ಕನ್ನಡ ನಾಡಿನ ಖ್ಯಾತ ಸಾಹಿತಿ, ಚಿಂತಕ ಮತ್ತು ಹೋರಾಟಗಾರರಾಗಿದ್ದ ಡಾ ಸಿದ್ಧಲಿಂಗಯ್ಯ ರವರು ನಮ್ಮನ್ನೆಲ್ಲಾ ಬಿಟ್ಟು ಕಾಣದ ಲೋಕಕ್ಕೆ ಹೊರಟುಹೋದರು. ಕವಿ ಸಿದ್ಧಲಿಂಗಯ್ಯ ನಮ್ಮಿಂದ ಮರೆಯಾಗಿದ್ದಾರೆ ನಿಜ ಆದರೆ ಅವರ ಕಾವ್ಯ ನಮ್ಮ ಜೊತೆಗಿದೆ. ದಲಿತರ ಧ್ವನಿಯಾಗಿ ಸಾಮಾಜಿಕ ಸಮಾನತೆಯಗೋಸ್ಕರವಾಗಿ ಹೋರಾಡಿದವರು. ಅವರ ಸಾಹಿತ್ಯದ ಮೂಲ ಉದ್ದೇಶ ತುಳಿತಕ್ಕೆ ಒಳಗಾದ ಜನರನ್ನು ರಕ್ಷಿಸುವುದಾಗಿದೆ. ಪ್ರಖರ ಚಿಂತನೆ ವಿಡಂಬನಾ ಪ್ರಜ್ಞೆ ಅವರಲ್ಲಿತ್ತು ಎಂದು ಸಂಶೋಧಕ, ಕನ್ನಡ ಅಧ್ಯಾಪಕ ಡಾ. ಸುರೇಶ ಹನಗಂಡಿ ನುಡಿನಮನ ಸಲ್ಲಿಸಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಘಟಕ ಮೂಡಲಗಿ ಗೂಗಲ್ ಮೀಟ್ ವೇದಿಕೆ ಮೂಲಕ ಹಮ್ಮಿಕೊಂಡಿದ್ದ "ದಲಿತ ಕವಿ ನಾಡೋಜ ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನ" ಕಾರ್ಯಕ್ರಮದಲ್ಲಿ ಮಾತನಾಡಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ ಅವರು ಮರೆಯಲಾಗದ ಮಾಣಿಕ್ಯ ಎಂದರು.
ಚಿಕ್ಕೋಡಿ ಜಿಲ್ಲೆಯ ಅಭಾಸಾಪ ಅಧ್ಯಕ್ಷರಾದ ಶ್ರೀ ಶಂಕರ ಕ್ಯಾಸ್ತಿ ಮಾತನಾಡಿ, ಇಕ್ಕುರ್ಲಾ... ಒದಿರ್ಲಾ... ಯಾರಿಗೆ ಬಂತು.. ಎಲ್ಲಿಗೆ ಬಂತು... ನಲವತ್ತೇಳರ ಸ್ವಾತಂತ್ರ್ಯ... ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ.… ಇತ್ಯಾದಿ ಇತ್ಯಾದಿ ಹೋರಾಟದ ಹಾಡುಗಳಿಂದ ಹಿಡಿದು ಆ ಬೆಟ್ಟದಲ್ಲೀ….. ಬೆಳದಿಂಗಳಲ್ಲೀ..... ಸುಳಿದಾಡಬೇಡ ಗೆಳತಿ.... ಮುಂತಾದ ಹಾಡುಗಳವರೆಗೆ ಡಾ. ಸಿದ್ಧಲಿಂಗಯ್ಯ ಮಾನವೀಯವಾಗಿ ಅತ್ಯಂತ ಎತ್ತರಕ್ಕೆ ಬೆಳೆದು ನಿಂತಿದ್ದರು ಎಂದು ಕವಿಯನ್ನು ಸ್ಮರಿಸಿದರು.
ವಿಶುಕುಮಾರ, ಪತ್ರಕರ್ತ ಶ್ರೀ ಬಾಲಶೇಖರ ಬಂದಿ ಮುಂತಾದವರು ನುಡಿ ನಮನ ಸಲ್ಲಿಸಿದರು. ಬೆಳಗಾವಿ-ಚಿಕ್ಕೋಡಿ ವಿಭಾಗೀಯ ಸಂಯೋಜಕರಾದ ಶ್ರೀ ರಾಮಚಂದ್ರ ಕಾಕಡೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ಧಲಿಂಗಯ್ಯ ನವರು ಹೃದಯ ಶ್ರೀಮಂತರಾಗಿದ್ದರು. ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅವರ ಜೊತೆಗೆ ಕಳೆದ ದಿನಗಳನ್ನು ಮೇಲುಕು ಹಾಕುತ್ತಾ ಶ್ರೀಯುತರ ಅಗಲಿಕೆಯು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಣದೋಳಿಯ ಜಡಿಸಿದ್ದೇಶ್ವರ ಮಠದ ಶ್ರೀ ಶ್ರೀ ಶಿವಾನಂದ ಮಹಾಸ್ವಾಮಿಗಳು, ಪ್ರೊ. ಸಂಗಮೇಶ ಗುಜಗೊಂಡ, ಮಾರುತಿ ದಾಸನ್ನವರ, ತಾಲೂಕು-ಜಿಲ್ಲೆಯ ವಿವಿಧ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಘಟಕದ ಅಧ್ಯಕ್ಷರಾದ ಪ್ರೊ. ಸುರೇಶ ಲಂಕೆಪ್ಪನವರ ನಿರೂಪಿಸಿದರು, ಸಂಚಾಲಕ ಪ್ರೊ. ಶಂಕರ ನಿಂಗನೂರ ಸ್ವಾಗತಿಸಿದರು, ಸಹ ಸಂಚಾಲಕ ಪ್ರೊ. ಚಂದ್ರಶೇಖರ ಲಕ್ಷೆಟ್ಟಿ ಶಾಂತಿಮಂತ್ರ ಪಠಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ