ವಿಷಯಕ್ಕೆ ಹೋಗಿ

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ಕವಿತೆ "ಅಲ್ಲಮನಾಗುವುದಾದರೆ..." ಮತ್ತು ವಿಮರ್ಶೆ ಸುರೇಶ ಮುದ್ದಾರ


ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು. ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ.
ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ .

ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ ಜೋಗುಳ ಲಾಲಿ. ನಕ್ಷತ್ರ ಮಿಂಚು ತಂಗಾಳಿಗಳ ಹಸುಗು ಸಂತೆ. ಚಂದ್ರಮುಖಿಯ ರೋಧನ, ಬೆಳದಿಂಗಳ ಕಳೆಗುಂದಿದ ಕಾಂತಿ.
ಕರಗುವ ಹಿಮ, ದರ್ಶನದ ಮೇರು, ಮದ್ದಳೆಯ ನಾದವೇ ಗಟ್ಟಿಮೇಳ...

ತುಟಿಯ ಮೌನಕ್ಕೆ ಬಾಗಿದ ತಲೆ, ನನ್ನ ಹೃದಯಕ್ಕಿಗ ಸಾವಿರದ ಮಾತು.
ಕಣ್ಣ ಕಾಡಿಗೆಯ ಕಾರ್ಮೋಡ, ಸಿವುಡುಗಟ್ಟಿದ ಸಿಟ್ಟು .ಕಪ್ಪು ಕಳೆದುಕೊಂಡ ಮುಗಿಲು, ತಪಗುಟ್ಟಿ ಜಿನುಗುವ ಕಣ್ಣಾಲಿ. ಮಾಯೆಯ ವಿರಹಕ್ಕೀಗ ಮತ್ತೆ ಮರೆಯದ ಹರೆಯ..

ಬೆನ್ನಟ್ಟಿದ ಅದೇ ಕಂಗಳು, ತುಟಿಯಂಚಿನ ಕೋಲ್ಮಿಂಚು.ಮುಂಗುರುಳ ದುಂಬಿ' ಮಾದಕ ನಗೆ' ನೀ ಅರಸಿಬಂದ ಅನುರಾಗ.ಮಾತುಮೌನ ನಿಟ್ಟುಸಿರ ಕಥೆಯಾಗಿಸುವುದಾದರೆ, ಭೋರ್ಗರೆದು ಸುರಿದು ಬಿಡುವೆ ಯಾವ ಒಡಂಬಡಿಕೆಗಳಿಲ್ಲ...

ಸ್ವರ ಲಾವಣಿ ನೂರು ಪದ ಸರಣಿ, ಪೊಣಿಸಿದ ಮುತ್ತುಗಳೆಲ್ಲಾ ಎದೆಯ ಬಾರಕ್ಕೆ ಕಳೆಗುಂದದಿರಲಿ..ಒಲವ ಸರಕು ಬಿಕರಿಯಾಗಲು ಬದುಕು ವ್ಯಾಪಾರವಲ್ಲ.ನಿನ್ನ ಜಂಗಮನಾದಕ್ಕೆ  ತಾಳ ತಪ್ಪಿದ ಕಾಲ್ಗೆಜ್ಜೆ ,ಮದ್ದಲೆಯ ಸುನಾದಕ್ಕೆ ಮಾತ್ರ ಸಾವಿಲ್ಲ...

ಕೈ ಬೆರಳುಗಳ ಬೆರಗು, ಮೋಹನ ಮುರಳಿ ಎದೆಯ ಮೀಟಿದ ತಂತಿ.ಭಾವ ಬಸಿರು ಬಗೆದು ಬಂದ ಒಲವಗಾನ ಘನಪ್ರೇಮದ ಸಂತಿ.
ನೀನೇ ಬರೆಯಬೇಕಿಗ, ಹೃದಯ ಶಾಹಿಯಿಂದ  ಕಥೆಯೋ  ಕವನವೋ.ದಿಕ್ಕು ತಪ್ಪಿದ ವರ್ಣಮಾಲೆ ಖಾಲಿಯಾದ ಪದ ಭಂಡಾರ ...

ಅಂಗಾಂಗಗಳ ವರ್ಣರಂಜಿತ ಹೊಗಳಿಕೆ ಬೇಕಿಲ್ಲ.ಯಾವ ಪ್ರಮೇಯಗಳಿಗೂ ಹೋಲಿಸಬೇಡ.
ಅರಸಿಬಂದ ಅರಸನ ಕನಸ ಕಂಗಳ ಚಲುವೆ . ನೀ ಕಟ್ಟುವ ಪದಬಂಧದ ಶಬ್ದ ಮಾಲೆಗೆ ಕೇವಲ ಪ್ರತಿಮೆ ಮಾತ್ರ..

ಸೋಬಾನೆಗೆ ಸೋನೆ ಮಳೆಯ ಉಯ್ಯಾಲೆ .ಅಮಾವಾಸ್ಯೆಯ ಚಂದ್ರನೀಗ ಹುಣ್ಣುಮೆಯ ಮದುವಣಿಗ. ನಾ ಬೆಳದಿಂಗಳ ಬಾಲೆ, ನಿತ್ಯವೂ ಮಲ್ಲಿಗೆ ದಂಡೆಯ ಮುಡಿಗೇರಿಸಿ ಕೊಂಡ ಮದುವಣಗಿತ್ತಿ .ಸುರಿವ ಮಳೆ ಕೊರೆವ ಚಳಿ ತುಟಿಯ ನಗು ನಿನ್ನ ಅಲ್ಲಮನಾಗಲೂ ಬಿಡೆನೂ ನಾ...

✍️ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ, ರಾಚವಿ ಬೆಳಗಾವಿ
                    *******************

"ಅಲ್ಲಮನಾಗುವುದಾದರೆ........"ಕವಿತೆಯ ವಿಮರ್ಶೆ ಪ್ರೊ. ಸುರೇಶ ಮುದ್ದಾರ

         ಅಲೌಕಿಕತೆಯ ಮುಂದೆ ಲೌಕಿಕತೆಯ ತುಡಿತ, ಮಿಡಿತ ಮತ್ತು ತಲ್ಲಣಗಳು ಹೇಗೆ ಸೋತು ಗೆಲ್ಲುತ್ತವೆ ಎಂಬುದನ್ನು ಪ್ರಸ್ತುತ  "ಅಲ್ಲಮನಾಗುವುದಾದರೆ" ಕವಿತೆ ಅತ್ಯಂತ ಸುಂದರವಾದ ಪ್ರತಿಮೆಗಳ ಮೂಲಕ ಓದುಗರನ್ನು ಬೆರಗುಗೊಳಿಸುತ್ತದೆ. 
        ಸಾತ್ವಿಕತೆ ಎಂಬುದು ದಿವ್ಯವಾದ ಮೇರು ಪರ್ವತ ಹಾಗೆಯೇ ತಾಮಸ ಎಂಬುದು ಭವ್ಯವಾದ ಆಳ ಕಣಿವೆ. ಇವೆರಡೂ ಒಂದಾಗುವುದು ಅಸಾಧ್ಯ.  ಆದರೂ ಭವ್ಯತೆಯು ದಿವ್ಯತೆಯಲ್ಲಿ ಲೀನವಾದಾಗ ಲೌಕಿಕತೆಯನ್ನು ಮೀರಿದ ಜೀವನ ದರ್ಶನವಾಗುತ್ತದೆ.
        ಅಲ್ಲಮ ಸಾತ್ವಿಕತೆಯ ಪ್ರತಿರೂಪ,  ಮಾಯೆ ತಾಮಸ ಪ್ರತಿರೂಪ. ಮಾಯೆ ತನ್ನ ಮಾಯಾ ಪ್ರೇಮದ ಮೂಲಕ ಅಲ್ಲಮನನ್ನು ಪ್ರಚೋಧಿಸುವ,ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಕವಿತೆ ಸಾಲಿನಂತೆ, ' ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ' ಎನ್ನುವ ಹಾಗೆ ಅಂತರಂಗದ ಕತ್ತಲೆಗೆ ಬೆಳಕಾಗಿರುವ ಅಲ್ಲಮ ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹವನ್ನೆ  ತುಂಬುತ್ತಾನೆ. ಅವನ ಮದ್ದಳೆಯ ಧ್ವನಿ ಮಾಯೆಗೆ ಕಾರ್ಮೋಡಿನ ಘರ್ಜನೆಯಂತೆ ಕೇಳಿ ತನುವಿನಲ್ಲಿ ಪುಳಕಗೊಂಡು ತನ್ನ ವಿರಹಕ್ಕೆ ಮತ್ತೆ ಹರೆಯ ತುಂಬಿಕೊಂಡು ಸೋಗೆಯಂತೆ ನಲಿಯುತ್ತಾಳೆ. ಆದರೆ ಕರಗುವ ಹಿಮ ಅಲ್ಲಮನಲ್ಲ. ಅವನು ದರ್ಶನದ ಮೇರು ಪರ್ವತ.  
              ಆದರೂ ಸೋತು ಶರಣಾಗುವವಳಲ್ಲ ಮಾಯೆ. ಸಾತ್ವಿಕ ಪ್ರೀತಿಯ ಮೇಲೂ ತಾಮಸ ಪ್ರೇಮದ ಜ್ವಾಲೆಯ ಕೆಂಪು ನೆರಳು ಬೀಳುವಂತೆ, ಮಾಯೆಯ ಕೈ ಬೆರಳ ಬೆರಗು,ಮೋಹನ ಮುರಳಿ ಗಾನ, ಎದೆ ಮೀಟುವ ತಂತಿ ಒಲವ ಸರಕು ಬಿಕರಿಯಾಗಲು ಬಿಡುವುದಿಲ್ಲ.  ' ನೀ ಎಷ್ಟೆ ದೂರ ಸರಿದರೂ ನಾನು, ಅರಸಿ ಬಂದ ಅರಸನ ಕನಸು ಕಂಗಳ ಚೆಲುವೆ. ನಾನು ಸುಗಂಧ ರಹಿತ ಪುಷ್ಪವಲ್ಲ. ದುಂಬಿ ಅರಸುವ ಹೂವು ನಾನು, ನಾನು ಬೆಳದಿಂಗಳ ಬಾಲೆ, ನಿತ್ಯ ಮಲ್ಲಿಗೆ ದಂಡೆ ಮುಡಿದುಕೊಳ್ಳುವ ಮದುವಣಗಿತ್ತಿ, ಮಳೆಯಂತೆ ಸುರಿಯುವ ರಸಭಾವಗಳು, ರೋಮಾಂಚನಗೊಳಿಸುವ ಮಧುರ ಚಳಿ. ನಾನು ನಿನ್ನ ಅಲ್ಲಮನಾಗಲು ಬಿಡಲಾರೆ. 
          ಪ್ರಸ್ತುತ ಕವಿತೆ ವರ್ತಮಾನದ ಸ್ತ್ರೀ ಸಂವೇದನೆಯ ಮೇಲೆ ಬೆಳಕು ಚಲ್ಲುತ್ತದೆ. ಅಲ್ಲಮನಾಗುವುದಾದರೆ, ಕಳೆಗುಂದಿದ ಬೆಳದಿಂಗಳಂತಾಗದೆ ಮಧುರ ಪ್ರೇಮದ ಬೆಳದಿಂಗಳಾಗು. ಮಾಯೆಯ(ಸ್ತ್ರೀ) ಒಲವಿಗೂ ಸಾತ್ವಿಕತೆ ಇದೆ. ಮಾಯೆಯ ಮಧುರ ಒಲವಿನಲ್ಲಿಯೂ ಜೀವನ ದರ್ಶನವಿದೆ. ಆದ್ದರಿಂದ ಅಲ್ಲಮನಾಗುವುದಾದರೆ , ಮಧುರ ಪ್ರೇಮದ ಅಲ್ಲಮನಾಗು ಘನ ಪ್ರೇಮದ ಮಾಯೆಗೆ ಮರಿಚಿಕೆಯಾಗಲು ನಾನು ಬಿಡುವುದಿಲ್ಲ. 
            ಹೆಣ್ಣು ಮಾಯೆಯಂಬ ಭ್ರಮೆಯಲ್ಲಿ ನೋಡದೆ , ಅದರಾಚೆಗೂ ದೃಷ್ಟಿ ಬೀರುವ ಅಲ್ಲಮ ಬೇಕು. ಎಂಬ ವರ್ತಮಾನದ ಸ್ತ್ರೀ ಭಾವ ಇಲ್ಲಿದೆ. ಕವಿತೆ ಅಲ್ಲಮನ ಮೇರು ವ್ಯಕ್ತಿತ್ವವನ್ನು ಅತ್ಯಂತ ಘನವಾಗಿ ಚಿತ್ರಿಸಿದಂತೆ,  ಮಾಯೆಯ ಮಧುರ ಪ್ರೇಮದ ಅಗಾಧತೆಯನ್ನು ಅಷ್ಟೆ ಮಾಧುರ್ಯವಾಗಿ ಅನೇಕ ಸುಂದರವಾದ ವಿಶಿಷ್ಟ  ಪ್ರತಿಮೆಗಳೊಂದಿಗೆ ಚಿತ್ರಿಸಿದ್ದಾರೆ. ಈ ಕವಿತೆಯನ್ನು ಓದುವಾಗ ಭಾಷೆ ಹಿಂದೆ ಸರಿದು ಭಾವ ಮುಂದೆ ಬರುವ ಅನುಭವವಾಗುತ್ತದೆ.   ಒಟ್ಟಾರೆಯಾಗಿ ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ ಅವರ "ಅಲ್ಲಮನಾಗುವುದಾದರೆ" ಕವಿತೆ ಪ್ರಸ್ತುತ ಸ್ತ್ರೀಪರ ನಿಲುವಿನ ಒಳನೋಟಗಳ  ಭಾವಪೂರ್ಣ ಕವಿತೆಯಾಗಿದೆ. 

 - ಸುರೇಶ ಮುದ್ದಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು. ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ. ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು. ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿ...