ಅರಮನೆಯಿಂದ ಅರಿವಿನರಮನೆಗೆ...
ನಡುರಾತ್ರಿ ಅರಮನೆಯಲ್ಲಿ
ನೀರವ ಮೌನ
ಝಗಝಗಿಸುವ ದೀಪದ ಬೆಳಕಿನಲ್ಲಿ
ಹೃದಯ ತಲ್ಲಣ
ಎದೆಯ ಕಣ್ಣು ಮುಚ್ಚಿದ ವಿಲಾಸ
ಇಂದೇಕೆ ಹೀಗಾಗುತ್ತಿದೆ?
ಅರಮನೆಯ ವಿಲಾಸ ಬದುಕೆ
ಬೇಸರವೆನಿಸುತ್ತಿದೆ
ನಿನ್ನೆಯ ಆ ಚಿತ್ರಗಳು
ಕಣ್ಣ ಮುಂದೆ ಬಂದು ಕುಣಿಯುತ್ತಿವೆಯಲ್ಲ
ಆ ವೃದ್ಧ, ಆ ರುಗ್ಣ, ಆ ಶವಯಾತ್ರೆ
ನನ್ನನ್ನು ಆವರಿಸಿ ಕಾಡುತ್ತಿವೆ
ಈ ಅರಮನೆ
ವೃದ್ಧನನ್ನು ಮುಪ್ಪಿನಿಂದ
ರುಗ್ಣನನ್ನು ರೋಗದಿಂದ
ಸತ್ತವನನ್ನು ಸಾವಿನಿಂದ
ಪಾರು ಮಾಡಲು ಸಾಧ್ಯವಿಲ್ಲವೆ?
ಹಾಗಾದರೆ........
ಇದೆಂತಹ ಅರಮನೆ?
ಅರಮನೆಗೊಬ್ಬ ರಾಜ
ರಾಜನಿಗೋ
ಹತ್ತು ನೂರು ಸಾವಿರ ಲಕ್ಷ ಸೇವಕರು
ರಾಣಿಯರು ದಾಸಿಯರು
ಕೋಟೆ ಕೊತ್ತಲಗಳು
ಅಡಿಗಡಿಗೊಬ್ಬ ಕಾವಲುಗಾರ
ಆದರೂ ಇದೇನಿದು?
ನಿನ್ನೆಯವರು ಇಂದು
ಇಂದಿನವರು ನಾಳೆ ಇರುತ್ತಿಲ್ಲವಲ್ಲ
ಹಾಗಾದರೆ.......ಮುಂದೆ......
ಈ ಅರಮನೆಯೂ? ರಾಜನೂ? ಹಾಹಾಹಾ!
ಮತ್ತೇ..... ಇವಳು?
ಹಾಗೆ.......ಇವನು?
ಜೊತೆಗೆ....ನಾನೂ?
ಇದೇಕೆ ಹೀಗೆ? ಉತ್ತರವಿಲ್ಲವಿದಕೆ?
ಅರೆರೆ ಯಾರೋ ಗವಾಕ್ಷಿಯಿಂದ
ಕೂಗಿದಂತಾಯಿತಲ್ಲ, ಯಾರಿರಬಹುದು?
ಓಹೋ! ಮೂಡಣದ ತಾರೆ
ನನ್ನತ್ತ ದಿಟ್ಟಿ ನೆಟ್ಟು
ಕೈಬೀಸಿ ಕರೆಯುತ್ತಿದೆ
ಬಾ ಬಾ ನಿನಗೆ ಉತ್ತರಬೇಕಲ್ಲವೆ?
ಬಾ ಬೇಗ ಬಾ ಈಗಲೇ ಬಾ
ಅರಮನೆಯ ಹಂಗು ತೊರೆದು
ನಸುನಗುತ ಬಾ ಅನಂತ ದಾರಿಯಲಿ
ಆಹಾ! ಎಂಥ ಬೆಳದಿಂಗಳು
ಪೂರ್ಣಚಂದ್ರ ಇಂದೇಕೆ
ಅಷ್ಟು ಹೊಳೆಯುತ್ತಿದ್ದಾನೆ?
ಈ ಮಧುರ ಮೌನದೊಳಗೆ
ಆದರೆ .........
ಅರಮನೆಯ ಸಹವಾಸ ಸಾಕೆನಿಸುತ್ತಿದೆ ನನಗೆ
ಬೆಳದಿಂಗಳರಮನೆಯ
ದೀಪಗಳ ಮುಂದೆ
ರಾಜನರಮನೆಯ
ದೀಪಗಳು ಸೋತು ಹೋಗಿವೆ
ಮಸಣದಲ್ಲಿ ಉರಿಯುತ್ತಿರುವ
ಶವದ ಕಿಚ್ಚಿನಂತೆ
ಶೂನ್ಯ ಎಲ್ಲವೂ ಶೂನ್ಯ
ಹುಟ್ಟಿದ್ದು ಸಾಯುವುದೇತಕೆ?
ಪಥವಾವುದು ಜೀವನದರ್ಥಕೆ?
ಹುಡುಕಬೇಕು ಪಥವನು
ನಾನು ಹುಡುಕಬೇಕು
ಸ್ಥಿತ್ಯಂತರದ ಜೀವದವಸ್ಥೆಯನು
ಮೂಡಣದರಮನೆಯಿಂದ
ನೇಸರನನಾಗಮನ
ರಾಜನರಮನೆಯಿಂದ
ಅಭವ ನಿರ್ಗಮನ
ಕಳೆಯಿತು ಅರಮನೆಯ
ಭವದ ಕತ್ತಲೆಯು
ಬೆಳಗಿತು ಲೋಕದರಮನೆಯನ್ನು
ಅರಿವಿನ ಬೆಳಕು........
ರಚನೆ: ಸುರೇಶ ಮುದ್ದಾರ, ಕವಿ- ಕಥೆಗಾರ- ಚಿಂತಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ