ಕರ್ನಾಟಕದಲ್ಲಿ ನಾಣ್ಯಗಳ ಚಲಾವಣೆ ಇತಿಹಾಸ....
ಕರ್ನಾಟಕದಲ್ಲಿ ನಾಣ್ಯಗಳ ಪ್ರಾಚೀನತೆಯ ವಿಷಯದಲ್ಲಿ ಖಚಿತವಾದ ಮಾಹಿತಿ ದೊರಕಿಲ್ಲ. ಹೀಗಾಗಿ, ನಾಣ್ಯಗಳು ಕರ್ನಾಟಕದಲ್ಲಿ ಯಾವಾಗಿನಿಂದ ಬಳಕೆಗೆ ಬಂತು ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಉತ್ತರ ಭಾರತದಲ್ಲಿದ್ದಂತೆಯೇ ಇಲ್ಲಿಯೂ ಮುದ್ರಾಂಕಿತ ನಾಣ್ಯಗಳು ಬಳಕೆಯಲ್ಲಿ ಇದ್ದದ್ದು ನಿಜ.
ಮುದ್ರಾಂಕಿತ ನಾಣ್ಯಗಳು ಅಂದ್ರೇನು.?
ಪಂಚ್ ಮಾರ್ಕ್ಡ್ ಕಾಯಿನ್ಸ್ ಗೆ ಕನ್ನಡದಲ್ಲಿ ಮುದ್ರಾಂಕಿತ ನಾಣ್ಯಗಳು ಎನ್ನುತ್ತಾರೆ. ಸ್ತೂಪ, ಬೆಟ್ಟ, ಚೈತ್ಯ ಮುಂತಾದ ಚಿಹ್ನೆಗಳನ್ನು ಬೆಳ್ಳಿ ಅಥವಾ ತಾಮ್ರದ ತೆಳುಪಟ್ಟಿಗಳ ಮೇಲೆ ಮುದ್ರೆಯೊತ್ತಿದ ನಾಣ್ಯಗಳು ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ಬಳಕೆಯಲ್ಲಿದ್ದವು.
ಸಾತವಾಹನರ ನಾಣ್ಯಗಳು
ಕರ್ನಾಟಕದ ಬಹುಭಾಗ ಸಾತವಾಹನರ ಆಳ್ವಿಕೆಗೆ ಒಳಪಟ್ಟಿತ್ತು. ಸಾತವಾಹನರ ಕಾಲದಲ್ಲಿ ನಾಣ್ಯಗಳು ಸೀಸ ಮತ್ತು ತಾಮ್ರಗಳಿಂದ ತಯಾರಾಗಿದ್ದವು. ಆ ಸಮಯದಲ್ಲಿ ಬೆಳ್ಳಿ ನಾಣ್ಯಗಳು ತೀರಾ ವಿರಳ. ಸಾತವಾಹನರ ಕಾಲದ ನಾಣ್ಯಗಳಲ್ಲಿ ವಿದೇಶಿಯರ ಪ್ರಭಾವ ಕಂಡುಬಂದಿಲ್ಲ. ಹಾಗೇ ಸಾತವಾಹನರ ಕಾಲದ ಚಿನ್ನದ ನಾಣ್ಯಗಳೂ ದೊರಕಿಲ್ಲ.
ಸಾತವಾಹನರ ಕಾಲದ ಬೆಳ್ಳಿ ನಾಣ್ಯಗಳ ಮೇಲೆ ಒಂದು ಕಡೆ ರಾಜನ ಚಿತ್ರವೂ, ಮತ್ತೊಂದು ಕಡೆ ಆನೆ, ಕುದುರೆ, ಸಿಂಹ, ಬಿಲ್ಲು-ಬಾಣ ಚಿತ್ರಗಳು ಮುದ್ರೆಗೊಂಡಿವೆ.
ಸಾತವಾಹನರ ಕೆಲವು ನಾಣ್ಯಗಳಲ್ಲಿ ಶಾಸನಗಳೂ ಇವೆ. ಉದಾಹರಣೆಗೆ ದೊರೆ ನಹಪಾಣನನ್ನು ಗೌತಮೀಪುತ್ರ ಸಾತಕರ್ಣಿ ಸೋಲಿಸಿದ. ನಹಪಾಣನ ರಾಜ್ಯ ಮತ್ತು ನಾಣ್ಯಗಳನ್ನು ಗೌತಮೀಪುತ್ರ ಸಾತಕರ್ಣಿ ತನ್ನ ವಶಕ್ಕೆ ಪಡೆದ. ಬಳಿಕ ನಹಪಾಣನ ನಾಣ್ಯಗಳ ಮೇಲೆ ತನ್ನ ಹೆಸರಿನ ಶಾಸನವನ್ನು ಗೌತಮೀಪುತ್ರ ಸಾತಕರ್ಣಿ ಮುದ್ರಿಸಿದ.
ಸಾತವಾಹನರ ಕಾಲದಲ್ಲಿ ನೌಕಾಯಾನ ಮುಂಚೂಣಿಯಲ್ಲಿತ್ತು. ಇದಕ್ಕೆ ನಾಣ್ಯಗಳ ಮೇಲೆ ದೊರೆ ಯಜ್ಞಶ್ರೀ ಸಾತಕರ್ಣಿ ಮುದ್ರಿಸಿದ ಹಡಗಿನ ಚಿತ್ರಗಳೇ ಸಾಕ್ಷಿ.
ತಮ್ಮ ರಾಜರ ಭಾವಚಿತ್ರಗಳನ್ನು ನಾಣ್ಯಗಳಲ್ಲಿ ಮುದ್ರಿಸಿದ ಮೊದಲ ಸ್ಥಳೀಯ ಅರಸರು ಸಾತವಾಹನರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾತವಾಹನರ ಸಾಮಂತರೇ ಆದ ಆನಂದ ವಂಶದ ರಾಜರು ಆಳುತ್ತಿದ್ದರು. ಚುಟುಕುಲಾನಂದ, ಮುಡಾನಂದ ಎಂಬ ರಾಜರು ಆಳುತ್ತಿದ್ದದ್ದು ಅವರ ಸೀಸದ ನಾಣ್ಯಗಳಿಂದ ತಿಳಿದುಬಂದಿದೆ. ಈ ನಾಣ್ಯಗಳಲ್ಲಿ ಬ್ರಾಹ್ಮೀ ಲಿಪಿಯ ಶಾಸನ ಇದೆ. ಬನವಾಸಿ, ಕಾರವಾರ, ಚಂದ್ರವಳ್ಳಿ ಮುಂತಾದ ಕಡೆ ಇವರ ನಾಣ್ಯಗಳು ದೊರಕಿವೆ.
ರೋಮನ್ ನಾಣ್ಯಗಳು
ಕರ್ನಾಟಕ ಮತ್ತು ರೋಮ್ ನಡುವೆ ವ್ಯವಹಾರ, ವ್ಯಾಪಾರ ಸಂಪರ್ಕ ಇತ್ತು. ಹೀಗಾಗಿ ಕರ್ನಾಟಕದ ಹಲವೆಡೆ ರೋಮನ್ ನಾಣ್ಯಗಳು ದೊರೆತಿವೆ. ಬೆಂಗಳೂರು ಮತ್ತು ಚಂದ್ರವಳ್ಳಿಯಲ್ಲಿ ದೊರಕಿರುವ ರೋಮನ್ ನಾಣ್ಯಗಳ ಮೇಲೆ ರೋಮನ್ ಚಕ್ರವರ್ತಿಗಳಾದ ಅಗಸ್ಟಸ್, ಟೈಬೀರಿಯಸ್, ಕ್ಯಾಲಿಗುಲ ಚಿತ್ರಗಳು, ಶಾಸನ ಇದೆ.
ಕದಂಬರ ನಾಣ್ಯಗಳು
ಸಾತವಾಹನರ ಬಳಿಕ ಕರ್ನಾಟಕವನ್ನು ಆಳಿದ್ದು ಬನವಾಸಿಯ ಕದಂಬರು. ಕದಂಬರು ನಾಣ್ಯಗಳು ಪದ್ಮಟಂಕವೆಂಬ ಗುಂಪಿಗೆ ಸೇರುತ್ತದೆ. ನೋಡಲು ಸಣ್ಣದಾಗಿ ಬಟ್ಟಲಿನ ಆಕಾರದಲ್ಲಿರುವ ಪದ್ಮಟಂಕ ನಾಣ್ಯಗಳು ಚಿನ್ನದಿಂದ ತಯಾರಾದವು. ನಾಣ್ಯಗಳ ಮಧ್ಯೆ ಪದ್ಮಚಿಹ್ನೆ, ಸುತ್ತಲೂ ವಿವಿಧ ಚಿಹ್ನೆಗಳು ನಾಣ್ಯಗಳ ಮೇಲಿವೆ. ಕದಂಬರ ನಾಣ್ಯಗಳಲ್ಲಿ ಹಿಮ್ಮುಖವಾಗಿರುವ ಸಿಂಹವನ್ನೂ ಕಾಣಬಹುದು.
ಗಂಗರ ನಾಣ್ಯಗಳು
ಗಂಗ ಮನೆತನದ ಅರಸರು ತಲಕಾಡನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಶುರು ಮಾಡಿದರು. ಇವರು ಹೊರತಂದಿದ್ದು ಚಿನ್ನ ಮತ್ತು ತಾಮ್ರದ ನಾಣ್ಯಗಳು. ಗಂಗರ ನಾಣ್ಯಗಳಲ್ಲಿ ಆನೆ, ಹೂವು, ಶಾಸನವನ್ನು ಕಾಣಬಹುದು.ಚಾಳುಕ್ಯರ ನಾಣ್ಯಗಳು
ವರಾಹ ಚಿಹ್ನೆಯುಳ್ಳ ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದವರು ಬಾದಾಮಿಯ ಚಾಳುಕ್ಯರು. ಐವತ್ತೈದು ಗ್ರೇನ್ ತೂಕವಿರುವ ಚಿನ್ನದ ನಾಣ್ಯದ ಮೇಲೆ ವರಾಹ ಚಿಹ್ನೆ, ಮತ್ತೊಂದು ಭಾಗದಲ್ಲಿ ಪದ್ಮ ಚಿಹ್ನಯನ್ನು ಅಚ್ಚುಹಾಕಲಾಗಿದೆ. ಇವು ಮೊದಲನೇ ಪುಲಕೇಶಿಯ ನಾಣ್ಯಗಳೆಂದು ಹೇಳಲಾಗಿದೆ.
ಶಂಖ, ಚಕ್ರ, ಧನಸ್ಸು ಚಿತ್ರವಿರುವ, ಶ್ರೀ ಎಂಬ ಅಕ್ಷರ ಇರುವ ಹಾಗೂ ಮುಂಭಾಗದಲ್ಲಿ ವರಾಹ ಚಿಹ್ನೆ ಇರುವ ಚಾಳುಕ್ಯರ ನಾಣ್ಯಗಳು ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ದೊರಕಿವೆ.
ದೊರೆಯದ ರಾಷ್ಟ್ರಕೂಟ ನಾಣ್ಯಗಳು
ದ್ರಮ್ಮ, ಸುವರ್ಣ, ಗದ್ಯಾಣ, ಕಳಂಜು ಮತ್ತು ಕಾಸು ಎಂಬ ನಾಣ್ಯಗಳು ಬಳಕೆಯಲ್ಲಿತ್ತು ಎಂದು ರಾಷ್ಟ್ರಕೂಟರ ಶಾಸನಗಳು ಹೇಳುತ್ತವೆ. ರಾಷ್ಟ್ರಕೂಟರು ಚಿನ್ನದ ನಾಣ್ಯಗಳನ್ನು ಬಳಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ರಾಷ್ಟ್ರಕೂಟರ ನಾಣ್ಯಗಳು ಮಾತ್ರ ದೊರೆಕಿಲ್ಲ.
ಕಲ್ಯಾಣದ ಚಾಳುಕ್ಯರ ನಾಣ್ಯಗಳು
ಕಲ್ಯಾಣದ ಚಾಳುಕ್ಯರ ಹಲವು ನಾಣ್ಯಗಳು ದೊರೆತಿವೆ. ಎರಡನೆಯ ಜಯಸಿಂಹ, ಮೊದಲನೆಯ ಮತ್ತು ಎರಡನೆಯ ಸೋಮೇಶ್ವರ, ಆರನೆಯ ವಿಕ್ರಮಾದಿತ್ಯ ರವರ ಆಳ್ವಿಕೆಯಲ್ಲಿ ಚಾಲ್ತಿಯಲ್ಲಿದ್ದ ಚಿನ್ನದ ನಾಣ್ಯಗಳು ದೊರಕಿವೆ. ನಾಣ್ಯಗಳಲ್ಲಿ ಎತ್ತರವಾದ ಗೋಪುರ ಮತ್ತು ಅದರ ಸುತ್ತ ಜಗದೇಕಮಲ್ಲ ಎಂದು ಮುದ್ರಿತವಾಗಿದೆ. ಕೆಲ ನಾಣ್ಯಗಳಲ್ಲಿ ಸಿಂಹಗಳನ್ನೂ ಕಾಣಬಹುದು.
ಹೊಯ್ಸಳರ ನಾಣ್ಯಗಳು
ರಾಜ ವಿಷ್ಣುವರ್ಧನ ಮತ್ತು ಎರಡನೆಯ ನರಸಿಂಹ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ್ದರು. ರಾಜ ವಿಷ್ಣುವರ್ಧನನ ನಾಣ್ಯಗಳಲ್ಲಿ ಮುಂಭಾಗದಲ್ಲಿ ಸಿಂಹ, ಹಿಂಭಾಗದಲ್ಲಿ ಶ್ರೀತಲಕಾಡಗೊಂಡ ಎಂಬ ಕನ್ನಡ ಶಾಸನವಿದೆ. ತಲಕಾಡು ವಿಜಯದ ಜ್ಞಾಪಕಾರ್ಥವಾಗಿ ಈ ನಾಣ್ಯಗಳನ್ನು ರಾಜ ವಿಷ್ಣುವರ್ಧನ ಟಂಕಿಸಿದ.
ಇನ್ನೂ, ನೊಳಂಬರ ಮೇಲಿನ ವಿಜಯದ ಸ್ಮರಣಾರ್ಥ ರಾಜ ವಿಷ್ಣುವರ್ಧನ, ನಾಣ್ಯದ ಒಂದು ಭಾಗದಲ್ಲಿ ಸಿಂಹದ ಮೇಲೆ ಕುಳಿತಿರುವ ಚಾಮುಂಡಿಯ ಚಿತ್ರ, ಹಿಂಭಾಗದಲ್ಲಿ ಶ್ರೀನೊಳಂಬವಾಡಿಕೊಂಡ ಎಂಬ ಕನ್ನಡ ಶಾಸನವನ್ನೂ ಮುದ್ರಿಸಿದ. ವರಾಹ, ಪಣ ಮತ್ತು ಅರ್ಧಪಣ ಮೌಲ್ಯದ ನಾಣ್ಯಗಳನ್ನೂ ವಿಷ್ಣುವರ್ಧನ ಟಂಕಿಸಿದ್ದ.
ಎರಡನೆಯ ನರಸಿಂಹನ ನಾಣ್ಯಗಳಲ್ಲಿ ಶಾಸನ, ಸಿಂಹ, ಚಾಮುಂಡಿ ಮುಂತಾದ ದೇವತೆಗಳ ಚಿತ್ರವಿದೆ.
ವಿಜಯನಗರ ಸಾಮ್ರಾಜ್ಯದ ನಾಣ್ಯಗಳು
ನಾಣ್ಯಗಳ ದೃಷ್ಟಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ಸುವರ್ಣಯುಗ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಚಿನ್ನದ ನಾಣ್ಯಗಳು ಚಾಲ್ತಿಯಲ್ಲಿದ್ದವು. ಇವು ವರಾಹ, ಅರ್ಧ ವರಾಹ ಮತ್ತು ಕಾಲು ವರಾಹ ಮೌಲ್ಯವುಳ್ಳದ್ದು. ನಾಣ್ಯಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳು, ರಾಜ ಹೆಸರಿನ (ಕನ್ನಡ, ತೆಲುಗು ಅಥವಾ ನಾಗರೀಲಿಪಿ) ಶಾಸನಗಳು ಮುದ್ರಿತವಾಗಿವೆ. ಕೆಲವು ನಾಣ್ಯಗಳ ಮೇಲೆ ಗಜಬೇಂಟೆಕಾರ ಎಂಬ ಶಾಸನವೂ ಇದೆ.
ನಾಣ್ಯಗಳ ಮೇಲೆ ಶಿವ-ಪಾರ್ವತಿ, ಲಕ್ಷ್ಮೀ-ನಾರಾಯಣ, ಲಕ್ಷ್ಮೀ-ನರಸಿಂಹ ದೇವತೆಗಳ ಚಿತ್ರಗಳು, ಆನೆ, ಗಂಢಬೇರುಂಡ ಚಿತ್ರಗಳು ಕಂಡುಬಂದಿವೆ. ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಆಳಿದ ಹಲವು ರಾಜರು, ವಿಜಯನಗರದ ನಾಣ್ಯಗಳನ್ನೇ ಸೂಕ್ತ ಬದಲಾವಣೆಗಳೊಂದಿಗೆ ಮುಂದುವರೆಸಿದರು.
ಹೈದರ್ ಅಲಿ, ಟಿಪ್ಪು ಸುಲ್ತಾನ್ ನಾಣ್ಯಗಳು
ಬಿದನೂರನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ನಂತರ ಹೈದರ್ ಅಲಿ ಒಂದು ಟಂಕಸಾಲೆ ಸ್ಥಾಪಿಸಿದ. ಅಲ್ಲಿ ಬಹಾದುರೀ ನಾಣ್ಯಗಳನ್ನು ಮುದ್ರಿಸಿದ. ನಾಣ್ಯಗಳ ಮೇಲೆ ಶಿವ-ಪಾರ್ವತಿಯರ ಚಿತ್ರ, ಹಿಂಭಾಗದಲ್ಲಿ ‘ಹೆ’ ಎಂಬ ಅಕ್ಷರ ಇದೆ. ಅರ್ಧ ಪಗೋಡ, ಫಣಮ್ ಎಂಬ ನಾಣ್ಯಗಳನ್ನೂ ಹೈದರ್ ಅಲಿ ಮುದ್ರಿಸಿದ. ಹದಿನಾರು ಟಂಕಸಾಲೆಗಳು ಹೈದರ್ ಅಲಿಯ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದವು. ಶ್ರೀರಂಗಪಟ್ಟಣ, ಬೆಂಗಳೂರು, ಚಿತ್ರದುರ್ಗ, ಮೈಸೂರು, ಧಾರವಾಡ, ಸತ್ಯಮಂಗಲ ಮುಂತಾದ ಕಡೆ ಟಂಕಸಾಲೆಗಳಿದ್ದವು. ನಾಣ್ಯಗಳಿಗೆ ಟಿಪ್ಪು ಸುಲ್ತಾನ್ ಅಹ್ಮದೀ, ಸದೀಕೀ, ಫಾರೂಕೀ ಎಂಬ ಹೊಸ ಹೆಸರುಗಳನ್ನು ಕೊಟ್ಟ.
ಮೈಸೂರು ದೊರೆಗಳ ನಾಣ್ಯಗಳು
ಕಂಠೀರವ ನರಸರಾಜ ಒಡೆಯರ್ ಮೊಟ್ಟಮೊದಲನೆಯದಾಗಿ ಟಂಕಸಾಲೆಯನ್ನು ಸ್ಥಾಪಿಸಿದರು. ಇವರು ಅಚ್ಚು ಹಾಕಿಸಿದ ಕಂಠೀರಾಯ ಹಣದ ಒಂದು ಬದಿಯಲ್ಲಿ ನರಸಿಂಹನ ಚಿತ್ರವೂ ಹಿಂಬದಿಯಲ್ಲಿ ಸೂರ್ಯ, ಚಂದ್ರ ಮತ್ತು ಶ್ರೀಕಂಠೀರವ ಎಂಬ ಶಾಸನ ಇದೆ.
ಚಿಕ್ಕದೇವರಾಯರ ಹಣದಲ್ಲಿ ಮುಂಬದಿಯಲ್ಲಿ ಚಾಮುಂಡಿಯ ಚಿತ್ರ, ಹಿಂಬದಿಯಲ್ಲಿ ಕನ್ನಡದಲ್ಲಿ ಚಿಕ್ಕದೇವರಾಯ ಬರಹವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ನಾಣ್ಯಗಳ ಮೇಲೆ ಶಿವ ಪಾರ್ವತಿಯರ ಚಿತ್ರ ಮತ್ತು ಶ್ರೀ ಕೃಷ್ಣರಾಜ ಎಂದು ನಾಗರೀಲಿಪಿಯ ಬರವಣಿಗೆ ಇದೆ.
1843 ರಲ್ಲಿ ಮೈಸೂರು ಒಡೆಯರ ನಾಣ್ಯಗಳು ಅಚ್ಚಾಗುವುದು ನಿಂತು ಹೋಯಿತು. ಭಾರತಕ್ಕೆ ಕಾಲಿಟ್ಟ ಪೋರ್ಚುಗೀಸರು, ಫ್ರೆಂಚರು, ದಚ್ಚರು ಮತ್ತು ಬ್ರಿಟೀಷರು ತಮ್ಮದೇ ಆದ ನಾಣ್ಯಗಳನ್ನು ಬಳಕೆಗೆ ತಂದರು. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಸರ್ಕಾರ ಅಚ್ಚುಹಾಕಿಸಿ ಚಲಾವಣೆಗೆ ತರುತ್ತಿರುವ ನಾಣ್ಯಗಳು ಅಖಿಲ ಭಾರತದ ವ್ಯಾಪ್ತಿಯುಳ್ಳವು.
{ಮಾಹಿತಿ ಕೃಪೆ: ಮೈಸೂರು ವಿಶ್ವವಿದ್ಯಾಲಯ, ಕನ್ನಡ ವಿಶ್ವಕೋಶ}
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ