ಇತಿಹಾಸ ಮರೆತಿರುವ ಕಾಳುಮೆಣಸಿನ ರಾಣಿ ಅಥವಾ ಗಂಡು ರಾಣಿ ಚೆನ್ನಭೈರಾದೇವಿಯ ಸಂಕ್ಷಿಪ್ತ ಕಥನ:-
ಮಲೆನಾಡು ಮತ್ತು ಕರಾವಳಿಯನ್ನು ಆಳಿದ ಇಕ್ಕೇರಿ ನಾಯಕರ ಚರಿತ್ರೆಯನ್ನು ಬರೆಯ ಬೇಕು ಎಂದರೆ ಅದರಲ್ಲಿ ಅತ್ಯಂತ ಪ್ರಮುಖವಾಗಿ ಎದ್ದುಕಾಣುವ ಹೆಸರು ಗೇರುಸೊಪ್ಪದ ರಾಣಿ "ಚೆನ್ನಭೈರದೇವಿ".
ನಮ್ಮ ಭರತಖಂಡದ ಇತಿಹಾಸದ ಪುಟವನ್ನು ಒಮ್ಮೆ ತೆರೆದು ಅದರಲ್ಲಿ ಈ ಪುಣ್ಯಭೂಮಿಯಲ್ಲಿ ರಾಜ್ಯಭಾರ ಮಾಡಿದ ರಾಣಿಯರ ಇತಿಹಾಸ ಕೇಳಿದರೆ ಒಬ್ಬರಕ್ಕಿಂತ ಇನ್ನೊಬ್ಬರ ಇತಿಹಾಸ ರೋಚಕವೆನಿಸುತ್ತದೆ.
ಆದರೆ ಇಂದಿನ ಪೀಳಿಗೆಯರು ನಂಬಿರುವ "ಗೂಗಲ್" ಗುರುಗಳನ್ನು ಕೇಳಿದರೆ ಕೆಲವೇ ಕೆಲವು ಬೆರಳೆಣಿಕೆಯಷ್ಟು ರಾಣಿಯರ ಹೆಸರು ಹೇಳುತ್ತದೆ.
ಇದರಲ್ಲಿ ಪ್ರಮುಖವಾಗಿ ಬರುವ ಹೆಸರು ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ರಾಣಿ ತಾರಾ ಭಾಯಿ, ರಾಣಿ ರುದ್ರಮ್ಮ ದೇವಿ, ದೇವಿ ಅಹಲ್ಯಾಬಾಯಿ ಹೊಲ್ಕರ್, ಕಿತ್ತೂರು ರಾಣಿ ಚೆನ್ನಮ್ಮ, ರಜಿಯಾ ಸುಲ್ತಾನ್ ಹಾಗೂ ಚಾಂದ್ ಬೀಬಿ.
ಚೆನ್ನಮ್ಮಾಜಿ, ಅಬ್ಬಕ್ಕ, ವೀರಮ್ಮಾಜೀ ಮತ್ತು ವಿಷೇಶವಾಗಿ ರಾಣಿ ಚೆನ್ನಭೈರದೇವಿಯ ಹೆಸರು ಇಂದು ಯಾರಿಗೂ ತಿಳಿದಿಲ್ಲ.
ಭರತಖಂಡದಲ್ಲಿ ಅತಿ ಹೆಚ್ಚು ಕಾಲ ರಾಜ್ಯಭಾರ ಮಾಡಿದ ಕೀರ್ತಿ ನಮ್ಮ ಕರ್ನಾಟಕಕ್ಕೆ ಸಲ್ಲುತ್ತದೆ ಅದುವೇ ಜಗತ್ಪ್ರಸಿದ್ಧ ಹಾಗೂ ಅಂದಿನ ಕಾಲದ ಶ್ರೀಮಂತ ಹಾಗೂ ಧೀಮಂತ ರಾಣಿ ಗೇರುಸೊಪ್ಪದ ಚೆನ್ನಭೈರದೇವಿ.
16ನೇ ವಯಸ್ಸಿನಲ್ಲಿ ಸಲುವಾ ರಾಜವಂಶದ ಹಡುವಳ್ಳಿ ರಾಜ್ಯದ ರಾಣಿಯಾಗಿ ತದನಂತರ ಕ್ಷೇಮಪುರದ (ಗೇರುಸೊಪ್ಪ) ರಾಣಿಯಾಗಿ 54 ವರ್ಷಗಳ ಕಾಲ ಸುದೀರ್ಘವಾಗಿ ರಾಜ್ಯಭಾರ ಮಾಡಿದ ಈ ರಾಣಿ ಕೇವಲ ಭಾರತ ಅಲ್ಲದೆ ದೂರದ ಐರೋಪ್ ದೇಶಗಳಲ್ಲೂ ಸಹಾ ಪ್ರಸಿದ್ಧಿ ಪಡೆದಿದ್ದಳು.
1552 ಇಂದ 1606ರ ವರೆಗೂ ಆಳ್ವಿಕೆ ಮಾಡಿದ ಈ ರಾಣಿಗೆ ಫೋರ್ಚುಗೀಸ್ ಅವರು "ರೈನಾ ಡಿ ಪಿಮೆಂಟಾ" (Raina De Pimenta) ಎಂದು ಕರೆದರು.
16ನೇ ಶತಮಾನದಲ್ಲಿ ಫೋರ್ಚುಗೀಸ್ ಹಾಗೂ ಇತರೆ ಐರೋಪ್ ದೇಶಗಳಲ್ಲಿ ಬಹು ಬೇಡಿಕೆ ಇದ್ದ ಕಾಳುಮೆಣಸು, ಏಲಕ್ಕಿ ಮತ್ತು ಅಕ್ಕಿಯನ್ನು ಅತಿ ಹೆಚ್ಚು ಬೆಳೆಯುತ್ತಿದ್ದ ಪ್ರದೇಶವನ್ನು ಆಳುತ್ತಿದ್ದ ರಾಣಿ ಚೆನ್ನಭೈರದೇವಿ ಇದರ ವಹಿವಾಟಿನ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದಳು.
ಇಂದಿನ ದಕ್ಷಿಣ ಗೋವ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಘಟ್ಟದ ಮೇಲಿನ ಕೆಲವು ಪ್ರದೇಶಗಳನ್ನು ಹೊಂದಿದ ಗೇರುಸೊಪ್ಪದ ರಾಣಿ ಚೆನ್ನಭೈರದೇವಿ ಫೋರ್ಚುಗೀಸ್, ಆದಿಲ್ ಶಾಹಿ, ಬೀಳಗಿ ಮತ್ತು ಇಕ್ಕೇರಿ ನಾಯಕರ ಜೊತೆಗೆ ಹಲವಾರು ಯುದ್ಧಗಳನ್ನು ಮಾಡಿದಳು.
ಭಟ್ಕಳ, ಹೊನ್ನಾವರ ಮತ್ತು ಬಸ್ರುರು ಇವಳ ಪ್ರಮುಖ ಬಂದರು ಆಗಿದ್ದು ಕಾನೂರು ಕೋಟೆ ಇವಳ ಅತ್ಯಂತ ಪ್ರಮುಖ ಅಜೇಯ ಕೋಟೆಯಾಗಿತ್ತು.
ಚೆನ್ನಭೈರದೇವಿ ವಿಜಯನಗರದ ಸಾಮಂತರಾಗಿದ್ದು ಇವಳ ಅಧೀನದಲ್ಲಿ ಇದ್ದ ಭಟ್ಕಳ ಬಂದರಿಗೆ ಪ್ರತಿ ವರ್ಷ ಸರಿಸುಮಾರು 1೦,೦೦೦ ದಿಂದ 15,೦೦೦ ಅರಬ್ಬೀ ಕುದುರೆಗಳು ಬಂದಿಳಿಯುತ್ತಿದ್ದು ಅದರಲ್ಲಿ ಹೆಚ್ಚಿನ ಕುದುರೆಗಳನ್ನು ವಿಜಯನಗರದ ರಾಯರೆ ಖರೀದಿಸುತ್ತಿದ್ದರು.
ಇನ್ನೂ 1565ರ ತಾಳಿಕೋಟೆ ಯುದ್ಧದಲ್ಲಿ ವಿಜಯನಗರದ ಪತನಾನಂತರ ಬದಲಾದ ರಾಜಕೀಯ ಸನ್ನಿವೇಶದ ಪರಿಣಾಮವಾಗಿ ಹಲವಾರು ಸಾಮಂತರು ಸ್ವತಂತ್ರ ರಾಜ್ಯಭಾರ ಮಾಡಲು ಮುಂದಾಗುತ್ತಾರೆ. ಅದರಲ್ಲಿ ಕರ್ನಾಟಕದ ಗೇರುಸೊಪ್ಪ ರಾಣಿ ಮತ್ತು ಇಕ್ಕೇರಿ ನಾಯಕರು ಪ್ರಮುಖರು.
ವಿಜಯನಗರದ ಸಾಮಂತರಾಗಿದ್ದ ಗೇರುಸೊಪ್ಪದ ರಾಣಿ ಮತ್ತು ಇಕ್ಕೇರಿ ನಾಯಕರ ಮದ್ಯದಲ್ಲಿ ಮೊದಲಿನಿಂದಲೂ ಅಂತಹಾ ಒಳ್ಳೆಯ ಸಂಬಂಧ ಇರಲಿಲ್ಲ.
ಇನ್ನೂ ವಿಜಯನಗರದ ಸಲುವಾ ರಾಜವಂಶದ ಜೊತೆಗೆ ಸಂಬಂಧ ಹೊಂದಿದ್ದರು ಸಹಾ ವಿಜಯನಗರದ ರಾಯರ ಆದೇಶದ ಮೇರೆಗೆ ಒಮ್ಮೆ ಇಕ್ಕೇರಿಯ ಸದಾಶಿವ ನಾಯಕರು ರಾಣಿಗೆ ಎಚ್ಚರಿಕೆ ನೀಡಿರುತ್ತಾರೆ.
ರಾಣಿ ಚೆನ್ನಭೈರದೇವಿ ತನ್ನ ಸಮಸ್ತ ಆಳ್ವಿಕೆ ಕಾಲದಲ್ಲಿ ಒಟ್ಟು 5 ಇಕ್ಕೇರಿ ನಾಯಕರನ್ನು ನೋಡುತ್ತಾಳೆ - ಸದಾಶಿವ ನಾಯಕ, ದೊಡ್ಡ ಸಂಕಣ್ಣ ನಾಯಕ, ಚಿಕ್ಕ ಸಂಕಣ್ಣ ನಾಯಕ, ರಾಮರಾಜ ನಾಯಕ ಮತ್ತು ಹಿರಿಯ ವೆಂಕಟಪ್ಪ ನಾಯಕ. ಇಕ್ಕೇರಿಯ ಇತಿಹಾಸವನ್ನು ಬರೆಯ ಬೇಕಾದರೆ ದೊಡ್ಡ ಸಂಕಣ್ಣ ನಾಯಕರು ಚೆನ್ನಭೈರದೇವಿ ಮೇಲೆ ಯಾಕೆ ದಂಡು ಎದ್ದು ಹೋದರು,
ರಾಮರಾಜ ನಾಯಕರು ಗೇರುಸೊಪ್ಪದಲ್ಲಿ ಹೇಗೆ ಶಿವೈಕ್ಯ ಆದರು ಎನ್ನುವುದು ಬಹಳ ಕುತೂಹಲಕಾರಿಯಾದ ವಿಷಯ. 1595ರಿಂದ ಸತತವಾಗಿ ಇಕ್ಕೇರಿ ನಾಯಕರು ಮತ್ತು ಗೇರುಸೊಪ್ಪದ ಮದ್ಯದಲ್ಲಿ ಕಾಳಗಗಳು ನಡೆಯುತ್ತಿದ್ದವು ಆದರೆ ಅಂತಿಮವಾಗಿ 1606ರ ಕೊನೆಯಲ್ಲಿ ಏಕಲಕ್ಷದೇಶದ ರಾಣಿಯನ್ನು ಕಾನೂರಿನ ಕೋಟೆಯಲ್ಲಿ ಸೆರೆ ಹಿಡಿಯಲಾಯಿತು.
ತದನಂತರ ರಾಣಿಯನ್ನು ಎಲ್ಲಿ ಎಷ್ಟು ವರ್ಷ ಯಾವ ಸ್ಥಳದಲ್ಲಿ ಇರಿಸಲಾಗಿತ್ತು ಎಂಬುದು ಬಹಳ ಕುತೂಹಲ ಕೆರಳಿಸುವ ವಿಷಯ. ಕೆಲವರು ಹಿರಿಯ ವೆಂಕಟಪ್ಪ ನಾಯಕ ಚೆನ್ನಭೈರದೇವಿಯನ್ನು ಸೆರೆಮನೆಯಲ್ಲಿ ಉಪವಾಸಕ್ಕೆ ಅಟ್ಟಿ ಸಾಯಿಸಿದ ಎಂದು ಸುಳ್ಳು ಕಥೆಗಳನ್ನು ಹೇಳುತ್ತಾರೆ.
ಆದರೆ ಇದು ಅಪ್ಪಟ ಸುಳ್ಳು ಏಕೆಂದರೆ ಅವಳು ಸೆರೆ ಸಿಕ್ಕ ಕೆಲವು ವರ್ಷಗಳ ನಂತರದಲ್ಲಿ ಸಾಯುತ್ತಾಳೆ. ಹಾಗಾದರೆ ರಾಣಿ ಚೆನ್ನಭೈರದೇವಿ ತನ್ನ ಕೊನೆಯ ಕಾಲವನ್ನು ಎಲ್ಲಿ ಕಳೆಯುತ್ತಾಳೆ, ಅವಳ ಸಮಾಧಿ ಎಲ್ಲಿ ಮತ್ತು ಇಂದು ಯಾವ ಪರಿಸ್ಥಿತಿಯಲ್ಲಿ ಇದೆ ಎಂದು ನಾನು ಮುಂದಿನ ವರ್ಷ ಬಿಡುಗಡೆ ಗೊಳಿಸುತ್ತಿರುವ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ತಿಳಿಸುವೆ.
ಇನ್ನೂ ಎಲ್ಲಾ ಅರಸರ ತರಹವೇ ರಾಣಿ ಚೆನ್ನಭೈರದೇವಿಗು ಸಹಾ ತನ್ನ ರಾಜ್ಯವನ್ನು ಅಕ್ಕಪಕ್ಕದ ರಾಜರಿಂದ ಮತ್ತು ಮುಖ್ಯವಾಗಿ ಫೋರ್ಚುಗೀಸ್ ಅವರಿಂದ ಸಂರಕ್ಷಿಸಲು ಹಲವಾರು ತಂತ್ರಗಳನ್ನು ಹಣಿಯ ಬೇಕಾಗುತ್ತದೆ.
ನಮ್ಮ ದೇಶ ಕಂಡ ಹಲವಾರು ಪ್ರಸಿದ್ಧ ರಾಣಿಯರ ವೈಯಕ್ತಿಕ ಜೀವನ ಮತ್ತು ಅವರ ಚರಿತ್ರೆ ವಧೆ ಮಾಡುವುದನ್ನು ಈ ಸಮಾಜ ನೋಡಿದ್ದು, ಮಾಡಿದ್ದು ಇದಕ್ಕೆ ರಾಣಿ ಚೆನ್ನಭೈರದೇವಿಯು ಸಹಾ ಬಲಿ ಯಾಗುತ್ತಾಳೆ. ಇವೆಲ್ಲದರ ಬಗ್ಗೆ ನಾನು ವಿಸ್ತೃತವಾಗಿ ಬರೆಯುತ್ತಿರುವೆ.
54 ವರ್ಷಗಳ ಕಾಲ ಆಳ್ವಿಕೆ ಮಾಡುವುದು ತಮಾಷೆ ಅಲ್ಲ ಅದಕ್ಕೆ ಗಂಡೆದೆ ಬೇಕಾಗುತ್ತದೆ ಹಾಗಾಗಿ ಸ್ವಾಭಾವಿಕವಾಗಿ ಆ ವ್ಯಕ್ತಿತ್ವ ಚೆನ್ನಭೈರದೇವಿಯಲ್ಲಿ ರಕ್ತಗತವಾಗಿ ಬಂದಿತ್ತು. ಫೋರ್ಚುಗೀಸ್ ಅವರು ಭಾರತಕ್ಕೆ ಕಾಲು ಇಟ್ಟಾಗ ಅವರಿಗೆ ಗೋವ ದೊರಕಲು ಪ್ರಮುಖ ಪಾತ್ರವಹಿಸಿದ್ದು ಅಂದಿನ ಗೇರುಸೊಪ್ಪದ ರಾಜ.
ವಿಜಯನಗರದ ಸಾಮಂತರಾದರೂ ಸಹಾ ತಮ್ಮ ವ್ಯಾಪಾರದ ದೃಷ್ಟಿಕೋನದಿಂದ ಗೇರುಸೊಪ್ಪದ ರಾಜ ಮತ್ತು ರಾಣಿಯರು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ವಿಜಯನಗರದ ರಾಯರ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ.
ಚೆನ್ನಭೈರದೇವಿ ತನ್ನ ಆಪತ್ತು ಕಾಲದಲ್ಲಿ ಬಲವಾಗಿ ನಂಬಿದ್ದ ತನಗೆ ಶತ್ರುಗಳಿಂದ ಸಂರಕ್ಷಣೆ ನೀಡುವ ಕೋಟೆಯೇ ಕಾನೂರು ಕೋಟೆ. ಈ ಕೋಟೆಯ ಬಗ್ಗೆ ಹಿರಿಯರು ಆಗಿರುವ ಶ್ರೀ ಗಜಾನನ ಶರ್ಮಾ ಅವರು ಸಾಕಷ್ಟು ಪತ್ರಿಕೆಯಲ್ಲಿ ಬರೆದಿದ್ದಾರೆ.
1799ರ ಟಿಪ್ಪುವಿನ ಮರಣದ ನಂತರದಲ್ಲಿ ನಡೆದ ಮೊದಲ ಸರ್ವೇಯ ಪ್ರಯುಕ್ತ ಗೇರುಸೊಪ್ಪ ಮತ್ತು ಕಾನೂರು ಕೋಟೆಗೆ ಬ್ರಿಟೀಷ್ ಅಧಿಕಾರಿಗಳಾದ ಕೊಲಿನ್ ಮೆಕೆಂಜಿ ಮತ್ತು ಫ್ರಾನ್ಸ್ ಬುಕಾನನ್ ಭೇಟಿ ನೀಡಿ ಈ ಪ್ರದೇಶದ ಅಂದಿನ ಚಿತ್ರಣವನ್ನು ತಮ್ಮ ಬರವಣಿಗೆಯಲ್ಲಿ ದಾಖಲಿಸಿದ್ದಾರೆ.
ಇನ್ನೂ ಬ್ರಿಟೀಷ್ ಅಧಿಕಾರಿ ಜಾನ್ ನ್ಯೂಮನ್ 30 ಮಾರ್ಚ್ 1806ರಂದು ಕಾನೂರು ಕೋಟೆಗೆ ಭೇಟಿ ನೀಡಿ 25.3 ಸೆಂಟಿಮೀಟರ್ × 39.7 ಸೆಂಟಿಮೀಟರ್ ಅಳತೆಯ ಚಿತ್ರವನ್ನು ಬಿಡಿಸಿರುತ್ತಾರೆ.
ಇಂದು ಆ ಚಿತ್ರ ಲಂಡನ್ ವಸ್ತು ಸಂಗ್ರಹಾಲಯದ ಕೊಲಿನ್ ಮೆಕೆಂಜಿ ಸಂಗ್ರಹದಲ್ಲಿ ಕಾಣಬಹುದು. 1806ರಲ್ಲಿ ಬಿಡಿಸಿದ ಕಾನೂರಿನ ಕೋಟೆ ಮತ್ತು ಅದರ ಪರಿಸರದ ಚಿತ್ರವನ್ನು ಇಟ್ಟು ಕೊಂಡು ಅಲ್ಲಿಗೆ ಭೇಟಿ ನೀಡಿ ಇಂದಿನ ಸ್ಥಿತಿಗತಿಗಳ ಬಗೆ ಕಣ್ಣಾರೆ ನೋಡಲು ತೆರಳಿದೆ.
ಇದು ನನ್ನ ಪ್ರಥಮ ಭೇಟಿಯಾಗಿದ್ದು ಮುಂದಿನ ಕೆಲವು ತಿಂಗಳಲ್ಲಿ ನನ್ನ ಅಧ್ಯಯನಕ್ಕಾಗಿ ಮೂರು ನಾಲ್ಕು ಬಾರಿ ಹೋಗ ಬೇಕಾಗುತ್ತದೆ.
ಕೋಟೆಯ ವಿನ್ಯಾಸ, ವಿಸ್ತಾರ, ದೇವಾಲಯ ಮತ್ತು ಅದರ ಶೈಲಿ, ಕಟ್ಟಡಗಳು ಹೀಗೆ ಹತ್ತು ಹಲವಾರು ವಿಷಯಗಳನ್ನು ಕುರಿತು ಅದ್ಯಯನ ಮಾಡಬೇಕಾಗಿದೆ.
ಕೋಟೆಯ ಮುಖ್ಯದ್ವಾರ, ರಹಸ್ಯ ದ್ವಾರಗಳು, ಕಾಳುಮೆಣಸು ಸಂಗ್ರಹಿಸಿಲು ಮಾಡಿಕೊಂಡ ಸವಲತ್ತುಗಳು ಮತ್ತು ಜಾನ್ ನ್ಯೂಮನ್ ಚಿತ್ರಿಸಿರುವ ಕೋಟೆಯ ಭತೇರಿಗಳು, ಗೋಪುರಗಳು ಮತ್ತು ಕೆಲವು ರೋಚಕ ಕಟ್ಟಡಗಳನ್ನು ಹುಡುಕುವುದು ನನ್ನ ಮುಂದಿನ ಪ್ರವಾಸದ ಮುಖ್ಯ ಗುರಿ.
ಇಂದಿನ ಶರಾವತಿ ಸಂರಕ್ಷಿತ ವನ್ಯಜೀವಿ ಅಭಯಾರಣ್ಯದಲ್ಲಿ ಇರುವ ಈ ಕೋಟೆಗೆ ಹೋಗಲು ಮುಂಚಿತವಾಗಿ ಉಪ ಸಂರಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ.
ಇನ್ನೂ ಕೊರೋನಾ ಪ್ರಯುಕ್ತ ಸ್ಥಳೀಯರು ಇಲ್ಲಿಗೆ ದೊಡ್ಡ ಗುಂಪಿನಲ್ಲಿ ಜನರು ಬರುವುದನ್ನು ಪ್ರತಿಭಟಿಸುತ್ತಾರೆ. ಕೆಲವರು ಈ ಕೋಟೆಯನ್ನು ಅಭಿವೃದ್ಧಿ ಪಡಿಸಲು ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರ ಮಾಡಬೇಕು ಎಂದು ಸಲಹೆ ನೀಡಿದರು ಸಹಾ ಅದು ಇಂದಿನ ಪರಿಸ್ಥಿತಿಯಲ್ಲಿ ಸೂಕ್ತವಲ್ಲ.
ಶರಾವತಿ ಕಣಿವೆಯಲ್ಲಿ ಇರುವ ಈ ಕೋಟೆ ಮತ್ತು ಅದರ ಪರಿಸರ ಯಾವುದೇ ರೀತಿಯ ಮನುಷ್ಯನ ಹಸ್ತಕ್ಷೇಪ ಇಲ್ಲದೆ ಕಂಗೊಳಿಸುತ್ತಿದ್ದು ಇದಕ್ಕೆ ಯಾವುದೇ ರೀತಿಯ ಧಕ್ಕೆ ತರಬಾರದು. ಇಂದು ಕಾನೂರು ಕೋಟೆ ಕರಡಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದ್ದು ಮತ್ತು ಇದರ ಸುತ್ತಮುತ್ತಲಿನ ಪರಿಸರ ಇತರೆ ವನ್ಯಜೀವಿಗಳಿಗೆ ಆವಾಸಸ್ಥಾನ ಆಗಿದೆ.
ರಾಣಿ ಚೆನ್ನಭೈರದೇವಿಯ ಜೀವನದ ಕೆಲವು ಗೊತ್ತಿಲ್ಲದ ಸಂಗತಿಗಳು (ಫೋರ್ಚುಗೀಸ್ ದಾಖಲೆಯ ಪ್ರಕಾರ), ಗೇರುಸೊಪ್ಪ, ಕಾನೂರು, ಭಟ್ಕಳ, ಹೊನ್ನಾವರ ಮತ್ತು ಮಿರ್ಜಾನ್ ಕೋಟೆಯ ವಿನ್ಯಾಸ ಮತ್ತು ಚೆನ್ನಭೈರದೇವಿಯ ಕೊನೆಯ ದಿನಗಳ ಮಾಹಿತಿಯನ್ನು ನನ್ನ ಪುಸ್ತಕದಲ್ಲಿ ಹಂಚಿಕೊಳ್ಳಲಾಗುವುದು. ಚೆನ್ನಭೈರದೇವಿಯ ಇತಿಹಾಸ ಹೇಳದೆ ಇಕ್ಕೇರಿಯ ಇತಿಹಾಸ ಎಂದಿಗೂ ಪರಿಪೂರ್ಣ ಆಗದು!!!
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ