.
ಮಾನವೀಯ ಸ್ವಭಾವದ ಡಾ.ಪಾವಟೆಯವರು ‘ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ’ ಎಂದೇ ಹೆಸರಾಗಿ, ಈ ಸಂಸ್ಥೆಯ ಉನ್ನತಿಗಾಗಿ ಅವಿರತವಾಗಿ ಶ್ರಮಿಸಿ ದೇಶದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ಪಡೆಯಲು ಕಾರಣರಾದರು. ಈ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ಹೆಸರಿನ ಜೊತೆಗೆ ಡಾ.ಪಾವಟೆಯವರ ಹೆಸರು ಚಿರಸ್ಥಾಯಿ. ರಾಷ್ಟ್ರಿಯ ಹಾಗೂ ಅಂತರಾಷ್ಟ್ರಿಯ ಸನ್ಮಾನಗಳನ್ನು ಪಡೆದು, ಶ್ರೇಷ್ಠ ಶಿಕ್ಷಣ ತಜ್ಞರೆಂದು ಕರೆಯಿಸಿಕೊಂಡು ಖ್ಯಾತನಾಮರಾದರು. ಇವರ ಅಪೂರ್ವ ಸಾಧನೆಯನ್ನು ಮನ್ನಿಸಿ ಭಾರತ ಸರ್ಕಾರ ೧೯೬೭ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ವಿದ್ವತ್ತು ಹಾಗೂ ಶ್ರೇಷ್ಠ ಗುಣಗಳ ಸಂಗಮವೆನಿಸಿದ್ದ ಡಾ.ಪಾವಟೆ ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ಕೀರ್ತಿ, ನೆನಪು, ಆದರ್ಶಗಳು ನಮ್ಮೆದುರಿವೆ. ಅವುಗಳನ್ನು ಸ್ಮರಿಸಿ ಅವರು ತೋರಿದ ದಾರಿಯಲ್ಲಿ ಮುನ್ನಡೆಯುವುದೇ ಅವರಿಗೆ ತೋರುವ ಗೌರವವಾಗಿದೆ.

ಲೇಖಕರು:ಡಾ.ಚಂದ್ರಶೇಖರ ರೊಟ್ಟಿಗವಾಡ
ನಿರ್ದೇಶಕರು (ಪ್ರಭಾರ) ಪ್ರಸಾರಾಂಗ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು. ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ. ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು. ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿ...