ಗುಹಾ ವಾಸ್ತು, ಶಿಲ್ಪ
ಅರ್ಥ: ದೊಡ್ಡ ಬಂಡೆಯ ಅಥವಾ ಬೆಟ್ಟದ ಕಡಿದಾದ ಮುಖದಲ್ಲಿ ಒಳಭಾಗಕ್ಕೆ ತೋರುವ ಆವರಣವೇ ಗುಹೆ. ಇದು ಸ್ವಾಭಾವಿಕವಾಗಿ ಆಗಿರಬಹುದು ಅಥವಾ ಮಾನವನಿರ್ಮಿತವಾಗಿರಬಹುದು. ವಾಸ್ತು ಎಂಬ ಪದ ಮಾನವನಿರ್ಮಿತ ಕೃತಿಗಳಿಗೆ ಮೀಸಲಾಗಿರುವುದರಿಂದ ಗುಹಾ ವಾಸ್ತು ಸಹ ಕೃತಕ ರಚನೆಗಳಿಗೆ ಮಾತ್ರ ಅನ್ವಯಿಸುತ್ತದೆ. ತಂತ್ರ ಮತ್ತು ಉದ್ದಿಶ್ಯದಲ್ಲಿ ಗುಹಾವಾಸ್ತುವನ್ನೇ ಹೋಲುವ ಕೆಲವು ಕೃತಿಗಳನ್ನು, ಅವು ಸ್ವರೂಪದಲ್ಲಿ ಒಳ ಆವರಣವುಳ್ಳ ಗುಹೆಗಳನ್ನು ಹೋಲದಿದ್ದರೂ, ಇದೇ ಪದದ ಚೌಕಟ್ಟಿನಲ್ಲಿ ಅಳವಡಿಸುವುದು ಕಲಾಚರಿತ್ರಕಾರರ ರೂಢಿ. ಈ ವಿಸ್ತøತ ಅರ್ಥವನ್ನು ಒಳಗೊಳ್ಳುವಂತೆ, ಗುಹಾ ವಾಸ್ತವೆಂದರೆ ಶಿಲೆಯಲ್ಲಿ ಕಂಡರಿಸಿದ ವಾಸ್ತು ಎಂದು ಪರ್ಯಾಯವಾಗಿ ಪರಿಗಣಿಸುವ ವಾಡಿಕೆ ಈಚೆಗೆ ಬೆಳೆದಿದೆ.
ಗುಹಾವಾಸ್ತು ಮತ್ತು ಕಟ್ಟಡ ರಚನಾ ವಾಸ್ತು
ಗುಹಾ ವಾಸ್ತು ರಚನಾತಂತ್ರ ಕಟ್ಟಡ ರಚನಾತಂತ್ರಕ್ಕೆ ವ್ಯತಿರಿಕ್ತವಾದ್ದು. ಕಟ್ಟಡ ನಿರ್ಮಾಣದಲ್ಲಿ ಬಿಡಿ ವಸ್ತುಗಳನ್ನು ಪೂರ್ವ ನಿಷ್ಕರ್ಷಿತ ವಿನ್ಯಾಸದಲ್ಲಿ ಜೋಡಿಸಿ ಒಂದು ಇಡೀ ರಚನೆಯನ್ನಾಗಿಸುವ ತಂತ್ರವಿದ್ದರೆ, ಗುಹಾ ವಾಸ್ತುವಿನಲ್ಲಿ ಇಡಿಯಾದ ಒಂದು ಬಂಡೆಯನ್ನು ಛೇದಿಸಿ ಆವರಣವನ್ನು ಸೃಷ್ಟಿಸುವುದು ಪದ್ಧತಿ. ಮೊದಲನೆಯದರ ಮೂಲಸೂತ್ರ ಸಂಕಲನ, ಎರಡನೆಯದರದು ವ್ಯವಕಲನ. ಗುಹಾ ವಾಸ್ತು ಈ ದೃಷ್ಟಿಯಿಂದ ಶಿಲ್ಪತಂತ್ರಕ್ಕೆ ಸಮೀಪವಾಗಿದೆ. ಛೇದನ ಕ್ರಿಯೆ ಎರಡರಲ್ಲೂ ಸಾಮಾನ್ಯ. ಆದರೆ ಶಿಲ್ಪದಲ್ಲಿ ಈ ಕ್ರಿಯೆಯ ಪರಿಣಾಮ ಘನ; ಗುಹಾ ವಾಸ್ತುವಿನಲ್ಲಿ ಇದು ಶೂನ್ಯಾವರಣ. ಈ ವಿಕೃತ ಸಂಬಂಧದಿಂದಾಗಿ ಗುಹಾ ವಾಸ್ತುವನ್ನು ಋಣಾವಸ್ತು ಅಥವಾ ಋಣಶಿಲ್ಪ ಎಂದು ಕರೆಯುವುದು ರೂಢಿ. ಗುಹಾ ವಾಸ್ತು ಕೃತಿಗಳಲ್ಲಿ ಇತರ ವಾಸ್ತುಗಳಲ್ಲಿರುವಂತೆಯೇ ಒಳ ಆವರಣವಿದ್ದರೂ, ಮುಮ್ಮುಖವೊಂದನ್ನು ಬಿಟ್ಟು ಬೇರೆ ಹೊರಮೈಯ ಅಭಾವವಿರುವುದರಿಂದ, ಶಿಲ್ಪಾಲಂಕರಣವೆಲ್ಲ ಒಳ ಮತ್ತು ಮುಮ್ಮುಖಗಳಿಗಷ್ಟೇ ಸೀಮಿತವಾಗುತ್ತದೆ. ಈ ಶಿಲ್ಪಗಳು ಗುಹಾ ವಾಸ್ತುವಿನ ಮುಖ್ಯ ಉದ್ದಿಶ್ಯವಾದ ಒಳ ಆವರಣಕ್ಕೆ ಬಾಧೆಯಾಗದಂತೆ ಇರಬೇಕಾಗಿರುವುದರಿಂದ, ಗುಹಾ ವಾಸ್ತುವಿನಲ್ಲಿ ಶಿಲ್ಪವಿದ್ದರೆ ಅದು ಅಲಂಕರಣವಾಗಿ ಸಹಯೋಗಿಯಾಗಿ ಮಾತ್ರ ಇರುತ್ತದೆ.
ಗುಹಾ ವಾಸ್ತು ಪ್ರಾಚೀನತೆ
ಗುಹೆಗಳು ಶಿಲಾಯುಗದ ಕಾಲದಿಂದಲೇ ಮಾನವನ ವಾಸಸ್ಥಾನಗಳಾಗಿದ್ದರೂ ಈ ರೂಢಿಗೂ ಗುಹಾ ವಾಸ್ತುವಿಗೂ ಯಾವ ಸಂಬಂಧವೂ ಇಲ್ಲ. ಗುಹಾ ವಾಸ್ತುವನ್ನು ರಚಿಸಲು ಗಟ್ಟಿಕಲ್ಲನ್ನು ಛೇದಿಸಬೇಕಾದರೆ ಲೋಹದ ಆಯುಧಗಳು ಆವಶ್ಯಕವಾಗುತ್ತವೆ. ಲೋಹದ ಜ್ಞಾನ ಬೆಳೆದದ್ದು ಮಾನವನ ಇತಿಹಾಸದಲ್ಲಿ ಕೇವಲ ಸುಮಾರು 5,000 ವರ್ಷಗಳ ಹಿಂದೆ; ಆ ಹೊತ್ತಿಗೆ ಮಾನವ ಸಮಾಜದ ವ್ಯವಸ್ಥೆ ಶಿಲಾಯುಗದ ಸ್ಥಿತಿಯಿಂದ ಬಹಳಷ್ಟು ಬದಲಾಗಿ ಗ್ರಾಮ ಮತ್ತು ನಗರಗಳು ಬೆಳೆದಿದ್ದು, ಗುಹಾ ವಾಸ ಪದ್ಧತಿ ನಾಗರಿಕ ಸಮಾಜದಲ್ಲಿ ತೊರೆದುಹೋಗಿದ್ದಿತಲ್ಲದೆ, ನವಸಮಾಜವ್ಯವಸ್ಥೆಗೆ ಅನುಕೂಲವಾಗುವ ಅನೇಕ ರೀತಿಯ ಹೊಸ ವಾಸ್ತು ಪದ್ಥತಿಗಳು ಬಳಕೆಗೆ ಬಂದಿದ್ದುವು. ಸಹಜವಾಗಿ ಈ ಕಾಲದಲ್ಲಿ ಪ್ರಾರಂಭವಾದ ಗುಹಾ ವಾಸ್ತುವೂ ರೂಪ, ಉದ್ದಿಶ್ಯಗಳಲ್ಲಿ ತತ್ಕಾಲೀನ ರಚನಾವಾಸ್ತುವನ್ನೇ ಅನುಸರಿಸುತ್ತದೆ. ಈಜಿಪ್ಟ್ ದೇಶದಲ್ಲಿ ಸುಲಭವಾಗಿ ಕೊರೆಯಲು ಅನುಕೂಲವಾದ ಬಂಡೆಗಳು ಇದ್ದು, ಲೋಹದ ಉಪಯೋಗವೂ ಬಹು ಮುಂಚೆ ಹರಡಿದ್ದುದರಿಂದ ವಿಶ್ವದ ಮೊಟ್ಟಮೊದಲ ಗುಹಾ ವಾಸ್ತು ಕೃತಿಗಳೆಲ್ಲ ಈ ದೇಶದಲ್ಲಿ ಇವೆ. ಈ ಪ್ರಾಚೀನ ಕೃತಿಗಳೆಲ್ಲ ಸಮಾಧಿಗಳು. ತತ್ಪೂರ್ವ ನಾಗರಿಕ ಸಮಾಜದಲ್ಲಿ ಛೇದನದಿಂದ ನಿರ್ಮಿಸಲಾದ ಆವರಣದ ಉಪಯೋಗ ಶವಸಂಸ್ಕಾರಕ್ಕೆ ಮಾತ್ರ ಮೀಸಲಾಗಿತ್ತು. ಹೆಣ ಹೂಳಲು ಗಟ್ಟಿ ನೆಲದಲ್ಲಿ ಹಳ್ಳಗಳನ್ನು ತೋಡುತ್ತಿದ್ದ ಪದ್ಧತಿ ನ್ಯೂಬಿಯ, ಫಯೂಮ್ ಮುಂತಾದೆಡೆಗಳಲ್ಲಿ ಕ್ರಿ.ಪೂ. 4ನೆಯ ಸಹಸ್ರಮಾನದಲ್ಲೆ ಇತ್ತು. ಈ ಛೇದಿತ ಶವಗುಳಿಗಳೇ ಈಜಿಪ್ಟಿನ ಗುಹಾ ವಾಸ್ತುವಿನ ಮೊದಲ ಘಟ್ಟವಾಗಿರಬಹುದೆಂದು, ಈ ಎರಡೂ ರೀತಿಯವುಗಳ ಉದ್ದಿಶ್ಯ ಶವಸಂಸ್ಕಾರವೇ ಆಗಿರುವುದರಿಂದ, ಊಹಿಸಬಹುದಾಗಿದೆ. ಗುಹಾ ವಾಸ್ತು ರಚನೆ ಸಾಮಾನ್ಯ ಸಮಾಧಿಗಳಿಗಿಂತ ಹೆಚ್ಚು ಶ್ರಮದಾಯಕವೂ ಅಧಿಕ ವೆಚ್ಚದ್ದೂ ಆದ್ದರಿಂದ ಇಂಥ ಕೃತಿಗಳು ರಾಜನ ಅಥವಾ ಶ್ರೀಮಂತ ಆಸ್ಥಾನಿಕರ ಸತ್ತಾಗಿದ್ದುವು. ಜೊತೆಗೆ, ಮೃತನಾದವನು ಬದುಕಿದ್ದಾಗ ಇಹದಲ್ಲಿ ಅನುಭವಿಸುತ್ತಿದ್ದ ಸಮಸ್ತ ಅನುಕೂಲಗಳೂ ಇಲ್ಲಿಯ ರೀತಿಯ ವಾಸಸ್ಥಾನವೂ ಮರಣಾನಂತರವೂ ಅವನಿಗೆ ಬೇಕಾಗುತ್ತವೆ ಎಂಬ, ತತ್ಕಾಲೀನ ಈಜಿಪ್ಪಿನಲ್ಲಿ ಹರಡಿದ್ದ, ಮರಣೋತ್ತರ ಸ್ಥಿತಿಯನ್ನು ಕುರಿತು, ನಂಬಿಕೆಗಳು ಗುಹಾ ವಾಸ್ತುರಚನೆಯನ್ನು ಪ್ರೋತ್ಸಾಹಿಸಿದವು. ಈ ಸಂಪ್ರದಾಯ ಕ್ರಿಸ್ತ ಪೂರ್ವ ಸು. 6ನೆಯ ಶತಮಾನದ ವರೆಗೂ ಅಲ್ಲಿ ನಡೆದು ಬಂದದ್ದಲ್ಲದೆ, ಇದರ ಪ್ರಭಾವ ಸುತ್ತಲಿನ ದೇಶಗಳಿಗೂ ಹರಡಿ ಗುಹಾ ವಾಸ್ತು ರಚನೆಗೆ ಉತ್ತೇಜಕವಾಯಿತು. ಆಫ್ರಿಕ ಮತ್ತು ಏಷ್ಯದ ಹಲವೆಡೆಗಳಲ್ಲಿ ಈ ಗುಹಾ ವಾಸ್ತು ಸಂಪ್ರದಾಯ ಕ್ರಿ. ಶ. 16-17ನೆಯ ಶತಮಾನದವರೆಗೂ ನಡೆದು ಬಂತು. ಆದರೆ ಕ್ರಮೇಣ ಗುಹಾ ವಾಸ್ತು ಸಮಾಧಿಗಳಿಗಷ್ಟೇ ಮೀಸಲಾಗದೆ, ದೇಶ ಕಾಲ ಪ್ರಭಾವದಿಂದಾಗಿ ಇತರ ಅನೇಕ ಧಾರ್ಮಿಕ ಅವಶ್ಯಕತೆಗಳಿಗೂ ಬಳಕೆಯಾಯಿತು.
ಭಾರತದ ಗುಹಾವಾಸ್ತು :
ಬೆಟ್ಟಗಳನ್ನು ಕೊರೆದು ಆಲಯಗಳನ್ನು ನಿರ್ಮಿಸಿ, ಶಿಲ್ಪಗಳನ್ನು ಬಿಡಿಸುವ ಪದ್ಧತಿ ಅತ್ಯಂತ ಪ್ರಾಚೀನ ಕಾಲದಿಂದಲೂ ಹಲವು ದೇಶಗಳಲ್ಲಿ ಇತ್ತಾದರೂ ಗುಹಾಲಯ ನಿರ್ಮಾಣ ಕಾರ್ಯದಲ್ಲಿ ಪ್ರಾಚೀನ ಭಾರತೀಯರ ವಿನ್ಯಾಸ, ನಯ, ನಮೂನೆಗಳು ಅಸದೃಶ ಮತ್ತು ಆಶ್ಚರ್ಯಕರವಾಗಿವೆ. ಭಾರತದಲ್ಲಿ ಕ್ರಿ. ಪೂ. 3 ರಿಂದ ಕ್ರಿ. ಶ. 7ನೆಯ ಶತಮಾನದವರೆಗಿನ ಕಾಲದಲ್ಲಿ ಸುಮಾರು 1,200ಕ್ಕೂ ಹೆಚ್ಚು ಗುಹಾ ದೇವಾಲಯಗಳು ನಿರ್ಮಾಣವಾದುವು. ಮೊಟ್ಟಮೊದಲು ಗುಹಾಲಯಗಳನ್ನು ನಿರ್ಮಿಸಿದವರು ಬೌದ್ಧರು. ಅನಂತರ ಜೈನರೂ ಹಿಂದೂಗಳೂ ಈ ಪದ್ಧತಿಯನ್ನು ಅಳವಡಿಸಿಕೊಂಡರು. ಬೌದ್ಧ ದರ್ಶನಕ್ಕೆ ಸಂಬಂಧಿಸಿದ ಗುಹಾ ದೇವಾಲಯಗಳು ಸಂಖ್ಯೆಯಲ್ಲಿ ಅತ್ಯಂತ ಹೆಚ್ಚಾಗಿದೆ. ಬೌದ್ಧರು ಪ್ರಾರಂಭದಲ್ಲಿ ಗುಹಾಲಯಗಳ ರಚನೆಗೆ ಅಷ್ಟು ಮಹತ್ವ ನೀಡಿದ ಕಾರಣಗಳನ್ನು ಕುರಿತು ವಿದ್ವಾಂಸರು ವಿವೇಚಿಸಿದ್ದಾರೆ. ಗುಹಾಲಯಗಳನ್ನು ಬೆಟ್ಟದಲ್ಲೇ ಕೊರೆಯುವುದರಿಂದ ಅವು ಅದರ ಅವಿಭಾಜ್ಯ ಭಾಗವಾಗಿ ಪರ್ವತದಂತೆ ಅಚಲವೂ, ಅಚಂದ್ರಾರ್ಕವೂ ಆಗಿ ಮುಂದುವರಿಯುವುದೆಂಬ ನಂಬಿಕೆಯೂ ಬೌದ್ಧ ಬಿಕ್ಷುಗಳು ಗಿರಿಧಾಮಗಳ ಮಧ್ಯೆ ಶಾಂತಿಯಿಂದ ಧ್ಯಾನಾಸಕ್ತರಾಗಲು ಇಲ್ಲಿ ಎಡೆ ದೊರಕುವುದೆಂಬುದೂ ಮುಖ್ಯ ಕಾರಣಗಳು.
ಬಿಹಾರ, ಮಹಾರಾಷ್ಟ್ರ, ಆಂದ್ರಪ್ರದೇಶ, ಗುಜರಾತ್, ರಾಜಸ್ಥಾನ, ಒರಿಸ್ಸಾ, ಕರ್ನಾಟಕ ಮತ್ತು ತಮಿಳು ನಾಡುಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗುಹಾ ದೇವಾಲಯಗಳನ್ನು ನಿರ್ಮಿಸಲಾಗಿದೆ. ಕ್ರಿ.ಪೂ. 3 ನೆಯ ಶತಮಾದಿಂದ ಕ್ರಿ.ಶ. 2ನೆಯ ಶತಮಾನದವರೆಗೆ ಹೀನಯಾನ ಬೌದ್ಧ ಪಂಥದವರು ಗುಹಾ ದೇವಾಲಯಗಳನ್ನು ಕೊರೆಸಿದರು. ಅನಂತರ 7ನೆಯ ಶತಮಾನದವರೆಗೂ ಮಹಾಯಾನ ಬೌದ್ಧ ಶಾಖೆಗೆ ಸಂಬಂಧಿಸಿದ ಗುಹಾ ದೇವಾಲಯಗಳು ನಿರ್ಮಾಣವಾದುವು. ಕ್ರಿ. ಶ. 5ನೆಯ ಶತಮಾದಿಂದ ಜೈನ ಪಂಥೀಯರೂ ವೈದಿಕ ಮತಾವಲಂಬಿಗಳೂ ಗುಹಾಲಯಗಳನ್ನು ಕೊರೆಸಿದರು. ಶಿಲ್ಪಕಲೆ ಪ್ರಪ್ರಥಮವಾಗಿ ಸಮ್ರಾಟ ಅಶೋಕನ ಕಾಲದಲ್ಲಿ ಪ್ರಚಾರಕ್ಕೆ ಬಂತು. ಅಶೋಕ ಚಕ್ರವರ್ತಿ ಬೌದ್ಧಮತ ಪ್ರಚಾರ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಕೈಗೊಂಡ; ಬೌದ್ಧ ಬಿಕ್ಷುಗಳಿಗಾಗಿ ಅನೇಕ ಸ್ತೂಪಗಳನ್ನು ವಿಹಾರಗಳನ್ನೂ ಗುಹಾಲಯಗಳನ್ನೂ ನಿರ್ಮಿಸಿದ. ಉದಯಗಿರಿ, ಬರಾಬರ್ ಬೆಟ್ಟಗಳು, ಪಾಶ್ರ್ವನಾಥ ಗುಡ್ಡ ಮತ್ತು ಗಿರ್ನಾರ್ ಬೆಟ್ಟಗಳಲ್ಲಿ ಅಶೋಕನ ಕಾಲದಲ್ಲಿ ಗುಹಾಲಯಗಳನ್ನು ಕೊರೆಯಲಾಯಿತು. ಅನಂತರ ದಖನ್ನಿನ ಪಶ್ಚಿಮ ಭಾಗದಲ್ಲಿ ಬೇರ ಬೇರೆ ಸಂತತಿಗಳ ಆಳ್ವಿಕೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಗುಹಾಲಯಗಳು ನಿರ್ಮಾಣವಾದುವು. ಪ್ರಾರಂಭದಲ್ಲಿ ಹೀನಾಯಾನ ಪಂಥಕ್ಕೆ ಹೊಂದಿಕೊಂಡಂತೆ ಅವುಗಳಲ್ಲಿ ಶಿಲ್ಪಗಳನ್ನು ಕೆತ್ತಿ ಚಿತ್ರಗಳನ್ನು ಬಿಡಿಸಲಾಗಿತ್ತು. ಕ್ರಮೇಣ ಅವುಗಳಲ್ಲಿ ಹೆಚ್ಚು ಗುಹಾಲಯಗಳನ್ನು ಮಹಾಯಾನ ಮತ್ತು ಇತರ ಪಂಥಗಳಿಗೆ ಪರಿವರ್ತಿಸಲಾಯಿತು.
ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಂತೆ ಮಹಾರಾಷ್ಟ್ರದ ನಾಸಿಕದಿಂದ ಸುತ್ತ ಮುತ್ತಿನ ಸುಮಾರು 320 ಕಿ.ಮೀ. ಪ್ರದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಗುಹಾಲಯಗಳನ್ನು ಕೊರೆಯಲಾಗಿದೆ. ಪರ್ವತಮಯವಾದ ಈ ಪ್ರದೇಶ ಗುಹಾಲಯ ನಿರ್ಮಾಣಕ್ಕೆ ಅನುಕೂಲವಾಗಿತ್ತು. ಈ ಪ್ರತಿಯೊಂದು ಗುಹಾಲಯದಲ್ಲೂ ಪ್ರಾರ್ಥನೆಗಾಗಿ ಒಂದು ವಿಶಾಲ ಅಂಗಳ ಮತ್ತು ಒಂದು ಚೈತ್ಯ ಇದ್ದೇ ಇರುತ್ತವೆ. ಚೈತ್ಯದಲ್ಲಿ ಬುದ್ಧನ ಅವಶೇಷಗಳನ್ನೊಳಗೊಂಡ ಸ್ತೂಪ ಅಥವಾ ಧಾತುಗರ್ಭ ಇರುತ್ತದೆ. ಇದನ್ನು ಬಂಡೆಯಲ್ಲಿ ಕೊರೆದು ಅಲಂಕರಿಸಲಾಗಿರುತ್ತದೆ. ಅಜಂತ ಮತ್ತು ಕಾರ್ಲೆಯ ಗುಹಾಲಯಗಳಿರುವ ವಿಶಾಲವಾದ ಚೈತ್ಯಾಲಯಗಳು ಸುಮಾರು 30' ಎತ್ತರದ ಸ್ತೂಪಗಳನ್ನೊಳಗೊಂಡಿವೆ.
ಬಿಹಾರದ ಬರಾಬರ್ ಗುಹಾಲಯಗಳು ಅತ್ಯಂತ ಪ್ರಾಚೀನವಾದುವು. ಬುದ್ಧ ಗಯೆಯಿಂದ ಉತ್ತರಕ್ಕೆ 26 ಕಿ.ಮೀ. ದೂರದಲ್ಲಿ ಫಲಗು ನದಿಯ ಎಡದಂಡೆಯ ಮೇಲೆ ಬರಾಬರ್ ಬೆಟ್ಟಗಳಲ್ಲಿ ಏಳು ಗುಹಾಲಯಗಳನ್ನೊ ಕೊರೆಯಲಾಗಿದೆ. ಅತಿ ದೊಡ್ಡದಾದ ನಾಗಾರ್ಜುನ ಗುಹಾಲಯ 46' ಉದ್ಧ ಮತ್ತು 19' ಅಗಲವಾಗಿರುವ ಒಂದೇ ಅಂಗಳದಿಂದ ಕೂಡಿದ್ದು. ಸುಧಾಮ ಮತ್ತು ಲೋಮಶ ಋಷಿಯ ಗುಹಾಲಯಗಳು ನಾಗಾರ್ಜುನ ಗುಹೆಗಿಂತಲೂ ಸ್ವಲ್ಪ ಚಿಕ್ಕವು. ಇಲ್ಲಿಯ ಆರು ಗುಹಾಲಯಗಳಲ್ಲಿ ಪಾಲಿ ಭಾಷೆಯಲ್ಲಿ ಕೆತ್ತಿರುವ ಶಾಸನಗಳಿವೆ. ಸುಧಾಮ ಗುಹಾಲಯ ಅಶೋಕನ ಆಳ್ವಿಕೆಯ 12ನೆಯ ವರ್ಷದಲ್ಲಿ ಕೆತ್ತಲಾದುದು. ಗೋಪೀ ಗುಹಾಲಯದಲ್ಲಿರುವ ಶಾಸನದ ಪ್ರಕಾರ ಅದು ಅಶೋಕನ ಮೊಮ್ಮಗನಾದ ದಶರಥನ ಆಳ್ವಿಕೆಯ ಕಾಲದಲ್ಲಿ ಕೊರೆಯಲ್ಪಟ್ಟದ್ದು. ಲೋಮಶ ಋಷಿಯ ಗುಹಾಲಯವನ್ನು ಮೌರ್ಯರ ಆಳ್ವಿಕೆಯಲೇ ಕೊರೆಯಲಾಯಿತೆಂದೂ ಅನಂತರ ವೈದಿಕ ಮತಾವಲಂಬಿಗಳು ಅದನ್ನು ಪರಿವರ್ತಿಸಿದರೆಂದೂ ಅಲ್ಲಿಯ ಶಾಸನಗಳಿಂದ ತಿಳಿದುಬರುತ್ತದೆ. ಈ ಒಂದು ಗುಹಾಲಯದಲ್ಲಿ ಮಾತ್ರ ಶಿಲ್ಪಗಳನ್ನು ಕೆತ್ತಲಾಗಿದೆ. ಬರಾಬರ್ ಗುಹಾಲಯಗಳ ಬಾಗಿಲುಗಳಿಂದ ಬೆಳಕು ಮತ್ತು ಗಾಳಿ ಒಳಗಿನ ಅಂಗಳಕ್ಕೆ ಬರುವಂತೆ ವ್ಯವಸ್ಥೆಯಿದೆ. ಇಲ್ಲಿಯ ಗುಹಾಲಯಗಳಿಗೆ ಮರದ ಬಾಗಿಲುಗಳನ್ನಾಗಲಿ ಇತರ ಉಪಕರಣಗಳನ್ನಾಗಲಿ ಅಳವಡಿಸಿಕೊಂಡಿರಲಿಲ್ಲ. ಅವುಗಳ ಒಳಭಾಗದ ಕಲ್ಲಿನ ಗೋಡೆಗಳನ್ನು ಅಂದವಾಗಿ ನುಣುಪುಗೊಳಿಸಲಾಗಿದೆ. ಬರಾಬರ್ ಗುಹಾಲಯಗಳು ಆಕಾರದಲ್ಲಿ ಚಿಕ್ಕವಾಗಿದ್ದು ಚಿತ್ರ ಶಿಲ್ಪದಿಂದ ಕೂಡಿರದಿದ್ದರೂ ಅತ್ಯಂತ ಪ್ರಾಚೀನವಾದವು. ರಾಜಗೃಹದ ಬಳಿಯಲ್ಲಿರುವ ಗುಹಾಲಯಗಳನ್ನೂ ಕ್ರಿಸ್ತಪೂರ್ವದಲ್ಲೇ ಕೊರೆಯಲಾಯಿತೆಂದೂ ಕ್ರಮೇಣ ಅವುಗಳಲ್ಲಿ ಮಾರ್ಪಾಡುಗಳಾದುವೆಂದೂ ತಿಳಿದುಬಂದಿದೆ. ಒರಿಸ್ಸದ ಉದಯಗಿರಿ ಬೆಟ್ಟಗಳಲ್ಲಿರುವ ಗುಹಾಲಯಗಳು ವಾಸ್ತುಶಿಲ್ಪ ದೃಷ್ಟಿಯಿಂದ ಮುಖ್ಯವಾಗಿವೆ. ಕಟಕ್‍ನ ಅಗ್ನೇಯಕ್ಕೆ 26 ಕಿ.ಮೀ. ಮತ್ತು ಭುವನೇಶ್ವರದಿಂದ 7 ಕಿ.ಮೀ. ದೂರದಲ್ಲಿ ಮಹಾನದಿಯ ಮುಖ್ಯ ಭೂಮಿಯಲ್ಲಿ ದ್ವೀಪಗಳೋಪಾದಿಯಲ್ಲಿರುವ ಮರಗಿಡಗಳಿಂದಾವೃತವಾದ ಗುಡ್ಡಗಳಲ್ಲಿ ಬೌದ್ಧ ಗುಹಾಲಯಗಳಿವೆ. ಆದರೆ ಅವುಗಳಲ್ಲಿ ಒಂದು ಮಾತ್ರ ಬೌದ್ಧರದು. ಉಳಿದವು ಜೈನರವು. ಉದಯಗಿರಿಯಲ್ಲಿ 17 ಮುಖ್ಯ ಗುಹಾಲಯಗಳಿವೆ. ಇವಲ್ಲದೆ ಅನೇಕ ಸಣ್ಣ ಗುಹಾಶ್ರಮಗಳಿವೆ. ಇವನ್ನು ಬೌದ್ಧ ಭಿಕ್ಷುಗಳ ಧ್ಯಾನ ಹಾಗೂ ವಾಸಕ್ಕಾಗಿ ಕೊರೆಯಲಾಗಿತ್ತು. ಉದಯಗಿರಿಯ ಹೆಚ್ಚಿನ ಗುಹಾಲಯಗಳಲ್ಲಿ ಶಾಸನಗಳು ದೊರೆಯುತ್ತಿದ್ದರೂ ಅವನ್ನು ನಿರ್ಮಿಸಿದವರ ಹೆಸರುಗಳಾಗಲಿ, ಕಾಲವಾಗಲಿ ತಿಳಿದುಬರುವುದಿಲ್ಲ. ಹಾತಿಗುಂಫಾ ಗುಹಾಲಯದಲ್ಲಿರುವ ಶಾಸನ ಖಾರವೇಲನ ಸಾಧನೆಗಳನ್ನು ವಿವರಿಸುತ್ತದೆ. (ನೋಡಿ- ಖಾರವೇಲ) ಸಮೀಪದ ಖಂಡಗಿರಿ ಬೆಟ್ಟಗಳಲ್ಲೂ ಅಷ್ಟು ಪ್ರಾಚೀನವಲ್ಲದ ಅನೇಕ ಗುಹಾಲಯಗಳುಂಟು. ಉದಯಗಿರಿಯಿಂದ 10 ಕಿ.ಮೀ. ದೂರದಲ್ಲಿರುವ ಪೌಲಿ ಬಳಿಯ ಅಶ್ವತ್ಥಾಮ ಬಂಡೆಯ ಮೇಲೆ ಅಶೋಕ ಕ್ರಿ. ಪೂ. 250 ರಲ್ಲಿ ತನ್ನ ಶಾಸನವನ್ನು ಕೆತ್ತಿಸಿದ. ಆ ವೇಳೆಗೆ ಒರಿಸ್ಸದಲ್ಲಿ ಬೌದ್ಧಮತ ಪ್ರಚಾರದಲ್ಲಿತ್ತು. ಉದಯಗಿರಿಯ ಗುಹಾಲಯಗಳನ್ನು ಕ್ರಿ. ಪೂ. 250 ರಿಂದ ಕ್ರಿ. ಶ. 100ರ ಮಧ್ಯೆ ಕೊರೆಯಲಾಯಿತೆಂದು ಗೊತ್ತಾಗುತ್ತದೆ.
ಬೌದ್ಧಮತ ಕ್ಷೀಣಿಸಿ ಹಿಂದೂ ಮತ್ತು ಜೈನ ಮತಗಳು ಪ್ರಬಲವಾದಾಗ ಪ್ರಾಚೀನ ಗುಹಾಲಯಗಳು ಹಲವು ಬದಲಾವಣೆಗಳಿಗೆ ಒಳಗಾದುವಲ್ಲದೆ ಕೆಲವು ಹೊಸ ಆಲಯಗಳೂ ಕೊರೆಯಲ್ಪಟ್ಟವು. ಖಂಡಗಿರಿ ಬೆಟ್ಟಗಳಲ್ಲಿ ಹಲವು ಗುಹಾಲಯಗಳು ಜೈನಯತಿಗಳಿಗಾಗಿ ಕೊರೆಯಲ್ಪಟ್ಟವು. ಒರಿಸ್ಸದ ಎಲ್ಲ ಗುಹಾ ದೇವಾಲಯಗಳಲ್ಲೂ ಕಂಬಗಳಿಂದ ಕೂಡಿದ ವಿಹಾರಗಳೂ ಅವುಗಳಲ್ಲಿ ಭಿಕ್ಷುಗಳ ವಾಸಕ್ಕಾಗಿ ಕೊರೆಯಲಾದ ಚಿಕ್ಕ ಚಿಕ್ಕ ಗುಹೆಗಳೂ ಸಾಮಾನ್ಯವಾಗಿ ಇರುತ್ತದೆ. ಉದಯಗಿರಿಯ ಗುಹಾಲಯಗಳಲ್ಲೆಲ್ಲ ರಾಣಿಗುಂಫ ಅತ್ಯಂತ ದೊಡ್ಡದು ಮತ್ತು ಶಿಲ್ಪದೃಷ್ಟಿಯಿಂದ ಸುಂದರವಾದ್ದು. ರಾಣಿಗುಂಫ ಎರಡು ಅಂತಸ್ತುಗಳಿಂದ ಕೂಡಿದ್ದು, ಮೊದಲನೆಯದು 63' ಚಚ್ಚೌಕಾಕಾರವಾಗಿಯೂ ಎರಡನೆಯದು 43' ಚಚ್ಚೌಕಾಕಾರವಾಗಿಯೂ ಇದೆ. ಇದರೆ ಮೇಲೆ ಸುಮಾರು 23' ಚಚ್ಚೌಕಾಕಾರದ ಮತ್ತೊಂದು ಅಂತಸ್ತನ್ನು ಕೊರೆಯಲು ಯೋಜಿಸಿದ್ದು ಕೈಬಿಡಲಾಗಿದೆ. ವಿಹಾರದ ಕಂಬಗಳನ್ನೂ ನಯಗೊಳಿಸಿ ಶಿಲ್ಪಾಕೃತಿಗಳನ್ನು ಕೊರೆಯಲಾಗಿದೆ.
ಸೌರಾಷ್ಟ್ರದಲ್ಲಿ ಮೌರ್ಯರ ಕಾಲದಿಂದಲೂ ಬೌದ್ಧ ಗುಹಾಲಯಗಳನ್ನು ಕೊರೆಯಲಾಗಿತ್ತು. ಗಿರ್ನಾರ್ ಬೆಟ್ಟ ಅತ್ಯಂತ ಪ್ರಾಚೀನ ಕಾಲದಿಂದಲೂ ಪವಿತ್ರ ಸ್ಥಳವೆಂದು ಪರಿಗಣಿಸಲ್ಪಟ್ಟಿತ್ತು. ಅಶೋಕ ಚಕ್ರವರ್ತಿಯ ಕಾಲದಲ್ಲಿ ಅಲ್ಲಿ ಬೌದ್ಧಮತ ವ್ಯಾಪಿಸಿತ್ತು. ಬೌದ್ಧರಿಗಾಗಿ ಗುಹಾಂತರ್ದೇವಾಲಯಗಳು ಅಲ್ಲಿ ಪ್ರಥಮವಾಗಿ ಕೊರೆಯಲ್ಪಟ್ಟಿದ್ದುವು. ಬೌದ್ಧಮತ ಕ್ಷೀಣಿಸಿದ ಅನಂತರ ಅದು ಜೈನರ ಕ್ಷೇತ್ರವಾಯಿತು. ಗಿರ್ನಾರ್ ಬೆಟ್ಟದ ಬಳಿಯಿರುವ ಜುನಾಗಢದಲ್ಲಿ ಅಶೋಕನ, ಶಕಕ್ಷತ್ರಪರ ಹಾಗೂ ಗುಪ್ತರ ಶಾಸನಗಳು ದೊರೆತಿವೆ. ಗಿರ್ನಾರ್ ಬೆಟ್ಟದ ತುದಿಯಿಂದ 600' ಕೆಳಕ್ಕೆ ಹಾಗೂ ಸಮುದ್ರಮಟ್ಟದಿಂದ 3,000' ಎತ್ತರದಲ್ಲಿ ಬೆಟ್ಟವನ್ನು ಕೊರೆದು 16 ಗುಹಾಲಯಗಳನ್ನು ಕಾಲಕ್ರಮದಲ್ಲಿ ಕೊರೆಯಲಾಗಿದೆ. ಇವುಗಳ ಪೈಕಿ ನೇಮಿನಾಥ ಗುಹಾಲಯ ಅತ್ಯಂತ ವಿಶಾಲವಾದ್ದು. 195' ಉದ್ದ ಮತ್ತು 130' ಅಗಲದ ಆವರಣವನ್ನು ಕೊರೆದು ಮಧ್ಯದಲ್ಲಿ ಆಲಯವನ್ನು ಬಿಡಿಸಲಾಗಿದೆ. ಆವರಣದಲ್ಲಿ 70 ಗುಹೆಗಳನ್ನು ಕೊರೆದು ಅವುಗಳಲ್ಲಿ ಪದ್ಮಾಸನಾರೂಢರಾಗಿ ಕುಳಿತಿರುವ ಬೇರೆ ಬೇರೆ ತೀರ್ಥಂಕರರ ಹಾಗೂ ದೇವತೆಗಳ ಆಕೃತಿಗಳನ್ನು ಕೆತ್ತಲಾಗಿದೆ. ನೇಮಿನಾಥ ಗುಹಾಲಯದ ಕಂಬಗಳನ್ನು ಸುಂದರವಾದ ಶಿಲ್ಪಗಳಿಂದ ಅಲಂಕರಿಸಲಾಗಿದೆ. ಜುನಾಗಢದಿಂದ 48 ಕಿ.ಮೀ. ದೂರದಲ್ಲಿರುವ ಢಂಕ್ ಗ್ರಾಮದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಚೀನ ಕಾಲದಲ್ಲಿ ಕೊರೆಯಲಾದ ಹಲವು ಗುಹಾಲಯಗಳುಂಟು. ಶತ್ರುಂಜಿ ನದೀ ಮುಖಜಭೂಮಿಯಲ್ಲಿರುವ ತಳಜ ಬೆಟ್ಟದಲ್ಲಿ 36 ಬೌದ್ಧ ಗುಹಾಲಯಗಳಿವೆ. ಇವುಗಳಲ್ಲೆಲ್ಲ ಅತ್ಯಂತ ದೊಡ್ಡದು ಎಬ್ಬಲ್ ಮಂಟಪ.
ಆಂಧ್ರ ಪ್ರದೇಶದಲ್ಲಿ ಶಾತವಾಹನರ ಆಳ್ವಿಕೆಯ ಕಾಲದಲ್ಲಿ ಗುಹಾಲಯಗಳು ನಿರ್ಮಿತವಾದುವು. ಕೃಷ್ಣಾ ಜಿಲ್ಲೆಯ ಗುಂಟುಪಲ್ಲಿ ಮತ್ತು ವಿಶಾಖಪಟ್ಟಣ ಜಿಲ್ಲೆಯ ಶಂಕರ ಬೆಟ್ಟಗಳಲ್ಲಿರುವ ಆಲಯಗಳು ಶಾತವಾಹನರ ಆಳ್ವಿಕೆಯ ಪ್ರಾರಂಭದಲ್ಲಿ ಕೊರೆಯಲಾದವು. ಶಂಕರ ಬೆಟ್ಟದ ಬೌದ್ಧ ಗುಹಾಲಯಗಳು ಕ್ರಿ. ಶ. 350 ರ ಸುಮಾರಿನಲ್ಲಿ ಕೊರೆಯಲಾದಂಥವು. ಅವು ಗುಂಟುಪಲ್ಲಿಯ ಗುಹಾಲಯಗಳನ್ನೇ ಹೋಲುತ್ತವೆ. ಜಗ್ಗಯ್ಯಪೇಟ, ಭಟ್ಟಿಪ್ರೋಲು, ಗುಡಿವಾಡ, ಘಂಟಸಾಲ, ಅಮರಾವತಿ, ನಾಗಾರ್ಜುನಕೊಂಡ ಮತ್ತು ಇತರ ಸ್ಥಳಗಳಲ್ಲೂ ಬೌದ್ಧ ಸ್ತೂಪಗಳಿವೆ. ಪಶ್ಚಿಮ ಘಟ್ಟಗಳಲ್ಲಿ ಮಹಾರಾಷ್ಟ್ರದ ಅನೇಕ ಗುಹಾಲಯಗಳು ಶಾತವಾಹನರ ಕಾಲದವು. ಕೊಂಡಾನೆ, ಭಾಜ, ಬಿಡ್ಸ, ಕಾರ್ಲೆ, ಅಜಂತ, ನಾಸಿಕ್, ನಾನಾಘಾಟ್ ಮೊದಲಾದ ಸ್ಥಳಗಳಲ್ಲಿ ಕ್ರಿ. ಪೂ. 2 ರಿಂದ ಕ್ರಿ. ಶ. 2ನೆಯ ಶತಮಾನದ ಕೊನೆಯವರೆಗೆ ಹೀನಯಾನ ಪಂಥದ ಗುಹಾಲಯಗಳು ಹೆಚ್ಚು ಸಂಖ್ಯೆಯಲ್ಲಿ ನಿರ್ಮಾಣವಾದುವು. ಇವು ಗಾತ್ರ, ಆಕಾರ ಮತ್ತು ನಮೂನೆಯಲ್ಲಿ ವಿಭಿನ್ನವಾಗಿವೆ. ನಾಸಿಕದ ಬಳಿಯಲ್ಲಿರುವ ಬೇರೆ ಬೇರೆ ಗುಹಾಲಯಗಳು ಕ್ರಿ. ಶ. 1ನೆಯ ಶತಮಾನದಲ್ಲಿ ಕೊರೆಯಲಾದವು. ಅಲ್ಲಿರುವ ಆಲಯಗಳಲ್ಲಿ 3 ನೆಯದು ಗೌತಮೀಪುತ್ರ ಗುಹಾಲಯವೆಂದೂ 8ನೆಯದು ನಹಪಾಣ ಎಂದೂ 15ನೆಯದು ಯಜ್ಞಶ್ರೀ (ಶ್ರೀಯಜ್ಞ) ಎಂದೂ ಶಾಸನಗಳಿಂದ ತಿಳಿದುಬರುತ್ತದೆ. ಅಲ್ಲಿಯ ಗುಹಾಲಯಗಳಲ್ಲಿ ಸಾಮಾನ್ಯವಾಗಿ ಕಂಬಗಳಿಂದ ಕೂಡಿದ ವಿಶಾಲ ಮುಖಮಂಟಪಗಳೂ ಕಂಬಗಳಿಲ್ಲದ ವಿಶಾಲ ಅಂಗಗಳೂ ಬೌದ್ಧಯತಿಗಳಿಗಾಗಿ ಚಿಕ್ಕ ಚಿಕ್ಕ ಕೋಣೆಗಳೂ ಇವೆ. ಜುನ್ನಾರ್ ಮತ್ತು ಭಿಡ್ಸ ಬಳಿಯ ಗುಹಾಲಯಗಳೂ ಮೇಲ್ಕಂಡ ಮಾದರಿಯವೇ.
ಕನ್ನಡ ನಾಡಿನ ಅನೇಕ ಸ್ಥಳಗಳಲ್ಲಿ ಪ್ರಾಚೀನ ಗುಹಾಲಯಗಳಿವೆ. ಇವುಗಳಲ್ಲೆಲ್ಲ ಬಾದಾಮಿಯವು ಅತ್ಯಂತ ಪ್ರಸಿದ್ಧವಾದವು. ಚಾಳುಕ್ಯರ ರಾಜಧಾನಿಯಾಗಿದ್ದ ಬಾದಾಮಿಯ ಗುಡ್ಡಗಳಲ್ಲಿ ನಾಲ್ಕು ಗುಹಾಲಯಗಳು ಕ್ರಿ.ಶ. 6ನೆಯ ಶತಮಾನದಲ್ಲಿ 1ನೆಯ ಕೀರ್ತಿವರ್ಮ ಮತ್ತು ಮಂಗಳೇಶರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದವು. ಪ್ರತಿಯೊಂದು ಗುಹಾಲಯದಲ್ಲೂ ಒಂದು ಮುಖಮಂಟಪವೂ ಗರ್ಭಗುಡಿಯೂ ಇವೆ. ಸುಂದರವಾಗಿ ಕೆತ್ತಲಾಗಿರುವ ದೇವತೆಗಳ ಆಳೆತ್ತರ ಶಿಲ್ಪಗಳಿವೆ. ಮೊದಲನೆಯ ಗುಹಾಲಯ ಶಿವಾಲಯ. ಇಲ್ಲಿ ಹದಿನೆಂಟು ಬಾಹುಗಳಿಂದ ಕೂಡಿರುವ ಶಿವನಟರಾಜ, ನಂದಿ, ನಾರದ, ಮಹಿಷಾಸುರಮರ್ಧಿನಿ, ಹರಿಹರ, ಅರ್ಧನಾರೀಶ್ವರ ಮೊದಲಾದ ಆಕೃತಿಗಳನ್ನು ಅಂದವಾಗಿ ಕೆತ್ತಲಾಗಿದೆ. ಎರಡನೆಯದು ವೈಷ್ಣವ ಗುಹಾಲಯ, ಇದರ ಬಾಗಿಲಿನ ಇಕ್ಕೆಲಗಳಲ್ಲೂ 5' 10" ಎತ್ತರದ ದ್ವಾರಪಾಲಕರ ವಿಗ್ರಹಗಳೂ ಮಕರ ತೋರಣಗಳೂ ಕೈಸಾಲೆಯಲ್ಲಿ ವಿಷ್ಣುವಿನ ವರಾಹಾವತಾರ ಮತ್ತು ವಾಮನಾವತಾರಗಳ ಕೃತಿಗಳೂ ಇವೆ. ಮೂರನೆಯ ಗುಹಾಲಯವೂ ವಿಷ್ಣುವಿನದು. ಇದು ಅಲ್ಲಿಯ ಗುಹಾಲಯಗಳಲ್ಲೆಲ್ಲ ಅತ್ಯಂತ ದೊಡ್ಡದು ಮತ್ತು ಭವ್ಯವಾದ್ದು. ಭಾರತದಲ್ಲಿರುವ ವೈದಿಕ ಧರ್ಮೀಯರ ಗುಹಾಲಯಗಳಲ್ಲೆಲ್ಲಅತ್ಯಂತ ದೊಡ್ಡದು ಮತ್ತು ಭವ್ಯವಾದ್ದು. ಭಾರತದಲ್ಲಿರುವ ವೈದಿಕ ಧರ್ಮೀಯರ ಗುಹಾಲಯಗಳಲ್ಲೆಲ್ಲ ಇದು ಅತ್ಯಂತ ಮಹತ್ವವಾದ್ದೆಂದು ಪರಿಗಣಿಸಲಾಗಿದೆ. ಇದು ಮಂಗಳೇಶನ ಕಾಲದಲ್ಲಿ ಕೊರೆಯಲ್ಪಟ್ಟು ಅವನ ಒಂದು ಶಾಸನವನ್ನೊಳಗೊಂಡಿದೆ. ಈ ಗುಹಾಲಯದ ವಿಶಾಲವಾದ ಮುಖ ಮಂಟಪದ ಒಂದು ಪಕ್ಕದಲ್ಲಿ ಶೇಷಶಯನ ವಿಷ್ಣುವಿನ ಭವ್ಯ ಶಿಲ್ಪವನ್ನು ಕಡೆಯಲಾಗಿದೆ. ಚತುರ್ಭುಜಗಳಿಂದ ಕೂಡಿದ ಈ ಮೂರ್ತಿಯ ಕೈಯಲ್ಲಿ ಶಂಖ, ಚಕ್ರ, ಗದೆ ಮತ್ತು ಫಲ ಇವೆ. ಅವನಿಗೆದುರಿನಲ್ಲಿ ಲಕ್ಷ್ಮೀಯನ್ನೂ ಪಕ್ಕದಲ್ಲಿ ವಿಷ್ಣುವಿನ ವಾಹನ ಗರುಡವನ್ನೂ ಪರಿಚಾರಿಕೆಯರನ್ನೂ ಕಡೆಯಲಾಗಿದೆ. ಮತ್ತೊಂದು ಪಕ್ಕದಲ್ಲಿರುವುದು ವಿಷ್ಣುವಿನ ವರಾಹಾವತಾರ. ವಿಷ್ಣುವಿನ ವಿರಾಡ್ರೂಪ, ಶಿವ, ಬ್ರಹ್ಮ, ಇಂದ್ರ, ಕಾಮ, ದಿಕ್ಪಾಲಕರು, ಮುಂತಾದವರ ಶಿಲ್ಪಗಳು ಮನೋಹರವಾಗಿವೆ. ಬಾದಾಮಿಯಲ್ಲಿ ಗುಡ್ಡದ ಆಲಯಗಳಲ್ಲಿ ನಾಲ್ಕನೆಯದು ಜೈನ ಆಲಯ. ಇದು ಗಾತ್ರದಲ್ಲಿ ಇತರ ಗುಹಾಲಗಳಿಗಿಂತ ಚಿಕ್ಕದು. ಇಲ್ಲಿ ಆದಿನಾಥನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಬಾದಾಮಿಯ ಆಲಯಗಳಂಥ ಎರಡು ಗುಹಾಲಯಗಳು ಐಹೊಳೆಯಲ್ಲೂ ಇವೆ. ಒಂದು ಶೈವ. ರಾವಣಫಡಿ ಎಂದು ಅದರ ಹೆಸರು. ಇದು ಹೊರನೋಟಕ್ಕೆ ವಿಶಿಷ್ಟವಾಗಿ ಕಂಡುಬರುವುದಿಲ್ಲ. ಆದರೆ ಇಲ್ಲಿಯ ಅರ್ಧನಾರೀಶ್ವರ, ಗಂಗಾಧರ ಮುಂತಾದ ಮೂರ್ತಿಗಳನ್ನು ಬಾದಾಮಿಯ ಗುಹೆಗಳಲ್ಲಿಯ ಇಂತಹವೇ ಮೂರ್ತಿಗಳೊಡನೆ ಹೋಲಿಸಬಹುದು. ಇನ್ನೊಂದು ಜೈನಗುಹೆ. ಇಲ್ಲಿ ನೇಮಿನಾಥ ಮತ್ತು ಪಾಶ್ರ್ವನಾಥರ ಮಹಾ ವೀರನ ಮೂರ್ತಿಗಳಿವೆ. ಈ ಗುಹೆಗೆ ಒಂದು ಪಡಸಾಲೆ ಮತ್ತು ಅದರೊಳಗೆ ಒಂದು ಅಂಕಣ ಇವೆ. ಅಂಕಣದ ಎರಡೂ ಕಡೆ ಕೋಷ್ಠವುಂಟು. ಈ ಗುಹೆಯನ್ನು ಮೇಗುಟಿ ಗುಡಿಯ ಕೆಳಗೆ, ಗುಡ್ಡದ ಹಿಂಬದಿಯ ಇಳಿಜಾರಿನ ಬಂಡೆಯೊಂದನ್ನು ಕೊರೆದು ಮಾಡಲಾಗಿದೆ. ಶ್ರವಣಬೆಳಗೊಳ, ಶಿವಗಂಗೆ, ಮುಳ್ಳಯ್ಯನಗಿರಿ ಮೊದಲಾದ ಕಡೆಗಳಲ್ಲೂ ಗುಹಾಲಯಗಳನ್ನು ಕೊರೆಯಲಾಗಿದೆ.
ದ್ರಾವಿಡ ಶಿಲ್ಪಶೈಲಿಯನ್ನು ಅನುಷ್ಠಾನಕ್ಕೆ ತಂದ ಪಲ್ಲವ ಸಂತತಿಯ ರಾಜರು ಪ್ರಾರಂಭದಲ್ಲಿ ಗುಹಾಲಯಗಳನ್ನು ಕೊರೆಸಿದರು. ಅಖಂಡ ಶಿಲಾಬಂಡೆಯಿಂದ ಅವರು ಮಹಾಬಲಿಪುರದ ಬಳಿ ಕೆತ್ತಿಸಿರುವ ರಥಗಳು ಜಗತ್ಪ್ರಸಿದ್ಧವಾದವು. ಪಲ್ಲವ 1 ನೆಯ ಮಹೇಂದ್ರವರ್ಮನ್ ಮತ್ತು ಅವನ ಹಿಂದಿನ ರಾಜರು ಗುಹಾಲಯಗಳ ನಿರ್ಮಾಣಕಾರ್ಯದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು. ಅವರ ಕಾಲದಲ್ಲಿ ದಲವನ್ನೂರು, ಪಲಾ ವರಂ, ಮಹೇಂದ್ರವಾಡಿ, ಉಂಡವಳ್ಳಿ, ಭೈರವಕೊಂಡ ಮೊದಲಾದ ಸ್ಥಳಗಳಲ್ಲಿ ಹದಿನಾಲ್ಕು ಗುಹಾದೇವಾಲಯಗಳು ಕೊರೆಯಲ್ಪಟ್ಟುವು. ಇವು ಮಂಟಪಗಳೆಂದು ಪ್ರಸಿದ್ಧವಾಗಿವೆ. ಮಂಟಪಗಳಲ್ಲಿಯ ಸ್ತಂಭಗಳನ್ನು ನಯವಾಗಿ ಕೆತ್ತಿ ಶಿಲ್ಪಗಳನ್ನು ಬಿಡಿಸಲಾಗಿದೆ. ಪ್ರತಿಯೊಂದು ಗುಹಾಲಯದಲ್ಲೂ ಮುಖಮಂಟಪ ಮತ್ತು ಗರ್ಭಗೃಹ ಇವೆ. ಮಹೇಂದ್ರವರ್ಮನ ಕಾಲದಲ್ಲಿ ಕೊರೆಯಲಾದ ಭೈರವಕೊಂಡ ಹಾಗೂ ಉಂಡವಳ್ಳಿಯ ಅನಂತಶಯನ ಗುಹಾಲಯಗಳು ವಾಸ್ತುಶಿಲ್ಪ ದೃಷ್ಟಿಯಿಂದ ಭವ್ಯವಾಗಿವೆ. ಇವುಗಳಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಪಲ್ಲವ ನಿರ್ಮಿತ ಗುಹಾಲಯಗಳು ಗುಹಾಲಯ ನಿರ್ಮಾಣ ಕಾಲದ ಕೊನೆಯ ಘಟ್ಟಕ್ಕೆ ಸೇರಿದವೆಂದು ನಿರ್ಣಯಿಸಲಾಗಿದೆ. ಅಜಂತದ ಗುಹಾದೇವಾಲಯಗಳು ಜಗತ್ಪ್ರಸಿದ್ಧವಾದಂಥವು. ಇಂದಿನ ಮಹಾರಾಷ್ಟ್ರದಲ್ಲಿ ಔರಂಗಾಬಾದಿಗೆ 152 ಕಿ.ಮೀ. ದೂರದಲ್ಲಿ ವಾಘೋರ ನದಿಯ ದಂಡೆಯ ಮೇಲಿರುವ ಕುದುರೆಯ ಲಾಳಾಕಾರದ ಶಿಲಾಮಯ ಗುಡ್ಡದಲ್ಲಿ ಪ್ರಾಚೀನ ಕಾಲದಲ್ಲಿ ವಿಶಾಲವಾದ 30 ಬೌದ್ಧ ಗುಹಾದೇವಾಲಯಗಳು ಬೇರೆ ಬೇರೆ ಕಾಲದಲ್ಲಿ ಕೊರೆಯಲ್ಪಟ್ಟುವು. ಅಜಂತದ ಗುಹಾಲಯಗಳು ಕಲೆ, ಶಿಲ್ಪ, ವರ್ಣಲೇಪನಗಳಲ್ಲಿ ಅಸದೃಶವಾದಂಥವು. ಪ್ರಾಚೀನ ಭಾರತೀಯರ ಕಲಾ ಕೌಶಲಕ್ಕೆ ಸಾಕ್ಷಿಗಳು. ಈ ಚಿತ್ರಗಳಲ್ಲಿ ಕಾಣಿಸುವುದು ಜೀವಕೋಟಿಯಿಂದ ತುಂಬಿದ ಪ್ರಪಂಚ : ಬೆಳೆಯುತ್ತಿರುವ ಗಿಡಗಳು, ಅರಳುತ್ತಿರುವ ಕುಸುಮಗಳು, ಬಗೆಬಗೆಯ ಪಕ್ಷಿಗಳು, ಸುಂದರವಾದ ಹುಲ್ಲೆಗಳು, ಗಂಭೀರವಾದ ಆನೆಗಳು, ಮನೋಹರವಾದ ಬಣ್ಣಗಳಿಂದ ಅಲಂಕೃತವಾದ ಮಂಟಪಗಳು, ಗೃಹಗಳು, ನಗರಗಳ ಮಹಾದ್ವಾರಗಳು, ಅರಮನೆಗಳು, ಇವುಗಳ ಮಧ್ಯೆ ಲಲಿತಕಾಯರಾಗಿ, ರಮ್ಯವಾದ ಭಾವಗಳನ್ನು ಸೂಚಿಸುತ್ತ, ಸ್ವತಂತ್ರವಾಗಿ ಕ್ರೀಡಿಸುತ್ತಲೋ ಧ್ಯಾನಿಸುತ್ತಲೇ ಇರುವ ಗಂಡಸರು, ಹೆಂಗಸರು, ಮಕ್ಕಳು : ಸುಖದುಃಖಮಿಶ್ರಿತ ಲೋಕ. ಈ ನಿಬಿಡ ಲೋಕದ ನಡುವೆ ದಯಾಪೂರಿತನಾದ, ಧ್ಯಾನಾಸಕ್ತನಾದ, ಮಹಾತ್ಮನಾದ ಬುದ್ಧದೇವನ ಬದುಕು. ಇಂಥ ದೃಶ್ಯ ಅಜಂತದ ಚಿತ್ರಗಳಲ್ಲಿ ಪ್ರತ್ಯಕ್ಷವಾಗುತ್ತದೆಯೆಂದು ದಿವಂಗತ ಎಂ.ಎಚ್. ಕೃಷ್ಣ ಅವರು ಹೇಳಿದ್ದಾರೆ.
ಅಜಂತದಂತೆಯೇ ಎಲ್ಲೋರದಲ್ಲೂ ಪ್ರಸಿದ್ಧ ಗುಹಾದೇವಾಲಯಗಳಿವೆ. ಅಜಂತ ಬಣ್ಣದ ಚಿತ್ರಗಳಿಂದ ಪ್ರಸಿದ್ಧವಾಗಿರುವಂತೆ ಎಲ್ಲೋರದ ಗುಹಾಲಯಗಳು ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿವೆ. ಅಜಂತದಂತ ಎಲ್ಲೋರವು ಮಹಾರಾಷ್ಟ್ರದಲ್ಲಿದೆ. ಎಲ್ಲೋರದ ಗುಹಾಲಯಗಳನ್ನು ಕ್ರಿ. ಶ. 500 ರಿಂದ 900ರ ವರೆಗೆ ಕೊರೆಯಲಾಯಿತೆಂದು ಪರಿಗಣಿಸಲಾಗಿದೆ. ಬಾದಾಮಿಯ ಚಾಳುಕ್ಯರ ಹಾಗೂ ಮಾನ್ಯಖೇಟದ ರಾಷ್ಟ್ರಕೂಟ ಕನ್ನಡರಾಜಮನೆತನಗಳ ಆಳ್ವಿಕೆಯಲ್ಲಿ ಎಲ್ಲೋರದ ಗುಹಾಲಯಗಳು ನಿರ್ಮಾಣವಾದುವು. ಎಲ್ಲೋರದ ಬಳಿಯ ಒಂದೂವರೆ ಮೈ. ಉದ್ದದ 300' ಎತ್ತರದ ಹುಟ್ಟುಬಂಡೆಯಲ್ಲಿ ಉದ್ದಕ್ಕೂ 35 ಗವಿಗಳನ್ನು ಕೊರೆಯಲಾಗಿದೆ. ಮೊದಲಿನ 12 ಗುಹಾಲಯಗಳು ಮಹಾಯಾನ ಬೌದ್ಧ ಪಂಥದವು. ಇವುಗಳಲ್ಲಿ ವಿಶ್ವಕರ್ಮ ಎಂದು ಕರೆಯಲಾಗಿರುವ ಬೌದ್ಧ ಗುಹಾಲಯ ಅತ್ಯಂತ ಭವ್ಯವಾದ್ದು. 11 ಮತ್ತು 12ನೆಯ ಗುಹಾಲಯಗಳು ಎರಡು ಅಂತಸ್ತುಗಳಿಂದ ಕೂಡಿವೆ. ಇದನ್ನು ಕ್ರಮವಾಗಿ ದೋತಾಳ್ ಮತ್ತು ತಿಂತಾಳ್ ಎಂಬ ಹೆಸರಿನಿಂದ ಕರೆಯಲಾಗಿದೆ. 13 ರಿಂದ 29ರ ವರೆಗಿನ ಗುಹಾಲಯಗಳು ವೈದಿಕ ಪಂಥದವು. ಇವುಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದ 16ನೆಯದಾದ ಕೈಲಾಸ ಗುಹಾ ದೇವಾಲಯ ರಾಷ್ಟ್ರಕೂಟ ಸಾರ್ವಭೌಮ 1ನೆ ಕೃಷ್ಣರ ಕಾಲದಲ್ಲಿ ಕೊರೆಯಲ್ಪಟ್ಟಿತ್ತು. ಕೊನೆಯ 6 ಜೈನ ಪಂಥದ ಗುಹಾಲಯಗಳು. ಇವುಗಳಲ್ಲಿ ಇಂದ್ರ ಸಭೆ ಮತ್ತು ಜಗನ್ನಾಥ ಸಭೆ ಎಂಬ ಗುಹಾಲಯಗಳು ಅತ್ಯಂತ ಸುಂದರವಾಗಿವೆ.
ಮುಂಬಯಿಯ ಬಳಿಯ ದೀಪದಲ್ಲಿ ಎಲಿಫೆಂಟಾ ಎಂಬ ಗುಡ್ಡದ ಗುಹಾದೇವಾಲಯಗಳು ಕ್ರಿ. ಶ. 8-9ನೆಯ ಶತಮಾನಗಳಿಗೆ ಸೇರಿದವು. ಎಲಿಫೆಂಟದವು ಗುಹಾ ದೇವಾಲಯ ರಚನೆಯ ಕೊನೆಯ ಘಟ್ಟಕ್ಕೆ ಸೇರಿದವು. ಇಲ್ಲಿಯ ಆಲಯಗಳಲ್ಲಿ ಶೈವ ಪುರಾಣಕ್ಕೆ ಸಂಭಂಧಿಸಿದ ಮನೋಜ್ಞವಾದ ಶಿಲ್ಪಗಳನ್ನು ಕೊರೆಯಲಾಗಿದೆ. ಶಿವ-ಪಾರ್ವತಿಯರ ವಿವಾಹ, ಅರ್ಧನಾರೀಶ್ವರ, ನಟರಾಜ, 3 ಮುಖಗಳ ಶಿವಮೂರ್ತಿ ಮೊದಲಾದ ಶಿಲ್ಪಗಳು ಅತ್ಯಂತ ಸುಂದರವಾಗಿವೆ. ಈ ಶಿಲ್ಪ ಸೌಂದರ್ಯರಾಶಿಯನ್ನು ಹೋಲುವ ಶಿಲ್ಪಕೃತಿಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲೆಲ್ಲು ಇಲ್ಲ ಎಂದು ಫರ್ಗುಸನ್ ಪ್ರಶಂಸಿಸಿದ್ದಾರೆ. ಕ್ರಿ. ಪೂ. 3ನೆಯ ಶತಮಾನದಲ್ಲಿ ಅಶೋಕನಿಂದ ಆರಂಭವಾದ ಗುಹಾ ದೇವಾಲಯ ನಿರ್ಮಾಣ ಕಾರ್ಯ ಕ್ರಿ. ಶ. 9ನೆಯ ಶತಮಾನದವರೆಗೂ ಮುಂದುವರಿಯಿತು. ಭಾರತದ ಗುಹಾದೇವಾಲಯಗಳ ಸಂಖ್ಯೆ, ವಿನ್ಯಾಸ, ವರ್ಣಚಿತ್ರ ಶಿಲ್ಪಕಲೆಗಳ ದೃಷ್ಟಿಯಿಂದ ಪ್ರಪಂಚದಲ್ಲೇ ಅಸದೃಶವಾಗಿವೆ.
ಕೃಪೆ: ಮೈಸೂರು ವಿಶ್ವವಿದ್ಯಾಯ ವಿಶ್ವಕೋಶ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ