ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳು
ಕರ್ನಾಟಕ ರಾಜ್ಯದಲ್ಲಿ ವೈವಿಧ್ಯಮಯವಾದ ಪ್ರಾಕೃತಿಕ ಸೌಂದರ್ಯ ಹಾಗೂ ಮಾನವನಿರ್ಮಿತ ಗುಡಿ ಗೋಪುರಗಳು, ಅರಮನೆಗಳು ಹಾಗೂ ಕರಾವಳಿ ಪ್ರದೇಶದ ಸಮುದ್ರತೀರದ ಸೊಬಗು, ಪಶ್ಚಿಮ ಘಟ್ಟಗಳ ಅವರ್ಣನೀಯ ಸೌಂದರ್ಯ, ಬಯಲುಸೀಮೆಯ ಆಧುನಿಕ ವೀಕ್ಷಣೀಯ ಸ್ಥಳಗಳು… ಒಂದೇ ಎರಡೇ ?
ಉತ್ತರ ಕರ್ನಾಟಕದಿಂದ ಹಿಡಿದು, ದಕ್ಷಿಣ ಕರ್ನಾಟಕದ ತುದಿಯವರೆಗೂ ಪ್ರತಿಯೊಂದು ಜಿಲ್ಲೆ ಐತಿಹಾಸಿಕ ಅಥವಾ ಪೌರಾಣಿಕ ಹಿನ್ನಲೆಯನ್ನು ಹೊಂದಿ ತನ್ನದೇ ಆದ ಆಕರ್ಷಣೆಯನ್ನು ಪ್ರವಾಸಿಗರಿಗೆ ತೋರುತ್ತದೆ.
ಗುಲ್ಬರ್ಗ, ಬೆಳಗಾವಿ, ಬಾಗಲಕೋಟ, ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಬೇಲೂರು, ಹಳೇಬೀಡು, ಮಂಗಳೂರು, ಮೈಸೂರು, ಬೆಂಗಳೂರು, ಶ್ರೀರಂಗಪಟ್ಟಣ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಹೊರನಾಡು, ಶೃಂಗೇರಿ, ಮುರುಡೇಶ್ವರ, ಹೊನ್ನಾವರ, ಉಡುಪಿ, ಕುದುರೆಮುಖ, ಇತ್ಯಾದಿ.
ಈ ಎಲ್ಲಾ ಸ್ಥಳಗಳಲ್ಲೂ ಐತಿಹಾಸಿಕ ಅಥವಾ ಧಾರ್ಮಿಕ ಹಿನ್ನೆಲೆಯ ಪ್ರತಿಬಿಂಬವಾಗಿ ದೇವಸ್ಥಾನಗಳು ಇವೆ. ಹಾಗೂ ಇವು ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಅತ್ಯುತ್ತಮ ತಾಣಗಳಾಗಿವೆ.
ಕೂಡಲ ಸಂಗಮ
ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಪವಿತ್ರ ಪುಣ್ಯಸ್ಥಳ. ಅಂತಾರಾಷ್ಟ್ರೀಯ ಖ್ಯಾತಿಯ ಪ್ರವಾಸಿ ತಾಣ. ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಕೂಡುವ ಸಂಗಮ ಸ್ಥಳ. ಹೀಗಾಗಿ ಇದು ಕೂಡಲ ಸಂಗಮವೆಂದೇ ಖ್ಯಾತವಾಗಿದೆ.
12ನೆಯ ಶತಮಾನದಲ್ಲಿ ಜಾತವೇದ ಮುನಿಗಳು ಇಲ್ಲಿ ವಿದ್ಯಾ ಕೇಂದ್ರ ಸ್ಥಾಪಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಕ್ರಾಂತಿಯೋಗಿ ಬಸವೇಶ್ವರು, ಚೆನ್ನಬಸವಣ್ಣ, ಅಕ್ಕ ನಾಗಮ್ಮ ಮೊದಲಾದ ಮಹಾ ಮಹಿಮರ ಶಿಕ್ಷಣವಾಗಿದ್ದು ಈ ಕ್ಷೇತ್ರದಲ್ಲೇ ಎಂದು ಇತಿಹಾಸ ಸಾರುತ್ತದೆ.
"ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.."
ಎಂದ ವೀರಶೈವ ಮತೋದ್ಧಾರಕ ಭಕ್ತಿಭಂಡಾರಿ ಬಸವಣ್ಣನವರು ವಿದ್ಯಾಭ್ಯಾಸ ಮಾಡಿದ ಈ ಕ್ಷೇತ್ರದಲ್ಲಿ ಬಸವೇಶ್ವರರ ಆರಾಧ್ಯ ದೈವ ಕೂಡಲ ಸಂಗಮ ದೇವರ ದೇವಾಲಯವಿದೆ. ಬಸವಣ್ಣನವರು ತಮ್ಮ ಎಲ್ಲ ವಚನಗಳನ್ನೂ ಈ ಕೂಡಲಸಂಗಮದೇವನಿಗೇ ಅಂಕಿತ ಮಾಡಿದ್ದಾರೆ.
ಕಲ್ಯಾಣದಲ್ಲಿ ಬಿಜ್ಜಳನ ಪ್ರಧಾನಿಯಾಗಿದ್ದ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಬಳಿಕ ಸಂಗಮಕ್ಕೆ ಮರಳಿ ಇಲ್ಲಿಯೇ ಐಕ್ಯರಾದರೆಂದೂ ಇತಿಹಾಸ ತಿಳಿಸುತ್ತದೆ. ಹೀಗಾಗಿಯೇ ಈ ಕ್ಷೇತ್ರ ಶಿವಶರಣರಿಗೆ ಪರಮ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ.
ಮಹಾಮಹಿಮ ಸಂಗನ ಬಸವಣ್ಣನ ಪಾದಸ್ಪರ್ಶದಿಂದ ಅವಿಮುಕ್ತ ಕ್ಷೇತ್ರವಾಯಿತೆಂದು ಅಕ್ಕ ಮಹಾದೇವಿ ನುಡಿದ ಪ್ರಕಾರ ಕೂಡಲ ಸಂಗಮವು ಬಸವಣ್ಣನವರ ವಿದ್ಯಾಭೂಮಿಯಾಗಿ, ತಪೋಭೂಮಿಯಾಗಿ, ಐಕ್ಯಭೂಮಿಯಾಗಿ ಇಂದು ಪರಮ ಪವಿತ್ರ ಪುಣ್ಯಭೂಮಿಯಾಗಿದೆ.
ಇಷ್ಟು ಪವಿತ್ರವಾದ ಪುಣ್ಯಭೂಮಿಯಲ್ಲಿ ಚಾಳುಕ್ಯ ಶೈಲಿಯ ಸಂಗಮೇಶ್ವರ ದೇವಸ್ಥಾನವಿದೆ. ನದಿಯ ದಡದಲ್ಲಿರುವ ಕಲ್ಲು ಕಟ್ಟಡದ ಈ ದೇವಾಲಯದ ಮೇಲೆ ಗಾರೆಗಚ್ಚಿನ ಗೋಪುರಗಳಿವೆ. ಪ್ರತಿ ಗೋಪುರದ ಮೇಲೂ ಕಳಶವಿದೆ. ವಿಶಾಲವಾದ ಪ್ರಾಕಾರವುಳ್ಳ ದೇವಾಲಯ ನಯನ ಮನೋಹರವಾಗಿದೆ. ಇಲ್ಲಿನ ಪ್ರಧಾನ ಗರ್ಭಗೃಹದಲ್ಲಿ ಸುಂದರ ಶಿವಲಿಂಗವಿದೆ.
ನಿತ್ಯ ಪೂಜೆ ಹಾಗೂ ವರ್ಷಕ್ಕೊಮ್ಮೆ ದೊಡ್ಡ ಜಾತ್ರೆ ನಡೆಯುತ್ತದೆ. ಕೂಡಲ ಸಂಗಮದಲ್ಲಿ ಬಸವ ಧರ್ಮಪೀಠ, ಐಕ್ಯ ಮಂಟಪವೂ ಇದೆ. ಅಲ್ಲದೆ ಗುಮ್ಮಟಾಕಾರದ ಬೃಹತ್ ಸಭಾಭವನ, ಅಷ್ಟಕೋನಾಕಾರದ ಬಸವ ಅಂತಾರಾಷ್ಟ್ರೀಯ ಕೇಂದ್ರ, ಉತ್ಕೃಷ್ಟ ಗ್ರಂಥಾಲಯ ಮತ್ತು ಶರಣ ಲೋಕವೂ ಇದೆ.
ಸವದತ್ತಿ
ಸುಗಂಧವರ್ತಿ ಇದು ಸವದತ್ತಿಯ ಪ್ರಾಚೀನ ಹೆಸರು. ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರಮುಖವಾದದ್ದು. ಈ ದೇವಾಲಯ ಬೆಳಗಾವಿ ಜಿಲ್ಲಾ ಕೇಂದ್ರದಿಂದ ೭೪ ಕಿ.ಮೀ. ಹಾಗೂ ಸವದತ್ತಿಯಿಂದ 5 ಕಿ.ಮೀ. ದೂರದಲ್ಲಿದೆ. ಗುಡ್ಡದ ಮೇಲಿನ ಕೊಳದಲ್ಲಿ ನಿರ್ಮಿಸಿದ ಪ್ರಾಚೀನ ಭವ್ಯ ದೇವಾಲಯದಲ್ಲಿ ತಾಯಿ ರೇಣುಕಾ ಯಲ್ಲಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದಿನನಿತ್ಯವು ಸಾವಿರಾರು ಭಕ್ತರು ತಾಯಿಯ ದರ್ಶನ ಪಡೆಯುತ್ತಾರೆ. ಮೊದಲು ಇದು ಜೈನ ಬಸದಿಯಾಗಿತ್ತು.
ಊರ ಬೆಟ್ಟದಲ್ಲಿ ಸುಮಾರು ೧೮ನೇ ಶತಮಾನದಲ್ಲಿ ಸಿರಸಂಗಿ ದೇಸಾಯಿ ನಿರ್ಮಿಸಿದ ಎಂಟು ಬುರುಜುಗಳುಳ್ಳ ಕೋಟೆಯಿದೆ. ಸವದತ್ತಿಯು ರಟ್ಟರ ಪ್ರಾರಂಭಿಕ ರಾಜಧಾನಿಯಾಗಿತ್ತು. ನಂತರ ಅವರು ವೇಣುಗ್ರಾಮ(ಬೆಳಗಾವಿ)ಕ್ಕೆ ರಾಜಧಾನಿಯನ್ನು ಸ್ಥಳಾಂತರಿಸಿ ರಾಜ್ಯಭಾರ ಮಾಡಿದರು. ಸೌಂದತ್ತಿಯಲ್ಲಿ ರಟ್ಟರು ನಿರ್ಮಿಸಿದ ಎರಡು ಬಸದಿಗಳು, ಅಂಕೇಶ್ವರ, ಪುರದೇಶ್ವರ, ಮಲ್ಲಿಕಾರ್ಜುನ, ವೆಂಕಟೇಶ್ವರ ಮತ್ತು ವೀರಭದ್ರ ದೇವಾಲಯಗಳಿವೆ. ಪುರದೇಶ್ವರ ದೇವಾಲಯವು ಕಲ್ಯಾಣಿ ಚಾಲುಕ್ಯರ ಕಾಲದ ನಿರ್ಮಣವಾಗಿದ್ದು, ಈಗ ಶಿಥಿಲವಾಗಿದೆ. ಅಂಕೇಶ್ವರ ದೇವಾಲಯವು ೧೦೪೮ ರಲ್ಲಿ ರಟ್ಟರಿಂದ ನಿರ್ಮಿತವಾಗಿದ್ದು, ಕಲ್ಯಾಣ ಚಾಲುಕ್ಯ ಶೈಲಿಯಲ್ಲಿದೆ. ಮಲಪ್ರಭಾ ನದಿಗೆ ಕಟ್ಟಲಾದ ನವಿಲುತೀರ್ಥ ಅಣೆಕಟ್ಟಿನಿಂದಾಗಿ ಮೂಡಿರುವ ರೇಣುಕಾಸಾಗರದ ನೀರು ಸೌಂದತ್ತಿಯ ಹೊರವಲಯವನ್ನು ಸ್ಪರ್ಶಿಸುತ್ತದೆ. ಎರಡು ಕಿ.ಮೀ. ದೂರದಲ್ಲಿರುವ ಪರಸಗಡವು ಅದ್ಭುತ ಗಿರಿದುರ್ಗವಾಗಿದ್ದು, ಶಿವಾಜಿಯಿಂದ ವಿಸ್ತ್ರತಗೊಂಡಿತು. ಈಗ ಅದು ಶಿಥಿಲವಾಗತೊಡಗಿದೆ.
ಖ್ವಾಜಾ ಬಂದೇ ನವಾಜ್ ಉರುಸ್
ಸೈಯದ್ ಮಹಮ್ಮದ್ ಹುಸ್ಸೇನ್ ಹಜರತ್ ಖ್ವಾಜಾ ಬಂದೇ ನವಾಜ್ ರು ಮಹಾನ್ ಸೂಫಿಸಂತ, ಕವಿ ಮತ್ತು ತತ್ವಜ್ಞಾನಿ. ಈಗಿನ ಕರ್ನಾಟಕದ ಈಶಾನ್ಯ ಭಾಗದ ನಗರ ಕಲಬುರಗಿ ಹಿಂದೆ ‘ದಖನ್’ ಎಂದು ಗುರುತಿಸುವ ಪ್ರದೇಶದ ರಾಜಧಾನಿ ಆಗಿತ್ತು. ರಾಜಕೀಯ ಇತಿಹಾಸದ ಪುಟಗಳಲ್ಲಿ ಬಹಮನಿ ದೊರೆಗಳ ಮೊದಲ ಆಡಳಿತ ಕೇಂದ್ರ ಎಂದು ಗುಲ್ಬರ್ಗ ದಾಖಲಾಗಿದೆ. ಆದರೆ, ಮಧ್ಯಕಾಲೀನ ಅವಧಿಯ ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ- ಧಾರ್ಮಿಕ- ತತ್ವಜ್ಞಾನದ ನಕಾಶೆಯಲ್ಲಿ ಈ ನಗರದ ಹೆಸರನ್ನು ಢಾಳಾಗಿ ಎದ್ದು ಕಾಣುವಂತೆ ದಾಖಲಿಸಿದವರು ‘ಬಂದೇ ನವಾಜ್’. ಹೌದು. ಬಂದೇ ನವಾಜ್ ಎಂಬ ಪದದ ಅರ್ಥ ‘ಸಾಮಾನ್ಯರ ದೊರೆ’. ಅಸಹಾಯಕರ-ದೀನರ ನೋವಿಗೆ ಮಿಡಿದು ಲೌಕಿಕ ಮತ್ತು ಪಾರಮಾರ್ಥಿಕ ‘ಚಿಕಿತ್ಸೆ’ ನೀಡಿದ ಮಹಾನ್ ಚೇತನದ ಹೆಸರು ಸಯ್ಯದ್ ಮಹ್ಮದ್ ಹುಸೇನಿ ಗೇಸುದರಾಜ್ (721-824/1321-1422). ಅವರೊಬ್ಬ ಮಹಾನ್ ಸೂಫಿ ಮತ್ತು ಸಂತ. ದೆಹಲಿಯಲ್ಲಿ ಜನಿಸಿದ ಅವರು ತುಘಲಕ್ ನ ರಾಜಧಾನಿ ಸ್ಥಳಾಂತರದ ಕಾರಣಕ್ಕೆ ಕುಟುಂಬದೊಂದಿಗೆ ದೆಹಲಿ ತೊರೆಯಬೇಕಾಯಿತು. ದಖನ್ನಿನ ದೌಲತಾಬಾದ್ ಸಮೀಪದ ಖುಲ್ದಾಬಾದ್ ನಲ್ಲಿ ಬಾಲ್ಯದ ದಿನಗಳನ್ನು ಕಳೆದರು. ಖುಲ್ದಾಬಾದ್ ನಲ್ಲಿ ಇದ್ದಾಗಲೇ ಅವರ ತಂದೆ ಸಯ್ಯದ್ ಯುಸೂಫ್ ಹುಸೇನಿ ಅಸು ನೀಗಿದರು. ರಾಜಧಾನಿಯ ಮರುಸ್ಥಳಾಂತರದ ಹೊತ್ತಿಗೆ ಮತ್ತೆ ದೆಹಲಿಯತ್ತ ಪಯಣ. ಬಾಲ್ಯದಲ್ಲಿದ್ದಾಗ ದೆಹಲಿಯಲ್ಲಿ ಚಿಸ್ತಿಯಾ ಸೂಫಿ ಪರಂಪರೆಯ ಖ್ವಾಜಾ ನಿಜಾಮುದ್ದೀನ್ ಔಲಿಯಾ ಅವರ ಭಕ್ತರಾಗಿದ್ದ ಸಯ್ಯದ್ ಮಹ್ಮದ್ ಹುಸೇನಿ ಅವರು ದೆಹಲಿಗೆ ಮರಳಿದ ನಂತರ ಹಜರತ್ ನಾಸಿರುದ್ದೀನ್ ಚಿರಾಗ್ ದೆಹಲ್ವಿ ಅವರ ಬಯಾತ್ (ದೀಕ್ಷೆ) ಪಡೆದರು ಮತ್ತು ಗೇಸು ದರಾಜ್ (ಉದ್ದ ಕೂದಲಿನವನು) ಆದರು. ನಂತರ ಚಿಸ್ತಿಯಾ ಸೂಫಿ ಪರಂಪರೆಯನ್ನು ಮುಂದುವರೆಸಿದರು.
ಸೂಫಿ ತತ್ವಜ್ಞಾನಕ್ಕೆ ತಾತ್ವಿಕ ನೆಲೆ ಒದಗಿಸಿದವರು ಇಬ್ನ್ ಎ ಅರಬಿ. ಅವರ ಸಿದ್ಧಾಂತವನ್ನು ‘ವಹದತ್ ಉಲ್ ವುಜೂದ್’ (ಇದು ಭಾರತೀಯ ಅದ್ವೈತ ಸಿದ್ಧಾಂತಕ್ಕೆ ಸಮೀಪದ್ದು) ಎಂದು ಕರೆಯಲಾಗುತ್ತದೆ. ಅರಬಿಯ ಈ ಸಿದ್ಧಾಂತ ಅಪಾರ ಮೆಚ್ಚುಗೆಗೆ ಹಾಗೆಯೇ ಅಷ್ಟೇ ತೀವ್ರವಾಗಿ ಕಟುವಾದ ಟೀಕೆಗೂ ಗುರಿಯಾಗಿತ್ತು. ‘ವಹದತ್ ಉಲ್ ವುಜೂದ್’ ಇಸ್ಲಾಮಿಕ್ ತಾತ್ವಿಕ ಲೋಕದಲ್ಲಿ ಚರ್ಚೆ-ವಾಗ್ವಾದದ ಕಿಡಿ- ಬೆಳಕು ಹುಟ್ಟಿಸುವುದಕ್ಕೆ ಕಾರಣವಾಗಿತ್ತು. ಹಜರತ್ ನಾಸಿರುದ್ದೀನ್ ಚಿರಾಗ್ ದೆಹಲ್ವಿ ಅವರು ಅರಬಿಯ ಸಿದ್ಧಾಂತದ ಪರವಾದ ನಿಲುವನ್ನು ಹೊಂದಿದ್ದರು. ಗೇಸು ದರಾಜ್ ಅವರಿಗೆ ಅರಬಿಯ ಸಿದ್ಧಾಂತದ ಬಗ್ಗೆ ತಕರಾರು. ‘ಈಗ ಬದುಕಿದ್ದರೆ ಅರಬಿಗೆ ಇಸ್ಲಾಮಿನ ಮರುದೀಕ್ಷೆ ನೀಡುತ್ತಿದ್ದೆ’ ಎನ್ನುವಷ್ಟು ಖಚಿತತೆ- ಸ್ಪಷ್ಟ ನಿಲುವು. ಆದರೂ ಗುರು ನಾಸಿರುದ್ದೀನ್ ಚಿರಾಗ್ ದೆಹಲ್ವಿ ಅವರು ಬದುಕಿರುವ ವರೆಗೆ ಬರವಣಿಗೆ ಆರಂಭಿಸಲಿಲ್ಲ. ತಾತ್ವಿಕ ಲೋಕದಲ್ಲಿ ಅರಬಿಯ ಸೈದ್ಧಾಂತಿಕ ನಿಲುವಿನ ಬಗ್ಗೆ ತೀವ್ರ ವಾದ- ವಿವಾದ, ಚರ್ಚೆಗಳು ನಡೆಯುತ್ತಿದ್ದರೂ ಅದಕ್ಕೊಂದು ಖಚಿತವಾದ ತಾತ್ವಿಕ ನೆಲೆಗಟ್ಟು ತಲುಪಲು ಸಾಧ್ಯವಾಗಿರಲಿಲ್ಲ. ಗೇಸು ದರಾಜ್ ಅವರು ಪ್ರತಿಪಾದಿಸಿದ ‘ವಹದತ್ ಉಲ್ ಶುಹುದ್’ (ಬಹುತೇಕ ದ್ವೈತಕ್ಕೆ ಸಮೀಪ) ಹೊಸ ತತ್ವಜ್ಞಾನದ ಬೆಳಕಿಗೆ ಕಾರಣವಾಯಿತು.
ಈ ತತ್ವಜ್ಞಾನವು ಲೋಕಕ್ಕೆ ತೋರಿಸಲು ಕಾರಣವಾದ ನೆಲ ಗುಲ್ಬರ್ಗ. ಗುರುವಿನ ನಿಧನದ ನಂತರ ಖುಲ್ದಾಬಾದ್ ನಲ್ಲಿದ್ದ ತಮ್ಮ ತಂದೆಯವರ ಸಮಾಧಿಗೆ ಗೌರವ ನಮನ ಸಲ್ಲಿಸುವ ಕಾರಣದಿಂದ ಬಂದಿದ್ದರು. ಆಗ ಗೇಸು ದರಾಜ್ ಅವರನ್ನು ದಖನ್ ನಲ್ಲಿಯೇ ನೆಲೆಸುವಂತೆ ದಖನ್ ನಲ್ಲಿ ದೊರೆಯಾಗಿದ್ದ ಫಿರೋಜ್ ಶಹಾ ಬಹಮನಿ ಮನವಿ ಮಾಡಿದ. ಫಿರೋಜ್ ನ ಮನವಿಯ ಮೇರೆಗೆ ಗುಲ್ಬರ್ಗಕ್ಕೆ ಬಂದು ನೆಲೆಸಿದರು. ಆದರೆ, ಪ್ರಭುತ್ವದ ಜೊತೆಗಿನ ಒಡನಾಟ ಏಕಮುಖಿಯಾಗಿರಲಿಲ್ಲ. ‘ಬಂದೇ ನವಾಜ್’ ರ ಜನಪ್ರಿಯತೆ, ಕೀರ್ತಿ ಹಾಗೂ ಅವರ ನಿಲುವು ದೊರೆಯ ಅಸಹನೆ ಮತ್ತು ಭೀತಿಗೂ ಕಾರಣವಾಯಿತು. ಜನಾನುರಾಗಿಯಾಗಿದ್ದ ಬಂದೇ ನವಾಜ್ ರು ಬರವಣಿಗೆ ಕಾವ್ಯ ಮತ್ತು ಗದ್ಯ ಕೃತಿಗಳ ಮೂಲಕ ಸಾಹಿತ್ಯದ ಸೀಮೆಯನ್ನು ವಿಸ್ತರಿಸಿದರು. ತಾತ್ವಿಕತೆ ಮತ್ತು ಕಾವ್ಯಗಳೆರಡೂ ಹದವಾಗಿ ಬೆಸೆದ ಅದ್ಭುತಲೋಕ ಸೃಜನೆಗೊಂಡಿತು. ಅದಕ್ಕಾಗಿ ಅವರು ಬಳಸಿದ ಸೋದಾಹರಣ ಕತೆಗಳು ಗಮನ ಸೆಳೆದವು. ಧಾರ್ಮಿಕ ಭಾಷೆಯಾಗಿದ್ದ ಅರಬ್ಬಿ ಹಾಗೂ ಸಾಹಿತ್ಯದ ಭಾಷೆಯಾಗಿದ್ದ ಫಾರಸಿಯಲ್ಲಿ ಪರಿಣಿತಿ ಹೊಂದಿದ್ದ ಬಂದೇ ನವಾಜ್ ಅವರ ಬಹುತೇಕ ಕೃತಿಗಳು ಫಾರಸಿಯಲ್ಲಿವೆ. ನೆಲದ ಭಾಷೆಯಾಗಿ ಹುಟ್ಟಿದ ‘ದಖನಿ’ (ಉರ್ದುವಿನ ಮೂಲ ರೂಪ)ಯಲ್ಲಿ ಬರವಣಿಗೆ ಆರಂಭಿಸಿದ ಹಿರಿಮೆ ಅವರದು. ಅವರನ್ನು ಉರ್ದುವಿನ ಮೊದಲ ಗದ್ಯಲೇಖಕ ಎಂದೇ ಗುರುತಿಸಲಾಗುತ್ತದೆ. ಬಂದೇ ನವಾಜ್ ಅವರು ರಚಿಸಿದ ಕೃತಿಗಳ ಸಂಖ್ಯೆ 105.
ಹೀಗೆ ಜನಪರ ನಿಲುವು, ನೋವಿಗೆ ಮಿಡಿಯುವ ಸಂತ, ತಾತ್ವಿಕ ನೆಲೆಗಟ್ಟು ಒದಗಿಸಿದ ತತ್ವಜ್ಞಾನಿ ಹಾಗೂ ಕಾವ್ಯ-ಗದ್ಯದ ಬರವಣಿಗೆಯ ಮೂಲಕ ತಮ್ಮದೇ ಛಾಪು- ಹೆಜ್ಜೆಗುರುತು ಮೂಡಿಸಿದ ಮಹಾನ್ ಚೇತನ ಬಂದೇ ನವಾಜ್. ಸಾಹಿತ್ಯ-ತಾತ್ವಿಕ ಜಗತ್ತಿನಲ್ಲಿ ಚಿರಪರಿಚಿತರಾಗಿರುವ ‘ಜನಸಾಮಾನ್ಯರ ದೊರೆ’ಯು ಕನ್ನಡ ಸಾಹಿತ್ಯಕ್ಕೆ ಅಪರಿಚಿತರು. ಅದಕ್ಕೆ ಹಲವು ರಾಜಕೀಯ-ಸಾಂಸ್ಕೃತಿಕ- ಧಾರ್ಮಿಕ ಕಾರಣಗಳಿವೆ. ಗೋಡೆ-ಕಂದಕ ನಿರ್ಮಿಸುವ ಕಾಲದಲ್ಲಿ ಹಿಂದೊಮ್ಮೆ ಸಹಬಾಳ್ವೆಯ ಸೇತುವೆ ಕಟ್ಟಿದವರು ಬಂದೇ ನವಾಜ್.( ಈ ಲೇಖನವನ್ನು ದೇವು ಪತ್ತಾರ ಅವರ ಬರವಣಿಗೆಯಿಂದ ಸಂಗ್ರಹಿಸಲಾಗಿದೆ)
ಪ್ರತಿವರ್ಷ ಜುಲೈ ತಿಂಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಉರುಸ್ ಜರುಗುತ್ತದೆ.ಬಂದೇ ನಾವಾಜ್ ಅವರು ಗುಲ್ಬರ್ಗಾದ ಶರಣ ಬಸವೇಶ್ವರರ ಸಮಕಾಲೀನರಾಗಿದ್ದರು. ಹಿಂದೂ-ಮುಸ್ಲಿಂರು ಗುಲ್ಬರ್ಗಾದಲ್ಲಿರುವ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭಕ್ತರಾಗಿದ್ದಾರೆ. ಈ ದರ್ಗಾ ಒಂದು ಜಾಗೃತವಾದ ಧಾರ್ಮಿಕ ಕ್ಷೇತ್ರವೆಂಬ ಜನನಂಬಿಕೆಯಿದೆ.
ಶರಣ ಬಸವೇಶ್ವರ ಮತ್ತು ಬಂದೇ ನವಾಜರ ಸ್ನೇಹದ ಗುರುತಾಗಿ ಈಗಲೂ ಕೂಡ ಕೆಲವು ಸಂಪ್ರದಾಯಗಳು ಉಳಿದಿವೆ. ಬಂದೇ ನವಾಜರ ಉರುಸು ಶುರುವಾಗುವ ಮುನ್ನ ತೇಯ್ದಿರುವ ಗಂಧವು ಶರಣ ಬಸವೇಶ್ವರರ ಗುಡಿಯಿಂದ ಬರಲೇ ಬೇಕು. ಹಾಗೇ ಶರಣ ಬಸವೇಶ್ವರರ ಜಾತ್ರೆ ಆರಂಭ ಆಗುವ ಮುನ್ನ ದೀವಟಿಗೆಗಳು ಬಂದೇ ನವಾಜರ ದರ್ಗಾದಿಂದ ಬರಲೇ ಬೇಕು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ