ದ್ರಾವಿಡ ವಾಸ್ತುಶೈಲಿ -
ಭಾರತೀಯ ದೇವಾಲಯಗಳನ್ನು ಶಿಲ್ಷ ಮತ್ತು ಆಗಮಶಾಸ್ತ್ರಗಳ ಪ್ರಕಾರ ವಿಭಾಗಿಸಿರುವ ಮೂರು ಪ್ರಧಾನ ಶೈಲಿಗಳಲ್ಲಿ ಒಂದು. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದೆ. ಉಳಿದ ನಾಗರ ಮತ್ತು ವೇಸರ ಶೈಲಿಗಳು ಅನುಕ್ರಮವಾಗಿ ಉತ್ತರ ಭಾರತ ಮತ್ತು ದಖನ್ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿವೆಯೆಂದು ಹೇಳಲಾಗಿದ್ದರೂ ದಕ್ಷಿಣ ಭಾರತದಲ್ಲೂ ಕೆಲವು ನಿದರ್ಶನಗಳು ಕಂಡುಬರುತ್ತವೆ. ಮಯ ಮತ, ಮಾನಸಾರ ಮುಂತಾದ ಶಿಲ್ಪಗ್ರಂಥಗಳಲ್ಲಿ ದೇವಾಲಯದ ವಿಮಾನ ಭಾಗ ಅಡಿಯಿಂದ ಶಿಖರಾಗ್ರದವರೆಗೂ ಆರು ಅಥವಾ ಎಂಟು ಮುಖ ಮತ್ತು ಕೋನಗಳುಳ್ಳದ್ದಾಗಿದ್ದರೆ ಅವನ್ನು ದ್ರಾವಿಡ ಶೈಲಿಯ ದೇವಾಲಯಗಳೆಂದು ಪರಿಗಣಿಸಲಾಗಿದೆ. ಕೆಲವು ನಿದರ್ಶನಗಳಲ್ಲಿ ಮುಂಭಾಗ ಆಯಾಕಾರವಾಗಿಯೂ ಗ್ರೀವದವರೆಗಿನ ಭಾಗ ಚಚ್ಚೌಕವಾಗಿಯೂ ಗ್ರೀವದ ಮೇಲಿನ ಭಾಗ ಷಟ್ಕೋನ ಅಥವಾ ಅಷ್ಟಕೋನಗಳುಳ್ಳದ್ದಾಗಿಯೂ ಇರುವುದುಂಟು. ಸಾಮಾನ್ಯವಾಗಿ ಕೃಷ್ಣಾನದಿಯಿಂದ ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೂ ಈ ಶೈಲಿಯ ದೇವಾಲಯಗಳು ಅಧಿಕವಾಗಿವೆ.
ದ್ರಾವಿಡ ಶೈಲಿಯ ದೇವಾಲಯಗಳ ಶಿಖರಗಳಲ್ಲಿ ಮೇಲಕ್ಕೆ ಹೋದಂತೆ ಕ್ರಮೇಣ ಸಣ್ಣದಾಗುವ ಅಂತಸ್ತುಗಳಿರುತ್ತವೆ. ಒಂದೊಂದು ಅಂತಸ್ತೂ ಗರ್ಭಗೃಹದ ಪ್ರತಿರೂಪವಾಗಿರುತ್ತದೆ. ಒಂದೊಂದು ಅಂತಸ್ತನ್ನೂ ವಿಭಾಗಿಸುವ ದುಂಡು ಕಪೋತಗಳು ಮತ್ತು ಮೇಲಂತಸ್ತುಗಳ ಸುತ್ತಲೂ ಇರುವ ಇಕ್ಕಟ್ಟಾದ ತೆರೆದ ಅಂಕಣಗಳು ಈ ಶೈಲಿಯ ಮುಖ್ಯ ಲಕ್ಷಣಗಳಲ್ಲಿ ಸೇರುತ್ತವೆ. ಶಿಖರದ ತುದಿಯಲ್ಲಿ ಸ್ತೂಪಿಯಲ್ಲಿರುತ್ತದೆ. ಕಾಲಾನುಕ್ರಮದಲ್ಲಿ ಈ ಸ್ತೂಪಿ ಪೂರ್ಣ ಕುಂಭದ ಆಕೃತಿಯನ್ನು ಪಡೆಯಿತು. ಕ್ರಮೇಣ ವಿವಿಧ ಅಂತಸ್ತುಗಳನ್ನು ಸಂಕುಚಿತಗೊಳಿಸಿ ಅಪಾರವಾದ ಅಲಂಕರಣ ಕೆತ್ತನೆಗಳಿಂದ ಶಿಖರದ ಅಂದವನ್ನು ಸಮೃದ್ಧಗೊಳಿಸಲಾಯಿತು.
ವಿಶಾಲವಾದ ಚಚ್ಚೌಕವಾದ ಹಜಾರದ ಮಧ್ಯಭಾಗದಲ್ಲಿ ಚಚ್ಚೌಕವಾದ ಸಣ್ಣ ಗರ್ಭಗುಡಿಯೂ ಅದರ ಸುತ್ತಲೂ ಪ್ರದಕ್ಷಿಣಾಪಥವೂ ಇರುವುದು ದ್ರಾವಿಡ ಶೈಲಿಯ ದೇವಾಲಯಗಳ ಪ್ರಮುಖ ಲಕ್ಷಣ. ಇಡೀ ಹಜಾರದ ಮೇಲೆ ಚಪ್ಪಟೆಯಾದ ಚಾವಣಿ ಇರುತ್ತದೆ. ಗೋಡೆಗಳ ಹೊರಮೈಯಲ್ಲಿರುವ ಮುನ್‍ಚಾಚಿದ ಅರೆಗಂಬಗಳೂ ಅವುಗಳ ನಡುವೆ ಹಿಂಸರಿದಂತಿರುವ ಗೂಡುಗಳೂ ಕಟ್ಟಡದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕಂಬಗಳಿಂದ ಕೂಡಿದ ವಿಶಾಲವಾದ ಮಂಟಪಗಳು, ಮೊಗಸಾಲೆಗಳು, ಮಹಾದ್ವಾರದ ಮೇಲಿನ ಬೃಹತ್ಪ್ರಮಾಣದ ಗೋಪುರುಗಳು ಮಧ್ಯಕಾಲೀನ ದ್ರಾವಿಡ ಶೈಲಿಯ ದೇವಲಾಯಗಳ ವಿಶಿಷ್ಟ ಲಕ್ಷಣಗಳು. ಅಂಥ ಕಟ್ಟಡಗಳ ಅಧ್ಯಯನದಿಂದ ದ್ರಾವಿಡ ಶೈಲಿಯ ದೇವಾಲಯಗಳ ಲಕ್ಷಣಗಳನ್ನು ಕೆಳಕಂಡಂತೆ ವಿವರಿಸಬಹುದು.
1 ಗ್ರೀವ ಮತ್ತು ಸ್ತೂಪಿಗಳ ಮಧ್ಯಭಾಗವನ್ನು ಶಿಖರವೆಂದು ಕರೆಯಲಾಗುತ್ತದೆ.
2 ಗರ್ಭಗುಡಿಯನ್ನುಳಿದು ಇತರ ಭಾಗಗಳ ಚಾವಣಿ ಚಪ್ಪಟೆಯಾಗಿಯೂ ಆಲಂಕಾರರಹಿತವಾಗಿಯೂ ಇರುತ್ತದೆ. 3 ಮುಂಭಾಗದಲ್ಲಿ ಚಾವಣಿಯವರೆಗೂ ಗೋಡೆಗಳನ್ನು ಕಟ್ಟಲಾಗಿದ್ದು ಗಾಳಿಬೆಳಕಿಗಾಗಿ ಕಿಟಕಿ ಅಥವಾ ಜಾಲಂಧ್ರವನ್ನು ಜೋಡಿಸಲಾಗಿರುತ್ತದೆ.
4 ಗರ್ಭಗುಡಿಯ ಎಡಗೋಡೆಯ ಮೂಲಕ ಅಭಿಷೇಕ ಜಲವನ್ನು ಹೊರಗೊಯ್ಯುವ ಪ್ರಣಾಲ ಅಥವಾ ಜಲಮಾರ್ಗವನ್ನು ನಿರ್ಮಿಸಲಾಗುತ್ತದೆ.
5 ಗೋಪುರದ್ವಾರ ಅಥವಾ ಮಹಾದ್ವಾರ ದೇವಾಲಯದ ಮುಖ್ಯ ದ್ವಾರದ ಅಕ್ಷ ಮತ್ತು ಎಂಟು ದಿಕ್ಕುಗಳೊಂದಿಗೆ ಹೊಂದಾಣಿಕೆ ಪಡೆದಿರುತ್ತದೆ.
6 ಪ್ರಾಂಗಣದಲ್ಲಿ ಮುಖಮಂಟಪದ ಮುಂಭಾಗದಲ್ಲಿ ಬಲಿಪೀಠದ ಬಳಿ ಧ್ವಜಸ್ತಂಭವಿರುತ್ತದೆ.
7 ಗರ್ಭಗುಡಿಯ ಮೇಲೆ ಸಮತಟ್ಟಾದ ಅಂತಸ್ತುಗಳಿಂದ ಕೂಡಿದ ಶಿಖರವಿರುತ್ತದೆ.
8 ದೇವಾಲಯದ ಸುತ್ತಲೂ ಪ್ರಾಕಾರ ಅವಶ್ಯವಾಗಿ ಇರುತ್ತದೆ.
9 ಶೈವ ದೇವಾಲಯಗಳಲ್ಲಿ ನಂದಿ ಮತ್ತು ವೈಷ್ಣವ ದೇವಾಲಯಗಳಲ್ಲಿ ಗರುಡ ಶಿಲ್ಪಗಳು ಇದ್ದೇ ಇರುತ್ತವೆ.
10 ಬಾಗಿಲುವಾಡದ ಮೇಲೆ ಮತ್ತು ಗೋಡೆಗಳ ಮೇಲ್ಭಾಗದಲ್ಲಿ ಉಬ್ಬು ಶಿಲ್ಪದ ತೋರಣಗಳನ್ನು ಅಲಂಕಾರ ಪೂರ್ಣವಾಗಿ ರೂಪಿಸಲಾಗಿರುತ್ತದೆ.
11 ಗರ್ಭಗುಡಿಯ ಬಾಗಿಲುವಾಡ ಅಲಂಕಾರವಿಲ್ಲದೆ ಸರಳವಾಗಿರುತ್ತದೆ.
12 ದೊಡ್ಡ ಗಾತ್ರದ ದ್ವಾರಪಾಲರ ಶಿಲ್ಪಗಳು ಅವಶ್ಯವಾಗಿ ಇರುತ್ತವೆ.
13 ಪ್ರಧಾನ ಗುಡಿಯ ಸುತ್ತಲೂ 8,16,32ರ ಸಂಖ್ಯೆಯಲ್ಲಿ ಪರಿವಾರ ದೇವತೆಗಳ ಗುಡಿಗಳಿರುತ್ತವೆ.
14 ಮೂಲವಿಗ್ರಹದೊಂದಿಗೆ ಉತ್ಸವಬೇರಗಳು ಅವಶ್ಯವಾಗಿ ಇರುತ್ತವೆ.
15 ದೇವಾಲಯಕ್ಕೆ ಹೊಂದಿದಂತೆ ಪುಷ್ಕರಿಣಿ ಇರುತ್ತದೆ. ಮತ್ತು
16 ಹನ್ನೊಂದನೆಯ ಶತಮಾನದ ಅನಂತರ ಪ್ರಾಕಾರದಲ್ಲಿ ಪ್ರಧಾನ ಮಂದಿರದ ಉಪಾಂಗವಾಗಿ ದೇವೀಗುಡಿಯಿರುತ್ತದೆ.
ದ್ರಾವಿಡ ಶೈಲಿಯ ಮೂಲವನ್ನು ಆದಿಕಾಲದ ಗುಪ್ತರ ಕೆಲವು ದೇವಾಲಯಗಳಲ್ಲಿ ಕಾಣಬಹುದು. ವಿಶಾಲವಾದ ಆಯಾಕಾರದ ಹಜಾರದ ಮಧ್ಯಭಾಗದಲ್ಲಿ ಚಚ್ಚೌಕನಾದ ಸಣ್ಣ ಗರ್ಭಗುಡಿ, ಅದರ ಸುತ್ತಲೂ ಪ್ರದಕ್ಷಿಣಾಮಾರ್ಗ, ಮತ್ತು ಚಪ್ಪಟೆಯಾದ ಚಾವಣಿ ಇವು ಅಂಥ ದೇವಾಲಯಗಳಲ್ಲಿರುತ್ತಿದ್ದವು. ಕೆಲವೊಮ್ಮೆ ಗರ್ಭಗುಡಿಯ ಮೇಲೆ ಸ್ವಲ್ಪ ಹಿಂದಕ್ಕೆ ಸರಿದಂತೆ ಕೆಳಗಿನದಕ್ಕಿಂತಲೂ ಸಣ್ಣದಾದ ಮತ್ತೊಂದು ಮೇಲಂತಸ್ತಿನ ಗರ್ಭಗುಡಿ ಇರುತ್ತಿತ್ತು. ಕ್ರಿಸ್ತಶಕದ ಪ್ರಾರಂಭ ಕಾಲಕ್ಕೆ ನಿರ್ದೇಶಿಸಬಹುದಾದ ಕೆಲವು ಔದುಂಬರ ನಾಣ್ಯಗಳ ಮೇಲೆ ಮತ್ತು ಅಮರಾವತಿ ಸ್ತೂಪದ ಮೇಲೆ ಕಾಣಬರುವ ಉಬ್ಬುಶಿಲ್ಪಗಳಲ್ಲಿ ಅಂಥ ಎರಡಂತಸ್ತಿನ ದೇವಾಲಯಗಳ ಮಾದರಿಯನ್ನು ತೋರಿಸಲಾಗಿದೆ. ಈ ಅಂತಸ್ತುಗಳಿಂದ ಕೂಡಿದ ಗುಡಿಗಳ ಮಾದರಿ ದ್ರಾವಿಡ ಶೈಲಿಯ ವಿಮಾನದ ಮೂಲವೆಂದು ಪರಿಗಣಿಸಬಹುದು. ಐಹೊಳೆಯ ಚಾಳುಕ್ಯಪೂರ್ವದ ಲಾಡ್‍ಖಾನ್ ಮತ್ತು 7ನೆಯ ಶತಮಾನದ ಮೇಗುತಿ ದೇವಲಾಯಗಳಲ್ಲಿ ಅರೆಗಂಬಗಳ ತೆಳುವಾದ ಕಲ್ಲುಚಪ್ಪಡಿಗಳನ್ನು ತೆರೆಗಳಂತೆ ಜೋಡಿಸಿ ರೂಪಿಸಿದ ಪ್ರದಕ್ಷಿಣಾ ಮಾರ್ಗದ ಸುತ್ತಲೂ ಹೊರಗೋಡೆಗಳಿವೆ. ಅಲ್ಲದೆ ಆ ದೇವಾಲಯಗಳಲ್ಲಿ ಮತ್ತೆ ಕಂಡುಬರುವ ಅಂದವಾದ ಚೈತ್ಯಾಕಾರದ ಕಮಾನು ಕೆತ್ತನೆಗಳುಳ್ಳ ದುಂಡು ಕಪೋತಗಳಿವೆ. ಇವೆರಡೂ ಅನಂತರ ಕಾಲದ ದ್ರಾವಿಡ ಶೈಲಿಯ ದೇವಾಲಯಗಳ ಲಕ್ಷಣಗಳು. ಆದುದರಿಂದ ಗುಪ್ತ ಸಂಸ್ಕøತಿ ಪ್ರಭಾವದ ಕಾಲಕ್ಕೆ ನಿರ್ದೇಶಿಸಬಹುದಾದ ಕೆಲವು ದೇವಾಲಯಗಳಲ್ಲಿ ದ್ರಾವಿಡ ಶೈಲಿಯ ಅನೇಕ ಲಕ್ಷಣಗಳ ಮೂಲವನ್ನು ಗುರ್ತಿಸಬಹುದಾಗಿದೆ. ದ್ರಾವಿಡ ಶೈಲಿಯ ಲಕ್ಷಣಗಳಿಗೆ ಮೂಲವಾದ ಈ ಆದಿಕಾಲದ ಕಟ್ಟಡಗಳೆಲ್ಲವೂ ಅನಂತರ ಕಾಲದಲ್ಲಿ ಆ ಶೈಲಿಯ ಕೇಂದ್ರವಾದ ದ್ರಾವಿಡ ದೇಶದ ಅಥವಾ ತಮಿಳುನಾಡಿನ ಹೊರಗಡೆ ಇರುವುದು ಗಮನಾರ್ಹ. ಈ ಗುಪ್ತಕಾಲೀನ ದೇವಾಲಯಗಳ ಲಕ್ಷಣಗಳಿಂದ ಕೂಡಿದ ಮತ್ತು ಅನಂತರ ಕಾಲದಲ್ಲಿ ಹಲವಾರು ಸ್ಥಳೀಯ ಅಂಶಗಳನ್ನು ಅಳವಡಿಸಿಕೊಂಡ ದೇವಾಲಯಗಳನ್ನು ದ್ರಾವಿಡ ವಾಸ್ತುಶೈಲಿಯ ನಿದರ್ಶನಗಳೆಂದು ಪರಿಗಣಿಸಲಾಗಿದೆ.
ವೇಸರ ಶೈಲಿ:
ವೆಸರ ಶೈಲಿಯು 'ನಾಗರ' (ಉತ್ತರ) ಮತ್ತು 'ದ್ರಾವಿಡ' (ದಕ್ಷಿಣ) ಶೈಲಿಯ ವಾಸ್ತುಶಿಲ್ಪ ಮತ್ತು ಅದರ ಗುಣಲಕ್ಷಣಗಳಲ್ಲಿ ಮೂಲವಾಗಿದೆ.
ಈ ಶೈಲಿಯ ವಾಸ್ತುಶಿಲ್ಪದ ಮುಖ್ಯ ಲಕ್ಷಣಗಳು ಶಿಖರಾ ಮತ್ತೆ ಮಂಟಪ. ದಿ ಶಿಖರಾ 'ನಾಗರ' ಶೈಲಿ ಮತ್ತು ಮಂಡಪ 'ದ್ರಾವಿಡ' ಶೈಲಿ, ಸೇರಿಕೊಂಡಿದೆ ಅಂತಾರಾಲ. ವಾಸ್ತುಶಿಲ್ಪಿಗಳು ಕಂಬಗಳು, ಬಾಗಿಲು ಚೌಕಟ್ಟುಗಳು ಮತ್ತು ಛಾವಣಿಗಳನ್ನು ಸಂಕೀರ್ಣವಾಗಿ ಕೆತ್ತಿದ್ದಾರೆ.
ಹೆಚ್ಚಿನ ದೇವಾಲಯಗಳಿಗೆ ವಿರುದ್ಧವಾಗಿ, ಈ ದೇವಾಲಯಗಳಲ್ಲಿ ವಿಗ್ರಹದ ಸುತ್ತಲೂ ನಡೆಯಲು ದಾರಿಗಳಿಲ್ಲ.
'ವೆಸರ' ಶೈಲಿಯ ದೇವಾಲಯಗಳ ಉದಾಹರಣೆಗಳೆಂದರೆ ದೊಡ್ಡಾ ಬಸ್ಸಾಪ ದೇವಸ್ಥಾನ, ಲಡ್ಖಾನ್ ದೇವಸ್ಥಾನ, ಮತ್ತು ದೇವಾಲಯಗಳು ಚಾಲುಕ್ಯನ್ ರಾಜಧಾನಿ ಬಾದಾಮಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ