ವಿಷಯಕ್ಕೆ ಹೋಗಿ

ದಸರಾ

ಮೈಸೂರು ದಸರಾದ ಹಿನ್ನೆಲೆ ಮತ್ತು ಇತಿಹಾಸ

Hero image
ಪ್ರತಿವರ್ಷವೂ ವೈಭವೋಪೇತವಾಗಿ ಜರುಗುವ ಮೈಸೂರು ದಸರಾ ಜಂಬೂಸವಾರಿ ಆಚರಣೆಯ ಮೂಲ ವಿಜಯನಗರ ಸಾಮ್ರಾಜ್ಯದ್ದು. ಮಹಾರಾಷ್ಟ್ರದ ದೇವಗಿರಿ ಮೂಲದ ೭೫೦ಕೆಜಿಯ ಸ್ವರ್ಣದ ಅಂಬಾರಿಗೆ ೮ ಶತಮಾನಗಳ ಇತಿಹಾಸವಿದೆ. ಕಂಪಿಲ, ವಿಜಯನಗರ ಸಾಮ್ರಾಜ್ಯಗಳನ್ನು ದಾಟಿ ಮೈಸೂರು ಅರಸರನ್ನು ತಲುಪಿ ಈಗಲೂ ನಾಡಹಬ್ಬ ದಸಾರದಂದು ದೇವಿ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿಕೊಂಡು ಮೆರವಣಿಗೆ ಸಾಗುತ್ತದೆ.
preview-clap

ಸ್ವಚ್ಛ ಊರು, ಹೂವಿನಿಂದ ಅಲಂಕೃತಗೊಂಡ ಬೀದಿಗಳು, ತುಂಬಿ ತುಳುಕುವ ರಸ್ತೆಗಳು, ದೇವಸ್ಥಾನಗಳು, ವಸ್ತು ಪ್ರದರ್ಶನ, ಯುವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಕ್ರೀಡಾ, ಕುಸ್ತಿ ಪಂದ್ಯಾವಳಿಗಳು, ಯೋಗ ಕಾರ್ಯಕ್ರಮಗಳು, ಲಲಿತಕಲೆ, ಕರಕುಶಲ ಕಲಾ, ಪುಸ್ತಕ ಮೇಳ, ಕವಿಗೋಷ್ಟಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಕಡೆಗೆ ಬೃಹತ್‌ ಮೆರವಣಿಗೆ, ಅಂತ್ಯದಲ್ಲಿ ಪಂಜಿನ ಕವಾಯತು! ವೈಭವೋಪೇತವಾಗಿ ಜರಗುವ ಇವೆಲ್ಲವನ್ನು ಕಂಡು ಕಣ್ಮನ ತುಂಬಿಸಿಕೊಳ್ಳಬೇಕಿದ್ದರೆ, ನೀವು ಒಮ್ಮೆಯಾದರೂ ಮೈಸೂರಿನಲ್ಲಿ ನಡೆವ ದಸರೆಯನ್ನು ನೋಡಲೇಬೇಕು.

ಒಂಭತ್ತು ದಿನಗಳ ವ್ರತಾಚರಣೆಯ ನಂತರ ಹತ್ತನೇ ದಿವಸದ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿಯನ್ನು 1610ನೇ ಇಸವಿಯಲ್ಲಿ ಮೈಸೂರಿನ ಯದುವಂಶದ 9ನೇ ಒಡೆಯರಾದ ರಾಜಾ ಒಡೆಯರ್‌ ಮೊದಲ ಬಾರಿಗೆ ಆರಂಭಿಸಿದರು. ಮೈಸೂರನ್ನು ಮಹಿಷಾಸುರನೆಂಬ ಅಸುರನಿಂದ ಮುಕ್ತಗೊಳಿಸಿ ಜನರನ್ನು ರಕ್ಷಿಸಿದ ತಾಯಿ ಚಾಮುಂಡಿ ಮೈಸೂರು ಮಹಾರಾಜರ ಕುಲದೈವವಾಗಿ ದಶಮಿಯ ದಿನದಂದು ಆನೆಯ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ಕುಳಿತು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ಹೋಗುತ್ತಾಳೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವಿಜಯದಶಮಿ

ಅತ್ಯಂತ ಬೃಹತ್‌ ಸಾಮ್ರಾಜ್ಯವೆಂದು, ಬಹುಕಾಲ ಆಳ್ವಿಕೆ ನಡೆಸಿದ ಸಾಮ್ರಾಜ್ಯವೆಂದೂ ಹೆಸರಾಗಿರುವ, ಕರ್ನಾಟಕದ ಇತಿಹಾಸದಲ್ಲೇ ಸುವರ್ಣಯುಗವನ್ನು ಸೃಷ್ಟಿಸಿ, ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ ಕರ್ನಾಟಕ ಸಾಮ್ರಾಜ್ಯ ಅರ್ಥಾತ್‌ ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ್ದ ನವರಾತ್ರಿ ಹಬ್ಬ ಹಾಗೂ ವಿಜದಶಮಿ ಆಚರಣೆಗೆ ವರ್ಣಮಯ ಕಳೆ ಬಂದದ್ದು ಪ್ರಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ. ಈ ಮಹೋತ್ಸವದ ಕೇಂದ್ರಗಳಾಗಿ ನಿರ್ಮಾಣವಾದದ್ದೇ ಮಹಾನವಮಿ ದಿಬ್ಬ. ತಮ್ಮ ಶೌರ್ಯ-ಪರಾಕ್ರಮಗಳನ್ನು, ವೀರತ್ವ, ಧೀರತ್ವವನ್ನು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ. ಹೀಗೆ ಸರ್ವ ವಿಧಗಳಲ್ಲೂ ತಾವು ಶಕ್ತರು, ಪ್ರತಿಭಾವಂತರೆಂದು ತಮ್ಮ ಹಿರಿಮೆಯನ್ನು ತೋರ್ಪಡಿಸಿಕೊಳ್ಳಲು ಈ ಮಹಾನವಮಿ ದಿಬ್ಬದಲ್ಲಿ ಸತತ ಹತ್ತೂ ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.

ಹಂಪೆಯ ಮಹಾನವಮಿ ದಿಬ್ಬ (ಚಿತ್ರಕೃಪೆ: ನ್ಯೂಸ್‌ 18 ಕನ್ನಡ)

ವಿಜಯನಗರದ ಆಳ್ವಿಕೆಗೆ ಒಳಪಟ್ಟ ಸಾಮಂತ ರಾಜರನ್ನೂ, ಮಾಂಡಲಿಕರನ್ನು ಹಾಗೂ ತಮ್ಮ ಸೇನಾ ಬಲಕ್ಕೆ ಶಕ್ತಿ ತುಂಬುತ್ತ ಹಾಗೂ ಸಾಮ್ರಾಜ್ಯಕ್ಕೆ ಆರ್ಥಿಕವಾಗಿ ಸಹಾಯ ಮಾಡುವವರನ್ನೆಲ್ಲಾ ಒಂದೆಡೆ ಸೇರಿಸಿ ಕಪ್ಪ ಸಂಗ್ರಹಣೆ ಮಾಡಲಿಕ್ಕೆಂದೇ ನಿಗದಿತ ಕಾಲವೊಂದನ್ನು ಗೊತ್ತು ಮಾಡಲಾಗಿತ್ತು. ಆ ಕಾಲವೆ ಅಶ್ವಯುಜ ಮಾಸದ ಪಾಡ್ಯಮಿಯಿಂದ ನವಮಿಯವರೆಗಿನ ಒಂಭತ್ತು ದಿನಗಳು. ಕಡೆಯ ದಿನ ಅಂದರೆ ದಶಮಿಯ ದಿನ ಅರಸನು, ಮಹಾನವಮಿ ದಿಬ್ಬದ ಮೇಲೆ ಕುಳಿತು ಸಂದಾಯವಾಗುತ್ತಿದ್ದ ಕಾಣಿಕೆಗಳನ್ನು ಸ್ವೀಕರಿಸುತ್ತ, ಜರುಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ.ವಿಜಯನಗರದ ಅರಸರು ಈ ಅಶ್ವಯುಜ ಮಾಸದ ನವಮಿಯ ನಂತರೆ ದಿಗ್ವಿಜಯಕ್ಕೆ ಹೊರಡುತ್ತಿದ್ದರು. ಅಶ್ವಯುಜ ಮಾಸದ ಹೊತ್ತಿಗೆ ಮಳೆಯ ರಭಸ ಕಡಿಮೆಯಾಗಿ ಶತ್ರುಗಳ ಮೇಲೆ ದಾಳಿ ಮಾಡಲು ಅನುಕೂಲವೆಂಬ ಕಾರಣವಿದ್ದೀತು. ಇದರಿಂದಾಗಿ ಮಹಾನವಮಿಯು ಯುದ್ಧ ಸಂಬಂಧಿಯಾದ ಪ್ರಮುಖ ಆಚರಣೆಯಾಗಿತ್ತು ಎಂಬುದು ತಿಳಿಯುತ್ತದೆ.

ವಿಜಯನಗರ ಮತ್ತು ಮಹಾನವಮಿ ಕುರಿತು ವಿವಿಧ ದೇಶಗಳ ಪ್ರವಾಸಿಗರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ವಿದೇಶಿ ಪ್ರವಾಸಿಗರಲ್ಲಿ ಮಧ್ಯಪ್ರಾಚ್ಯದ ʼಇಬನ್ ಬಟೂಟʼ, ಇಟಲಿಯ ʼನಿಕೊಲೊ-ಡಿ-ಕೊಂಟೆʼ, ರಷ್ಯಾದ ʼನಿಕಿಟಿನ್ʼ, ಲಿಸ್ಬನ್ನ ʼದು ಆರ್ತೆ ಬಾರ್ಬೊಸʼ, ಪೋರ್ಚುಗೀಸ್ ದೇಶದ ʼಡೊಮಿಂಗೊ ಪಯಸ್ʼ, ʼನ್ಯೂನಿಜ್ʼ ತಮ್ಮ ಅನುಭವಗಳನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ.

ನಿಕೊಲೊ-ಡಿ-ಕೊಂಟೆ ವಿಜಯನಗರವನ್ನು ಬಿಜನೆಗಾಲಿಯಾ ಎಂದು ಉಚ್ಛರಿಸಿದ್ದಾನೆ (ಇಟಲಿಯವನಾದ ನಿಕೊಲೊ-ಡಿ-ಕೊಂಟೆ ಬಾಯಲ್ಲಿ ವಿಜಯನಗರ ಬಿಜಗನೆಲಿಯಾ ಆಗಿದೆ), ಅದರ ರಾಜ ಪರಿವಾರದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತಾನೆ. ನವರಾತ್ರಿಯ ಬಗ್ಗೆ ಬರೆಯುತ್ತ "..ಇದೊಂದು ಒಂಬತ್ತು ದಿನಗಳ ಹಬ್ಬ. ಆಗ (ನವರಾತ್ರಿಯಲ್ಲಿ) ದೊಡ್ಡ ಬೀದಿಗಳಲ್ಲಿ ಹಡಗಿನ ಪಠಸ್ತಂಭದಂತಹ ಸ್ತಂಭಗಳನ್ನು ನೆಟ್ಟು ಬಹುಸುಂದರವಾದ ಜರತಾರಿ ಬಟ್ಟೆಯ ಚೂರುಗಳನ್ನು ಮೇಲುಗಡೆ ಸಿಕ್ಕಿಸುತ್ತಾರೆ. ಆ ಸ್ತಂಭದ ತುದಿಯಲ್ಲಿ ದಿನವೂ ದೇವರಲ್ಲಿ ಅಪಾರ ಭಕ್ತಿಯುಳ್ಳ ಮತ್ತು ಎಂತಹ ಕಷ್ಟವನ್ನಾದರೂ ಸ್ಥಿರ ಮನಸ್ಸಿನಿಂದ ಸಹಿಸಬಲ್ಲ ಒಬ್ಬನನ್ನು ಕುಳ್ಳಿರಿಸುತ್ತಾರೆ. ಇವನ ಕಡೆಗೆ ಕಿತ್ತಳೆ, ನಿಂಬೆ ಮುಂತಾದ ಹಣ್ಣುಗಳನ್ನು ಎಸೆಯುತ್ತಾರೆ." ನಿಕೊಲೊವಿನ ಈ ಮಾತುಗಳು ಅಂದಿನ ನವರಾತ್ರಿ ಆಚರಣೆಯ ಒಂದು ನೋಟವನ್ನು ನೀಡುತ್ತದೆ. (‘ನಾಡಹಬ್ಬ ದಸರಾ’ ಎಂಬ ಕೃತಿಯಿಂದ ಉದ್ಧೃತ, ಪುಟ 89).

1520-22ರಲ್ಲಿ ಬಂದಿದ್ದ ಡೊಮಿಂಗೊ ಪಯಸ್ ಎಂಬ ಪ್ರವಾಸಿ ವಿಜಯನಗರವನ್ನು ಬಿಸಂಗದ ಎಂದು ಕರೆಯುತ್ತಾ ನವರಾತ್ರಿ ಹಬ್ಬದ ಆಚರಣೆ ಬಗ್ಗೆ ವಿವರ ನೀಡುತ್ತಾನೆ. ಹಬ್ಬದ ದಿನಗಳಲ್ಲಿ ಕುಸ್ತಿ ಪುಟುಗಳಿಂದ ಕುಸ್ತಿ, ಬಾಣಬಿರುಸುಗಳ ಆರ್ಭಟ, ಅಲಂಕೃತಗೊಂಡ ರಾಣಿ ವಾಸದವರ ಹಾವಭಾವ ಪ್ರದರ್ಶನವಾಗುತ್ತಿದ್ದಂತೆ ದೊರೆಯು ದೇವಿ ಆರಾಧನೆಗೆ ಹೋಗುತ್ತಾನೆ ‘ಅಲ್ಲಿಗೆ ಬಲಿಗಾಗಿ ಅನೇಕ ಎಮ್ಮೆ, ಕೋಣಗಳನ್ನೂ ಕುರಿಗಳನ್ನೂ ತರುತ್ತಾರೆ. ಅವುಗಳನ್ನು ಕೊಲ್ಲುತ್ತಾರೆ. ಬಳಿಕ ವೃತ್ತಿನಿರತ ನೃತ್ಯಗಾರ್ತಿಯರು (ಬಹುಶಃ ದೇವದಾಸಿಯರು) ಬಂದು ನೃತ್ಯ ಮುಂದುವರಿಸುತ್ತಾರೆ. ಆ ನಂತರ ದೊರೆ ರಾತ್ರಿಯ ಊಟಕ್ಕೆ ತೆರಳುತ್ತಾನೆ. ಇದು ಎಲ್ಲ ಒಂಬತ್ತು ದಿನಗಳಲ್ಲೂ ನಡೆಯುತ್ತದೆ...’ ಎಂಬುದಾಗಿ ಪಯಸ್ ತಾನು ಗ್ರಹಿಸಿದ್ದನ್ನು ಉಲ್ಲೇಖಿಸಿದ್ದಾನೆ.

ಮೈಸೂರು ಸಂಸ್ಥಾನದಲ್ಲಿ ದಸರಾ ಆಚರಣೆ

ವಿಜಯನಗರದ ಅರಸರ ಸಾಂಪ್ರದಾಯಿಕ ಆಚರಣೆಗಳನ್ನೇ ಮೊದಲಿಗೆ ಯಥಾವತ್ತಾಗಿ ಆಚರಿಸಿಕೊಂಡು ಬಂದ ಮೈಸೂರ ಒಡೆಯರು ಕಾಲಾಂತರದಲ್ಲಿ ಪರಿಸ್ಥಿತಿಗೆ ತಕ್ಕನಾಗಿ ಕೆಲವು ಮಾರ್ಪಾಡುಗಳನ್ನೂ ಮಾಡಿಕೊಂಡಿದ್ದಾರೆ.

ಸುಮಾರು 1399-1423ರ ಹೊತ್ತಿಗೆ ಆಗಲೇ ದ್ವಾರಕೆಯಿಂದ ಇತ್ತ ಬಂದಿದ್ದ ಯುದುವಂಶದ ರಾಜರು ಮೈಸೂರಿನ ಆಗ್ನೇಯ ದಿಕ್ಕಿನಲ್ಲಿರುವ ಹದಿನಾಡು(ನಂಜನಗೂಡಿನ ಹದಿನಾರು) ಮತ್ತು ಕಾರುಗಹಳ್ಳಿಗಳ ಪಾಳೆಪಟ್ಟಿನ ಅಧಿಪತ್ಯ ಸಾಧಿಸಿಕೊಂಡಿರಬಹುದಾದ ಸಾಧ್ಯತೆಗಳಿವೆ. ಮೈಸೂರಿನ ಎಲ್ಲಾ ಅರಸರ ಹೆಸರಿನ ಮುಂದೆ ಒಡೆಯರ್‌ ಎಂದು ಕುಲನಾಮ ಬಳಸಿರುವುದಕ್ಕೆ “ಸಂಸ್ಥಾನ ಸ್ಥಾಪನೆ”ಯ ಸಮಯದಲ್ಲಿ ಜಂಗಮನೊಬ್ಬ ಸಹಕರಿಸಿದನೆಂದೂ ಅವನ ಮೇಲಿನ ಗೌರವದಿಂದಾಗಿ ಅರಸರು ಈ ಕ್ರಮವನ್ನು ಬೆಳೆಸಿದರೆಂದು ಪ್ರತೀತಿ ಇದೆ.

ಸು. 1553-72 ರಲ್ಲಿ ಎರಡನೆ ತಿಮ್ಮರಾಜ ಪಾಳೆಯಗಾರನನ್ನು ಗೆದ್ದು ʼಬಿರುದೆಂತೆಂಬರಗಂಡʼ ಎಂಬ ಬಿರುದನ್ನು ಪಡೆದುಕೊಂಡ, ನಂತರದಲ್ಲಿ ಆತನ ತಮ್ಮ ಬೋಳಚಾಮರಾಜನೆಂಬಾತ ಪಟ್ಟಕ್ಕೆ ಬಂದು ವೆಂಕಟಾದ್ರಿ ನಾಯಕನನ್ನು ಸೋಲಿಸಿ ಅವನು ಬಳಸುತ್ತಿದ್ದ ʼಸುಗುಣ ಗಂಭೀರʼ ಎಂಬ ಬಿರುದನ್ನು ತಾನೆ ಧರಿಸಿದನಂತೆ.

1578ರ ಹೊತ್ತಿಗೆ ಕೇವಲ 33 ಹಳ್ಳಿಗಳನ್ನು ಮೈಸೂರು ಪಾಳೆಯಪಟ್ಟನ್ನು ದೊಡ್ಡ ರಾಜ್ಯವನ್ನಾಗಿಸಲು ಪ್ರಯತ್ನಿಸಿ ಜಯಿಸಿದವರು ರಾಜಾಒಡೆಯರ್.‌ ಒಡೆಯರ ವಂಶದ ಸ್ಪಷ್ಟ ಚಿತ್ರಣ ಸಿಗುವುದು ಇಲ್ಲಿನಿಂದ. ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ವಿಜಯನಗರದ ಅಧಿಕೃತ ಪ್ರತಿನಿಧಿಯಾಗಿದ್ದ ತಿರುಮಲರಾಯನಿಗೂ ವಿಜಯನಗರದ ಅಂದಿನ ಅರಸ ವೆಂಕಟನಿಗೂ ವೈಮನಸ್ಸಿದ್ದ ಕಾರಣ ರಾಜಾಒಡೆಯರ್‌ ತಿರುಮಲನನ್ನು ಅಲಕ್ಷಿಸಿ ಮೈಸೂರಿನ ಸುತ್ತ ಕೋಟೆ ನಿರ್ಮಿಸಿ ಸುತ್ತಲ್ಲಿನ ಪ್ರದೇಶಗಳನ್ನು ಗೆದ್ದುಕೊಂಡ. ನಂತರದಲ್ಲಿ ತಿರುಮಲನ ಮೇಲೆ ದಾಳಿ ಮಾಡಿ, ಶ್ರೀರಂಗಪಟ್ಟಣವನ್ನೂ ವಶಪಡಿಸಿಕೊಂಡು, ಅರಸು ವೆಂಕಟನ ಒಪ್ಪಿಗೆ ಪಡೆದುಕೊಂಡು ಆ ಭಾಗದ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾದ.ಆ ಸಮಯದಲ್ಲೇ ಶ್ರೀರಂಗಪಟ್ಟಣದಲ್ಲಿ ದೊರೆ ರಾಜಾ ಒಡೆಯರ್‌ ಮಹಾನವಮಿ ಆಚರಣೆಯನ್ನು ಮತ್ತೆ ಮುನ್ನೆಲೆಗೆ ತಂದರು. 1610ರಲ್ಲಿ ವಿಜಯದಶಮಿಯ ಮೆರವಣಿಗೆಯನ್ನು ಪುನಾರಂಭಿಸಿದರು. ಅಂದಿನಿಂದ (1610) ಒಂಭತ್ತನೇ ಅರಸನಾದ ಚಾಮರಾಜ ಒಡೆಯರ್‌ವರೆಗೂ ಥೇಟ್‌ ವಿಜಯನಗರದ ಶೈಲಿಯನ್ನೇ ಅನುಕರಿಸಿದ್ದ ಅರಸು, ಮಧ್ಯೆ ಕೆಲ ವರ್ಷಗಳ ಕಾಲ ಮುಸಲ್ಮಾನ ರಾಜ ಟಿಪ್ಪೂ ಸುಲ್ತಾನನ ಆಳ್ವಿಕೆಗೆ ಒಳಪಟ್ಟಿದ್ದ ಶ್ರೀ ರಂಗ ಪಟ್ಟಣದಲ್ಲಿ ವಿಜಯದಶಮಿಯ ಆಚರಣೆ ಸಾರ್ವಜನಿಕವಾಗಿ ನಡೆಯದೇ ನಿಂತುಹೋಗಿತ್ತು. ನಂತರದಲ್ಲಿ ಬ್ರಿಟೀಷರ ಅಧೀನಕ್ಕೆ ಒಳಪಟ್ಟ ಸಂಸ್ಥಾನವು, ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಅಂದರೆ 1799ರಲ್ಲಿ ತನ್ನ ಕೇಂದ್ರ ಸ್ಥಾನವನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಿಕೊಂಡಿತು. ನಂತರದ ದಸರಾ ಆಚರಣೆಗಳನ್ನು ದಿಗ್ವಿಜಯಾರ್ಥವಾಗಿ ನಡೆಸುವ ಬದಲು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಆಚರಿಸಿದ್ದು ಗಮನಾರ್ಹ ಅಂಶವಾಗಿದೆ.

ನಂತರದ ದಿನಗಳಲ್ಲಿ ಪ್ರತಿ ವರ್ಷವೂ ಅರಸರಿಂದಲೇ ನಡೆದು ಬಂದ ದಸರೆಯು ರಾಜಾಶ್ರಯದಲ್ಲಿ ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್(1941-47) ಕ್ಕೆ ಕೊನೆಗೊಂಡಿತು. ಭಾರತ ದೇಶ ಸ್ವಾತಂತ್ರ್ಯಗೊಂಡು, ಭಾಷಾವಾರು ಪ್ರಾಂತ ವಿಂಗಡಣೆಯಾಗಿ, ಮೈಸೂರು ರಾಜ್ಯ ನಿರ್ಮಾಣವಾಗಿ ರಾಜ್ಯದ ಆಡಳಿತವನ್ನುಸರಕಾರದ ಮುಖ್ಯಮಂತ್ರಿಗಳಾದ ಚೆಂಗಲರಾಯರೆಡ್ಡಿಯವರಿಗೆ ಒಡೆಯರ್‌ ಅಧಿಕಾರವನ್ನು ಹಸ್ತಾಂತರಿಸಿ ತಾವು ಭಾರತ ಸರಕಾರದ ಪ್ರತಿನಿಧಿಯಾಗಿ ರಾಜ್ಯಪಾಲರಾಗಿ, ಪ್ರಮುಖರಾಗಿ ನಾನ ಹುದ್ದೆಗಳನ್ನು ಅಲಂಕರಿಸಿದ್ದು ಇತಿಹಾಸ. ಅಂದಿನಿಂದ ಶುರುವಾದ ಖಾಸಗಿ ದರ್ಬಾರ್‌ ಇಂದಿನವರೆಗೂ ನಡೆದುಕೊಂಡು ಬಂದಿದೆ.

ಚಾಮುಂಡಿದೇವಿ ಕೂರುವ ಅಂಬಾರಿಯ ಇತಿಹಾಸ

ಸು.15ನೇ ಶತಮಾನದಲ್ಲಿ ವಿಜಯದಶಮಿಯನ್ನು ಆರಂಭಿಸಿದ್ದ ವಿಜಯನಗರ ಅರಸರು ತಮ್ಮ ರಾಜಧಾನಿ ಹಂಪೆಯಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಈಗ ನಾವು ಕಾಣುವ ಅಂಬಾರಿ ಆಗಲೂ ಇದ್ದಿದ್ದು. ಈ ಅಂಬಾರಿಯ ಮೂಲ ಮಹಾರಾಷ್ಟ್ರದ ದೇವಗಿರಿ ಎನ್ನಲಾಗುತ್ತದೆ. ಶತ್ರುಗಳ ದಾಳಿಗೆ ನಲುಗಿದ್ದ ದೇವಗಿರಿ ನಾಶವಾಗುತ್ತದೆ. ಆಗ ಮುಮ್ಮಡಿ ಸಿಂಗನಾಯಕನೆಂಬ ದೊರೆಯು ಅದನ್ನು ಹೊತ್ತೊಯ್ದು ಬಳ್ಳಾರಿಯ ರಾಮದುರ್ಗ ಕೋಟೆಯಲ್ಲಿ ಅಡಗಿಸಿಡುತ್ತಾನೆ. ಬಳಿಕ ಈತನ ಮಗನಾದ ಕಂಪಿಲರಾಯನು ಒಂದು ಶಕ್ತಿಯುತ ಸಾಮ್ರಾಜ್ಯವನ್ನು ನಿರ್ಮಿಸಿದ ನಂತರ ಅಂಬಾರಿಯನ್ನು ಹೊರ ತಂದು ಅದರಲ್ಲಿ ದುರ್ಗಾದೇವಿಯ ಮೂರ್ತಿಯನ್ನಿಟ್ಟು ಪೂಜಿಸಲು ಆರಂಭಿಸಿದ.

ಕಂಪಿಲರಾಯನ ಮಗನಾದ ಗಂಡುಗಲಿ ಕುಮಾರರಾಮನ ಕಾಲದಲ್ಲಿ ತನ್ನ ರಾಜ್ಯ ಕಂಪ್ಲಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದ್ದ. ಸುಮಾರು 1327ರ ಹೊತ್ತಿಗೆ ದೆಹಲಿ ಸುಲ್ತಾನರ ದಾಳಿಯಿಂದಾಗಿ ಮರಣಹೊಂದಿದ ಕುಮಾರರಾಮನು ಕಂಪಿಲಿ ರಾಜ್ಯದ ಕೊನೆಯ ರಾಜನಾಗಿದ್ದಾನೆ.

ಆ ಸಮಯಕ್ಕಾಗಲೆ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ತೊಡಗಿದ್ದ ಹಕ್ಕ-ಬುಕ್ಕರು ಈ ಅಂಬಾರಿಯನ್ನು ಸಂರಕ್ಷಿಸುತ್ತಾರೆ. ನಂತರದಲ್ಲಿ ಹಂಪಿಯನ್ನು ರಾಜಧಾನಿಯನ್ನಾಗಿಸಿದಾಗ ಅಲ್ಲಿಗೆ ಬುಕ್ಕ ಅರಸನು ಅಂಬಾರಿಯನ್ನು ತಂದು ಮಹಾನವಮಿಯಂದು ಮೆರವಣಿಗೆ ಆರಂಭಿಸಿದನು.ಸುವರ್ಣಯುಗದ, ಎರಡನೇ ದೇವರಾಯನ ಕಾಲದಲ್ಲಿ ಬರ್ಮಾವನ್ನೂ ವಶಪಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡ, ಶ್ರೀಕೃಷ್ಣದೇವರಾಯನಂತ ಶ್ರೇಷ್ಟ ಅರಸನಿದ್ದ ವಿಜಯನಗರ ಸಾಮ್ರಾಜ್ಯವು ಪತನಗೊಂಡ ಸಮಯಕ್ಕೆ ಅತ್ತ ಮೈಸೂರು ಸಂಸ್ಥಾನ ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿಸಿಕೊಂಡು ತಲೆಯೆತ್ತುತಲಿತ್ತು. ಆಗ ಅಂಬಾರಿಯನ್ನು ಕಾಪಾಡಲು ಮೊದಲು ಪೆನುಕೊಂಡಕ್ಕೆ ಸಾಗಿಸಲಾಯಿತು. ಬಳಿಕ ಅಂಬಾರಿಯನ್ನು ಕಾಪಾಡುವ ಹೊಣೆ ಶ್ರೀರಂಗಪಟ್ಟಣದ ಒಡೆಯರ ಹೆಗಲಿಗೆ ಬಂದಿತು. ಸುಮಾರು 800 ವರ್ಷಗಳ ಇತಿಹಾಸವುಳ್ಳ ಅಂಬಾರಿಯು ಕಳೆದ 409 ವರ್ಷಗಳಿಂದ ಮೈಸೂರು ಅರಸರ ಸುಪರ್ದಿಯಲ್ಲಿದ್ದು, ಈಗ ಕರ್ನಾಟಕ ಸರಕಾರದ ರಕ್ಷಣೆಯಲ್ಲಿದ್ದು ನಾಡ ಹಬ್ಬ ದಸರೆಯ ದಿವಸ ರಾಜಬೀದಿಯಲ್ಲಿ ಠೀವಿಯಿಂದ ಮೆರವಣಿಗೆಯಲ್ಲಿ ಸಾಗುತ್ತ ಭಕ್ತಾದಿಗಳ ಮನಸೋರೆಗೊಳಿಸುತ್ತ, ಭಕ್ತಿಭಾವದಿಂದ ತುಂಬಿಕೊಂಡಿದೆ.

ದಸರಾ ಹಬ್ಬದ ಕಡೆಯ ದಿವಸವಾದ ವಿಜಯದಶಮಿಯಂದು ಹೊರಡುವ ಜಂಬೂ ಸವಾರಿಯು ಅರಮನೆಯಲ್ಲಿ ಸಾಂಪ್ರದಾಯಿಕ ವಿಧಿವಿದಾನಗಳನ್ನು ಪೂರ್ಣಗೊಳಿಸಿ ಅರಮನೆಯ ಆವರಣದಲ್ಲಿ ಮೊದಲ್ಗೊಳ್ಳುತ್ತದೆ. ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಸಾಗುವ ಅಂಬಾರಿಯ ಮೆರವಣಿಗೆ ಬನ್ನಿ ಮಂಟಪವನ್ನು ತಲುಪುವವರೆಗೂ ನೋಡುಗರನ್ನು ರೋಮಾಂಚನಗೊಳಿಸುತ್ತದೆ.

By: Nikhil N.G- yourstory.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

Antiquity of Karnataka

Antiquity of Karnataka The Pre-history of Karnataka traced back to paleolithic hand-axe culture. It is also compared favourably with the one that existed in Africa and is quite distinct from the Pre-historic culture that prevailed in North India.The credit for doing early research on ancient Karnataka goes to Robert Bruce-Foote. Many locales of Pre-noteworthy period have been discovered scattered on the stream valleys of Krishna, Tungabhadra, Cauvery, Bhima, Ghataprabha, Malaprabha, Hemavathi, Shimsha, Manjra, Netravati, and Pennar and on their tributaries. The disclosure of powder hills at Kupgal and Kudatini in 1836 by Cuebold (a British officer in Bellary district), made ready for the investigation of Pre-notable examinations in India.   Some of the important sites representing the various stages of Prehistoric culture that prevailed in Karnataka are Hunasagi,Kaladevanahal li, Tegginahalli, Budihal, Piklihal, Kibbanahalli, Kaladgi, Khyad, Nyamati, Nittur, Anagavadi, Balehonnur a...