ಗಡಿಯಾರ ಮತ್ತು ಕಾಲನ ಕರೆ
ಗಡಿಯಾರದಂಗಡಿಯಲ್ಲಿ
ಭಿನ್ನ ಭಿನ್ನ ಗಡಿಯಾರಗಳು
ಸಮಯವೂ ಭಿನ್ನ ವಿಭಿನ್ನ
ಭಿನ್ನತೆಯಿಲ್ಲದಿರುವುದು ಕಾಯಕದಲ್ಲಿ
ಗಡಿಯಾರದಿಂದ ಗಡಿಯಾರಕ್ಕೆ ಸಮಯದಲ್ಲಿ ವ್ಯತ್ಯಾಸವಿದ್ದರೂ
ಸಮಯ ಮಾತ್ತ ಚಲಿಸುತ್ತಿದೆ ನಿರಂತರವಾಗಿ
ಕಾಲನ ಸರದಿಯ ಕರೆಗಾಗಿ
ಗೂಡು ಕಟ್ಟುತ್ತಿವೆ ಹಕ್ಕಿಗಳು ಮರದಲ್ಲಿ
ಗೂಡಿನಿಂದ ಗೂಡಿಗೆ ವ್ಯತ್ಯಾಸವಿದ್ದರೂ
ಕಟ್ಟುವ ಕಾಯಕ ಮಾತ್ರ ಒಂದೆ
ಗೂಡು ಕಟ್ಟುವ ಹಕ್ಕಿ ಬೇರೆ ಗೂಡನ್ನು ನೋಡುವುದೇ ಇಲ್ಲ
ಅದರ ಚಿತ್ತವೆನಿದ್ದರೂ ತನ್ನ ಗೂಡಿನತ್ತ
ಹಕ್ಕಿಯ ಹಾರಾಟ ಗಡಿಯಾರದ ಸಮಯ
ಎಂದೂ ನಿಲ್ಲುವುದಿಲ್ಲ
ಹಕ್ಕಿಯ ಹಾರಾಟದಲ್ಲೆ ಅದರ ಬದುಕಿದೆ
ಗಡಿಯಾರದ ಸಮಯದಲ್ಲೇ
ಜಗದ ಬದುಕಿದೆ
ಜಗದ ಬದುಕಿನ ದಾರಿಯಲ್ಲಿ ತಿರುವುಗಳೆಷ್ಟೋ
ಆ ತಿರುವುಗಳ ಹೋಯ್ದಾಟದಲ್ಲಿ
ದಾಟಿ ಬಂದವರೆಷ್ಟೊ
ಎಲ್ಲವೂ ಕಾಲನ ಕಟ್ಟಳೆಗಳೆ
ಗಡಿಯಾರದ ಸಮಯದಂತೆ
ಯುಗಯುಗಗಳನಾಳಿದ
ಅರಸೊತ್ತಿಗೆ ಇಂದು ಇಲ್ಲ
ಅದರ ಸಮಯ ಎಂದೋ ಮುಗಿದಿದೆ
ಆದರೆ ಆ ಸಮಯವಿಂದು
ಸ್ಮೃತಿ ಪಟಲದಲ್ಲಿ ಅಚ್ಚೊತ್ತಿ ನಿಂತಿದೆ
ಆ,ಕಾಲ ಈ ಕಾಲ ಎಂದು ಗೊಣಗಾಡುವುದರಲ್ಲೆ
ಕಾಲ ಹರಣವಾಗುತ್ತಿದೆ
ಸಮಯ ಮಾತ್ರ ಚಲಿಸುತ್ತಿದೆ ನಿರಂತರ ಗಡಿಯಾರದಲ್ಲಿ
ಜಗದ ಆಟ ಕಾಲನ ಕರೆಯಲ್ಲಿ
ರಚನೆ: ಸುರೇಶ ಮುದ್ದಾರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ