ವಿಷಯಕ್ಕೆ ಹೋಗಿ

BA. 1 OEC ಕನ್ನಡ ಸಾಹಿತ್ಯದ ಬೆಳವಣಿಗೆ

ಕನ್ನಡ ಸಾಹಿತ್ಯ ಬೆಳವಣಿಗೆ
 ಶ್ರೀಮಂತವೂ ವೈವಿಧ್ಯಪೂರ್ಣವೂ ಆದ ಕನ್ನಡ ಸಾಹಿತ್ಯಕ್ಕೆ ೨ ಸಾವಿರ ವರ್ಷಗಳಿಗೂ ಮೇಲ್ಪಟ್ಟ ಸುದೀರ್ಘ ಇತಿಹಾಸವಿದೆ. ಅಧ್ಯಯನದ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಮತ ಪ್ರಾಬಲ್ಯ, ಭಾಷೆಯ ಅವಸ್ಥೆಗಳು, ಪ್ರಮುಖ ಕವಿಗಳು, ಸಾಹಿತ್ಯ ರೂಪಗಳು, ಆಯಾ ಯುಗಮನೋಧರ್ಮ, ಶತಮಾನಾನುಪೂರ್ವಿ - ಈ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅನೇಕ ವಿಧದಲ್ಲಿ ವಿಭಾಗಿಸಿ ವಿಶ್ಲೇಷಿಸುವ ಕಾರ್ಯ ಇದುವರೆಗೆ ಸಾಕಷ್ಟು ನಡೆದಿದೆ. ಮತೀಯ ದೃಷ್ಟಿಯನ್ನನುಸರಿಸಿ ಜೈನಯುಗ, ವೀರಶೈವಯುಗ, ಬ್ರಾಹ್ಮಣಯುಗವೆಂದೂ ಪ್ರಮುಖ ಕವಿಗಳನ್ನಾಧರಿಸಿ ಪಂಪಯುಗ, ಬಸವಯುಗ, ಹರಿಹರಯುಗ, ಕುಮಾರವ್ಯಾಸಯುಗವೆಂದೂ ಸಾಹಿತ್ಯ ರೂಪಗಳನ್ನಾಧರಿಸಿ ಚಂಪೂ, ವಚನ, ರಗಳೆ, ತ್ರಿಪದಿ, ಸಾಂಗತ್ಯ ಯುಗಗಳೆಂದೂ ಭಾಷಾವಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವದ ಹಳಗನ್ನಡಕಾಲ, ಹಳಗನ್ನಡಕಾಲ, ನಡುಗನ್ನಡಕಾಲ, ಹೊಸಗನ್ನಡಕಾಲವೆಂದೂ ಆಯಾ ಯುಗಮನೋಧರ್ಮ ಮತ್ತು ಕವಿಕರ್ಮಕ್ಕೆ ಸಿಕ್ಕ ಮೂಲ ಪ್ರಚೋದನೆಯನ್ನು ಮುಖ್ಯವಾಗಿ ಆಧರಿಸಿ ಕ್ಷಾತ್ರ ಯುಗ, ಧರ್ಮಪ್ರಚಾರಯುಗ, ಸಾರ್ವಜನಿಕಯುಗ, ಆಧುನಿಕಯುಗವೆಂದೂ ಶತಮಾನಾನು ಪೂರ್ವಿಯನ್ನನುಸರಿಸಿ 10ನೆಯ ಶತಮಾನದ ಸಾಹಿತ್ಯ, 11ನೆಯ ಶತಮಾನದ ಸಾಹಿತ್ಯ - ಇತ್ಯಾದಿಯಾಗಿಯೂ -ಹೀಗೆ ಒಬ್ಬೊಬ್ಬ ವಿದ್ವಾಂಸರು ಒಂದೊಂದು ಕ್ರಮವನ್ನನುಸರಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನತೆ, ಪಂಪಯುಗ, ವಚನಯುಗ, ಹರಿಹರಯುಗ, ಕುಮಾರವ್ಯಾಸಯುಗ, ಆಧುನಿಕಯುಗ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಕನ್ನಡ ವಾಙ್ಮಯವನ್ನು ಸ್ಥೂಲವಾಗಿ ಸಮೀಕ್ಷಿಸಲಾಗಿದೆ.

ಕನ್ನಡ ಸಾಹಿತ್ಯದ ಪ್ರಾಚೀನತೆ : ಕನ್ನಡ ಸಾಹಿತ್ಯ ಕ್ರಿಸ್ತಶಕದಷ್ಟೇ ಪ್ರಾಚೀನ ವಾಗಿದ್ದಿರಬೇಕೆಂಬುದು ಹಲವು ವಿದ್ವಾಂಸರ ಅಬಿಮತ. ಬೌದ್ಧರು ಕನ್ನಡದ ಆದಿಕವಿಗಳೆಂದೂ ಬೌದ್ಧಧರ್ಮದ ನಾಶದೊಂದಿಗೇ ಬೌದ್ಧ ಗ್ರಂಥಗಳೂ ನಾಶವಾಗಿದ್ದಿರಬೇಕೆಂದೂ ವಿದ್ವಾಂಸರು ಊಹಿಸಿದ್ದಾರೆ. ಕನ್ನಡ ಭಾಷೆ ಸಾಹಿತ್ಯದ ಗದ್ದುಗೆಯೇರಿ ಬರೆಹ ರೂಪದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡಿರುವುದು ಸದ್ಯಕ್ಕೆ ತಿಳಿದಿರುವಂತೆ ಹಲ್ಮಿಡಿಯ ಶಾಸನದಲ್ಲಿ. ಇದರ ಮಂಗಳ ಶ್ಲೋಕ ಸಂಸ್ಕೃತದಲ್ಲಿದ್ದು, ಉಳಿದುದೆಲ್ಲ ಕನ್ನಡ ಲಿಪಿಯಲ್ಲಿ ಗದ್ಯ ರೂಪದಲ್ಲಿದೆ. ಭಾಷಾ ಶೈಲಿ ಸಂಸ್ಕೃತ ಪ್ರಚುರವಾಗಿ ಪ್ರೌಢವಾಗಿದೆ. ಇದನ್ನು ನೋಡಿದರೆ, ಇದಕ್ಕೂ ಪೂರ್ವದಲ್ಲಿಯೇ ಕನ್ನಡ ಸಾಹಿತ್ಯ ಸಾಕಷ್ಟು ಬೆಳೆದಿರಬೇಕೆಂದೂ ಈ ಶಾಸನ ಹುಟ್ಟುವ ವೇಳೆಗೆ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಗಾಢವಾಗಿದ್ದಿರಬೇಕೆಂದೂ ಊಹಿಸಲು ಅವಕಾಶವಿದೆ. ಹಾಗೆಯೇ ಪ್ರಾಚೀನಕಾಲದ ಇತರ ಹಲವು ಶಾಸನಗಳೂ ಅತ್ಯಂತ ಕಾವ್ಯಮಯವಾಗಿವೆ.

ಸು.7ನೆಯ ಶತಮಾನದ ಬಾದಾಮಿಯ ಶಾಸನ ಕಪ್ಪೆ ಅರಭಟ್ಟ ಎಂಬ ಕಲಿಯ ಶಕ್ತಿ ಸಾಹಸಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಅಚ್ಚಕನ್ನಡ ಛಂದಸ್ಸಾದ ತ್ರಿಪದಿಯಲ್ಲಿರುವ ಈ ಶಾಸನ ಭಾವಭಾಷೆಗಳ ವಿದ್ಯುದಾಲಿಂಗನದಿಂದ ಉದಿಸಿದ ಸುಂದರ ಭಾವಗೀತೆ ಯಂತಿದೆ. ಸುಮಾರು ಇದೇ ಕಾಲದಲ್ಲಿಯೇ ಹುಟ್ಟಿದ ಶ್ರವಣಬೆಳಗೊಳದ ಶಾಸನವೊಂದು ನಂದಿಸೇನನೆಂಬ ಜೈನಮುನಿಯ ವೈರಾಗ್ಯವನ್ನು ಹೃದಯಂಗಮವಾಗಿ ವರ್ಣಿಸುತ್ತದೆ. ಕವಿಹೃದಯವುಳ್ಳ ಇಂಥ ಶಾಸನಕರ್ತೃಗಳು ಕಾವ್ಯಕರ್ತೃಗಳಾಗಿಯೂ ಇದ್ದಿರಬಹುದು.

ಈಗ ದೊರಕಿರುವ ಕೆಲವು ಕನ್ನಡ ಗ್ರಂಥಗಳಲ್ಲಿ ಹಲವು ಕನ್ನಡ ಕೃತಿಕಾರರ ಪ್ರಸ್ತಾಪ ದೊರಕುತ್ತದೆ. ಅಂಥ ಕೆಲವು ಕೃತಿಕಾರರನ್ನು 7, 8, 9ನೆಯ ಶತಮಾನದವರೆಂದು ತೀರ್ಮಾನಿಸಬಹುದು. ಆದರೆ ಅವರ ಗ್ರಂಥಗಳು ಯಾವುವೂ ದೊರಕಿಲ್ಲ. ಈ ಸಂದರ್ಭದಲ್ಲಿ ತುಂಬಲೂರಾಚಾರ್ಯರು ಬರೆದ ಚೂಡಾಮಣಿ ಎಂಬ ತತ್ತ್ವಾರ್ಥ ಮಹಾಶಾಸ್ತ್ರದ ಮೇಲಿನ ವ್ಯಾಖ್ಯಾನ ಗ್ರಂಥವೂ ಗುಣಗಾಂಕಿಯಂ ಎಂಬ ಛಂದಶ್ಶಾಸ್ತ್ರದ ಗ್ರಂಥವೂ ಉಲ್ಲೇಖಾರ್ಹವಾದುವು. ತುಂಬಲೂರಾಚಾರ್ಯರ ಗ್ರಂಥ ತೊಂಬತ್ತಾರು ಸಹಸ್ರ ಗ್ರಂಥ ಪರಿಮಿತಿಯುಳ್ಳದ್ದೆಂದು ಭಟ್ಟಾಕಳಂಕನಿಂದ ತಿಳಿದುಬರುತ್ತದೆ. ಇಂಥ ಬೃಹತ್ತಾದ ಶಾಸ್ತ್ರಗ್ರಂಥವೊಂದು ಹುಟ್ಟಬೇಕಾದರೆ ಅದಕ್ಕೂ ಪೂರ್ವದಲ್ಲಿ ಸಾಹಿತ್ಯ ಸಮೃದ್ಧವಾಗಿ ಬೆಳೆದು ಬಂದಿರಬಹುದು. ‘ಗುಣಗಾಂಕಿಯಂ’ ಕವಿರಾಜಮಾರ್ಗದ ಸಮಕಾಲೀನ ವಾದುದೆಂದೂ ನಾಗವರ್ಮನ ಛಂದೋಂಬುದಿsಗೆ ಮಾದರಿಯೆಂದೂ ತಿಳಿದುಬರುತ್ತದೆ. ಇದು ಶಾಸ್ತ್ರಗ್ರಂಥವಾದುದರಿಂದ ಇದಕ್ಕೂ ಪೂರ್ವದಲ್ಲಿ ಸಾಹಿತ್ಯ ಬೆಳೆದಿರಬೇಕು. ತುಂಬಲೂರಾಚಾರ್ಯನ ಸಮಕಾಲೀನನಾದ ಶ್ಯಾಮಕುಂದಾಚಾರ್ಯ ಕನ್ನಡದಲ್ಲಿ ಪ್ರಾಭೃತವನ್ನು ರಚಿಸಿದನೆಂದು ತಿಳಿದುಬಂದಿದೆ. ಗಂಗರಾಜನಾದ ಸೈಗೊಟ್ಟ ಶಿವಮಾರ (ಸು.788-812) ಗಜಾಷ್ಟಕವನ್ನು ಕನ್ನಡದಲ್ಲಿ ಬರೆದಿದ್ದನೆಂದೂ ಅದು ಓವನಿಗೆಯೂ ಒನಕೆವಾಡೂ ಆಗಿದ್ದು ಜನಪ್ರಿಯವಾಗಿತ್ತೆಂದೂ ತಿಳಿದುಬರುತ್ತದೆ. ಇದು ದಾಖಲೆಗೊಂಡಿರುವ ಮೊಟ್ಟಮೊದಲ ಕನ್ನಡ ಜನಪದ ಕಾವ್ಯ.

ಈಗ ನಮಗೆ ದೊರೆತಿರುವ ಕನ್ನಡ ಗ್ರಂಥಗಳಲ್ಲಿ ಕವಿರಾಜಮಾರ್ಗ ಮೊಟ್ಟಮೊದಲನೆಯದು. ನೃಪತುಂಗನ ಆಸ್ಥಾನಕವಿ ಶ್ರೀ ವಿಜಯ ಇದರ ಕರ್ತೃ. ಇದು ಕನ್ನಡ ಭಾಷೆ ವ್ಯಾಕರಣ ಅಲಂಕಾರಗಳನ್ನು ನಿರೂಪಿಸುವ ಬಹುಮುಖ್ಯವಾದ ಲಕ್ಷಣ ಗ್ರಂಥವಾಗಿದ್ದು ಕನ್ನಡಿಗರ ಕೈಪಿಡಿಯಂತಿದೆ. ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳನ್ನು ಕುರಿತು ಇದರ ಕರ್ತೃ ಆಡಿರುವ ನುಡಿಗಳು ಅತ್ಯಮೂಲ್ಯವಾಗಿವೆ. ಕವಿರಾಜ ಮಾರ್ಗಕಾರ ಕೊಡುವ ಕೆಲವು ಉದಾಹರಣ ಪದ್ಯಗಳು ಕಾವ್ಯಮಯ ವಾಗಿವೆಯಾಗಿ ಶಾಸ್ತ್ರಗ್ರಂಥವೊಂದು ಆ ರೀತಿ ಇರಬೇಕಾದರೆ ಆ ವೇಳೆಗೆ ಸಾಹಿತ್ಯ ಸಾಕಷ್ಟು ಬೆಳೆದು, ಪಳಗಿ ಹದಗೊಂಡಿರ ಬೇಕೆಂಬುದು ಸ್ವಯಂವೇದ್ಯ ವಾಗುತ್ತದೆ. ಆದ್ದರಿಂದ ಕನ್ನಡ ಸಾಹಿತ್ಯ ಕವಿರಾಜಮಾರ್ಗ ಕ್ಕಿಂತಲೂ ನಾಲ್ಕೈದು ಶತಮಾನಗಳಷ್ಟಾದರೂ ಪ್ರಾಚೀನವಾಗಿರಬೇಕು. ಕವಿರಾಜಮಾರ್ಗಕಾರ ತನ್ನ ಗ್ರಂಥಗಳಲ್ಲಿ ತನಗಿಂತ ಹಿಂದಿನ ಅನೇಕ ಕವಿಗಳನ್ನು ಹೆಸರಿಸಿದ್ದಾನೆ. ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮೊದಲಾದವರೂ ಗದ್ಯಕವಿಗಳೆಂದೂ ಪರಮ ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲ ಪದ್ಯಕವಿಗಳೆಂದೂ ಹೇಳಿದ್ದಾನೆ. ಇವನ ಮಾತಿನ ಧೋರಣೆಯನ್ನು ನೋಡಿದರೆ ಈತ ಹೆಸರಿಸಿರುವ ಕವಿಗಳೆಲ್ಲರೂ ಪ್ರಸಿದ್ಧ ಕವಿಗಳಾಗಿದ್ದಂತೆ ತೋರುತ್ತದೆ. ಆದರೆ ಅವರು ಬರೆದ ಕಾವ್ಯಗಳಾವುವೆಂಬುದನ್ನು ಈತ ಹೇಳಿಲ್ಲ; ಅವರ ಗ್ರಂಥಗಳಾವುವೂ ಈಗ ನಮಗೆ ಸಮಗ್ರವಾಗಿ ದೊರೆತಿಲ್ಲ. ಆದರೂ ಇವರಲ್ಲಿ ಕೆಲವರ ಹೆಸರು ನಮಗೆ ಪರಿಚಿತವಾಗಿದೆ. ಗದ್ಯಕವಿಗಳಲ್ಲಿ ಒಬ್ಬನಾದ ದುರ್ವಿನೀತ (ಸು.529-79) ಗಂಗವಂಶದ ದೊರೆಯೆಂದೂ ಈತ ಬಹುಶ್ರುತನೂಮೇಧಾವಿಯೂ ಆಗಿದ್ದನೆಂದೂ ಶಾಸನಗಳಿಂದ ತಿಳಿಯುತ್ತದೆ. ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಇವನು ಕನ್ನಡ ಟೀಕನ್ನು ಬರೆದಿರುವಂತೆ ತಿಳಿದುಬರುತ್ತದೆ. ಪೈಶಾಚೀ ಭಾಷೆಯಲ್ಲಿದ್ದ ಬೃಹತ್ಕಥೆಯನ್ನು ವಡ್ಡಕಥಾ ಎಂಬ ಹೆಸರಿನಿಂದ ಈತ ಕನ್ನಡಕ್ಕೆ ತಂದಿದ್ದಾನೆಂದೂ ಊಹೆ. ಕವಿರಾಜಮಾರ್ಗದಲ್ಲಿ ಹೇಳಿರುವ ಪದ್ಯಕವಿಗಳಲ್ಲಿ ಚಂದ್ರನನ್ನು ಹಲವು ಕನ್ನಡ ಕವಿಗಳು ಸ್ತುತಿಸಿದ್ದಾರೆ. ಇಷ್ಟೇ ಅಲ್ಲ, ಕವಿರಾಜಮಾರ್ಗದಲ್ಲಿ ಉದಾಹರಿಸಿರುವ ಹಲವಾರು ಪದ್ಯಗಳು ಎಲ್ಲಿಂದ ಎತ್ತಿಕೊಂಡವುಗಳೆಂಬ ವಿಷಯ ಗೊತ್ತಾಗುವುದಿಲ್ಲ. ಇವುಗಳಲ್ಲಿ ಹತ್ತಾರು ಪದ್ಯಗಳು ರಾಮಾಯಣದ ಹಲವಾರು ಸನ್ನಿವೇಶಗಳನ್ನು ಸೂಚಿಸುವುದರಿಂದ, ಆ ಕಾಲಕ್ಕಾಗಲೇ ಒಂದು ರಾಮಾಯಣ ಕನ್ನಡದಲ್ಲಿ ಹುಟ್ಟಿದ್ದಿತೆಂದು ಊಹಿಸಲವಕಾಶವಿದೆ. ಇದೇ ಗ್ರಂಥದಲ್ಲಿ ಕನ್ನಡ ಕಾವ್ಯ ಪ್ರಕಾರಗಳಲ್ಲಿ ಉನ್ನತ ಗುಣವುಳ್ಳ ಗದ್ಯಪದ್ಯ ಸಮ್ಮಿಶ್ರಣದ ಪ್ರಕಾರವನ್ನು ‘ಗದ್ಯ ಕಥೆ’ ಎಂಬ ಹೆಸರಿನಿಂದ ಪ್ರಾಚೀನ ಆಚಾರ್ಯರು ರಚಿಸಿದ್ದಾರೆ ಎಂದು ಹೇಳಿದೆ. ಅಲ್ಲದೆ ಕನ್ನಡಕ್ಕೇ ವಿಶಿಷ್ಟವಾದ ಚತ್ತಾಣ ಮತ್ತು ಬೆದಂಡೆಗಳಂಥ ಪದ್ಯಕಾವ್ಯಪ್ರಕಾರಗಳಿದ್ದುವೆಂದೂ ಇದರಲ್ಲಿ ಪ್ರಾಚೀನರಾದ ಕವಿಗಳು ಕೃತಿರಚನೆ ಮಾಡಿದ್ದರೆಂದೂ ತಿಳಿಯುತ್ತದೆ.

ಕವಿರಾಜಮಾರ್ಗ ಹುಟ್ಟಿದ ಹಿಂಚುಮುಂಚಿನಲ್ಲಿಯೇ ಅಸಗ, ಗುಣನಂದಿ ಮತ್ತು ಗುಣವರ್ಮ ಎಂಬ ಮೂವರು ಕವಿಗಳು ಕಾಣಬರುತ್ತಾರೆ. ಅಸಗನ ವರ್ಧಮಾನ ಚರಿತಂ ಎಂಬ ಸಂಸ್ಕೃತ ಗ್ರಂಥದಿಂದ ಈತ ಸು.853ರಲ್ಲಿ ಇದ್ದನೆಂಬುದು ಮಾತ್ರವಲ್ಲದೆ ಶ್ರೀ ಅಸಗಭೂಪಕೃತೇ ಎಂಬ ಅಲ್ಲಿನ ಹೇಳಿಕೆಯಿಂದ ಈತ ರಾಜನೂ ಆಗಿದ್ದಿರಬೇಕೆಂದು ಭಾವಿಸುವುದಕ್ಕೂ ಅವಕಾಶವಿದೆ. ಕನ್ನಡದ ಹಲವಾರು ಕವಿಗಳು ಈತನನ್ನು ಸ್ತುತಿಸಿದ್ದಾರೆ. ಈತನ ‘ಕರ್ನಾಟ ಕುಮಾರಸಂಭವ’ ಕನ್ನಡ ಕಾವ್ಯವೆಂದು ಜಯಕೀರ್ತಿಯ ಗ್ರಂಥದಿಂದ ತಿಳಿಯುತ್ತದೆ. ಗುಣನಂದಿಯನ್ನು ಭಟ್ಟಾಕಳಂಕ ಬಹು ಭಕ್ತಿಯಿಂದ ಭಗವಾನ್ ಗುಣನಂದಿ ಎಂದು ಕರೆದು ಗೌರವಿಸಿದ್ದಾನೆ. ಈತನ ಕಾವ್ಯದ ತುಣುಕೊಂದು ಕೇಶಿರಾಜನ ವ್ಯಾಕರಣದಲ್ಲಿದೆ. ಅದನ್ನು ನೋಡಿದರೆ ಈತ ಉತ್ತಮ ಕವಿಯೆಂದು ಭಾಸವಾಗುತ್ತದೆ. ಈತನ ಗ್ರಂಥವಾವುದೂ ಸಿಕ್ಕಿಲ್ಲ. ಗುಣವರ್ಮನು ಹರಿವಂಶ, ಶೂದ್ರಕ ಎಂಬ ಎರಡು ಉದ್ಗ್ರಂಥಗಳ ಕರ್ತೃವೆಂದು ಹೇಳುವುದಕ್ಕೆ ಅವಕಾಶವಿದೆ. ನಾಗವರ್ಮ, ಕೇಶಿರಾಜರು ಈತನ ಕಾವ್ಯಗಳನ್ನು ಹೆಸರಿಸಿದ್ದಾರೆ. ಮಲ್ಲಿಕಾರ್ಜುನ ಕವಿಯ ಸೂಕ್ತಿ ಸುಧಾರ್ಣವದಲ್ಲಿ ಗುಣವರ್ಮನ ಶೂದ್ರಕ ಕಾವ್ಯದ ಭಾಗಗಳು ದೊರೆಯುತ್ತವೆ. ಮೇಲಿನ ವಿವರಣೆಯಿಂದ ಕನ್ನಡ ಸಾಹಿತ್ಯ ಬಹುಶಃ ಕ್ರಿಸ್ತಶಕದ ಆರಂಭದಲ್ಲಿ ಪ್ರಾರಂಭವಾಗಿ ಐದು ಆರು ಶತಮಾನಗಳ ವೇಳೆಗಾಗಲೇ ಸಮೃದ್ಧಿಯಾಗಿ ಬೆಳೆದುಕೊಂಡು ಬಂದಿರಬಹುದೆಂದು ಹೇಳಬಹುದಾಗಿದೆ.

ಪಂಪಯುಗ : ಸು.900-1150. ಕನ್ನಡ ಸಾಹಿತ್ಯದ ಪ್ರಥಮ ಘಟ್ಟ ಪಂಪ ಯುಗ. ಪಂಪನಿಂದ ಬಸವಣ್ಣನವರೆಗೆ ಈ ಯುಗದ ವ್ಯಾಪ್ತಿಯಿದೆ. ಕನ್ನಡ ಸಾಹಿತ್ಯ ವಿಚ್ಫಿತ್ತಿಯಿಲ್ಲದೆ ಹರಿದುಕೊಂಡು ಹೋಗಿರುವುದು 10ನೆಯ ಶತಮಾನದಿಂದ ಮುಂದೆ. ಈ ಯುಗದ ಪ್ರಮುಖ ಕೊಡುಗೆಯೆಂದರೆ ಚಂಪೂಕಾವ್ಯಗಳು. ಈ ಯುಗದಲ್ಲಿ ಪಂಪ, ರನ್ನ, ಪೊನ್ನ- ಈ ಮೂವರು ಮಹಾಕಾವ್ಯಗಳನ್ನು ರಚಿಸಿ ಮಹಾಕವಿಗಳು ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. 10ನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಪಂಪ ಕನ್ನಡದ ಆದಿಕವಿಯೆಂದು ಪ್ರಸಿದ್ಧನಾಗಿದ್ದಾನೆ. ಚಾಳುಕ್ಯ ಅರಿಕೇಸರಿಯ ಆಸ್ಥಾನದಲ್ಲಿ ಕವಿಯೂ ಕಲಿಯೂ ಆಗಿದ್ದ ಈತ ಕಾಲದ ದೃಷ್ಟಿಯಿಂದ ಮಾತ್ರವಲ್ಲ, ಯೋಗ್ಯತೆಯ ದೃಷ್ಟಿಯಿಂದಲೂ ಕನ್ನಡದ ಆದಿಕವಿ. ಚಂಪೂ ಸಾಹಿತ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿ ಅದು ಸು. 2-3 ಶತಮಾನಗಳ ಕಾಲ ಪ್ರಭಾವೀ ಸಾಹಿತ್ಯ ಮಾಧ್ಯಮವಾಗಿ ಬಳಕೆಯಾಗುವಂತೆ ಮಾಡಿದವನು ಈತ. ಚಂಪೂ ಪರಂಪರೆಯಲ್ಲಿ ಲೌಕಿಕ ಧಾರ್ಮಿಕ ಎಂಬ ಎರಡು ರೀತಿಯ ಕಾವ್ಯಮಾರ್ಗಗಳಿಗೆ ಪಂಪನೇ ಸದ್ಯಕ್ಕೆ ಮೊದಲಿಗನೆನ್ನಬಹುದು. ಈತನ ಎರಡು ಕಾವ್ಯಗಳಾದ ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣಗಳಿಗೆ ಕ್ರಮವಾಗಿ ವ್ಯಾಸರ ಮಹಾಭಾರತ ಮತ್ತು ಜಿನಸೇನಾಚಾರ್ಯರ ಪೂರ್ವಪುರಾಣ ಆಕರ ಗ್ರಂಥಗಳು. ವಿಕ್ರಮಾರ್ಜುನ ವಿಜಯದಲ್ಲಿ ತನ್ನ ಆಶ್ರಯದಾತ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಂದಿಗೆ ಸಮೀಕರಿಸಿ ಪೌರಾಣಿಕ, ಐತಿಹಾಸಿಕ ಅಂಶಗಳನ್ನು ಸ್ವಾರಸ್ಯವಾಗಿ ಹೊಂದಿಸಿ ಮಹಾಭಾರತದ ಕಥೆಯನ್ನು ಮೆಯ್ಗಡಲೀಯದೆ ನಿರೂಪಿಸಿದ್ದಾನೆ. ಆದಿಪುರಾಣ ಪ್ರಥಮಜಿನನಾದ ವೃಷಭನಾಥನ ಕಥೆಯನ್ನೊಳಗೊಂಡ, ಕಾವ್ಯಧರ್ಮ ಹಾಗೂ ಧರ್ಮ ಎರಡೂ ಸಮರಸವಾಗಿ ಬೆರೆತಿರುವ ಧಾರ್ಮಿಕ ಕಾವ್ಯ. ವಸ್ತು, ಭಾಷೆ, ಭಾವ, ಶೈಲಿ ಈ ಎಲ್ಲ ರೀತಿಯಿಂದ ಪಂಪನ ಕಾವ್ಯಗಳು ಕನ್ನಡ ಭಾಷೆಗೆ ಕೊಟ್ಟ ಅದ್ವಿತೀಯ ಕೊಡುಗೆಗಳಾಗಿವೆ.

ಪಂಪ‌ ನಂತರದ ಯುಗ

ಪಂಪನಿಂದ ಮುಂದೆ ಸು. 2 ಶತಮಾನಗಳಷ್ಟು ಕಾಲ ಕಾವ್ಯಕರ್ಮಕ್ಕೆ ಕೈಹಾಕಿದವರೆಲ್ಲರೂ ವಸ್ತು ರೀತಿಗಳಲ್ಲಿ, ಭಾವ ಭಾಷೆಗಳಲ್ಲಿ ಪಂಪನನ್ನೇ ಅನುಕರಿಸಿದ್ದಾರೆ; ಅನುಸರಿಸಿದ್ದಾರೆ. ಆದ್ದರಿಂದ ಈ ಕಾಲಮಾನವನ್ನು ಪಂಪಯುಗವೆಂದೇ ಕರೆಯುತ್ತಾರೆ. ಈ ಕಾಲದ ಸಾಹಿತ್ಯ ಅತ್ಯಂತ ಪ್ರೌಢವಾಗಿ, ಸತ್ತ್ವಯುಕ್ತವಾಗಿ, ರಸವತ್ತಾಗಿ ಇರುವುದರಿಂದ ಇದನ್ನು ಕನ್ನಡ ಸಾಹಿತ್ಯದ ಸುವರ್ಣಯುಗ ಎಂದೂ ಕರೆಯುವುದುಂಟು. ಈ ಯುಗದಲ್ಲಿ ಚಂಪೂಕಾವ್ಯಗಳು ಪ್ರಚುರವಾಗಿರುವುದರಿಂದ ಚಂಪೂಯುಗವೆಂದೂ ಈ ಕಾವ್ಯಗಳಲ್ಲಿ ಸಾಮಾನ್ಯವಾಗಿ ವೀರರಸ ನೊರೆಗಟ್ಟಿ ಹರಿಯುತ್ತಿರುವುದರಿಂದ ವೀರಯುಗವೆಂದೂ ಹೆಸರಿಸುವ ವಾಡಿಕೆಯಿದೆ. ಈ ಯುಗದ ಕವಿಗಳೆಲ್ಲರೂ ಬಹುಮಟ್ಟಿಗೆ ರಾಜಾಶ್ರಿತರು. ಪಂಪನಂತೆಯೇ ಜೈನಧರ್ಮಾನುಯಾಯಿಗಳಾದ ಮತ್ತಿಬ್ಬರು ಕವಿಗಳು ಪೊನ್ನ ಮತ್ತು ರನ್ನ. ಇಬ್ಬರೂ ರಾಜಪೂಜಿತರಾದ ಆಸ್ಥಾನಕವಿಗಳು. ಪಂಪನಂತೆಯೇ ತಮ್ಮ ಕಾವ್ಯಗಳಲ್ಲಿ ಒಂದನ್ನು ಧರ್ಮಕ್ಕೂ ಮತ್ತೊಂದನ್ನು ಲೌಕಿಕಕ್ಕೂ ಮೀಸಲು ಮಾಡಿದ್ದಾರೆ. ಲೌಕಿಕ ಕಾವ್ಯಗಳಲ್ಲಿ ಆಯಾ ಕವಿಗಳ ಪೋಷಕರು ಪುರಾಣಪುರುಷರ ವೇಷವನ್ನು ಧರಿಸಿ, ಆಯಾ ಕಾವ್ಯಗಳ ನಾಯಕರಾಗಿ ಮೆರೆದಿದ್ದಾರೆ. ರಾಷ್ಟ್ರಕೂಟ ಚಕ್ರವರ್ತಿ ಮುಮ್ಮಡಿ ಕೃಷ್ಣನ ಆಸ್ಥಾನಕವಿಯಾಗಿದ್ದ, ಕವಿಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದ ಪೊನ್ನನ ಶಾಂತಿಪುರಾಣ ಜೈನ ಧಾರ್ಮಿಕ ಗ್ರಂಥ. ಈತನ ‘ಭುವನೈಕರಾಮಾಭ್ಯುದಯ’ ಈಗ ಉಪಲಬ್ಧವಿಲ್ಲ. ಇದು ರಾಮಾಯಣದ ಕಥೆಯನ್ನು ಆಧರಿಸಿ ರಚಿತವಾದ ಲೌಕಿಕ ಕಾವ್ಯವೆಂದು ಊಹಿಸಲು ಅವಕಾಶವಿದೆ.

ರನ್ನನೂ ಪಂಪನ ಮೇಲ್ಪಂಕ್ತಿಯಲ್ಲಿ ಕಾವ್ಯರಚನೆ ಮಾಡಿದವನಾದರೂ ತನ್ನ ಸ್ವಂತಿಕೆಯನ್ನು ಮೆರೆದಿದ್ದಾನೆ. ಈತನ ಸಾಹಸಬಿsೕಮವಿಜಯಕ್ಕೆ (ಗದಾಯುದ್ಧ) ಪಂಪನ ಕೃತಿಯೇ ಪ್ರಮುಖ ಆಕರವಾದರೂ ರನ್ನನ ವ್ಯಕ್ತಿತ್ವದ ಅಚ್ಚು ಈ ಕಾವ್ಯದಲ್ಲಿ ಮೂಡಿಬಂದಿದೆ. ಕಥಾವಸ್ತು ಬಿsೕಮ-ದುರ್ಯೋಧನರ ಗದಾಯುದ್ಧವಾದರೂ ಇಡೀ ಭಾರತದ ಕಥೆಯೇ ಸಿಂಹಾವಲೋಕನಕ್ರಮದಿಂದ ಇಲ್ಲಿ ದಿಗ್ದರ್ಶಿತವಾಗಿದೆ. ಇದಕ್ಕೆ ವಾಹಕವಾಗಿರುವ ನಾಟಕೀಯ ಶೈಲಿ ರನ್ನ ಕನ್ನಡಕ್ಕಿತ್ತಿರುವ ಕಾಣಿಕೆ. ಈತನ ಅಜಿತಪುರಾಣಕ್ಕೆ ಜೈನಧಾರ್ಮಿಕ ಕಾವ್ಯಗಳಲ್ಲಿ ಪಂಪನ ಆದಿಪುರಾಣವನ್ನು ಬಿಟ್ಟರೆ ಉನ್ನತಸ್ಥಾನ ದೊರಕಿದೆ.

ವಡ್ಡಾರಾಧನೆ ಇದೇ ಕಾಲದಲ್ಲಿ ರಚಿತವಾದ ಒಂದು ವಿಶಿಷ್ಟ ಕೃತಿ. ಶಿವಕೋಟ್ಯಾಚಾರ್ಯ (ಸು.920) ಇದರ ಕರ್ತೃ. ಗದ್ಯದಲ್ಲಿರುವ ಈ ಕೃತಿ ಈಗ್ಗೆ ಸಹಸ್ರ ವರ್ಷಗಳ ಹಿಂದಿನ ಭಾಷಾಸ್ವರೂಪಕ್ಕೂ ಜನಜೀವನಕ್ಕೂ ಕನ್ನಡಿ ಹಿಡಿಯುತ್ತದೆ. ಸರಳ ಸುಂದರ ಶೈಲಿ, ಪ್ರಾಸಾದಿಕ ಗುಣ, ಕಥನಕಲೆ- ಇವು ಈ ಕೃತಿಯ ವೈಶಿಷ್ಟ್ಯಗಳು. ಕನ್ನಡ ಗದ್ಯ ಇತಿಹಾಸದಲ್ಲಿ ವಡ್ಡಾರಾಧನೆ ಒಂದು ಮೈಲಿಗಲ್ಲು.

ಈ ಯುಗದ ಮತ್ತೊಬ್ಬ ಹಿರಿಯ ಕವಿ ಒಂದನೆಯ ನಾಗವರ್ಮ. ಕರ್ನಾಟಕ ಕಾದಂಬರಿ, ಛಂದೋಂಬುದಿಗಳು ಈತನ ಗ್ರಂಥಗಳು. ಈತನೂ ಪಂಪನಂತೆಯೇ ತನ್ನ ಸ್ವಾಮಿ ಚಂದ್ರರಾಜನನ್ನು ಕಾವ್ಯದ ಕಥಾನಾಯಕನೊಡನೆ ಸಮೀಕರಿಸಿ, ತನ್ನ ಕರ್ನಾಟಕ ಕಾದಂಬರಿಯನ್ನು ರಚಿಸಿದನೆಂದು ತೋರುತ್ತದೆ. ಆದರೆ ಇದನ್ನು ಸ್ಪಷ್ಟಪಡಿಸುವಷ್ಟು ಸಾಧನಗಳಿಲ್ಲ. ಈತನ ಛಂದೋಂಬುದಿs ಕನ್ನಡದ ಮೊಟ್ಟ ಮೊದಲ ಛಂದೋಗ್ರಂಥ. ಕರ್ನಾಟಕ ಕಾದಂಬರಿ ಬಾಣಭಟ್ಟನ ಸಂಸ್ಕೃತ ಕಾದಂಬರಿಯ ಅನುವಾದ. ಮೂಲವನ್ನು ಕವಿ ಕನ್ನಡ ಚಂಪೂರೂಪಕ್ಕೆ ತಿರುಗಿಸಿದ್ದಾನೆ. ಮೂಲದ ಪದಗಳು ಕನ್ನಡ ರೂಪಾಂತರದಲ್ಲಿ ಕಂಡುಬರುವುವಾದರೂ ನಾಗವರ್ಮ ಬರಿಯ ಭಾಷಾಂತರಕಾರನಲ್ಲ. ಸಂಸ್ಕೃತದ ಉತ್ತಮ ಕಾವ್ಯವೊಂದನ್ನು ಸ್ವತಂತ್ರ ಕೃತಿಯೆಂಬಂತೆ ಕನ್ನಡದಲ್ಲಿ ರಚಿಸಿ, ಅದೊಂದು ಸಂಪ್ರದಾಯವನ್ನು ಬೆಳೆಸಿದವರಲ್ಲಿ ಈತ ಮೊದಲಿಗ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು. ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ. ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು. ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿ...