ಮಲ್ಲಿಕಾರ್ಜುನ ಮಾಸ್ತರ ಮುದಕವಿ: ಗಂಗಾಧರಯ್ಯ ಅವರ ಬರಹ
ಕಳೆದ ವಾರ ಗೆಳೆಯ ದಿಲಾವರನ ತಮ್ಮನ ಮದುವೆಯ ನೆಪದಲ್ಲಿ ಗೆಳೆಯರೊಂದಿಗೆ ಲೋಕಾಪುರಕ್ಕೆ ಹೋಗಿದ್ದೆ. ಒಂದು ಸಾಂಸ್ಕೃತಿಕ ಆಚರಣೆಯಂತೆ ನಡೆದ ಮದುವೆಯ ಮೊದಲ ದಿನದ ಸಂಜೆ ‘ಶ್ರೀ ಕೃಷ್ಣ ಪಾರಿಜಾತ’ ಸಣ್ಣಾಟದ ಹಾಗೂ ಎರಡನೆಯ ದಿನದ ಸಂಜೆ ರವೀಂದ್ರ ಸೋರಗಾಂವಿಯವರ ಹಿಂದೂಸ್ಥಾನಿ ಸಂಗೀತದ ಸಂಭ್ರಮವಿತ್ತು. ಹಠಮಾರಿ ಸತ್ಯಭಾಮೆಯ ಗರ್ವಭಂಗ ಹರಣದ ವಸ್ತುವುಳ್ಳ, ಭಾವಪ್ರಧಾನವೂ, ಸಂಗೀತ ಪ್ರಧಾನವೂ ಆಗಿದ್ದ ಈ ‘ಪಾರಿಜಾತ’ ಸಣ್ಣಾಟದ ಪಾತ್ರಧಾರಿಗಳು, ಅವರುಗಳ ತನ್ಮಯತೆ, ಚುರುಕುತನಕ್ಕೆ ನಾನು ಬೆರಗಾಗಿ ಹೋಗಿದ್ದೆ. ಅಪ್ಪಟ ಜಾನಪದ ಮನಸ್ಸುಗಳ ಸ್ಮೃತಿಯಿಂದ ಪುಟಿಯುವ, ಬಹುಮಟ್ಟಿನ ಸಣ್ಣಾಟಗಳಂತೆ ಹಾಸ್ಯಕ್ಕೇ ಒತ್ತು ಕೊಡದೆ, ಮಿತಿಯಾದ ಹಾಸ್ಯದ ಮಿಳಿತದೊಂದಿಗೆ ಮುಖ್ಯ ಕಥೆಯ ನಡಿಗೆಗೇ ಹೆಚ್ಚು ಒತ್ತು ಕೊಟ್ಟಿದ್ದ ‘ಪಾರಿಜಾತ’ ನಿಜಕ್ಕೂ ಸೊಗಸಾಗಿತ್ತು.
ಇಂಥದ್ದೊಂದು ಸಂಘ ಕಟ್ಟಿಕೊಂಡು, ಅದನ್ನೊಂದು ಕುಟುಂಬದಂತೆ ಪೋಷಿಸಿಕೊಂಡು ಸದ್ಯದ ವಿದ್ಯುನ್ಮಾನ ಮೀಡಿಯಾಗಳ ಭರ್ಜರಿ ದಾಂಧಲೆಯ ನಡುವೆಯೂ ಅದರ ಕಸುವನ್ನು ಕಾಪಾಡಿಕೊಂಡು ಬಂದಿರುವವರು ದಾದನಟ್ಟಿಯ ಮಲ್ಲಿಕಾರ್ಜುನ ಮಾಸ್ತರ ಮುದಕವಿ. ೧೯೬೮ರಲ್ಲಿ ಪ್ರಾರಂಭವಾದ ಈ ‘ಶ್ರೀ ಕೃಷ್ಣ ಪಾರಿಜಾತ ಮಂಡಳಿ’ ನಲವತ್ತು ವರ್ಷಕ್ಕೂ ಮಿಗಿಲಾಗಿ ನಾಡಿನ ವಿವಿಧೆಡೆಯಲ್ಲಿ ಆಡಿರುವ ಸಣ್ಣಾಟದ ಹಿಂದೆ ದೇಸಿ ಸಂಸ್ಕೃತಿಯೊಂದು ನಡೆದುಕೊಂಡು ಬಂದ ಬಗೆ ಹಾಗೂ ಅದರ ಉಳಿವಿಗಾಗಿ ಮಲ್ಲಿಕಾರ್ಜುನ ಮಾಸ್ತರು ನಡೆಸಿದ ಹೋರಾಟದ ಬದುಕಿದೆ.
೧೯೪೭ರಲ್ಲಿ ಹುಟ್ಟಿದ ಮಲ್ಲಿಕಾರ್ಜುನ ಮಾಸ್ತರ ಮುದಕವಿ ಅವರದು ಮುಧೋಳ ತಾಲ್ಲೂಕಿನ ದಾದನಟ್ಟಿ. ಲೋಕಾಪುರದಿಂದ ಏಳೆಂಟು ಕಿ.ಮೀ. ದೂರದಲ್ಲಿರುವ, ಕೃಷಿ ಬದುಕನ್ನೇ ನಂಬಿರುವ ಇದು ಒಂದು ಪುಟ್ಟ ಹಳ್ಳಿ. ಈ ಹಳ್ಳಿಗೂ ಪಾರಿಜಾತ ಸಣ್ಣಾಟಕ್ಕೂ ತುಂಬಾ ನಂಟು. ಇಲ್ಲಿ ತುಂಬಾ ಹಿಂದಿನಿಂದಲೂ ಹಬ್ಬ ಹರಿದಿನ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಸಣ್ಣಾಟ ನಡೆಯುತ್ತಿತ್ತಂತೆ. ಆದರೆ ಜಾತ್ರೆ, ಹಬ್ಬ ಮುಂತಾದ ಹೊತ್ತಿನಲ್ಲಿ ಮಾತ್ರ ಜೀವಂತವಾಗಿರುತ್ತಿದ್ದ, ಊರೆಲ್ಲಾ ಒಂದಾಗಿ ಆಡಿ ಸಂಭ್ರಮಿಸುತ್ತಿದ್ದ, ಈ ಊರಿನ ಜನರು ವರ್ಷದ ಇತರೆ ದಿನಗಳಲ್ಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ನಿತ್ಯದ ಕೃಷಿ ಬದುಕಿನಲ್ಲಿ ತೊಡಗಿಕೊಳ್ಳುತ್ತಿದ್ದರಂತೆ. ಹೀಗೆ ಆಗಾಗ ತೇಲುತ್ತಾ, ಹಳ್ಳಿಯಲ್ಲಿ ಜೀವಂತವಾಗಿದ್ದ ಇಂಥ ದೇಸೀ ಕಲೆಯೊಂದು ಮಲ್ಲಿಕಾರ್ಜುನ ಮಾಸ್ತರ ಮನಸ್ಸಿನಲ್ಲಿ ಇನ್ನಿಲ್ಲದಂತೆ ಕೂತು, ಪ್ರಾಯದಿಂದಲೇ ಸಣ್ಣಾಟವನ್ನೇ ಒಂದು ವೃತ್ತಿಯನ್ನಾಗಿಸಿಕೊಳ್ಳುವಷ್ಟರ ಮಟ್ಟಿಗೆ ಸೆಳೆದುಬಿಟ್ಟಿತ್ತು. ಇದಕ್ಕೆ ಇವರು ಚಿಕ್ಕವರಾಗಿದ್ದಾಗ ನೋಡುತ್ತಿದ್ದ ಸಣ್ಣಾಟದ ತಾಲೀಮು ಕಾರಣವಾಗಿತ್ತು.
ಆಗ ಈಗಿರುವಂತೆಯೇ ಇವರದೊಂದು ಕಿರಾಣಿ ಅಂಗಡಿ ಇತ್ತಂತೆ. ಬಿಡುವಿನ ವೇಳೆಯಲ್ಲಿ ಇವರು ಆ ಅಂಗಡಿಯಲ್ಲಿ ಕೂರುತ್ತಿದ್ದರಂತೆ. ಅಂಗಡಿಯ ಪಕ್ಕದಲ್ಲೇ ಇದ್ದ ಮನೆಯೊಂದರಲ್ಲಿ ಸಣ್ಣಾಟದ ತಾಲೀಮು ನಡೆಯುತ್ತಿತ್ತಂತೆ. ಅಂಗಡಿಯ ವ್ಯಾಪಾರವನ್ನು ಮಾಡಿಕೊಂಡೇ ತಾಲೀಮನ್ನೂ ಗಮನಿಸತೊಡಗಿದ ಚಿಕ್ಕ ಹುಡುಗನ ಮನಸ್ಸನ್ನು ಅದು ಪೂರಾ ಆವರಿಸಿಕೊಂಡು ಬಿಟ್ಟಿದೆ. ಅದೇ ರೀತಿ ಆ ಆಟ ಪೂರಾ ಬಾಯಿ ಪಾಠವಾಗಿ ಹೋಗಿದೆ. ಹಾಗೆ ಆವರಿಸಿಕೊಂಡ ಅದು ಆ ಹುಡುಗ ಬೆಳೆದು ದೊಡ್ಡವನಾದ ಮೇಲೆ ಪಾರಿಜಾತ ಕಲಾವಿದನಾಗುವಂತೆ ಪ್ರೇರೇಪಿಸಿದೆ. ಇಂಥ ಪ್ರೇರೇಪಣೆಯಿಂದ ಕಲಾವಿದನಾಗಿ ಸೇರಿಕೊಂಡ ಮಲ್ಲಿಕಾರ್ಜುನ ಮಾಸ್ತರಿಗೆ ಇದನ್ನು ನಮ್ಮ ಹಳ್ಳಿಯವರು ನೋಡಿದರಷ್ಟೇ ಸಾಲದು, ಹೊರಗಿನವರಿಗೂ ಇದನ್ನು ಆಡಿ ತೋರಿಸಬೇಕು ಅನ್ನುವ ಉದ್ದೇಶದಿಂದ ಸಣ್ಣಾಟದ ಸಂಘವೊಂದನ್ನು ಕಟ್ಟಬೇಕು ಅನಿಸಿದೆ. ಹಾಗೆ ಅನಿಸಿದ್ದೇ ತಡ ತನ್ನಂತೇ ಪಾರಿಜಾತವನ್ನು ಹಚ್ಚಿಕೊಂಡಿದ್ದವರನ್ನು ಒಂದೆಡೆ ಸೇರಿಸಿದ್ದಾರೆ. ಹೀಗೆ ಹುಟ್ಟಿಕೊಂಡಿದ್ದು ಈ ‘ಶ್ರೀ ಕೃಷ್ಣ ಪಾರಿಜಾತ ಮಂಡಳಿ’.
ಇದೊಂದು ಅಪ್ಪಟ ಜಾತ್ಯತೀತ ಕೂಟ. ಇದಕ್ಕೆ ಯಾವ ಜಾತಿ, ಧರ್ಮಗಳ ಹಂಗಿಲ್ಲ. ಅಪ್ಪಟ ಕಲಾವಿದರಾದ ಇವರೆಲ್ಲರಿಗೂ ಕಲೆಯದೇ ಧ್ಯಾನ. ಅದೇ ಉಸಿರು. ಹಾಗಾಗಿ ಇದಕ್ಕೆ ಕೃತಕತೆಯ ಸೋಂಕಾಗಲಿ, ಪ್ರಚಾರದ ಗೀಳಾಗಲಿ ಇದುವರೆವಿಗೂ ತಟ್ಟಿದಂತಿಲ್ಲ. ಮಂಡಳಿ ಹುಟ್ಟಿದಾಗಿನಿಂದ ಇದರ ಹಾರ್ಮೋನಿಯಂ ಮಾಸ್ತರಿಕೆ ಅದೇ ದಾದನಟ್ಟಿಯ ಇಮಾಮ್ ಸಾಹೇಬ್ ಡಂಗಿಯವರದು. ತಮ್ಮ ಗಡಸು ಕಂಠದಿಂದ ಹಾಗೂ ಅಷ್ಟೂ ವರ್ಷಗಳ ಅನುಭವದಿಂದ ಇಡೀ ಆಟಕ್ಕೆ ರಂಗು ತಂದರೆ, ದೇವದಾಸಿ ಮೂಲದಿಂದ ಬಂದ ಶಾಂತ ಹಲಗತ್ತಿ, ಶಾರದಾ ಜಂಬಗಿ ಹಾಗೂ ಸತ್ಯವ್ವ ಜಾಲಿಕಟ್ಟಿ ಹೆಣ್ಣು ಪಾತ್ರಗಳಿಗೆ ಜೀವ ತುಂಬುತ್ತಾರೆ. ಅದೇ ರೀತಿ, ತಮ್ಮ ಕಂಠ ಮಾಧುರ‍್ಯದಿಂದ ಕೃಷ್ಣನ ಪಾತ್ರಧಾರಿ ಈರಣ್ಣ ಕಂಭಾರ ಆಟಕ್ಕೆ ಕಳೆಗಟ್ಟಿಸುತ್ತಾರೆ. ಈ ಮುಂಚೆ ಭಾಗವತಿಕೆ ಮಾಡುತ್ತಿದ್ದ, ವಯಸ್ಸಿನಲ್ಲಿ ಮಾಸ್ತರಿಗಿಂತ ಹಿರಿಯರಾದ, ಅದ್ಭುತ ಕಲಾವಿದ ಭೀಮಪ್ಪ ಕಂಭಾರರು ಸ್ವಯಂ ಪಾತ್ರ ಮಾಡುವುದರೊಂದಿಗೆ ಮಾರ್ಗದರ್ಶಕರಾಗಿದ್ದಾರೆ.
‘ಒಂದು ಕಾಲದಲ್ಲಿ ಪಾರಿಜಾತದವರ ಪೆಟ್ಟಿಗೆಯನ್ನು ಹೊತ್ತರೆ ಉದ್ಧಾರ ಆಗ್ತಿವಿ ಅನ್ನೋ ನಂಬಿಕೆ ಇತ್ರಿ, ಆದ್ರ ಈಗ ಹಂಗಿಲ್ಲ ನೋಡ್ರಪ್ಪ,’ ಅನ್ನುವ ಮಲ್ಲಿಕಾರ್ಜುನ ಮಾಸ್ತರ ಮುದಕವಿಯವರದು ‘ಭಕ್ತಿಯಿಂದ ನೋಡೋರಿಗೆ ಅವರ ಇಚ್ಛೆ ಪೂರೈಸುತ್ತೆ ನೋಡ್ರಿ,’ ಅನ್ನುವಷ್ಟು ಮುಗ್ಧ ಮನಸ್ಸು. ಇಂಥ ಇವರಿಗೆ ಈ ಬಾರಿಯ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಪ್ರಶಸ್ತಿ ಸಿಕ್ಕಿದೆ. ಇದಲ್ಲದೆ ವಿಶ್ವೇಶ್ವರಯ್ಯ ಪ್ರಶಸ್ತಿ, ಕರ್ನಾಟಕ ರತ್ನಶ್ರೀ ಪ್ರಶಸ್ತಿ, ಕರ್ನಾಟಕ ಭೂಷಣ ಮುಂತಾದ ಹಲವು ಗೌರವಗಳು ಇವರಿಗೆ ಸಂದಿವೆ. ಕರ್ನಾಟಕದ ಅನೇಕ ವಿಶ್ವವಿದ್ಯಾಲಯಗಳೂ ಸೇರಿದಂತೆ, ಆಕಾಶವಾಣಿ, ದೂರದರ್ಶನಗಳು ಇವರ ಸಣ್ಣಾಟವನ್ನು ಆಡಿಸಿವೆ. ಸಹ ಕಲಾವಿದರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿರುವ ಮಾಸ್ತರು ಮಂಡಳಿಯ ಉಳಿವಿನಲ್ಲಿ ಅವರುಗಳ ಪಾತ್ರವನ್ನು ಎದೆ ತುಂಬಿ ಸ್ಮರಿಸುತ್ತಾರೆ. ಸಣ್ಣಾಟವೇ ಇವರ ಉಸಿರಿನಂತಿದ್ದರೂ ಈಗಲೂ ಬಿಡುವಿನ ವೇಳೆಯಲ್ಲಿ ಕೃಷಿ ಬದುಕನ್ನು ಮಾಡುತ್ತಾರೆ. ಮನೆಯ ಬದಿಗೊಂದು ಕಿರಾಣಿ ಅಂಗಡಿಯನ್ನೂ ಇಟ್ಟುಕೊಂಡಿದ್ದಾರೆ.
ಸುಮಾರು ಆರು ಅಡಿ ಎತ್ತರದ, ಚುರುಕು ಕಂಗಳ, ಅಪ್ಪಟ ಉತ್ತರ ಕರ್ನಾಟಕದ ಧಿರಿಸಿನ, ಮುಗ್ಧ ಮುಖದ ಮಲ್ಲಿಕಾರ್ಜುನ ಮಾಸ್ತರ ನಾಲಿಗೆಯ ತುದಿಯಲ್ಲಿ ಇಡೀ ಕೃಷ್ಣ ಪಾರಿಜಾತ ಆಟದ ಅಷ್ಟೂ ಸಂಗತಿಗಳು ಕುಳಿತಿವೆ. ಪಕ್ಕಾ ಆಧುನಿಕ ಮನೋಸ್ಥಿತಿಯ ಇವರಿಗೆ ಇದೊಂದು ಸಾಂಸ್ಕೃತಿಕ ಜವಾಬ್ದಾರಿ. ತನ್ನ ನಂತರವೂ ಇದು ಉಳಿಯಬೇಕು, ಬೆಳೆಯಬೇಕು ಅನ್ನುವುದು ಈ ಹಿರಿಯ ಚೇತನದ ಆಸೆ. ಆದರೆ ‘ಇದನ್ನ ಕಲಿಯೋಕೆ ಈಗ ಯಾರೂ ಮುಂದೆ ಬರಂಗಿಲ್ರಿ,’ ಅಂತ ತುಂಬಾ ವಿಷಾದದಿಂದ ಹೇಳುತ್ತಾರೆ. ಆದರೂ ‘ಸರ್ಕಾರ ಸಹಾಯ ಮಾಡಿದ್ರೆ ಸಣ್ಣಾಟದ ಒಂದು ಶಾಲೆ ತೆರೆಯೋ ಆಸೆ ಇದೆ,’ ಅಂತ ಅನ್ನುವ ಮಾಸ್ತರಿಗೆ ಈ ಜಾನಪದದ ಆಟವನ್ನು ಇನ್ನೂ ಜೀವಂತವಾಗಿ ಇಡುವ ತವಕವಿದೆ. ಇದು ಸಾಧ್ಯವಾಗದೇ ಹೋದಲ್ಲಿ ‘ಕಡೇ ಪಕ್ಷ ಈ ಬಗ್ಗೆ ಒಂದು ಪುಸ್ತಕನಾದ್ರೂ ಬರೆದಿಟ್ಟು ಹೋಗ್ತೀನಿ,’ ಅನ್ನುತ್ತಾರೆ ಮಾಸ್ತರು. ಇಂಥ ಇವರು ಕಲಿತಿರುವುದು ಒಂಭತ್ತನೆಯ ತರಗತಿಯವರೆಗೆ ಮಾತ್ರ.
ಹೀಗೆ ಸಣ್ಣಾಟದ ಕಲೆಯನ್ನೇ ಉಸಿರಾಡುತ್ತಿರುವ ಮಾಸ್ತರಿಗೆ ಮೂರು ಹೆಣ್ಣು, ಒಂದು ಗಂಡು ಸೇರಿ ನಾಲ್ಕು ಜನ ಮಕ್ಕಳು. ಬಹುಮಟ್ಟಿಗೆ ಈಗಿನ ತಲೆಮಾರಿನವರಂತೆ ಇವರಾರಿಗೂ ಅಪ್ಪನ ಈ ಆಟದಲ್ಲಿ ಅಂಥ ಆಸಕ್ತಿ ಇಲ್ಲ. ಕಾಲ ಬದಲಾಗ್ತಾ ಇದೆ ಎಲ್ಲದೂ ನಮ್ಮ ಮೂಗಿನ ನೇರಕ್ಕೇ ನಡೆಯಬೇಕು ಅಂದರೆ ಹೇಗೆ ಅದು ಅವರವರ ಇಚ್ಚೆ, ಅಂತ ಮಕ್ಕಳ ಬಗ್ಗೆ ಮೃದು ಮಾತುಗಳನ್ನಾಡುತ್ತಾರೆ. ಆದರೆ ‘ನಮ್ಮಾಕೆ ಇದ್ದಳು, ಅವಳಿಗೆ ಆಟ ಅಂದ್ರ ಜೀವ ಆಗಿತ್ತು. ಕಲಾವಿದರು ಕಂಡ್ರ ಎಂಥಾ ನಮೂನಿ ಗೌರವ ಇತ್ತು ಅಂದ್ರ... ಅವಳ ನೆರವು ಇಲ್ಲದಿದ್ರ ನಾನೂ ಇದನ್ನ ಹಿಂಗೆಲ್ಲಾ ಬೆಳಸೋಕೆ ಆಗತಿರ‍್ಲಿಲ್ಲ ನೋಡ್ರಪ್ಪ,’ ಅಂತ ಆರು ವರ್ಷದ ಹಿಂದಷ್ಟೇ ತೀರಿ ಹೋದ ಹೆಂಡತಿ ಮಾಂತವ್ವನನ್ನು ನೆನೆಯುವಾಗ ಭಾವಜೀವಿ ಮಾಸ್ತರ ಗಂಟಲು ಗದ್ಗಧಿತವಾಗುತ್ತದೆ.
ಸಂಪರ್ಕ ವಿಳಾಸ :
ಮಲ್ಲಿಕಾರ್ಜುನ್ ಮಾಸ್ತರ ಮುದಕವಿ
ದಾದನಟ್ಟಿ-೫೮೭೧೨೨
ಮುಧೋಳ ತಾ
ಬಾಗಲಕೋಟ ಜಿಲ್ಲೆ
ಮೊಬೈಲ್: ೯೯೦೧೪೮೩೭೯೯
ಕೃಪೆ: ಗಂಗಾಧರಯ್ಯ, ಲಡಾಯಿ ಪ್ರಕಾಶನ ಬ್ಲಾಗ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ