ವರ್ಧನ ಸಂತತಿಯ ಮೊದಲ ಪ್ರಮುಖ ಅರಸ ಪ್ರಭಾಕರ ವರ್ಧನ. ಇವನ ಪೂರ್ವಿಕರು ಕೇವಲ ಮಹಾರಾಜ ಎಂಬ ಬಿರುದನ್ನು ಧರಿಸಿದ್ದರು. ಪ್ರಭಾಕರ ವರ್ಧನ ಮಹಾರಾಜಾಧಿ ರಾಜನೆಂದು ತನ್ನನ್ನು ಕರೆದುಕೊಂಡಿದ್ದಾನೆ. ಬಾಣಭಟ್ಟ ತನ್ನ ಕೃತಿ ಹರ್ಷಚರಿತೆಯಲ್ಲಿ ‘ಪ್ರತಾಪಶೀಲ’ ಎಂದು ಕರೆದಿದ್ದಾನೆ. ಈತನು ಜಿಂಕೆಯ ಹಿಂಡಿನೋಪಾದಿಯಲ್ಲಿದ್ದ ಹೂಣರಿಗೆ ಸಿಂಹಸ್ವರೂಪನಾಗಿದ್ದನೆಂದು ಗುಜರಾತ, ಮಾಳ್ವ ಮತ್ತು ಗಾಂಧಾರ ದೊರೆಗಳಿಗೆ ಭಯಂಕರ ಸ್ವರೂಪನಾಗಿದ್ದನೆಂದು ಹೇಳಿದ್ದಾನೆ. ಪ್ರಭಾಕರ ವರ್ಧನನಿಗೆ ರಾಜವರ್ಧನ, ಹರ್ಷವರ್ಧನ ಮತ್ತು ರಾಜಶ್ರೀ ಎಂಬ ಮಕ್ಕಳಿದ್ದರು. ರಾಜಶ್ರೀಯನ್ನು ಆಗಿನ ಇನ್ನೊಂದು ಪ್ರಮುಖ ರಾಜ್ಯವಾಗಿದ್ದ ಕನೌಜಿನ ಮೌಕರಿಯ ಅರಸನಾಗಿದ್ದ ಗೃಹವರ್ಮನಿಗೆ ಕೊಟ್ಟು ವೈವಾಹಿಕ ಸಂಬಂಧ ಬೆಳೆಸಲಾಗಿತ್ತು.
ಪ್ರಭಾಕರ ವರ್ಧನನ ಅಂತಿಮ ದಿನಗಳಲ್ಲಿ ಹೂಣರು ಮತ್ತೊಮ್ಮೆ ಭಾರತದ ಮೇಲೆ ದಾಳಿ ಮಾಡಿದರು. ಹೂನರನ್ನು ಹಿಮ್ಮೆಟ್ಟಿಸಲು ರಾಜವರ್ಧನನ್ನು ನಿಯುಕ್ತಿಗೊಳಿಸಲಾಗತ್ತು. ಈ ಯುದ್ಧ ನಡೆಯುತ್ತಿರುವಾಗಲೆ ಪ್ರಭಾಕರವರ್ಧನ ಮರಣಹೊಂದಿದನು. ಈ ವೇಳೆಗೆ ಉತ್ತರ ಭಾರತದ ಆಯಕಟ್ಟಿನ ಸ್ಥಳವಾಗಿದ್ದ ಕನೌಜಿನ ಮೇಲೆ ಹಿಡಿತ ಸಾಧಿಸಲು ಗೌಡ ದೇಶದ (ಬಂಗಾಳ) ದೊರೆ ಶಶಾಂಕ ಮತ್ತು ಮಾಳ್ವದ ದೊರೆ ದೇವಗುಪ್ತನು ಕನೂಜನ್ನು ಮುತ್ತಿದರು. ಈ ಯುದ್ಧದಲ್ಲಿ ಗೃಹವರ್ಮ ಮರಣಹೊಂದಿದನು. ಅವನ ಪತ್ನಿ ಮತ್ತು ಪ್ರಭಾಕರ ವರ್ಧನನ ಮಗಳು ರಾಜಶ್ರೀ ಬಂಧನಕ್ಕೊಳಗಾದಳು. ಇವಳನ್ನು ಬಂಧಮುಕ್ತ ಗೊಳಿಸಲು ಪ್ರಭಾಕರ ವರ್ಧನನ ಹಿರಿಯ ಮಗ ರಾಜವರ್ಧನ ಸೈನ್ಯ ಸಮೇತ ಕನೌಜಿಗೆ ಹೋದನು. ಅಲ್ಲಿ ಗೌಡದೇಶದ ಶಶಾಂಕನು ರಾಜವರ್ಧನನ್ನು ಮೋಸದಿಂದ ಕೊಲೆಗೈದನೆಂದು ತಿಳಿದುಬರುತ್ತದೆ. ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ಹರ್ಷವರ್ಧನ ಅಧಿಕಾರಕ್ಕೆ ಬಂದನು.
ಹರ್ಷವರ್ಧನ (ಕ್ರಿ.ಶ. ೬೦೬–೬೪೭)
ಸಂದಿಗ್ಧ ಸಮಯದಲ್ಲಿ ಅಧಿಕಾರಕ್ಕೆ ಬಂದ ಹರ್ಷವರ್ಧನ ತನ್ನ ರಾಜಧಾನಿಯನ್ನು ಸ್ಥಾನೇಶ್ವರದಿಂದ ಕನೌಜಿಗೆ ವರ್ಗಾಯಿಸಿಕೊಂಡನು. ಕನೌಜಿನ ಪ್ರಮುಖರು ಹಾಗೂ ತನ್ನ ಸಹೋದರಿ ರಾಜ್ಯಶ್ರೀ ಹರ್ಷನನ್ನು ಕನೌಜಿನ ಅದಿಪತ್ಯ ವಹಿಸುವಂತೆ ಕೇಳಿಕೊಂಡರೆಂದೂ, ಹರ್ಷವರ್ಧನ ಮೊದಲಿಗೆ ಅದನ್ನು ನಿರಾಕರಿಸಿದನೆಂದೂ ಬಾಣ ಮತ್ತು ಹ್ಯೊಯೆನ್‌ತ್ಸಾಂಗ್ ಇಬ್ಬರೂ ತಮ್ಮ ಬರವಣಿಗೆಯಲ್ಲಿ ತಿಳಿಸಿದ್ದಾರೆ. ಆಗ ತಾನೆ ಉತ್ತರ ಭಾರತದ ರಾಜಕೀಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕನೌಜ್‌ಹರ್ಷವರ್ಧನನು ಇಢೀ ಉತ್ತರ ಭಾರತಕ್ಕೆ ತನ್ನ ಆಳ್ವಿಕೆಯನ್ನು ವಿಸ್ತರಿಸಲು ಸಹಾಯಕವಾಯಿತು. ವ್ಯಾಪಾರ ವಾಣಿಜ್ಯದ ಕುಸಿತ, ಊಳಿಗಮಾನ್ಯ ಪದ್ಧತಿಯ ಪ್ರಾಬಲ್ಯಗಳಿಂದಾಗಿ ಪಾಟಲೀಪುತ್ರವನ್ನೊಳಗೊಂಡಂತೆ ಇಡೀ ಉತ್ತರ ಭಾರತದ ನಗರಗಳು ಅವನತಿಯತ್ತ ಸಾಗಿದ್ದಾಗ ಸೈನಿಕ ಚಟುವಟಿಕೆಗಳಿಗೆ ಆಯಕಟ್ಟಿನ ಜಾಗವಾಗಿದ್ದ ಕನೌಜ್ ಪ್ರವರ್ಧಮಾನಕ್ಕೆ ಬರುತ್ತಿತ್ತು.
ಹರ್ಷವರ್ಧನನ ಯುದ್ಧಗಳು
ಹರ್ಷವರ್ಧನ ಕನೌಜನ್ನು ಮೂಲ ನೆಲೆಯನ್ನಾಗಿ ಮಾಡಿಕೊಂಡು ಅನೇಕ ಯುದ್ಧಗಳನ್ನು ಕೈಗೊಂಡು ಇಡೀ ಉತ್ತರ ಭಾರತಕ್ಕೆ ತನ್ನ ರಾಜ್ಯವನ್ನು ವಿಸ್ತರಿಸುವಲ್ಲಿ ಯಶಸ್ವಿಯಾದನು. ಪ್ರಾದೇಶಿಕ ರಾಜ್ಯಗಳೇ ಪ್ರವರ್ಧಮಾನಕ್ಕೆ ಬರುತ್ತಿದ್ದಂತಹ ಕಲದಲ್ಲಿ ಹರ್ಷವರ್ಧನ ತನ್ನ ಆಡಳಿತವನ್ನು ವಿಸ್ತರಿಸುವಲ್ಲಿ ಯಶಸ್ವಿಯಾದುದು ಒಂದು ಮಹತ್ಸಾಧನೆಯೇ ಸರಿ. ಗೌಡ ದೇಶದ ದೊರೆ ಶಶಾಂಕ ಮತ್ತು ಮಾಳವರ ದೇವಗುಪ್ತ ಹರ್ಷನ ಮೊದಲ ಶತ್ರುಗಳಾಗಿದ್ದರು. ಇವರಿಬ್ಬರೂ ಗೃಹವರ್ಮ ಮತ್ತು ರಾಜವರ್ಧನನ ಕೊಲೆಗೆ ಕಾರಣರಾಗಿದ್ದರು, ಇವನನ್ನು ಎದುರಿಸುವ ಮುನ್ನ ಹರ್ಷವರ್ಧನ ಕಾಮರೂಪದ ಅರಸನಾಗದ್ದ ಭಾಸ್ಕರ ವರ್ಮನೊಂದಿಗೆ ಸ್ನೇಹ ಬೆಳೆಸಿದನು. ಇವರಿಬ್ಬರ ಸ್ನೇಹ ಬಹಳಕಾಲ ಮುಂದುವರಿದಿತ್ತು. ಭಾಸ್ಕರ ವರ್ಮ ಗೌಡದೇಶದ ಶಶಾಂಕನ ರಾಜ್ಯದ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದ್ದನು. ಮಾಳವ ಮತ್ತು ಮಗಧಗಳ ಅನಂತರದ ಗುಪ್ತ ಸಂತತಿಗೆ ಸೇರಿ ಮಾಧವ ಗುಪ್ತನ ಸ್ನೇಹವನ್ನು ಹರ್ಷವರ್ಧನ ಸಂಪಾದಿಸಿದನು. ಇವನ ಸಹಾಯದಿಂದ ರಾಜಶ್ರೀಯನ್ನು ಬಿಡಿಸಿ ತರುವಲ್ಲಿ ಹರ್ಷವರ್ಧನ ಯಶಸ್ವಯಾದನು. ನಂತರ ಗೌಡದೇಶದ ಅರಸ ಶಶಾಂಕನ ವಿರುದ್ದ ದಂಡೆತ್ತಿ ಹೊದನು. ಶಶಾಂಕನನ್ನು ಹರ್ಷವರ್ಧನ ಸೋಲಿಸಿದ್ದನೆಂದು ಕಲವು ದಾಖಲೆಗಳಿಂದ ತಿಳಿದುಬರುತ್ತದೆ. ಆದರೆ ಶಶಾಂಕನು ಮರಣ ಹೊಂದುವವರೆಗೂ (ಕ್ರಿಲಶ.೬೧೯)ಸ್ವತಂತ್ರ ಅರಸನಾಗಿಯೇ ಉಳಿದಿದ್ದನೆಂದು ಅವನ ನಂತರವೇ ಈ ರಾಜ್ಯವನ್ನು ಹರ್ಷವರ್ಧನ ಜಯಿಸಿದನೆಂದೂ ಆರ್.ಸಿ.ಮಜುಂದಾರ್ ತಿಳಿಸಿದ್ದಾರೆ.
ಹರ್ಷವರ್ಧನನು ದೇಶದ ನಾಲ್ಕು ಭಾಗಗಳ ರಾಜರನ್ನು ಸದೆಬಡಿದನೆಂದೂ ಚೀನೀ ಮೂಲದ ದಾಖಲೆಗಳು ತಿಳಿಸುತ್ತವೆ. ಆದರೆ ಅವನು ನಿರ್ದಿಷ್ಟವಾಗಿ ಯಾವ ಯುದ್ದಗಳನ್ನು ಮಾಡಿದವೆಂದು ಸ್ಪಷ್ಟಪಡಿಸಿಲ್ಲ. ಕ್ರಿ.ಶ. ೬೧೮ ರಿಂದ ೬೨೭ರವರೆಗಿನ ಅವಧಿಯಲ್ಲಿ ಭಾರತದಲ್ಲಿ ತೀವ್ರ ದಂಗೆಗಳಾಗುತ್ತಿದ್ದವೆಂದೂ ಚೀನೀಯರು ತಿಳಿಸಿದ್ದಾರೆ. ಬ್ರೋಚ್ ಪ್ರದೇಶದ ಗೂರ್ಜರ ಅರಸನೊಬ್ಬನ ಶಾಸನದಿಂದ ಹರ್ಷನಿಂದ ವಲ್ಲಬೀ ರಾಜನೊಬ್ಬನು ಸೋತು ಅವನಿಗೆ ಎರಡನೆ ದದ್ದನು ಆಶ್ರಯ ನೀಡಿದ ವಿಷಯವು ತಿಳಿಯುತ್ತದೆ. ಸುಮಾರು ಕ್ರಿ.ಶ. ೬೪೧ರಲ್ಲಿ ಹ್ಯೂಯೆನ್‌ತ್ಸಾಂಗ್ ವಲ್ಲಬೀ ನಗರಕ್ಕೆ ಭೀಟಿಕೊಟ್ಟಾಗ ವಲ್ಲಬಿಯ ಅರಸ ಧ್ಯೆವಭಟನು ಹರ್ಷನ ಪರ ಹಿತಾಶಕ್ತಿ ಹೊಂದಿದ್ದನೆಂಬ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಧ್ಯೆವಭಟನ ಮಗನಿಗೆ ಹರ್ಷನ ಮಗಳನ್ನು ಕೊಟ್ಟು ವೈವಾಹಿಕ ಸಂಬಂಧ ಬೆಳೆಸಲಾಗಿತ್ತೆಂದೂ ತಿಳಿದುಬರುತ್ತದೆ. ಸುಮಾರು ಕ್ರಿ.ಶ.೬೩೪ರ ವೇಳಗೆ ಹೆಚ್ಚು ಕಡಿಮೆ ಉತ್ತರ ಭಾರತವನ್ನು ತನ್ನ ಅಧಿಪತ್ಯಕ್ಕೊಳಪಡಿಸಿಕೊಂಡಿದ್ದ ಹರ್ಷವರ್ಧನನನ್ನು ‘ಉತ್ತರ ಪಥೇಶ್ವರ’ ಎಂದು ಕರೆಯುತ್ತಿದ್ದುದು ಏಹೊಳೆ ಶಾಸನದಿಂದ ದೃಢಪಡುತ್ತದೆ. ನಂತರ ನರ್ಮದಾನದಿಯನ್ನು ದಾಟಿ ದಕ್ಷಿಣಕ್ಕೂ ತನ್ನ ಆಳ್ವಕೆ ವಿಸ್ತರಿಸಲು ಪ್ರಯತ್ನಸಿದನು. ಆದರೆ ಚಾಲುಕ್ಯರ ಪ್ರಸಿದ್ದ ದೊರೆ ಎರಡನೇ ಪುಲಿಕೇಶಿ ನರ್ಮದಾನದಿ ತೀರದಲ್ಲಿ ಹರ್ಷವರ್ಧನನ್ನು ಸೋಲಿಸಿದನೆಂದು ಐಹೊಳೆ ಶಾಸನದಿಂದ ತಿಳಿದುಬರುತ್ತದೆ. ಪುಲಿಕೇಶಿ ಮರಣಹೊಂದಿದ ಮರುವರ್ಷವೇ ಹರ್ಷವರ್ಧನನು ನರ್ಮದಾ ನದಿಯನ್ನು ದಾಟಿ ಗಾಂಜಾಂವರೆಗೂ ಬಂದನು. ಹರ್ಷನು ತುಷಾರಶೈಲಕ್ಕೆ ದಂಡೆತ್ತಿ ಹೋಗಿ ಕಪ್ಪವನ್ನು ಸ್ವೀಕರಿಸಿದ ವಿಷಯವೂ ಕಾಶ್ಮೀರಕ್ಕೆ ಹೋಗಿ ಅಲ್ಲಿಂದ ದಂತ ಅವಶೇಷವನ್ನು ತಂದ ವಿಷಯ ಹಾಗೂ ಸಿಂಧ್ ಪ್ರಾಂತ್ಯಕ್ಕೆ ಹೋಗಿ ಅಲ್ಲಿನ ರಾಜನನ್ನು ಪದಚ್ಯುತಗೊಳಿಸಿದ ವಿಷಯವೂ ಸಾಹಿತ್ಯದಲ್ಲಿ ಉಲ್ಲೇಖಿತವಾಗಿದೆ. ಈ ಘಟನೆಗಳು ಹರ್ಷನ ಆಳ್ವಿಕೆಯ ಯಾವ ಕಾಲದಲ್ಲಿ ನಡೆದವೆಂದು ತಿಳಿದುಬರುವುದಿಲ್ಲ. ಹರ್ಷವರ್ಧನನ ಆಡಳಿತ ಕಾಶ್ಮೀರವನ್ನು ಹೊರತುಪಡಿಸಿ ಹಳಿದ ಉತ್ತರ ಭಾರತಕ್ಕೆ ವಿಸ್ತರಿಸಿತ್ತು. ದಕ್ಷಿಣದಲ್ಲಿ ಗಾಂಜಾಂವರೆಗೂ ಪೂರ್ವದಲ್ಲಿ ಕಾಮರೂಪದವರೆಗೂ ಪಶ್ಚಿಮದಲ್ಲಿ ಪಂಜಾಬ್‌ವರೆಗೂ ವಿಸ್ತರಿಸಿದ್ದಂತೆ ಕಂಡುಬರುತ್ತದೆ. ಗಡಿರಾಜ್ಯಗಳು ಸಹ ಅವನ ಸಾರ್ವ ಭೌಮತ್ವವನ್ನು ಮಾನ್ಯ ಮಾಡಿದ್ದವು.
ಹರ್ಷವಧನನು ತನ್ನ ಸಾಮ್ರಾಜ್ಯವನ್ನು ಗುಪ್ತರು ಆಳಿದ ರೀತಿಯಲ್ಲಿಯೇ ಆಳಿದನಾದರೂ ಅದು ಹೆಚ್ಚು ಸಾಮಂತಶಾಹಿ ಸ್ವರೂಪವನ್ನು ಪಡೆದಿತ್ತು. ಈ ಹರ್ಷನ ಬಳಿ ೧ಲಕ್ಷ ಕುದರೆ, ೬೦,೦೦೦ ಆನೆಗಳ್ನು ಹೊಂದಿದ್ದ ಪ್ರಬಲವಾದ ಸೈನ್ಯವಿತ್ತು. ಹ್ಯೊಯೆನ್‌ತ್ಸಾಂಗ್‌ಹರ್ಷನ ಆದಾಯವು ನಾಲ್ಕು ಪಾಲುಗಳಾಗಿ ವಿಂಗಡಿದಸಿದ್ದನು. ಒಂದು ಪಾಲು ರಾಜನ ಸ್ವಂತ ವೆಚ್ಚಕ್ಕೆ, ಒಂದು ಪಾಲು ವಿದ್ವಾಂಸರಿಗೆ, ಒಂದು ಪಾಲು ಅಧಿಕಾರಿಗಳು ಮತ್ತು ನೌಕರರಿಗೆ ಮತ್ತು ಕೊನೆಯ ಪಾಲು ಮತಧಾರ್ಮಿಕ ಉದ್ದೇಶಗಳಿಗೆ ಮೀಸಲಾಗಿತ್ತು ಅಧಿಕಾರಿಗಳಿಗೆ ಸಂಬಳವಾಗಿ ಮತ್ತು ಬಹುಮಾನವಾಗಿ ಭೂಮಿ ನೀಡುವ ಸಾಮಂತಶಾಹಿ ಪದ್ಧತಿಯು ಹರ್ಷನ ಕಾಲದಿಂದ ವ್ಯಾಪಕವಾಯಿತು. ಹೀಗಾಗಿ ಹರ್ಷವರ್ಧನನ ಕಾಲದಲ್ಲಿ ಹೊರಬಂದ ಹೆಚ್ಚು ನಾಣ್ಯಗಳು ದೊರೆತಿಲ್ಲ.
ಹ್ಯೊಯೆನ್ತ್ಸಾಂಗ್ನ ಕಥನ: ಚೀನೀ ಪ್ರವಾಸಿ ಹ್ಯೂಯನ್‌ತ್ಸಾಂಗ್‌ನ ಭಾರತ ಪ್ರವಾಸದ ಕಾರಣದಿಂದ ಹರ್ಷವರ್ಧನನ ಆಳ್ವಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕ್ರಿ.ಶ. ೬೨೯ರಲ್ಲಿ ಚೀನಾವನ್ನು ಬಿಟ್ಟು ಕ್ರಿ.ಶ. ೬೪೬ರಲ್ಲಿ ಪುನಃ ತನ್ನ ದೇಶಕ್ಕೆ ಹಿಂದಿರುಗಿದನು. ನಳಂದಾ ಬೌದ್ಧ ವಿಹಾರದಲ್ಲಿ ಅಧ್ಯಯನ ಮಾಡಿ ಭಾರತದಿಂದ ಬೌದ್ಧ ಗ್ರಂಥಗಳನ್ನು ಒಯ್ಯುವ ಸಲುವಾಗಿ ಬಂದಿದ್ದನು. ಭಾರದಲ್ಲಿದ್ದ ಹೆಚ್ಚಿನ ಕಾಲವನ್ನು ಹರ್ಷನ ಆಸ್ಥಾನದಲ್ಲಿ ಕಳೆದನು. ಇವನ ಪ್ರಭಾವಕ್ಕೆ ಒಳಗಾದ ಹರ್ಷವರ್ಧನ ಬೌದ್ಧ ಮತದ ಕಟ್ಟಾಬೆಂಬಲಿಗನಾಗಿ ಮಾರ್ಪಾಡಾದನು. ಹ್ಯೂಯನ್‌ತ್ಸಾಂಗ್ ಹರ್ಷನ ಆಸ್ಥಾನದ ಮತ್ತು ಆ ಕಾಲದ ಆರ್ಥಿಕ, ಸಾಮಾಜಿಕ ಮತ್ತು ಮತಧಾರ್ಮಿಕ ಪಂಥಗಳ ಮೇಲೆ ಮಹತ್ವದ ಬೆಳಕು ಚೆಲ್ಲಿದ್ದಾನೆ. ತನ್ನ ಬರವಣಿಗೆಯಲ್ಲಿ ಪಾಟಲೀಪುತ್ರ ಮತ್ತು ವೈಶಾಲಿ ಅವನತಿ ಹೊಂದುತ್ತಿದ್ದುದನ್ನೂ ಕನೌಜ್ ಮತ್ತು ಪ್ರಯಾಗಗಳು ಪ್ರಾಮುಖ್ಯತೆ ಗಳಿಸುತ್ತಿದ್ದುದನ್ನೂ ತಿಳಿಸಿದ್ದಾನೆ. ಶೂದ್ರರನ್ನು ಕೃಷಿಕರೆಂದು ಕರೆದಿರುವ ಹ್ಯೂಯೆನ್‌ತ್ಸಾಂಗ್ ಅಸ್ಪೃಶ್ಯತೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾನೆ.
ಹರ್ಷವರ್ಧನನ ಧಾರ್ಮಿಕ ನೀತಿ: ಹರ್ಷವರ್ಧನನು ಶೈವ ಧರ್ಮೀಯನಾಗಿದ್ದನು. ಹ್ಯೂಯೆನ್‌ತ್ಸಾಂಗ್‌ನ ಪ್ರಭಾವದಿಂದ ಬೌದ್ಧ ಮತದ ಬಗೆಗೆ ಆಸಕ್ತಿ ಬೆಳೆಸಿಕೊಂಡನು. ಮಹಾಯಾನ ಪಂಥದ ಸಿದ್ಧಾಂತಗಳನ್ನು ಪ್ರಚುರಪಡಿಸಲು ಧಾರ್ಮಿಕ ಸಮ್ಮೇಳನಗಳನ್ನೂ ನಡೆಸಿದ. ಆದರೆ ಅವನು ಬೌದ್ಧ ಮತಾವಲಂಬಿಯಾದುದರ ಕುರಿತು ಮಾಹಿತಿ ದೊರೆಯುವುದಿಲ್ಲ.
ಕನೌಜ್ ಧಾರ್ಮಿಕ ಸಮ್ಮೇಳನ: ಹರ್ಷವರ್ಧನನು ಕನೂಜ್ ಮತ್ತು ಪ್ರಯಾಗಗಳಲ್ಲಿ ಎರಡು ಧಾರ್ಮಿಕ ಸಮ್ಮೇಳನಗಳನ್ನು ನಡೆಸಿದನು. ಕನೌಜ್ ಸಮ್ಮೇಳಕ್ಕೆ ಹ್ಯೂಯೆನ್‌ತ್ಸಾಂಗ್ ಮುಖ್ಯ ಅತಿಥಿಯಾಗಿದ್ದ. ಕಾಮರೂಪದ ರಾಜಭಾಸ್ಕರ ವರ್ಮ ಮತ್ತು ವಿವಿಧ ದೇಶಗಳ ಇಪ್ಪತ್ತು ರಾಜರೂ ಮತ್ತು ಬೇರೆ ಬೇರೆ ಪಂಥಗಳ ಸನ್ಯಾಸಿಗಳೂ ಸಮ್ಮೇಳನಕ್ಕೆ ಬಂದಿದ್ದರು. ಸುಮಾರು ಸಾವಿರ ಜನರಿಗೆ ಆಶ್ರಯ ನೀಡುವ ಎರಡು ಚಪ್ಪರಗಳನ್ನು ನಿರ್ಮಿಸಲಾಗಿತ್ತು. ಒಂದು ಬೃಹತ್‌ಗೋಪುರ ಅದರಲ್ಲಿ ರಾಜನಷ್ಟು ಎತ್ತರವಿದ್ದ ಬುದ್ದನ ನಿಲುವು ಭಂಗಿಯ ಚಿನ್ನದ ಪ್ರತಿಮೆಯನ್ನು ಇಡಲಾಗಿತ್ತು. ಹರ್ಷವರ್ಧನನು ವಿಗ್ರಹವನ್ನು ಪೂಜಿಸಿ ಸಮಾರಂಭಕ್ಕೆ ಚಾಲನೆ ನೀಡಿದ್ದನು. ಭಾರಿ ಔತಣಕೂಟವೊಂದು ನಡೆಯಿತು. ನಂತರ ಸಮಾರಂಭ ಅರಂಭವಾಯಿತು.
ಔತಣಕೂಟದ ನಂತರ ಸಭೆ ಆರಂಭವಾಯಿತು. ಎಲ್ಲ ಧರ್ಮಗಳ ಸಂತರೂ ಸೇರಿದ್ದ ಸಭೆಯಲ್ಲಿ ಹ್ಯೂತೆನ್‌ತ್ಸಾಂಗ್ ಪ್ರಧಾನ ಭಾಷಣ ಮಾಡಿದನು. ತನ್ನ ಭಾಷಣದಲ್ಲಿ ಮಹಾಯಾನ ಬೌದ್ಧ ಮತದ ಉತ್ಕೃಷ್ಟತೆಯನ್ನು ಎತ್ತಿಹಿಡಿದು ಸಭಿಕರಲ್ಲಿ ಯಾರಾದರೂ ಮುಂದೆ ಬಂದು ತನ್ನ ವಾದವನ್ನು ಅಲ್ಲಗಳೆಯಬಹುದೆಂದು ಸವಾಲು ಹಾಕಿದನು. ಆದರೆ ಐದು ದಿನ ಕಳೆದರೂ ಯಾರು ಅವನ ಸವಾಲನ್ನು ಸ್ವೀಕರಿಸಲು ಮುಂದೆ ಬರಲಿಲ್ಲ. ಆದರೆ ಮಹಾಯಾನ ಪಂಥದ ಸೈದ್ಧಾಂತಿಕ ವಿರೋಧಿಗಳು ಹ್ಯೂಯೆನ್‌ತ್ಸಾಂಗ್‌ನ ಹತ್ಯೆಗೆ ಸಂಚು ನಡೆಸಿದರು. ಆಗ ಹರ್ಷವರ್ಧನನು ಹ್ಯೂಯೆನ್‌ತ್ಸಾಂಗ್‌ನ ರಕ್ಷಣೆಗೆ ಧಾವಿಸಿ ಅವನಿಗೆ ಯಾರಾದರೂ ತೊಂದರೆ ಮಾಡಿದಲ್ಲಿ ಅಂತಹವರ ಶಿರಚ್ಛೇದ ಮಾಡುವುದಾಗಿ ತಿಳಿಸಿದನು. ಇದರಿಂದ ಹತಾಶರಾದ ವಿರೋಧಿಗಳು ಸಮ್ಮೇಳನದ ಚಪ್ಪರಕ್ಕೆ ಬೆಂಕಿಯಿಟ್ಟರು. ಈ ಘಟನೆಗೆ ಕರಣರೆಂದು ಊಹಿಸಲಾದ ೫೦೦ ಜನ ಬ್ರಾಹ್ಮಣರಿಗೆ ದೇಶಾಂತರವಾಸದ ಶಿಕ್ಷೆ ವಿಧಿಸಲಾಯಿತು. ಕೆಲವರ ಶಿರಚ್ಛೇದವೂ ಆಯಿತು. ೨೩ ದಿನಗಳ ಕಾಲ ನಡೆದ ಈ ಸಮ್ಮೇಳನವು ಈ ರೀತಿ ಗೊಂದಲದಲ್ಲಿ ಮುಕ್ತಾಯವಾಯಿತೆಂದು ತಿಳಿದುಬರುತ್ತದೆ.
ಪ್ರಯಾಗ ಸಮ್ಮೇಳನ: ಪ್ರಯಾಗದಲ್ಲಿ ಜರುಗಿದ ಧಾರ್ಮಿಕ ಸಮ್ಮೇಳನವನ್ನು ಮಹಾಮೋಕ್ಷ ಪರಿಷತ್ತು ಎಂದು ಕರೆಯಲಾಗಿದೆ. ಗಂಗಾ ಮತ್ತು ಯಮುನಾ ನದಿಗಳ ಸಮಾಗಮ ಸ್ಥಳವಾದ ಪ್ರಯಾಗದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಮಾವೇಶ ನಡೆಯುತ್ತಿತ್ತು. ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ಈ ಸಮ್ಮೇಳನವನ್ನು ಹರ್ಷವರ್ಧನನು ಹ್ಯೂಯೆನ್‌ತ್ಸಾಂಗ್‌ನ ಉಪಸ್ಥಿತಿಯಲ್ಲಿ ಹೆಚ್ಚು ವಿಜೃಂಭಣೆಯಿಂದ ಆಚರಿಸಿದನು. ಈ ಸಮ್ಮೇಳನಕ್ಕೂ ಸಹ ಎಲ್ಲಾ ರಾಜರು ಸಾಮಂತರು ಮಂತ್ರಿಗಳು ಹಾಗೂ ಎಲ್ಲಾ ಧರ್ಮಗಳ ಸಂತರನ್ನೂ ಆಹ್ವಾನಿಸಲಾಗಿತ್ತು. ಒಂದು ಲಕ್ಷ ಜನಕ್ಕೆ ಸ್ಥಳಾವಕಾಶ ಕಲ್ಪಿಸುವಂತಹ ಚಪ್ಪರವನ್ನು ನಿರ್ಮಿಸಲಾಗಿತ್ತು. ಇಲ್ಲಿಯೂ ಒಂದು ಬುದ್ದನ ಪ್ರತಿಮೆಯನ್ನು ಪೂಜಿಸಲಾಯಿತು. ಅದೇ ರೀತಿ ಎರಡನೆಯ ದಿನ ಶಿವನನ್ನು, ಮೂರನೆಯ ದಿನ ಆದಿತ್ಯನನ್ನು (ಸೂರ್ಯ)ಪೂಜಿಸಲಾಯಿತು. ಹ್ಯೂಯೆನ್‌ತ್ಸಾಂಗ್‌ನ ಪ್ರವಚನವೂ ಜರುಗಿತು. ಸುಮಾರು ೭೫ ದಿನ ನಡೆದ ಈ ಸಮ್ಮೇಳನದ ಕೊನೆಯಲ್ಲಿ ಹರ್ಷನು ಅಪಾರ ದಾನ ಮಾಡಿದನು. ತನ್ನ ಮೈಮೇಲಿದ್ದ ಬಟ್ಟೆಯೊಂದನ್ನುಳಿದು ಸಕಲವನ್ನೂ ದಾನ ಮಾಡಿದನೆಂದು ಹ್ಯೂಯೆನ್‌ತ್ಸಾಂಗ್ ಹರ್ಷನನ್ನು ಬಹಳವಾಗಿ ಪ್ರಶಂಸಿದ್ದಾನೆ. ಸರ್ವಧರ್ಮ ಸಮನ್ವಯತೆಯನ್ನು ಸೂಚಿಸುವಂತಿದ್ದ ಈ ಸಮ್ಮೇಳನವನ್ನು ನೋಡಿದ ಹ್ಯೂಯೆನ್‌ತ್ಸಾಂಗ್ ಹರ್ಷನ ಹೃದಯ ವೈಶಾಲ್ಯತೆಯನ್ನು ಕೊಂಡಾಡಿದ್ದಾನೆ.
ನಳಂದಾ ಪ್ರಬೌದ್ಧ ವಿಹಾರ (ವಿಶ್ವವಿದ್ಯಾಲಯ): ಪ್ರಾಚೀನ ಭಾರತದ ಪ್ರಸಿದ್ಧ ವಿದ್ಯಾ ಕೆಂದ್ರಗಳಲ್ಲೊಂದಾದ ನಳಂದವು ಹರ್ಷವರ್ಧನನ ಆಳ್ವಿಕೆಯ ಕಾಲದಲ್ಲಿ ಅವನು ಕೊಟ್ಟ ಪ್ರೋತ್ಸಾಹದಿಂದಾಗಿ ಹೆಚ್ಚು ಪ್ರಾಮುಖ್ಯತೆ ಗಳಿಸಿತ್ತು. ದೇಶ ವಿದೇಶಗಳಿಂದ ಬಂದ ೧೦,೦೦೦ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರಂದು ಹ್ಯೊಯೆನ್‌ತ್ಸಾಂಗ್ ತಿಳಿಸಿದ್ದಾನೆ. ಇಲ್ಲಿ ಪ್ರವೇಶ ಪಡೆಯುವುದು ಅತ್ಯಂತ ಕಠಿಣವಾಗಿತ್ತೆಂದೂ ‘ದ್ವಾರಪಾಲ’ ಎಂಬ ಪಂಡಿತರು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪಾಸಾದವರಿಗೆ ಮಾತ್ರ ಪ್ರವೇಶ ದೊರೆಯುತ್ತಿತ್ತೆಂದು ಹ್ಯೂಯೆನ್‌ತ್ಸಾಂಗ್ ತಿಳಿಸಿದ್ದಾನೆ. ೧೫೦೦ ಬೋಧಕರೂ ಇದ್ದ ಈ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಉಚಿತ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ರಾಜಮಹಾರಾಜರು ಕೊಟ್ಟ ದಾನದತ್ತಿಗಳಿಂದ ವೆಚ್ಚವನ್ನು ನಿರ್ವಹಿಸಲಾಗುತ್ತಿತ್ತು. ಹರ್ಷವರ್ಧನ ನಳಂದ ವಿಹಾರಕ್ಕೆ ೧೦೦ ಹಳ್ಳಿಗಳ ಆದಾಯವನ್ನು ಬಿಟ್ಟುಕೊಟ್ಟಿದ್ದನು, ಇತ್ಸಿಂಗ್ ೨೦೦ ಹಳ್ಳಿಗಳು ಎಂದಿದ್ದಾನೆ. ಮತ್ತು ೩೦೦೦ ವಿದ್ಯಾರ್ಥಿಗಳಿದ್ದರೆಂದು ತಿಳಿಸಿದ್ದಾನೆ. ನಳಂದದಲ್ಲಿ ನಡೆದಿರುವ ಉತ್ಖನನಗಳಿಂದ ಅಲ್ಲಿದ್ದ ಕಟ್ಟಡಗಳ ಸಾಮರ್ಥ್ಯವನ್ನು ಪರಿಶೀಲಿಸಿದರೆ, ಎಲ್ಲಾ ಕಟ್ಟಡಗಳ ಒಟ್ಟು ಸಾಮರ್ಥ್ಯ ೧೦,೦೦೦ ವಿದ್ಯಾರ್ಥಿಗಳಿಗೆ ಆಶ್ರಯಕೊಟ್ಟಿತೆಂಬುದಕ್ಕೆ ಪುಷ್ಟಿ ನೀಡುವುದಿಲ್ಲ. ಕ್ರಿ.ಶ. ಐದನೇ ಶತಮಾನದಿಂದ ಸುಮಾರು ೭೦೦ ವರ್ಷ ಅಸ್ತಿತ್ವದಲ್ಲಿದ್ದ ಈ ವಿದ್ಯಾಲಯ ಇತ್ಸಿಂಗ್ ಹೇಳಿರುವಂತೆ ೩೦೦೦ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿತ್ತೆಂಬುದು ಹೆಚ್ಚು ನಂಬಲರ್ಹವಾಗಿದೆ. ದಿಙ್‌ನಾಗ, ಸ್ಥಿರಮತಿ, ಧರ್ಮಪಾಲ ಮತ್ತು ಶೀಲಭದ್ರ ಮುಂತಾದ ಪ್ರಸಿದ್ಧ ವಿದ್ವಾಂಸರು ಇಲ್ಲಿದ್ದರು. ಸುಸಜ್ಜಿತವಾದ ಗ್ರಂಥಾಲಯವೂ ಇದ್ದು ಅಮೂಲ್ಯ ಪುಸ್ತಕ ಭಂಡಾರವನ್ನು ಹೊಂದಿತ್ತೆಂದು ತಿಳಿದುಬರುತ್ತದೆ.
ಹರ್ಷವರ್ಧನನು ಸಾಹಿತ್ಯ ಕಲೆಗಳ ಪೋಷಕನಾಗಿದ್ದನು. ಸ್ವತಃ ಸಾಹಿತಿಯೂ ಆಗಿದ್ದು ವಿದ್ವಾಂಸರನ್ನು, ಕವಿಗಳನ್ನು ಗೌರವಾದರಗಳಿಂದ ಕಾಣುತ್ತಿದ್ದನು. ಹರ್ಷವರ್ಧನನು ಪ್ರಿಯದರ್ಶಿಕಾ, ರತ್ನಾವಳಿ ಮತ್ತು ನಾಗಾನಂದ ಎಂಬ ಮೂರು ನಾಟಕಗಳನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಬಾಣನು ಅವನಲ್ಲಿ ಉತ್ತಮ ಕಾವ್ಯ ಪ್ರತಿಭೆಯನ್ನು ಗುರುತಿಸಿದ್ದಾನೆ ಅನಂತರದ ಕೆಲವು ಲೇಖಕರು ಹರ್ಷನನ್ನು ಸಾಹಿತ್ಯ ಸಾಮ್ರಾಟನೆಂದೂ ಕರೆದಿದ್ದಾರೆ. ಆದರೆ ಹರ್ಷವರ್ಧನನೇ ಮೇಲಿನ ಕೃತಿಗಳನ್ನು ರಚಿಸಿದನೆಂಬುದನ್ನು ಹಲವರು ಪ್ರಶ್ನಿಸಿದ್ದಾರೆ. ಅವುಗಳನ್ನು ಹಣದ ಆಮಿಷದಿಂದ ದಾವಕನೆಂಬ ವ್ಯಕ್ತಿಯು ಹರ್ಷವರ್ಧನನ ಹೆಸರಿನಲ್ಲಿ ಬರೆದನೆಂದು ಹೇಳಲಾಗಿದೆ. ಪ್ರಾಚೀನ ಕಾಲದಲ್ಲಿ ರಾಜರು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಲು ಸಕಲ ವಿದ್ಯಾಪಂಡಿತರೆಂದು ತೋರಿಸಿಕೊಳ್ಳಲು ಬಯಸುತ್ತಿದ್ದರು. ಗುಪ್ತರ ಕಾಲದಿಂದಲೇ ಇಂತಹ ಒಂದು ಪರಂಪರೆ ಬೆಳೆದಿದ್ದು ಕಂಡುಬರುತ್ತದೆ. ಬಾಣಭಟ್ಟನು ಹರ್ಷನ ಆಸ್ಥಾನದಲ್ಲಿದ್ಧ ಪ್ರಸಿದ್ಧ ಸಾಹಿತಿಯಾಗಿದ್ದು ತನ್ನ ಆಶ್ರಯದಾತನನ್ನು ಕುರಿತು ಹರ್ಷಚರಿತೆ ಎಂಬ ಕೃತಿಯನ್ನು ರಚಿಸಿದ್ದು ಇದರಲ್ಲಿ ಹರ್ಷನನ್ನು ಹಾಡಿಹೊಗಳಿದ್ದಾನೆ. ಇದು ಆಕಾಲದಲ್ಲಿ ಕಂಡುಬರು ಸಾಮಾನ್ಯ ಅಂಶ, ಮಯೂರ, ಸಿದ್ಧಸೇನ, ಸುದತ್ತ, ಮಾತಂಗ, ದಿನಾಕರ ಆ ಕಾಲದ ಇತರ ಪ್ರಮುಖ ಸಾಹಿತಿಗಳು.
ಹರ್ಷವರ್ಧನನ ನಂತರ ಬಹಳ ಬೇಗ ವರ್ಧನ ಆಳ್ವಿಕೆ ಕೊನೆಗೊಂಡಿತು. ವ್ಯಾಪಾರದ ಕುಸಿತ, ಸಾಮಂತ ಪದ್ಧತಿ, ಆಡಳಿತ ವಿಕೇಂದ್ರೀಕರಣಗೊಳ್ಳುತ್ತಿದ್ದ ಕಾಲದಲ್ಲಿ ಇಡೀ ಉತ್ತರ ಭಾರತಕ್ಕೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದು ಹರ್ಷವರ್ಧನನ ಪ್ರಮುಖ ಸಾಧನೆ. ಕನೌಜನ್ನು ರಾಜಧಾನಿಯನ್ನಾಗಿ ಮಾಡಿಕೊಂಡದ್ದು ಹರ್ಷವರ್ಧನ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸಿತು. ಗಂಗಾ, ಯಮುನಾ ನದಿಗಳ ನಟ್ಟನಡುವೆ ಇರುವ ಕನೌಜ್ ಸಾಕಷ್ಟು ಎತ್ತರದ ಪ್ರದೇಶವಾಗಿದ್ದು ಆ ಕಾಲಕ್ಕೆ ಉತ್ತಮ ಕೋಟೆ ಕೂತ್ತಲಗಳನ್ನು ಹೊಂದಿತ್ತು. ಹ್ಯೂಯೆನ್‌ತ್ಸಾಂಗ್‌ನ ಭಾರತ ಭೇಟಿಯ ಕಾರಣಕ್ಕಾಗಿ ಹರ್ಷ ಆಳ್ವಿಕೆ ಇನ್ನಷ್ಟು ಪ್ರಾಮುಖ್ಯತೆ ಪಡೆಯಿತು.
ಹರ್ಷವರ್ಧನನ ನಂತರ ದೆಹಲಿ ಸುಲ್ತಾನರ ಆಳ್ವಿಕೆ ಆರಂಭವಾಗುವವರೆಗೆ ಪುನಃ ಇಡೀ ಉತ್ತರ ಭಾರತ ಸಣ್ಣ ಸಣ್ಣ ರಾಜ್ಯಗಳಾಗಿ ಹಂಚಿಹೋಯಿತು. ಇವರಲ್ಲಿ ಗೂರ್ಜರ ಪ್ರತೀಹಾರರು, ಪಾಲರು, ಪಾರಮಾರರು, ಸೋಳಾಂಕಿಗಳು, ಚಾಂದೇಲರು, ಚಾಹಮಾಣರು, ಗಹಡ್ವಾಲರು, ಮುಂತಾದವರು ಬರುತ್ತಾರೆ. ದಕ್ಷಿಣ ಭಾರತದಲ್ಲಿ ಕದಂಬರು, ಗಂಗರು, ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಹೊಯ್ಸಳರು, ಚೋಳರು, ಕಾಕತೀಯರು, ಯಾದವರು ಮುಂತಾದ ರಾಜಮನೆತನಗಳಲ್ಲದೆ ಅನೇಕ ಸಣ್ಣ ಪುಟ್ಟ ಪ್ರಾದೇಶಿಕ ಮನೆತನಗಳೂ ಈ ಅವಧಿಯಲ್ಲಿ ರಾಜ್ಯಭಾರ ನಡೆಸಿದವು. ಇವರೆಲ್ಲರ ಇತಿಹಾಸಗಳೂ ಪ್ರತ್ಯೇಕ ಅಧ್ಯಯನ ಕ್ಕೊಳಪಡಿಸುವಷ್ಟು ಮಹತ್ವಪೂರ್ಣವಾಗಿವೆ. ಆದರೆ ಇವುಗಳನ್ನು ರಾಜ್ಯ ವ್ಯವಸ್ಥೆಗಳ ತಾರ್ಕಿಕತೆಯ ಹಿನ್ನೆಲೆಯಲ್ಲಿ ಅಭ್ಯಾಸ ಮಾಡುವಾಗ ರಾಜ್ಯ ವ್ಯವಸ್ಥೆಗೆ ಸಂಬಂಧಪಟ್ಟ ಕೆಲವು ಸಾಮಾನ್ಯ ಅಂಶಗಳು ಕಂಡುಬರುತ್ತವೆ. ಅಂತಹ ರಾಜ್ಯ ರಚನೆಯ ಕುರಿತ ಸೈದ್ಧಾಂತಿಕ ಮಾದರಿಗಳನ್ನು ವಿಶ್ಲೇಷಿಸುವ ಕುರಿತು ವಿಭಿನ್ನ .
ಕೃಪೆ: ಕಣಜ.ಕಾಂ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ