ನಾಗೇಶ ನಾಯಕ ಅವರ ಗಜಲ್
ಹತ್ತಿರಕ್ಕೂ ಬಿಟ್ಟುಕೊಳ್ಳದವರಿಗೆ ಅಂಗಲಾಚುತ್ತಿದ್ದೇವೆ ಕಣ್ಣೀರಾಗಿ
ಮುಟ್ಟಿಸಿಕೊಳ್ಳದೆ ಮರೆಯಾದವರಿಗೆ ಗೋಗರೆಯುತ್ತಿದ್ದೇವೆ ಕಣ್ಣೀರಾಗಿ
ಯಾರು ಮಾಡಿದರೋ ಜಾತಿ ಕುಲಗಳ ಕಟ್ಟಳೆ ಜಗದೊಳಗೆ
ನೀರು ಕೊಡದೆ ಹೊರಗಟ್ಟಿದವರ ಬೇಡುತ್ತಿದ್ದೇವೆ ಕಣ್ಣೀರಾಗಿ
ದೇವರೂ ದ್ವೇಷ ಕಟ್ಟಿಕೊಂಡು ಬಿಟ್ಟ ಶಾಶ್ವತವಾಗಿ ನಮ್ಮ ಜೊತೆ
ಮನಸಿಗೂ ಮೈಲಿಗೆಯಾದವರ ಕಂಡು ಮರುಗುತ್ತಿದ್ದೇವೆ ಕಣ್ಣೀರಾಗಿ
ಹಸಿವಿಗೂ ನಾಚಿಕೆಯಾಗಿ ಒಡಲಲ್ಲೇ ಇಂಗಿ ಹೋದ ಘಳಿಗೆ
ಮನುಷ್ಯತ್ವ ಮರೆತವರ ಕ್ರೂರತೆಗೆ ಕೊರಗುತ್ತಿದ್ದೇವೆ ಕಣ್ಣೀರಾಗಿ
ನಮ್ಮ ಕನಸುಗಳ ಹಾಸಿ ಮೆರೆಸಿದೆವು ಹೆಜ್ಜೆ ಹೆಜ್ಜೆಗೂ
ಮುಳ್ಳುಗಳ ಸುರಿದು ರಕ್ತ ಹರಿಸಿದವರ ಹಾರೈಸುತ್ತಿದ್ದೇವೆ
ಕಣ್ಣೀರಾಗಿ
ಊರ ಕೇರಿಯಾಚೆ ಕಳೆದು ಹೋಗಿದ್ದೇವೆ ನಿಮ್ಮಿಂದ ಬಹಿಷ್ಕೃತವಾಗಿ
ಒಂದು ಬಾರಿಯಾದರೂ ಅಪ್ಪಿಕೊಳ್ಳಲು ಕಾತರಿಸುತ್ತಿದ್ದೇವೆ ಕಣ್ಣೀರಾಗಿ
ಯಾವ ಶಾಪಕೋ ಹೀಗೆ ಕಲ್ಲಾಗಿ ಬದುಕುವ ಶಿಕ್ಷೆ ಬಂದಿತೋ
ಬಾರದ ರಾಮನ ಕರುಣೆಯ ಸ್ಪರ್ಶಕೆ ಕಾಯುತ್ತಿದ್ದೇವೆ ಕಣ್ಣೀರಾಗಿ
¶ ನಾಗೇಶ್ ಜೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ