ಕಲ್ಲೋಳಿಯ ಪೋಲೀಸ್ ಪಾಟೀಲ ಮನೆತನ ಮತ್ತು ಅವರ ಕೊಡುಗೆಗಳು: ಪ್ರೊ. ಶಂಕರ ನಿಂಗನೂರ
|
ಪ್ರಸ್ತಾವನೆ:
ಕಲ್ಲೋಳಿಯು ಗೋಕಾಕ ತಾಲೂಕಿನ ಪ್ರಮುಖ ಗ್ರಾಮವಾಗಿದೆ. ಗೋಕಾಕದಿಂದ ಈಶಾನ್ಯಕ್ಕೆ 11 ಕಿಮೀ ದೂರದಲ್ಲಿ ‘ಇಂದ್ರವೇಣಿ’ ಎಂಬ ಹಳ್ಳದ ದಡದ ಮೇಲೆ ಬೆಳೆದು ನಿಂತಿದೆ. ನಿಸರ್ಗ ಮೂಲದ ಸ್ಥಳನಾಮದಡಿ ಈ ಗ್ರಾಮಕ್ಕೆ ಕಲ್ಲೋಳಿ ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ. ಅಂದರೆ ಇಲ್ಲಿನ ಜೀವನಾಡಿಯಾದ ಇಂದ್ರವೇಣಿ ಹಳ್ಳವು ಕಲ್ಲು ಕಲ್ಲಿನ ಹಾಸಿಗೆಯ ಮೇಲೆ ಹರಿಯುತ್ತದೆ. ಇದರಿಂದ ಕಲ್ಲಿನ+ಹೊಳೆ>ಕಲ್ಹೋಳೆ>ಕಲ್ಲೋಳೆ>ಕಲ್ಲೋಳಿ ಎಂದು ಪರಿವರ್ತಿತವಾಗಿದೆ. ಇದೆ ಗ್ರಾಮದ ಜಿನಾಲಯದಲ್ಲಿರುವ ಶಾಸನದಲ್ಲಿ ಈ ಗ್ರಾಮವನ್ನು ‘ಸಿಂಧನ ಕಲ್ಲೋಳೆ’ ಎಂದು ದಾಖಲಿಸಲಾಗಿದೆ. ಸವದತ್ತಿ ರಟ್ಟರ ಕುಹುಂಡಿ-3000 ಸಿಂದಣ ಪ್ರಾಂತದ (ಕುರುಂಬೆಟ್ಟ ಇಂದಿನ ಶಿಂಧಿಕುಬೇಟ) ಹನ್ನೆರಡು ಗ್ರಾಮಗಳಲ್ಲಿ ಕಲ್ಲೋಳಿಯು ಒಂದಾಗಿತ್ತು. ಕಲ್ಲೋಳಿಯಲ್ಲಿ ರಾಮಲಿಂಗೇಶ್ವರ, ವಿಠ್ಠಲ, ಕಲ್ಮೇಶ್ವರ, ದುರ್ಗಾ, ಹನುಮಾನ ದೇವಾಲಯಗಳು ಇರುವುದರಿಂದ ಈ ಗ್ರಾಮವನ್ನು ‘ದೇವರ ಕಲ್ಲೋಳಿ’ ಎಂದು ಕರೆಯುವುದು ರೂಢಿಯಲ್ಲಿದೆ.
ಪ್ರಾಗೈತಿಹಾಸಿಕ ಕಾಲದ ಜನವಸತಿಯ ಕುರುಹುಗಳು ಇಲ್ಲಿ ಲಭ್ಯವಾಗಿವೆ. ಕ್ರಿ.ಶಕ 10-11 ನೇ ಶತಮಾನದಲ್ಲಿ ಸವದತ್ತಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಗ್ರಾಮ ಜೈನರ ಪ್ರಸಿದ್ಧ ಕೇಂದ್ರವಾಗಿತ್ತು. ರಟ್ಟರ ಹರಟಗೆ ನಾಡಿನ ಪ್ರಭುಗಳು ನಿರ್ಮಿಸಿದ ತ್ರೀಕೂಟ ಮಂಡಿತ ಶಾಂತಿನಾಥ ಜಿನಾಲಯ ಆಕರ್ಷಣಿಯವಾಗಿದೆ. ಕ್ರಿ.ಶ 1204 ರಲ್ಲಿ ಪಾಶ್ರ್ವಪುರಾಣ ಕೃತಿಯ ಕರ್ತೃ ಪಾಶ್ರ್ವಪಂಡಿತನು ಬರೆಸಿದ ಶಾಸನವು ಜಿನಾಲಯದ ಮುಖಮಂಟಪದ ಗೊಡೆಯ ಮೇಲಿದೆ. ಹೀಗೆ ಐತಿಹಾಸಿಕ ಪರಂಪರೆಗಳನ್ನು ಒಳಗೊಂಡಿರುವ ಗ್ರಾಮ ಹಲವು ವೈಶಿಷ್ಠ್ಯತೆಗಳನ್ನು ಒಳಗೊಂಡಿದೆ.
ದೇಸಾಯಿಗಳು, ನಾಡಗೌಡರು, ಜಹಾಂಗೀರದಾರರಂತೆ ‘ಗೌಡ’ (ಪೊಲಿಸ್ ಪಾಟೀಲ) ಮನೆತನದವರು ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪ್ರಾಮುಖ್ಯತೆ ಪಡೆದಿದ್ದಾರೆ. ವೇದಗಳ ಕಾಲದಿಂದಲೂ ಇಲ್ಲಿಯವರೆಗೂ ಆಡಳಿತದ ಕೊನೆಯ ಘಟಕ ಗ್ರಾಮವಾಗಿದೆ. ಗ್ರಾಮದ ಆಡಳಿವನ್ನು ನಿರ್ವಹಿಸಲು ‘ಗೌಡ’ ಎಂಬ ಗ್ರಾಮಾಧಿಕಾರಿಯನ್ನು ನೇಮಕ ಮಾಡುತ್ತಿದ್ದರು. ಕಂದಾಯ ವಸೂಲಿ ಗೌಡನ ಪ್ರಮುಖ ಕರ್ತವ್ಯವಾಗಿತ್ತು. ಅವನ ನೆರವಿಗೆ ಶಾನುಭೋಗ ಅಥವಾ ಕುಲಕರ್ಣಿ ಎಂಬ ಗ್ರಾಮ ಲೆಕ್ಕಿಗ ಸಹಾಯಕನಾಗಿದ್ದನು. ಇವೆರಡೂ ಹುದ್ದೆಗಳು ವಂಶಪಾರಂಪರ್ಯವಾಗಿದ್ದವು. ಇವರಿಗೆ ಸಹಾಯಕರಾಗಿ ಪುರೋಹಿತ, ತಳವಾರ, ಬೇಗಾರ, ಜ್ಯೋತಿಷಿ, ಅಂಬಿಗ, ಬಡಿಗ, ಅಕ್ಕಸಾಲಿಗ, ಹಳಬ, ವಾಲಿಕಾರ ಕಂಬಾರ, ಕೋತ್ವಾಲ್ ಮುಂತಾದವರು ಇದ್ದರು. ಇವರಿಗೆ ಉಚಿತವಾಗಿ ಭೂಮಿಯನ್ನು ಉಂಬಳಿÀಯಾಗಿ ನೀಡಲಾಗುತ್ತಿತ್ತು.
ಗ್ರಾಮಾಡಳಿತಕ್ಕೆ ಗ್ರಾಮ ಸಭೆ ಇದ್ದಿತು. ಗ್ರಾಮಸ್ಥರು ಸಭೆಯ ಸದಸ್ಯರಾಗಿದ್ದರು. ಅದು ದೇವಾಲಯ ಅಥವಾ ಚಾವಡಿಯಲ್ಲಿ ಸಭೆ ಸೇರಿ ತೀರ್ಮಾನಗಳನ್ನು ಕೈಗೊಳ್ಳುತ್ತಿತ್ತು. ಗ್ರಾಮ ಮಟ್ಟದಲ್ಲಿ ಕಾನೂನು ಮತ್ತು ಶಾಂತಿ ಪಾಲನೆ, ನ್ಯಾಯದಾನ, ಕಂದಾಯ ವಸೂಲಿ, ದೇವಾಲಯ, ಕೆರೆಕಟ್ಟೆ, ಕಾಲುವೆ, ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾರ್ಯ ಮುಂತಾದವು ಗ್ರಾಮ ಸಭೆಯ ಕರ್ತವ್ಯಗಳಾಗಿದ್ದವು.
ಗೌಡ ಪದದ ನಿಷ್ಪತ್ತಿ:
ಗ್ರಾಮದ ಆಡಳಿತ ನಿರ್ವಹಿಸುತ್ತಿದ್ದ ಮುಖಂಡನಿಗೆ ಗೌಡ, ಗಾವುಂಡ ಎನ್ನುತ್ತಿದ್ದರು. ಗೌಡ ಎಂದರೆ ಊರಿಗೆ ದೊಡ್ಡವನು. ಇವರನ್ನು ಜಮಿನ್ದಾರ್, ವತನ್‍ದಾರ, ಪಂಚಾಯ್ತಿದಾರ, ಪಟೇಲ್ ಎಂತಲೂ ಕರೆಯುತ್ತಿದ್ದರು. ಆರಂಭದಲ್ಲಿ ಗಾಮುಂಡ ಎಂದರೆ ಗ್ರಾಮದ+ಮುಖಂಡ ಎಂಬ ಅರ್ಥದಲ್ಲಿ ಬಳಕೆಗೆ ಬಂದಿದೆ.
ಗ್ರಾಮ+ಮುಖಂಡ>ಗ್ರಾಮುಂಡ>ಗಾವುಂಡ>ಗವುಂಡ>ಗೌಡ ಎಂಬ ರೂಪ ಹೊಂದಿದೆ. ಗೌಡ ಎಂಬ ಪದವು ‘ಸ್ಥಾನಸೂಚಿ’ ಮತ್ತು ‘ಅಧಿಕಾರ ಸೂಚಿ’ ಆಗಿದೆ. ಅದೇ ಹಿನ್ನಲೆಯಿಂದ ಬಂದವರನ್ನು ಗೌಡ ಎಂದು ಕರೆಯುವುದು ರೂಢಿಯಾಯಿತು. ಇಂದು ಗೌಡ ಎಂಬ ಪದವು ಜಾತಿ ಸೂಚಿ ಪದವಾಗಿ ಬಳಕೆಯಾಗಿರಬಹುದು.
ಕಲ್ಲೋಳಿಯ ವತನದಾರ-ಪಾಟೀಲ್ ಮನೆತನ ಸಾಮ್ರಾಜ್ಯ-ದೇಸಗತಿಗಳ ಆಡಳಿತ, ಬ್ರಿಟೀಷ್‍ರ ಆಡಳಿತ ಕಾಲ ಹಾಗೂ ಸ್ವಾತಂತ್ರ್ಯ ನಂತರವು ಸರಕಾರದಿಂದ ನೇಮಕಗೊಂಡ ಗೌಡರಾಗಿ ಉತ್ತಮವಾದ ಸೇವೆಸಲ್ಲಿಸಿದ್ದಾರೆ. ಇವತ್ತಿನವರೆಗೂ ಗೌಡಕಿ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಪೋಲೀಸ್ ಪಾಟೀಲ ಮನೆತನದ ಆಡಳಿತದ ವ್ಯಾಪ್ತಿಯಲ್ಲಿ ಕಲ್ಲೋಳಿ, ತುಕ್ಕಾನಟ್ಟಿ ಮತ್ತು ಹಣಮಾಪೂರ ಮೂರು ಗ್ರಾಮಗಳು ಸೇರಿದ್ದವು.
ಸ್ವಾತಂತ್ರ್ಯಾ ನಂತರದ ರಾಜಕೀಯದಲ್ಲಿ ಕಲ್ಲೋಳಿ ಪೋಲೀಸ್ ಪಾಟೀಲ ಮನೆತನ:
ಪಾಟೀಲರದು ಕಲ್ಲೋಳಿಯ ಪ್ರತಿಷ್ಠಿತ ಗೌಡಕಿ ಮನೆತನವಾಗಿದೆ. ಯಡಿಯೂರು ವೀರಭದ್ರ ಇವರ ಮನೆ ದೇವರು. ಹೆಳವರು ಹೇಳುವಂತೆ ಇವರ ಮನೆತನ ಪ್ರಾಚೀನತೆ ಕ್ರಿ.ಶ 1550 ರಷ್ಟು ಹಳೆಯದಾಗಿದೆ. ಇವರ ಪೂರ್ವಜರ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಬೇಕಾಗಿದೆ. ಗೋಕಾಕ ಪ್ರದೇಶದಲ್ಲಿ ಶಿಂಧಿಕುರಬೇಟ, ಧರ್ಮಟ್ಟಿ, ಆಲಕನೂರ, ಮುನ್ಯಾಳ, ಕೌಜಲಗಿ, ಬೈರನಟ್ಟಿ, ಬೆಟಗೇರಿ ಮುಂತಾದ ದೇಸಗತಿಗಳು ಅಸ್ತಿತ್ವದಲ್ಲಿದ್ದವು. ಆ ಮನೆತನದೊಂದಿಗೆ ಯಾವ ರೀತಿ ಸಂಬಂಧ ಹೊಂದಿದ್ದರೆಂದು ತಿಳಿದುಬಂದಿಲ್ಲ. ಪಾಟೀಲ ಮನೆತನವು ಈ ದೇಸಗತಿಗಳ ನಡುವೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.
ಪರಗೌಡ ವೀರಗೌಡ ಪಾಟೀಲ ಅವರನ್ನು, ಮುಂಬಯಿ ಪ್ರಾಂತ್ಯದ ಬ್ರಿಟೀಷ್ ಸರಕಾರ 1900 ರಲ್ಲಿ ಕಲ್ಲೋಳಿ, ತುಕ್ಕಾನಟ್ಟಿ ಮತ್ತು ಹನುಮಾಪೂರ ಗ್ರಾಮಗಳ ಮುಲ್ಕಿ ಪಾಟೀಲ ಹಾಗೂ ಪೋಲೀಸ್ ಪಾಟೀಲ ಎಂದು ನೇಮಕಮಾಡಿದ್ದರು. ಆಗಿನ ಕಾಲದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿತ್ತು. ರೈತಿಗೆ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯದ ಅನೂಕೂಲಕ್ಕಾಗಿ ‘ದಿ. ಕಲ್ಲೋಳಿ ಅಗ್ರಿಕಲ್ಚರಲ್ ಕೋ-ಆಪ್‍ರೆಟಿವ್ ಕ್ರೆಡೀಟ್ ಸೊಸಾಯಿಟಿ ನಿಯಮಿತ’ ಎಂಬ ಸೊಸಾಯಿಟಿಯನ್ನು 5 ಮೇ 1913 ರಲ್ಲಿ ಸ್ಥಾಪಿಸಿದರು. (ದಿ. ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ನಿಯಮಿತ) ಸಹಕಾರಿ ಸಂಘ ಸ್ಥಾಪಿಸುವ ಮೂಲಕ ಆ ಭಾಗದ ರೈತರ ಬಾಳಲ್ಲಿ ಆಶಾಕಿರಣ ಜ್ಯೋತಿಯಾದರು. ಈ ಸಹಕಾರಿ ಸಂಘವು 2014 ರಲ್ಲಿ ಶತಮಾನೊತ್ಸವವನ್ನು ಆಚರಿಸಿಕೊಂಡಿದೆ.
ಪರಗೌಡರಿಗೆ ಈರಪ್ಪಗೌಡ, ಬಸಗೌಡ, ಶಿವಗೌಡ, ಬಸಪ್ಪಗೌಡ ನಾಲ್ಕು ಜನ ಗಂಡು ಮಕ್ಕಳು. ಪರಗೌಡರ ತರುವಾಯ ಹಿರಿಯ ಮಗನಾದ ಈರಪ್ಪಗೌಡ ಪರಗೌಡ ಪಾಟೀಲ ಅವರು ಪೊಲೀಸ್ ಪಾಟೀಲರಾಗಿ, ಇನ್ನೋರ್ವ ಮಗನಾದ ಬಸಗೌಡ ಅವರು ಮುಲ್ಕಿ ಪಾಟೀಲರಾಗಿ ಅಧಿಕಾರವಹಿಸಿಕೊಂಡರು. ಈರಪ್ಪಗೌಡರಿಗೆ ಮೂರು ಜನ ಗಂಡು ಮಕ್ಕಳು. ಈರಪ್ಪಗೌಡರ ತರುವಾಯ ವಂಶಪಾರಂಪರಿಕ ಅಧಿಕಾರವನ್ನು ಇವರ ಸಹೋದರನ ಮಗನಾದ ಮಹಾದೇವಗೌಡರು ಪೋಲೀಸ್ ಪಾಟೀಲ ಹುದ್ದೆಯನ್ನು ನಿಭಾಯಿಸಿದರು. ಕಾರಣ ಹಿರಿಯ ಮಗನಾದ ಬಾಳಗೌಡರು ಸರಕಾರಿ ವಕೀಲ ವೃತ್ತಿಯನ್ನು ಸೇರಿದರು. ಸಿದಗೌಡರು ಸಹ ಕಲಬುರ್ಗಿಯಲ್ಲಿ ಕೆಲವೇ ದಿನಗಳಲ್ಲಿ ನೌಕರಿಗೆ ಸೇರಿದ್ದರಿಂದ ಈ ಹುದ್ದೆಯನ್ನು ಮುಂಬಯಿ ಸರ್ಕಾರ ಈರಪ್ಪಗೌಡರ ಸಂಬಂಧಿಯಾದ ಹನುಮಂತ ಖಾನಗೌಡ ಅವರನ್ನು ನೇಮಕ ಮಾಡಿತು.
ಶಿವಗೌಡ ಬಸಗೌಡ ಪಾಟೀಲ:
ಶಿವಗೌಡರು 29-11-1925 ರಂದು ಕಲ್ಲೋಳಿಯಲ್ಲಿ ಶ್ರೀಮತಿ ಲಗಮವ್ವ ಶ್ರೀ ಬಸಗೌಡರ ಏಕೈಕ ಸುಪುತ್ರರಾಗಿ ಜನಿಸಿದರು. ಇವರದು ಸುಸಂಸ್ಕøತ ಕುಟುಂಬವಾಗಿತ್ತು. ಗೋಕಾಕನ ಎಮ್.ಎಚ್. ಸ್ಕೂಲ್‍ದಲ್ಲಿ ಮ್ಯಾಟ್ರಿಕ್ ಶಿಕ್ಷಣವನ್ನು ಪೂರೈಸಿದರು. ಬಹುಭಾಷೆಗಳನ್ನು ಬಲ್ಲವರಾಗಿದ್ದರು. ಅಗಷ್ಟ್ 15, 1947 ರಲ್ಲಿ ಸ್ವಾತಂತ್ರ್ಯ ನಂತರವು ಪೋಲೀಸ್ ಪಾಟೀಲ ಹಾಗೂ ಮುಲ್ಕಿ ಪಾಟೀಲ ಅಧಿಕಾರವು ವಂಶಪಾರಂಪರಿಕವಾಗಿ ಮುಂದುವರೆದಿದ್ದರಿಂದ, ತಂದೆಯ ತರುವಾಯ ಶಿವಗೌಡ ಬಸಗೌಡ ಪಾಟೀಲರಿಗೆ ಮುಲ್ಕಿ ಪಾಟೀಲ ಅಧಿಕಾರ ವಹಿಸಿಕೊಂಡರು. ಪೋಲೀಸ್ ಪಾಟೀಲರಾಗಿದ್ದ ಹನಮಂತ ಖಾನಗೌಡ ಸರಕಾರದ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾದ ಕಾರಣಕ್ಕೆ, ಬೈಲಹೊಂಗಲ ಅಸಿಸ್ಟಂಟ್ ಕಮೀಶನರ್ ಆದೇಶದ ಮೇರೆಗೆ (ಹುಕುಂ ನಂ. ಡಬ್ಲೂ.ಕೆ.ಆರ್. 4-142 ದಿ.26-08-1963), ಗೋಕಾಕ ತಹಶಿಲ್ದಾರ ಅವರು, ಪೋಲೀಸ್ ಪಾಟೀಲ ಅಧಿಕಾರವನ್ನು ಹಿಂದೆ ಪಡೆದು, ಸದರಿ ಚಾರ್ಜನ್ನು ಶಿವಗೌಡ ಬಸಗೌಡ ಪಾಟೀಲರಿಗೆ ನೀಡಿದರು. (ಗೋಕಾಕ ತಹಶಿಲ್ದಾರ ಪತ್ರ ನಂ. ಡಬ್ಲೂ.ಟಿ.ಎನ್.ಎಸ್.ಆರ್-3007 ದಿನಾಂಕ: 27-8-1963). ಹೀಗಾಗಿ ಶಿವಗೌಡರು ಎರಡು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ನಂತರ ಗೋಕಾಕ ತಹಶಿಲ್ದಾರರು 28-05-1964 ರಲ್ಲಿ ಪೋಲೀಸ್ ಪಾಟೀಲ್ ಅಧಿಕಾರವನ್ನು ಬೈಲಹೊಂಗಲ ಅಸಿಸ್ಟಂಟ್ ಕಮೀಶನರ್ ಆದೇಶದ (ಹುಕುಂ ನಂ. ಡಬ್ಲೂ.ಕೆ.ಆರ್. 4-142 ದಿ.15-05-1964) ಮೇರೆಗೆ ಮತ್ತೆ ಹನಮಂತ ಖಾನಗೌಡರಿಗೆ ನೀಡಿದರು. (ಗೋಕಾಕ ತಹಶಿಲ್ದಾರ ಪತ್ರ ನಂ. ಡಬ್ಲೂ.ಟಿ.ಎನ್.ಎಸ್.ಆರ್-3007 ದಿನಾಂಕ: 28-5-1964).
ಶಿವಗೌಡರು ಮುಲ್ಕಿ ಪಾಟೀಲ ಹಾಗೂ ಕೆಲವು ದಿನ ಪೋಲೀಸ್ ಪಾಟೀಲ ಹುದ್ದೆಯಲ್ಲಿದ್ದಾಗ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಸರಕಾರಕ್ಕೆ ಸಕಾಲದಲ್ಲಿ ನಿಗದಿತ ಮಾಹಿತಿಯನ್ನು ಗೌಪ್ಯವಾಗಿ ತಿಳಿಸುತ್ತಿದ್ದರು. ಸರಕಾರ ನಿಗದಿ ಪಡಿಸಿದ್ದ ಕಂದಾಯವನ್ನು ಶಾನುಭೋಗರ ಸಹಾಯದಿಂದ ನಿಯಮಿತವಾಗಿ ಮನೆ ಮನೆ ತಿರುಗಾಡಿ ಸಂಗ್ರಹಿಸುತ್ತಿದ್ದರು. ಇವರಿಗೆ ಸಹಾಯಕರಾಗಿ ಒಂಬತ್ತು ಜನ ಸನಧಿಯವರಿದ್ದರು. ಕಲ್ಲೋಳಿ ಗ್ರಾಮದ ವತಿಯಿಂದ ರಂಗಪ್ಪಾ ಬಾಲಪ್ಪ ಮುದ್ದಾಪೂರ, ಬಾಳಪ್ಪ ಯಲ್ಲಪ್ಪ ದಾಸನವರ, ಭೀಮಪ್ಪ ಗೋವಿಂದಪ್ಪ ತಹಶಿಲ್ದಾರ, ಯಂಕಪ್ಪಾ ಭೀಮಪ್ಪ ಮುದ್ದಾಪೂರ, ಖನ್ನಪ್ಪಾ ಶಿದ್ದಪ್ಪಾ ಯಾದಗೂಡ, ಹನಮಂತ ಲಕ್ಷ್ಮಣ ತಳವಾರ, ತುಕ್ಕಾನಟ್ಟಿ ಗ್ರಾಮದ ವತಿಯಿಂದ, ಮಾಯಪ್ಪ ವೆಂಕಪ್ಪಾ ಗೋಡಿ, ಹನಮಂತ ಕೆಂಚಪ್ಪ ಬಡೆಸ್ಸಗೋಳ, ಹನಮಾಪೂರ ಗ್ರಾಮದ ವತಿಯಿಂದ ರಾಮಪ್ಪಾ ರಾಜಪ್ಪ ಆಡಿನ ನೇಮಕರಾಗಿದ್ದರು.(ಸನದಿ ಹಾಜರಿ ಪುಸ್ತಕ ಸನ್ನ್ 1967-68) ಜನಪರ ಕಾಳಜಿ ಹೊಂದಿದ್ದ ಇವರು ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನಗಳನ್ನು ಸ್ವತಹ ಕಛೇರಿಗಳಿಗೆ ಹೋಗಿ ಮಾಡಿಸಿಕೊಡುತ್ತಿದ್ದರು. ಧಾರ್ಮಿಕ ಕಾರ್ಯಗಳಲ್ಲಿ ಶಿವಗೌಡರು ಮುಂಚೂಣಿಯಲ್ಲಿದ್ದರು. ಕಲ್ಲೋಳಿ ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಿರಂತರವಾಗಿ 54 ವರ್ಷಗಳ ಕಾಲ ಪ್ರವಚನ ನಡೆಸಿದ್ದಾರೆ. ನಾಡಿನ ಅನೇಕ ಅನುಭಾವಿಗಳಿಂ, ಸ್ವಾಮಿಜಿಗಳಿಂದ, ಪ್ರವಚನಕಾರರಿಂದ ಶ್ರೀ ರಾಮಲಿಂಗೇಶ್ವರ, ಭಕ್ತ ಪ್ರಲ್ಹಾದ, ಸಿದ್ಧಾರೂಢ, ಅಕ್ಕಮಹಾದೇವಿ, ದುರ್ಗಾದೇವಿ ಮುಂತಾದ ಪುರಾಣಗಳನ್ನು ಹೇಳಿಸಿದ್ದಾರೆ. ಪಂಢರಪೂರದ ಅನನ್ಯ ಭಕ್ತರಾಗಿದ್ದ ಶಿವಗೌಡರು ಕ್ರಿ.ಶ 1998 ರಲ್ಲಿ ಕಲ್ಲೋಳಿಯಲ್ಲಿ ಸುಂದರವಾದ ವಿಠ್ಠಲ ಮಂದಿರವನ್ನು ನಿರ್ಮಿಸಿದ್ದಾರೆ. ಸುಮಾರು ಮೂರು ಸಲ ಹನ್ನೇರಡು ಜ್ಯೋರ್ತಿಲಿಂಗಗಳ ದರ್ಶನ ಮಾಡಿದ್ದಾರೆ. ಕಲ್ಲೋಳಿಯ ಜನರಿಗೆ ಅನೂಕೂಲವಾಗಲೆಂದು ಹನ್ನೇರಡು ಜ್ಯೋರ್ತಿಲಿಂಗಗಳನ್ನು ವಿಠ್ಠಲ ಮಂದಿರ ಪಕ್ಕದಲ್ಲಿ ಚಿಕ್ಕ ದೇವಾಲಯ ನಿರ್ಮಿಸಿ ಪ್ರತಿಷ್ಠಾಪಿಸಿದ್ದಾರೆ.
ಶಿವಗೌಡ ಅವರು 1983 ರಲ್ಲಿ ಗೋಕಾಕ ತಾಲೂಕ ಮಾಜಿ ವತನದಾರ-ಪಾಟೀಲರ ಸಂಘವನ್ನು ಕಟ್ಟಿ 2015 ರ ವರೆಗೆ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಕೇವಲ ಶಾನುಭೋಗರಿಗೆ ಸಿಮೀತವಾಗಿದ್ದ ಪಿಂಚಣಿಯನ್ನು ಮಾಜಿ ವತನದಾರರಿಗೂ ದೊರೆಯಬೇಕೆಂದು ಹೋರಾಡಿ ಯಶಸ್ವಿಯಾಗಿದ್ದರು. ಶಿವಗೌಡರಿಗೆ ಬಸಗೌಡ, ಮಲಗೌಡ, ಶಂಕರಗೌಡ ಮತ್ತು ಅಶೋಕಗೌಡ ಎಂಬ ನಾಲ್ಕು ಜನ ಗಂಡು ಮಕ್ಕಳು. ಬಸಗೌಡರು ತಂದೆಯ ಪೋಲೀಸ ಪಾಟೀಲ ವೃತ್ತಿಯನ್ನು ಮುಂದುವರೆಸಿದರು. ಮಲಗೌಡ ಮತ್ತು ಶಂಕರಗೌಡರು ಒಕ್ಕಲುತನದಲ್ಲಿ ತೊಡಗಿದ್ದಾರೆ. ಅಶೋಕಗೌಡರು ವೈಧ್ಯಕೀಯ ವೃತ್ತಿಯನ್ನು ಕೈಗೊಂಡಿದ್ದಾರೆ. ಶಿವಗೌಡರು ದಿನಾಂಕ: 21-02-2015 ರಂದು ಲಿಂಗೈಕ್ಯರಾಗಿದ್ದಾರೆ.
ಪಾಟೀಲ ಮನೆತನದ ಸದಸ್ಯರು
ಶ್ರೀ ಬಸಗೌಡ ಶಿವಗೌಡ ಪಾಟೀಲ:
ಆಧುನಿಕ ಕಲ್ಲೋಳಿಯ ಅಭಿವೃದ್ಧಿಯ ರೂವಾರಿಗಳಲ್ಲಿ ಮೂಂಚೂಣಿಯಲ್ಲಿರುವ ಹೆಸರು ಶ್ರೀ ಬಸಗೌಡ ಶಿವಗೌಡ ಪಾಟೀಲ ಅವರದು. ಶ್ರೀಯುತರು ಸ್ವಗ್ರಾಮವಾದ ಕಲ್ಲೋಳಿಯಲ್ಲಿ ದಿನಾಂಕ 27-5-1952 ರಂದು ಜನಿಸಿದರು. ತಂದೆ ಶಿವಗೌಡರ ಪ್ರೀತಿಯ ಮಗನಾಗಿ, ತಾಯಿ ಅಲ್ಲವ್ವ ಅವರ ಮುದ್ದಿನ ಕೂಸಾಗಿ, ಓರಿಗೆಯ ಸ್ನೇಹಿತರ ಅಚ್ಚು ಮೆಚ್ಚಿನ ನಾಯಕನಾಗಿ ಬೆಳೆದವರು. ಬಸಗೌಡ ಅವರು ಊರ ಗೌಡಕೀಯ ಮನೆತನದವರು. ಕೃಷಿ ಕುಟುಂಬದಲ್ಲಿ ಬದುಕನ್ನು ಕಟ್ಟಿಕೊಂಡ ಇವರು ತಮ್ಮ ತಂದೆ ಶಿವಗೌಡ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ತಮ್ಮ ತಂದೆಯವರು ಊರಿನ ಜನರ ಕಷ್ಟ ನಷ್ಟಗಳನ್ನು ಬಗೆ ಹರಿಸುವ ರೀತಿ ಬಾಲಕನಿದ್ದಾಗಲೇ ಇವರ ಮೇಲೆ ಪ್ರಭಾವ ಬೀರಿತು. ಅನಂತರ ಅವುಗಳಿಂದ ಸ್ಪೂರ್ತಿ ಪಡೆದು ಗ್ರಾಮಕ್ಕೆ ಹಾಗೂ ತಮ್ಮ ಜನರಿಗೆ ಏನಾದರೂ ಮಾಡಬೇಕೆಂದು ಅಚಲ ನಿರ್ಧಾರ ತೆಗೆದುಕೊಂಡರು.
ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಲ್ಲೋಳಿಯಲ್ಲಿ ಪೂರೈಸಿದರು. ಎಸ್.ಎಸ್.ಎಲ್.ಸಿ. ತೆರ್ಗಡೆ ನಂತರ ಹೆಚ್ಚಿನ ಓದಿಗೆ ಅಪೇಕ್ಷೆ ಮಾಡದೇ ಸಮಾಜಮುಖಿಯಾಗಿ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡರು. ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವದರ ಜೊತೆಗೆ ಧಾರ್ಮಿಕ, ಆರ್ಥಿಕ, ರಾಜಕೀಯ, ಶಿಕ್ಷಣ ಅಭಿವೃದ್ಧಿ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು.
ತಂದೆ ಶಿವನಗೌಡ ಪಾಟೀಲರು ಮುಲ್ಕಿ ಪಾಟೀಲ (ಕಂದಾಯ ವಸೂಲಿ)ರಾಗಿದ್ದರು. ಆಗ ಇವರ ಸಂಬಂಧಿಯಾದ ಎಚ್.ಆರ್.ಖಾನಗೌಡರು ಪೋಲೀಸ್ ಪಾಟೀಲರಾಗಿದ್ದರು. ಬೈಲಹೊಂಗಲ ಕಮೀಶನರ್ ಆದೇಶದ ಮೆರೆಗೆ ಗೋಕಾಕ ತಹಸಿಲ್ದಾರರು ದಿನಾಂಕ 14-06-1973 ರಂದು ಪೋಲೀಸ್ ಪಾಟೀಲಕಿ ಜವಾಬ್ದಾರಿಯನ್ನು ಬಸಗೌಡ ಶಿವಗೌಡ ಪಾಟೀಲರಿಗೆ ನೀಡಿದರು (ತಹಶಿಲ್ದಾರ್ ಪತ್ರದ ಸಂಖ್ಯೆ WಂP.P/ಏಚಿಟಟoಟi ಆಚಿಣe: 14-06-1973). ನಂತರ ಇವರನ್ನು ಬೆಳಗಾವಿಯ ಸುಪರಿಡೆಂಟ್ ಆಪ್ ಪೊಲೀಸ್‍ರಾಗಿದ್ದ ಟಿ. ಮದಿಹಾಳ ಅವರು ಕರ್ನಾಟಕ ಸರಕಾರದ ಆದೇಶದ ಮೇರೆಗೆ 1978 ರ ಜುಲೈ ತಿಂಗಳಲ್ಲಿ ಕಲ್ಲೋಳಿ ಗ್ರಾಮದ ‘ದಳಪತಿ’ ಯಾಗಿ ನೇಮಿಸಿದರು. (Sಖಿಂಖಿಇ ಔಈ ಏಂಖಓಂಖಿಂಏಂ Shಡಿi. ಃಚಿsಚಿgouಜಚಿ Shivಚಿgouಜಚಿ Pಚಿಣiಟ is ಚಿಠಿಠಿoiಟಿಣeಜ ಚಿs ಆಚಿಟಚಿಠಿಚಿಣi oಜಿ ಣhe ಗಿiಟಟಚಿge ಆeಜಿeಟಿಛಿe ಠಿಚಿಡಿಣಥಿ ಜಿoಡಿ ಏಚಿಟಟoಟi viಟಟಚಿge..Uಟಿಜeಡಿ ಣhe ಏಚಿಡಿಟಿಚಿಣಚಿಞಚಿ ಗಿiಟಟಚಿge ಜeಜಿeಟಿಛಿe Pಚಿಡಿಣies ಂಛಿಣ, 1964(ಏಚಿಡಿಟಿಚಿಣಚಿಞಚಿ ಂಛಿಣ, 34 oಜಿ 1964). 1974 ರಲ್ಲಿ ಬಲಭೀಮ ಯುವಕ ಸಂಘವನ್ನು ಹುಟ್ಟು ಹಾಕಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಯುವಕ ಸಂಘದ ಮುಖೇನ 1975ರಲ್ಲಿ ಗೋಕಾಕ ತಾಲೂಕ ಯುವಕ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಸಂಘಟನೆಯ ಮೂಲಕ ಸಮಾಜಸೇವೆಯನ್ನು ಆರಂಭಿಸುತ್ತ ರಾಜಕೀಯ ರಂಗವನ್ನು ಪ್ರವೇಶಿಸಿದರು.
ರಾಜಕೀಯ ನೆಲೆ :
ಸಾಮಾಜಮುಖಿಯಾದ ಪಾಟೀಲರು 1971ರಲ್ಲಿ ಅಂದಿನ ಸಂಸ್ಥಾಕಾಂಗ್ರೇಸ್ ಪಕ್ಷದ ಸಕ್ರೀಯ ಸದಸ್ಯರಾಗಿ ತಮ್ಮ ರಾಜಕೀಯ ಜೀವನಕ್ಕೆ ಪ್ರವೇಶ ಪಡೆದರು. 1978ರಲ್ಲಿ ಕಲ್ಲೋಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗುವ ಮೂಲಕ ಅಧಿಕೃತವಾಗಿ ರಾಜಕೀಯ ನೆಲೆಯನ್ನು ಕಂಡುಕೊಂಡರು. ಮುಂದೆ 1979ರಲ್ಲಿ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿ, ಸದಸ್ಯರಾಗಿ ಆಯ್ಕೆಯಾಗಿ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಮಾಡಿದರು..
ಬಸಗೌಡ ಪಾಟೀಲ ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿದ ಜನತಾದಳ ಪಕ್ಷದ ಮುಖಂಡರು 1994ರಲ್ಲಿ ಇವರನ್ನು ಬೆಳಗಾವಿ ಜಿಲ್ಲಾಜನತಾದಳದ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ಸಂಘಟನಾತ್ಮಕ ಹೋರಾಟದ ಮೂಲಕ ಜನತಾದಳ ಪಕ್ಷವನ್ನು ಈ ಭಾಗದಲ್ಲಿ ಗಟ್ಟಿಗೊಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ ಚುನಾವಣೆಗೆ ಸ್ಪರ್ಧಿಸಿ, ಸದಸ್ಯರಾಗಿ ಆಯ್ಕೆಯಾಗಿ, ಸನ್ 1997-98 ರಲ್ಲಿ ಬಹುಮತದ ಮೂಲಕ ಅಧ್ಯಕ್ಷರಾದರು. ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿದ್ದಾಗ ಕಲ್ಲೋಳಿ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದರು. ಅವುಗಳಲ್ಲಿ ಕಲ್ಲೋಳಿಯ ಶ್ರೀ ಸಾಯಿ ಮಂದಿರಕ್ಕೆ 1 ಲಕ್ಷ 72 ಸಾವಿರ ರೂ. ಸಹಾಯಧನ, ಸಿದ್ಧಾರೂಢ ಸಭಾ ಮಂಟಪ ನಿರ್ಮಾಣಕ್ಕಾಗಿ 8 ಲಕ್ಷ ರೂ. ಸಹಾಯಧನ, ವಿಠ್ಠಲ ಮಂದಿರಕ್ಕೆ 1.50 ಲಕ್ಷ ರೂ., ಮಾರುತಿ ದೇವರ ದೇವಸ್ಥಾನಕ್ಕೆ 5 ಲಕ್ಷ, ಹರಿಜನ ಕೇರಿಯ ಸಿದ್ಧಾರೂಢ ಮಠಕ್ಕೆ 3 ಲಕ್ಷ ರೂ., ಬಲಭೀಮ ರಂಗ ಮಂದಿರ ನಿರ್ಮಾಣ, ಅಕ್ಕನ ಬಳಗ ಮಂದಿರ, ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಕಟ್ಟಡ, ಹೀಗೆ ಮುಂತಾದ ಕಟ್ಟಡಗಳ ನಿರ್ಮಾಣಕ್ಕೆ ಅಪಾರ ಅನುದಾನವನ್ನು ತಮ್ಮ ಅಧಿಕಾರವಧಿಯಲ್ಲಿ ವಿನಿಯೋಗಿಸಿದ್ದಾರೆ. ಗ್ರಾಮದ ರಸ್ತೆಗಳು, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪಂಚಾಯತ ಕಾರ್ಯಾಲಯದ ಮುಂದೆ ಮಾರಾಟ ಮಳಿಗೆಗಳನ್ನು ನಿರ್ಮಿಸುವುದರ ಮೂಲಕ ಆರ್ಥಿಕ ಚಟುವಟಿಕೆಗಳು ಬೆಳೆಯಲು ಇಂಬುಕೊಟ್ಟರು. ಶಿವಾಪೂರ ಹಳ್ಳಕ್ಕೆ ಬಾಂಧಾರ, ಶಿಂಧಿಕುರಬೇಟದಿಂದ ಘಟಪ್ರಭಾ ರಸ್ತೆ, ಯಾದವಾಡ ಪಂಚಾಯತಿಗೆ ಸುಸರ್ಜಿತ ಕಟ್ಟಡ ನಿರ್ಮಾಣ, ವಡೇರಹ್ಟಿಯಲ್ಲಿ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ, ಕಬ್ಬು ನುರಿಸಲು ಗೋವಾ ಸರಕಾರದ ಜೊತೆಗೆ ಹೋರಾಟ ಕೈಗೊಂಡಿದ್ದರು. ಆ ಮೂಲಕ ಶ್ರೀಯುತರು ಗ್ರಾಮದ ಅಭಿವೃದ್ಧಿಯ ಹರಿಕಾರರಾಗಿ, ಜನಾನುರಾಗಿಯಾಗಿ ಶ್ರಮಿಸುತ್ತಿದ್ದಾರೆ.
ಸಹಕಾರ ರಂಗ :
ಬಸಗೌಡರು ಸ್ಥಳೀಯ ದಿ. ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ. 1985ರಲ್ಲಿ ಗೋಕಾಕ ತಾಲೂಕ ಕೃಷಿಕ ಸಮಾಜದ ಅಧ್ಯಕ್ಷರಾದರು. 1984 ರಿಂದ 1989ರ ವರೆಗೆ ಹಾಗೂ 2003ರಿಂದ ಇಲ್ಲಿಯವರೆಗೆ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ ಅದರ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಹಗಲಿರುಳು ಕಾರ್ಯೋನ್ಮುಖರಾಗಿದ್ದಾರೆ.
1989 ರಲ್ಲಿ ಬೆಳಗಾವಿ ಜಿಲ್ಲಾ ಕೃಷಿ ಸಮಾಜದ ನಿರ್ದೇಶಕರಾಗಿ 1993ರಲ್ಲಿ ಶ್ರೀ ಬಸವೇಶ್ವರ ಅರ್ಬನ್ ಕೋ ಆಫ್ ಕ್ರಿಡಿಟ್ ಸೊಸಾಯಿಟಿಯ ಸ್ಥಾಪಕ ನಿರ್ದೇಶಕರಾಗಿ ಅದರ ಉನ್ನತಿಗೆ ಕಾರಣೀಭೂತರಾಗಿದ್ದಾರೆ. ಹೀಗೆ ಶ್ರೀಯುತರು ಸಹಕಾರಿ ರಂಗದ ವಿವಿಧ ಆಡಳಿತದ ಸ್ತರಗಳಲ್ಲಿ ಸೇವೆ ಸಲ್ಲಿಸುತ್ತಾ ಗ್ರಾಮೀಣ ಜನರ ಆರ್ಥಿಕ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಶೈಕ್ಷಣಿಕ ರಂಗ :
ಗ್ರಾಮೀಣ ಜನರ ಸಾಕ್ಷರತೆ ಪ್ರಮಾಣ ಹೆಚ್ಚಿಸುವ ಮಹದಾಸೆಯಿಂದ ಕಲ್ಲೋಳಿಯಲ್ಲಿ 1968 ರಲ್ಲಿ ಸ್ಥಾಪಿತವಾಗಿದ್ದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸದಸ್ಯರಾಗಿ, ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಶಿಕ್ಷಣ ಸಂಸ್ಥೆಯ ಅಡಿಯಲ್ಲಿರುವ ಶ್ರೀ ಶಿವಗೌಡ ಬ. ಪಾಟೀಲ ಪ್ರಾಥಮಿಕ ಶಾಲೆ, ಎಸ್.ಆರ್.ಇ.ಎಸ್. ಪ್ರೌಢಶಾಲೆ, ಶ್ರೀ ಎನ್.ಆರ್. ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬಿ.ಎಸ್.ಡಬ್ಲೂ ಕಾಲೇಜುಗಳ ಅಭಿವೃದ್ಧಿಗೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದಾರೆ. ಅಲ್ಲದೆ, ವೃತ್ತಿಪರ ಶಿಕ್ಷಣ ಹಾಗೂ ಸ್ನಾತಕೋತ್ತರ ಶಿಕ್ಷಣ ಕೋರ್ಸಗಳನ್ನು ಪ್ರಾರಂಭಿಸಬೇಕೆಂಬುದು ಇವರ ಮುಂದಿನ ಯೋಜನೆ.
ಈ ಸಂಸ್ಥೆಯ ಜೊತೆಗೆ ಜಿಲ್ಲೆಯ ಅನೇಕ ಶಿಕ್ಷಣ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹೊಂದಿ ಅವುಗಳಿಗೆ ಸಹಕಾರ, ಮಾರ್ಗದರ್ಶನ ನೀಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದುವುಗಳು ಕಿತ್ತೂರಾಣಿ ಚನ್ನಮ್ಮ ರೆಸಿಡೆನ್ಸಿಯಲ್ ಸ್ಕೂಲ್‍ನ ಪಾಲಕರ ಅಸೋಶಿಯನ್ ನಿರ್ದೇಶಕರಾಗಿ, 2000 ದಿಂದ 2003ರ ವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಗೋಕಾಕ ತಾಲೂಕಿನ ‘ಅಖಿಲ ಭಾರತ ವೀರಶೈವ ಮಹಾಸಭಾದ’ ಅಧ್ಯಕ್ಷರಾಗಿ 2003 ರಿಂದ 2008 ವರೆಗೆ ಹಾಗೂ ಸಧ್ಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೋಕಾಕ ಜಿಲ್ಲಾ ನಿರ್ಮಾಣ ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸತತ ಪ್ರಯತ್ನದ ಮೂಲಕ ಶ್ರೀ ಸಿದ್ದೇಶ್ವರ ಶ್ರೀಗಳನ್ನು ಕಲ್ಲೋಳಿ ಗ್ರಾಮಕ್ಕೆ ಕರೆದು ತಂದರು. ದಿನಾಂಕ 19-9-2011 ರಿಂದ ಒಂದು ತಿಂಗಳ ಪರ್ಯಂತರ ಆದ್ಯಾತ್ಮಿಕ ಪ್ರವಚನ ಏರ್ಪಡಿಸಿ ಅದರ ಯಶಸ್ವಿಗೆ ತನು-ಮನ-ಧನದಿಂದ ಶ್ರಮಿಸಿದ್ದಾರೆ. ಈ ಪ್ರವಚನದ ಸೇವಾ ಸಮೀತಿಯ ಉಪಾಧ್ಯಕ್ಷರಾಗಿ ಜವಾಬ್ಧಾರಿಯುತ ಕಾರ್ಯ ನಿರ್ವಹಿಸಿದ್ದಾರೆ.
ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣಿದಲ್ಲಿ ಮೂಂಚೂಣಿಯಲ್ಲಿದ್ದ ದಿ. ರಾಮಕೃಷ್ಣ ಹೆಗಡೆ. ಎಸ್.ಆರ್. ಬೊಮ್ಮಾಯಿ, ಎಂ.ಪಿ. ಪ್ರಕಾಶ ಅವರ ನಿಕಟ ಸಂಬಂಧವನ್ನು ಹೊಂದಿದ್ದರು. ಪ್ರಸ್ತುತ ರಾಜಕಾರಣಿಗಳಾದ ಶಿವಾನಂದ ಕೌಜಲಗಿ, ಎ. ಬಿ. ಪಾಟೀಲ, ಉಮೇಶ ಕತ್ತಿ, ಜಾರ್ಜ್ ಪರ್ನಾಂಡಿಸ್, ಲೀಲಾವತಿ ಆರ್. ಪ್ರಸಾದ ಹಾಗೂ ಬಾಲಚಂದ್ರ ಜಾರಕಿಹೊಳಿ ಮುಂತಾದ ಮುಖಂಡರ ಆಪ್ತರಾಗಿ ರಾಜಕೀಯ ವಲಯದಲ್ಲಿ ಗುರ್ತಿಸಿಕೊಂಡಿದ್ದಾರೆ. ಸರ್ವಧರ್ಮದ ಸಮನ್ವಯದ ಹರಿಕಾರರಾಗಿ ಜಾತ್ಯಾತೀತ ಬಾಂಧವ್ಯದ ಬೆಸುಗೆಯಾಗಿದ್ದಾರೆ.
ಪೋಲೀಸ್ ಪಾಟೀಲರ ಕಾರ್ಯಗಳು:
1. ಕಂದಾಯ ವಸೂಲಿ, ಜನನ ಮರಣ ದಾಖಲೆ, ಶಾಂತಿ ಸುವ್ಯಸ್ಥೆ ಪಾಲನೆ, ನ್ಯಾಯ ತಿರ್ಮಾಣ, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದು ಇತ್ಯಾದಿ.
2. ಗೋಕಾಕ ತಾಲೂಕ ಕಛೇರಿ ಪತ್ರ ನಂ. P.ಔ.ಐ-29 ದಿ.1-06-1954 ರ ಅನ್ವಯ- ರಾಜಕೀಯ ಸಂಸ್ಥೆಗಳು ಅವುಗಳ ಪುಢಾರಿ ಜನರ ಹಾಲಚಾಲಗಳು ಮತ್ತು ಅವರು ಪ್ರಶಿದ್ಧಪಡಿಸಿದ ಲೇಖನಗಳು, ರಾಜಕೀಯ ಸ್ವರೂಪದ ಯಾವದೇ ವಿಶಿಷ್ಠ ಜಾತಿಯ ಸಂಘಗಳು ಮತ್ತು ಅವರ ಹಾಲಚಾಲಗಳು ಮತ್ತು ಮತಾಂತರ ಪಡಿಸುವುದು ಮತ್ತು ಕರ್ನಾಟಕ ಏಕೀಕರಣ ಸಂಬಂಧಿ ಚಳುವಳಿ, ಪರದೇಶದ ಜನರೂ, ಸಂಶೇಯಾತ್ಮಕ ಜನರು ಬರುವುದು, ಹೋಗುವದು ಮತ್ತು ಅವರು ಯಾತರ ಬಗ್ಗೆ ಬಂದಿದ್ದರು ಎಂಬುದರ ಬಗ್ಗೆ ತಿಳಿಸುವುದು. ಬೆಳೆ ಪರಿಸ್ಥಿತಿ, ಬಗರ ಪರವಾಣಿಗೆಯಿಂದ ಮದ್ದು, ಗುಂಡು ತರುವುದು ಮತ್ತು ಅವುಗಳನ್ನು ಬಗರ ಪರವಾನಿಗೆಯಿಂದ ಸಾಗಾಟ ಮಾಡುವುದು, ಗೋವಾ sಸಂಬಂಧಿ ಮುಂಬೈ ಸರಕಾರಕ್ಕೆ ಹಿತ ಸಮ್ಮಂಧಿಸಿದ ಕೆಸಗಳಲ್ಲಿ ಏನಾದರೂ ಹಾಲಚಾಲ ನಡೆದಿದ್ದರ ಬಗ್ಗೆ, ರೋಗಾದಿಗಳು ಮತ್ತು ಸ್ವಾಭಾವಿಕ ಆಪತ್ತುಗಳು ಅಂದರೆ ಬೆಂಕಿ, ಮಳೆ, ಗಾಳಿ, ಸಿಡ್ಲ ಮುಂತಾದವುಗಳಿಂದ ಆದ ಲುಕ್ಸಾನಗಳು, ವಿದ್ಯಾರ್ಥಿ ಹಾಲ ಚಾಲಗಳು, ಅಬಕಾರಿ ಸಂಬಂಧಿ ಮಾಹಿತಿಗಳನ್ನು, ಪ್ರತಿ ಶುಕ್ರವಾರ ತಾಲೂಕ ಕಛೇರಿಗೆ ಗುಪ್ತವಾಗಿ ತಿಳಿಸುವುದು. ಪ್ರತಿ ತಿಂಗಳ ಮೊದಲನೇ ತಾರೀಖಿಗೆ ಮುಟ್ಟುವಂತೆ ಯಾವದೇ ತರದ ಅಮಲು ಇಲ್ಲದ ಬಗ್ಗೆ ರೀಪೊರ್ಟ ಕಳಿಸುವುದು.
3. ಗೋಕಾಕ ತಾಲೂಕ ಕಛೇರಿ, ಮ್ಯಾಜಿಸ್ಟ್ರೇಟ್ ಕೋರ್ಟನಿಂದ ಪತ್ರ ನಂ. ಒಂಆ -26-08-1954 ರ ಅನ್ವಯ- ಪೋಲೀಸ್ ಪಾಟೀಲರಿಗೆ ಹುಕುಂ, ನಿಮ್ಮ ಗ್ರಾಮದ ಸರಹದ್ದಿಯಲ್ಲಿ ಯಾರೂ ದಿಕ್ಕಿಲ್ಲದ ಮಾಲು ಸಿಕ್ಕರೆ, ಪೋಲೀಸರು ಅದನ್ನು ನಿಮ್ಮ ತಾಬೇಕ್ಕೆ ಕೊಡುತ್ತಾರೆ ಅದನ್ನು ನೀವು ಯಾವುದೇ ತಕರಾರು ಮಾಡದೇ ತೆಗೆದು ಕೊಳ್ಳಬೇಕು. ನಂತರ ನಮ್ಮ ಕಡೆಗೆ ತಾಬಡತೋಬಡ ಯಾವತ್ತೂ ಮಾಲಿನ ವರ್ಣನೆ ಸಹಿತಾ ರಿಪೋರ್ಟ ಮಾಡಬೇಕು. ತಮ್ಮ ಹತ್ತಿರ ಇರುವ ರಜಿಸ್ಟರ್‍ದಲ್ಲಿ ಅದರ ವರ್ಣನೆ ನಮೂದ ಮಾಡಬೇಕು.
4. ಗೋಕಾಕ ತಾಲೂಕ ಕಛೇರಿ, ಮಾಮಲೇದಾರ ಪತ್ರ ನಂ. ಂಆಊ -30-11-1954 ರ ಅನ್ವಯ- ಗ್ರಾಮದ ರಜಿಸ್ಟಾರ್‍ಗಳಿಂದ ಜಾತಿ ಎಂಬ ಇರುವ ಕೊಷ್ಠಕವನ್ನು ತೆಗೆದು ಧರ್ಮವೆಂದು ಪೂರೈಸಿರುತ್ತಾರೆ. ರಜಿಸ್ಟಾರ ಕೋಷ್ಠಕದಲ್ಲಿ ಜಾತಿ ಇದ್ದಲ್ಲಿ ಧರ್ಮವೆಂದು ಕೋಷ್ಠಕ ತಯಾರಿಸಿ, ಹಿಂದುಳಿದ ಜಾತಿಯವರು ಇದ್ದಲ್ಲಿ ಮಾತ್ರ ಅವರ ಜಾತಿಯನ್ನು ನಮೂದಪಡಿಸಬೇಕು.
5. ಗೋಕಾಕ ತಾಲೂಕ ಕಛೇರಿ, ಮಾಮಲೇದಾರ ಪತ್ರ ನಂ. Wಖಿಓ 746- ದಿ. 26-5-1955À ಅನ್ವಯ- ಯಾವತ್ತೂ ಪಾಟೀಲರಿಗೆ ಹುಕುಂ, ಅರಣ್ಯ ಖಾತೆದ ಜನರಿಗೆ ಅರಣ್ಯ ಸಂಬಂಧಿ ಗುನ್ಹೆಗಳ ವಿಷಯದಲ್ಲಿ ನೀವು ಏನು ಮುದತ ಮಾಡುವದಿಲ್ಲಾ ಅಂತಾ ಸರಕಾರ ಕಾಯ್ದೆ ಜಾರಿಗೆ ತಂದಿದೆ. ಈ ವಿಷಯದಲ್ಲಿ ಯಾರಾದರೂ ಹೈಗೈ ಮಾಡಿದರೆ ನಿಮ್ಮ ಮೇಲೆ ಇಲಾಖೆ ಯೋಗ್ಯ ಕ್ರಮ ಕೈಗೊಂಡು ಕೆಲಸದಿಂದ ಸಹ ತೆಗೆದು ಹಾಕಲಾದಿತು. ನಿಮಗೆ ಈ ಹಕೀಕತ ತಿಳಿದ ಬಗ್ಗೆ ನಮ್ಮ ಕಡೆಗೆ ದೇಬತ ಹುಕುಮ ರಿಪೋರ್ಟ ಮಾಡಬೇಕು.
6. ಗೋಕಾಕ ತಾಲೂಕ ಕಛೇರಿ, ಮಾಮಲೇದಾರ ಪತ್ರ ನಂ. ಒಂಉ -26-08-1955 ರ ಅನ್ವಯ- ಪೋಲೀಸ್ ಪಾಟೀಲರಿಗೆ ಹುಕುಂ, ಖೂನೀ ವ ಖಟ್ಲೆಗಳಿಗೆ ಸಂಬಂಧಿಸಿದ ಸಾಮಾನುಗಳನ್ನು ವ್ಯವಸ್ಥಿತವಾಗಿ ಪೋಲೀಸ್ ಪಾಟೀಲರು ಇಟ್ಟುಕೊಳ್ಳಬೇಕು. ಗುನ್ಹೇದ ಜಾಗಾದ ಮೇಲೆ ಶಿಕ್ಕ ಯಾವತ್ತು ಮಾಲನ್ನು ಪೋಲೀಸ್ ತಪಾಸಣೆÉಗೆ ಅಮಲ್ದಾರರು ಬಂದಾಗ ಅವರಿಗೆ ನೀಡಬೇಕು.
7. ಗೋಕಾಕ ತಾಲೂಕ ಕಛೇರಿ ಪತ್ರ ನಂ. ಗಿ.ಐ.ಖಿ 20 ರ ಅನ್ವಯ- ಮೆ// ಕಲೆಕ್ಟರ್ ಮತ್ತು ಅಧ್ಯಕ್ಷ ಜಿಲ್ಲಾ ಅಭಿವೃದ್ಧಿ ಮಂಡಳಿ ಬೆಳಗಾಂವ ಅವರು ‘ಪಾನ ಪ್ರತಿಬಂಧಕ’ದ ಬಗ್ಗೆ ಪೋಲೀಸ್ ಪಾಟೀಲರಿಗೆ ಕೊಟ್ಟ ಸೂಚನೆಗಳನ್ನು ಪಾಲಿಸುವುದು. ಪಾನ ಪ್ರತಿಬಂಧ, ಕಾಯ್ದೆಯ ಯಾವದೇ ಕಲಮನ್ನು ಯಾವದೇ ವ್ಯಕ್ತಿಯು ಉಲ್ಲಂಘನೆ ಮಾಡಿದ್ದು ಕಂಡು ಬಂದ ಕೂಡಲೇ, ಸಮೀಪದ ಪೋಲೀಸ ಸ್ಟೇಶನ್ನಿಗೆ, ಅಥವಾ ಪಾನಪ್ರತಿಬಂಧದ ಬಗ್ಗೆ ನೇಮಿಸಿದ ಯಾವದೇ ಅಧಿಕಾರಿಗೆ ವರದಿ ಮಾಡುವುದು. ಯಾವದೇ ವ್ಯಕ್ತಿಯು ಸದರೀ ಕಾಯ್ದೆಯನ್ವಯ ಅಪರಾಧವನ್ನು ಮಾಡುತ್ತಿರುವನೆಂದು ಇಲ್ಲವೇ ಮಾಡಿರುವನೆಂದು, ಖಾತ್ರಿ ಪೂರ್ವಕವಾಗಿ ಕಂಡು ಬಂದಲ್ಲಿ, ನಿಮ್ಮ ಅಧಿಕಾರ ಕಕ್ಷೆಯಲ್ಲಿ ಬರುವ ಎಲ್ಲ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳತಕ್ಕದ್ದು. ಅಬಕಾರಿ ಗುನ್ಯೇದ ಬಗ್ಗೆ ಪ್ರತಿ ತಿಂಗಳ 3 ನೇ ತಾರೀಖಿಗೆ ತಾಲೂಕ ಕಚೇರಿಗೆ ಮುಟ್ಟುವಂತೆ ಗುಪ್ತ ಮಾಹಿತಿ ಕಳಿಸುವುದು. ಗುನ್ಯೆ ಇಲ್ಲದರ ಬಗ್ಗೆಯು ಮಾಹಿತಿ ನೀಡಬೇಕು.
ಪೋಲೀಸ್ ಪಾಟೀಲರು ನಿರ್ವಹಿಸುತ್ತಿದ್ದ ದಾಖಲೆಗಳು:
ಟಪಾಲ ಪುಸ್ತಕ, ಪೋಲೀಸ್ ಪಾಟೀಲರ ಪ್ರಥಮ ಮಾಹಿತಿ, ಪಂಚಾಯತಿ ರಿಪೋರ್ಟ, ವ್ಹಿಜಿಟ್ ಬುಕ್ಕ್, ಜನನ ಮರಣ ರಜಿಸ್ಟರ್, ಮೈಲಿಮಾರಿ ರಜಿಸ್ಟರ್, ಪೋಲೀಸ್ ಮತ್ತು ಮುಲ್ಕಿ ಆವಕ ಜಾವಕ ರಜಿಸ್ಟರ್, ಗಾಡಿ ರಜಿಸ್ಟರ್, ಮೈಲಿ ತೆಗೆದ ಬಗ್ಗೆ ರಜಿಸ್ಟರ್, ಹತ್ಯಾರ ರಜಿಸ್ಟರ್, ಫೇರಿಸ್ ಬುಕ್ಕ್, ದನಗಳ ಬೇನೆಯ ರಜಿಸ್ಟರ್, ಗುನ್ಹೆ ರಜಿಸ್ಟರ್, ಫೇರಿಸ್ತಟೇಳಿ ಬುಕ್ಕ್, ಶಿಕ್ಷಾ ರಜಿಸ್ಟರ್, ಸನದಿ ಹಾಜರಿ ಬುಕ್ಕ್ ಮುಂತಾದ ದಪ್ತರಗಳನ್ನು ಪೋಲೀಸ್ ಪಾಟೀಲರು ನಿಭಾಯಿಸುತ್ತಿದ್ದರು.
ಸಮಾರೊಪ:
ಪ್ರಾಚೀನ ಕಾಲದಿಂದಲೂ ಗ್ರಾಮಗಳ ಅಭಿವೃದ್ಧಿಯಲ್ಲಿ ಗೌಡ ಮನೆತನದವರು ಸಲ್ಲಿಸಿದ ಸೇವೆ ಅನೂಪಮವಾದದ್ದು. ಪ್ರತಿಯೊಂದು ಗ್ರಾಮಾಡಳಿತ ಘಟಕದಲ್ಲಿ ಇಂತಹ ಅನೇಕ ಕುಟುಂಬಗಳು ತೊಡಗಿಕೊಂಡು, ಹಿಂದಿನ ಪರಂಪರೆಯನ್ನು ಇವತ್ತಿನವರೆಗೂ ಮುದುವರೆಸಿಕೊಂಡು ಬಂದಿದ್ದಾರೆ. ಇವತ್ತು ಸರಕಾರಿ ಗೌಡಕಿ ಅಧಿಕಾರವನ್ನು ಈ ಮನೆತನಗಳು ಕಳೆದುಕೊಂಡಿದ್ದರು ಸಹ ಗ್ರಾಮಗಳಲ್ಲಿರು ವ್ಯಾಜ್ಯಗಳನ್ನು ಇವರೇ ಬಗೆಹರಿಸುತ್ತಾರೆ. ಗ್ರಾಮದಲ್ಲಿಯ ಯಾವುದೇ ಧಾರ್ಮಿಕ ಚಟುವಟಿಕೆಗಳು ಇವರ ಮುಂದಾಳತ್ವದಲ್ಲಿಯೇ ಜರುಗುತ್ತವೆ. ಇಂತಹ ಗೌಡಕಿ ಕುಟುಂಬಗಳ ಸಮಗ್ರ ಅಧ್ಯಯನದ ಅನಿವಾರ್ಯತೆ ಇದೆ.
ಆಧಾರಗಳು:
1. ಸಂದರ್ಶನ- ಶ್ರೀ ಶಿವಗೌಡ ಬಸಗೌಡ ಪಾಟೀಲ, ಮಾಜಿ ಪೋಲೀಸ್ ಪಾಟೀಲರು, ಕಲ್ಲೋಳಿ ದಿನಾಂಕ: 15-06-2014
2. ಸಂದರ್ಶನ- ಶ್ರೀ ಬಸಗೌಡ ಶಿವಗೌಡ ಪಾಟೀಲ, ಮಾಜಿ ಪೋಲೀಸ್ ಪಾಟೀಲರು, ಕಲ್ಲೋಳಿ ದಿನಾಂಕ: 17-05-2015
3. ಸಂದರ್ಶನ- ಶ್ರೀ ಅಶೋಕ ಶಿವಗೌಡ ಪಾಟೀಲ, ವೈಧ್ಯರು, ಕಲ್ಲೋಳಿ ದಿನಾಂಕ: 17-05-2015
4. ಸಂದರ್ಶನ- ಪ್ರೊ. ಸುರೇಶ ಹನಗಂಡಿ, ಪ್ರಾಚಾರ್ಯರು, ಎಸ್.ಆರ್.ಇ.ಎಸ್ ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ ದಿನಾಂಕ: 19-05-2015
5. ಗೋಕಾಕ ತಾಲೂಕು ಕಛೇರಿ ಹಾಗೂ ಕಲ್ಲೋಳಿಯ ಪೋಲೀಸ ಪಾಟೀಲರ ನಡುವೆ ನಡೆದ ಪತ್ರಗಳು.
6. ಇಂದ್ರವೇಣಿ, ಕಲ್ಲೋಳಿಯ ಐತಿಹಾಸಿಕ ಚರಿತ್ರೆ, (ಸಂ) ಸುರೇಶ ಹನಗಂಡಿ, ಶಂಕರ ನಿಂಗನೂರ, ಬೆಳುವಲ ಪ್ರಕಾಶನ ಬಳೋಬಾಳ, 2011
7. ಸಹಕಾರ ಪ್ರಭೆ, ಶತಮಾನೋತ್ಸವದ ಸ್ಮರಣ ಸಂಚಿಕೆ, (ಸಂ) ಸುರೇಶ ಹನಗಂಡಿ, ಶಂಕರ ನಿಂಗನೂರ, ಕೆಂಪಣ್ಣಾ ಪರವ್ವಗೋಳ, ಪ್ರಕಾಶಕರು,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕಲ್ಲೋಳಿ, 2014
ಸಂಶೋಧಕರು:
ಶಂಕರ ಮಹಾದೇವ ನಿಂಗನೂರ
ಇತಿಹಾಸ ಉಪನ್ಯಾಸಕರು
ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ
ತಾಲೂಕ : ಮೂಡಲಗಿ ಜಿ: ಬೆಳಗಾವಿ
9742054268
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ