ಚಲಿಸುವ ಗಡಿಯಾರ
ಬಿಸಿಲ್ಗುದುರೆಯಂತೆ ಮಿನುಗಿ ಹೋಗುವ
ಕಾಲದಂತೆ ಕರಗಿಹೋಗುವ
ನೆನಪೇ ಒಂದು ಚಲಿಸುವ ಗಡಿಯಾರ
ಹಗಲಲಿ ಕನಸ ನಕ್ಷತ್ರಗಳು ಮರೆಯಾಗುವಂತೆ
ಮಾಯವಾಗುವ
ನೆನಪೇ ಒಂದು ಚಲಿಸುವ ಗಡಿಯಾರ
ಕತ್ತಲೆ ಬೆಳಕನಾವರಿಸುವಂತೆ
ಮನವನಾವರಿಸುವ
ನೆನಪೇ ಒಂದು ಚಲಿಸುವ ಗಡಿಯಾರ....
ನವಿರಾದ ಸುಖಗಳ ನಡುವೆ
ಸಿಹಿಯಾದ ಅನುಭವ ಬೆರೆಸುವ
ನೆನಪೇ ಒಂದು ಚಲಿಸುವ ಗಡಿಯಾರ
ಭವಿಷ್ಯದ ಗರ್ಭದಲಿ ಗರಿಬಿಚ್ಚಿ ನಲಿವಂತೆ
ಸಿಹಿನೆನಪಿನ ತರಂಗಗಳನ್ನು ಬಡಿದೆಬ್ಬಿಸುವ
ನೆನಪೇ ಒಂದು ಚಲಿಸುವ ಗಡಿಯಾರ
ಹೃದಯದ ಭಾವನೆಗಳನ್ನು ಕೆಣಕುತಾ
ಪ್ರೀತಿ ಬೀಜಬಿತ್ತಿ ಸಹಬಾಳ್ವೆ ಬಯಸುವ
ನೆನಪೇ ಒಂದು ಚಲಿಸುವ ಗಡಿಯಾರ
ಪಯಣ
ಆಗಸದಲ್ಲಿ ಬೆಳಕನು ಚೆಲ್ಲುವ
ಹೊಂಗನಸು ಹೊತ್ತು
ಹೊಸ ಕನಸಿಗೆ ಬೆಲೆಕೊಟ್ಟು
ಹೊಸ ಹಾದಿಯಲ್ಲಿ ಪಯಣಕೆ ಹೊರಟೆ
ಚಿಗುರಿದ ಹೊಸ ಹೊಸ
ಆಸೆಗಳನ್ನು ನನಸಾಗಿಸಿಕೊಳ್ಳಲು
ಹೊಸದಾರಿ ಅರಸುತಾ
ಹೊಸ ಹಾದಿಯ ಪಯಣಕೆ ಹೊರಟೆ
ಹೊಸ ಹೊಸ ಬಯಕೆಗಳ ಹೊತ್ತು
ಹೊಸ ಜಗವ ಕಟ್ಟುವ
ಉತ್ಸಾಹದಲ್ಲಿ
ಹೊಸ ದಾರಿಯ ತುಳಿಯುತಾ ಹೊರಟೆ
ಮನಸು ಮನಸುಗಳ
ಚಿತ್ರ ಬಿಡಿಸುವ ಚಿತ್ರಕಾರನಂತೆ
ಸುಂದರ ಚಿತ್ರ ಬಿಡಿಸಲು
ಹೊಸ ಹಾದಿಯ ಅರಸುತಾ ಹೊರಟೆ...
ಪ್ರೊ. ವಿದ್ಯಾ ರೆಡ್ಡಿ
ಕನ್ನಡ ಪ್ರಾಧ್ಯಾಪಕರು ಗೋಕಾಕ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ