ವಿಷಯಕ್ಕೆ ಹೋಗಿ

ಆದಿಗುರು ಶಂಕರಾಚಾರ್ಯರು

 ಆದಿ ಗುರು‌ ಶ್ರೀ ಶಂಕರಾಚಾರ್ಯರು

ಅದು ಕ್ರಿ.ಶ, ಏಳನೇ ಶತಮಾನ. ಭಾರತದ ಸನಾತನ ಧರ್ಮಕ್ಕೆ ಅತ್ಯಂತ ಕ್ಲಿಷ್ಟಕರವಾದ ಸಂದಿಗ್ಧ ಪರಿಸ್ಥಿತಿಯಿದ್ದ ಕಾಲವದು. ಒಂದು ಕಡೆ ಅಹಿಂಸಾ ಪರಮೋಧರ್ಮಃ ಎಂದು ಹೇಳುತ್ತಲೇ ಬೌದ್ಧ ಧರ್ಮ ಭಾರತದಲ್ಲೆಲ್ಲಾ ಅತ್ಯಂತ ವೇಗವಾಗಿ ಹರಡಿದ್ದಲ್ಲದೇ ವಿದೇಶಗಳಿಗೂ ತನ್ನ ಅನುಯಾಯಿಗಳನ್ನು ಕಳುಹಿಸಿಯಾಗಿತ್ತು. ಸನಾತನ ಧರ್ಮದ ಕಟ್ಟುಪಾಡು ಮತ್ತು ಅತೀಯಾದ ಆಚಾರ ಮಡಿ ಹುಡಿಗಳಿಂದ ಬೇಸತ್ತವರು ಬೌದ್ಧ ದರ್ಮದ ಕಡೆ ಆಕರ್ಷಿತರಾತೊಡಗಿದ್ದರೆ ಮತ್ತೊಂದೆಡೆ, ದೇವರು ಎಂಬುವುದೇ ಇಲ್ಲ ಅದೆಲ್ಲಾ ಕಟ್ಟು ಕಥೆ ಎನ್ನುವಂತಹ ಚಾರ್ವಾಕರ ಹಾವಳಿ. ನಮ್ಮ ಸನಾತನ ಧರ್ಮಕ್ಕೆ ವೇದವೇ ಆಧಾರ.ಅದರಲ್ಲಿ ಹೇಳಿದ್ದೆಲ್ಲವೂ ಸರಿ ಎಂದರೆ ಅವರುಗಳು ವೇದ ಎಂಬುದೇ ಅಸತ್ಯ. ಸ್ವಾರ್ಥ ಎಂದು ವಾದಿಸುತ್ತಿದ್ದರು. ಬದುಕಿರುವಾಗ ದಾನ ಧರ್ಮ ಮತ್ತು ಪುಣ್ಯ ಕಾರ್ಯಗಳನ್ನು ಮಾಡಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದರೆ ಅವರು ಸ್ವರ್ಗ ನರಕ ಎನ್ನುವುದು ಇಲ್ಲವೇ ಇಲ್ಲ. ಆಳುವ ರಾಜನೇ ಪ್ರತ್ಯಕ್ಷ ದೇವರು ಅವನೇ ಪರಮೇಶ್ವರ. ಹಾಗಾಗಿ ಇದ್ದಾಗಲೇ ಸರಿಯಾಗಿ ನೋಡಿಕೊಳ್ಳದೇ ಸತ್ತ ಮೇಲೆ ಮಾಡುವ ಅಪರ ಕ್ರಿಯೆಗಳು, ಯಜ್ಞ-ಯಾಗಾದಿಗಳು ಪುರೋಹಿತರ ಹೊಟ್ಟೆ ಪಾಡಿಗೆ ಮಾಡಿಕೊಂಡ ಢಂಬಾಚಾರಗಳು ಎಂದೇ ವಾದಿಸುತ್ತಿದ್ದರು ಯಜ್ಞದಲ್ಲಿ ಬಲಿ ಕೊಡಲಾಗುವ ಪಶು ಸ್ವರ್ಗಕ್ಕೆ ಹೋಗುತ್ತದೆ ಎನ್ನುವುದಾದರೇ, ಯಜ್ಞ ಮಾಡುವವರು ತಮ್ಮ ತಂದೆಯನ್ನೇ ಬಲಿ ಕೊಟ್ಟು ಅವರನ್ನೇ ಸ್ವರ್ಗಕ್ಕೇ ನೇರವಾಗಿ ಎಕೆ ಕಳುಹಿಸಬಾರದು ಎಂಬ ವಿತಂಡ ವಾದ ಮಾಡುತ್ತಿದ್ದರು. ಸೈದ್ಧಾಂತಿಕ ಜೀವನಕ್ಕಿಂತ ಪ್ರಾಯೋಗಿಕ ಜೀವನಕ್ಕೆ ಹೆಚ್ಚಿನ ಒತ್ತು ಕೊಟ್ಟು ಬದುಕಿದ್ದಾಗಲೇ ಸಾಲಾ ಸೋಲಾ ಮಾಡಿಯಾದರೂ ಅನುಭವಿಸಿಯೇ ಬಿಡಬೇಕು. ಸತ್ತ ಮೇಲೆ ಸಿಗುವ ಸ್ವರ್ಗ, ವೈಕುಂಠ ನೋಡಿದವರು ಯಾರು ಎಂದೆಲ್ಲಾ ಹೇಳುತ್ತಿದ್ದರೆ, ಬಹುತೇಕರಿಗೆ ಅರೇ ಹೌದಲ್ಲಾ ಇವರು ಹೇಳುತ್ತಿರುವುದು ನಿಜವೇ ಎಂದೆನಿಸಿ ಎಲ್ಲರ ಮನೋಸ್ಥಿತಿಗಳು ಬದಲಾಗುತ್ತಿದ್ದಂತಹ ಕಾಲವದು.

ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸನಾತನ ಧರ್ಮಕ್ಕೆ ಆಶಾಕಿರಣವಾಗಿ ಹುಟ್ಟಿ ಬಂದವರೇ ಶ್ರೀ ಶಂಕರಾಚಾರ್ಯರು. ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರೇ ಮೊದಲಿಗರು ಹಾಗಾಗಿ ಅವರನ್ನು ಆದಿ ಶಂಕರರು ಎಂದೇ ಗುರುತಿಸಲಾಗುತ್ತದೆ ತಮ್ಮ ಜೀವೀತಾವಧಿಯ 32 ವರ್ಷಗಳ ಕಾಲದ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ ಅದ್ವೈತ ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ ಹೇಳಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.

ಅದ್ವೈತವನ್ನು ಪ್ರತಿಪಾದಿಸಿದ್ದರಿಂದ ಅವರನ್ನು ಅದ್ವೈತ ಸಿದ್ಧಾಂತಿ ಎಂದೇ ಸಂಬೋಧಿಸಲಾಗುತ್ತದೆ. ಅಲ್ಲಿಯವರೆಗೂ ಎಲ್ಲರೂ ಆತ್ಮ ಮತ್ತು ಪರಮಾತ್ಮ ಎಂಬುದು ಬೇರೆ ಬೇರೆ. ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಆತ್ಮ, ಪರಮಾತ್ಮನಲ್ಲಿ ಲೀನವಾಗಬೇಕು ಎಂದೇ ಪ್ರತಿಪಾದಿಸುತ್ತಿದ್ದರು. ಆದರೆ ಶಂಕರಾಚಾರ್ಯರು ಆತ್ಮ ಮತ್ತು ಪರಮಾತ್ಮಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಎರಡೂ ಒಂದೇ. ಆತ್ಮನೇ ಪರಮಾತ್ಮನು . ಪರಮಾತ್ಮನೇ ಆತ್ಮನು. ಎಂಬುದಾಗಿ ಅದ್ವೈತ ಸಿದ್ಧಾಂತವನ್ನು ತೋರಿಸಿಕೊಟ್ಟರು. ಸಂಸ್ಕೃತದಲ್ಲಿ “ದ್ವಿ” ಎಂದರೆ ಎರಡು ಎಂದರ್ಥ. ಹಾಗಾಗಿ “ಅ” + “ದ್ವೈತ” ಅಂದರೆ “ಎರಡಲ್ಲದ್ದು” ಇದುವೇ ಅದ್ವೈತ ಸಿಧ್ಧಾಂತದ ಮೂಲ ಸಾರ. ಹಾಗಾಗಿ ಅಹಂ ಬ್ರಹ್ಮಾಸ್ಮಿ ಅಂದರೇ ನನ್ನೊಳಿರುವ ಆತ್ಮವೇ ಪರಂಬ್ರಹ್ಮ. “ತತ್ ತ್ವಮ್ ಅಸಿ” ನಾವೆಲ್ಲರೂ ಅದೇ ಆತ್ಮವೇ ಆಗಿದ್ದೇವೆ. ಎಂಬುದೇ ಅದ್ವೈತ ತತ್ವದ ಮೂಲ ಮಂತ್ರ. ಹಾಗಾಗಿ ಪರಮಾತ್ಮ, ಎಂದರೆ ಆತ್ಮ. ಅದು ಮಾತ್ರವೇ ಸತ್ಯ. ಉಳಿದಿದ್ದೆಲ್ಲವೂ ಮಿಥ್ಯ ಹಾಗೂ ಸರ್ವಂ ಬ್ರಹ್ಮಮಯಂ ಜಗತ್ ಅಂದರೆ ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ ಎಂಬುದನ್ನು ಜಗತ್ತಿಗೆ ಸಾರುವ ಮೂಲಕ ಸನಾತನ ಧರ್ಮವನ್ನು ಪುನರುತ್ಥಾನ ಮಾಡಿದ ಮಹಾನ್ ಗುರುಗಳಾದರು.

ಈಗಿನ ಕೇರಳದ ಪೂರ್ಣಾ ನದಿ ಹರಿಯುತ್ತಿದ್ದ ಸಸಲಂ (ಕಾಲಟಿ) ಎಂಬ ಸ್ಥಳದಲ್ಲಿ ವಾಸವಾಗಿದ್ದ ಶ್ರೀ ಕಾಯ್‌ಪಿಳ್ಳೆ ಶಿವಗುರು ನಂಬೂದರಿ ಮತ್ತು ಶೀಮತಿ ಆರ್ಯಾಂಬಾ ಎಂಬ ದಂಪತಿಗಳಿಗೆ ಬಹಳ ವರ್ಷ ಮಕ್ಕಳಾಗದಿದ್ದುದರಿಂದ ತ್ರಿಶೂರಿನ ವಡಕ್ಕನಾಥನ ಪ್ರಾರ್ಥನೆ ಮಾಡಿಕೊಂಡ ಫಲವಾಗಿ ಶ್ರೀ ಶಂಕರರು ಕೇರಳದ ಕಾಲಡಿ ಎಂಬ ಊರಿನಲ್ಲಿ ಕ್ರಿ. ಶ. 788 (ಶಂಕರಾಚಾರ್ಯರ ಕಾಲ ಘಟ್ಟದ ಬಗ್ಗೆ ಬಹಳ ಜಿಜ್ಞಾಸೆ ಇದೆ. ಹಲವರ ಪ್ರಕಾರ ಶಂಕರಾಚಾರ್ಯರು ಕ್ರಿ.ಪೂ ಐದನೇ ಶತಮಾನಕ್ಕೆ ಸೇರಿದವರು ಎಂದು ಹೇಳುತ್ತಾರೆ) ರಲ್ಲಿ ವೈಶಾಖ ಶುದ್ಧ ಪಂಚಮಿಯಂದು ಜನಿಸಿದರು.

ಶಂಕರರು ಬಹಳ ಸಣ್ಣ ವಯಸ್ಸಿನಲ್ಲಿ ಇರುವಾಗಲೇ ಅವರ ತಂದೆಯವರನ್ನು ಕಳೆದುಕೊಂಡ ಪರಿಣಾಮ ಶಂಕರರಿಗೆ ಐದು ವರ್ಷದವರಿದ್ದಾಗಲೇ ಅವರ ಉಪನಯನವನ್ನು ತಾಯಿ ಆರ‍್ಯಾಂಬಾ ನೆರವೇರಿಸಿದರು. ಆ ಸಣ್ಣ ವಯಸ್ಸಿಗೇ ಅಸಾಧಾರಣ ಮೇಧಾವಿಯಾದ ಶಂಕರರು ಎಂಟು ವರ್ಷಕ್ಕೆಲ್ಲಾ ನಾಲ್ಕು ವೇದಗಳನ್ನೂ ಕಲಿತು ಅದನ್ನು ಕರಗತ ಮಾಡಿಕೊಂಡಿದ್ದಲ್ಲದೇ ಶಾಸ್ತ್ರ ಮತ್ತು ಪುರಾಣಗಳನ್ನು ಅನೇಕ ಗುರುಗಳಿಂದ ಆಭ್ಯಾಸ ಮಾಡಿ ಕೇವಲ ಹನ್ನೆರಡನೇ ವರ್ಷಕ್ಕೆಲ್ಲಾ ಸಕಲ ಶಾಸ್ತ್ರ ಪಾರಂಗತರಾಗುತ್ತಾರೆ.

ಶಂಕರರು ಜನ್ಮಸ್ಥಳ ಸಸಲಂನಿಂದ ಕಾಲಡಿ ಆದದ್ದೂ ಒಂದು ರೋಚಕವೇ. ದೈನಂದಿನ ಸ್ನಾನಕ್ಕಾಗಿ ತಮ್ಮ ಮನೆಯಿಂದ ಸುಮಾರು 3 ಕಿ.ಮೀ. ದೂರವಿದ್ದ ಪೂರ್ಣಾನದಿಗೆ ತಾಯಿ ಮಗ ನಡೆದುಕೊಂಡೇ ಹೋಗಿ ತಮ್ಮ ಪ್ರಾತರ್ವಿಧಿಗಳನ್ನು ಮುಗಿಸಿಕೊಂಡು ಬರುವುದು ವಾಡಿಕೆಯಾಗಿರುತ್ತದೆ. ಅದೊಂದು ದಿನ ಹಾಗೆಯೇ ನಡೆದುಕೊಂಡು ಹೋಗುವಾಗ ಶಂಕರಾಚಾರ್ಯದ ತಾಯಿ ಆರ್ಯಾಂಬ ನಿಶ್ಶಕ್ತಳಾಗುತ್ತಾರೆ. ತಾಯಿಯ ಕಷ್ಟವನ್ನು ನೋಡಲಾಗದ ಬಾಲಕ ಶಂಕರಾಚಾರ್ಯರು ತಮ್ಮ ನೆಚ್ಚಿನ ದೇವರಾದ ಶ್ರೀ ಕೃಷ್ಣನಲ್ಲಿ ಬೇಡಿಕೊಂಡಾಗ, ಬಾಲಕನ ಭಕ್ತಿಗೆ ಮೆಚ್ಚಿದ ಭಗವಂತ ನಿನ್ನ ಸಣ್ಣ ಪಾದದ ಗುರುತು ಎಲ್ಲೆಲ್ಲಿ ಬೀಳುತ್ತದೆಯೋ ಆದೇ ದಿಕ್ಕಿನಲ್ಲಿ ನದಿ ಹರಿಯಲಿದೆ ಎಂದು ಆಶೀರ್ವದಿಸುತ್ತಾರೆ. ಅದಕ್ಕನುಗುಣವಾಗಿ ಬಾಲಕ ಶಂಕರಾಚಾರ್ಯರು ತನ್ನ ಪುಟ್ಟ ಪಾದಗಳನ್ನು ನೆಲದ ಮೇಲೆ ಗುರುತಿಸುತ್ತಾ ತನ್ನ ಮನೆಯ ಆಸು ಪಾಸಿಗೆ ಬಂದಾಗ ಪ್ರಬಲವಾದ ಪೆರಿಯಾರ್ ನದಿಯೂ ತನ್ನ ಪಾತ್ರವನ್ನು ಬದಲಿಸುತ್ತಾ ಪಾದಗಳ ನಡೆದ ಹಾದಿಯಲ್ಲಿಯೇ ತನ್ನ ಹೊಸ ದಿಕ್ಕನ್ನು ತೆಗೆದುಕೊಂಡಿತು ಹಾಗಾಗಿ ಅಂದಿನಿಂದ ಸಾಸಲಂ ಎಂಬ ಸ್ಥಳ ಕಾಲಡಿ ಎಂಬ ಹೆಸರಾಯಿತು ಎಂಬ ಪ್ರತೀತಿ ಇದೆ.

ಚಿಕ್ಕವಯಸ್ಸಿನಲ್ಲಿಯೇ ಸಕಲ ವೇದಪಾರಂಗತರಾದ ಶಂಕರರಿಗೆ ಸಣ್ಣ ವಯಸ್ಸಿನಿಂದಲೂ ಲೌಕಿಕಕ್ಕಿಂತಲೂ ಸಂನ್ಯಾಸತ್ವದ ಕಡೆಯೇ ಒಲವು. ಆದರೆ ಬಯಸೀ ಬಯಸೀ ಪಡೆದ ಒಬ್ಬನೇ ಮಗ ಸನ್ಯಾಸಿಯಾಗಿಬಿಟ್ಟರೆ ಈ ಇಳೀ ವಯಸ್ಸಿನಲ್ಲಿ ತನ್ನನ್ನು ನೋಡಿಕೊಳ್ಳುವವರು ಯಾರೂ ಎಂಬ ಚಿಂತೆಯಿಂದಾಗಿ ಅವರ ತಾಯಿಯವರು ಶಂಕರರಿಗೆ ಸನ್ಯಾಸತ್ವ ಸ್ವೀಕರಿಸಲು ಒಪ್ಪಿರಲಿಲ್ಲ. ತಾಯಿಯನ್ನು ಹೇಗಾದರು ಮಾಡಿ ಒಪ್ಪಿಸಲೇ ಬೇಕೆಂದು ನಿರ್ಧರಿಸಿದ ಶಂಕರಾಚಾರ್ಯರು ಅದೊಮ್ಮೆ ಹೊಳೆಯಲ್ಲಿ ಮುಂಜಾನೆ ಸ್ನಾನಕ್ಕೆ ಇಳಿದಾಗ ಮೊಸಳೆಯೊಂದು ಅವರ ಕಾಲನ್ನು ಹಿಡಿಯುತ್ತದೆ. ಅದರಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಆಗದಿದ್ದಾಗ, ಅಮ್ಮಾ, ಹೇಗೂ ಸಾಯುತ್ತಿದ್ದೇನೆ. ಕೊನೆಯ ಹೊತ್ತಿಗೆ ಸಂನ್ಯಾಸ ಸ್ವೀಕರಿಸಲು ಒಪ್ಪಿಕೋ ಎಂದು ಕೇಳಿಕೊಳ್ಳುತ್ತಾರೆ. ಮಗನ ಆರ್ತನಾದಕ್ಕೆ ಮರುಗಿ ಅಲ್ಲಿಯೇ ಇದ್ದ ಅವರ ತಾಯಿ ಒಪ್ಪಿಗೆ ನೀಡಿದಾಗ, ಶಂಕರರು ಅಲ್ಲಿಯೇ ಸ್ವಯಂ ಸಂನ್ಯಾಸ ಸ್ವೀಕರಿಸಿದಾಗ ಮೊಸಳೆ ಅವರ ಕಾಲು ಬಿಟ್ಟಿತು ಎಂಬ ದೃಷ್ಟಾಂತವಿದೆ. ತಾಯಿಯ ಮನಸ್ಸನ್ನು ಅರಿತಿದ್ದ ಶಂಕರರು ನಿನ್ನ ಅಂತಿಮ ಕ್ಷಣಗಳಲ್ಲಿ ನಾನು ಎಲ್ಲಿದ್ದರೂ ನಿನ್ನ ಎದುರು ಬಂದು ನಿಲ್ಲುತ್ತೇನೆ ಎಂಬುದಾಗಿ ಮಾತು ನೀಡೀ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೂಕ್ತ ಗುರುಗಳನ್ನು ಅರಸುತ್ತಾ ಉತ್ತರದ ಕಡೆ ಪ್ರಯಾಣಿಸುತ್ತಾರೆ.

Shank4

ಹಾಗೆ ಗುರುಗಳನ್ನು ಅರಸುತ್ತಿರುವಾಗ ನರ್ಮದಾ ನದಿ ತೀರದಲ್ಲಿ ಬಹು ದೊಡ್ಡ ಜ್ಞಾನಿಗಳಾದ ಗೌಡಪಾದರ ಶಿಷ್ಯರಾದ ಗೋವಿಂದ ಭಗವತ್ಪಾದರನ್ನು ಭೇಟಿಯಾಗಿ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಎಂದು ಕೇಳಿಕೊಳ್ಳುತ್ತಾರೆ. ಆಗ ಗೋವಿಂದ ಭಗವತ್ಪಾದರು ನೀನಿನ್ನು ಚಿಕ್ಕಹುಡುಗ. ಸ್ವಲ್ಪ ದೊಡ್ಡವನಾದ ಮೇಲೆ ಬಾ ಎಂದು ತಿಳಿಸುತ್ತಾರೆ. ಆದರೆ ಛಲ ಬಿಡದ ಶಂಕರರು ಅವರ ಹಿಂದೆಯೇ ದುಂಬಾಲು ಬೀಳುತ್ತಾರೆ. ಹೇಗಾದರೂ ಮಾಡಿ ಅವರಿಂದ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿದ ಗುರುಗಳು ನೋಡು ಇಲ್ಲಿ ವಿಷ್ಣುಸಹಸ್ರನಾಮದ ತಾಳೆ ಗರಿಯಿದೆ. ಅದಕ್ಕೆ ಭಾಷ್ಯ ಬರೆದರೆ ನಾನು ನಿನ್ನನ್ನು ನನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತೇನೆ ಎನ್ನುತ್ತಾರೆ. ಅವರ ಮನಸ್ಸಿನಲ್ಲಿ ಈ ಭಾಷ್ಯ ಬರೆಯುವುದಕ್ಕೆ ಕನಿಷ್ಟ ಪಕ್ಷ 2 ವರ್ಷವಾಗುತ್ತದೆ. ಅಲ್ಲಿಯವರೆಗೆ ಈ ಹುಡುಗನನ್ನು ಸಾಗಹಾಕಬಹುದೆಂದು ತಿಳಿದಿರುತ್ತಾರೆ ಆದರೆ ದೈವೀ ಸ್ವರೂಪವಾದ ಶಂಕರರು ಮರುದಿನವೇ ಭಾಷ್ಯದ ಸಮೇತ ಬಂದು ಗುರುಗಳಿಗೆ ಒಪ್ಪಿಸುತ್ತಾರೆ. ಇಂತಹ ಅದ್ಭುತವನ್ನು ನೋಡಿ ಆನಂದಭರಿತರಾದ ಗೋವಿಂದಪಾದರು. ಅಯ್ಯಾ ನಾನು ಗುರುವಲ್ಲ. ನೀನೇ ನನಗೆ ಗುರು ಎಂದು ನಮಸ್ಕರಿಸಿ ಮನಸಾರೆ ಅವರನ್ನು ಶಿಸ್ಯರನ್ನಾಗಿ ಸ್ವೀಕರಿಸಿ ಅವರಿಗೆ ಯೋಗ, ವೇದ, ಉಪನಿಷತ್, ವೇದಾಂತಗಳನ್ನು ಕಲಿಸುತ್ತಾರೆ. ಅಲ್ಲಿಂದ ಮುಂದೆ ಶಂಕರರು ಕಾಶಿಗೆ ತೆರಳಿ ಅಲ್ಲಿ ಕೆಲವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡು ಅವರಿಗೂ ವೇದಾಂತದ ಪಾಠ ಹೇಳಿಕೊಟ್ಟು ತಮ್ಮ ಶಿಷ್ಯಗಣವನ್ನು ಬೆಳೆಸುತ್ತಾರೆ.

ಶಂಕರಾಚಾರ್ಯರು ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಆಕೆಯ ಕೊನೆಗಾಲದಲ್ಲಿ ಕಾಲಟಿಗೆ ಹಿಂದಿರುಗಿ, ಆಕೆಯ ಅಂತಿಮ ವಿಧಿಗಳನ್ನು ಪೂರೈಸಿ ಮತ್ತೆ ತಮ್ಮ ದೇಶ ಪರ್ಯಟನೆಯನ್ನು ಮುಂದುವರೆಸುತ್ತಾರೆ.

sharadha_peetha

ಕಿ.ಶ. ಒಂಬತ್ತನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಶಾರದಾ ಪೀಠ (ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಿಥಿಲಾವಸ್ಥೆಯಲ್ಲಿದೆ) ಎಂಬುದೊಂದಿತ್ತು ಅದನ್ನು ಸರ್ವಜ್ಞ ಪೀಠ ಎಂದೂ ಕರೆಯಲಾಗುತ್ತಿತ್ತು. ಆಗಿನ ಕಾಲಕ್ಕೇ ಮಹಾನ್ ಘಟಾನುಘಟಿ ಪಂಡಿತರು ಎನಿಸಿಕೊಂಡಿದ್ದವರೆಲ್ಲರೂ ಅಲ್ಲಿ ಆಶ್ರಯ ಪಡೆದಿದ್ದರು. ಈ ಸರ್ವಜ್ಞ ಪೀಠಕ್ಕೆ ಅಧಿಪತಿಯಾಗ ಬೇಕು ಎಂದೆಣಿಸುವವರು ಮೊದಲು ಅಲ್ಲಿದ್ದ ಈ ಎಲ್ಲಾ ಪಂಡಿತರೊಂದಿಗೆ ವಾದ ಮಾಡಿ ಅವರನ್ನು ಸೋಲಿಸಿದಲ್ಲಿ ಮಾತ್ರವೇ ಆ ಪೀಠವನ್ನು ಏರುವ ಅಧಿಕಾರವನ್ನು ಪಡೆದುಕೊಳ್ಳುತ್ತಿದ್ದರು. ಅಂತಹ ಸರ್ವಜ್ಞ ಪೀಠಕ್ಕೆ ನಾಲ್ಕೂ ದಿಕ್ಕುಗಳಿಗೆ ನಾಲ್ಕು ಬಾಗಿಲಿದ್ದು ದಕ್ಷಿಣ ಭಾರತದಿಂದ ಅದುವರೆವಿಗೂ ಯಾವ ಶ್ರೇಷ್ಠ ಪಂಡಿತರೂ ಬಾರದೇ ಇದ್ದುದ್ದರಿಂದ ದಕ್ಷಿಣದ ಬಾಗಿಲು ತೆರೆದೇ ಇರಲಿಲ್ಲವಂತೆ. ಶಂಕರಾಚಾರ್ಯರು ದಕ್ಷಿಣದ ಬಾಗಿಲನ್ನು ತೆರೆಸಿ ಅದರ ಮೂಲಕವೇ ಪ್ರವೇಶ ಮಾಡಿ, ಎಲ್ಲರನ್ನೂ ವಾದದಲ್ಲಿ ಮಣಿಸಿ ಶಾರಾದಾ ದೇವಿಯ ನಂತರ ಸರ್ವಜ್ಞ ಪೀಠವನ್ನು ಏರಿದರು.

ಹೀಗೆ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿ ಸನಾತನ ಧರ್ಮವನ್ನು ಎತ್ತಿ ಹಿಡಿದರು. ಅಂತಹುದರಲ್ಲಿ ಅವರು ಮಂಡನ ಮಿಶ್ರರನ್ನು ವಾದದಲ್ಲಿ ಸೋಲಿಸಿದ ಘಟನೆ ಬಹು ಪ್ರಮುಖವಾದುದು.

mandan_mishra

ವೇದಗಳ ಅಂತಿಮ ತಾತ್ಪರ್ಯ ಅದ್ವೈತ ಸಿದ್ಧಾಂತ ಎಂದು ಜಗತ್ತೇ ಒಪ್ಪಿಕೊಳ್ಳ ಬೇಕಾದಲ್ಲಿ ಅಂದಿನಕಾಲದ ಅತ್ಯಂತ ಪ್ರಸಿದ್ಧ ಮೀಮಾಂಸ ಪಂಡಿತರಾದ, ಕರ್ಮವೇ ವೇದ ತಾತ್ಪರ್ಯವೆಂದು ಹೇಳುವ ಮಂಡನಮಿಶ್ರರ ವಿರುದ್ಧ ವಾದದಲ್ಲಿ ಜಯಿಸಬೇಕು . ಅವನನ್ನು ಜಯಿಸಿದರೆ ಈ ಭೂಮಂಡಲದಲ್ಲಿರುವವರನ್ನೆಲ್ಲ ಜಯಿಸಿದಂತೆಯೇ! ಆಗ ನಿಮ್ಮ ಕೀರ್ತಿ, ದಿಗಂತ ಪರ್ಯಂತ ವ್ಯಾಪಿಸುತ್ತದೆ ಎಂದು ಶ್ರೀ ಕುಮಾರಿಲಭಟ್ಟರು ಸೂಚಿಸಿದ್ದರಿಂದ ಮಂಡನ ಮಿಶ್ರರನ್ನು ಕಾಣಲು ಮಾಹಿಷ್ಮತಿ (ಇಂದಿನ ಬಿಹಾರದಲ್ಲಿರುವ ಮಹಿಷಿ ಬಂಗಾವನ್) ನಗರಕ್ಕೆ ಬರುತ್ತಾರೆ, ಅವರ ಧರ್ಮಪತ್ನಿಯಾದ ಉಭಯ ಭಾರತಿಯೂ ಸಹಾ ಮಂಡನ ಮಿಶ್ರರಷ್ಟೇ ವಿಶಾರದೆ. ಹಾಗಾಗಿ ಈ ಇಬ್ಬರು ದಿಗ್ಗಜರ ನಡುವಿನ ವಾಗ್ವಾದಕ್ಕೆ ಆಕೆಯೇ ನಿರ್ಣಾಯಕಿಯಾಗುತ್ತಾರೆ. ಸುಮಾರು ಹದಿನೈದು ದಿನಗಳ ಕಾಲ ಸತತವಾಗಿ ನಡೆದ ವಾದ ವಿವಾದದಲ್ಲಿ ಒಬ್ಬರಿಗೊಬ್ಬರು ಸೋಲದಿರುವಾಗ ಆಕೆ ಇಬ್ಬರ ಕೊರಳಲ್ಲಿಯೂ ಹಾರವೊಂದನ್ನು ಹಾಕಿ ಯಾರ ಕೊರಳ ಹಾರ ಬಾಡುತ್ತದೆಯೋ ಅವರು ಸೋತಂತೆ ಎಂಬ ನಿರ್ಣಯಕ್ಕೆ ಬರುತ್ತಾಳೆ. ಶಾಂತ ಚಿತ್ತದಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಶಂಕರರ ಕೊರಳಲ್ಲಿದ್ದ ಹೂವಿನ ಹಾರ ಒಂದು ಚೂರೂ ಬಾಡುವುದೇ ಇಲ್ಲ. ಅಂತಿಮವಾಗಿ ತನ್ನ ಪತಿ ಮಂಡನ ಮಿಶ್ರರ ಹಾರ ಬಾಡಿದಾಗ ಈ ವಾದದಲ್ಲಿ ತನ್ನ ಪತಿ ಸೋತಿರುವುದಾಗಿ ತೀರ್ಪು ಕೊಡುತ್ತಾಳಲ್ಲದೇ, ತನ್ನನ್ನೂ ಗೆಲ್ಲಬೇಕೆಂಬ ಪಂಥವನ್ನು ಒಡ್ಡಿ ಸನ್ಯಾಸಿಗಳಾಗಿದ್ದ ಬಾಲಶಂಕರರಿಗೆ ಕಾಮಸೂತ್ರದ ಮೇಲಿನ ಸಂಸಾರಿಕ ವಿಚಾರದಲ್ಲಿ ಪ್ರಶ್ನೆ ಗಳನ್ನು ಕೇಳುತ್ತಾಳೆ. ಹೇಳಿ ಕೇಳಿ ಸಂನ್ಯಾಸಿಗಳಾದ ಶಂಕರರಿಗೆ ಅದರ ಉತ್ತರ ಗೊತ್ತಿರಲಿಲ್ಲ. ಹಾಗಾಗಿ ಈ ಪ್ರಶ್ನೆಗೆ ಉತ್ತರಿಸಲು ಆರು ತಿಂಗಳ ಸಮಯ ಬೇಕೆಂದು ಕೋರಿ, ಅಕಾಲ ಮರಣ ಹೊಂದಿದ ವಿಕ್ರಮ ರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ, ಅವನ ಪತ್ನಿಯಿಂದ ಭಾರತಿ ಕೇಳಿದ ಪ್ರಶ್ನೆ ಗಳಿಗೆ ಉತ್ತರ ಪಡೆದು, ತಮ್ಮ ದೇಹಕ್ಕೆ ಪುನರ್ ಪ್ರವೇಶ ಮಾಡಿ, ಭಾರತೀ ದೇವಿಯ ಬಳಿ ಬಂದು ಆಕೆಗೆ ಸಮಂಜಸವಾದ ಉತ್ತರವನ್ನು ಕೊಟ್ಟು ಆಕೆಯನ್ನೂ ವಾದದಲ್ಲಿ ಸೋಲಿಸುತ್ತಾರೆ. ಈ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಸಂಸಾರಿಗಳಾಗಿದ್ದ ಮಂಡನ ಮಿಶ್ರರು ಸುರೇಶ್ವರಾಚಾರ್ಯರೆಂಬ ಹೆಸರಿನಲ್ಲಿ ಶಂಕರರ ಬಳಿಯೇ ಸಂನ್ಯಾಸದ ದೀಕ್ಷೆ ಪಡೆದು ಶಂಕರರ ಶಿಷ್ಯರಾಗಿ ಮುಂದೆ ದಕ್ಷಿಣಾಮ್ನಾಯ ಶೃಂಗೇರಿಯ ಶಂಕರ ಮಠದ ಪೀಠಾಧಿಪತಿಗಳಾಗಿ ಶಂಕರರ ಗ್ರಂಥಗಳಿಗೆ ವಾರ್ತಿಕಗಳನ್ನು (ಟೀಕೆ) ಬರೆದು ವಾರ್ತಿಕಕಾರರೆನಿಸಿದರು. ಉಭಯಭಾರತಿಯೂ ಅವರನ್ನೇ ಹಿಂಬಾಲಿಸಿಕೊಂಡು ಬಂದು ಕಡೆಗೆ ಶೃಂಗೇರಿಯ ಶಾರದಾ ಪೀಠದಲ್ಲಿ ನೆಲಸುತ್ತಾಳೆ.

ಸನಾತನ ಧರ್ಮದ ಉಳಿವಿಗಾಗಿ ಮತ್ತು ಪುನರುತ್ಥಾನಕ್ಕಾಗಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಶಕ್ತಿ ಪೀಠ (ಮಠ) ಗಳನ್ನು ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿ ಅದ್ವೈತ ಸಿದ್ಧಾಂತ ವನ್ನು ಜನಪ್ರಿಯಗೊಳಿಸಿದರು.
ಶ್ರೀ ಶಂಕರರು ಸ್ಥಾಪಿಸಿದ ನಾಲ್ಕು ಪೀಠಗಳು

  • ಉತ್ತರದಲ್ಲಿ: ಬದರಿ ಪೀಠ – ಉತ್ತರ ಜ್ಯೋತಿರ್ ಮಠ
  • ದಕ್ಷಿಣದಲ್ಲಿ: ಶೃಂಗೇರಿ ಪೀಠ – ದಕ್ಷಿಣ ಶಾರದಾ ಮಠ
  • ಪೂರ್ವದಲ್ಲಿ: ಪುರಿ ಪೀಠ – ಪೂರ್ವಾ ಗೋವರ್ಧನ ಮಠ
  • ಪಶ್ಚಿಮದಲ್ಲಿ ದ್ವಾರಕಾ ಪೀಠ – ಪಶ್ಚಿಮ ಮಠ

shankar_samadhi

ಹೀಗೆ ಕೇವಲ 32 ವರ್ಷಗಳಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಅವನತಿಯ ಹಾದಿಯಲ್ಲಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದ್ದಲ್ಲದೇ ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು ಶ್ರೀ ಶಂಕರಾಚಾರ್ಯರು. ಅವರ ಜೀವನದ ಅಂತಿಮ ದಿನಗಳಲ್ಲಿ ಹಿಮಾಲಯಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಕೇದಾರ ದೇವಾಲಯದ ಹತ್ತಿರ ತಮ್ಮ ದೇಹದಿಂದ ಮುಕ್ತಿಯನ್ನು ಪಡೆಯುತ್ತಾರೆ. ಅದಕ್ಕೆ ಪ್ರತೀಕವಾಗಿ ಇಂದಿಗೂ ಸಹಾ ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ ಮತ್ತು ಅವರ ಶಿಲಾಪ್ರತಿಮೆಯೂ ಇದೆ.
ಶಂಕರರ ಜೀವನದ ಬಗೆಗೆ ಒಂದು ಶ್ಲೋಕ ಹೀಗಿದೆ
ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||

ಅಂದರೇ ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- ಎಂದರೆ ಕಾಲವಾದರು ಎಂದರ್ಥ.

Shank6

ಇಂದು ವೈಶಾಖ ಶುದ್ಧ ಪಂಚಮಿ. ಶ್ರೀ ಶಂಕರಾಚಾರ್ಯರ ಜಯಂತಿ. ಈ ದಿನವನ್ನು ದೇಶವಿದೇಶಗಳಲ್ಲಿರುವ ಕೋಟ್ಯಾಂತರ ಹಿಂದುಗಳು ಬಹಳ ಭಕ್ತಿ ಭಾವಗಳಿಂದ ಅಚರಿಸುತ್ತಾರೆ. ಈ ದಿನ ಅನೇಕ ಶುಭಕಾರ್ಯಗಳು ನಡೆಯಲ್ಪಡುತ್ತವೆ. ಅದರಲ್ಲೂ ವಿಶೇಷವಾಗಿ ಸಾಮೂಹಿಕ ಉಪನಯನಗಳು ಎಲ್ಲೆಡೆಯಲ್ಲಿಯೂ ನಡೆಯುತ್ತದೆ. ಉಪನಯನ ಮಾಡಿಸಿಕೊಳ್ಳುವ ವಟು, ಗಾಯತ್ರೀ ಉಪದೇಶ ಮಾಡುವ ತಂದೆ ಮತ್ತು ಉಪನಯನ ಮಾಡಿಸುವ ಗುರುಗಳು ಈ ಮೂವರಿಗೂ ಗುರುಬಲವಿದ್ದಲ್ಲಿ (ಈಗ ಗುರುಗಳನ್ನು ಲೆಕ್ಕಕ್ಕೆ ಇಟ್ಟಿಲ್ಲ) ಮಾತ್ರವೇ ಉಪನಯನ ಮಾಡಬೇಕೆನ್ನುವ ಶಾಸ್ತ್ರವಿದ್ದರೂ, ಆದಿ ಗುರುಗಳಾದ ಶಂಕರರ ಜಯಂತಿಯಂದು ಗುರು ಬಲವಿಲ್ಲದಿದ್ದರೂ ಶಂಕರಾಚಾರ್ಯರ ಅನುಗ್ರಹದಿಂದ ಉಪನಯನ ಮಾಡಬಹುದು ಎನ್ನುತ್ತದೆ ಸಂಪ್ರದಾಯ. ಅದಕ್ಕೇ ಅಲ್ಲವೇ ಪುರಂದರ ದಾಸರು ಹೇಳಿದ್ದು ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು.


ಇದನ್ನು ಓದಿ

ಶ್ರೀ ಜಗಜ್ಯೋತಿ ಬಸವೇಶ್ವರರು

ರಾಮಾನುಜರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್...

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ...