ವಿಷಯಕ್ಕೆ ಹೋಗಿ

ಧರ್ಮ: ಸಂಪ್ರದಾಯ-ಆಚರಣೆಗಳು(ಕರ್ನಾಟಕದ ಸಾಂಸ್ಕೃತಿಕ ಇತಿಹಾಸ)

ಕರ್ನಾಟಕದ ಧರ್ಮಗಳು:


ಕರ್ನಾಟಕದ ಧರ್ಮಗಳು ಬಹುಮಟ್ಟಿಗೆ ಭಾರತದ ಎಲ್ಲ ಧರ್ಮಗಳನ್ನೂ ಒಳಗೊಂಡಿವೆ. ಭಾರತದ ಧರ್ಮ ಒಂದು ಧಾರ್ಮಿಕ ಮಹಾಸಾಗರ. ಈ ಸಾಗರಕ್ಕೆ ಭಾರತದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳಿಂದ ಬೇರೆ ಬೇರೆ ಕಾಲಗಳಲ್ಲಿ ಧಾರ್ಮಿಕ ವಿವೇಚನೆಯ ಪ್ರವಾಹಗಳು ಹರಿದು ಬಂದು ಸೇರಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳಲ್ಲದೆ, ಭಾರತದ ಆಚಿನಿಂದ ಬಂದ ಧರ್ಮಗಳೂ ಅದರ ಧಾರ್ಮಿಕ ವಿವೇಚನೆಯನ್ನು ಚೇತನಗೊಳಿಸಿವೆ. ಭಾರತದಲ್ಲೇ ಹುಟ್ಟಿದ ಧರ್ಮಗಳು ವೈದಿಕ, ಶೈವ, ವೈಷ್ಣವ, ತಾಂತ್ರಿಕ, ಶಾಕ್ತೇಯ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳು. ಹೊರಗಿನಿಂದ ಬಂದವು - ಕ್ರೈಸ್ತ, ಇಸ್ಲಾಂ ಮತ್ತು ಜರತುಷ್ಟ್ರ ಧರ್ಮಗಳು. ಭಾರತ ಅನಾದಿಕಾಲದಿಂದ ಪೋಷಿಸಿದ ಸರ್ವಮತಸಹಿಷ್ಣುತೆಯ ನೀತಿಯನ್ನು ಕರ್ನಾಟಕವೂ ಅನುಸರಿಸಿ ಪುಷ್ಟಿಗೊಳಿಸಿದೆ.

ಭಾರತದ ಧರ್ಮ ಕನಿಷ್ಠಪಕ್ಷ ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದು. ಅಂದಿನಿಂದ ಇಂದಿನವರೆಗೂ ಅದು ಬೆಳೆಯುತ್ತಿರುವ ಧರ್ಮ, ಅದರ ಬೆಳೆವಣಿಗೆ ಏಕಮುಖವಾದುದಲ್ಲ; ಬಹುಮುಖವಾದುದು. ಅದು ವೈಶಿಷ್ಟ್ಯದಿಂದ ಕೂಡಿದ ಏಕತೆಯನ್ನು ಏರ್ಪಡಿಸಿಕೊಂಡ ಧರ್ಮ; ಹಳೆಯದನ್ನು ಬಿಡದೆ ಹೊಸದನ್ನು ತನ್ನಲ್ಲಿ ಲೀನಗೊಳಿಸಿಕೊಳ್ಳುವುದು ಅದರ ಹುಟ್ಟುಗುಣ. 


ಪ್ರ.ಶ.ಪೂ. ೩ನೆಯ ಶತಮಾನದಿಂದ ಪ್ರ.ಶ. ೮ನೆಯ ಶತಮಾನದವರೆಗೆ ವೈಷ್ಣವ, ಶೈವ, ಶಾಕ್ತಮತಗಳನ್ನೊಳಗೊಂಡ ವೈದಿಕಧರ್ಮಗಳೂ ಬೌದ್ಧ ಜೈನಧರ್ಮಗಳೂ ವಾಯುವ್ಯ ಈಶಾನ್ಯಗಳ ಕಡೆಯಿಂದ ದಕ್ಷಿಣ ಪ್ರದೇಶಗಳಿಗೆ ಹಬ್ಬಿದುವು. ೨ನೆಯ ಶತಮಾನದಲ್ಲಿ ಕ್ರೈಸ್ತ ಧರ್ಮ ದಕ್ಷಿಣದ ಕೊಚಿನ್ ಪ್ರದೇಶದಲ್ಲಿ ಕಾಲಿಟ್ಟಿತು. ಆಂಗ್ಲೇಯರು ಭಾರತದಲ್ಲಿ ತಮ್ಮ ಪ್ರಭುತ್ವವನ್ನುಸ್ಥಾಪಿಸಿದ ಮೇಲೆ ಅದು ಉತ್ಕರ್ಷ ಹೊಂದಿತು. ಇಸ್ಲಾಂ ಧರ್ಮ ೭೧೨ರಲ್ಲಿ ಸಿಂಧ್ ಪ್ರದೇಶವನ್ನು ಹೊಕ್ಕು ದಕ್ಷಿಣಕ್ಕೆ ೧೩ನೆಯ ಶತಮಾನದಲ್ಲಿ ಕಾಲಿಟ್ಟಿತು; ತರುವಾಯ ೧೯ನೆಯ ಶತಮಾನದವರೆಗೂ ಭಾರತಾದ್ಯಂತ ವಿಶೇಷವಾಗಿ ಬೆಳೆಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಪ್ರಮುಖ ಧರ್ಮಗಳನ್ನೂ ಪರಿಶೀಲಿಸಬಹುದು.

ಬೌದ್ಧಧರ್ಮ 

ಬೌದ್ಧಧರ್ಮ ಕರ್ನಾಟಕಕ್ಕೆ ಬಂದದ್ದು ಚಕ್ರವರ್ತಿ ಅಶೋಕನ ಕಾಲದಲ್ಲಿ. ಅವನ ಶಾಸನಗಳು ಕರ್ನಾಟಕದ ಹಲವೆಡೆಗಳಲ್ಲಿವೆ. ಸಾತವಾಹನರ ಕಾಲದಲ್ಲಿ ಬನವಾಸಿಯಲ್ಲಿ ಬೌದ್ಧವಿಹಾರಗಳು ಸ್ಥಾಪಿತವಾದುವು. ಶೈವಕ್ಷೇತ್ರವಾಗುವುದಕ್ಕೆ ಮುಂಚೆ ಶ್ರೀಶೈಲ ಬೌದ್ಧಧರ್ಮದ ಕೇಂದ್ರವಾಗಿತ್ತು. ಕಾಲಕ್ರಮದಲ್ಲಿ ಜೈನ ಮತ್ತು ಹಿಂದೂ ಧರ್ಮಗಳು ಪ್ರಬಲಗೊಂಡು ಕರ್ನಾಟಕದಲ್ಲಿ ಬೌದ್ಧಧರ್ಮ ಕ್ಷೀಣವಾಯಿತು. ಆದರೂ ಅದು ೧೨ನೆಯ ಶತಮಾನದವರೆಗೂ ಕರ್ನಾಟಕದಲ್ಲಿ ಕೆಲವು ಕಡೆ ಉಳಿದುಕೊಂಡಿತ್ತು. ಧಾರವಾಡ ಜಿಲ್ಲೆಯ ಡಂಬಳ ಎಂಬಲ್ಲಿನ ೧೦೯೫ರ ಒಂದು ಶಾಸನದಲ್ಲಿ ಹದಿನಾರು ಶ್ರೇಷ್ಠಿಗಳು ಅಲ್ಲಿ ಒಂದು ಬೌದ್ಧವಿಹಾರವನ್ನೂ ಬೌದ್ಧದೇವತೆಯಾದ ತಾರಾದೇವಿಯ ದೇವಾಲಯವನ್ನೂ ಕಟ್ಟಿಸಿದರೆಂದು ಉಕ್ತವಾಗಿದೆ.

ಬೌದ್ಧಧರ್ಮ ವೈದಿಕ ಯಜ್ಞಯುಗಾದಿಗಳನ್ನೂ ಪಶುಬಲಿಯನ್ನೂ ನಿಷೇಧಿಸಿತು ; ಜಾತಿಭೇದಗಳನ್ನು ಎಣಿಸದೆ ಎಲ್ಲರಿಗೂ ಜೀವನದಿಂದ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ಬೋಧಿಸಿತು; ತೀವ್ರದೇಹಶೋಷಣೆಯ ಮಾರ್ಗವನ್ನೂ ಭೋಗಲಾಲಸೆಯ ಲೋಕಾಯತ ನೀತಿಯನ್ನೂ ಬಿಟ್ಟು ಮಾಧ್ಯಮಿಕ ಸಂಯಮದಿಂದ ಗುರಿ ಸಾಧಿಸುವ ಮಾರ್ಗವನ್ನು ತೋರಿಸಿತು. ಆಸೆಯೇ ದುಃಖಕ್ಕೆ ಮೂಲ. ಅದರ ನಿರ್ಮೂಲನವೇ ಮುಕ್ತಿಸಾಧನೆಗೆ ಮಾರ್ಗ. ಸಮ್ಯಕ್ ಜ್ಞಾನ ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ ಮತ್ತು ಸತ್ಚಾರಿತ್ರ- ಈ ನಾಲ್ಕು ಎಲ್ಲರೂ ಅನುಸರಿಸಬೇಕಾದವು. ಅಷ್ಟಾಂಗಯೋಗಗಳ ಮಾರ್ಗ ಬೌದ್ಧಸಂನ್ಯಾಸಿಗಳಿಗೆ. ಬುದ್ಧದೇವ ದೇವತಾಪೂಜೆಯನ್ನು ನಿಷೇಧಿಸಿದ್ದರೂ ಕಾಲಾಂತರದಲ್ಲಿ ಬೌದ್ಧರಲ್ಲಿ ಮೂರ್ತಿಪೂಜೆ ಆಚರಣೆಗೆ ಬಂತು. ಹಿಂದೂ ಧರ್ಮ ಪುನರುದ್ಧಾರ ಕಾಲದಲ್ಲಿ ಬುದ್ಧ ವಿಷ್ಣುವಿನ ಒಂದು ಅವತಾರವಾಗಿ ಬೌದ್ಧಧರ್ಮ ಹಿಂದೂ ಧರ್ಮದಲ್ಲಿ ಲೀನವಾಯಿತು. ಗೌಡಪಾದ ಮತ್ತು ಶಂಕರರು ಮಾಧ್ಯಮಿಕರ ತರ್ಕವನ್ನೇ ಉಪಯೋಗಿಸಿಕೊಂಡು ಜಗತ್ತು ಅನಿತ್ಯ ಬ್ರಹ್ಮವೊಂದೇ ನಿತ್ಯಸತ್ಯವೆಂಬ ಉಪನಿಷತ್ತಿನ ಧರ್ಮವನ್ನು ಪುನರುಜ್ಜೀವನಗೊಳಿಸಿದರು. ಈ ಕಾರಣಗಳಿಂದ ಕರ್ನಾಟಕದಲ್ಲಿ ಬೌದ್ಧಧರ್ಮ ಕ್ಷಯಿಸಿ ಅದರ ಅವಶೇಷಗಳು ಮಾತ್ರ ಉಳಿದಿವೆ. ಬೌದ್ಧಧರ್ಮ ಕರ್ನಾಟಕದಲ್ಲಿ ಕ್ಷೀಣವಾದರೂ ಬುದ್ಧ ಬೋಧಿಸಿದ ಪರಮತ ಸಹಿಷ್ಣುತೆಯ ಸಂದೇಶ ಮಾತ್ರ ಕರ್ನಾಟಕದಲ್ಲಿ ಇಂದಿಗೂ ಬೇರೂರಿದೆ. ಕರ್ನಾಟಕದಲ್ಲಿ ಪ್ರಸಕ್ತಶಕದ ಪ್ರಾರಂಭಕಾಲದಿಂದ ಬೌದ್ಧಸಂನ್ಯಾಸಿಗಳು ತಮ್ಮ ಧಾರ್ಮಿಕ ಗ್ರಂಥಗಳ ರಚನೆಯ ಮೂಲಕ ಕನ್ನಡ ಸಾಹಿತ್ಯದ ಉಗಮ ಮತ್ತು ಬೆಳೆವಣಿಗೆಗೆ ಕಾರಣರಾಗಿದ್ದಿರಬಹುದೆಂದೂ ಆ ಧರ್ಮದ ಅವನತಿಯೊಂದಿಗೆ ಆ ಸಾಹಿತ್ಯವೂ ಕಣ್ಮರೆಯಾಗಿರಬಹುದೆಂದೂ ಟಿ.ಎಸ್.ವೆಂಕಣ್ಣಯ್ಯನವರು ಅಭಿಪ್ರಾಯಪಟ್ಟಿದ್ದಾರೆ.

ಜೈನಧರ್ಮ

ಜೈನಧರ್ಮಪ್ರತಿಷ್ಠಾಪಕನಾದ ಮಹಾವೀರ ಬುದ್ಧನಿಗಿಂತ ಸ್ವಲ್ಪ ಮುಂಚಿನವನು. ಅದು ಕರ್ನಾಟಕಕ್ಕೆ ಪ್ರ.ಶ.ಪೂ. ೪ನೆಯ ಶತಮಾನದ ಅಂತ್ಯದಲ್ಲಿ ಪ್ರವೇಶಿಸಿತು. ಚಂದ್ರಗುಪ್ತ ಮೌರ್ಯ ತನ್ನ ಗುರು ಭದ್ರಬಾಹುವಿನೊಂದಿಗೆ ಇಲ್ಲಿಗೆ ಬಂದು ಶ್ರವಣಬೆಳಗೊಳದಲ್ಲಿ ನೆಲೆಸಿದನೆಂದು ಐಹಿತ್ಯವಿದೆ. ೮ನೆಯ ಶತಮಾನದ ಕೆಲವು ಶಾಸನಗಳೂ ಈ ವಿಷಯವನ್ನು ತಿಳಿಸುತ್ತವೆ. ಬೌದ್ಧಧರ್ಮ ಕರ್ನಾಟಕದಲ್ಲಿ ಲುಪ್ತವಾದರೂ ಜೈನಧರ್ಮ ಇಲ್ಲಿಯವರೆಗೆ ಸಾರೋದ್ಧಾರವಾಗಿ ಬೆಳೆದು ಬಂದಿದೆ. ಗಂಗರಾಜರು ೩೨೫ ರಿಂದ ೧೦೦೦ದ ವರೆಗೆ ಜೈನರಿಗೆ ಆಶ್ರಯ ಕೊಟ್ಟು ಅವರ ಅಭ್ಯುದಯಕ್ಕೆ ಕಾರಣರಾದರು. ರಾಷ್ಟ್ರಕೂಟರಲ್ಲಿ ಅನೇಕರು ಜೈನಧರ್ಮಾವಲಂಬಿಗಳಾಗಿದ್ದರು. ಕರ್ನಾಟಕದ ಸಂಸ್ಕೃತಿಗೆ ಮತ್ತು ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರವಾದುದು.

ಹರಿಭದ್ರ ಜೈನದರ್ಶನವನ್ನು ಸಂಗ್ರಹವಾಗಿ ಹೀಗೆ ವರ್ಣಿಸಿರುತ್ತಾನೆ; ಜೈನಧರ್ಮದ ತತ್ತ್ವಗಳು ಒಂಬತ್ತು-ಜೀವ, ಅಜೀವ, ಪುಣ್ಯ, ಪಾಪ, ಆಸ್ರವ ಸಂವರ, ಬಂಧ, ನಿರ್ಜರ ಮತ್ತು ಮೋಕ್ಷ. ಚೇತನಾತ್ಮಕವಾದ ಜೀವ ಪಾಪಪುಣ್ಯಗಳ ಕರ್ತ ಮತ್ತು ಅವುಗಳ ಫಲದ ಭೋಕ್ತ. ತದ್ವಿರುದ್ಧ ಲಕ್ಷಣವುಳ್ಳದ್ದು ಅಜೀವ. ಜೀವವಾಗಲಿ ಅಜೀವವಾಗಲಿ ಸೃಷ್ಟಿಯಾದುವಲ್ಲ. ಜೀವ ರೂಪರಸಗಂಧಸ್ಪರ್ಶನಗಳಿಗೆ ಕಾರಣವಾದ ಪುದ್ಗಲದ ಸಂಪರ್ಕದಿಂದ. ಪುಣ್ಯಪಾಪಕರ್ಮಗಳಿಂದ ತುಂಬಿಕೊಳ್ಳುತ್ತದೆ. ಸತ್ಕರ್ಮ ಪುದ್ಗಲವೇ ಪುಣ್ಯ ; ದುಷ್ಕರ್ಮ ಪುದ್ಗಲವೇ ಪಾಪ. ಅಜ್ಞಾನ, ರಾಗ, ರತಿ, ಮೋಹ ಮುಂತಾದುವುಗಳಿಂದ ಹುಟ್ಟಿದ ಪಾಪಕರ್ಮ ಜೀವರುಗಳಲ್ಲಿ ತುಂಬಿಕೊಳ್ಳುವುದಕ್ಕೆ ಆಸ್ರವ ಎಂದು ಹೆಸರು. ಆಸ್ರವ ಆತ್ಮದ ಬಂಧನಕ್ಕೆ ಕಾರಣ. ಪುಣ್ಯ ಪಾಪಗಳು ಜೀವರುಗಳನ್ನು ಜನ್ಮಾಂತರಗಳವರೆಗೆ ಹಿಂಬಾಲಿಸುತ್ತವೆ. ಪಾಪ ಬಂದು ಸೇರದಂತೆ ತಡೆಯಲು ಸಾಧ್ಯ. ಅಹಿಂಸೆ, ಸತ್ಯವಚನ, ಅಪರಿಗ್ರಹ, ಬ್ರಹ್ಮಚರ್ಯ, ಸ್ವಾರ್ಥತ್ಯಾಗ ಮುಂತಾದ ವ್ರತ ಅನುಷ್ಠಾನಗಳಿಂದ ಪಾಪವನ್ನು ತಡೆಯಬಹುದು. ಇದಕ್ಕೆ ಸಂವರ ಎಂದು ಹೆಸರು. ಈಗಾಗಲೇ ಬಂದು ತುಂಬಿಕೊಂಡಿರುವ ಪಾಪಕರ್ಮವನ್ನು ಶರೀರ ಆತ್ಮದಿಂದ ಬೇರೆಯಾದದ್ದು ಎಂಬ ನಿಶ್ಚಿತಜ್ಞಾನದಿಂದ ಸುಟ್ಟುಹಾಕಬಹುದು. ಹಿಂದಿನದನ್ನು ತೊಡೆದುಹಾಕುವುದಕ್ಕೆ ನಿರ್ಜರ ಎಂದು ಹೆಸರು. ಎಲ್ಲ ಬಗೆಯ ಆವರಣಗಳೂ ತೇಲಿ ಹೋಗಿ ಆತ್ಮಜ್ಞಾನ ಫಲಿಸಿದಾಗ ಜೀವರುಗಳಿಗೆ ಮೋಕ್ಷ ದೊರೆಯುತ್ತದೆ. ಮೋಕ್ಷ ದೊರೆತಾಗ ಆತ್ಮ ತನಗೆ ಸಹಜವಾದ ಅನಂತಜ್ಞಾನ, ಅನಂತವೀರ್ಯ, ಅನಂತಸುಖಗಳನ್ನು ಪಡೆಯುತ್ತದೆ. ಸಮ್ಯಕ್ದರ್ಶನ, ಸಮ್ಯಕ್ಚಾರಿತ್ರ, ಸಮ್ಯಕ್ಜ್ಞಾನವೆಂಬ ತ್ರಿರತ್ನಗಳು ಮೋಕ್ಷಸಾಧನಗಳು. ಜೈನಧರ್ಮವನ್ನುಸ್ವತಂತ್ರವಾಗಿ ಗ್ರಹಿಸಿ ನಿರ್ವಾಣವನ್ನು ಪಡೆದವರು ತೀರ್ಥಂಕರರು. ಇಂಥ ಇಪ್ಪತ್ತನಾಲ್ಕು ತೀರ್ಥಂಕರರನ್ನು ಜೈನರು ದೇವರುಗಳೆಂದು ಪುಜಿಸುತ್ತಾರೆ. ಇಪ್ಪತ್ತನಾಲ್ಕನೆಯ ತೀರ್ಥಂಕರನೇ ವರ್ಧಮಾನ ಮಹಾವೀರ. ಮಹಾವೀರನ ತರುವಾಯ ಬೋಧೆಯಿಂದ ಮುಕ್ತಿಪಡೆದವರು ಕೇವಲಿಗಳು. ಇವರು ಗೌರವಾರ್ಹರಾದರೂ ಪೂಜಾರ್ಹರಲ್ಲ.

ಶೈವಧರ್ಮ

ಇದರ ಪ್ರಾಚೀನತೆಯನ್ನು ಕುರಿತು ಹಿಂದೆ ಪ್ರಸ್ತಾಪಮಾಡಲಾಗಿದೆ. ಕರ್ನಾಟಕದಲ್ಲಿ ಕಡೆಯ ಪಕ್ಷ ಸಾತವಾಹನರ ಕಾಲದಿಂದ ಈ ಧರ್ಮ ರೂಢಿಯಲ್ಲಿದ್ದಂತೆ ತಿಳಿದುಬರುತ್ತದೆ. ಸಾತವಾಹನ ಮತ್ತು ಚುಟುಕುಲದ ರಾಜರು ತಾಳಗುಂದದ ಪ್ರಣವೇಶ್ವರನ ಅರ್ಚಕರಾಗಿದ್ದರೆಂದು ಶಾಸನ ತಿಳಿಸುತ್ತದೆ. ಅನಂತರದ ಕದಂಬರು ತಮ್ಮ ವಂಶ ಈಶ್ವರನಿಂದ ಉತ್ಪತ್ತಿಯಾದ ಮುಕ್ಕಣ್ಣ ಅಥವಾ ತ್ರಿನೇತ್ರ ಕದಂಬನಿಂದ ಪ್ರಾರಂಭವಾಯಿತೆಂದು ಹೇಳಿಕೊಂಡಿದ್ದಾರೆ. ಕದಂಬ, ಚಾಳುಕ್ಯ ರಾಜರನೇಕರು ಶೈವಧರ್ಮಾನುಯಾಯಿಗಳಾಗಿದ್ದರು. ಆ ಕಾಲದಲ್ಲಿ ಶೈವರಲ್ಲಿ ಮತಪ್ರಭೇದಗಳು ಹುಟ್ಟಿಕೊಂಡುವು. ಪಾಶುಪತ, ಕಾಳಾಮುಖ, ಲಾಕುಳ, ಮಹೇಶ್ವರಪಂಥಗಳು ಹೆಚ್ಚು ಕಡಿಮೆ ಒಂದೇ ಆಗಿರುವಂತೆ ತೋರುತ್ತದೆ. ಶಂಕರಾಚಾರ್ಯರು ಪಾಶುಪತರನ್ನೂ ಮಾಧವರು ಲಕುಲೀಶ ಪಾಶುಪತರನ್ನೂ ಮಾಹೇಶ್ವರರೆಂದು ಕರೆದಿರುತ್ತಾರೆ. ಸಿರಾ ಮತ್ತು ಸಕಲೇಶಪುರದ ಶಾಸನಗಳು ಕಾಳಾಮುಖರೂ ಲಕುಲೀಶರೂ ಒಂದೇ ಪಂಥದವರೆಂದು ತಿಳಿಸುತ್ತವೆ. ಪಾಶುಪತ ಶೈವಧರ್ಮ ಸ್ವಚ್ಫವಾದ ಸಾತ್ವಿಕಧರ್ಮ. ಕರ್ನಾಟಕದಲ್ಲಿ, ಮುಖ್ಯವಾಗಿ ಶ್ರೀಶೈಲದಲ್ಲಿ ಶಂಕರಾಚಾರ್ಯರ ಕಾಲದಲ್ಲಿ ಪ್ರಚಾರದಲ್ಲಿದ್ದದ್ದು ಉಗ್ರಭೈರವ ಉಪಾಸಕರ ಕಾಪಾಲಿಕ ಮತ. ಇವರು ಶಿವನನ್ನು ಒಲಿಸಿಕೊಳ್ಳಲು ನರಬಲಿ ಕೊಡುತ್ತಿದ್ದರು; ಮದ್ಯವನ್ನು ಸೇವಿಸಿ ಭೀಕರವಾಗಿ ನರ್ತಿಸುತ್ತಿದ್ದರು. ಮೂಕಾಂಬಿಕೆಯ ಕ್ಷೇತ್ರ ಶಕ್ತಿ ಉಪಾಸಕರ ಕ್ಷೇತ್ರವಾಗಿತ್ತು.

ಶೈವಧರ್ಮಕ್ಕೆ ಹತ್ತಿರದ ಸಂಬಂಧದ ಮತ ಗಾಣಾಪತ್ಯ ಮತ. ಈ ಮತದವರಲ್ಲಿ ಆರು ಬಗೆಗಳುಂಟು. ೧. ಪ್ರಳಯಕಾಲದಲ್ಲೂ ನಾಶಹೊಂದದೆ ಉಳಿಯುವ ಮಹಾಗಣಪತಿ ಪುಜಕರು. ೨. ಋಗ್ವೇದದಲ್ಲಿ ಉಕ್ತವಾಗಿರುವ ಬೃಹಸ್ಪತಿರೂಪನಾದ ಹರಿದ್ರಾ ಗಣಪತಿ ಪುಜಕರು. ೩. ಶಾಕ್ತರಂತೆ ವಾಮಾಚಾರ ನಡೆಸುವ, ಉತಿಷ್ಠ ಗಣಪತಿ ಉಪಾಸಕರು. ೪. ನವೀನ ಗಣಪತಿ ಪುಜಕರು. ೫. ಸ್ವರ್ಣಗಣಪತಿ ಪುಜಕರು. ೬. ಸಂತಾನ ಗಣಪತಿ ಪುಜಕರು.

ಶೈವಮತಕ್ಕೆ ಹತ್ತಿರದ ಸಂಬಂಧಿಯಾದ ಇನ್ನೊಂದು ಮತ ಸ್ಕಾಂದಮತ. ಈ ಮತದ ಮುಖ್ಯ ದೇವತೆ ಕಾರ್ತಿಕೇಯ. ಕುಮಾರನೆಂದೂ ಷಣ್ಮುಖನೆಂದೂ ಈ ದೇವತೆಯನ್ನು ಸಂಬೋಧಿಸುವುದುಂಟು. ಕರ್ನಾಟಕದಲ್ಲಿ ಸೊಂಡೂರು ಬೆಟ್ಟದಲ್ಲಿ ಕುಮಾರಸ್ವಾಮಿಯ ಪ್ರಾಚೀನ ದೇವಾಲಯವಿದೆ. ಕದಂಬ ಮತ್ತು ಪೂರ್ವ ಚಾಳುಕ್ಯ ಶಾಸನಗಳಲ್ಲಿ ಕಾರ್ತಿಕೇಯನ ಪ್ರಶಸ್ತಿ ಇದೆ.

ಶಂಕರಾಚಾರ್ಯರು ಕರ್ನಾಟಕದಲ್ಲಿ ಪ್ರಚಾರಮಾಡಿದ ಕಾಲದಲ್ಲಿ ಕಾಪಾಲಿಕರ ಘೋರಕೃತ್ಯಗಳನ್ನು ಖಂಡಿಸಿ, ಶಾಕ್ತರೂ ಗಾಣಾಪತ್ಯರೂ ಆಚರಿಸುತ್ತಿದ್ದ ಪಂಚಮಕಾರಗಳನ್ನು ನಿರ್ಮೂಲಗೊಳಿಸಿ ಪರಿಶುದ್ಧವಾದ ಶೈವ, ಶಾಕ್ತ, ಗಾಣಾಪತ್ಯ ಮತಗಳನ್ನು ಸ್ಥಾಪಿಸಿದರು. ಕರ್ನಾಟಕದ ಶೃಂಗೇರಿಯಲ್ಲಿ ಇವರು ಸ್ಥಾಪಿಸಿದ ಮಠ ದಕ್ಷಿಣದಲ್ಲೆಲ್ಲ ಅತ್ಯಂತ ಪ್ರಸಿದ್ಧವಾದುದು. ಇದು ವಿಷ್ಣುಸರ್ವೋತ್ತಮ ಶಿವಸರ್ವೋತ್ತಮವೆಂಬ ಭೇದವೆಣಿಸದೆ ಎಲ್ಲ ಬಗೆಯ ಸೇಶ್ವರ ಭಾವನೆಗಳಿಗೂ ಸಮಾನ ಗೌರವ ಸಲ್ಲಿಸುವ ಸ್ಮಾರ್ತ ಸಂಪ್ರದಾಯದ ಮುಖ್ಯ ಕೇಂದ್ರ. ವಿಜಯನಗರದ ಅಭ್ಯುದಯದಕಾಲದಲ್ಲಿ ಇದಕ್ಕೆ ವಿಶೇಷ ರಾಜಾಶ್ರಯ ದೊರೆಯಿತು. (ನೋಡಿ- ಅದ್ವೈತ)

ಶಂಕರಾಚಾರ್ಯರ ತರುವಾಯ ಕರ್ನಾಟಕದಲ್ಲಿ ಶೈವಮತ-ಅದರಲ್ಲೂ ವೀರಶೈವಧರ್ಮ-ವಿಶೇಷವಾಗಿ ಬೆಳೆಯಿತು. ಇದು ಅನೇಕ ಕಡೆಗಳಿಂದ ಸ್ಫೂರ್ತಿಪಡೆದು ಬೆಳೆದ ಮತ. ೬ನೆಯ ಶತಮಾನದಿಂದ ೯ನೆಯ ಶತಮಾನಗಳವರೆಗಿದ್ದ ತಮಿಳುದೇಶದ ೬೩ ಪುರಾತನರ ಚರಿತ್ರೆಯನ್ನು ಒಳಗೊಂಡ ಪೆರಿಯಪುರಾಣದಿಂದ ಇದು ಸ್ಫೂರ್ತಿ ಪಡೆಯಿತು. ತಮಿಳು ವೀರಶೈವರು ಸ್ಥವಿರ ಲಿಂಗಪುಜಕರು. ಕರ್ನಾಟಕ ವೀರಶೈವರಾದರೋ ಇಷ್ಟಲಿಂಗಧಾರಿಗಳು. ಕನ್ನಡ ವೀರಶೈವರು, ಪಶು, ಪತಿ, ಪಾಶ ಎಂಬ ಮೂರು ಮುಖ್ಯತತ್ತ್ವಗಳನ್ನೊಳಗೊಂಡ ಪಾಶುಪತವನ್ನು ಅನುಸರಿಸಿದರು. ವೀರಶೈವ ಧರ್ಮದ ಉಗಮ ರೇವಣಸಿದ್ಧ, ಮರುಳುಸಿದ್ಧ, ಪಂಡಿತಾರಾಧ್ಯ ಏಕೋರಾಮ, ವಿಶ್ವಾರಾಧ್ಯ ಎಂಬ ಪಂಚಾಚಾರ್ಯರಿಂದಾಯಿತೆಂದು ಕೆಲವು ವೀರಶೈವಗ್ರಂಥಗಳಲ್ಲಿ ಉಕ್ತವಾಗಿದೆ. ಶ್ರೀಪತಿಪಂಡಿತನೂ ಶ್ರೀಕಂಠನೂ ಬ್ರಹ್ಮಸೂತ್ರಗಳ ಮೇಲೆ ಶಿವಪರವಾಗಿ ಬರೆದಿರುವ ಭಾಷ್ಯಗಳಿಂದಲೂ ವೀರಶೈವರು ಸ್ಫೂರ್ತಿಪಡೆದಿರುತ್ತಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇದು ಶರಣರ ಸಾಹಿತ್ಯದಿಂದ, ಶರಣರ ಪ್ರಚಾರಕಾರ್ಯದಿಂದ ಬಲಗೊಂಡ ಮತ. ನಮಗೆ ತಿಳಿದಮಟ್ಟಿಗೆ ಜೇಡರ ದಾಸಿಮಯ್ಯ, ಏಕಾಂತದ ರಾಮಯ್ಯ- ಇವರು ಬಸವಣ್ಣನವರ ಕಾಲಕ್ಕಿಂತ ಬಹುಶಃ ಒಂದು ಶತಮಾನಕ್ಕಿಂತ ಮುಂಚೆ ವೀರಶೈವಧರ್ಮವನ್ನು ಪ್ರಚಾರಮಾಡಲು ತುಂಬ ಶ್ರಮಿಸಿದವರು. ಬಸವಣ್ಣನವರ ಕಾಲಕ್ಕೆ ಶಿವಶರಣರ ಗುಂಪು ತುಂಬ ಬೆಳೆದಿತ್ತು. ಸ್ವಾನುಭವ, ಸಚ್ಚಾರಿತ್ರ್ಯ, ಪರಿಶುದ್ಧ ಶಕ್ತಿಗಳಿಂದ ತುಂಬಿದ ಈ ಶರಣರ ಮತದಿಂದ ಬಸವಣ್ಣನವರು ಆಕರ್ಷಿತರಾಗಿ ಇವರನ್ನು ಅತಿಶಯವಾಗಿ ಸತ್ಕರಿಸಿ ಈ ಮತದ ಉದ್ಧಾರಕರಾದರು. ಇವರು ಚೆನ್ನಬಸವಣ್ಣ, ಅಲ್ಲಮಪ್ರಭು ಮತ್ತು ಸಿದ್ಧರಾಮ ಮುಂತಾದವರ ಸಹಕಾರದಿಂದ ಅನುಭವಮಂಟಪವನ್ನು ಕಟ್ಟಿದರು. ಈ ಅನುಭವಮಂಟಪಕ್ಕೆ ಅಕ್ಕಮಹಾದೇವಿಗೂ ಪ್ರವೇಶ ದೊರೆಯಿತು. ಈ ಮಂಟಪದಲ್ಲಿ ಆತ್ಮ-ಆತ್ಮ ಮಥಿಸಿ ಅನುಭಾವ ಹುಟ್ಟಿತು; ವಚನಗಳ ಮೂಲಕ ಅಭಿವ್ಯಕ್ತವಾಯಿತು. ಈ ನಾಲ್ವರಿಂದಲ್ಲದೆ ಅನೇಕ ಶರಣರಿಂದ ಹೊರಬಿದ್ದ ವಚನಕೃತಿಗಳೂ ಸೇರಿ ಒಂದು ವಚನವಾರಿಧಿ ಏರ್ಪಟ್ಟಿತು. ವಚನಕಾರರು ಶೈವಾಗಮಗಳಿಗಿಂತ ಪಾಶುಪತ, ಕಾಳಾಮುಖ ಮುಂತಾದ ಶುಷ್ಕತತ್ತ್ವ ಸಿದ್ಧಾಂತಗಳಿಗಿಂತ ಸ್ವಾನುಭವದಿಂದ ಷಟ್ಸ್ಥಲವಿಧಾನದ ಮೂಲಕ ಕ್ರಮವಾಗಿ ತಳದ ಮೆಟ್ಟಿಲಿಂದ ಮೇಲಿನ ಮೆಟ್ಟಿಲಿಗೆ ಹತ್ತಿ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟಿರುತ್ತಾರೆ. ವಚನಸಾಹಿತ್ಯದಲ್ಲಿ ತತ್ತ್ವಗಳ ವಿವರಣೆ ಇಲ್ಲದಿಲ್ಲ. ಮಹಾಭಾರತದಲ್ಲಿ ಒಂದು ಕಡೆ ಉಕ್ತವಾಗಿರುವ ವಿಶ್ವೋತ್ಪತ್ತಿ ಕ್ರಮವನ್ನು ಚೆನ್ನಬಸವಣ್ಣನವರು ಕರಣ ಹಸುಗೆಯಲ್ಲಿ ವರ್ಣಿಸಿರುತ್ತಾರೆ. ವೀರಶೈವ ಪಂಥ ಶಕ್ತಿವಿಶಿಷ್ಟಾದ್ವೈತಪರವಾದುದೆಂದು ಕ್ರಿಯಾಸಾರಕರ್ತೃವಾದ ನೀಲಕಂಠನೂ ಅದ್ವೈತಪರವಾದುದೆಂದು ಮಗ್ಗೇಯ ಮಾಯಿದೇವನೂ ಹೇಳಿರುತ್ತಾನೆ.

ಅದು ಹೇಗಾದರೂ ಇರಲಿ. ವೀರಶೈವಕ್ಕೆ ಜೀವಪ್ರಾಯವಾದ ಷಟ್ಸ್ಥಲಕ್ರಮ ದ್ವೈತದಿಂದ ವಿಶಿಷ್ಟಾದ್ವೈತ, ವಿಶಿಷ್ಟಾದ್ವೈತದಿಂದ ಅದ್ವೈತಸಿದ್ಧಿಯನ್ನು ಮುಟ್ಟುವ ಸೋಪಾನ. ವೀರಶೈವ ಧರ್ಮ ಹುಟ್ಟಿದ್ದು ಕೆಲವರಿಗಲ್ಲ ಸಕಲರಿಗೆ; ಕೇವಲ ಒಂದು ಮಾನಸಿಕ ಮಟ್ಟದವರಿಗಲ್ಲ ಎಲ್ಲ ಮಟ್ಟದವರಿಗೂ. ವೀರಶೈವರ ಷಟ್ಸ್ಥಲಗಳು ಒಬ್ಬೊಬ್ಬನೂ ತನ್ನ ಆಧ್ಯಾತ್ಮಿಕ ಶಕ್ತಿಸಾಮರ್ಥ್ಯಗಳಿಗನುಗುಣವಾಗಿ ಎಷ್ಟೆಷ್ಟು ಮೇಲಕ್ಕೆ ಏರಬಹುದೋ ಅಷ್ಟಕ್ಕೂ ಅವಕಾಶ ಕೊಡುತ್ತವೆ. ಈ ವಿಚಾರವನ್ನು ಎಸ್. ಸಿ. ನಂದೀಮಠ ಅವರು ಈ ರೀತಿ ಉಪಸಂಹಾರಮಾಡಿರುತ್ತಾರೆ. ಭಕ್ತಿಜ್ಞಾನ, ವೈರಾಗ್ಯ, ದ್ವೈತ, ವಿಶಿಷ್ಟಾದ್ವೈತ, ಅದ್ವೈತ- ಇವುಗಳೆಲ್ಲವನ್ನೂ ಷಟ್ಸ್ಥಲ ಒಳಗೊಂಡಿರುವಂತೆ ತೋರುವುದು. ಷಟ್ಸ್ಥಲಗಳಲ್ಲಿ ಮೊದಲಿನ ಎರಡಾದ ಭಕ್ತಿ ಮತ್ತು ಮಾಹೇಶ್ವರಸ್ಥಲಗಳು ಭಕ್ತಿಯನ್ನೂ ದ್ವೈತವನ್ನೂ ಮೂರನೆಯ ಮತ್ತು ನಾಲ್ಕನೆಯವಾದ ಪ್ರಸಾದಿ ಮತ್ತು ಪ್ರಾಣಲಿಂಗಿಸ್ಥಲಗಳು ಜ್ಞಾನವನ್ನೂ ವಿಶಿಷ್ಟಾದ್ವೈತವನ್ನೂ ಸೂಚಿಸುತ್ತವೆ ಎಂದು ತಿಳಿಯಬಹುದು. ಭಕ್ತ ಮಹೇಶ ಸ್ಥಲಗಳಲ್ಲಿ ಸ್ವಾಮಿ-ಭೃತ್ಯ ಸಂಬಂಧವಿದೆ. ಸ್ವಾಮಿ ಶಿವ; ಭೃತ್ಯ ಜೀವ. ಆದ್ದರಿಂದ ಇಲ್ಲಿ ದ್ವೈತಭಾವವಿದೆಯೆಂದು ಕಲ್ಪಿಸಲಾಗಿದೆ. ಆತ್ಮ ಹೆಚ್ಚು ಹೆಚ್ಚು ಶುದ್ಧನಾದಂತೆ ಈ ದ್ವೈತಭಾವ ಕಡಿಮೆಯಾಗುತ್ತ ಹೋಗುವುದು. ಪ್ರಸಾದಿ ಮತ್ತು ಪ್ರಾಣಲಿಂಗಿಸ್ಥಲಗಳಲ್ಲಿ ಸತಿ-ಪತಿ ಭಾವವಿದೆ. ಇವರಿಬ್ಬರೂ ಶರೀರದಿಂದ ಬೇರೆಯಾದರೂ ಒಂದೇ ಮನಸ್ಸುಳ್ಳವರೂ ಒಂದೇ ಭಾವವುಳ್ಳವರೂ ಆಗಿರುವರು; ಆದ್ದರಿಂದ ಇಲ್ಲಿ ವಿಶಿಷ್ಟಾದ್ವೈತವಿದೆಯೆಂದು ಗ್ರಹಿಸಲಾಗಿದೆ. ಶರಣ ಐಕ್ಯಸ್ಥಲಗಳಲ್ಲಿ ಶಿವ ಜೀವರ ಸಂಪೂರ್ಣ ಐಕ್ಯವೂ ಸಂಸಾರದಿಂದ ಅಲಿಪ್ತತೆಯೂ ಇರುವುದರಿಂದ ಇಲ್ಲಿ ಅದ್ವೈತವಿದೆಯೆಂದು ಗ್ರಹಿಸಲಾಗಿದೆ. ಈ ಸ್ಥಲಗಳು ಆತ್ಮನ ಆಧ್ಯಾತ್ಮಿಕಕೋನ್ನತಿಯ ಮೆಟ್ಟಿಲುಗಳಾಗಿರುವುವು.

ಇಲ್ಲಿಯ ದ್ವೈತ, ವಿಶಿಷ್ಟಾದ್ವೈತ ಮತ್ತು ಅದ್ವೈತಗಳು ಮಧ್ವ, ರಾಮಾನುಜ ಮತ್ತು ಶಂಕರರ ಮತಗಳಿಗಿಂತ ಭಿನ್ನವಾದುದು. ವೀರಶೈವ ಧರ್ಮ ಸಾಹಿತ್ಯ ವಿಶೇಷವಾಗಿ ಕನ್ನಡಭಾಷೆಯಲ್ಲಿರುವುದು ಅದರ ಒಂದು ವೈಶಿಷ್ಟ್ಯ. ಇದು ಕಾಯಕಕ್ಕೆ ಮನ್ನಣೆ ಕೊಟ್ಟಿದೆ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷ, ಪಂಚಾಕ್ಷರೀ ಮಂತ್ರ- ಇವು ಮೊದಲಾದ ಅಷ್ಟಾವರಣಗಳು ವೀರಶೈವರ ರಕ್ಷಾಕವಚಗಳೆನಿಸಿವೆ.

ಬಸವಣ್ಣನವರ ತರುವಾಯ ವೀರಶೈವಧರ್ಮ ತುಂಬ ಬೆಳೆಯಿತು. ಇದಕ್ಕೆ ರಾಜಾಶ್ರಯವೂ ಜನರ ವಿಶ್ವಾಸವೂ ದೊರೆಯಿತು. ವಿಶೇಷ ಪ್ರೋತ್ಸಾಹ ಕೊಟ್ಟವರು ಕೆಳದಿಯ ನಾಯಕರು. ವೀರಶೈವ ಧರ್ಮವನ್ನು ಕುರಿತ ಸಂಸ್ಕೃತ ಗ್ರಂಥಗಳು ಇವರ ಪ್ರೋತ್ಸಾಹದಿಂದ ಹುಟ್ಟಿದುವು.

ಶ್ರೀವೈಷ್ಣವ ಧರ್ಮ

ಶ್ರೀವೈಷ್ಣವಧರ್ಮಕ್ಕೆ ಉಪನಿಷತ್ತುಗಳೂ ಪಂಚರಾತ್ರಾಗಮವೂ ಮಹಾಭಾರತದ ಭಗವದ್ಗೀತೆಯೂ ಆಧಾರಗಳೆಂದು ಈಗಾಗಲೇ ತಿಳಿಸಿದೆ. ಶಂಕರಾಚಾರ್ಯರಿಗಿಂತ ಮುಂಚೆ ದಕ್ಷಿಣ ದೇಶಗಳಲ್ಲಿ ವೈಷ್ಣವಮತ ಅನೇಕ ರೂಪಗಳಲ್ಲಿ ಪ್ರಚಾರದಲ್ಲಿತ್ತು. ಅನಂತಶಯನಕ್ಕೆ ಶಂಕರಾಚಾರ್ಯರು ಬಂದ ಕಾಲದಲ್ಲಿ ಅಲ್ಲಿ ಭಕ್ತ, ಭಾಗವತ, ವೈಷ್ಣವ, ಪಂಚರಾತ್ರ, ವೈಖಾನಸ ಮತ್ತು ಕರ್ಮಹೀನ ಎಂಬ ಆರು ಬಗೆಯ ವೈಷ್ಣವ ಸಂಪ್ರದಾಯಗಳಿದ್ದುವು. ಈ ವೈಷ್ಣವರನ್ನು ಅದ್ವೈತಕ್ಕೆ ಒಳಪಟ್ಟ ಭಾಗವತರನ್ನಾಗಿ ಶಂಕರಾಚಾರ್ಯರು ಪರಿವರ್ತಿಸಿದರು. ಶಂಕರಾಚಾರ್ಯರು ತಮ್ಮ ಜನ್ಮಸ್ಥಳವಾದ ಕಾಲಟಿಯಲ್ಲಿ ವಿಷ್ಣುದೇವಾಲಯವನ್ನು ಸ್ಥಾಪಿಸಿದರು. ಹರಿದ್ವಾರ, ಬದರಿನಾಥ್ ಎಂಬ ಉತ್ತರದ ಪುಣ್ಯಸ್ಥಳಗಳಲ್ಲಿ, ಬೌದ್ಧರ ಪ್ರಾಬಲ್ಯದಿಂದ ನಿಂತುಹೋಗಿದ್ದ ವಿಷ್ಣುಪೂಜೆಯನ್ನು ಪುನರುಜ್ಜೀವನಗೊಳಿಸಿದರು.

ಮೇಲೆ ಹೇಳಿದ ವೈಷ್ಣವಸಂಪ್ರದಾಯಗಳಲ್ಲದೆ ತಮಿಳುನಾಡಿನಲ್ಲಿ ೫ನೆಯ ಶತಮಾನದಿಂದ ಆಳ್ವಾರುಗಳೆಂಬ ವೈಷ್ಣವಭಕ್ತರ ಧರ್ಮವೊಂದು ಬೆಳೆದು ಬಂದಿತ್ತು. ಇವರು ಭಕ್ತಿಗೆ ಹೆಚ್ಚು ಬೆಲೆ ಕೊಟ್ಟು ಪ್ರಬಂಧಗಳೆಂಬ ಹಾಡುಗಳ ಮೂಲಕ ತಮ್ಮ ಧರ್ಮವನ್ನು ಅಭಿವ್ಯಕ್ತಿಗೊಳಿಸಿದರು. ಈ ಪಂಥದ ಏಳಿಗೆಗೆ ಕಾರಣರಾದವರು- ೯ ಮತ್ತು ೧೦ನೆಯ ಶತಮಾನದಲ್ಲಿದ್ದ ನಾಥಮುನಿಗಳು ಮತ್ತು ಅವರ ಮೊಮ್ಮಕ್ಕಳಾದ ಯಾಮುನಾಚಾರ್ಯರು. ವೇದಾಭ್ಯಾಸಪಾರಂಗತರಾದ ಯಾಮುನಾಚಾರ್ಯರು ಬೋಧಿಸಿದ ಶ್ರೀವೈಷ್ಣವಸಂಪ್ರದಾಯವನ್ನು ಕರಗತಮಾಡಿಕೊಂಡು ಅದರ ಪ್ರಚಾರಕ್ಕೆ ತೊಡಗಿದ್ದಾಗ ಅವರ ಅಂತ್ಯವಾಯಿತು. ಅವರ ಆಶಯವನ್ನು ಈಡೇರಿಸುವ ಕಾರ್ಯವನ್ನು ರಾಮಾನುಜರು ಕೈಗೊಂಡರು. ಆಚಾರ, ಸಂಪ್ರದಾಯಗಳ ತೊಡಕಿನಿಂದ ಮುಕ್ತರಾಗಲು ರಾಮಾನುಜರು ಸಂನ್ಯಾಸವಹಿಸಿ ಜ್ಞಾನಪ್ರಸಾರಣ ಕಾರ್ಯದಲ್ಲಿ ಉದ್ಯುಕ್ತರಾದರು.

ರಾಮಾನುಜರು ಗದ್ಯತ್ರಯ, ನಿತ್ಯಗ್ರಂಥ ಮತ್ತು ಗೀತಾಭಾಷ್ಯ, ಬ್ರಹ್ಮಸೂತ್ರದ ಮೇಲೆ ವಿಶಿಷ್ಟಾದ್ವೈತಪರವಾದ ಶ್ರೀಭಾಷ್ಯ- ಇವರನ್ನು ಬರೆದರು. ಬ್ರಹ್ಮನ ಶಕ್ತಿರೂಪಳಾದ ಲಕ್ಷ್ಮಿಗೆ ಉಚ್ಚಸ್ಥಾನವನ್ನು ಕೊಟ್ಟುದೇ ಶ್ರೀಭಾಷ್ಯದ ವೈಶಿಷ್ಟ್ಯ. ಇದಾದಮೇಲೆ ರಾಮಾನುಜರು ವೇದಾಂತದೀಪ, ವೇದಾಂತಸಾರ, ವೇದಾರ್ಥಸಂಗ್ರಹ ಎಂಬ ಗ್ರಂಥಗಳನ್ನು ಬರೆದರು. ಉಪನಿಷತ್ತುಗಳ ಮೇಲೆ ಭಾಷ್ಯ ಬರೆಯದಿದ್ದರೂ ವೇದಾರ್ಥಸಂಗ್ರಹದಲ್ಲಿ ಅವುಗಳ ಸಾರವನ್ನು ಇವರು ತಿಳಿಸಿದ್ದಾರೆ. ಇವರು ಆಳ್ವಾರುಗಳ ಪ್ರಬಂಧಗಳನ್ನು ದ್ರಾವಿಡವೇದವೆಂದು ಕರೆದು ಅವುಗಳಿಗೆ ವೇದಕ್ಕೆ ಸಮಾನವಾದ ಸ್ಥಾನವನ್ನು ಕೊಟ್ಟರು. ಬ್ರಹ್ಮಸೂತ್ರಗಳ, ಭಗವದ್ಗೀತೆಯ ಮತ್ತು ಪ್ರಬಂಧಗಳ ತತ್ತ್ವ ವಿಶೇಷ ಸಹಿತವಾದ ಬ್ರಹ್ಮನ್- ಎಂಬ ವಿಶಿಷ್ಟಾದ್ವೈತ ತತ್ತ್ವವನ್ನು ರಾಮಾನುಜರು ಸ್ಪಷ್ಟಪಡಿಸಿದರು.

ಪರತತ್ತ್ವವೆಂಬುದು ನಾರಾಯಣನೇ. ಜಗತ್ತಿಗೆ ಕಾರಣವಾದ ಪ್ರಕೃತಿಯ ಕಾರಣ ನಾರಾಯಣನೇ. ಜೀವೇಶ್ವರಭೇದ ಸಹಜವಾದದ್ದು. ಆತ್ಮ ಪರಮಾತ್ಮದ ಅಂಶ. ಪರಮೇಶ್ವರನಾದ ನಾರಾಯಣನಲ್ಲಿ ಶ್ರದ್ಧೆ ಇಡುವುದರಿಂದ ಮಾತ್ರ ಮುಕ್ತಿ. ಪ್ರೇಮರೂಪವಾದ ಭಕ್ತಿಯೇ ಈ ಶ್ರದ್ಧೆ. ಇದೇ ಶರಣಾಗತಿ. ಶರಣಾಗತಿಯೇ ಪ್ರಪತ್ತಿ. ಇದೇ ಮೋಕ್ಷಸಾಧನೆಗೆ ನೇರವಾದ ಮಾರ್ಗ. ಇದು ರಾಮಾನುಜರ ತತ್ತ್ವದ ಸಾರ. ದೋಷರಹಿತನೂ ನಿತ್ಯನೂ ಚೇತನಾಚೇತನ ವಸ್ತುಗಳಲ್ಲಿ ವ್ಯಾಪ್ತನೂ ಅಂತರ್ಯಾಮಿ ಸ್ವರೂಪನೂ ಸಚ್ಚಿದಾಂನದಸ್ವರೂಪನೂ ಆದ ಈಶ್ವರ ಐದು ಬಗೆಯಾಗಿ ಪ್ರಕಟವಾಗುವನೆಂಬುದು ಶ್ರೀವೈಷ್ಣವಧರ್ಮಕ್ಕೆ ವಿಶಿಷ್ಟವಾದ ಭಾವನೆ.

ರಾಮಾನುಜರ ಸುಧಾರಕ ಮನೋಧರ್ಮಕ್ಕೆ ಅಂತ್ಯಜರಲ್ಲಿ ಅವರು ತೋರಿದ ಪ್ರೇಮ ಒಂದು ಕುರುಹು. ಗಾಂಧಿಯವರು ಅಂತ್ಯಜರನ್ನು ಹರಿಜನರೆಂದು ಕರೆದರು. ಅವರಿಗಿಂತ ಎಂಟನೂರು ವರ್ಷಗಳ ಹಿಂದೆ ರಾಮಾನುಜರು ಅವರನ್ನು ತಿರುಕುಲತ್ತಾರ್ ಎಂದರೆ ಶ್ರೇಷ್ಠಕುಲದವರು ಎಂದು ಕರೆದರು. ಮೇಲುಕೋಟೆಯ ಚೆಲುವನಾರಾಯಣ ದೇವಸ್ಥಾನಕ್ಕೆ ಇವರಿಗೆ ವರ್ಷದಲ್ಲಿ ಮೂರು ದಿನಗಳ ಪ್ರವೇಶ ದೊರೆಯುವಂತೆ ಕಟ್ಟುಮಾಡಿದರು; ಜಾತಿಭೇದವನ್ನೆಣಿಸದೆ ಎಲ್ಲರಿಗೂ ಪಂಚಸಂಸ್ಕಾರಗಳು ದೊರೆಯುವಂತೆ ಮಾಡಿದರು.

ರಾಮಾನುಜರ ಅನಂತರ ವೈಷ್ಣವಧರ್ಮ ವಿಶೇಷವಾಗಿ ಬೆಳೆಯಿತು. ಮೈಸೂರು ಪ್ರಾಂತ್ಯದಲ್ಲಿ ಶ್ರೀವೈಷ್ಣವರು ಹೇರಳವಾಗಿದ್ದಾರೆ. ರಾಮಾನುಜರ ಅನಂತರ ಶ್ರೀವೈಷ್ಣವರಲ್ಲಿ ತೆಂಗಲೈ (ದಕ್ಷಿಣದ) ವಡಗಲೈ (ಉತ್ತರದ) ಎಂಬ ಎರಡು ಬೇಧಗಳು ಹುಟ್ಟಿಕೊಂಡುವು. ನೀನೇ ಗತಿ ಎಂದು ನಾರಾಯಣನಲ್ಲಿ ಶರಣಾಗತ ಭಾವ ತಳೆದ ಜೀವರಿಗೆ ಪ್ರಯತ್ನವಿಲ್ಲದೆಯೇ ಮುಕ್ತಿಕೊಡುವಷ್ಟು ನಾರಾಯಣಪ್ರೇಮ ಅಪಾರ ಎಂಬುದು ತೆಂಗಲೆಯವರ ಮತ. ಮೋಕ್ಷಸಾಧನೆಗೆ ಮಾನವ ಪ್ರಯತ್ನ ಅಗತ್ಯ ಎಂಬುದು ವಡಗಲೆಯವರ ಮತ. ಪಿಳ್ಳೈಲೋಕಾಚಾರ್ಯರು ತೆಂಗಲೈ ಆಚಾರ್ಯರು, ವೇದಾಂತ ದೇಶಿಕರು ವಡಗಲೈ ಆಚಾರ್ಯರು.

ಅದ್ವೈತ ವೇದಾಂತದಂತೆ ವಿಶಿಷ್ಟಾದ್ವೈತವೇದಾಂತವೂ ದಕ್ಷಿಣದಲ್ಲಿ ಹುಟ್ಟಿ ಉತ್ತರದ ದೇಶಗಳಿಗೆ ಹಬ್ಬಿತು. ವಿಶಿಷ್ಟಾದ್ವೈತ ಮತದಿಂದ ಸ್ಫೂರ್ತಿಪಡೆದ ರಮಾನಂದರು ೧೪-೧೫ನೆಯ ಶತಮಾನಗಳಲ್ಲಿ ಉತ್ತರದೇಶಗಳಲ್ಲಿ ಈ ಮತವನ್ನು ಪ್ರಚಾರ ಮಾಡಿದರು.

ಮಾಧ್ವಮತ

ವೈಷ್ಣವಸಂಪ್ರದಾಯಗಳಲ್ಲಿ ಮಾಧ್ವಮತ ಬ್ರಹ್ಮ ಸಂಪ್ರದಾಯಕ್ಕೆ ಸೇರಿದ್ದು. ಇದೂ ಭಕ್ತಿಮಾರ್ಗದ ಪಂಥವೇ. ಇದರದು ಅದ್ವೈತ, ವಿಶಿಷ್ಟಾದ್ವೈತ ತತ್ತ್ವಗಳಿಗಿಂತ ಭಿನ್ನವಾದ ದ್ವೈತತ್ತ್ವ. ಶಂಕರಾಚಾರ್ಯರ ಪ್ರಕಾರ ಭೇದರಹಿತವಾದ ನಿರ್ಗುಣಬ್ರಹ್ಮವೇ ಪರಮಾತ್ಮ. ರಾಮಾನುಜಾಚಾರ್ಯರ ಪ್ರಕಾರ ವಿಶೇಷಸಹಿತವಾದ ಪ್ರಕೃತಿಯನ್ನು ಶರೀರವಾಗಿ ಉಳ್ಳ, ಆತ್ಮಗಳನ್ನು ಅಂಶಗಳಾಗಿ ಉಳ್ಳ, ಗುಣಪರಿಪೂರ್ಣವಾದ ಬ್ರಹ್ಮವೇ ಪರಮಾತ್ಮ. ಮಧ್ವಾಚಾರ್ಯರ ಪ್ರಕಾರ ಬ್ರಹ್ಮ ಪ್ರಕೃತಿಗಿಂತ ಬೇರೆ ; ಜೀವಾತ್ಮರು ಇವೆರಡಕ್ಕಿಂತ ಭಿನ್ನ. ಜೀವಪ್ರಕೃತಿಗಳು ಬ್ರಹ್ಮಕ್ಕೆ ಅಧೀನ. ಬ್ರಹ್ಮವೊಂದೇ ಸ್ವತಂತ್ರ. ಉಳಿದವು ಪರತಂತ್ರ. ಇದೂ ಪ್ರಸ್ಥಾನತ್ರಯಗಳ ಆಧಾರದ ಮೇಲೆಯೇ ರೂಪಗೊಂಡ ತತ್ತ್ವ. ಮಧ್ವಾಚಾರ್ಯರು ಈ ಮೂರರ ಮೇಲೂ ಭಾಷ್ಯಗಳನ್ನು ಬರೆದಿದ್ದಾರೆ. ಇವುಗಳಲ್ಲದೆ ಅವರು ಹತ್ತು ಪ್ರಕರಣ ಗ್ರಂಥಗಳನ್ನೂ ಬರೆದಿದ್ದಾರೆ. ಇವುಗಳ ಮೇಲೆ ಜಯತೀರ್ಥರೂ ವ್ಯಾಸರಾಜರೂ ವ್ಯಾಖ್ಯಾನಗಳನ್ನು ಬರಿದಿರುವರಲ್ಲದೆ ಸ್ವತಂತ್ರ ಗ್ರಂಥಗಳನ್ನೂ ಬರೆದಿದ್ದಾರೆ. ರಾಘವೇಂದ್ರಸ್ವಾಮಿಗಳು ಎಲ್ಲ ಟೀಕೆಗಳ ಮೇಲೂ ಟಿಪ್ಪಣಿಗಳನ್ನು ರಚಿಸಿದ್ದಾರೆ. ದ್ವೈತವೇದಾಂತ ಸಾಹಿತ್ಯ ಅಪರಿಮಿತವಾಗಿದೆ. ವ್ಯಾಸರಾಯಸ್ವಾಮಿಗಳು ಮಧ್ವಮತದ ಮುಖ್ಯ ತತ್ತ್ವಗಳನ್ನು ಒಂದು ಶ್ಲೋಕದಲ್ಲಿ ಸಂಗ್ರಹಿಸಿ ಹೇಳಿದ್ದಾರೆ. ಅದರ ತಾತ್ಪರ್ಯ ಹೀಗಿದೆ : ಹರಿಯೇ ಪರಬ್ರಹ್ಮ. ಜಗತ್ತು ಮಿಥ್ಯೆಯಲ್ಲ ಸತ್ಯ. ಎಲ್ಲೆಲ್ಲೂ ಕಾಣಬರುವ ಭೇದ ನಿಜವಾದದ್ದು. ಜೀವಾತ್ಮರು ಪರಮಾತ್ಮನ ದಾಸರು. ಅವರಲ್ಲಿ ಉಚ್ಚನೀಚ ಎಂಬ ಭೇದಗಳಿವೆ. ನೈಜಸುಖಾನುಭವವೇ ಮುಕ್ತಿ. ನಿರ್ಮಲವಾದ ಭಕ್ತಿಯೇ ಅದಕ್ಕೆ ಸಾಧನ. ಪ್ರತ್ಯಕ್ಷ, ಅನುಮಾನ, ಆಗಮಗಳೆಂಬ ಮೂರೇ ಪ್ರಮಾಣಗಳು. ಎಲ್ಲ ವೇದಗಳಲ್ಲೂ ಪ್ರಶಂಸನೀಯವಾದ ಮುಖ್ಯದೇವತೆ ಹರಿಯೊಬ್ಬನೇ. ಈ ಒಂಬತ್ತು ಮುಖ್ಯಾಂಶಗಳು ಮಧ್ವಮತದ ನವರತ್ನಗಳೆಂದು ಪ್ರಸಿದ್ಧವಾಗಿವೆ.

ಮಧ್ವಾಚಾರ್ಯರು ಕರ್ನಾಟಕದವರು. ಉಡುಪಿಯ ಹತ್ತಿರದಲ್ಲಿರುವ ಪಾಜಕವೆಂಬ ಗ್ರಾಮದಲ್ಲಿ ಜನಿಸಿದರು (೧೨೩೮). ಸಂನ್ಯಾಸಾಶ್ರಮ ಪಡೆದಮೇಲೆ ಪೂರ್ಣಪ್ರಜ್ಞ, ಆನಂದತೀರ್ಥ ಎಂಬ ಹೆಸರುಗಳಿಂದ ಪ್ರಸಿದ್ಧಿ ಪಡೆದರು. ಕರ್ಣಾಟಕ, ತಮಿಳುನಾಡು ಮತ್ತು ಹಿಮಾಚಲದವರೆಗಿನ ಉತ್ತರದೇಶಗಳನ್ನು ಸುತ್ತಿ ತಮ್ಮ ವೈಷ್ಣವಮತವನ್ನು ಪ್ರಚಾರ ಮಾಡಿದರು. ಉತ್ತರ ಹಿಂದೂಸ್ಥಾನದಲ್ಲಿ ಈಗ ಪ್ರಚಾರದಲ್ಲಿರುವ ಚೈತನ್ಯ ಮತ ಮಧ್ವಮತದ ಶಾಖೆಯಾಗಿದೆ.

**********

ಸಂಪ್ರದಾಯಗಳು

ಹಿಂದೂ ಧರ್ಮದಲ್ಲಿ, ಸಂಪ್ರದಾಯ ಶಬ್ದವನ್ನು ಆಧ್ಯಾತ್ಮಿಕ ವಂಶಾವಳಿ, ಧಾರ್ಮಿಕ ವ್ಯವಸ್ಥೆ ಎಂದು ಹೇಳಬಹುದು. ಇದು ಸರಿಸುಮಾರು ಆಂಗ್ಲದ ಟ್ರೆಡಿಷನ್ ಶಬ್ದಕ್ಕೆ ಸಮಾನಾರ್ಥಕವಾಗಿದೆ. ಇದು ಗುರುಗಳು ಮತ್ತು ಶಿಷ್ಯರ ಉತ್ತರಾಧಿಕಾರಕ್ಕೆ ಸಂಬಂಧಿಸಿದೆ, ಮತ್ತು ಆಧ್ಯಾತ್ಮಿಕ ಸಂಪರ್ಕದಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ಒಂದು ಧಾರ್ಮಿಕ ಗುರುತಿಗೆ ಸ್ಥಿರತೆಯನ್ನು ನೀಡುವ ಸಂಬಂಧಗಳ ಸೂಕ್ಷ್ಮ ಜಾಲವನ್ನು ಒದಗಿಸುತ್ತದೆ.

ಸಂಪ್ರದಾಯ ಎಂದರೆ ಆಚರಣೆ, ದೃಷ್ಟಿಕೋನಗಳು ಮತ್ತು ಧೋರಣೆಗಳ ಒಂದು ಮಂಡಲ. ಇವು ಅನುಯಾಯಿಗಳ ಪ್ರತಿ ಕ್ರಮಾಗತ ಪೀಳಿಗೆಯಿಂದ ಪ್ರಸಾರಗೊಳ್ಳುತ್ತವೆ, ಪುನಃವ್ಯಾಖ್ಯಾನಿಸಲ್ಪಡುತ್ತವೆ ಮತ್ತು ಪರಿಶೀಲಿಸಲ್ಪಡುತ್ತವೆ. ಸಂಪ್ರದಾಯದಲ್ಲಿ ಭಾಗವಹಿಸುವಿಕೆಯು ಹಿಂದಿನದೊಂದಿಗೆ ನಿರಂತರತೆಯನ್ನು ಕಡ್ಡಾಯಮಾಡುತ್ತದೆ, ಆದರೆ ಅದೇ ವೇಳೆ ಈ ನಿರ್ದಿಷ್ಟ ಸಾಂಪ್ರದಾಯಿಕ ಗುಂಪಿನ ಅಭ್ಯಾಸಿಗಳ ಸಮುದಾಯದ ಒಳಗಿನಿಂದ ಬದಲಾವಣೆಗೆ ವೇದಿಕೆಯನ್ನು ಒದಗಿಸುತ್ತದೆ.

ಒಬ್ಬ ನಿರ್ದಿಷ್ಟ ಗುರುವಿನ ವಂಶಾವಳಿಯನ್ನು ಪರಂಪರೆ ಎಂದು ಕರೆಯಲಾಗುತ್ತದೆ. ಒಬ್ಬ ಜೀವಂತ ಗುರುವಿನ ಪರಂಪರೆಯೊಳಗೆ ದೀಕ್ಷೆ ಪಡೆಯುವ ಮೂಲಕ, ಆ ವ್ಯಕ್ತಿಯು ಅದರ ಸರಿಯಾದ ಸಂಪ್ರದಾಯಕ್ಕೆ ಸೇರುತ್ತಾನೆ. ಗೋತ್ರ, ಮೂಲ ಅಥವಾ ವಂಶ ಹೇಗೊ ಹಾಗೆಯೇ ಜನ್ಮದಿಂದ ಒಬ್ಬನು ಸದಸ್ಯನಾಗುವುದು ಸಾಧ್ಯವಿಲ್ಲ. ಒಂದು ಸಂಪ್ರದಾಯದಲ್ಲಿನ ಸದಸ್ಯತ್ವವು ಹಿಂದೂ ಸಾಂಪ್ರದಾಯಿಕ ವಿಷಯದಲ್ಲಿ ಸತ್ಯದ ಮೇಲಿನ ಒಬ್ಬರ ಹಕ್ಕುಸಾಧನೆಗಳಿಗೆ ಅಧಿಕಾರದ ಮಟ್ಟವನ್ನು ನೀಡುವುದರ ಜೊತೆಗೆ, ಒಬ್ಬರಿಗೆ ಹಕ್ಕುಸಾಧನೆಗಳನ್ನು ಮಾಡಲು ಅನುಮತಿ ನೀಡುತ್ತದೆ.

ಆದಾಗ್ಯೂ, ಒಂದು ಸಂಪ್ರದಾಯದೊಳಗೆ ದೀಕ್ಷೆ ಪಡೆಯದ ಗುರುಗಳ ಉದಾಹರಣೆಗಳೂ ಇವೆ, ರಮಣ ಮಹರ್ಷಿಗಳು ಒಬ್ಬ ಸುಪರಿಚಿತ ಉದಾಹರಣೆಯಾಗಿದ್ದಾರೆ.[೨] ಶೃಂಗೇರಿ ಶಾರದಾ ಪೀಠಕ್ಕೆ ಸೇರಿದ ಒಬ್ಬ ಸಂನ್ಯಾಸಿನಿಯು ಒಮ್ಮೆ ರಮಣರನ್ನು ಸಂನ್ಯಾಸ ಸ್ವೀಕರಿಸುವಂತೆ ಮನವೊಲಿಸಲು ಪ್ರಯತ್ನಿಸಿದರು, ಆದರೆ ರಮಣರು ಒಪ್ಪಲಿಲ್ಲ.

ಹದಿನೆಂಟು ಮುಖ್ಯ ಪುರಾಣಗಳಲ್ಲಿ ಒಂದಾದ ಪದ್ಮ ಪುರಾಣದ ಪ್ರಕಾರ, ನಾಲ್ಕು ವೈಷ್ಣವ ಸಂಪ್ರದಾಯಗಳಿವೆ. ಅವೆಂದರೆ ಶ್ರೀ ಸಂಪ್ರದಾಯ, ಮಾಧ್ವ ಸಂಪ್ರದಾಯ, ರುದ್ರ ಸಂಪ್ರದಾಯ ಮತ್ತು ಕುಮಾರ ಸಂಪ್ರದಾಯ. ಶ್ರೀ ಸಂಪ್ರದಾಯದ ಮುಖ್ಯ ಗುರು ಶ್ರೀ ದೇವಿ ಅಥವಾ ಲಕ್ಷ್ಮಿ, ರಾಮಾನುಜಾಚಾರ್ಯರು ಮುಖ್ಯ ಆಚಾರ್ಯರು, ಮತ್ತು ಇದರ ಮುಖ್ಯ ಮಠಗಳು ಮೇಲುಕೋಟೆ, ಶ್ರೀರಂಗಂ, ವನಮಾಮಲೈ, ತಿರುಕ್ಕುರುಂಗುಡಿ, ಕಾಂಚಿಪುರಂ, ಅಹೋಬಿಲ ಮತ್ತು ಪರಕಾಲ. ಮಾಧ್ವ ಸಂಪ್ರದಾಯದ ಮುಖ್ಯ ಗುರು ಬ್ರಹ್ಮ, ಮಧ್ವಾಚಾರ್ಯರು ಮುಖ್ಯ ಆಚಾರ್ಯರು, ಮತ್ತು ಇದರ ಮುಖ್ಯ ಮಠಗಳು ಶ್ರೀ ಕೃಷ್ಣ ಮಠ, ಮಾಧ್ವ ಮಠಗಳು, ಮತ್ತು ಗೌಡೀಯ ಮಠ. ರುದ್ರ ಸಂಪ್ರದಾಯದ ಮುಖ್ಯ ಗುರು ರುದ್ರ, ವಿಷ್ಣುಸ್ವಾಮಿ/ವಲ್ಲಭಾಚಾರ್ಯರು ಮುಖ್ಯ ಆಚಾರ್ಯರಾಗಿದ್ದಾರೆ.

ಆಚರಣೆ

ಆಚರಣೆ ಮತಧರ್ಮಗಳಿಗೆ ಸಂಬಂಧಿಸಿದಂತೆ, ಅಗೋಚರ ದೈವಶಕ್ತಿಗಳ ಪ್ರೀತ್ಯರ್ಥವಾಗಿ ಮಾನವ ನಡೆಸುತ್ತ ಬಂದಿರುವ ಮತಾಚಾರಗಳಿಗೆ, ಕರ್ಮವಿಧಿಗಳಿಗೆ ಈ ಹೆಸರಿದೆ. (ರಿಚುಅಲ್). ಮತಸಂಬಂಧವಾದ ಆಚಾರ (ನೋಡಿ- ಆಚಾರ), ಆಚಾರ್ಯ (ನೋಡಿ- ಆಚಾರ್ಯ) ಇವು ಪ್ರತ್ಯೇಕ ವಿಷಯಗಳಾಗಿವೆ. ಮನುಷ್ಯ ಸತ್ತಮೇಲೆ ಅವನಿಗೆ ನಡೆಸುವ ಉತ್ತರ ಕ್ರಿಯಾದಿಗಳೂ ಒಂದು ರೀತಿಯ ಕರ್ಮವೇ. ಅದನ್ನು ಸಂಸ್ಕಾರ ಎನ್ನಲಾಗಿದೆ. ತದನಂತರ ಮೃತರ ಬಗ್ಗೆ ಮಾಡುವ ಶ್ರಾದ್ಧ ಪಿತೃಪಕ್ಷಗಳ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಇಲ್ಲಿ ದೈವೀಸಂಬಂಧವಾದ ಆಚರಣೆಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ. ಕ್ರಮವತ್ತಾದ ವಿಧಿಪೂರ್ವಕವಾದ, ಪರಂಪರಾನುಗತವಾಗಿ ನಡೆದು ಬಂದ ರೀತಿಯಲ್ಲಿ ನಡೆಸುವ ಇಂಥ ಕ್ರಿಯೆಗಳ ಹಿನ್ನೆಲೆಯಲ್ಲಿ ನಂಬಿಕೆ ಆಳವಾಗಿ ಬೇರು ಬಿಟ್ಟಿರುತ್ತದೆ, ಧರ್ಮ ಇದರ ಅಡಿಗಲ್ಲು. ಧಾರ್ಮಿಕ ವಿಧಿಗಳಿಂದ ತಾನು ನಂಬಿದ ಪವಿತ್ರವಸ್ತುಗಳ ಪ್ರೀತಿಯನ್ನು ಸಂಪಾದಿಸಬಹುದೆಂಬ ಮನುಷ್ಯ ಎಣಿಸುತ್ತಾನೆ. ಇದು ಕ್ರಮವತ್ತಾದ ಅರ್ಚನಾಕ್ರಮವೂ ಹೌದು (ನೋಡಿ- ಅರ್ಚನೆ), ಲೌಕಿಕ ಹಿನ್ನೆಲೆಗಳಲ್ಲಿ ಸಂಪ್ರದಾಯನಿಷ್ಠ ರೀತಿಯಲ್ಲಿ ನಡೆಸುವ ಒಂದು ಕ್ರಿಯೆಯೂ ಹೌದು. ನಂಬಿಕೆ ಮತ್ತು ಆಚರಣೆ ಪರಸ್ಪರ ಪೂರಕವಾದರೂ ಅನೇಕ ಸಂದರ್ಭಗಳಲ್ಲಿ ಊಹೆಗೆ ನಿಲುಕದ ರೀತಿಯಲ್ಲಿ ಅವು ತಮ್ಮ ಸಂಬಂಧವನ್ನು ಕಳೆದುಕೊಂಡಿರುತ್ತವೆ. ದೈತ್ಯ ಸಾಧನೆಗಳಿಗೆ ಮಕ್ಕಳನ್ನು ಬಲಿಕೊಡುವ ಒಂದು ಆಚರಣೆ ಐರೋಪ್ಯ ದೇಶಗಳಲ್ಲಿ ಮೊದಲಿಗೆ ಕಂಡುಬರುತ್ತಿತ್ತು. ಅನೇಕ ದೊಡ್ಡ ದೊಡ್ಡ ಕಟ್ಟಡಗಳನ್ನು ಕೆಡವಿ ಅಡಿಪಾಯವನ್ನು ಶೋಧಿಸಿದಾಗ ಎಲುಗೂಡು ದೊರೆತ ಅನೇಕ ನಿದರ್ಶನಗಳಿವೆ. ಆಚರಣೆಗೆ ಪ್ರೇರಕವಾದ ನಂಬಿಕೆ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಹೀಗೆಯೇ ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ಕೊಂಡೊಯ್ಯುವಾಗ ತಲೆಬಾಗುವ ಪದ್ಧತಿ ಪಾಶ್ಚಾತ್ಯರಲ್ಲಿ ಬೆಳೆದುಬಂದಿದೆ. ನಿಜವಾದ ಆಚರಣೆ ಶವವನ್ನು ವಂದಿಸುವುದಲ್ಲ, ಮೊದಲಿಗೆ ಇಂಥ ಮೆರವಣಿಗೆಯ ಮುಂದೆ ಶಿಲುಬೆಯ ಗುರುತನ್ನು ಕೊಂಡೊಯ್ಯುವ ಆಚರಣೆ ಇದ್ದು ಅದಕ್ಕೆ ವಂದಿಸುವ ಪದ್ಧತಿ ಇತ್ತು. ಆ ನಂಬಿಕೆ ಈ ರೂಪದಲ್ಲಿ ಉಳಿದಿದೆ. ಆಚರಣೆ ಮಾತ್ರ ಮರೆತುಹೋಗಿದೆ.

ದೈಹಿಕ ಅವಶ್ಯಕತೆಗಳಿಗನುಗುಣವಾಗಿ ನಡೆಸುವ ನೈಸರ್ಗಿಕ ಕ್ರಿಯೆಗಳು ಆಚರಣೆಗಳಾಗುವುದಿಲ್ಲ. ದೇಹಶುದ್ಧಿಗಾಗಿ ಮೀಯುವುದಕ್ಕೂ ಪವಿತ್ರ ಉದ್ದೇಶಕ್ಕಾಗಿ ಮಾಡುವ ದಿವ್ಯಸ್ನಾನಕ್ಕೂ ಅಂತರವನ್ನು ಗುರುತಿಸಿ ಧಾರ್ಮಿಕ ಆಚರಣೆಯನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಆಧುನಿಕ ಮತಗಳು ನಂಬಿಕೆ ಮತ್ತು ಆಚರಣೆಗಳ ಮೇಲೆಯೇ ನಿಂತಿವೆ. ಹಳೆಯ ಮತಗಳಲ್ಲಿ ಪುರಾಣಗಳು, ಐತಿಹ್ಯಗಳು ನಂಬಿಕೆಯ ಸ್ಥಾನದಲ್ಲಿ ನಿಲ್ಲುತ್ತವೆ. ಆಚರಣೆಗಳು ಒಂದು ರೀತಿಯಲ್ಲಿ ಪುರಾಣಗಳ ಹುಟ್ಟಿಗೆ ಮೂಲಕಾರಣವೆನಿಸಿದರೆ, ಅನೇಕ ಪುರಾಣಗಳ ಆಧಾರದ ಮೇಲೆ ಆಚರಣೆಗಳು ಹುಟ್ಟಿಕೊಳ್ಳಲೂಬಹುದು. ವೈಯಕ್ತಿಕವಾಗಿ ನಡೆಸುವ ಆಚರಣೆಗಳು ಕೆಲವಾದರೆ, ಸಾಮೂಹಿಕವಾಗಿ ನಡೆಸುವ ಆಚರಣೆಗಳೂ ಇವೆ. ಧಾರ್ಮಿಕ ಮುಖಂಡರಿಂದ ಪೂಜಾರಿ ಪುರೋಹಿತರಿಂದ ವಂಶಪಾರಂಪರ್ಯವಾದ ಹಕ್ಕನ್ನು ಪಡೆದವರಿಂದ ನಡೆಸುವ ಆಚಾರಗಳೂ ಕೆಲವಿವೆ. ಧಾರ್ಮಿಕ ಪಾವಿತ್ರ್ಯದ ಜೊತೆಗೆ ಅತಿಮಾನುಷ ಶಕ್ತಿಗಳ ಭಯವೂ ಮಿಗಿಲಾದುದೇ. ಆದುದರಿಂದ ಆಚರಣೆಗಳನ್ನು ಅತ್ಯಂತ ಶ್ರದ್ಧೆಯಿಂದ ನಡೆಸಲಾಗುತ್ತದೆ. ನುಡಿಯಲ್ಲಿ ನಡೆಯಲ್ಲಿ ಸಣ್ಣ ತಪ್ಪಾದರೂ ಅನರ್ಥವಾದೀತೆಂಬ ಅಂಜಿಕೆ ಪ್ರತಿಯೊಂದು ಆಚರಣೆಯ ಹಿನ್ನೆಲೆಯಲ್ಲೂ ಇದ್ದೇ ಇರುತ್ತದೆ. ಉಪವಾಸವಿರುವುದು, ಮೀಸಲು ವಸ್ತುಗಳನ್ನು ತೆಗೆದಿಡುವುದು, ಹಿಂದಿನಿಂದ ನಡೆದು ಬಂದ ಪದ್ಧತಿಯಲ್ಲಿ ಸ್ವಲ್ಪವೂ ಲೋಪಬರದಂತೆ ಎಚ್ಚರ ವಹಿಸುವುದು, ಸಂಬಂಧಪಟ್ಟ ವ್ಯಕ್ತಿಯಿಂದಲೇ ಕ್ರಿಯೆಗಳನ್ನು ನಡೆಸುವುದು-ಈ ಮುಂತಾದ ಕ್ರಮಗಳನ್ನು ಗಮನಿಸಿದಾಗ ಮತದ ಬಾಹ್ಯಾಚರಣೆಗಳಾದ ಇವು ಬದುಕಿನಲ್ಲಿ ಎಷ್ಟು ಪ್ರಮುಖಪಾತ್ರವಹಿಸುತ್ತವೆ ಎಂಬುದು ವೇದ್ಯವಾಗುತ್ತದೆ. ವೈಯಕ್ತಿಕವಾಗಿ ನಡೆಸುವ ಧ್ಯಾನ, ತಪಸ್ಸುಗಳೇ ಬೇರೆ. ಇತರರಂತೆ ನಡೆಸುವ ಬಾಹ್ಯವಾದ ಆಚರಣೆಗಳೇ ಬೇರೆ. ದೈವದ ಪ್ರತಿನಿಧಿಗಳು ನಿಂತು ನಡೆಸುವ ಆಚರಣೆಗಳು ಬೇರೆ. ಅನಂತರ ಒಂದೊಂದು ಧರ್ಮಕ್ಕೂ ಮತಕ್ಕೂ ಪಂಥಕ್ಕೂ ಇಂಥ ಹರಿಕಾರರು ಕಾಣಿಸಿಕೊಳ್ಳುತ್ತಾರೆ. ನೀಲಗಾರರು, ಗುಡ್ಡರು, ಗೊಂದಲಿಗರು, ಗೊರವರು, ದಾಸಯ್ಯಗಳು, ಜೋಗಿಗಳು ಹುಟ್ಟಿಕೊಂಡದ್ದು ಹೀಗೆ. ಆಯಾ ದೈವಕ್ಕೆ ಸಂಬಂಧಿಸಿದ ಆಚರಣೆಗಳನ್ನು ಗೊತ್ತಾದ ಭಕ್ತರೇ ನಡೆಸಬೇಕು. ಅದಕ್ಕೆ ಸಂಬಂಧಪಟ್ಟಂಥ ವಿಶಿಷ್ಟ ಸಾಧನ, ಹಾಡು, ಕಥೆ, ಮಂತ್ರಗಳೆಲ್ಲ ಉಂಟು. ದಾಸಯ್ಯನ ಜಾಗಟೆ, ಭವನಾಶಿ, ಶಂಖ, ಗರುಡಗಂಬಗಳು, ಜೋಗಿಯ ಸಿಂಗನಾದ, ಗುಡ್ಡನ ಕಂಸಾಳೆ, ಗೊರವನ ಡಮರುಗ, ಗೊಂದಲಿಗನ ಚೌಟಿಕೆ-ಇವೆಲ್ಲ ಪವಿತ್ರ ವಸ್ತುಗಳು, ಅವರು ನಡೆಸುವ ಆಚರಣೆಯ ಸಾಧನಸಲಕರಣೆಗಳು. ದಾಳಹಾಕುವುದು, ಮಣೀವು ಹಾಕುವುದು, ಗೊಂದಲ ಹಾಕುವುದು, ಕೋಲುಪೂಜುವುದು ಮುಂತಾದುವು ಪವಿತ್ರ ಆಚರಣೆಗಳು.

ವೈಯಕ್ತಿವಾಗಿ ನಡೆಸುವ ಆಚರಣೆಗಳಿಗೆ ಈ ಪ್ರತಿನಿಧಿಗಳ ಆವಶ್ಯಕತೆಯಿಲ್ಲ. ಮನೆಯಲ್ಲಿ, ಹೊಲದಲ್ಲಿ ಬಯಲಲ್ಲಿ ನಡೆಸುವ ಕ್ರಿಯೆಗಳಲ್ಲಿ ಧಾರ್ಮಿಕ ವಸ್ತುಗಳನ್ನು ಮಾತ್ರ ಬಳಸಬಹುದು. ಇಂಥ ಸಾಧನಸಲಕರಣಗಳು ಸಾಮಾನ್ಯವಾಗಿ ನಿತ್ಯೋಪಯೋಗಕ್ಕೆ ಬಳಸಲು ಬಾರದ ರೀತಿಯಲ್ಲೇ ಸಿದ್ಧವಾದುವು. ಆದರೆ ಕಲಾತ್ಮಕವಾಗಿ ರಚಿತವಾಗಿ ಆಕರ್ಷಕವಾಗಿರಬಹುದು. ಕಂಚಿನ ಕಳಸಗಳೂ ಧೂಪ ದೀಪಾರತಿಯ ಸಾಧನಗಳೂ ಮಂಗಳಾರತಿಯ ತಟ್ಟೆಗಳೂ ಈ ದೃಷ್ಟಿಯಿಂದ ಗಮನಾರ್ಹವಾದುವು. ಮಾನವಶಾಸ್ತ್ರಜ್ಞರು ಆಚರಣೆಗಳನ್ನು ಮೂರು ಮುಖ್ಯ ವಿಭಾಗಗಳನ್ನಾಗಿ ಮಾಡಿಕೊಳ್ಳುತ್ತಾರೆ. 1 ಧಾರ್ಮಿಕ ಆಚರಣೆ. 2 ಮಾಂತ್ರಿಕ ಆಚರಣೆ. 3 ಮಾಟ, ಮೋಡಿ ಇತ್ಯಾದಿ. ಈ ಮೂರು ಬಗೆಗಳೂ ಒಂದೇ ಸಂಸ್ಕøತಿಯಲ್ಲಿ ಕಂಡುಬರಬಹುದು. ಜನತೆಯ ಜೀವನದೃಷ್ಟಿ, ನಂಬಿಕೆ, ಆಶೋತ್ತರಗಳು ಸ್ಪಷ್ಟವಾಗಿ ಈ ಆಚರಣೆಗಳಲ್ಲಿ ಕಂಡು ಬರುತ್ತವೆ. ಮಾನವನ ಬದುಕಿಗೆ ಸಂಬಂಧಿಸಿದಂತೆ ನಾಲ್ಕು ವರ್ಗಗಳಲ್ಲಿ ಇವುಗಳನ್ನು ವಿಭಾಗಿಸಿಕೊಳ್ಳಬಹುದು. 1 ಮಾನವನ ಬದುಕಿಗೆ ಅವನ ಭಾವ ಪ್ರಪಂಚಕ್ಕೆ ಸಂಬಂಧಿಸಿದ ಆಚರಣೆಗಳು. 2 ನೈಸರ್ಗಿಕಕ್ರಿಯೆಗಳಿಗೆ ಸಂಬಂಧಿಸಿದ ಆಚರಣೆಗಳು. 3 ಆರ್ಥಿಕಚಟುವಟಿಕೆಗೆ ಸಂಬಂಧಿಸಿದ ಆಚರಣೆಗಳು. 4 ಸಾಮಾಜಿಕ ರಚನೆಗೆ ಸಂಬಂಧಿಸಿದ ಆಚರಣೆಗಳು.

ಮಾನವ ಒಂದೇ ದೈವದ ಕಟ್ಟಿಗೆ ಒಳಗಾಗಬೇಕಾದ ಅಗತ್ಯವಿಲ್ಲ. ದೇವಮಹಾದೇವರುಗಳ ಸಾಲಿನಲ್ಲಿ ಅನೇಕ ಕ್ಷುದ್ರದೇವತೆಗಳನ್ನೂ ಶಕ್ತಿಗಳನ್ನೂ ಅರ್ಚಿಸುವ ಸ್ವಾತಂತ್ರ್ಯ ಅವನಿಗಿದೆ. ಈ ಸಂಬಂಧವಾದ ಅನೇಕ ಆಚರಣೆಗಳನ್ನು ಆತ ನಡೆಸುತ್ತಾನೆ. ಪರಸೇವೆ, ಹರಿಸೇವೆಗಳನ್ನು ಮಾಡುವಂತೆಯೇ ಸಣ್ಣ ಪುಟ್ಟ-ದೇವತೆಗಳ ಹೆಸರಿನಲ್ಲಿ ಅನೇಕ ಆಚರಣೆಗಳನ್ನು ನಡೆಸುತ್ತಾನೆ. ಹರಕೆಯ ಮರಿಗಳನ್ನು ಕಡಿಯುತ್ತಾನೆ. ಮಾನವ ಬಲಿಯೂ ಇದ್ದಿತೆನ್ನುವುದಕ್ಕೆ ಆಧಾರಗಳಿವೆ.

ಮಾನವನ ಬದುಕಿನಲ್ಲಿ ಹುಟ್ಟು, ಪ್ರೌಢಾವಸ್ಥೆ, ಮದುವೆ, ಮರಣಗಳಿಗೆ ಸಂಬಂಧಿಸಿದ ಆಚರಣೆಗಳೂ ಅನೇಕ ಬಗೆಯಲ್ಲಿವೆ. ಬಸುರಿ, ಬಾಣಂತಿಯರಿಗೆ ನಡೆಸುವ ಶಾಸ್ತ್ರಗಳೆಲ್ಲ ಆಚರಣೆಗಳೇ. ಗುಣಿಗಿಕ್ಕುವಶಾಸ್ತ್ರ, ಹೆಸರಿಡುವ ಶಾಸ್ತ್ರಗಳಂತೆಯೆ ಋತುಮತಿಯಾದ ಹೆಣ್ಣು ಮಗಳಿಗೆ ಮಾಡುವ ಗುಡಿಲುಕೂಡುವ ಶಾಸ್ತ್ರ, ಮದುವೆಯಲ್ಲಿ ನಡೆಯುವ ಶಾಸ್ತ್ರ, ನೀರು ತರುವ ಶಾಸ್ತ್ರ, ಭತ್ತಕುಟ್ಟುವ, ಭೂತ ಉಣ್ಣುವ, ಬಾಗಿಲು ತಡೆಯುವ, ಹೂವಿನ ಚೆಂಡಾಡುವ ಶಾಸ್ತ್ರಗಳೆಲ್ಲ ಬಗೆಬಗೆಯ ಆಚರಣೆಗಳೇ. ಶವಸಂಸ್ಕಾರಗಳಲ್ಲೂ ಅನೇಕ ಆಚರಣೆಗಳನ್ನು ಕಾಣಬಹುದು. ಹೂಳುವ, ಸುಡುವ, ಕಲ್ಲಿಗೆಸೆಯುವ ಸಂಪ್ರದಾಯಗಳ ಹಿನ್ನೆಲೆಯಲ್ಲಿ ನಡೆಸುವ ಆಚರಣೆಗಳು ಅನೇಕವಾಗಿವೆ. ಮಳೆಯಾಗದಿದ್ದರೆ ಹೂತ ಹೆಣವನ್ನು ಹೊರ ತೆಗೆದು ನಡೆಸುವ ಕ್ರಿಯೆಗಳು, ಸುಟ್ಟಬೂದಿ, ಸತ್ತವರೊಡನೆ ಹೂತವಸ್ತ್ರ, ಆಭರಣ, ವಸ್ತುವಿಶೇಷಗಳನ್ನು ಪಡೆಯುವ ಆಚರಣೆಗಳು ಜನಾಂಗದಿಂದ ಜನಾಂಗಕ್ಕೆ ಅನೇಕ ವಿಧವಾಗಿ ಹಬ್ಬಿವೆ.ಕಾಡುಗೊಲ್ಲರಲ್ಲಿ ಋತುಮತಿಯಾದ ಹೆಣ್ಣುಮಕ್ಕಳನ್ನೂ ಬಾಣಂತಿಯರನ್ನೂ ಹಟ್ಟಿಗೆ ದೂರವಾಗಿ ಬೆಟ್ಟದ ತಪ್ಪಲಲ್ಲಿ ಗುಡಿಸಲುಹಾಕಿ ಬಿಡುವ ಆಚರಣೆ ವಿಚಿತ್ರವಾದುದು. ಅಂಥ ಹೆಣ್ಣಿಗೆ ಊಟವನ್ನು ಕೊಡಬೇಕಾದರೂ ದೊಡ್ಡ ಗಳುವಿನಿಂದ ಒಳಗೆ ನೂಕುವ ಪದ್ಧತಿಯಿದೆ. ಯೂರೋಪಿನಲ್ಲಿ ಬಾಣಂತಿ ಗೊತ್ತಾದ ದಿನಗಳಲ್ಲಿ ಚರ್ಚಿಗೆ ಹೋಗಿ ಶುದ್ಧಳಾಗಿ ಬರದಿದ್ದರೆ ಅಪವಿತ್ರಳು. ಆ ಮಧ್ಯೆ ಅನೇಕ ಅನರ್ಥಗಳು ಸಂಭವಿಸಬಹುದು. ಕಿನ್ನರಿಯರು ಬಂದು ಅವಳನ್ನು ಹೊತ್ತುಕೊಂಡು ಹೋಗಬಹುದು. ಹೀಗೆ ಬಿಟ್ಟರೆಂದು ಭಾವಿಸಲಾದ ಅನೇಕ ಸಂದರ್ಭಗಳಲ್ಲಿ ಹಸುಳೆಗಳಿಗೆ ಕ್ರೂರ ಹಿಂಸೆಯನ್ನು ಕೊಟ್ಟು ನ್ಯಾಯಾಲಯಕ್ಕೆ ದೂರುಹೊತ್ತ ಪ್ರಸಂಗಗಳೂ ಇವೆ. ತಾಯಿ ಶುದ್ಧಳಾಗಲು ನಡೆಸುವ ಆಚರಣೆ ಬಹು ಮುಖ್ಯವಾದುದು.

ಮರ, ನೀರು, ಗಾಳಿ, ಆಕಾಶಗಳಲ್ಲಿ ಅನೇಕ ಶಕ್ತಿಗಳಿರಬಹುದು. ಸಾಂಸ್ಕøತಿಕವೀರರು, ಧಾರ್ಮಿಕಪುರುಷರು, ಮಹಿಮಾವಂತರು, ಪ್ರಾಣಿವಿಶೇಷಗಳು ಅನೇಕ ವ್ಯಕ್ತಿವಿಶೇಷಗಳಿಗೆ ಸಂಬಂಧಿಸಿದಂತೆ ಆಚರಣೆಗಳು ನಡೆಯಬಹುದು. ಬಸವನಪೂಜೆ, ಸೀಗೆಗೌರಿ ಪೂಜೆ, ತಿಂಗಳುಮಾವನ ಪೂಜೆ, ಕೊಂತಿಪೂಜೆಗಳು ವಿಶಿಷ್ಟ ಆಚರಣೆಗಳು: ಧಾರ್ಮಿಕ ಪುರುಷರು, ಕೆಲವು ಪ್ರಭುಗಳು, ಆಹಾರ, ಬದುಕು, ನಿದ್ರೆ, ಲೈಂಗಿಕಕ್ರಿಯೆ ಇವುಗಳಿಗೆ ಸಂಬಂಧಿಸಿದಂತೆ ಕ್ರಮಬದ್ಧ ಆಚರಣೆಗಳಿಗೊಳಪಡುತ್ತಾರೆ. ಕೆಲವರಿಗೆ ಸ್ವಾಭಾವಿಕಮರಣ ಇಲ್ಲ. ಕೆಲವರನ್ನು ಉತ್ತರಾಧಿಕಾರಿ ಕ್ರಮದಂತೆ ಕೊಲ್ಲಬಹುದು. ವಂಶಪಾರಂಪರ್ಯವಾಗಿ ನೇಮಕಗೊಂಡ ಕಟುಕರು ಆ ಕಾರ್ಯವನ್ನು ಮಾಡಬಹುದು. ಸಜೀವ ಸಮಾಧಿಯಾದ ಅನೇಕ ಧಾರ್ಮಿಕಪುರುಷರು ನಿದರ್ಶನಗಳು ಇಂದಿಗೂ ಇವೆ. ಈ ಕ್ರಿಯೆಗಳ ಹಿನ್ನೆಲೆಯಲ್ಲಿ ವಿಶಿಷ್ಟವಾದ ಆಚರಣೆಗಳಿವೆ.

ಬೇಟೆ, ಮೀನುಗಾರಿಕೆ, ವ್ಯವಸಾಯ, ತೋಟಗಾರಿಕೆ, ಕಟ್ಟಡ, ಯುದ್ಧ, ಕಳ್ಳತನ ಮುಂತಾದುವಕ್ಕೆ ಹೊರಡುವ ಸಂದರ್ಭದಲ್ಲೂ ಉತ್ತಮ ಆಚರಣೆಗಳಿವೆ. ಅತಿಮಾನುಷ ಶಕ್ತಿಗಳು ತಮ್ಮ ಕಾರ್ಯದಲ್ಲಿ ಜಯವನ್ನು ಕೊಡಲೆಂದು ಹರಸಿಕೊಳ್ಳುವುದಷ್ಟೇ ಅಲ್ಲದೆ ಉತ್ತಮ ಆಚರಣೆಗಳನ್ನು ನಡೆಸುವ ಪದ್ಧತಿಯೂ ಇದೆ.

ಆಚರಣೆಯ ಸಂದರ್ಭದಲ್ಲಿ ಕತ್ತಿ, ಭಲ್ಲೆ, ಬೆತ್ತ, ತ್ರಿಶೂಲ, ಖಂಡೆಯ (ಕಂಡಾಯ) ಮುಂತಾದ ಗೊತ್ತಾದ ವಸ್ತುಗಳು ಆಯುಧವಿಶೇಷಗಳೂ ಹೌದು, ಆಚರಣೆಯ ಸಾಧನಗಳೂ ಹೌದು. ಅವನ್ನು ಪೂಜಿಸದೆ ಆ ಶಕ್ತಿಯ ಆವಿಷ್ಕಾರವಿಲ್ಲ. ಕಾಡುಗೊಲ್ಲರ ಗಣಿಯನ್ನು ನುಡಿಸಿದಾಗ ವಿಶಿಷ್ಟ ಪೀಠಗಳನ್ನೇರಿದಾಗ ದೇವಿ ಮೈಮೇಲೆ ಬರಬಹುದು, ಇಲ್ಲವೆ ಕ್ರಮವತ್ತಾದ ಪೂಜೆ ಮಾಡಿದ್ದರೆ ಬಲಗಡೆ ಹೂ ಕೊಡಬಹುದು. ಮುಖವಾಡಗಳೂ ಈ ಸಂದರ್ಭದಲ್ಲಿ ಬಳಕೆಯಾಗುತ್ತವೆ. ಸಾಮಾನ್ಯವಾಗಿ ಮೂರು ಮುಖವಾಗಿ ನಡೆಯುವ ಆಚರಣೆಯಲ್ಲಿ ಮೂರು ಮಜಲುಗಳನ್ನು ಕಾಣಬಹುದು. 1 ಪ್ರಾರ್ಥನೆ. 2 ಅರ್ಪಣೆ, ಬಲಿ, 3 ದೈಹಿಕ ಸಂಜ್ಞೆಗಳು ಮತ್ತು ಇತರ ಕ್ರಿಯೆಗಳು.

ಹಣ್ಣು ಕಾಯಿ, ಬೇಟೆಯ ವಸ್ತು, ಕಳವಿನ ವಸ್ತು ಮುಂತಾದುವು ದೈವಕ್ಕೆ ಅರ್ಪಿತವಾಗುವ ವಸ್ತುಗಳು. ನಾನಾರೀತಿಯ ನೃತ್ಯಗಳೂ ಆಚರಣೆಗೆ ಸಂಬಂಧಿಸಿದಂತೆ ನಡೆಯಬಹುದು. ಭೂತನೃತ್ಯ, ಸೋಮನಕುಣಿತ, ಪಕ್ಷಿ ಕುಣಿತ, ರಂಗದ ಕುಣಿತ, ವೀರಗಾಸೆ ಕುಣಿತ. ಲಿಂಗದವೀರರ ಕುಣಿತ, ಗುಡ್ಡರ ಕುಣಿತ ಗೊರವರ ಕುಣಿತ, ಪೂಜಾಕುಣಿತ, ಕರಗಕುಣಿತ-ಇವೆಲ್ಲವೂ ಈ ದೃಷ್ಟಿಯಿಂದ ಗಮನಾರ್ಹ ನೃತ್ಯಗಳು.

ಮಾಟ, ಮೋಡಿಗಳು ಸಾಮಾನ್ಯವಾಗಿ ವಿರೋಧಿಗಳನ್ನು ದೃಷ್ಟಿಯಲ್ಲಿಟ್ಟು ನಡೆಸುವ ಆಚರಣೆಗಳು. ಅನೇಕ ಸಂದರ್ಭಗಳಲ್ಲಿ ಮಾಟ ತಿರುಗಿ ಮನೆ ಹಾಳಾದ ಪ್ರಸಂಗಗಳೂ ಇವೆ. ಮಾಟವನ್ನು ಮುರಿಯುವ ಆಚರಣೆಗಳೂ ವಿಶೇಷವಾಗಿವೆ. ಅನಾರೋಗ್ಯ ಆಕಸ್ಮಿಕಮರಣಗಳಿಗೂ ಸಂಬಂಧಿಸಿದಂತೆ ಆಚರಣೆಗಳಿವೆ. ಅನೇಕ ರೋಗಗಳ ರೂಪದಲ್ಲಿ ಕೆಲವು ದೇವತೆಗಳು ಕಾಣಿಸಿಕೊಳ್ಳಬಹುದು. ರೋಗಗಳನ್ನು ತರುವ ಬಗೆ ಮೂರು ತೆರನಾಗಿದೆ.

1 ರೋಗಿಯಿಂದಲೊ, ಅವನ ಬಂಧುವಿನಿಂದಲೊ ಏನೋ ತಪ್ಪು ನಡಾವಳಿಯಾಗಿರಬೇಕು. 2 ಎರಡನೆಯ ವ್ಯಕ್ತಿ ತಾನೇ ದುಷ್ಟಶಕ್ತಿಗಳನ್ನು ಹರಿಯ ಬಿಟ್ಟಿರಬಹುದು. 3 ಇನ್ನಾವುದೋ ಶಕ್ತಿಯ ಕೈವಾಡವಿರಬಹುದು. ಹರಕೆಯನ್ನೊ ಪೂಜೆಯನ್ನೊ ನಿಲ್ಲಿಸಿರಬಹುದು. ಇಂಥ ಸಂದರ್ಭಗಳಲ್ಲಿ ದೇವತೆಗಳನ್ನು ಬಿಡಿಸಿಕೊಳ್ಳಲು, ಅವರನ್ನು ಸಂತೃಪ್ತಿಗೊಳಿಸಲು ಅನೇಕ ಆಚರಣೆಗಳಿವೆ. ಪ್ಲೇಗಿನಮಾರಿ, ಕಾಲರಾಮಾರಿ, ಸಿಡುಬಿನ ಮಾರಿಯರಿಗೂ ಆಚರಣೆಗಳು ಹುಟ್ಟಿಕೊಂಡಿವೆ.ಕ್ಷಾಮಡಾಮರಗಳನ್ನು ನಿವಾರಿಸಿಕೊಳ್ಳಲು ಗಡಿಯಿಂದ ಗಡಿಗೆ ಸಾಗಿರುವ ಬರಗಲ್ಲು ಊರಿನ ಕೊಳೆ ಕಸವನ್ನೆಲ್ಲ ದೂರ ಸಾಗಿಸಲು ಉಡುಗೋಲಜ್ಜಿ-ಹೀಗೆ ಅನೇಕ ಬಗೆಯ ಆಚರಣೆಯನ್ನು ಗುರುತಿಸಬಹುದು.

ಮನೆಕಟ್ಟುವಿಕೆ, ವ್ಯಾಪಾರ, ವ್ಯವಸಾಯ ಮುಂತಾದುವುಗಳಿಗೆ ಅಡಚಣೆಗಳು ಬರದಂತೆ ಅನೇಕ ಆಚರಣೆಗಳನ್ನು ನಡೆಸುತ್ತಾರೆ. ಆರ್ಥಿಕಹಿನ್ನೆಲೆಯ ಆಚರಣೆಗಳೆಂದು ಪರಿಗಣಿಸಲ್ಪಡುವ ಅಪಾರ ಸಂಖ್ಯೆಯ ಕ್ರಿಯೆಗಳು ಈಗಲೂ ಜೀವಂತವಾಗಿವೆ. ಗೊತ್ತಾದ ದಿವಸಗಳಲ್ಲಿ, ಋತುಗಳಲ್ಲಿ ಬದುಕಿನ ವಿಶಿಷ್ಟ ಘಟ್ಟಗಳಲ್ಲಿ, ರೋಗ, ಭಯ, ಕ್ಷಾಮ ಇತ್ಯಾದಿಗಳ ನಿವಾರಣಾರ್ಥವಾಗಿ, ದೈವಾನುಗ್ರಹಕ್ಕಾಗಿ ನಡೆಯುವ ಆಚರಣೆಗಳ ಶಾಸ್ತ್ರೀಯ ಅಭ್ಯಾಸ ನಾಡಿನಲ್ಲಿ ಇನ್ನೂ ಆಗಬೇಕಾಗಿದೆ.

ಕೃಪೆ: ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ


ಭಾರತದಲ್ಲಿನ ಹಿಂದೂ ಸಂಪ್ರದಾಯಗಳು

ಭಾರತದಲ್ಲಿ ಹಿಂದೂ ಧರ್ಮ ಕೇವಲ ಒಂದು ಧರ್ಮವಲ್ಲ. ಅದೊಂದು ಜೀವನ ವಿಧಾನ. ಹಿಂದೂ ಧರ್ಮದಲ್ಲಿ, ಮಾನವ ಜೀವನದಲ್ಲಿ ಆಧ್ಯಾತ್ಮಿಕತೆಯನ್ನು ತರಲು ಮತ್ತು ಭಕ್ತಿ ಮತ್ತು ಧಾರ್ಮಿಕತೆಯ ಭಾವನೆಗಳನ್ನು ಬೆಳೆಸಲು ಆಚರಣೆಗಳನ್ನು ನಡೆಸಲಾಗುತ್ತದೆ. ಆಚರಣೆಗಳನ್ನು ಕೇವಲ ಜೀವನದಲ್ಲಿ ಆಚರಿಸಲಾಗುತ್ತದೆ ಆದರೆ ಸಮಾಧಿ ಮತ್ತು ದಹನದ ಆಚರಣೆಗಳನ್ನು ಒಳಗೊಂಡಂತೆ ಸಾವಿನ ನಂತರವೂ ಮುಂದುವರಿಯುತ್ತದೆ. ಹಿಂದೂಗಳಿಗೆ, ವೇದಗಳು - ಪ್ರಪಂಚದ ಅತ್ಯಂತ ಹಳೆಯ ಆಧ್ಯಾತ್ಮಿಕ ಗ್ರಂಥಗಳು - ಅವರ ಆಚರಣೆಗಳನ್ನು ರೂಪಿಸಿವೆ ಮತ್ತು ಪ್ರಭಾವ ಬೀರಿವೆ. ವೇದಗಳು ಸಾವಿರಾರು ವರ್ಷಗಳ ಹಿಂದಿನ ಸ್ತೋತ್ರಗಳು ಮತ್ತು ಆಚರಣೆಗಳ ಸಂಗ್ರಹವಾಗಿದೆ. ಈ ಅಮೂಲ್ಯ ಗ್ರಂಥಗಳನ್ನು ಮೌಖಿಕ ನಿರೂಪಣೆಯ ಮೂಲಕ ಹಲವಾರು ತಲೆಮಾರುಗಳಿಗೆ ರವಾನಿಸಲಾಗಿದೆ. 

ಹಿಂದೂ-ಆಚಾರ-ವಿಚಾರ-ಗಣಪತಿ-ವಿಸರ್ಜನ-ಸೋಧ-ಪ್ರಯಾಣ

ಹಿಂದಿನ, ಅನೇಕ ಹಿಂದೂ ಆಚರಣೆಗಳು ಒಬ್ಬರ ಜೀವನದ ಹಂತಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನಿರ್ವಹಿಸುವ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸಿದವು. ಜೀವನದ ನಾಲ್ಕು ಹಂತಗಳು ಈ ಕೆಳಗಿನಂತಿವೆ:

  1. ಬ್ರಹ್ಮಚರ್ಯ - ಶಿಕ್ಷಣವನ್ನು ಸಂಪಾದಿಸುವುದು ಮತ್ತು ಒಬ್ಬರ ಚಾರಿತ್ರ್ಯವನ್ನು ಹೆಚ್ಚಿಸುವುದು
  2. ಗೃಹಸ್ಥ - ಮದುವೆ ಮತ್ತು ವೃತ್ತಿಯನ್ನು ಒಳಗೊಂಡಿರುವ ಲೌಕಿಕ ಸಂತೋಷಗಳು ಮತ್ತು ಅನ್ವೇಷಣೆಗಳು
  3. ವಾನಪ್ರಸ್ಥ - ಆಧ್ಯಾತ್ಮಿಕತೆ
  4. ಸಂನ್ಯಾಸ - ಚಿಂತನೆಯ ಜೀವನ   

ಶತಮಾನಗಳಿಂದ ಅವುಗಳ ಅರ್ಥ ಮತ್ತು ಆಚರಣೆ ಬದಲಾಗಿರುವುದರಿಂದ ಇಂದು ನಡೆಸಲಾಗದ ಅನೇಕ ಪ್ರಾಚೀನ ಆಚರಣೆಗಳಿವೆ. ಉದಾಹರಣೆಗೆ, ವೈದಿಕ ಕಾಲದಲ್ಲಿ, ಯಜ್ಞಗಳು ಕರ್ಮ ಮತ್ತು ಧರ್ಮಕ್ಕೆ ಸಂಬಂಧಿಸಿವೆ ಆದರೆ ಈಗ ಅವು ಸಾಮಾಜಿಕ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿವೆ. 

ಹಿಂದೂ ಆಚರಣೆಗಳ ಮಹತ್ವ

ಹಿಂದೂಗಳಿಗೆ, ಆಚರಣೆಗಳನ್ನು ಮಾಡುವಾಗ ಸರ್ವಶಕ್ತನ ಆಶೀರ್ವಾದವನ್ನು ಪಡೆಯುವುದು ಪ್ರಮುಖ ಪ್ರಾಮುಖ್ಯತೆಯಾಗಿದೆ. ಅವರ ಭಕ್ತಿಯಿಂದ ದೇವರು ಸಂತೋಷಗೊಂಡಾಗ, ಆತನು ಅವರಿಗೆ ತನ್ನ ಆಶೀರ್ವಾದವನ್ನು ನೀಡುತ್ತಾನೆ ಎಂದು ಅವರು ನಂಬುತ್ತಾರೆ. ಹೆಚ್ಚಿನ ಹಿಂದೂ ಆಚರಣೆಗಳನ್ನು ದೇವಾಲಯಗಳಂತಹ ಪವಿತ್ರ ಸ್ಥಳಗಳಲ್ಲಿ ಅಥವಾ ಪ್ರಕೃತಿಯಲ್ಲಿ ನಡೆಸಲಾಗುತ್ತದೆ, ಆದರೆ ಕೆಲವು ಮನೆಯಲ್ಲಿ ನಡೆಸಲಾಗುತ್ತದೆ. 

ಮನೆಯ ಜವಾಬ್ದಾರಿಗಳ ಭಾಗವಾಗಿ, ಒಬ್ಬ ಧರ್ಮನಿಷ್ಠ ಹಿಂದೂ ಪ್ರತಿದಿನ ಕೆಲವು ಆಚರಣೆಗಳನ್ನು ಮಾಡಬೇಕೆಂದು ನಿರೀಕ್ಷಿಸಲಾಗಿದೆ. ಬೆಳಗಿನ ಆಚರಣೆಗಳು ಸ್ನಾನ ಅಥವಾ ದೈಹಿಕ ಸ್ವಯಂ ಶುದ್ಧೀಕರಣ, ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಅಥವಾ ಗಾಯತ್ರಿ ಮಂತ್ರವನ್ನು ಪಠಿಸುವುದನ್ನು ಒಳಗೊಂಡಿರಬಹುದು. ಎಲ್ಲಾ ಹಿಂದೂ ಮನೆಗಳಲ್ಲಿ ಆಚರಿಸಲಾಗುವ ಅತ್ಯಂತ ಸಾಮಾನ್ಯವಾದ ಆಚರಣೆಗಳೆಂದರೆ ಪೂಜೆ, ಧ್ಯಾನ, ಮೌನ ಪ್ರಾರ್ಥನೆ, ಯೋಗ, ಭಗವದ್ಗೀತೆ ಅಥವಾ ಭಜನೆಗಳಿಂದ ಗ್ರಂಥಗಳ ಪಠಣ, ಧಾರ್ಮಿಕ ಪುಸ್ತಕಗಳನ್ನು ಓದುವುದು, ಸತ್ಸಂಗದಲ್ಲಿ ಭಾಗವಹಿಸುವುದು (ಪ್ರಾರ್ಥನೆ ಸಭೆಗಳು), ದಾನ ಕಾರ್ಯಗಳನ್ನು ಮಾಡುವುದು, ದೇವಸ್ಥಾನಕ್ಕೆ ಭೇಟಿ ನೀಡುವುದು ಮತ್ತು ಪಠಣ ಮಾಡುವುದು. ಅವರ ಪ್ರೀತಿಯ ದೇವರ ಹೆಸರು. ಈ ಆಚರಣೆಗಳು, ಪ್ರಾರ್ಥನೆಗಳು ಮತ್ತು ಪವಿತ್ರ ಸಮಾರಂಭಗಳ ಮೂಲಕ ಹಿಂದೂಗಳು ದೇವರಿಗೆ ತಮ್ಮ ಗೌರವವನ್ನು ಸಲ್ಲಿಸುತ್ತಾರೆ. 

ಪ್ರಾರ್ಥನೆಗಳು ಅಥವಾ ಪೂಜೆಗಳು ಹಿಂದೂ ಭಕ್ತನ ಜೀವನದ ಅವಿಭಾಜ್ಯ ಅಂಗವಾಗಿದೆ. ಅವರು ಹಿಂದೂ ಪುರೋಹಿತರು ಅಥವಾ ಬ್ರಾಹ್ಮಣರ ಸಹಾಯ ಅಥವಾ ಮಾರ್ಗದರ್ಶನದಲ್ಲಿ ಈ ಪ್ರಾರ್ಥನೆಗಳನ್ನು ಮಾಡುತ್ತಾರೆ. ಪ್ರತಿ ಪೂಜೆಯ ನಂತರ, ದೇವರಿಗೆ ಪವಿತ್ರವಾದ ಅರ್ಪಣೆ (ಅಥವಾ ಪ್ರಸಾದ) ನೀಡಲಾಗುತ್ತದೆ. ಅಂತಹ ಕೊಡುಗೆಗಳನ್ನು ತಮ್ಮ ಸರ್ವಶಕ್ತನಿಗೆ ಸಲ್ಲಿಸುವ ಸೇವೆಯ ಗುರುತಾಗಿ ಪರಸ್ಪರ ಪ್ರಯೋಜನಗಳನ್ನು ಪಡೆಯದೆಯೇ ಮಾಡಲಾಗುತ್ತದೆ. ಈ ಆಚರಣೆಗಳನ್ನು ಮಾಡುವುದರಿಂದ ಅವರ ಆಧ್ಯಾತ್ಮಿಕ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ಹಿಂದೂಗಳು ನಂಬುತ್ತಾರೆ.

ಪವಿತ್ರ ಸ್ಥಳಗಳಲ್ಲಿ ಆಚರಣೆಗಳನ್ನು ನಡೆಸುವುದು 

ಹಿಂದೂ ಗ್ರಂಥಗಳು ಮತ್ತು ಪವಿತ್ರ ಗ್ರಂಥಗಳು ಹಿಂದೂ ಭಕ್ತರು ತಮ್ಮ ಜೀವಿತಾವಧಿಯಲ್ಲಿ ಅನುಸರಿಸಬೇಕಾದ ವಿವಿಧ ಆಚರಣೆಗಳನ್ನು ವಿಧಿಸಿವೆ. ಹಿಂದೂ ಆಚರಣೆಗಳಿಗೆ ಬಂದಾಗ ಪವಿತ್ರ ಸ್ಥಳಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ ಏಕೆಂದರೆ ಈ ಸ್ಥಳಗಳನ್ನು ದೇವರ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಪವಿತ್ರ ಗ್ರಂಥಗಳು ಬ್ರಾಹ್ಮಣರಿಂದ ಧಾರ್ಮಿಕ ಕ್ರಿಯೆಗಳನ್ನು ನಡೆಸುವ ಪವಿತ್ರ ಸ್ಥಳಗಳ ಪಾವಿತ್ರ್ಯತೆಯ ಬಗ್ಗೆ ಬಹಳ ವಿವರವಾಗಿ ಉಲ್ಲೇಖಿಸಿವೆ. ಈ ಪವಿತ್ರ ಸ್ಥಳಗಳಲ್ಲಿ ಹಿಂದೂಗಳು ತಮ್ಮ ಪೂರ್ವಜರಿಗೆ ಗೌರವ ಸಲ್ಲಿಸುತ್ತಾರೆ. ದೀರ್ಘಾವಧಿಯ ಶಾಂತಿಯನ್ನು ದಯಪಾಲಿಸಲು ಮತ್ತು ದೈವಿಕ ಶಕ್ತಿಯೊಂದಿಗೆ ಒಂದಾಗಲು ಸಹಾಯ ಮಾಡಲು ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. 

ಹಿಂದೂ ಆಚರಣೆಗಳ ಇತರ ರೂಪಗಳು

ಯಜ್ಞ - ಯಜ್ಞವನ್ನು ನಡೆಸುವಾಗ, ಪುರೋಹಿತರ ಸಹಾಯದಿಂದ ವಿವಿಧ ದೇವತೆಗಳಿಗೆ ಅರ್ಪಣೆಗಳನ್ನು ಮಾಡಲಾಗುತ್ತದೆ. ಸಣ್ಣ ಪವಿತ್ರವಾದ ಬೆಂಕಿಯನ್ನು ಬೆಳಗಿಸಲಾಗುತ್ತದೆ ಮತ್ತು ಆಹಾರ ಧಾನ್ಯಗಳು, ತುಪ್ಪ ಮತ್ತು ತರಕಾರಿ ಪದಾರ್ಥಗಳಂತಹ ನೈವೇದ್ಯಗಳು ಇರುತ್ತವೆ. ಅಗ್ನಿ, ಇಂದ್ರ ಮತ್ತು ವರುಣ ಮುಂತಾದ ದೇವರುಗಳನ್ನು ಆಹ್ವಾನಿಸಲು ಮಂತ್ರಗಳನ್ನು ಏಕಕಾಲದಲ್ಲಿ ಜಪಿಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಕುಟುಂಬದ ಕಲ್ಯಾಣಕ್ಕಾಗಿ, ಮಳೆಯನ್ನು ಆಹ್ವಾನಿಸಲು ಮತ್ತು ಶಾಂತಿ ಮತ್ತು ಸಮೃದ್ಧಿಯನ್ನು ಸ್ವಾಗತಿಸಲು ನಡೆಸಲಾಗುತ್ತದೆ. ಕೆಲವು ಯಜ್ಞಗಳನ್ನು ಕೆಲವು ಗಂಟೆಗಳ ಕಾಲ ನಡೆಸಿದರೆ ಇನ್ನು ಕೆಲವು ವಾರಗಳ ಕಾಲ ನಡೆಯುತ್ತದೆ.

ಜಪ - ಜಪ ಎಂದರೆ ದೇವರ ಹೆಸರನ್ನು ಮೌನವಾಗಿ ಅಥವಾ ಶ್ರವ್ಯವಾಗಿ ಪಠಿಸುವುದು. ಈ ಆಚರಣೆಯು ಮನಸ್ಸನ್ನು ಶುದ್ಧೀಕರಿಸಲು ಮತ್ತು ಒಬ್ಬರ ಪ್ರಜ್ಞೆಯನ್ನು ಆಧ್ಯಾತ್ಮಿಕ ಶಕ್ತಿಯಿಂದ ತುಂಬಲು ದೇವರ ನಾಮದ ನಿರಂತರ ಪಠಣವನ್ನು ಒಳಗೊಂಡಿರುತ್ತದೆ. ಈ ನಿಯಮಿತ ಪಠಣವು ಮನಸ್ಸು ಮತ್ತು ದೇಹದಲ್ಲಿ ಕಂಪನಗಳನ್ನು ಉಂಟುಮಾಡುತ್ತದೆ ಮತ್ತು ಆಧ್ಯಾತ್ಮಿಕ ರೂಪಾಂತರಕ್ಕೆ ಕಾರಣವಾಗಬಹುದು. ಜಪವನ್ನು ದೇವರ ಮೇಲಿನ ಶುದ್ಧ ಪ್ರೀತಿಯಿಂದ ಮಾಡಬೇಕೇ ಹೊರತು ಪ್ರತಿಯಾಗಿ ಏನನ್ನಾದರೂ ಪಡೆಯುವ ನಿರೀಕ್ಷೆಯಿಂದ ಅಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

Antiquity of Karnataka

Antiquity of Karnataka The Pre-history of Karnataka traced back to paleolithic hand-axe culture. It is also compared favourably with the one that existed in Africa and is quite distinct from the Pre-historic culture that prevailed in North India.The credit for doing early research on ancient Karnataka goes to Robert Bruce-Foote. Many locales of Pre-noteworthy period have been discovered scattered on the stream valleys of Krishna, Tungabhadra, Cauvery, Bhima, Ghataprabha, Malaprabha, Hemavathi, Shimsha, Manjra, Netravati, and Pennar and on their tributaries. The disclosure of powder hills at Kupgal and Kudatini in 1836 by Cuebold (a British officer in Bellary district), made ready for the investigation of Pre-notable examinations in India.   Some of the important sites representing the various stages of Prehistoric culture that prevailed in Karnataka are Hunasagi,Kaladevanahal li, Tegginahalli, Budihal, Piklihal, Kibbanahalli, Kaladgi, Khyad, Nyamati, Nittur, Anagavadi, Balehonnur a...