ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ,
-
ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ
ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ
-
ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ
ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ
-
ಮೊಳೆತ ಬೆಳೆಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ
ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ
-
ವಸುಂಧರೆಯ ಹೊಕ್ಕುಳ ಬೇರು ಇದ್ದಿಲು ಗಣಿಗಾರಿಕೆಯಲಿ ಬೂದಿಯಾಗಿದೆ
ರಾಜ ವ್ಯಾಪಾರಿಯಾಗಿ ಮಣ್ಣಿನ ಧ್ಯಾನ ಮಾಡುವ ಮಕ್ಕಳು ಭಿಕಾರಿಯಾಗಿದ್ದಾರೆ
-
ಅಳಿದುಳಿದವರು ಉಟ್ಟ ಬಟ್ಟೆಯಲಿ ಉರಿವ ಧರೆ ಮೇಲೆ ನೆತ್ತರದ ಹಾದಿ ಮಾಡುತ್ತಿದ್ದಾರೆ
ತಟ್ಟೆ ತುಂಬಿಸಿ ಹೊಟ್ಟೆ ಇಂಬಾಗಿಸಿದವರು ರೈತರ ನೋವಿನ ಧ್ವನಿಗೆ ಕಿವುಡಾಗಿದ್ದಾರೆ
-
ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ
ಕಳ್ಳರು ಉಳುವ ಯೋಗಿಯನು ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ
-
ಸಹದೇವ ಯರಗೊಪ್ಪ, ಗದಗ
:::::::::::::::::::::::::::::::::::::::::::::::::::::::::::::::::::::::::::::::::::
ಗಜಲ್ ವಿವರಣೆ: ಡಾ. ವಾಯ್.ಎಂ.ಯಾಕೊಳ್ಳಿ
ನಮ್ಮ ನಡುವಿನ ಶ್ರೇಷ್ಠ ಗಜಲ್ ಕಾರರಲ್ಲಿ ಸಹದೇವ ಯರಗೊಪ್ಪ ಅವರು ಒಬ್ಬರು . ಹಾಗೆ ನೋಡಿದರೆ ಸಹದೇವ ಅವರು ಸಾಹಿತ್ಯಯಾನ ತುಂಬ ಅಚ್ಚರಿಯನ್ನು ಹುಟ್ಟಿಸುವಂತಿದೆ.ಏಕೆಂದರೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದು ಅಂದರೆ ಬರಹ ಕ್ಷೇತ್ರ ಪ್ರವೇಶಿಸಿದ್ದು ತೀರಾ ಇತ್ತೀಚೆಗೆ. ನಾಲ್ಕಾರು ವರ್ಷಗಳ ಹಿಂದೆ ಅವರ ಕವನ ಸಂಕಲನ,ಗಜಲ್ ಸಂಕ ಲನ ಬಂದವು. ಕೃಷಿ ಅಧಿಕಾರಿಗಳಾಗಿ ಅವರ ಇಲಾಖೆಯ ಸಾಹಿತ್ಯ ಕುರಿತು ಕೆಲವು ಕೃತಿಗಳನ್ನು ಬರೆದಿದ್ದರು.ಆದರೆ ಅವರ ಸಾಹಿತ್ಯದ ಅಧ್ಯಯನ ಹವ್ಯಾಸವಾಗಿ ಆರಂಭವಾದದ್ದು ಬಹಳ ಹಿಂದೆಯೇ. ಅವರು ಕೃಷಿ ವಿಜ್ಞಾನದ ಸ್ನಾತಕೋತ್ತರ ಪದವಿಧರರಾದ ರೂ ಸಾಹಿತ್ಯವನ್ನು ಓದುವ ಹವ್ಯಾಸ ಬಾಲ್ಯದಿಂದಲೇ ಬಂದದ್ದು .ಕವಿತೆ ಅವರ ಆಳದಲ್ಲಿ ಹುದುಗಿದ್ದ ಅಮೂಲ್ಯ ಶಕ್ತಿ ಎನ್ನಿಸುವದು ಅವರ ಕವಿತೆಗಳನ್ನು ಓದಿದಾಗ ಸಹಜವಾಗಿ ಅನ್ನಿಸದಿರದು. ಕೆಲವೇ ವರ್ಷಗಳಲ್ಲಿ ಅವರ ಎರಡು ಗಜಲ್ ಸಂಕಲನ ಬಂದಿವೆ.
ಸಾಮಾನ್ಯವಾಗಿ ಗಜಲ್, ಒಲವಿನ ವಿರಹದ, ಆರ್ದ್ರ ನಿವೇದನೆ ಯಾಗಿರುವದು ಸಹಜ. ಆದರೆ ಇತ್ತೀಚೆಗೆ ಗಜಲ್ ಕಾವ್ಯ ಕೂಡ ಬದುಕಿನ ಬೇರೆ ಬೇರೆ ಆಯಾಮಗಳನ್ನು ವಸ್ತುವಾಗಿ ಬಳಸಿ ಕೊಳ್ಳುತ್ತಿರುವದನ್ನು ಕಾಣುತ್ತೇವೆ.
ರೈತನ ಬದುಕು ,ಅವನ ದಾರುಣ ಬಡತನ, ಉಳ್ಳವರು ಮಾಡುವ ಶೋಷಣೆ ಇವೆಲ್ಲ ಗಜಲ್ ಕವಿತೆಯಲ್ಲಿ ಸಹದೇವರ ಕವಿತೆಗಳಲ್ಲಿ ತುಂಬ ಸಶಕ್ತವಾಗಿ ಬಂದಿವೆ .ಮೇಲಿನ ಗಜಲ್ ಕೂಡ ಇದಕ್ಕೆ ಒಂದು ಸಾಕ್ಷಿಯಂತಿದೆ.
ಆರಂಭದಲ್ಲಿಯೇ ಉಳ್ಳವರು ರೈತನನ್ನು ,ಅವನ ದುಡಿಮೆಯನ್ನು ಹೇಗೆ ಅಪಹರಿಸಿದ್ದಾರೆ ಎನ್ನುವುದನ್ನು ಚಿತ್ರಿಸುತ್ತಾರೆ.ಮೊದಲ ಸ್ಟಾಂಜಾ-
ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ
ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ
ಮೊದಲ ಸಾಲುಗಳಲ್ಲೇ ರೈತನಿಗೆ ,ಕ್ರಿಸ್ತನನ್ನು ಶಿಲುಬೆಗೆರಿಸಿದ ಹಾಗೆ ಮೊಳೆ ಹೊಡೆದಿರುವದನ್ನು ಚಿತ್ರಿಸಿದೆ.ಆದರೆ ಇಲ್ಲಿ ಮೊಳೆ ಹೊಡೆದಿರುವದು ಅವನ ದುಡಿಯುವ ಕೈಗೆ. ಶಿಲುಬೆಗೆ ರಿದವರು ಬೆವರ ಹೊನ್ನಿನಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳು ಎನ್ನುವದು ರೈತ ಎದುರಿಸುತ್ತಿರುವ ನಿಜವಾದ ದುರಂತ ಚಿತ್ರವಾಗಿದೆ. ರೈತನಿಗೆ ಉಪಕಾರ ಮಾಡುವ ನೆವದಲ್ಲಿ ಕೆಲವು ಅಳುವ ಕೈಗಳು ಅವನಿಗೆ ಸಹಾಯ ಮಾಡುವ ನಾಟಕ ಮಾಡಿವೆ. ಆದರೆ ಅದು ನಿಜವಾದ ಪ್ರೀತಿ ತುಂಬಿದ ಸಹಾಯವಾಗದೆ ಕುಶಲ ಮಾತುಗಳು ಆಟವಾಗಿದೆ .ಅಂತಹ ಖಾಲಿ ಮಾತುಗಳು ಅವನ ಒಡಲಾಗ್ನಿ ನಂದಿಸುವದಿಲ್ಲ. ಹಾಗಾಗಿ ಒಮ್ಮೊಮ್ಮೆ ರೈತ ತನ್ನ ಸಂಘಟನೆ ಕಟ್ಟಿಕೊಂಡು ಅಂಥವರ ವಿರುದ್ಧ ಪ್ರತಿಭಟನೆಗಿಳಿದಿದ್ದಾನೆ. ಆದರೆ ಅವನ ಪ್ರತಿಭಟನೆಯನ್ನು ವ್ಯವಸ್ಥಿತ ವರ್ಗ ಚದುರಿಸುವ ಹುನ್ನಾರ ಮಾಡಿದೆ.ಇದನ್ನು ಈ ಕೆಳಗಿನ ಸಾಲುಗಳು ಚಿತ್ರಿಸಿದೆ.
ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ
ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ
ಈಗ ರೈತನಿಗೆ ಬೇರೆ ದಾರಿಯೇ ಇಲ್ಲ. ಆತ ಹೊತ್ತೆಗನ್ನವನರಸಿ ಗುಳೆ ಹೋಗುವುದು ಅನಿವಾರ್ಯವಾಗಿದೆ. ಅವನ ಹೊಲದಲ್ಲಿ ಇಳುವರಿ ಬಂದದ್ಧು ಬೆಳೆಯದಾಗಿರದೇ ಬೆಳೆ ಸಾಲದ್ದು. ಬೆಳೆದ ಬೆಳೆಗೆ ಬೆಲೆ ಸಿಗದೆ ಸಾಲದ ಸುಳಿಗೆ ಸಿಕ್ಕು ತನ್ನ ಗಳೆ ಸಾಮಾನುಗಳೊಂದೀಗೆ ಗುಳೆ ಹೊರಟಿದ್ದಾನೆ. ಮೊಳೆತದ್ದು ಬೇಳೆಸಾಲವೆ ಹೊರತು ಬೇಳೆಯಲ್ಲ.ಇಡೀ ನೇಗಿಲ ಕುಲದ ನೆತ್ತಿಗೆ ಹಸಿವಿನ ಬುತ್ತಿ ಹೊರುವ ಸ್ಥಿತಿ ಬಂದಿದೆ .ಈ ದಾರುಣ ಚಿತ್ರ ಕೆಳಗಿನ ಸಾಲುಗಳಲ್ಲಿದೆ.
ಮೊಳೆತ ಬೆಳೆ ಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ
ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ
ಭೂಮಿಯ ಹೊಕ್ಕುಳಿನ ಮಕ್ಕಳು ಭಿಕಾರಿಯಾಗಿ ಅನ್ನ ಕೊಡುವ ನೆಲವೆಲ್ಲ ಗಣಿಗಾರಿಕೆಯ ಜನರ ಕೈಯಲ್ಲಿ ಸಿಲುಕಿದೆ.ರಕ್ಸಿಸಬೇಕಾದ ರಾಜನೇ ವ್ಯಾಪಾರಿಯಾಗಿದ್ದಾನೆ. ಮುಂದೆ ರಕ್ಷಿಸುವವರು ಯಾರು? ಮಣ್ಣಿನ ಧ್ಯಾನ ಮಾಡುವ ಮಕ್ಕಳು ಭಿಕಾರಿಯಾದರೆ ಬೇರೆ ಮಾರ್ಗವೆಲ್ಲಿದೆ? ನಿಜಕ್ಕೂ ಕವಿತೆ ಎದೆ ಒಡೆಯುವ ಚಿತ್ರಗಳನ್ನು ನಿರುಮ್ಮಳ ಶೈಲಿಯಲ್ಲಿ ಚಿತ್ರಿ ಸಿದೆ. ಅಳಿದುಳಿದವರಿಗೆ ಉಳಿದಿರುವುದು ನೆತ್ತರದ ಹಾದಿಯಲ್ಲದೆ ಇನ್ನೇನು? ಅಂತೆಯೇ ಕವಿ ಕೊನೆ ಸಾಲುಗಳಲ್ಲಿ
ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ
ಕಳ್ಳರು ಉಳುವ ಯೋಗಿಯನು ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ
ರೈತನನ್ನು ಊಳುವ ಯೋಗಿಯಂದದ್ದು ಸಾರ್ಥಕ ಪ್ರತಿಮೆ.ನಿತ್ಯ ದುಡಿದರು ಹೊಟ್ಟೆ ತುಂಬುವಷ್ಟು ಅನ್ನ ಸಿಗದ ರೈತರಲ್ಲವರೆದುರಿಗೆ ನೋಗ ಹೊತ್ತು ನಿಂತಿರುವ ದಾರುಣ ಚಿತ್ರದೊಂದಿಗೆ ಕವಿತೆ ಮುಕ್ತಾಯವಾಗಿದೆ.
ನಿಜಕ್ಕೂ ಒಂದು ಅಪರೂಪದ ಗಜಲ್ ನೀಡಿದ ಸಹದೇವ ಯರಗೊಪ್ಪ ಅವರನ್ನು ಅಭಿನಂದಿಸುವದೂ ಒಂದು ರೀತಿಯಲ್ಲಿ ಹೆಮ್ಮೆಯ ಮಾತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ