ಕವಿತೆ: ಸರಳ ರೇಖೆ
ನೀನು
ಗಣಿತದ ಸರಳರೇಖೆ
ನಾನೇನು ಸುಲಭವೇ?
ನಿನ್ನ ಹಾಗೆ ನಾನೂ ಸರಳರೇಖೆ
ಅತ್ತಿತ್ತ ನೋಡದೇ
ಭಾವನೆಗಳಿಗೆ ಬೆಲೆ ಕೊಡದೇ
ನೇರ ನಿನ್ನ ಪಯಣ
ಅಡ್ಡಿಯಾಗಿಲ್ಲ ಎಡರು ತೊಡರುಗಳು
ನಿನ್ನ ಪಥಕೆ
ನನಗೆ ಹಾಗಲ್ಲಾ
ಬಿದ್ದಿವೆ ಬೆಟ್ಟದಷ್ಟು
ಅಡ್ಡಿಗಳು ಅಡ್ಡಡ್ಡ ಬಂದರೂ
ಸಾಗುವೆ ನೇರ ನಿನ್ನಂತೆ
ನೀ ನನಗೆ ಮಾದರಿ
ಹೇಳೆನು ನಾ ಬೀಗದೇ
ಸಾಗು ಮುಂದೆಲ್ಲ ನಿನ್ನದೇ ದಾರಿ
ಜೊತೆಯಲ್ಲಿ ಸಾಗುವೆ
ಕಿಂಚಿತ್ತೂ ನಿನ್ನನ್ನು ನೋಡದೇ
ನಿನಗಿಂತ ವೇಗವಾಗಿ
ಮನಸುಗಳನ್ನು ಸಾಯಿಸಿ
ದಾರಿ ಸವೆಸಿದರೇನು ಬಂತು?
ಬೀಗಿದರೇನು ಬಂತು
ಪ್ರತಿಷ್ಠೆಯ ಜೀವನ ಯಾರಿಗೆ ಬೇಕು
ಭಾವಗಳ ಜೊತೆ ಏಳುತ್ತ ಬೀಳುತ್ತ
ನಲಿಯುತ್ತ ಕಮರುತ್ತ
ಕಡಿದಷ್ಟು ಚಿಗುರುವ
ಮರದ ಹಾಗೆ ಚಿಗಿಯುವ
ಬದುಕು ನನಗೆ ಬೇಕು
ತೊಡರುಗಾಲು ಹಾಕಿ
ಬೀಳಿಸುವವರಿಗೆ ಬೀಳದೇ
ಕಣ್ಣ ಮುಂದಿರುವ ಬಿಂದುವಿನತ್ತ
ಸಾಗುವೆ ನಿನ್ನ ಹಾಗೆ
ನೀನು ಸರಳ ರೇಖೆ
ನಾನೂ ಸರಳ ರೇಖೆ
ಅಳೆಯಲಾರದ ಹಾದಿ ಸವೆಸಿದರೇನು
ಎಂದಿಗೂ ಎದುರಾಗೆವು ನಾವು
ಭಾರತಿ ಮದಭಾವಿ, ಗೋಕಾಕ
********************************************
ಕವಿತೆಯ ವಿಮರ್ಶೆ: ಪ್ರೊ. ಸುರೇಶ ಮುದ್ದಾರ
ಗಣಿತದ ಸರಳರೇಖೆಯನ್ನು ಸಾಂಕೇತಿಕವಾಗಿ ಪುರುಷತ್ವಕ್ಕೆ ಹೋಲಿಸಿ ಜೀವನದ ಸ್ವಾರಸ್ಯವಿರುವುದು ಕೇವಲ ಪುರುಷ ಪ್ರಾಧಾನ್ಯತೆಯ ಜೀವನಕ್ಕಲ್ಲ, ಜೀವನ ಪರಿಪೂರ್ಣವೆನಿಸಿಕೊಳ್ಳಬೇಕೆಂದರೆ,ಸ್ತ್ರೀತ್ವವೂ ಅತ್ಯಂತ ಅವಶ್ಯಕ ಎನ್ನುವ ಸ್ತ್ರೀ ಪರ ಸಂವೇದನೆಯುಳ್ಳ ಕವಿತೆಯೆ ಶ್ರೀಮತಿ ಭಾರತಿ ಮದಭಾವಿಯವರ "ಸರಳರೇಖೆ"ಯಾಗಿದೆ.
ಈ ಸೃಷ್ಟಿ ರಚನೆಯಾಗಿದ್ದು ಮತ್ತು ಅದರ ಅಗಾಧವಾದ ಚಲನಶೀಲತೆಗೆ ಪುರುಷ ಮತ್ತು ಪ್ರಕೃತಿಗಳೆ ಕಾರಣ ಎಂಬುದು ಸರ್ವವಿದಿತ. ಹಾಗೆಯೇ ಪ್ರಸ್ತುತ ಕವಿತೆಯಲ್ಲಿ ನಮ್ಮ ಸಾಮಾಜ ಚಲನಶೀಲತೆಯನ್ನು ಹೊಂದಬೇಕೆಂದರೆ, ಪುರುಷ ಮತ್ತು ಮಹಿಳೆ ಇಬ್ಬರೂ ಮುಖ್ಯ ಎಂಬುದನ್ನು ಪುರುಷ ಪ್ರಧಾನ ಸಮಾಜ ಅರ್ಥಮಾಡಿಕೊಳ್ಳುಬೇಕೆಂಬ ಆಗ್ರಹ ಕವಿತೆಯಲ್ಲಿದೆ.
ನೀನು
. ಗಣಿತದ ಸರಳರೇಖೆ
. ನಾನೇನು ಸುಲಭವೆ?
. ನಿನ್ನ ಹಾಗೆ
. ನಾನೂ ಸರಳರೇಖೆ
ಎಂಬ ಎದೆಗಾರಿಕೆಯ ಮಾತುಗಳಿಂದ ಪ್ರಾರಂಭವಾಗುವ ಕವಿತೆಯ ಸಾಲುಗಳು, ಮುಂದೆ ಸಾಗುತ್ತ ಪುರುಷ ಸಮಾಜಕ್ಕೆ ಸವಾಲಷ್ಟೆ ಅಲ್ಲ ಸ್ತ್ರೀ ಭಾವಗಳಿಗೆ ಮನ್ನಣೆ ಕೊಡದ ಸಮಾಜವು ಅಂತರಂಗದಲ್ಲಿ ಬರಡಾಗಿರುತ್ತದೆ ಎಂಬುದನ್ನು ನಿರೂಪಿಸುತ್ತ ಪುರುಷ ಪ್ರಧಾನ ಸಮಾಜದ ದೃಷ್ಟಿಹೀನತೆಯನ್ದು ಸೂಕ್ಷ್ಮವಾಗಿ ವಿಡಂಬಿಸುವುದರ ಜೊತೆಗೆ ಕವಿತೆ ಮೌನವಾಗಿ ತನ್ನ ಬಂಡಾಯವನ್ದು ಧ್ವನಿಸುತ್ತದೆ.
ಅಡ್ಡಿಯಾಗಿಲ್ಲ.......
ಎಡರು ತೊಡಕುಗಳು
. ನಿನ್ನ ಪಥಕೆ.......
ನನಗೆ ಹಾಗಲ್ಲ. ಬಿದ್ದವೆ,
. ಬೆಟ್ಟದಷ್ಟು ಕಡ್ಡಿಗಳು
. ಅಡ್ಡಡ್ಡ ಬಂದರೂ
. ಸಾಗುವೆ ನೇರ ನಿನ್ನಂತೆ......
ಈ ಸಾಲುಗಳು ಪುರುಷ ಸಮಾಜದಲ್ಲಿ, ಪುರುಷನದು ಸುಗಮ ದಾರಿ, ಮಹಿಳೆಯದೋ ದುರ್ಗಮ. ಆದರೂ ಅವನ ಸರಿ ಸಮಾನವಾಗಿ ನಿಲ್ಲಬಲ್ಲ ನಡೆಯಬಲ್ಲ ಸಾಮರ್ಥ್ಯ ಆಧುನಿಕ ಮಹಿಳೆಯರಲ್ಲಿದೆ ಎಂಬುದನ್ನು ಕವಿತೆ ಸ್ಥೈರ್ಯದಿಂದ ಹೇಳುತ್ತದೆ.
ಮನಸುಗಳನ್ನು ಸಾಯಿಸಿ
. ದಾರಿ ಸವೆಸಿದರೇನು ಬಂತು?
. ಪ್ರತಿಷ್ಠೆಯ ಜೀವನ ಯಾರಿಗೆ ಬೇಕು?
. ಎಂಬ ಸಾಲುಗಳು ಪುರುಷತ್ವಕ್ಕೆ ಪ್ರಶ್ನೆಯನ್ನು ಹಾಕುತ್ತ ಅಂತರ್ದೃಷ್ಟಿಯಿಲ್ಲದ ಜೀವನ ಅರ್ಥವಿಲ್ಲದ್ದು ಎಂಬ ಧೋರಣೆಯೊಂದಿಗೆ,
. ಕಡಿದಷ್ಟು ಚಿಗುರುವುದು
. ಮರದ ಹಾಗೆ ಚಿಗಿಯುವ
. ಬದುಕು ನನಗೆ ಬೇಕು
ಎಂಬ ಆಶಾಭಾವದ ಜೀವನವನ್ನು ಮಹಿಳೆ ಬಯಸುತ್ತಾಳೆ. ಜೀವನೋತ್ಸಾಹವಿಲ್ಲದ ಬದುಕು ಬದುಕೆ ಅಲ್ಲ. ಪುರುಷರಿಗೆ ಜೀವನೋತ್ಸಾಹ ತುಂಬುವವಳೆ ಸ್ತ್ರೀ ಎಂಬುದನ್ನು ಪುರುಷರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂಬ ಸಲಹೆಯನ್ನು ನೀಡುತ್ತ , " ನಾ ನಡೆವ ದಾರಿಯಲ್ಲಿ ಕಲ್ಲು ಮುಳ್ಳುಗಳು ಏನೆ ಇರಲಿ , ನನ್ನ ದೃಷ್ಟಿ ನನ್ನ ಗುರಿಯ ಕಡೆಗೆ" ಎನ್ನುವ ನಿಶ್ಚಲತೆ ನನ್ನಲ್ಲಿದೆ. ಎಂಬ ಮಹಿಳಾ ಸಮಾಜದ ದಿಟ್ಟ ನಿಲುವನ್ನು ಕವಿತೆ ಧ್ವನಿಸುತ್ತ ,
. " ಅಳೆಯಲಾರದ ಹಾದಿ ಸವೆಸಿದರೇನು? ಎಂದಿಗೂ ಎದುರಾಗೆವು ನಾವು" ಎಂಬ ಸಾಲುಗಳು ನಿನ್ನ ಸಮಾಜದಲ್ಲಿ ನಾನು ನಿನ್ನ ಜೊತೆ ಹೆಜ್ಜೆ ಹಾಕಿದರೂ ನೀನು ನನಗೆ ಮಾದರಿಯಲ್ಲ. ಏಕೆಂದರೆ ನಾನು ನನ್ನದೆ ದಾರಿ ಕಂಡುಕೊಂಡಿದ್ದೇನೆ. ಅದು ನಿನ್ನ ಸೋಲಿಸಲೂ ಅಲ್ಲ, ತಿರಸ್ಕರಿಸಲೂ ಅಲ್ಲ ನಾನಿಲ್ಲದೆ ನಿನ್ನ ಬದುಕಿಗೆ ಅರ್ಥವಿಲ್ಲವೆಂಬ ಸತ್ಯವನ್ನು ನಿನಗೆ ಅರುಹಲು. ನಿನ್ನಂತೆ ನಾನೂ ಒಂದು ಸರಳರೇಖೆ ಎಂಬುದನ್ನು ತಿಳಿಸಲು. ಅದು ನಿನ್ನ ಹಿಂಬಾಲಿಸುತ್ತ ಅಲ್ಲ ನಿನ್ನ ಜೊತೆಯಾಗಿ ಹೆಜ್ಜೆ ಹಾಕುತ್ತ.
ಒಟ್ಟಾರೆಯಾಗಿ "ಸರಳರೇಖೆ " ಕವಿತೆ ಪುರುಷ ವಿರೋಧಿಯಂತಿರದೆ , ಸ್ತ್ರೀ ಪರ ನಿಲುವಿನ ಉತ್ಕಟಾಸೆಯನ್ನು ಹೊಂದಿದ್ದು , ಜೀವನವೆಂದರೆ - "ಸ್ತ್ರೀ ಪುರುಷರ ನಡುವಿನ ಸಾಮರಸ್ಯ" ಎಂಬ ಹೊಸ ಪರಿಕಲ್ಪನೆಯೊಂದಿಗೆ ಕವಿತೆ ಓದುಗರನ್ನು ಆಲೊಚನೆಗೆ ಹಚ್ಚುತ್ತದೆ.
ಪ್ರೊ. ಸುರೇಶ ಮುದ್ದಾರ, ಬರಹಗಾರರು, ಕಥೆಗಾರರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ