ಅಶೋಕವನದ ಸೀತೆ
ಕಾನನದ ಝರಿಯೊಂದು ಸಂಗಾತಿಯ
ಅರಸುತ್ತಾ ಹೊರಟಿತ್ತು
ಸುತ್ತಮುತ್ತಲಿನ ಕಾಡು ಬೆಟ್ಟಗಳ ಸಾಂಗತ್ಯವು
ನಡುವೆ ಒಲವಿನ ಗೆಳತಿಯ ಅರಸುತ್ತಾ
ಸಾಗುತಿಹಳು ಈ ಪುಣ್ಯಗಂಗೆಯು
ತನುಮನದೊಂದಿಗೆ ಬೆರೆತು ಅಂತರಂಗವ ಬಯಸಿ
ಸಖಿಯ ಹುಡುಕುವ ಮೋಹದ ಪರಿಯು
ಮೌನ ಪಯಣದಲಿ ಪ್ರೀತಿ-ವಿರಹದ ನೋವಿರಲು
ಗಂಗೆ ಪಾವನಳಾದರೂ ಅವಳ ಬಯಕೆಯ ಹುಡುಕಾಟ
ಬೇರೆಯೇನೋ ಆಗಿರಲು...
ಸುತ್ತ ಅಸುರ ಲೋಕದ ಸಂತಾನವು
ಲಕ್ಷ ಕಣ್ಣುಗಳ ಕಣ್ಗಾವಲು ಸೀತೆಯ ಸುತ್ತುವರೆದಿರಲು
ಬಣ್ಣನೆಗೆ ಸಿಗದ ಆಶೋಕವನವು ಸಾಕ್ಷಾತ್ ದೇವಲೋಕವು
ರಾವಣನ ಸಾಮ್ರಾಜ್ಯದಲಿ ಈ ಸ್ವಪ್ನ ಸೌಂದರ್ಯವೇ
ಸಾಕ್ಷಿಯಾಗಿರಲು
ಅಪಹರಿಸಿ ತಂದ ಜಗನ್ಮಾತೆಯು ಇಲ್ಲಿ ನೆಲೆಸಿರಲು
ರಘುವರನಿಲ್ಲದ ಕ್ಷಣಗಳನು ಎದುರಿಸುತಿಹಳು
ರಾಮನಾಮದಲಿ ಮುಳುಗುತ್ತಾ
ಸುಡುವ ಏಕಾಂತದಲ್ಲಿ ತನ್ನವರಿಗಾಗಿ ಕಾಯುತ್ತಾ
ಕಾನನದ ಝರಿಗೆ ನೋವಿಲ್ಲ; ನಲಿವಿಲ್ಲ
ಸುರಿವ ಮಳೆಯ ಜಾಡು
ಹರಿವ ಓಘಕ್ಕೆ ಸೇರುತ್ತಾ
ದೂರದಲ್ಲಿರುವ ಅಶೋಕವನವು
ಕಂಡ ಆಶಾಗೋಪುರದ ಸದಾಶೆಯು
ಹರಿವ ಗಂಗೆಯ ನೋವಿಗೆ
ಕೊನೆಗೂ ಸಿಕ್ಕಳು ಸೀತೆ ಎಂಬ ಶರಧಿಯು
ಅಶೋಕವನದ ಏಕಾಂತವು ರಾಮನಿಲ್ಲದ ಸ್ವರ್ಗವು
ಬಂಧನದ ಸೀತೆಗೆ ಅವಳ ಪಾತಿವ್ರತ್ಯವೇ ಶ್ರೀರಕ್ಷೆಯು
ಹನುಮನ ಕಾಣುವ ಸರಧಿ
ಅಸುರರ ಸಂಹಾರವಾಗುವ ಮುನ್ನ
ಸೀತೆಯ ಸಾಂಗತ್ಯಕ್ಕೆ ಒಲಿದ ಭಾಗ್ಯವು
ದೂರ ತೀರದಿಂದ ಅರಸಿ ಬಂದ ಝರಿಗೆ
ಸಿಕ್ಕವಳು ಜಾನಕಿಯು
ಗಂಗೆ ಹರಿದಳು ಅಶೋಕವನಕೆ
ಸುರಿವ ಹಾಲಿನ ಅಮೃತ ಕಳಶದಂತೆ
ಇಬ್ಬರು ಸಖಿಯರು ಸೇರಿದ್ದಾರೆ
ಸೀತೆಯ ಕಣ್ಣೀರಿನಲಿ ಗಂಗೆಯು
ಇನ್ನಷ್ಟು ಪಾವನವಾಗಿರಲು
. ಶ್ರೀಧರ ಬನವಾಸಿ
. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ.
*****************
"ಅಶೋಕವನದ ಸೀತೆ" ಗೆ ನನ್ನ ಮಾತುಗಳು........
ರಾಮಾಯಣ ಮಹಾಕಾವ್ಯದಲ್ಲಿ ಸೀತಾದೇವಿಯ ಪಾತ್ರ ಅತ್ಯಂತ ಶ್ರೇಷ್ಠವಾದುದು. ಅದು ವಾಲ್ಮೀಖಿಯಿಂದ, ಹಳೆಗನ್ನಡ, ನಡುಗನ್ನಡ ಕಾಲಘಟ್ಟ ಮತ್ತು ಅಲ್ಲಿಂದ ಇಂದಿನವರೆಗಿನ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸೀತಾಮಾತೆ ಭಾರತೀಯ ಮಹಿಳೆಯರ ಪಾತಿವ್ರತ್ಯದ ಮೇರು ಪ್ರತಿನಿಧಿಯಾಗಿ ನಿಲ್ಲುತ್ತಾಳೆ. ಆ ಹಿನ್ನಲೆಯಲ್ಲಿ ಸ್ನೇಹಿತರಾದ ಶ್ರೀಧರ ಬನವಾಸಿಯವರ ಹೊಸ ಕವಿತೆ "ಅಶೋಕವನದ ಸೀತೆ " ಐತಿಹಾಸಿಕ,ಪೌರಾಣಿಕ ಚೌಕಟ್ಟಿನಲ್ಲಿ ವಿಶಿಷ್ಟ ಕಲ್ಪನೆಗಳಿಂದೊಡಗೂಡಿದ ಭಾವ ಸಂದಿಗ್ಧತೆಯ ರಸಾತ್ಮಕ ಕವಿತೆಯಾಗಿದೆ.
"ಕಾನನದ ಝರಿಯೊಂದು ಸಂಗಾತಿಯ
ಅರಸುತ್ತ ಹೊರಟಿತು
ಸುತ್ತ ಮುತ್ತಲಿನ ಕಾಡು ಬೆಟ್ಟಗಳ
ಸಾಂಗತ್ಯವು
ನಡುವೆ ಒಲವಿನ ಗೆಳತಿಯ ಅರಸುತ್ತ"
ಎಂಬ ಪಂಕ್ತಿಗಳಿಂತ ಆರಂಭವಾಗುವ ಕವಿತೆಯು ಸೀತೆಯಿಲ್ಲದೆ ನಿಸ್ತೇಜಗೊಂಡ ರಘುಕುಲೋದ್ಭವನ ವಿರಹ ವೇದನೆಗಿಂತಲೂ ಕಾನನದ ಸುರಗಂಗೆ ಝರಿಯ ರೂಪದಿ ಧುಮುಕುತ್ತ ಕಾಡು ಬೆಟ್ಟಗಳ ಸಾಂಗತ್ಯದ ಪರಿವೆಯಿಲ್ಲದೆ ಒಲವ ಗೆಳತಿಯ(ಸೀತೆ) ಅರಸುತ್ತ ಮೌನದಲಿ ವಿರಹದುರಿಯ ತುಂಬಿಕೊಂಡು ಕೊರಗುತಿಹಳು. ಇಲ್ಲಿ ಸೀತೆಯ ವಿರಹದಿಂದ ಶ್ರೀರಾಮನಿಗೆ ನೋವಾಗುವುದು ಸಹಜ. ಆದರೆ ಇಡಿ ಪ್ರಕೃತಿ,ಕಾಡು ಬೆಟ್ಟ,ನದಿ ಝರಿ ಮುಂತಾದವುಗಳು ಅವನಿಸುತೆಯ ಒಲವ ವಿರಹದಿಂದ ಸಂಕಟಪಡುತ್ತ ಅವಳ ಹುಡುಕಾಟದಲ್ಲಿ ಮೌನಿಯಾಗಿದ್ದವು.
ಪ್ರಸ್ತುತ ಕವಿತೆಯು ಲಕ್ಷ್ಮೀಷ ಕವಿಯ ಜೈಮಿನಿ ಭಾರತದಲ್ಲಿನ "ಸೀತಾ ಪರಿತ್ಯಾಗ" ದ ಕತೆಯನ್ನು ನೆನಪಿಗೆ ತರುತ್ತದೆ.
ಏಕೆ ನಿಂದಿಹೆ ಪೋಗು ಸೌಮಿತ್ರಿ ಕೋಪಿಸನೆ
ಕಾಕುತ್ಸ್ಥನಿಲ್ಲಿ ತಳುಹಿದೊಡೆ ನೆರವುಂಟು ತನಗೀ
ಕಾಡೊಳುಂಗ್ರಜಂತುಗಳುಂಟು
ಎನ್ನುವ ಸೀತೆಯ ಮಾತುಗಳು ಎಂಥವರನ್ನು ಒಂದು ಕ್ಷಣ ದಿಗ್ಭ್ರಾಂತರನ್ನಾಗಿಸುತ್ತದೆ. ಹಾಗೆಯೇ ಸೀತೆಯನ್ನು ಲಕ್ಷ್ಮಣ ಕಾಡಿನಲ್ಲಿ ಬಿಟ್ಟುಬರುವಾಗ ಕಾಡಿನಲ್ಲಿರುವ ಪಶುಪಕ್ಷಿಯಾದಿಯಾಗಿ ತರುಲತೆ ವೃಕ್ಷಗಳಿಗೆ , ನದಿ ಹಳ್ಳಗಳಿಗೆ, ಕಲ್ಲುಗಳಿಗೆ ಸೀತಾಮಾತೆಯನ್ನು ಇನ್ನು ಮುಂದೆ ನೀವೆ ಸಲುಹಬೆಕೆಂದು ಲಕ್ಷ್ಮಣ ಭಿನ್ನವಿಸಿಕೊಂಡಾಗ.... ಆ ಕಾಡಿನಲ್ಲಿನ ಸೀತೆಮಾತೆಯ ಅಭಿಮಾನಿಗಳು ,
" ಅರಸ ಕೇಳಿಲಿರ್ದ ಪಕ್ಷಿ ಮೃಗ ಜಂತುಗಳ್ಧರಣಿಸುತೆಯ ಬಳಸಿ
ನಿಂದು ಮೈಯುಡಿಗಿ ಜೋಲ್ದಿರದೆ
ಕಂಬನಿಗರೆದು ನಿಜವೈರಮಂ ಮರೆದು
ಪುಲ್ಮೆವುಗಳನೆ ತೊರೆದು ಕೊರಗುತಿರ್ದವು
ಕೂಡೆ ವೃಕ್ಷಲತೆಗಳ್ಬಾಡಿ ಸೋರಗುತಿರ್ದವು
ಶೋಕಭಾರದಿಂ ಕಲ್ಲುಗಳುಂ
ಕರಗುತಿರ್ತವು ಜಗದೋಳುತ್ತಮರ
ಹಾನಿಯ ಕಂಡು ಸೈರಿಸುವರುಂಟೆ"
.
ಹೀಗೆ ಸೀತೆಯ ದುಃಖ ತಮ್ಮದೂ ಎಂದು ಇಡಿ ವಿಪನವೆ ಶೋಕದಲ್ಲಿ ಮುಳುಗಿತ್ತು. ಅದೆ ತೆರನಾದ ಸನ್ನಿವೇಶವನ್ನು ಪ್ರಸ್ತುತ ಕವಿತೆ ಕಟ್ಟಿಕೊಟ್ಟಿದೆ. ರಾವಣನಿಂದ ಅಪಹೃತಳಾದ ಸೀತಾಮಾತೆಯ ಅಗಲಿಕೆ ರಾಮನಿಗಷ್ಟೆ ಅಲ್ಲ ಇಡಿ ಇಕ್ಷ್ವಾಕು ಸಾಮ್ರಾಜ್ಯದ ಕಾನನದ ಝರಿ ತೊರೆಗಳು ಗಂಗೆಯಾಗಿ ಮರುಗುತ್ತ , ಕೊರಗುತ್ತ ತನ್ನೊಲವ ಗೆಳತಿಯ ಅರಸುತ್ತ ಹರಿಯುತಿಹಳು ಗಂಗೆ ಶೋಕಭಾರದಿ.
ಇತ್ತ ಸೀತಾಮಾತೆಯ ಪಾದಸ್ಪರ್ಷದಿಂದ ಅಸುರಲೋಕದ ಅಶೊಕವನ ದೇವಲೋಕದಂತೆ ಕಂಗೋಳಿಸುತ್ತಿದೆ. ಆದರೆ ಲಕ್ಷ ಚಕ್ಷುಗಳ ಕಾವಲಿನಲ್ಲಿ ಧರಣಿಸುತೆ ರಾಘವೇಶ್ವರನ ಸುಂದರ ಸೊಪ್ನದಲ್ಲಿ ಮುಳುಗಿರಲು ಅವಳ ಏಕಾಂತವೆ ಒಡಲವಿರಹದುರಿಯಾಗಿ ತನ್ನವರಿಗಾಗಿ ಕಾಯುತ್ತ ವೇದನೆ ಪಡುತ್ತಿತ್ತು.
ಸೀತಾಮಾತೆಯ ಒಡಲವಿರಹದುರಿಗೆ ತಂಪೆರೆಯಲೋ ಎಂಬಂತೆ ಕಾರ್ಮುಗಿಲೆ ತನ್ನೊಡಲ ಬಸಿದು ಮಳೆಯಾಗಿ ಸುರಿಯುತ್ತ ಕಾನನದ ಝರಿಯಾಗಿ ರಭಸದಿಂದ್ಹರಿಯುತ್ತ ಅಸುರಲೋಕದ ಅಶೋಕವನ ಕಂಡೊಡನೆ ಗಂಗೆಯ ಒಡಲಿನ ವಿರಹ ವೇದನೆ, ' ರಭಸದಿಂದ್ಸುರಿವ ವರ್ಷಧಾರೆಗೆ ಕಾಡ್ಗಿಚ್ಚು ತಣ್ಣಗಾದಂತೆ' ಗಂಗೆಯ ದುಃಖ ಮಾಯವಾಗಿ ಸೀತೆ ಎಂಬ ಶರಧಿಯಲ್ಲಿ ಲೀನವಾಯಿತು.
ಮಿಥಿಲಾಪುರದ ರಾಜಕುಮಾರಿ ಅಯೋಧ್ಯಾಪುರದ ಮಹಾರಾಣಿ ರಾಮನಿಲ್ಲದ ವಿರಹದೆಕಾಂತವನ್ನು ಅಶೋಕವನದಲ್ಲಿ ಅನುಭವಿಸುತಿಹಳು. ಅವಳಿಗೆ ಪಾತಿವ್ರತ್ಯವೆ ಶ್ರೀರಕ್ಷೆಯಾಗಿ ಶ್ರೀರಾಮ ನಾಮದಲಿ ಒಂದಾಗಿಹಳು. ಹನುಮನನ್ನು ಕಾಣುತ್ತ ಸಂತಸಗೊಳ್ಳುವ ಸೀತೆಯ ಮೊಗದಲ್ಲಿ ನಗು ಮೂಡಿದರೂ ಅಂತರಂಗದಲ್ಲಿ ಹೇಳಲಾರದ ನೋವು. ಆ ನೋವು ನಲಿವುಗಳೆಂಬ ಬದುಕಿನ ದೂರ ತೀರದಿಂದ ಅರಸಿ ಬಂದವಳಿಗೆ ಜಾನಕಿ ಸಿಕ್ಕಳು. ಅಶೋಕವನಕೆ ಗಂಗೆ ನಲಿಯುತ್ತ ಹರಿದಳು ಅಮೃತವಾರಿಧಿಯಂತೆ. ನೋವು ನಲಿವುಗಳ ಸಾಮರಸ್ಯದ ಕೆಳದಿಯರು ಒಂದಾದ ಸಂತಸದಿ ಸೀತೆಯ ಕಣ್ಣಲ್ಲಿ ಗಂಗೆ ಧಾರೆಧಾರೆಯಾಗಿ ಹರಿದು ಮಡುಗಟ್ಟಿದ ದುಃಖ ಕರಗಿಹೋಗಿ ಎಲ್ಲರ ಪವಿತ್ರಗೊಳಿಸುವ ಗಂಗೆಯೆ ಪಾವನಗೊಳ್ಳುವ ದೃಷ್ಟಾಂತವನ್ನು ಕವಿತೆಯಲ್ಲಿ ತಂದಿರುವುದು ಕವಿತೆಯ ವೈಶಿಷ್ಟ್ಯವಾಗಿದೆ.
ಒಟ್ಟಾರೆಯಾಗಿ "ಅಶೋಕವನ ಸೀತೆ" ಇತಿಹಾಸ , ಪುರಾಣ ಮತ್ತು ಇಂದಿನ ಆಧುನಿಕ ಸಂದರ್ಭದಲ್ಲೂ ತನ್ನ ಪ್ರಸ್ತುತತೆಯನ್ದು ಪಡೆದುಕೊಳ್ಳುವುದರ ಜೊತೆಗೆ ಭಾರತೀಯ ನಾರಿ ಎಂಥಹ ಸಂದಿಗ್ಧ ಪರಿಸ್ಥಿತಿಯಲ್ಲೂ ತನ್ನ ಪಾತಿವ್ರತ್ಯಕ್ಕೆ ಘನವಾದ ಮಹತ್ವವನ್ನು ಕೊಡುತ್ತಾಳೆ ಮತ್ತು ಅಂತಹ ಪಾತಿವ್ರತ್ಯದ ಸ್ತ್ರೀಗೆ ಸಂಕಷ್ಟ ಬಂದೊದಗಿದಾಗ ಗಂಗೆಯಂತಹ ಮಾತೃಹೃದಯಿ ಜೊತೆಯಾಗುವುದು ಮತ್ತು ಇಡಿ ಭರತ ಭೂಮಿಯೆ ಅಂಥವರ ದುಃಖದಲ್ಲಿ ಭಾಗಿಯಾಗಿ ಅವರ ದುಃಖವನ್ನು ಪರಿಹರಿಸುವಲ್ಲಿನ ಶಮರ್ಪಣಾ ಭಾವ ಕವಿತೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ.
ಕವಿಮಿತ್ರ ಶ್ರೀಧರ ಅವರು ತುಂಬಾ ಸಹಜವಾದ ಪ್ರಾಕಲ್ಪನೆಗಳೊಂದಿಗೆ ಇತಿಹಾಸ ಮತ್ತು ಪುರಾಣಗಳೆರಡನ್ನು ಸಮೀಕರಿಸಿ ಹದವಾದ ಭಾಷೆಯಲ್ಲಿ ಕವಿತೆಗೆ ಸುಂದರ ಚೌಕಟ್ಟನ್ನು ನಿರ್ಮಿಸಿ ತಮ್ಮ ಕವಿತ್ವದ ಪ್ರತಿಭಾ ಶಕ್ತಿಯನ್ನು ಪ್ರಸ್ತುತ ಕವಿತೆಯ ಮೂಲಕ ತೋರಿಸಿದ್ದಾರೆ.
- ಸುರೇಶ ಮುದ್ದಾರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ