ಪ್ರಾಚೀನ ಭಾರತ ಪ್ರಸಿದ್ಧ ನಳಂದಾ ವಿಶ್ವವಿದ್ಯಾಲಯ
ನಳಂದಾ ಬೌದ್ಧ ವಿಹಾರದ ಅವಶೇಷಗಳು
ಭಾರತದ ಅತ್ಯಂತ ಪ್ರಸಿದ್ಧ ಬೌದ್ಧ ವಿದ್ಯಾಕೇಂದ್ರವೆಂದರೆ ನಳಂದಾ ವಿಶ್ವವಿದ್ಯಾಲಯ. ಗುಪ್ತರ ಕಾಲದಲ್ಲಿ ಸ್ಥಾಪಿತವಾದ ಈ ವಿದ್ಯಾ ಕೇಂದ್ರವು ಹರ್ಷವರ್ಧನನ ಕಾಲದಲ್ಲಿ ಅತ್ಯಂತ ಪ್ರಸಿದ್ಧ ವಿದ್ಯಾ ಕೇಂದ್ರವಾಯಿತು. ಬೌದ್ಧ ಗ್ರಂಥಗಳು, ಜೈನ ಕೃತಿಗಳು, ಚೀನಾದ ಪ್ರವಾಸಿಗ ಹ್ಯೂಯೆನ್ ತ್ಸಾಂಗ್, ಇತ್ಸಿಂಗ್ ಮತ್ತು ಟಿಬೇಟಿನ ತಾರಾನಾಥರ ಬರವಣಿಗೆಗಳು ಮತ್ತು ಪ್ರಾಕ್ತನ ಆಧಾರಗಳು ಈ ವಿಶ್ವವಿದ್ಯಾಲಯದ ಕುರಿತು ಅನೇಕ ವಿವರಗಳನ್ನು ನೀಡುತ್ತವೆ.
ಸ್ಥಳ ಮತ್ತು ಶೋಧ
ನಳಂದಾ ಬೌದ್ಧ ವಿಹಾರವು ಬಿಹಾರಿನ ಪಾಟ್ನಾಗೆ ಆಗ್ನೇಯಕ್ಕೆ ಬರುವ ರಾಜಘರ್ ನಿಂದ ಏಳು ಮೈಲಿ ದೂರದಲ್ಲಿರುವ ಇಂದಿನ ಬೀರಗಾಂವ್ ಗ್ರಾಮದಲ್ಲಿ ಇತ್ತು. ಈ ವಿಹಾರದ ಅವಶೇಷಗಳನ್ನು ಇಲ್ಲಿ ಮೊದಲು ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಂ ಅವರು ೧೮೭೫ ರಲ್ಲಿ, ನಂತರ ಡಾ. ಸ್ಪೂನರ್ ಅವರು ೧೯೧೩ ರಲ್ಲಿ ಶೋಧಿಸಿದರು. ಈ ವಿಹಾರಕ್ಕೆ 'ನಳಂದ ಮಹಾವಿಹಾರ' ಎಂಬ ಮುದ್ರೆ ಇದ್ದು, 'ಧರ್ಮಚಕ್ರ' ಇದರ ಚಿಹ್ನೆಯಾಗಿತ್ತು.
ಸ್ಥಾಪನೆ ಮತ್ತು ಪೋಷಕರು: ಗುಪ್ತ ಸಾಮ್ರಾಜ್ಯದ ಚಕ್ರವರ್ತಿ ೧ನೇ ಕುಮಾರಗುಪ್ತನು ೫ ನೇ ಶತಮಾನದಲ್ಲಿ ನಳಂದಾ ಬೌದ್ಧ ವಿಹಾರವನ್ನು ಸ್ಥಾಪಿಸಿದನು. ಸುಖರಾಧಿತ್ಯ ಎಂಬ ಶ್ರೀಮಂತ ವ್ಯಾಪಾರಿ ಇಲ್ಲಿ ವಿಹಾರವೊಂದನ್ನು ನಿರ್ಮಿಸಿ ಧನ ಸಹಾಯ ನೀಡಿದನು. ಅನಂತರ ಗುಪ್ತ ಅರಸರಾದ ಬುಧಗುಪ್ತ, ತಥಾಗತಗುಪ್ತ ಮತ್ತು ಬಲಾದಿತ್ಯರು ಇಲ್ಲಿ ಹಲವು ಕಟ್ಟಡಗಳನ್ನು ಕಟ್ಟುವ ಮೂಲಕ ಬೆಳೆಸಿದರು. ಈ ವಿಶ್ವವಿದ್ಯಾಲಯಕ್ಕೆ ಸುಮಾತ್ರದ ರಾಜ ಬಾಲಪುತ್ರದೇವ, ಅಫ್ಘಾನಿಸ್ತಾನದ ರಾಜ ವೀರದೇವ, ಶಕರಾಜ, ರುದ್ರದೇವ, ಕಾಮರೂಪದ ಭಾಸ್ಕರವರ್ಮ, ಬಂಗಾಲದ ಪಾಲ ಅರಸ ಗೋಪಾಲರು ಅಪಾರ ಪ್ರಮಾಣದ ಸಂಪತ್ತನ್ನು ನೀಡಿ ಪೋಷಿಸಿದರು. ಈ ವಿಹಾರದ ಪ್ರಖ್ಯಾತಿಗೆ ಅತೀ ಹೆಚ್ಚು ಶ್ರಮಿಸಿದವನೇಂದರೆ ವರ್ಧನ ಸಾಮ್ರಾಜ್ಯದ ಚಕ್ರವರ್ತಿ, ಉತ್ತರ ಪಥೇಶ್ವರನೆಂದು ಬಿರುದಾಂಕಿತನಾದ ಹರ್ಷವರ್ಧನ. ಈ ವಿಹಾರಕ್ಕೆ ತನ್ನ ಸಾಮ್ರಾಜ್ಯದ ೧೦೦ ಹಳ್ಳಿಗಳಿಂದ ಬರುವ ಆದಾಯವನ್ನು ಬಿಟ್ಟುಕೊಟ್ಟಿದ್ದನು. ಸ್ವತಃ ತಾನು ನಳಂದಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಪಾದ ಸೇವಕನೆಂದು ಹೇಳಿಕೊಂಡಿದ್ದಾನೆ.
ದೇಶ ವಿದೇಶದಲ್ಲಿ ಅಂದು ನಳಂದಾ ವಿಹಾರ ಹೆಸರುವಾಸಿಯಾಗಿತ್ತು. ಇಲ್ಲಿಗೆ ಅಧ್ಯಯನ ಮಾಡಲು ಚೀನಾ, ಮಂಗೋಲಿಯಾ, ಟಿಬೆಟ್, ಸಿಲೋನ್, ಕಾಂಬೋಡಿಯಾ, ಬರ್ಮಾ, ಗಾಂಧಾರ, ಪರ್ಶಿಯಾ, ಜಾವ, ಸುಮಾತ್ರ, ಮಲಯ, ಕೊರಿಯಾ, ಜಪಾನ್ ಮುಂತಾದ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು.
ಧರ್ಮ ಚಕ್ರಕಟ್ಟಡಗಳು:
"ನಳಂದಾ ಬೌದ್ಧ ವಿಹಾರವು ಭವ್ಯವಾದ ಕಟ್ಟಡಗಳಿಂದ ಅಲಂಕೃತವಾಗಿತ್ತು. ಆವರಣದ ಸುತ್ತಲು ಇಟ್ಟಿಗೆಗಳಿಂದ ರಕ್ಷಣಾ ಗೋಡೆಯನ್ನು ನಿರ್ಮಿಸಲಾಗಿತ್ತು. ಒಳಭಾಗದಲ್ಲಿ ಮಾವಿನ ತೋಪು, ಹೂದೋಟಗಳು ಅಲ್ಲಲ್ಲಿ ತಾವರೆ ಹೂವಿನ ಪುಷ್ಕರಣಿಗಳಿದ್ದವು. ಇಲ್ಲಿ ೬ ಅಂತಸ್ತುಗಳಿಂದ ಕೂಡಿದ ಭವನಗಳು, ೮ ದೊಡ್ಡ ಸಭಾಂಗಣಗಳು, ೩೦೦ ಕೊಠಡಿಗಳಿದ್ದವು. ಎರಡು ಪ್ರಯೋಗಾಲಯಗಳು ಒಂದು ಎತ್ತರವಾದ ಖಗೋಳ ವಿಕ್ಷಣಾಲಯವಿತ್ತು. ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರುಗಳಿಗೆ ಪ್ರತ್ಯೇಕವಾದ ವಸತಿ ಗೃಹಗಳಿದ್ದವು. ವಿಹಾರದ ಮಧ್ಯದಲ್ಲಿ ೮೦ ಅಡಿ ಎತ್ತರದ ಬುದ್ಧನ ಪ್ರತಿಮೆ ಇತ್ತು. ದೊಡ್ಡ ಹಜಾರಗಳ ಕಂಬಗಳು, ಗೋಪುರಗಳು ಸೂಕ್ಷ್ಮ ಕೆತ್ತನೆಗಳಿಂದ ಅಲಂಕೃತಗೊಂಡಿವೆ. ಎತ್ತರವಾದ ಕಟ್ಟಡಗಳ ಕಿಡಕಿಯಿಂದ ನೋಡಿದಾಗ ಮನಮೋಹಕ ನಿಸರ್ಗ ಕಣ್ಣು ಕುಕ್ಕಿಸುತ್ತಿತ್ತು. ಈ ವಿಶ್ವವಿದ್ಯಾಲಯವು ಬೀರಗಾವ್ ನದಿ ತಟದಲ್ಲಿ ಪ್ರಶಾಂತತೆಯಿಂದ ಜ್ಞಾನ ದೀವಿಗೆಯಾಗಿ ಪ್ರಕಾಸಿಸುತ್ತಿತ್ತು" ಎಂದು ಹ್ಯೂಯೇನ್ ತ್ಸಾಂಗ ತಿಳಿಸಿದ್ದಾನೆ.
ವಿದ್ಯಾರ್ಥಿಗಳ ಪ್ರವೇಶ:
ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ತುಂಬಾ ಕಠಿಣವಾಗಿತ್ತು. ಅದಕ್ಕಾಗಿ ಪರಣಿತರ ಆಯ್ಕೆ ಸಮಿತಿ ಇದ್ದಿತು. ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು, ನಡೆ, ನುಡಿ ಪರಿಶೀಲಿಸಿ ಪ್ರವೇಶ ನೀಡಲಾಗುತ್ತಿತ್ತು. ೧೦ ಮಂದಿಯಲ್ಲಿ ಮೂವರಿಗೆ ಮಾತ್ರ ಪ್ರವೇಶ ಸಿಗುತ್ತಿತ್ತು. ಪ್ರತಿಶತ ೨೦% ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗುತ್ತಿದ್ದರು ಎಂದು ಹ್ಯೊಯೆನ್ ತ್ಸಾಂಗ್ ತಿಳಿಸಿದ್ದಾನೆ. ಅದರಲ್ಲಿ ಕೆಲವರು ದ್ವಾರಪಂಡಿತರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸದೆ ಹಿಂತಿರುಗುತ್ತಿದ್ದರಂತೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸ್ತ್ರೀಯರಿಗೆ ಇಲ್ಲಿ ಅಧ್ಯಯನಕ್ಕೆ ಅವಕಾಶವಿತ್ತು. ಆದರೆ ಸನ್ಯಾಸಿಗಳೊಂದಿಗೆ ಮಾತನಾಡುವ ಅಥವಾ ಬೆರೆಯುವುದಕ್ಕೆ ನಿರ್ಬಂಧವಿತ್ತು.
ಬೋಧನಾ ವಿಷಯಗಳು:
ಹಿನಾಯಾನ ಮತ್ತು ಮಹಾಯಾನದ ತತ್ವ, ವೇದಗಳು, ವೇದಾಂಗಗಳು, ವ್ಯಾಕರಣ, ತತ್ವಶಾಸ್ತ್ರ, ಖಗೋಳಶಾಸ್ತ್ರ, ನೀತಿಶಾಸ್ತ್ರ, ರಸಾಯನಶಾಸ್ತ್ರ, ಲೋಹಶಾಸ್ತ್ರ, ಶಿಲ್ಪಕಲೆ, ವೈದ್ಯಕೀಯ, ತರ್ಕಶಾಸ್ತ್ರ, ಇತಿಹಾಸ, ಯೋಗ, ಲಲಿತಕಲೆ ಮುಂತಾದ ವಿಷಯಗಳನ್ನು ಬೋಧಿಸಲಾಗುತ್ತಿತ್ತು. ಬೋಧನಾ ಭಾಷೆ ಪ್ರಾಕೃತ ಮತ್ತು ಸಂಸ್ಕೃಯವಾಗಿತ್ತು.
ಬೋಧನಾ ವಿಧಾನ:
ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಪನ್ಯಾಸ, ಚರ್ಚೆ, ಪ್ರಶ್ನೋತ್ತರಗಳ ಮೂಲಕ ಬೋಧಿಸಲಾಗುತ್ತಿತ್ತು. ಬೆಳಗಿನ ಜಾವ ಉಪನ್ಯಾಸ, ಮಧ್ಯಾಹ್ನ ಗ್ರಂಥಾಭ್ಯಾಸ, ಸಾಯಂಕಾಲ ಚರ್ಚೆ ಮಾಡುವ ವಿಧಾನಗಳಿದ್ದವು. ಅಂತಿಮವಾಗಿ ನಡೆಯುವ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿತ್ತು. ಉದಾಹರಣೆಗೆ ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಹ್ಯೂಯೆನ್ ತ್ಸಾಂಗ್ ನು 'ಮೋಕ್ಷಾಚಾರ್ಯ', 'ಧರ್ಮಾಚಾರ್ಯ' ಮತ್ತು 'ಮಹಾಯಾನದೇವ' ಎಂಬ ಪ್ರಶಸ್ತಿಗಳನ್ನು ಪಡೆದಿದ್ದನು.
ಅಧ್ಯಾಪಕ ವರ್ಗ:
ಈ ವಿಶ್ವವಿದ್ಯಾಲಯವು ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಡೆಯಲು ಇಲ್ಲಿಯ ಅಧ್ಯಾಪಕ ವರ್ಗವೇ ಕಾರಣವಾಗಿತ್ತು. ಸಕಲ ವಿಷಯ ಪಾರಂಗತ ಪಂಡಿತೋತ್ತಮರು ಇಲ್ಲಿದ್ದರು. ಕಂಚಿಯವನಾದ ಬೌದ್ಧ ವಿದ್ವಾಂಸ ಧರ್ಮಪಾಲನು ನಳಂದಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದನು. ನಂತರ ಸಮತಟದ ಬೌದ್ಧ ಪಂಡಿತನಾದ ಶೀಲಭದ್ರನು ಕುಲಪತಿಯಾದನು. ದಿಙ್ಞನಾಂಗ, ಸ್ಥಿರಮತಿ, ಆರ್ಯದೇವ, ನಾಗಾರ್ಜುನ, ಅಸಂಗ, ವಸುಬಂಧು, ಚಂದ್ರಪಾಲ, ಶಾಂತರಕ್ಷಿತ, ಪ್ರಭಾಮಿತ್ರ, ಜಿನಮಿತ್ರ ಮುಂತಾದವರು ಇಲ್ಲಿಯ ಪ್ರಸಿದ್ಧ ಪ್ರಾಧ್ಯಾಪಕರಾಗಿದ್ದರು. ಇಲ್ಲಿ ೧೦೦೦ಕ್ಕೂ ಅಧಿಕ ಪ್ರಾಧ್ಯಾಪಕರಿದ್ದರೆಂದು ತಿಳಿದು ಬರುತ್ತದೆ. ಕುಲಪತಿಯಾಗಿದ್ದ ಶೀಲಭದ್ರನು ಪಂಡಿತರಲ್ಲೇ ಮಹಾಪಂಡಿತನಾಗಿದ್ದನು. ಇವರನ್ನು 'ಚಲಿಸುವ ವಿಶ್ವವಿದ್ಯಾಲಯ' ಎಂದು ಕರೆಯಲಾಗುತ್ತಿತ್ತು. ಇಡೀ ವಿಶ್ವವಿದ್ಯಾಲಯವು ನಾಶವಾದರೂ ಇವನೋಬ್ಬ ಉಳಿದರೆ ಸಾಕು ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಇತ್ತು.
ಈ ವಿದ್ಯಾಪೀಠದಲ್ಲಿ ೧೦೦೦೦ ವಿದ್ಯಾರ್ಥಿಗಳು, ೧೦೦೦ ಪ್ರಾಧ್ಯಾಪಕರು ಇದ್ದರೆಂದು ಹ್ಯೊಯೆನ್ ತ್ಸಾಂಗ್ ತಿಳಿಸಿದ್ಅವನತಿ:
ಗ್ರಂಥಾಲಯ:
ನಳಂದಾ ವಿಶ್ವವಿದ್ಯಾಲಯದ ಆವರಣದಲ್ಲಿದ್ದ ಗ್ರಂಥ ಭಂಡಾರವನ್ನು "ಧರ್ಮಗಂಜ್" ಎಂದು ಕರೆಯಲಾಗುತ್ತಿತ್ತು. ಅದು ರತ್ನೋದಧಿ, ರತ್ನರಂಜಕ ಮತ್ತು ರತ್ನಸಾಗರ ಎಂಬ ಮೂರು ಅಂತಸ್ತಿನ ಮೂರು ಪ್ರತ್ಯೇಕ ಭವ್ಯ ಮಂದಿರಗಳಿದ್ದವು. ಇಲ್ಲಿ ಸಾವಿರಾರು ಓಲೆಗರಿ ಗ್ರಂಥಗಳ ಸಂಗ್ರಹವಿತ್ತು. ಅವನ್ನು ನಕಲು ಮಾಡಲು ಪ್ರತ್ಯೇಕ ವಿಭಾಗವಿತ್ತು.
ಅವನತಿ:
ವಿಶ್ವ ವಿಖ್ಯಾತಿ ಪಡೆದ ಈ ಮಹಾವಿಹಾರವು ಹೂಣರ ನಾಯಕ ಮಿಹಿರಕುಲ ನಿಂದ ನಾಶವಾಯಿತು. ಆದರೆ ಬಲಾದಿತ್ಯನು ಮಿಹಿರಕುಲನನ್ನು ಸೋಲಿಸಿ, ನಳಂದಾ ವಿಹಾರವನ್ನು ಜೀರ್ಣೋದ್ಧಾರ ಮಾಡಿದನು. ೧೨ನೇ ಶತಮಾನದಲ್ಲಿ ಭಕ್ತಿಯಾರ್ ಖಿಲ್ಜಿ ಈ ವಿಹಾರವನ್ನು ಸಂಪೂರ್ಣವಾಗಿ ನಾಶಮಾಡಿದನು. ಇಲ್ಲಿದ್ದ ವಿದ್ಯಾರ್ಥಿಗಳನ್ನು ಮತ್ತು ಪಂಡಿತರನ್ನು ಕೊಂದನು. ಗ್ರಂಥ ಭಂಡಾರಕ್ಕೆ ಬೆಂಕಿ ಇಟ್ಟು ಸುಟ್ಟನು. ಒಂದು ಹೇಳಿಕೆ ಪ್ರಕಾರ ಇಲ್ಲಿರುವ ಗ್ರಂಥಾಲಯ ೬ ತಿಂಗಳು ಹೊತ್ತಿ ಉರಿಯಿತಂತೆ. ಅಂದರೆ ಇಲ್ಲಿ ಅಪಾರ ಗ್ರಂಥ ಸಾಹಿತ್ಯ ಇತ್ತು ಎಂಬುದು ಖಚಿತವಾಗುತ್ತದೆ. ಇಲ್ಲಿ ಅಧ್ಯಯನ ಅಧ್ಯಾಪನ ಮಾಡಿದ ಪಂಡಿತರು ಓದಂತಪುರಿ, ವಲ್ಲಭಿ, ವಿಕ್ರಮಶೀಲಗಳಂತಹ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕಾರಣರಾಗಿದ್ದರೆ.
ಆಧಾರ ಗ್ರಂಥಗಳು
ಸಮಗ್ರ ಭಾರತದ ಇತಿಹಾಸ- ಕೆ.ಎನ್.ಎ
ಪ್ರಾಚೀನ ಭಾರತದ ಇತಿಹಾಸ- ಕೆ.ಸದಾಶಿವ
ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳು- ಮಿರ್ಜಿ ಅಣ್ಣಾರಾಯರು
ಶಂಕರ ನಿಂಗನೂರ
ಇತಿಹಾಸ ಅಧ್ಯಾಪಕರು,
ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ