ವಿಷಯಕ್ಕೆ ಹೋಗಿ

ಶ್ರೀ ರಾಮಾನುಜಾಚಾರ್ಯರು


ಎಂಟನೇ ಶತಮಾನದ ಅಂತ್ಯ ಮತ್ತು ಒಂಬತ್ತನೇ ಶತಮಾನದಲ್ಲಿ ವಿವಿಧ ಧರ್ಮಗಳ ಸೆಳೆತಕ್ಕೆ ಸಿಕ್ಕಿ ಸನಾತನ ಧರ್ಮ ಆವಸಾನದ ಅಂಚಿನಲ್ಲಿದ್ದಾಗ ಹಿಂದೂ ಧರ್ಮದ ಪುನರುತ್ಥಾನದ ಆಶಾಕಿರಣವಾಗಿ ಶ್ರೀ ಶಂಕರಾಚಾರ್ಯರ ಆಗಮನವಾಗಿ ಅನ್ಯಧರ್ಮೀಯರನ್ನು ಸಮರ್ಥವಾಗಿ ವಾದದಲ್ಲಿ ಸೋಲಿಸಿ ತಮ್ಮ ಅಹಂ ಬ್ರಹ್ಮಾಸ್ಮಿ ಎನ್ನುವ ಅದ್ವೈತ ತತ್ವದ ಮೂಲಕ ಸನಾತನ ಧರ್ಮವನ್ನು ಎತ್ತಿಹಿಡಿದ ಪರಂಪರೆಯನ್ನು 10 ಮತ್ತು 11ನೇ ಶತಮಾನದಲ್ಲಿ ಮುಂದುವರಿಸಿದ ಕೀರ್ತಿ ಶ್ರೀ ರಾಮಾನುಜಾಚಾರ್ಯರಿಗೆ ಸಲ್ಲುತ್ತದೆ. ಈ ಇಬ್ಬರು ಮಹಾನ್ ಆಚಾರ್ಯರ ನಡುವೆ ಹಲವಾರು ಸಾಮ್ಯಗಳಿದ್ದು ಮೊದಲನೆಯದಾಗಿ ಈ ಇಬ್ಬರೂ ಮಹಾನುಭಾವರ ಜಯಂತಿಯು ಒಂದೇ ದಿನವಾಗಿದೆ. ಕೇರಳದಲ್ಲಿ ಹುಟ್ಟಿದ ಶ್ರೀ ಶಂಕರರು ಮತ್ತು ತಮಿಳುನಾಡಿನ ಶ್ರೀ ರಾಮಾನುಜರು ಇಬ್ಬರೂ ತಮ್ಮ ಪ್ರಾಭಲ್ಯವನ್ನು ಕರ್ನಾಟಕದ ಶೃಂಗೇರಿ ಮತ್ತು ಮೇಲುಕೋಟೆಯಲ್ಲಿ ಪಡೆದುಕೊಂಡಿರುವುದು ನಮ್ಮ ನಾಡಿನ ಸೌಭಾಗ್ಯವೇ ಸರಿ. ಶ್ರೀ ಶಂಕರಾಚಾರ್ಯರು ಜೀವಿತಾವಧಿ ಕೇವಲ 32 ವರ್ಷಗಳಾದರೆ, 120 ವರ್ಷಗಳ ಕಾಲವಿದ್ದ ಶ್ರೀ ರಾಮಾನುಜರು ತಮ್ಮ ಜೀವಿತಾವಧಿಯ 32ವರ್ಷಗಳಷ್ಟು ಕಾಲವನ್ನು ಕರ್ನಾಟಕದಲ್ಲಿಯೇ ಕಳೆದು ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯ ಸುಧೆಯನ್ನು ಎಲ್ಲರಿಗೂ ಪಸರಿಸಿದ್ದಲ್ಲದೇ ಅನೇಕ ದೇವಸ್ಥಾನಗಳನ್ನು ಕಟ್ಟಿಸಿದ ಕೀರ್ತಿಗೆ ಭಾಜನಾರಾಗಿದ್ದಾರೆ.

ತಮಿಳುನಾಡಿನ ಕಂಚಿ ಪಟ್ಟಣದ ಹತ್ತಿರ ಇರುವ ಶ್ರೀ ಪೆರಂಬದೂರಿನ (ಮಾಜೀ ಪ್ರಧಾನಿಗಳಾದ ಶ್ರೀ ರಾಜೀವ್ ಗಾಂಧಿಯವರ ಹತ್ಯೆಯಾದ ಸ್ಥಳ) ಶ್ರೀ ಅಸುರಿ ಕೇಶವ ಸೊಮಯಾಜಿ ದೀಕ್ಷೀತರು ಮತ್ತು ಕಾಂತಿಮತಿ ದಂಪತಿಗಳಿಗೆ 1017ರ ವೈಶಾಖ ಶುದ್ಧ ಪಂಚಮಿಯಂದು ಆರ್ದ್ರ ನಕ್ಷತ್ರದಲ್ಲಿ ಶ್ರೀ ರಾಮಾನುಜರ ಜನನವಾಗುತ್ತದೆ. ಕಾಲ ಕಾಲಕ್ಕೆ ಅನುಗುಣವಾಗಿ ಚೌಲ, ಉಪನಯನ, ವೇದಾಭ್ಯಾಸಗಳು ಆರಂಭವಾಗಿ ಅವರ 16ನೆಯ ವಯಸ್ಸಿಗೇ ವಿವಾಹವಾಗುತ್ತದೆ. ಅದೇ ಸಮಯದಲ್ಲಿ ಅವರಿಗೆ ಪಿತೃವಿಯೋಗವಾಗುತ್ತದೆ. ಅವರ ಕರ್ಮಾದಿಗಳನ್ನೆಲ್ಲಾ ಮುಗಿಸಿ ತಮ್ಮ ಮುಂದಿನ ಅಧ್ಯಯನಕ್ಕಾಗಿ ಸೂಕ್ತ ಗುರುಗಳ ಆಶ್ರಯಕ್ಕೆ ಅರಸುತ್ತಿದ್ದಾಗ. ಕಾಂಚಿಪುರದಲ್ಲಿದ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸುತ್ತಿದ್ದ ಶ್ರೀ ಯಾದವ ಪ್ರಕಾಶರೆಂಬ ಪ್ರಸಿದ್ಧ ವಿದ್ವಾಂಸರ ಬಳಿ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಇಲ್ಲಿ ಅನೇಕ ಸದ್ಗುಣಗಳ ಗಣಿಯಾಗಿ, ಶಾಸ್ತ್ರಾಧ್ಯಯನದ ವಿಧೇಯ ವಿಧ್ಯಾರ್ಥಿಯಾಗಿ, ಗುರುಗಳಲ್ಲಿ ವಿನೀತರಾಗಿ, ಭಗವಂತನ ಪರಮಭಕ್ತನಾಗಿ, ತನ್ನ ಸಮಾಜದ ಜನಗಳಲ್ಲಿ ಅಂತಃಕರಣವುಳ್ಳವರಾಗಿ, ಪರಮ ಸತ್ಯದ ಸ್ಪಷ್ಟ ದಾರ್ಶನಿಕರಾಗಿ, ಅದುವರೆವಿಗೂ ರಾಮಾನುಜರಾಗಿದ್ದವರು ಅಲ್ಲಿಂದ ಮುಂದೆ ಆಚಾರ್ಯ ರಾಮಾನುಜಾಚಾರ್ಯರಾಗಿ ಅನಾವರಣಗೊಳ್ಳುತ್ತಾರೆ. ಇದೇ ದಿನಗಳಲ್ಲಿ ರಾಮಾನುಜರು ತಮ್ಮ ಗುರುಗಳ ಅದ್ವೈತದ ನಿಲುವಿನ ವಿರುದ್ದ ನಿಂತು , ಪರಿಪೂರ್ಣ ಅದ್ವೈತ ವೇದಾಂತ ಅಂದರೆ ವಿಶಿಷ್ಟಾದ್ವೈತವನ್ನು ಬೋಧಿಸತೊಡಗಿದರು.

ಅದುವರೆವಿಗೂ ವೇದ ಅಪೌರುಷೀಯ ಎಂದು ನಂಬಿದ್ದ ಕಾಲ ಮತ್ತು ಅದ್ವೈತ ತತ್ವದಲ್ಲಿ ಆತ್ಮ ಮತ್ತು ಪರಮಾತ್ಮ ಎರಡೂ ಒಂದೇ. ಆ ಎರಡೂ ನಮ್ಮೊಳಗೇ ಇರುವ ಕಾರಣ ಅಹಂ ಬ್ರಹ್ಮಾಸ್ಮಿ ಎಂಬ ವಾದವಾದರೇ, ವಿಶಿಷ್ಠಾದ್ವೈತದ ಸಿದ್ಧಾಂತದ ಪ್ರಕಾರ ಪರಮಾತ್ಮ ಎಂದರೆ ಶ್ರೀಮನ್ನಾರಯಣ. ಹಾಗಾಗಿ, ಶ್ರೀಮನ್ನಾರಾಯಣನೇ ವಿಶಿಷ್ಟಾದ್ವೆತ್ರೖತ ಸಿದ್ಧಾಂತದ ಪ್ರಥಮಾಚಾರ‍್ಯ. ವೇದವು ಅವನಿಂದ ಉಪದಿಷ್ಟವಾದ ವಾಣಿ. ಆ ಭಗವಂತನ ಲೀಲೆಗಳನ್ನು ಕಂಡ ಆಳ್ವಾರರುಗಳು ಭಾವಾವೇಶದಿಂದ ಆಡಿದ ಮಾತುಗಳು, ಹಾಡಿದ ಪದ್ಯಗಳೆಲ್ಲವೂ ಆ ಪರಮಾತ್ಮನನ್ನು ಕುರಿತು ವರ್ಣಿಸಿರುವುದರಿಂದಲೇ ಹರಿಯೇ ಸರ್ವೋತ್ತಮ ಹಾಗಾಗಿ ಶ್ರೀ ವೈಷ್ಣವರ ಸಿದ್ಧಾಂತಕ್ಕೆ ವಿಶಿಷ್ಟಾದ್ವೆತ್ರೖತ ಸಿದ್ಧಾಂತ ಎಂಬ ಹೆಸರು ಬಂದಿದೆ.

ಕಾಂಚೀಪುರದಲ್ಲಿ ಶ್ರೀ ಯಾದವ ಪ್ರಕಾಶರೊಂದಿಗಿನ ವೈಮನಸ್ಯದಿಂದ ಮತ್ತೆ ಶ್ರೀ ರಾಮಾನುಜಾಚಾರ್ಯರು ಗುರುವನ್ನು ಅರಸುತ್ತಾ, ಶ್ರೀರಂಗಂ ತಲುಪಿ ಅಲ್ಲಿಂದ ಕಾಲ್ನಡೆಗೆಯ ಮೂಲಕ ತಿರುಕೋಶ್ಟಿಯೂರು ಎಂಬಲ್ಲಿದ್ದ ಶ್ರೀ ನಂಬಿಯವರಲ್ಲಿ ಶಿಷ್ಯನನ್ನಾಗಿ ಸ್ವೀಕರಿಸಿ ತಮಗೆ ಮಂತ್ರ ಸಿದ್ಧಾಂತವನ್ನು ಬೋಧಿಸುವಂತೆ ವಿನಂತಿಸಿಕೊಳ್ಳುತ್ತರೆ. ಆರಂಭದಲ್ಲಿ ಶ್ರೀ ನಂಬಿಯವರು ರಾಮಾನುಜರ ಕೋರಿಕೆಯನ್ನು ಮನ್ನಿಸದೇ ಹಲವಾರು ಬಾರಿ ನಿರಾಕರಿಸುತ್ತಾರೆ.

ಛಲ ಬಿಡದ ತ್ರಿವಿಕ್ರಮನಮನಂತೆ ರಾಮಾನುಜಾಚಾರ್ಯರು ಸ್ವಲ್ಪವೂ ನಿರಾಶೆಯಾಗದೇ, ಪದೇ ಪದೇ ಗುರುಗಳಲ್ಲಿ ವಿನಮ್ರತೆಯಿಂದ ಬೇಡಿಕೊಂಡಾಗ, ಭಕ್ತನ ಕೋರಿಕೆಯನ್ನು ಮನ್ನಿಸಿ ಒಂದು ಷರತ್ತಿನೊಂದಿಗೆ ಮಹಾ ಬೀಜಾಕ್ಷರೀ ಮಂತ್ರವನ್ನು ಬೋಧಿಸಲು ಒಪ್ಪಿಕೊಳ್ಳುತ್ತಾರೆ. ಈ ಮಂತ್ರ ಬೋಧನೆಯಾದ ನಂತರ ಅದನ್ನು ಸಿದ್ಧಿಸಿಕೊಂಡಲ್ಲಿ ಸ್ವರ್ಗ ಪ್ರಾಪ್ತಿಯಾಗುತ್ತದೆ. ಅಕಸ್ಮಾತ್ ಈ ಬೀಜ ಮಂತ್ರವನ್ನು ಬಹಿರಂಗ ಪಡಿಸಿದಲ್ಲಿ ಶಿಕ್ಷೆಯ ರೂಪದಲ್ಲಿ ನರಕಕ್ಕೆ ಹೋಗಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ. ಗುರುಗಳ ಎಲ್ಲಾ ಷರತ್ತಿಗೂ ಒಪ್ಪಿಕೊಂಡ ರಾಮಾನುಜರು ಬೀಜ ಮಂತ್ರದ ಬೋಧನೆಗೆ ಒಂದು ಒಳ್ಳೆಯ ಮಹೂರ್ತವನ್ನು ನಿಗಧಿ ಪಡಿಸುತ್ತಾರೆ.

ಆ ಶುಭ ದಿನದಂದು ತಮ್ಮ ಎಲ್ಲಾ ಶಿಷ್ಯಂದಿರನ್ನೂ ಕರೆದು, ಈ ಸುದಿನ ನನಗೆ ನನ್ನ ಗುರುಗಳಿಂದ ಮಂತ್ರ ಬೋಧನೆಯಾಗಲಿದೆ ಎಂದು ತಿಳಿಸಿ ಎಲ್ಲರೂ ತಮ್ಮ ಆಗಮನಕ್ಕಾಗಿ ಇಲ್ಲಿಯೇ ಕಾಯಬೇಕೆಂದು ಕೋರಿ, ಗುರುಗಳ ಬಳಿ ಹೋಗುತ್ತಾರೆ. ನಂಬಿ ಗುರುಗಳು ರಾಮಾನುಜರಿಗೆ ಓಂ ನಮೋ ನಾರಾಯಣ ಎಂಬ ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ಬೋಧಿಸಿ, ಇದನ್ನು ಜೀವಿತಾವಧಿಯೂ ಪಠಿಸುತ್ತಾ ಸ್ವರ್ಗ ಪ್ರಾಪ್ತನಾಗು ಎಂದು ಹರೆಸಿ ಹೊರಡುವ ಮೊದಲು ಮತ್ತೊಮ್ಮೆ ಇದನ್ನು ಯಾರಿಗೂ ಹೇಳಕೂಡದು ಎಂದು ಎಚ್ಚರಿಸಿ ಕಳುಹಿಸುತ್ತಾರೆ.

ramanujacharya6

ತಮ್ಮ ಗುರುವಿನಿಂದ ಅಷ್ಟಾಕ್ಷರಿ ಬೀಜ ಮಂತ್ರ ಬೋಧನೆಯಾದ ಕೂಡಲೇ ಸಂತೋಷದಿಂದ ಹೊರ ಬಂದ ರಾಮಾನುಜಾಚಾರ್ಯರು ದೇವಾಲಯದ ವಿಮಾನ ಗೋಪುರವನ್ನೇರಿ ಅಲ್ಲಿದ್ದ ತಮ್ಮ ಶಿಷ್ಯಂದಿರನ್ನೂ ಮತ್ತು ಜನಸಾಮಾನ್ಯರನ್ನು ಕರೆದು ಎಲ್ಲರಿಗೂ ಜೋರು ಧನಿಯಲ್ಲಿ ಈ ಮಹಾ ಬೀಜಾಕ್ಷರೀ ಮಂತ್ರವನ್ನು ಬೋಧಿಸುತ್ತಾರೆ. ಶಿಷ್ಯನ ಈ ನಡುವಳಿಕೆಯಿಂದ ಕೋಪಗೊಂಡ ನಂಬಿ ಗುರುಗಳು, ಈ ರೀತಿ ಮಾಡಿದ್ದರಿಂದ ನೀನು ಖಂಡಿತವಾಗಿಯೂ ನರಕಕ್ಕೆ ಹೋಗುವೆ ಎಂದಾಗ, ಅಷ್ಟೇ ಶಾಂತ ಚಿತ್ತದಿಂದ ಲಕ್ಷಾಂತರ ಜನರಿಗೆ ಈ ಮಂತ್ರ ಶಕ್ತಿಯಿಂದ ಪ್ರಯೋಜನವಾಗಿ, ಅವರೆಲ್ಲರಿಗೂ ದೇವರ ಅನುಗ್ರಹದಿಂದ ಸ್ವರ್ಗ ಪ್ರಾಪ್ತಿಯಾಗುವುದಾದರೇ ನಾನೊಬ್ಬ ನರಕಕ್ಕೆ ಹೋಗಲು ಸಿದ್ಧ ಎಂದು ಉತ್ತರಿಸುತ್ತಾರೆ ಶ್ರೀ ರಾಮಾನುಜಾಚಾರ್ಯರು. ಶಿಷ್ಯನ ಈ ನಿಸ್ವಾರ್ಥ ನಡವಳಿಕೆಯನ್ನು ಗುರುಗಳಾದ ಶ್ರೀ ನಂಬಿಯವರು ಮನಸಾರೆ ಮೆಚ್ಚಿ ಹೃದಯಪೂರ್ವಕ ಆಶೀರ್ವಾದ ಮಾಡುತ್ತಾರೆ.

ಅಲ್ಲಿಂದ ಮುಂದಕ್ಕೆ ತಮ್ಮ ವಿಶಿಷ್ಟಾದ್ವೈತ ಧರ್ಮ ಪ್ರಚಾರವನ್ನು ಮಾಡುತ್ತಾ ಭಗವದ್ ಶ್ರೀರಾಮಾನುಜಾಚಾರ್ಯರು ಕರ್ನಾಟಕಕ್ಕೆ ಆಗಮಿಸಿ, ಮಂಡ್ಯ ಜಿಲ್ಲೆಯ ತೊಂಡನೂರು (ಈಗಿನ ಕೆರೆತೊಣ್ಣೂರು) ಗ್ರಾಮದಲ್ಲಿ ನೆಲೆಸುತ್ತಾರೆ. ಅದೊಮ್ಮೆ ತಿರುನಾರಾಯಣಪುರ (ಈಗಿನ ಮೇಲುಕೋಟೆ)ಯಲ್ಲಿ ಆದಿನಾರಾಯಣ ದೇವರು ನೆಲೆ ನಿಂತಿರುವ ಸಂಗತಿ ಅವರ ದಿವ್ಯದೃಷ್ಟಿಗೆ ಬಂದು ತಮ್ಮ ಶಿಷ್ಯರೊಂದಿಗೆ ತಿರುನಾರಾಯಣಪುರಕ್ಕೆ ಆಗಮಿಸಿ ಅಲ್ಲಿ ಬೆಟ್ಟದ ಮೇಲಿದ್ದ ಒಂದು ಹುತ್ತವನ್ನು ಹಾಲಿನಿಂದ ಕರಗಿಸಿ ಶ್ರೀನಾರಾಯಣಸ್ವಾಮಿ ಮೂರ್ತಿಯನ್ನು ಜೀರ್ಣೋದ್ಧಾರಗೊಳಿಸಿ ಅಲ್ಲೊಂದು ಸುಂದರವಾದ ದೇವಾಲಯವನ್ನು ನಿರ್ಮಿಸಿ ಅದನ್ನು ನಾಡಿಗೆ ಸಮರ್ಪಿಸುತ್ತಾರೆ. ಶ್ರೀನಾರಾಯಣಸ್ವಾಮಿ ನೆಲೆನಿಂತಿರುವ ಜ್ಞಾನಮಂಟಪದ ಕ್ಷೇತ್ರ ತಿರುನಾರಾಯಣಪುರ, ಯಾದವಗಿರಿ, ಯದುಗಿರಿ ಇಂದು ಮೇಲುಕೋಟೆಯಾಗಿ ತನ್ನದೇ ಆದ ಪೌರಾಣಿಕ ಹಾಗೂ ಐತಿಹಾಸಿಕ ಪರಂಪರೆಯಿಂದಾಗಿ, ದಕ್ಷಿಣ ಬದರೀಕ್ಷೇತ್ರ ಎಂದು ಹೆಸರುವಾಸಿಯಾಗಿದೆ ಮತ್ತು ಪ್ರತೀ ವರ್ಷವೂ ಇಲ್ಲಿ ನಡೆಯುವ ವೈರಮುಡಿ ಉತ್ಸವ ವಿಶ್ವ ವಿಖ್ಯಾತವಾಗಿದೆ.

ramanuja3

ಪುರಾಣ ಪ್ರಸಿದ್ಧ ಮೇಲುಕೋಟೆಯ ಅಧಿದೇವ ತಿರುನಾರಾಯಣಸ್ವಾಮಿಯನ್ನು ಮೂಲಮೂರ್ತಿಯಾಗಿ ಪ್ರತಿಷ್ಠಾಪಿಸಿದ ಶ್ರೀರಾಮಾನುಜರು, ದೆಹಲಿ ಬಾದಷಹನ ಮಗಳು ಬೀಬಿ ನಾಚಿಯಾರ್ ಬಳಿಯಲ್ಲಿದ್ದ ನಾರಾಯಣ ವಿಗ್ರಹವನ್ನು ಆಕೆಯ ಮನವೊಲಿಸಿ, ಅವಳ ತೆಕ್ಕೆಯಿಂದ ಬಿಡಿಸಿ ತಂದು ಮುದ್ದು ಮುದ್ದಾಗಿದ್ದ ಆ ಮೂರ್ತಿಗೆ ಚೆಲುವ ನಾರಾಯಸ್ವಾಮಿ(ತಮಿಳಿನಲ್ಲಿ ಶೆಲ್ವ ನಾರಾಯಣ, ಶೆಲ್ವ ಪಿಳ್ಳೈ) ಎಂದು ಕರೆದು ವೈಭವದ ಉತ್ಸವಗಳನ್ನು ಏರ್ಪಡಿಸಿ ಅದನ್ನು ಉತ್ಸವ ಮೂರ್ತಿಯಾಗಿ ಮಾಡುತ್ತಾರೆ ಹಾಗೆಯೇ ಪ್ರೀತಿಯ ಭಕ್ತಿಯಾಗಿ ನಾರಾಯಣನನ್ನು ಬಿಡಲೊಪ್ಪದ ಮುಸಲ್ಮಾನ ಬೀಬಿ ನಾಚಿಯಾರ್ ಪುಥ್ಥಳಿಯನ್ನೂ ಶ್ರೀ ನಾರಾಯಣನ ಎದುರಿನ ದೇವಿ ಪಟ್ಟ ಕೊಟ್ಟು ಹಿಂದೂ ಮತ್ತು ಮುಸಲ್ಮಾನರಲ್ಲಿ ಭಾವೈಕ್ಯತೆಯನ್ನು ಬಿತ್ತಿ ಆ ಕಾಲದಲ್ಲಿಯೇ ಕೋಮು ಸೌಹಾರ್ದತೆಯನ್ನು ಸ್ಥಾಪಿಸಿದ ಸವ್ಯಸಾಚಿಯವರು.

ಮುಂದೆ ಹೊಯ್ಸಳ ರಾಜನಾದ ಬಿಟ್ಟಿದೇವನು ರಾಮಾನುಜಾಚಾರ್ಯರ ಪರಮ ಅನುಯಾಯಿಯಾಗಿ ವಿಷ್ಣುವರ್ಧನನಾಗಿ ಪರಿವರ್ತನೆಗೊಂಡು ರಾಮಾನುಜಾಚಾರ್ಯರ ನೇತೃತ್ವ ಮತ್ತು ವಿಷ್ಣುವರ್ಧನನ ಸಾರಥ್ಯದಲ್ಲಿ ಮೈಸೂರು ರಾಜ್ಯದಾದ್ಯಂತ ಅನೇಕ ಜಗತ್ಪ್ರಸಿದ್ಧ ಸುಂದರವಾದ ದೇವಾಲಯಗಳನ್ನು ನಿರ್ಮಿಸಲು ನಿರ್ದೇಶಿಸಿ, ಕರ್ನಾಟಕವನ್ನು ಶಿಲ್ಪ ಕಲೆಗಳನಾಡನ್ನಾಗಿಸಿದ ಕೀರ್ತಿ ಶ್ರೀ ರಾಮಾನುಜರಿಗೆ ಸಲ್ಲುತ್ತದೆ

ramanjua4

ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲ. ಅವರು ತಮ್ಮ ಅಚಾರ ವಿಚಾರಗಳಿಂದ ಬ್ರಾಹ್ಮಣರಾಗುತ್ತಾರೆ ಎಂದು ಪ್ರತಿಪಾದಿಸಿ ಹೋದ ಕಡೆಯಲ್ಲೆಲ್ಲಾ ಯಾವುದೇ ಕುಲ ಜಾತಿಯನ್ನು ನೋಡದೇ ಎಲ್ಲರಿಗೂ ಓಂ ನಮೋ ನಾರಾಯಣಾಯ ನಮಃ ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ಉಪದೇಶಿಸಿದ ಮಹಾನ್ ಸಂತರು ಶ್ರೀ ರಾಮಾನುಜರು. ಭಗವಂತನನ್ನು ಒಲಿಸಲೂ ಭಕ್ತಿ ಎಂಬ ಅಸ್ತ್ರವೊಂದೆ ಸಾಕು. ಸಾಧ್ಯವಾದಗಲೆಲ್ಲಾ ಗೋವಿಂದ ಗೋವಿಂದ ಎನ್ನುವ ನಾಮ ಸ್ಮರಣೆ ಮಾಡುತ್ತಾ ಆ ಉದ್ಘೋಷ ಪ್ರತಿ ಮನೆಯಲ್ಲು ಪ್ರತಿಧ್ವನಿಸಲೆಂಬ ಸಂಕಲ್ಪದಿಂದ ದಾಸ ಪದ್ದತಿಯನ್ನು ಸೃಷ್ಟಿಸಿದ ಯೋಗಿ. ಅಸ್ಪೃಶ್ಯರು ಎಂದು ದೂರವಿಟ್ಟವರನ್ನು ದೇವಾಲಯಕ್ಕೆ ಕರೆತಂದು, ಹರಿಯ ಪ್ರೀತಿ ಪುತ್ರರು ನೀವು ಹಾಗಾಗಿ ನೀವು ಹರಿಜನರು (ಮುಂದೆ ಇದನ್ನೇ ಮಹಾತ್ಮಾ ಗಾಂಧಿಯವರೂ ಪುನರುಚ್ಚರಿಸಿದರು) ನಿಮ್ಮ ವಿಶೇಷ ಸೇವೆ ಚೆಲುವನಾರಾಯಣನಿಗಿರಲಿ ಎಂದು ಪ್ರೀತಿಯ ಚಿಲುಮೆಯನ್ನರಿಸಿದ ಚಿನ್ಮಯರು. ಸಾರ್ವಜನಿಕವಾಗಿ ಶೂದ್ರನೊಬ್ಬನನ್ನು ಆಲಂಗಿಸಿ ಮೈಲಿಗೆ ಹರಡುತ್ತದೆಂದರೆ ಮಡಿ ಹರಡುವುದಿಲ್ಲವೇ ಎಂದು ಸರ್ವ ಸಮಾನತೆಯನ್ನು ಸಾರಿದ ಸರ್ವಜ್ಞರು ಶ್ರೀ ರಾಮಾನುಜರು.

ranauna5

ತಮ್ಮ ಜೀವಿತದ ಉತ್ತರಾರ್ಧದ ಐವತ್ತು ವರ್ಷಗಳ ಕಾಲ ಶ್ರೀರಂಗದಲ್ಲಿಯೇ, ನೆಲೆಸಿ ಅಲ್ಲಿ ನೂರಾರು ಕೃತಿಗಳನ್ನು ರಚಿಸಿ ತಮ್ಮ 120ನೆಯ ವಯಸ್ಸಿನಲ್ಲಿ 1137ನೇ ಶನಿವಾರ ಮಧ್ಯಾಹ್ನ ಮಾಘಶುದ್ಧ ಸಪ್ತಮಿಯ ದಿನ ಇಚ್ಛಾ ಮರಣಿಯಾಗಿ ತಮ್ಮ ಶಿಷ್ಯಂದಿರಿಗೆ ಮುಂಚಿತವಾಗಿಯೇ ತಿಳಿಸಿ ರಾಮಾನುಜಾಚಾರ್ಯರು ಭಗವಂತನ ಪಾದಾರವಿಂದ ಸೇರಿದರು. 120 ವರ್ಷಗಳ ಸಾಧನೆಯ ದೀರ್ಘಾಯುಷ್ಯವನ್ನು ಪೂರೈಸಿ ವೈಕುಂಠವನ್ನು ತಲುಪಿ ಶ್ರೀನಾರಾಯಣನನ್ನು ಸೇರಿ 800 ವರ್ಷಗಳಾದರೂ ಇಂದಿಗೂ ಸಹಾ ಅವರ ಭೌತಿಕ ದೇಹ ಯಾವುದೇ ರಾಸಾಯನಿಕ ಕ್ರಿಯೆಯೇ ನಡೆಯದೆ ಇನ್ನೂ ದರ್ಶನಕ್ಕೆ ಯೋಗ್ಯವಾಗಿದೆ ಎಂದರೆ ಅವರೆಂತಹ ಮಹಾನ್ ತಪಸ್ವಿ ಎಂಬುದು ನಮಗೆ ತಿಳಿಯುತ್ತದೆ.

ಮಾನವ ಸಮಾಜದ ಅಭ್ಯುದಯಕ್ಕಾಗಿಯೇ ತನು ಮನ ಧನದ ಜೊತೆಗೆ ನಿಸ್ವಾರ್ಥಸೇವೆಯಿಂದ ಭಗವಂತನನ್ನು ಆರಾಧಿಸಿ ಅವನನ್ನು ಹಾಡಿ ಹೊಗಳುವ, ಅವನನ್ನು ಒಲಿಸಿಕೊಳ್ಳುವ ಶಾಸ್ತ್ರಗಳನ್ನು ತಮ್ಮ ತತ್ತ್ವ ಸಿದ್ಧಾಂತಗಳಲ್ಲಿ ಹಾಗೂ ಸಾಮಾಜಿಕ ನೆಲೆಗಟ್ಟುಗಳಲ್ಲಿ ಅಭಿವ್ಯಕ್ತಿಗೊಳಿಸಿ, ಅವುಗಳ ಸಾಮರಸ್ಯವನ್ನು ತಿಳಿಸಿಕೊಟ್ಟಿದ್ದಾರೆ. ತಮ್ಮ ತತ್ತ್ವ, ಚಿಂತನೆ, ನಡೆ ನುಡಿಗಳ ಮೂಲಕ ಶ್ರೇಷ್ಠ ಸಂತರು, ಭಾಷ್ಯಕಾರು, ದಾರ್ಶನಿಕರು, ಸಮಾಜ ಸುಧಾರಕರು, ಅನೇಕ ಕೆರೆಕಟ್ಟೆಗಳನ್ನು ಕಟ್ಟಿಸಿದ ವಾಸ್ತುಶಿಲ್ಪಿ, ದೇವಸ್ಥಾನಗಳ ಜೀರ್ಣೊದ್ಧಾರಕರು ಮತ್ತು ಉತ್ತಮ ನಿರ್ವಾಹಕರಾಗಿದ್ದಲ್ಲದೇ, ಪಾಮರರನ್ನೂ ಸಹಾ ಅಜ್ಞಾನದವೆಂಬ ಕತ್ತಲನ್ನು ನಿವಾರಿಸಿ ಜ್ಞಾನವೆಂಬ ಬೆಳಕಿನ ಕಡೆಗೆ ಕರೆದೊಯ್ದ ಶ್ರೇಷ್ಟ ಆಚಾರ್ಯರು ಎನಿಸಿಕೊಳ್ಳುತ್ತಾರೆ ಶ್ರೀ ರಾಮಾನುಜಾಚಾರ್ಯರು.

ಇಂದಿಗೂ ಸಹಾ ನಾಲ್ಕು ಸ್ವಯಂ ವ್ಯಕ್ತ ಕ್ಷೇತ್ರಗಳಾದ ಶ್ರೀರಂಗಂ, ಕಾಂಚೀಪುರಂ, ತಿರುಮಲ ಹಾಗೂ ಮೇಲುಕೋಟೆಗಳಲ್ಲಿ ನಡೆಯುವ ಪೂಜಾ ವಿಧಾನಗಳು ರಾಮಾನುಜಾಚಾರ್ಯರು ಹಾಕಿಕೊಟ್ಟ ಪದ್ಧತಿಯಲ್ಲೇ ನಡೆಯುತ್ತಿದೆ ಹಾಗಾಗಿ ಒಂದು ಸಾವಿರ ವರ್ಷವಾದರೂ ಶ್ರೀ ರಾಮಾನುಜಾಚಾರ್ಯರು ಇಂದಿಗೂ, ಎಂದಿಗೂ ನಮ್ಮೊಂದಿಗೆ ಶಾಶ್ವತವಾಗಿ ಅಜರಾಮರರಾಗಿರುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ