ಸಂಬಂಧಗಳೆ ಹಾಗೆ
ಎಷ್ಟೋ ವರ್ಷ ಒಟ್ಟಿಗಿದ್ದ
ಗಟ್ಟಿ ಸಂಬಂಧಗಳು
ಯಾವುದೋ ಬಿರುಗಾಳಿಗೆ ಸಿಕ್ಕು ನೆಲಕ್ಕುರುಳಿವೆ
ಯಾವುದೋ ಗತಕಾಲದ ವೈಭವದ ಸಾಮ್ರಾಜ್ಯದಂತೆ
ಎಂದೂ ಶಿಥಿಲಗೊಳ್ಳುವುದಿಲ್ಲವೆಂಬ
ಸಂಬಂಧಗಳೂ
ಸ್ವಾರ್ಥಕ್ಕೊ, ಸೆಳೆತಕ್ಕೊ,
ಅನುಮಾನಕ್ಕೊ ಅವಮಾನಕ್ಕೊ
ಸಿಲುಕಿ ನಲುಗಿ ಹೋಗಿವೆ
ಚಾಡಿ ಮಾತಿಗೆ ಕಿವಿಗೊಟ್ಟ ಅರಮನೆಗಳಂತೆ
ಅಂದು ಅರಮನೆಯ ಸಿಂಹಾಸನಕ್ಕೆ
ಹೃದಯವಿದ್ದಿದ್ದರೆ
ಕಿಟಕಿ, ಬಾಗಿಲುಗಳೆಲ್ಲ ತೆರೆದುಕೊಂಡಿದ್ದರೆ
ಅರಮನೆಯಲ್ಲಿ ಸ್ವಚ್ಛ ಗಾಳಿ
ಶುಭ್ರ ಬೆಳಕು ತುಂಬಿಕೊಂಡಿರುತ್ತಿತ್ತು
ಆದರೆ,
ಅರಮನೆಯ ಸಿಂಹಾಸನಕ್ಕಂದು
ತುಕ್ಕು ಹಿಡಿದೂ
ಕಿಟಕಿ, ಬಾಗಿಲು, ಗೋಡೆಳೆಲ್ಲ ಬಿರುಕು ಬಿಟ್ಟವು ಅದಕ್ಕಾಗಿ ಅಲ್ಲವೆ
ಅರಮನೆಗೊಂದು ಮಹಾಮನೆ ಹುಟ್ಟಿಕೊಂಡಿದ್ದು, ನೆತ್ತರ ಕೋಡಿ ಹರಿದ್ದದ್ದು,
ಕಲ್ಯಾಣದ ತುಂಬೆಲ್ಲ ಬೆಳಕು ಚೆಲ್ಲಿದ್ದು
ವಜ್ರ ವೈಡ್ಯೂರ್ಯಗಳಿಂದ ಮೆರೆದ ವೈಭವದ ಸಾಮ್ರಾಜ್ಯವಿಂದು
ಪಾಳು ಬಿದ್ದ ಅರಮನೆಗಳನ್ನು
ಕೋಟೆಗಳನ್ನು ಸುತ್ತುತ್ತ
ಕರುಳು ಹಿಂಡಿದ ಒಂದೊಂದು ಕತೆ
ಹೇಳುತ್ತ ವ್ಯಥೆ ಪಡುತ್ತಿದೆ
ನಮ್ಮವರೆ ನನಗೆ ಈ ಗತಿ ತಂದರಲ್ಲ
ಎಂದು.
ಹೌದು ಈ ಸಂಬಂಧಗಳೆ ಹಾಗೆ
ನಿನ್ನೆ ಇದ್ದದ್ದು ಇಂದು ಯಾರದೋ
ಇಂದು ಇದ್ದದ್ದು ನಾಳೆ ಇನ್ನ್ಯಾರದೊ
ಕೋಟೆ ಕೊತ್ತಲು ಅರಮನೆಗಳ
ಸಂಬಂಧ ಶಿಥಿಲುಗೊಂಡಿದೆ
ಗೋಡೆಗಳ ಬಿರುಕಿನಿಂದ
ಹಕ್ಕಿಗಳು ಕಟ್ಟಿದ
ಗೂಡುಗಳಲ್ಲಿನ ಸಂಬಂಧ
ಗಟ್ಡಿಗೊಂಡಿದೆ
ಬೆಚ್ಚನೆಯ ಪ್ರೀತಿಯಿಂದ
ರಚನೆ: ಸುರೇಶ ಮುದ್ದಾರ
----------------------------------------
----------------------------------------
ಕವಿತೆಯ ವಿಮರ್ಶೆ: ಡಾ. ವ್ಹಾಯ್.ಎಂ.ಯಾಕೊಳ್ಳಿ
ಇದು ಗೋಕಾ ಕವಿ ಗೆಳೆಯ ಪ್ರೊ ಸುರೇಶ್ ಮುದ್ದಾರ ಅವ್ರು ಬರೆದ ಕವಿತೆ .ಕವಿ ಎಷ್ಟು ಸೂಕ್ಷ್ಮವಾಗಿ ಮಾಯವಾಗುತ್ತಿರುವ ಮಾನವೀಯತೆ ಬಗ್ಗೆ ,ಇಲ್ಲವಾಗುತ್ತಿರುವ ಸ್ನೇಹದ ಬಗ್ಗೆ ವ್ಯವಹಾರಿಕವಾಗುತ್ತೀರುವ ಪ್ರೀತಿಯ ಬಗ್ಗೆ ಬರೆದಿದ್ದಾರೆ ನೋಡಿ. ಎಷ್ಟೊ ಸಲ ಹಣ ,ಅಧಿಕಾರ ಈ ಸಂಬಂಧಗಳನ್ನು ಮುರಿದು ಹಾಕುತ್ತವೆ. ಅರಸೊತ್ತಿಗೆಯ ಮಹಲುಗಳಲ್ಲಿ ನಿಜ ಪ್ರೀತಿ ಇಲ್ಲದೆ ಅರಮನೆಯ ಗೋಡೆಗಳು ಕೂಡ ಬಿರುಕು ಬಿಡುತ್ತದೆ.
ಎಷ್ಟೋ ವರ್ಷ ಒಟ್ಟಿಗಿದ್ದ
ಗಟ್ಟಿ ಸಂಬಂಧಗಳು
ಯಾವುದೋ ಬಿರುಗಾಳಿಗೆ ಸಿಕ್ಕು ನೆಲಕ್ಕುರುಳಿವೆ
ಯಾವುದೋ ಗತಕಾಲದ ವೈಭವದ ಸಾಮ್ರಾಜ್ಯದಂತೆ
ನಾಶವಾಗುತ್ತಿರುವ ಸಂಬಂಧಗಳನ್ನು ಕವಿ ಬಿದ್ದು ಹೋಗುತ್ತಿರುವ ಅರಮನೆಯ ಗೋಡೆಗಳಿಗೆ, ಸೋತ ರಾಜ ವೈಭವಕ್ಕೆ ಹೊಲಿಸುತ್ತಿದ್ದಾನೆ. ಗಟ್ಟಿ ಸಂಬಂಧಗಳು ಕೂಡ ಗತಕಾಲದ ರಾಜ ವೈಭವ ಮರಳಿ ನೆಲಕ್ಕುರುಳಿದಂತೆ ಬೀಳುತ್ತವೆ ಎನ್ನುತ್ತಾರೆ.
ಸ್ನೇಹವನ್ನು , ಸಂಬಂಧವನ್ನು ರಾಜ ಪ್ರಭುತ್ವದ ಜೊತೆಗೆ ತುಲನೆ ಮಾಡುತ್ತಾ ಕವಿತೆ ಸಾಗುತ್ತದೆ. ರಾಜವೈಭವವು ಅದೆಷ್ಟೋ ಸಲ ಚಾಡಿ ಮಾತಿನ ಕಾರಣಕ್ಕೆ ನಾಶದ ಹಾದಿ ಹಿಡಿಯುವಂತೆ ಸಂಬಂಧಗಳು ಕೂಡ ನಾಶವಾಗುತ್ತವೆ.
ಎಂದೂ ಶಿಥಿಲಗೊಳ್ಳುವುದಿಲ್ಲವೆಂಬ
ಸಂಬಂಧಗಳೂ
ಸ್ವಾರ್ಥಕ್ಕೊ, ಸೆಳೆತಕ್ಕೊ,
ಅನುಮಾನಕ್ಕೊ ಅವಮಾನಕ್ಕೊ
ಸಿಲುಕಿ ನಲುಗಿ ಹೋಗಿವೆ
ಚಾಡಿ ಮಾತಿಗೆ ಕಿವಿಗೊಟ್ಟ ಅರಮನೆಗಳಂತೆ
ಈ ಸಾಲುಗಳು ಮೇಲಿನ ನನ್ನ ಮಾತಿಗೆ ನಿಮಗೆ ಸಾಕ್ಷಿ ಒದಗಿಸುತ್ತವೆ. ಅವು ಎಂದೂ ಶಿಥಿಲವಾಗದ ಸಂಬಂಧಗಳೆಂದೋ ಅಥವಾ ಎಂದೂ ನಾಶವಾಗದ ರಾಜ ಮನೆತನಗಳೆಂದೋ ನಾವು ತಿಳಿದಿರುತ್ತೇವೆ. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿ ಸ್ವಾರ್ಥ,ಅನುಮಾನಗಳು ಮೂಡಿ ಅದರಲ್ಲಿ ಸಿಲುಕಿದ ಆ ಸ್ನೇಹ ನಲುಗಿಹೋಗುತ್ತದೆ ಚಾಡಿ ಮಾತಿಗೆ ಕಿವಿ ಕೊಟ್ಟ ಅರಮನೆಗಳಂತೆ ಎನ್ನುತ್ತಾನೆ ಕವಿ. ಆದರೆ ಈ ಅರಮನೆ ಯಾಗಲೀ, ಆ ಸ್ನೇಹ ಸಂಬಂಧವಾಗಲಿ ಹೀಗೆಯೇ ಇರಲಿಲ್ಲ. ಅಲ್ಲಿಯೂ ಸ್ನೇಹದ ಗಾಢತೆ, ರಾಜ್ಯವೈಭವದ ಘಂಟೆಗಳು ಇದ್ದವು. ಆ ಗತಕಾಲದ ನೆನಪುಗಳನ್ನೂ. ನೆನೆಯುತ್ತ , ಅದರಲ್ಲಿ ವಿಶಾಲ ಹೃದಯಿಗಳು ಇಲ್ಲವಾದ ಕಾರಣ ಅಲ್ಲಿ ನೆಮ್ಮದಿ ನಾಶವಾಗುತ್ತಾ ಬಂದಿತು. ಅದನ್ನೇ ಈ ಕೆಳಗಿನ ಸಾಲು ಹೇಳುತ್ತವೆ.
ಅಂದು ಅರಮನೆಯ ಸಿಂಹಾಸನಕ್ಕೆ
ಹೃದಯವಿದ್ದಿದ್ದರೆ
ಕಿಟಕಿ, ಬಾಗಿಲುಗಳೆಲ್ಲ ತೆರೆದುಕೊಂಡಿದ್ದರೆ
ಅರಮನೆಯಲ್ಲಿ ಸ್ವಚ್ಛ ಗಾಳಿ
ಶುಭ್ರ ಬೆಳಕು ತುಂಬಿಕೊಂಡಿರುತ್ತಿತ್ತು
ಒಂದು ವೇಳೆ ಅಲ್ಲಿಯೇ ವಿಶಾಲತೆ , ಎಲ್ಲವನ್ನೂ ತಾಳ್ಮೆಯಿಂದ ಪರೀಕ್ಷಿಸುವ ಗುಣ ಇದ್ದಿದ್ದರೆ ಆ ರಾಜ್ಯ , ಆ ಸಂಬಂಧ ಎರಡೂ ಉಳಿಯುತ್ತಿದ್ದವು. ಇಲ್ಲದ್ದರಿಂದ ಎರಡು ನಾಶವಾಗಿದೆ. ಅಂದರೆ ಕವಿ ಹೇಳ ಹೊಟಿರುವುದು ಮುಖ್ಯವಾಗಿ ಇದನ್ನೇ. ನೀವು ರಾಜ್ಯವನ್ನೇ ಕಟ್ಟಿರಿ, ಅಥವಾ ಒಂದು ಸ್ನೇಹವನ್ನು ಕಟ್ಟಿರಿ, ಅಲ್ಲಿ ಹೃದಯ ವೈಶಾಲ್ಯತೆ ಇರಲೇಬೇಕು ಎಂಬುದನ್ನು ಸಾರುತ್ತಾರೆ. ಒಂದು ವೇಳೆ ಈ ವಿಶಾಲ ಗುಣ ಇದ್ದಿದ್ದರೆ ರಾಜ್ಯವು ಓಡೆಯುತ್ತಿರಲಿಲ್ಲ. ಅಲ್ಲಿ ಶುಭ್ರ ಬೆಳಕು ಇರುತ್ತಿತ್ತು ಎಂಬುದು ಕವಿಯ ಹಾಗೆ ಎಲ್ಲರ ಅಭಿಪ್ರಾಯವೂ ಹೌದು.
ಕವಿತೆಯ ಮುಂದುವರೆದ ಭಾಗ ಇದೇ ಹೋಲಿಕೆಯನ್ನು ಇನ್ನಷ್ಟು ವಿಸ್ತರಿಸುತ್ತಾ ಸಾಗುತ್ತದೆ. ಇಂದು ಅರಸೊತ್ತಿಗೆಗೆ ಬಂದೊದಗಿದ ಸ್ಥಿತಿ ಇದು.
ವಜ್ರ ವೈಡ್ಯೂರ್ಯಗಳಿಂದ ಮೆರೆದ ವೈಭವದ ಸಾಮ್ರಾಜ್ಯವಿಂದು
ಪಾಳು ಬಿದ್ದ ಅರಮನೆಗಳನ್ನು
ಕೋಟೆಗಳನ್ನು ಸುತ್ತುತ್ತ
ಕರುಳು ಹಿಂಡಿದ ಒಂದೊಂದು ಕತೆ
ಹೇಳುತ್ತ ವ್ಯಥೆ ಪಡುತ್ತಿದೆ
ನಮ್ಮವರೆ ನನಗೆ ಈ ಗತಿ ತಂದರಲ್ಲ
ಅರಮನೆಯಂತೆಯೆ ಕವಿ ಕೂಡ ವಿಷಾದ ಪಡುತ್ತಾನೆ. ಅಂದು ವೈಜ್ರ ವೈಡ್ಯೂರ್ಯಗಳಿಂದ ಮೆರೆದ ರಾಜ್ಯವಿಂದು ಮಣ್ಣ ಸೇರಿರುತ್ತಿರುವದು, ಅಲ್ಲಿ ಕಲ್ಲಿಗೊಂದು ಕಥೆ ಹೇಳುತ್ತಿರುವುದು ಕಾಣಿಸುತ್ತದೆ. ಈ ರಾಜ್ಯ ಅದರ ವಿನಾಶಕ್ಕೆ ಯಾರ ಕಾರಣರೆಂದರೆ ನಮ್ಮವರೇ ಹಾಗಾಗಿ ಅರಮನೆಗೆ ಈ ಕಾರಣಕ್ಕೆ ವಿಷಾದವಿದೆ .
ಹೀಗೆ ಕವಿತೆ ಇಲ್ಲಿಗೆ ಮುಗಿದಿದ್ದರೆ ನಿರಾಶೆ ಮೂಡುತ್ತಿತ್ತು. ಆದರೆ ಆ ಅರಮನೆಯ ಪಳೆಯುಳಿಕೆಗಳ ನಡುವೆಯೇ ಅಲ್ಲಿ ಮತ್ತೆ ಸ್ನೇಹ , ಸಂಬಂಧ ಮೂಡುತ್ತಿರುವ ಸೂಚನೆ ಕಾದಿದೆ ಕೋಟೆ ಕೊತ್ತಲಗಳಲ್ಲಿ
. ಹಕ್ಕಿಗಳು ಕಟ್ಟಿದ
. ಗೂಡುಗಳಲ್ಲಿನ ಸಂಬಂಧ
ಗಟ್ಡಿಗೊಂಡಿದೆ
. ಬೆಚ್ಚನೆಯ ಪ್ರೀತಿಯಿಂದ
ಹೀಗೆ ಬೆಚ್ಚನೆಯ ಸಂಬಂಧ ,ಸ್ನೇಹ ಮೂಡುತ್ತಿರುವ , ಅದು ಹಕ್ಕಿಗಳು ಕಟ್ಟಿದ ಗೂಡಲ್ಲಿ ಎನ್ನುವದು ಅಚ್ಚರಿಯ ಸಂಗತಿಯಾಗಿದೆ. ಎಲ್ಲ ವಿನಾಶಗಳ ನಡುವೆಯೂ ಮತ್ತೆ ಮಾನವೀಯತೆ ಅರಳುವುದು ಗುಬ್ಬಿ ಗುಡಿನಲ್ಲಿಯೆ ಎನ್ನುವದು ಅರ್ಥಪೂರ್ಣವಾಗಿದೆ.
ಕವಿ ಸುರೇಶ ಮುದ್ದಾರ ಅವರ ಈ ಕವಿತೆ ಅರ್ಥಪೂರ್ಣ ಸಂವಾದಕ್ಕೆಳಸುತ್ತದೆ.
ಇಂಥ ಅರ್ಥಪೂರ್ಣ ಕವಿತೆ ಓದಿಸಿದ ಪ್ರೊ ಮುದ್ದಾರ ಅವರನ್ನು ಅಭಿನಂದಿಸುತ್ತೇನೆ.
ಡಾ. ವೈ.ಎಂ.ಯಾಕೊಳ್ಳಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ